ಸೌಜನ್ಯ ಕೇಸಿಗೂ ಒಬ್ಬ ‘ಅಡಕ್ಕ ರಾಜು’ ತರದ ಕಳ್ಳ ಸಿಕ್ಕಿದ್ದರೆ !?
ಸೌಜನ್ಯಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ಈ ಪ್ರಕರಣದ ಆಪಾದಿತ ಈಗ ಸಂತೋಷ್ ರಾವ್ ನಿರಪರಾಧಿ. ಹಾಗಾದರೆ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಂದ ಅಪರಾಧಿ ಯಾರು? ಸತ್ಯದ ಪರ ನಿಲ್ಲಬೇಕಾದ ಸಾಕ್ಷ್ಯಗಳು , ತನಿಖಾಧಿಕಾರಿಗಳು , ಧಾರ್ಮಿಕ ವ್ಯಕ್ತಿಗಳು ಸಜ್ಜನರ ಸೋಗು ತಳೆದು ಸೌಜನ್ಯಳ ಗೋರಿಯನ್ನು ಮತ್ತಷ್ಟು ಗಟ್ಟಿಮಾಡುತ್ತಿದ್ದರೆ, ಕೇರಳದ ಅಡಕ್ಕ ರಾಜುನಂತಹ ಕಳ್ಳನಾದರೂ ಆಕೆಯ ಸಾವಿಗೆ ನ್ಯಾಯ ದೊರಕಿಸಲು ಬರಲಿ ಎಂದು ಆಶಿಸುತ್ತಿದೆ ಮನಸ್ಸು.
ವರ್ತಮಾನ
ಒಡನಾಡಿ ಸ್ಟ್ಯಾನ್ಲಿ
ಈ " ಅಡಕ್ಕ ರಾಜು" ಯಾರೋ ಉದ್ಯಮಿಯೋ, ಪ್ರಗತಿಪರ ಚಿಂತಕನೋ, ಸೆಲೆಬ್ರಿಟಿಯೋ, ಧರ್ಮಾಧಿಕಾರಿಯೋ ಅಲ್ಲ. ಒಬ್ಬ ಸಾಮಾನ್ಯ ಅಡಿಕೆ ಕಳ್ಳನ ಹೆಸರು. ಕೇರಳದಲ್ಲಿ ಎಲ್ಲಿಯಾದರೂ ಕಳುವಾದರೆ ಪೊಲೀಸರು ಈತನನ್ನು ಕರೆತಂದು ವಿಚಾರಣೆ ಮಾಡುತ್ತಿದ್ದರು. ಅಗತ್ಯ ಬಿದ್ದರೆ ಬಾಕಿ ಉಳಿದ ಪ್ರಕರಣಗಳನ್ನು ಇವನ ಅಕೌಂಟಿಗೆ ಜಮಾ ಮಾಡಿ ಕೈ ತೊಳೆದುಕೊಳ್ಳುತ್ತಿದ್ದರು. ಅಡಿಕೆ ಕದಿಯುತ್ತಿದ್ದ ರಾಜು ಕೇರಳದ ಜನಸಾಮಾನ್ಯರ ಹೃದಯಗಳನ್ನು ಕದ್ದು ಬೆಳಗಾಗುವುದರಲ್ಲಿ ಸೆಲೆಬ್ರಿಟಿ ಪಟ್ಟಕ್ಕೇರಿದ್ದ. ಇವತ್ತು ಜನ ಆತನನ್ನು ನೆನಪಿಟ್ಟುಕೊಂಡಿದ್ದಾರೋ ಇಲ್ಲವೋ ಕಾಣೆ. ನಮ್ಮಲ್ಲಿ ಅತ್ಯಾಚಾರ, ಕೊಲೆ ನಡೆದಾಗಲೆಲ್ಲಾ ಈ ಕಳ್ಳ ನನ್ನನ್ನು ಆಗಾಗ ಕಾಡುತ್ತಿರುತ್ತಾನೆ. ಧರ್ಮಸ್ಥಳ ಸಂಸ್ಥಾನದ ಉಜಿರೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಅಮಾನುಷವಾಗಿ ಕೊಲ್ಲಲ್ಪಟ್ಟರೂ ಇಂದಿಗೂ ನ್ಯಾಯ ದೊರಕಿಸಿಕೊಳ್ಳಲಾಗದೆ ಮಣ್ಣಲ್ಲಿ ಮಣ್ಣಾಗಿ ಹೋದ ಹದಿನೇಳರ ಬಾಲಕಿ ಸೌಜನ್ಯ ಈ ಕಳ್ಳನನ್ನು ಮತ್ತೆ ನೆನಪಿಸುತ್ತಿದ್ದಾಳೆ.
ಮಾರ್ಚ್ 27, 1992 ರಲ್ಲಿ ಕೇರಳ ಕೊಟ್ಟಾಯಂನ ,"ಪಯಸ್ ಎಕ್ಸ್" ಕ್ರೈಸ್ತ ಕನ್ಯಾಸ್ತ್ರೀ ನಡೆದಿದ್ದ 19 ವರ್ಷ ವಯಸ್ಸಿನ, " ಅಭಯ ," ಎಂಬ ಕನ್ಯಾಸ್ತ್ರೀಯೊಬ್ಬರ ಹತ್ಯೆಯಾಗಿತ್ತು. ಪದವಿ ಪೂರ್ವ ವಿದ್ಯಾಭ್ಯಾಸ ನಡೆಸುತ್ತಿದ್ದ ಆಕೆ ಅಂದು ಮಠದ ಬಾವಿಯಲ್ಲಿ ಹೆಣವಾಗಿ ತೇಲುತ್ತಿದ್ದಾಗ ಸ್ಥಳೀಯ ಪೊಲೀಸರು ಅದನ್ನು ಆತ್ಮಹತ್ಯೆ ಎಂದು ಸುಲಭವಾಗಿ ಕೊನೆಗಾಣಿಸಿದ್ದರೂ ಆಕೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಬಲಹೀನಳಲ್ಲ ಎಂದು ಬಲವಾಗಿ ನಂಬಿದ್ದ ಕುಟುಂಬಸ್ಥರು ಪಟ್ಟು ಹಿಡಿದಿದ್ದರಿಂದಾಗಿ ಕೇಸು ಕ್ರೈಮ್ ಬ್ರಾಂಚ್ ತಲುಪಿತು. ಆ ಪೊಲೀಸರೂ ಕೂಡ ಮೂಲ ತನಿಖೆಯನ್ನೇ ಬಲಗೊಳಿಸಿ ಆತ್ಮಹತ್ಯೆ ಎನ್ನಲು ಮತ್ತಷ್ಟು ಅಂತೆ ಕಂತೆಗಳನ್ನು ಕಡತಕ್ಕೆ ಸೇರಿಸಿದ್ದರು. ಸಮಾಧಾನ ಕಳೆದುಕೊಂಡ ಜನ ಕಾನೂನಿನ ಹೋರಾಟ ರೂಪಿಸಿದರು. ಪ್ರಕರಣವನ್ನು ರಾಷ್ಟ್ರದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐ ಗೆ ವಹಿಸಿದರೂ, ಅದೂ ಕೂಡ ಎರಡು ಬಾರಿ ಮುಗ್ಗರಿಸಿತ್ತು. ಕೊಲೆಯಾಗಿರುವುದು ನಿಜವಾದರೂ ಕೊಲೆ ಮಾಡಿದವರಾರು ಎಂಬುದಕ್ಕೆ ಸಿಬಿಐ ಬಳಿ ಉತ್ತರವಿರಲಿಲ್ಲ.ಸ್ಥಳೀಯ ನ್ಯಾಯಾಧೀಶರ ವಿವೇಕಯುಕ್ತ ಎಚ್ಚರಿಕೆಯನ್ನು ಪಾಲಿಸಿದ ಸಿಬಿಐ ತನ್ನ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿ, ಇನ್ನಷ್ಟು ಸಾಕ್ಷ್ಯಗಳನ್ನು ಕಲೆ ಹಾಕಿ ಪ್ರಕರಣವನ್ನು ಒಂದು ತಾರ್ಕಿಕ ಅಂತ್ಯಕ್ಕೆ ತಂದು ಕೊಲೆ ಮಾಡಿದ್ದವರನ್ನು ಹೆಡೆಮುರಿ ಕಟ್ಟಿ ಸಮಾಜದ ಮುಂದೆ ನಿಲ್ಲಿಸಿತ್ತು. ಸಿಸ್ಟರ್ ಅಭಯ ಕೊಲೆಯಾಗಿ 28 ವರ್ಷಗಳ ನಂತರ ಸಿಕ್ಕ ನ್ಯಾಯವದು!
ಈ ಸಾವು ಸ್ಥಳೀಯ ಪೊಲೀಸರಿಗೆ ಸವಾಲಾಗಿತ್ತು ಎಂದೇನೂ ಅಲ್ಲ. ಪ್ರಾಮಾಣಿಕ ಪ್ರಯತ್ನವಿದ್ದಿದ್ದರೆ ಮೂರು ತಿಂಗಳಿನಿಂದ ಮೂರು ವರ್ಷದೊಳಗಾಗಿ ನ್ಯಾಯ ಕೊಡಿಸಬಹುದಾಗಿತ್ತು. ಆದರೆ ಇಲ್ಲಿ ಧರ್ಮ, ಹಣ ಮತ್ತು ರಾಜಕೀಯದ ಒಟ್ಟಾರೆ ಶಕ್ತಿ ಹೊಂದಿದ್ದವರು ಮತ್ತು ಅದರ ಕಡೆ ವಾಲಿಕೊಂಡಿದ್ದ ಅಧಿಕಾರಿಗಳು ಆರೋಪಿಗಳನ್ನು ಬಚಾವ್ ಮಾಡಲೆಂದೇ ಎಲ್ಲಾ ತಿಳಿದೂ ಕೆಲಸ ಮಾಡಿದ್ದರು. ಅತಂತ್ರ ಸ್ಥಿತಿಯಲ್ಲಿದ್ದ ಜನರೇ ಆಕೆಗಾಗಿ ಸಮಿತಿ ರಚಿಸಿ, ಬಿಡದೇ ಹೋರಾಡಿದರೂ, ನ್ಯಾಯಾಂಗದ ಮುಖ್ಯ ನಂಬಿಕೆ ನಂಬಿಕೆ ಉಳಿಯುವಂತೆ ಮಾಡಿದ್ದು ಇದೇ ಕಳ್ಳ " ಅಡಕ್ಕ ರಾಜು" . ಆತ ನೀಡಿದ್ದ ಅದ್ಭುತ ಸಾಕ್ಷ್ಯ ಅಭಯಾಳಿಗೆ ನ್ಯಾಯ ದೊರಕಿಸಿತ್ತು.
ಕೊಲೆ ನಡೆದ ದುರ್ದಿನದ ನಡುರಾತ್ರಿಯ ಕಲ್ಲು ಕರಗುವ ಸಮಯದಲ್ಲಿ ಅಡಕ್ಕ ರಾಜು ಕನ್ಯಾಸ್ತ್ರೀ ಮಠಕ್ಕೆ ಕದಿಯಲೆಂದು ಬಂದು ಮರ ಹತ್ತಿದ್ದಾಗ ಇಬ್ಬರು ಪಾದ್ರಿಗಳು ಕನ್ಯಾಸ್ತ್ರೀ ಮಠದ ಮಹಡಿಯ ಮೆಟ್ಟಿಲೇರಿ ಹೋಗುತ್ತಿದ್ದುದನ್ನು ಕಂಡಿದ್ದ. ಅವರೇ ಫಾದರ್ ಜೋಸೆಫ್ ಕೊಟ್ಟೂರ್ ಮತ್ತು ಫಾದರ್ ಜೋಸ್ ಪೂತ್ರುಕಾಯಿಲ್. ಮತ್ತೋರ್ವ ಸಿಸ್ಟರ್ ಸಿಫಿ ಜೊತೆ ಅಕ್ರಮ ಸಂಬಂಧದಲ್ಲಿದ್ದ ಫಾದರ್ ಜೋಸೆಫ್ ಕೊಟ್ಟೂರ್ ಅಂದು ಅಡುಗೆ ಮನೆಯಲ್ಲಿ ಜೊತೆ ಸೇರಿದ್ದರು. ನೀರು ಕುಡಿಯಲು ಅಲ್ಲಿಗೆ ಬಂದಿದ್ದ ಸಿಸ್ಟರ್ ಅಭಯ ಏನೋ ಶಬ್ದವಾಗುತ್ತಿದ್ದುದನ್ನು ಕೇಳಿ ಆ ಬದಿ ನಡೆದಾಗ ಫಾದರ್ ಆಕೆಯನ್ನು ಹಿಡಿದೆಳೆದು ಬಾಯಿ ಅದುಮಿ ಹಿಡಿದಾಗ ಸಿಸ್ಟರ್ ಸಿಫಿ ಕೈಗೊಡಲಿಯ ಹಿಂಬದಿಯಿಂದ ಆಕೆಯ ತಲೆಗೆ ಹೊಡೆದು ಶಾಶ್ವತವಾಗಿ ಆಕೆಯ ಬಾಯಿ ಮುಚ್ಚಿಸಿ, ನಂತರ ಬಾವಿಗೆ ಎಸೆದಿದ್ದರು.
ಈ ಪ್ರಕರಣದಲ್ಲಿ ಅಡಿಕೆ ಕಳ್ಳ ರಾಜುನನ್ನು ಹೊರತುಪಡಿಸಿ ಸಾಕ್ಷಿಗಳಾಗಿದ್ದ ಸಜ್ಜನರೆಲ್ಲರೂ ಕೊಟ್ಟ ಮಾತಿಗೆ ತಪ್ಪಿ ಉಲ್ಟಾ ಹೊಡೆದಿದ್ದರು. ಈ ಪ್ರಕರಣದಿಂದ ವಿಮುಖನಾಗಲು ರಾಜುಗೆ ಸ್ಥಳೀಯ ಪೊಲೀಸರು ಹಾಗೂ ಬಲಿಷ್ಠರು ಸಾಕಷ್ಟು ಚಿತ್ರಹಿಂಸೆ ನೀಡಿದ್ದರು. ಆಮಿಷಗಳನ್ನು ಒಡ್ಡಿದ್ದರು. ಆದರೆ ರಾಜು ಬಗ್ಗಲಿಲ್ಲ. ಹೆಣವಾಗಿದ್ದ ಅಭಯಾಳಲ್ಲಿ ತನ್ನ ಮಗಳನ್ನು ಕಾಣತೊಡಗಿದ್ದ.
ಕೋರ್ಟಿನಲ್ಲಿ ಆತನ ಚರಿತ್ರೆ ಓದಿ ಅವಮಾನಿಸಿ, ಆತನ ಸಾಕ್ಷ್ಯವನ್ನು ಅನುಮಾನಿಸಲಾಗಿತ್ತು. ಆದರೂ ನ್ಯಾಯಾಲಯ ಆತನ ಸಾಕ್ಷ್ಯವನ್ನು ಮಾನ್ಯ ಮಾಡಿತು. " ಕಳ್ಳನಲ್ಲದೇ ಇನ್ನೊಬ್ಬ ಈ ಕೃತ್ಯವನ್ನು ಅಂತಹ ಅವೇಳೆಯಲ್ಲಿ ನೋಡಲು ಸಾಧ್ಯವಿಲ್ಲ. ಧರ್ಮದೊಳಗಿರುವ ಜನ ಈ ಅಪರಾಧವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದರೆ ಜಗತ್ತಿನ ದೃಷ್ಟಿಯಲ್ಲಿ ಕಳ್ಳನಾಗಿರುವ ಈತ ಅನುಭವಿಸಬಹುದಾದ ಎಲ್ಲಾ ರೀತಿಯ ಹಿಂಸೆಗಳನ್ನು ತಿಳಿದೂ, ಈ ಪ್ರಕರಣವನ್ನು ತನ್ನ ಲಾಭಕ್ಕೆ ಬಳಸಿಕೊಳ್ಳಬಹುದಾಗಿದ್ದರೂ ಹಾಗೆ ಮಾಡದೆ, ಎಲ್ಲಾ ಅವಮಾನಗಳನ್ನು ಸಹಿಸಿ ಸತ್ಯದ ಪರವಾಗಿ ಸಾಕ್ಷ್ಯ ನುಡಿದಿದ್ದಾನೆ. ಈ ನಡೆ ಪ್ರಶಂಸನೀಯ. ಈತ ಏಸುವಿನ ಜೊತೆ ಶಿಲುಬೆಗೆ ಏರಿಸಲ್ಪಟ್ಟ ಒಳ್ಳೆಯ ಕಳ್ಳನನ್ನು ನೆನಪಿಸುತ್ತಾನೆ " ಎಂದಿತ್ತು. ತದನಂತರದಲ್ಲಿ ಎಲ್ಲೆಲ್ಲೂ ರಾಜು ಬಗ್ಗೆ ಪ್ರಶಂಸೆಯ ಸುರಿಮಳೆಯೇ. ಲೋಕ ಆತನನ್ನು ಕಳ್ಳನೆಂದು ಕರೆದರೂ ಆತನಲ್ಲೊಬ್ಬ ಸಂತನಿದ್ದಾನೆ ಎಂದರು ಜಾಕೊಬೈಟ್ ನ ಬಿಷಪ್. ಕೇರಳದ ಪ್ರಖ್ಯಾತ ಕವಿ ಬಾಲಚಂದ್ರನ್ ಚುಲ್ಲಿಕಾಡ್ " ಓ ಯೇಸುವೇ, ನಿನ್ನೊಡನೆ ಮರಣ ಹೊಂದಿದ ಆ ಒಳ್ಳೆಯ ಕಳ್ಳನೊಬ್ಬನೇ ನಿನ್ನ ನ್ಯಾಯದ ಪರವಾಗಿ ನಿಂತ!" ಎಂಬ ಅರ್ಥ ಬರುವ ನಾಲ್ಕು ಸಾಲುಗಳನ್ನು ಕಳ್ಳ ರಾಜುವಿಗೆ ಅರ್ಪಿಸಿದರು.
ಇಲ್ಲಿ ನಮ್ಮಲ್ಲಿ ಕರ್ನಾಟಕದಲ್ಲಿ ಅಗಣಿತ ಕೋಟಿ ಕನಸುಗಳನ್ನು ನಕ್ಷತ್ರಗಳನ್ನಾಗಿಸಿ ತನ್ನ ಕಂಗಳಲ್ಲಿ ಬಂಧಿಸಿಟ್ಟಿದ್ದ ಉಜಿರೆಯ ವಿದ್ಯಾರ್ಥಿನಿ ಹದಿನೇಳರ ಬಾಲೆ, ಸೌಜನ್ಯಳ ಮಾನ, ಪ್ರಾಣ ಹರಣಕ್ಕೆ ನ್ಯಾಯ ಸಿಗದಿರುವುದು ಭಾರತೀಯ ತನಿಖಾ ವ್ಯವಸ್ಥೆಯ ಅವಸ್ಥೆಯನ್ನು ನಗ್ನಗೊಳಿಸಿ ನಮ್ಮ ಮುಂದಿಟ್ಟಿದೆ. ಅದರೊಡನೆ ಸುಖಾ ಸುಮ್ಮನೆ ಈ ಘನಘೋರ ಕ್ರೌರ್ಯವನ್ನು ಮೆರೆದ "ಪಾಪಿ" ಎಂಬ ಹಣೆಪಟ್ಟಿಯನ್ನು ಬರೆಯಿಸಿಕೊಂಡು, ಆರು ವರ್ಷಗಳ ಕಾಲ ಜೈಲುವಾಸವನ್ನನುಭವಿಸಿ ಮನೋ ವ್ಯಾಕುಲತೆಗೊಳಗಾಗಿ ಬದುಕಿ ಸತ್ತಿರುವ ಸಂತೋಷ್ ರಾವ್ ಮುಂದಿನ ಬದುಕಿನ ಕತೆಯೇನು? ಕನಿಷ್ಠ ಅವರಿಗೆ "ಪರಿಶುದ್ಧ" ಎಂಬ ಚೀಟಿ ಸಿಕ್ಕಿದ್ದರಿಂದಾಗಿ ಈ ಪ್ರಕರಣದಲ್ಲಿ ಮಾನವೀಯತೆ ಒಂದಿಷ್ಟು ಇನ್ನೂ ಉಸಿರಾಡುತ್ತಿದೆ ಎನ್ನಬಹುದು. ಸೌಜನ್ಯಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ಈ ಪ್ರಕರಣದ ಆಪಾದಿತ ಈಗ ಸಂತೋಷ್ ರಾವ್ ನಿರಪರಾಧಿ. ಹಾಗಾದರೆ ಅಪರಾಧಿ ಯಾರು? ಸತ್ಯದ ಪರ ನಿಲ್ಲಬೇಕಾದ ಸಾಕ್ಷ್ಯಗಳು , ತನಿಖಾಧಿಕಾರಿಗಳು , ಧಾರ್ಮಿಕ ವ್ಯಕ್ತಿಗಳು ಸಜ್ಜನರ ಸೋಗು ತಳೆದು ಸೌಜನ್ಯಳ ಗೋರಿಯನ್ನು ಮತ್ತಷ್ಟು ಗಟ್ಟಿಮಾಡುತ್ತಿದ್ದರೆ, ಅಡಕ್ಕ ರಾಜುನಂತಹ ಕಳ್ಳನಾದರೂ ಆಕೆಯ ಸಾವಿಗೆ ನ್ಯಾಯ ದೊರಕಿಸಲು ಬರಲಿ ಎಂದು ಆಶಿಸುತ್ತಿದೆ ಮನಸ್ಸು. ಒಂದಂತೂ ನನ್ನ ಅನುಭವಕ್ಕೆ ಬಂದಿರುವ ಸತ್ಯ. ಜಾತಿ, ಧರ್ಮ, ಅಧಿಕಾರಗಳು ಹಾಕಿದ ಗಂಟನ್ನು ಬಿಡಿಸಿಕೊಳ್ಳದವನು ಕಾಣದ ದೇವರಿಗೆ ಅಂಟಿಕೊಳ್ಳಲೂಬಹುದು. ಆದರೆ ಮನುಷ್ಯನಿಗೆ ಖಂಡಿತವಾಗಿಯೂ ನೆಂಟನಾಗಲಾರ!
ಏನಿದು ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣ
ಪ್ರಸಿದ್ಧ ಯಾತ್ರಾ ಕ್ಷೇತ್ರ ಧರ್ಮಸ್ಥಳಕ್ಕೆ ಹೊಂದಿಕೊಂಡಿರುವ ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿಯ ಪುತ್ರಿ ಸೌಜನ್ಯ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥ(ಎಸ್.ಡಿ.ಎಂ) ಕಾಲೇಜಿನ ದ್ವಿತೀಯ ಪಿಯು ಓದುತ್ತಿದ್ದಳು. ಈಕೆ 2012ರ ಅಕ್ಟೋಬರ್ 9ರಂದು ಸಂಜೆ ಕಾಲೇಜಿನಿಂದ ಮನೆಗೆ ಬರುತ್ತಿದ್ದಾಗ ಕಣ್ಮರೆಯಾಗಿದ್ದಳು, ಮರುದಿನ ರಾತ್ರಿ ಸಮೀಪದ ಮಣ್ಣಸಂಕ ಬಳಿ ಆಕೆಯ ಕೊಲೆಯಾದ ಶವ ದೊರಕಿತ್ತು, ವೈದ್ಯಕೀಯ ವರದಿಗಳ ಪ್ರಕಾರ ಆಕೆಯ ಮೇಲೆ ಅತ್ಯಾಚಾರವೆಸಗಿ ನಂತರ ಕೊಲ್ಲಲಾಗಿತ್ತು.
ಈ ಪ್ರಕರಣದಲ್ಲಿ ನ್ಯಾಯಕ್ಕಾಗಿ ಬೃಹತ್ ಸಾರ್ವಜನಿಕ ಪ್ರತಿಭಟನೆ ನಡೆಯಿತು. ಸ್ಥಳೀಯ ಸಂತೋಷ್ ರಾವ್ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಎಂದು ಪತ್ತೆ ಹಚ್ಚಿ ಬಂಧಿಸಿದ್ದರು. ಬಳಿಕ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು. ಹಲವು ಸಾರ್ವಜನಿಕ ಹೋರಾಟಗಳ ಬಳಿಕ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ಈಗ 11 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಜೂನ್ 16ರ ಶುಕ್ರವಾರ ಸಿಬಿಐ ಕೋರ್ಟ್ ಅಂತಿಮ ತೀರ್ಪು ನೀಡಿ, ಸಾಕ್ಷö್ಯ ಆಧಾರಗಳ ಕೊರತೆಯಿಂದಾಗಿ ಸಂತೋಷರಾವ್ ನಿರಪರಾಧಿ ಎಂದು ಘೋಷಿಸಿ ಬಿಡುಗಡೆ ಮಾಡಿದೆ. ಹೀಗಾಗಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಆರೋಪಿಗಳು ಯಾರು ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದುಕೊಂಡಂತಾಗಿದೆ. 10 ವರ್ಷ ಜೈಲು ಶಿಕ್ಷೆ ಅನುಭವಿಸಿದ ಆಪಾದಿತ ಸಂತೋಷ್ ರಾವ್ ಜೀವನದ ಕತೆ ಮುಂದೇನು?