ಸಂಗೀತ ಗಂಗಾ   ದಯಾ ಗಂಗನಘಟ್ಟ  ಚಿತ್ರಾ ಎಂಬ ಜೇನುದನಿಯ ರಾಗಪಯಣದಲ್ಲಿ...

ಸಂಗೀತ ಗಂಗಾ   ದಯಾ ಗಂಗನಘಟ್ಟ  ಚಿತ್ರಾ ಎಂಬ ಜೇನುದನಿಯ ರಾಗಪಯಣದಲ್ಲಿ...

ಸಂಗೀತ ಗಂಗಾ    ದಯಾ ಗಂಗನಘಟ್ಟ   ಚಿತ್ರಾ ಎಂಬ ಜೇನುದನಿಯ ರಾಗಪಯಣದಲ್ಲಿ...

ಸಂಗೀತ ಗಂಗಾ -  ದಯಾ ಗಂಗನಘಟ್ಟ

 ಚಿತ್ರಾ ಎಂಬ ಜೇನುದನಿಯ ರಾಗಪಯಣದಲ್ಲಿ...

ಮಿಡಲ್ ಕ್ಲಾಸ್ ಬದುಕನ್ನೇ ಹಾಸಿಹೊದ್ದ ಮೈಸೂರಿನ ವಠಾರವೊಂದರಲ್ಲಿ ಕಳೆದ ನನ್ನ ಬಾಲ್ಯವು ಹಲವು ಸಮುದಾಯಗಳ, ಬೇರೆ ಬೇರೆ ಸಂಪ್ರದಾಯ, ಸಂಸ್ಕಾರಗಳಲ್ಲಿ ಮಿಂದೆದ್ದು ಸಮೃದ್ಧವಾಗಿರುವ ಬಗ್ಗೆ ನನಗೆ ಒಂಥರಾ ಹೆಮ್ಮೆಯಿದೆ. ಈಗ ನನ್ನ ಮಗನಿಗೆ ನಾನು ಕೊಟ್ಟಿರುವ ಅಪಾರ್ಟ್‌ಮೆಂಟ್ ವಾತಾವರಣ ನೀಡದ ಹಲವು ಚಂದದ ಅನುಭವಗಳನ್ನ ಆ ವಾತಾವರಣ ನನಗೆ ನೀಡಿತ್ತು. ಅದು ಕಲಿಸಿದ ಪಾಠಗಳಷ್ಟೇ ಅಲ್ಲ, ಅಲ್ಲಿ ಸಿಕ್ಕ ನೆನಪುಗಳೂ ಇವತ್ತಿಗೂ ಸುಂದರದಲ್ಲೇ ಸುಂದರ. ನಮ್ಮ ಮನೆಯಿದ್ದ ವಠಾರದಲ್ಲಿ ಮೂವರು ತಮಿಳಿಯನ್ನರ, ಇಬ್ಬರು ಬ್ರಾಹ್ಮಣರ, ಒಬ್ಬರು ಮಲಯಾಳಿ ಮತ್ತು ಒಬ್ಬರು ಮುಸ್ಲಿಮರ ಮನೆಗಳಿದ್ದವು. ಅದರಲ್ಲಿ ತಮಿಳಿನ ಕುರುತ್ತಮ್ಮನ ಮನೆಯಲ್ಲಿ ಟಿ ವಿ ಇತ್ತು. ಏನಾದರೂ ನೆಪ ಒಡ್ಡಿ ನಾವೆಲ್ಲಾ ಅವರ ಮನೆಯಲ್ಲಿ ಹಾಜರಾಗಿ

ಬಿಡುತ್ತಿದ್ದೆವು ಚಿತ್ರಮಂಜರಿ ನೋಡಲು! ಆ ಮನೆಯ ಮಗ ಚಿತ್ರಗೀತೆಗಳ ವಿಡಿಯೋ ಕ್ಯಾಸೆಟ್ಗಳನ್ನು ತಂದು ನೋಡ್ತಿದ್ದ. ದಿನಾ ಎರಡು ವಿಡಿಯೋಗಳನ್ನು ಅವನು ತಪ್ಪದೇ ನೋಡ್ತಿದ್ದ. ಹಾಗಾಗಿ ಹೆಚ್ಚು ಕಮ್ಮಿ ಆ ಎರಡೂ ತಮಿಳು ಹಾಡುಗಳು ನನಗೂ ಅಚ್ಚುಮೆಚ್ಚಾಗಿ ಬಿಟ್ಟಿದ್ದವು. ಅದರಲ್ಲಿ ಒಂದು ಆಗಿನ ಚಾರ್ಟ್‌ಬಸ್ಟರ್

ಆಗಿದ್ದ ಕೆ ಬಾಲಚಂದರ್ ಅವರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ಸಿಂಧು ಭೈರವಿ ಯ 'ಪಾದರಿಯಾನ್ ಪಡಿಪ್ಪರಿಯಾನ್' ಎಂಬ ಹಾಡು. ಅದು ಇವತ್ತಿಗೂ ಅನೇಕ ಸಂಗೀತ ಪ್ರೇಮಿಗಳ ಮೆಚ್ಚಿನ ಹಾಡು. ಆ ಹಾಡು ರೋರಿಂಗ್ ಹಿಟ್ ಆಗಲು ಎರಡು ಕಾರಣಗಳಿದ್ದವು. ಒಂದು, ಹಾಡಿನ ಸನ್ನಿವೇಶ. ಒಬ್ಬ ಸಾಮಾನ್ಯ ಸಂಗೀತ ಪ್ರೇಮಿಯಾದ ಸುಹಾಸಿನಿ ಒಂದು ಸಂಗೀತ ಕಛೇರಿಯಲ್ಲಿ ಸೊಕ್ಕಿನ ಕರ್ನಾಟಕ ಸಂಗೀತಗಾರನನ್ನು ತಮಿಳಿನಲ್ಲೂ ಹಾಡಿ ಎಂದು ವಿನಂತಿಸುತ್ತಾಳೆ. ಆತ ನಿರಾಕರಿಸಿದ್ದಲ್ಲದೆ, ಸಂಗೀತದ ಇತರ ಪ್ರಕಾರಗಳನ್ನು, ವಿಶೇಷವಾಗಿ ಹಳ್ಳಿಗಾಡಿನ ಜನಪದ ಸಂಗೀತವನ್ನು ಕೀಳೆಂದು ಹಿಯಾಳಿಸುತ್ತಾನೆ. ಅವಳನ್ನು ನೀನು ಹಾಡು ನೋಡೋಣ ಎಂದು ಸವಾಲು ಹಾಕುತ್ತಾನೆ, ಅವಳು ಅದ್ಭುತ ವಾಗಿ ಹಾಡಿ ಸಾಮಾನ್ಯ ಜನರಿಗೂ ಸಂಗೀತ ಜ್ಞಾನ ಇರುತ್ತದೆ ಎಂದು‌ ನಿರೂಪಿಸುತ್ತಾಳೆ. ಈ ಹಾಡು ತುಂಬಾ ಇಷ್ಟವಾಗಲು ಇನ್ನೊಂದು ಕಾರಣವೆಂದರೆ ಅದರ ಶಾಸ್ತ್ರೀಯ ಭಾಗಗಳ ಸೌಂದರ್ಯವನ್ನು ಸ್ಪಷ್ಟ ಉಚ್ಚಾರಣೆಯಿಂದ ಸೊಗಸಾಗಿ ಹಾಡಿದ ಹಿನ್ನೆಲೆ ಗಾಯಕಿಯ ಜೇನುಧ್ವನಿ. ಇನ್ನೊಂದು ಹಾಡು, ತಮಿಳು ಸಂಗೀತದ ದಂತಕಥೆಗಳಾದ ಎಂಎಸ್ ವಿಶ್ವನಾಥನ್, ಇಳಯರಾಜ ಸಂಗೀತ, ಎ ಆರ್ ರೆಹಮಾನ್ ಅವರ ಕೀಬೋರ್ಡ್ ಮತ್ತು ರಾಗ ಶಂಕರಾಭರಣಂ ದಲ್ಲಿ ಅದೇ ಜೇನ ಹೆಣ್ಣುದನಿಯ ಸಿಹಿ ಸಿಹಿ ಸಾಥ್ ಅದೂ ಕೊಳಲಿನ ನಾದದೊಂದಿಗೆ! ಇಷ್ಟು ಸಾಕಲ್ವಾ ಅದೊಂದು ರಸಗವಳದಂತಹ ಹಾಡಾಗೋಕೆ? ಆ ಹಾಡೇ

'ಮೆಲ್ಲ ತಿರಂದತ್ತು ಕಥವು' ಚಿತ್ರದ ಟ್ರ್ಯಾಕ್, ಆಗ ಇದು ತಮಿಳು ಚಲನಚಿತ್ರ ಸಂಗೀತದಲ್ಲೇ ಅತ್ಯಂತ ರೋಮ್ಯಾಂಟಿಕ್ ಅನಿಸಿದ ಯುಗಳಗೀತೆ. ಈ ಎರಡೂ ಗೀತೆಗಳ ಮೂಲಕ ಯೌವನಕ್ಕೆ ಕಾಲಿಡುತ್ತಿದ್ದ ನನ್ನಲ್ಲಿ ಬಣ್ಣ ಬಣ್ಣದ ಕನಸುಗಳನ್ನು ತುಂಬಿದ್ದ ಆ ಜೇನದನಿಯ ಹಿನ್ನೆಲೆ ಗಾಯಕಿಯೇ ಕೃಷ್ಣನ್ ನಾಯರ್ ಶಾಂತಕುಮಾರಿ ಚಿತ್ರಾ, ನಮ್ಮ ನಿಮ್ಮೆಲ್ಲರ ಮೆಚ್ಚಿನ ಚಿತ್ರಾ ಕೆ.ಎಸ್.

ವಠಾರದಲ್ಲಿದ್ದ ಮುಸ್ಲಿಮರ ಮನೆಯ ಶಾನು ಅಕ್ಕ ಯಾವಾಗಲೂ ಹಾಕುತ್ತಿದ್ದ

"ಅಪನಿ ಉಮರ್ ಭೀ ತುಜ್ಕೋ ಲಗಾದೂಂ

ದುನಿಯಾ ಸೆ ಛೀನೂ ತುಜಪೆ ಲುಟಾದೂಂ

ಮೇರೆ ಲಾಲನಾ, ಮೇರೆ ಲಾಲನಾ"

ಎಂಬ ಅಮ್ಮನ ಜೋಗುಳವನ್ನು ಹಾಡಿದವರು ಮತ್ತು ಬಾಂಬೆ ಸಿನಿಮಾದ 'ಕೆಹೆನಾ ಹೈ ಕ್ಯಾ' ಎಂಬ ಪ್ರೇಮಭರಿತ ಹಾಡನ್ನು ಹಾಡಿದವರು ಒಬ್ಬರೇ ಹಾಡುಗಾರ್ತಿ ಎಂಬುದನ್ನ ಬಹಳ ವರ್ಷದ ವರೆಗೆ ನನ್ನ ಮನಸ್ಸು ಒಪ್ಪಿರಲೇ‌ ಇಲ್ಲ.

ಅಪ್ಪ‌ ಮನೆಗೆ ಪುಟ್ಟದೊಂದು ರೇಡಿಯೋ ತಂದಾಗ ನಾನು ಆಗತಾನೇ ಕಾಲೇಜು ಮೆಟ್ಟಿಲು ಹತ್ತಿದ್ದೆ. ಸರಿಯಾಗಿ ಅದೇ ಸಮಯದಲ್ಲಿ ಈ ಚಿತ್ರಾ ಎಂಬ ಮಾಂತ್ರಿಕ ಕಂಠದ ಒಡತಿ ನನ್ನೊಳಗೆ ಬಿಡಿಸಲಾಗದ ಹುಚ್ಚಿನಂತೆ ಹೊಕ್ಕುಬಿಟ್ಟಿದ್ದಳು. ಅಬ್ಬಾ! ಚಿತ್ರಾ ಹಾಡಿದ ಕನ್ನಡ ಹಾಡುಗಳ ನಶೆಯೇ ಒಂದು ತರದ್ದು. 'ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ' ಎಂದು ತಮ್ಮ ಸುಮಧುರ ಕಂಠದ ಮೂಲಕ ಕಲ್ಲಿಗೂ ಕನ್ನಡದ ಉಸಿರನ್ನ ತುಂಬಿದ ಅವರ ಕಂಠ, ಕನ್ನಡ ಉಚ್ಚಾರಣೆ ಅವರು ಕನ್ನಡದವರೇ ಎನ್ನುವಷ್ಟು ಅವರನ್ನು ಜನರಿಗೆ ಹತ್ತಿರವಾಗಿಸಿದೆ. ಕೋಟಿ ಪಲ್ಲವಿ ಹಾಡುವ ಕನಸು ಇದು, ಓ,ಮೇಘಗಳಾ ಬಾಗಿಲಲಿ ಚಂದ್ರ ಮುಖಿ, ಇದು ಹಕ್ಕಿ ಅಲ್ಲ ಆದ್ರೆ ಹಾರ್ತೈತಲ್ಲ, ಮನಸೇ ಓ ಮನಸೇ ಎಂಥಾ ಮನಸೇ, ಎಲೆ ಹೊಂಬಿಸಿಲೆ ಎಲೆ ತಂಪೆಲರೆ, ನೆನಪುಗಳ ಮಾತು ಮಧುರಾ, ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ, ಈ ಹೃದಯ ಹಾಡಿದೆ, ತುಂತುರು ಇಲ್ಲಿ ನೀರ ಹಾಡು ಎಂಬ ಹಾಡಿನ ವರೆಗೆ ಒಂದಾ ಎರಡಾ! 'ಅರುಣರಾಗ' ಚಿತ್ರದ "ನಾನೊಂದು ತೀರಾ ನೀನೊಂದು ತೀರಾ ಮನಸು ಮನಸು ದೂರ ಪ್ರೀತಿ ಹೃದಯ ಭಾರ..." ಎಂಬ ಹಾಡಂತೂ ವಿರಹಿಗಳ ಫೇವರೆಟ್.ಚಿತ್ರಾ ಹಾಡಿದ ಸುಮಧುರ ಹಾಡುಗಳ ಲೆಕ್ಕ ಬರಳೆಣಿಕೆಗೆ ಸಿಕ್ಕುವುದಂತೂ ಅಲ್ಲವೇ ಅಲ್ಲ ಬಿಡಿ.

1979ರಲ್ಲಿ ಮಲಯಾಳಂ ಚಿತ್ರರಂಗದ ಮೂಲಕ ಹಿನ್ನಲೆಗಾಯಕಿಯಾಗಿ ಹೊರಹೊಮ್ಮಿದ ಚಿತ್ರಾ, 1986ರಲ್ಲಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಕನ್ನಡದ ಗಾನಕೋಗಿಲೆಯೆಂದು ಪ್ರಸಿದ್ಧಿ ಪಡೆದರು.

ದಕ್ಷಿಣ ಭಾರತೀಯ ಚಿತ್ರರಂಗದ ಸುಶ್ರಾವ್ಯ ಹಿನ್ನಲೆ ಗಾಯಕಿಯರಲ್ಲೇ ಕೆ. ಎಸ್. ಚಿತ್ರಾ ಅವರದ್ದು ಕಳೆದ ಮೂರು ನಾಲ್ಕು ದಶಕಗಳಲ್ಲಿನ ಪ್ರಧಾನ ಹೆಸರು.

ಚಿತ್ರಾ 1963ರ ಜುಲೈ 27ರಂದು ತಿರುವನಂತಪುರದಲ್ಲಿ ಜನಿಸಿದರು. ತಂದೆ ಕೃಷ್ಣನ್ ನಾಯರ್ ಮತ್ತು ತಾಯಿ ಶಾಂತಾ ಇಬ್ಬರೂ ಸಂಗೀತ ಸಾಧಕರು. ತಂದೆಯಿಂದ ಸಂಗೀತ ಮತ್ತು ತಾಯಿಯಿಂದ ವೀಣೆ ಕಲಿಕೆ ಪ್ರಾರಂಭಿಸಿದ ಚಿತ್ರಾ ಅವರು ಡಾ. ಕೆ. ಓಮನಕುಟ್ಟಿ ಅವರಲ್ಲಿ ಹೆಚ್ಚಿನ ಸಂಗೀತ ಸಾಧನೆಯನ್ನು ಮಾಡಿದರು. ಸಂಗೀತದಲ್ಲಿ ಕೇರಳ ವಿಶ್ವ ವಿದ್ಯಾನಿಲಯ ದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದ ಚಿತ್ರಾ ಅವರು 1978 ರಿಂದ 1984 ಅವಧಿಯಲ್ಲಿ ಸತತ 6 ವರ್ಷಗಳ ಕಾಲ ಭಾರತ ಸರ್ಕಾರದಿಂದ ರಾಷ್ಟೀಯ ಪ್ರತಿಭಾ ಶೋಧದ ಪುರಸ್ಕಾರ ವಿದ್ಯಾರ್ಥಿ ವೇತನ ಪಡೆದರು.1979 ರಲ್ಲಿ ಎಂ. ಜಿ. ರಾಧಾಕೃಷ್ಣನ್ ಅವರು ಚಿತ್ರಾ ಅವರನ್ನು ಚಲನಚಿತ್ರ ಹಿನ್ನೆಲೆ ಗಾಯನ ಜಗತ್ತಿಗೆ ಕರೆತಂದರು. ಮೊದಲಿಗೆ ಮಲಯಾಳಂನ 'ಅಟ್ಟಹಾಸಂ', 'ಸ್ನೇಹಪೂರ್ವಂ', 'ಮೀರಾ' ಚಿತ್ರದ ಮೂಲಕ ಸಂಗೀತದ ಜರ್ನಿ ಯನ್ನು ಪಾರಂಭಿಸಿದ ಚಿತ್ರಾ ಕೆ.ಜೆ.ಯೇಸುದಾಸ್, ಎ.ಆರ್.ರೆಹಮಾನ್, ಹಂಸಲೇಖ, ವಿದ್ಯಾಸಾಗರ್, ಮೋಹನ್ ಸಿತಾರ ಮುಂತಾದ ಚಿತ್ರರಂಗದ ದಿಗ್ಗಜರ ಜೊತೆ ಕೆಲಸ ಮಾಡಿದ್ದಾರೆ. ಕೆ. ಜೆ. ಏಸುದಾಸ್ ಅವರೊಂದಿಗೆ ಭಾರತ ಮತ್ತು ವಿದೇಶಗಳಲ್ಲಿ ಗಾಯನ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡರು. ಸುಮಾರು 1985-1986ರ ವೇಳೆಗೆ ಚಿತ್ರಾ ಅವರು ತಮಿಳು, ಕನ್ನಡ ಮತ್ತು ತೆಲುಗು ಭಾಷೆಗಳಲ್ಲೂ ವ್ಯಾಪಿಸಿದರು. ಕನ್ನಡದಲ್ಲಿ ಮೊದಲು ಜಿ.ಕೆ. ವೆಂಕಟೇಶ್ ಅವರ ನಿರ್ದೇಶನದಲ್ಲಿ 1986ರಲ್ಲಿ ಪ್ರೀತಿ ಚಿತ್ರದಲ್ಲಿ ಹಾಡಿದರು. ಅವರು ಕನ್ನಡದಲ್ಲೇ 2000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

 

ಸದಾ ನಗುಮೊಗದ, ಅಚ್ಚುಮೆಚ್ಚಿನ ಗಾಯಕಿಯ ಬದುಕಿನಲ್ಲಿ ನಡೆದ ಒಂದು ಕಹಿ ಘಟನೆಯು ನನ್ನನ್ನೂ ಸೇರಿದಂತೆ ಆಕೆಯ ಹಲವು ಅಭಿಮಾನಿಗಳನ್ನು ಅಲ್ಲಾಡಿಸಿ ಬಿಟ್ಟಿತ್ತು. ಸುಮಧುರ ಕಂಠದಿಂದ ಮನೆಮಾತಾದ, ಎಂತಹ ಕ್ಲಿಷ್ಟಕರ ಹಾಡನ್ನೂ ಲೀಲಾಜಾಲವಾಗಿ ಹಾಡುವಷ್ಟು ಸಂಗೀತ ಶಕ್ತಿ ಒಲಿದಿರುವ ಚಿತ್ರಾ ಅವರ ವೈಯಕ್ತಿಕ ಬದುಕು ಅವರ ಸಂಗೀತದಷ್ಟೇ ನಾದಮಯವಾಗಲಿಲ್ಲ. ಎಲ್ಲವೂ ಚೆನ್ನಾಗಿದೆ ಎಂದು ಖುಷಿಯಾಗಿ ಇದ್ದಾಗಲೇ ಅವರ ಜೀವನದಲ್ಲಿ ದುರಂತವೊಂದು ಸಂಭವಿಸಿತ್ತು.

2011ರ ಏಪ್ರಿಲ್ 14ರಂದು ದುಬೈನಲ್ಲಿ ನಡೆಯುತ್ತಿದ್ದ ಎ.ಆರ್. ರೆಹಮಾನ್ ಸಂಗೀತ ಕಾರ್ಯಕ್ರಮದಲ್ಲಿ ಚಿತ್ರಾ ಭಾಗವಹಿಸಲು ಹೋಗಿದ್ದರು. ದುಬೈನ ಎಮಿರೇಟ್ಸ್ ಹಿಲ್ಸ್ ‌ನ ವಿಲ್ಲಾದಲ್ಲಿ ಉಳಿದುಕೊಂಡಿದ್ದರು. ಆಗ ಇವರ 9 ವರ್ಷದ ಮಗಳೂ ಜೊತೆಯಲ್ಲಿದ್ದಳು. ಅವತ್ತು ಆಕಸ್ಮಿಕವಾಗಿ ಅಲ್ಲಿನ ಈಜುಕೊಳದಲ್ಲಿ ಬಿದ್ದು ಅವರ ಪುಟಾಣಿ ಮಗಳು ಸಾವನ್ನಪ್ಪಿಬಿಡುತ್ತಾಳೆ. ವಿಜಯ ಶಂಕರ್ ಮತ್ತು ಚಿತ್ರಾ ದಂಪತಿಯ ಪುತ್ರಿ ನಂದನಾ, ಸುದೀರ್ಘ ಕಾಯುವಿಕೆಯ ನಂತರ ಹುಟ್ಟಿದ ಪುಟ್ಟ ರಾಜಕುಮಾರಿ, ಹೆಚ್ಚು ಕಾಲ ಅವರ ಜೊತೆಗೆ ಉಳಿಯುವುದಿಲ್ಲ. ಪುಟ್ಟ ಹೆಜ್ಜೆಗಳನ್ನು ಇರಿಸುತ್ತಾ ಮನೆಯ ತುಂಬಾ ನಲಿದಾಡಿಕೊಂಡಿದ್ದ ನಂದನಾರನ್ನು ತನ್ನಂತೆಯೇ ಬೆಳೆಸುವ ಆಸೆ ಹೊಂದಿದ್ದ ಚಿತ್ರಾಗೆ ಇದು ಬಹು ದೊಡ್ಡ ಆಘಾತ. ಸಂಗೀತಗಾರರ ಕುಟುಂಬದಲ್ಲಿ ಜನಿಸಿದ್ದ ಚಿತ್ರಾ ಅವರ ಮಗಳು ಬದುಕಿದ್ದರೆ, ಮತ್ತೊಬ್ಬ ಗಾಯಕಿ ಸಂಗೀತ ಲೋಕಕ್ಕೆ ಸಿಗುತ್ತಿದ್ದರು. ಆದರೆ ವಿಧಿಯ ಆಟ ಬೇರೆಯೇ ಇತ್ತು. ದಕ್ಷಿಣ ಭಾರತದ ಮರಿ ಕೋಗಿಲೆ ಅವತ್ತು ಮೌನವಾಗಿ ಬಿಟ್ಟಿತ್ತು. ಅತ್ಯಂತ ಪ್ರೀತಿ ಸಂತೋಷ ತುಂಬಿದ್ದ ಚಿತ್ರಾ ಕುಟುಂಬ ಮಗಳ ಅಗಲುವಿಕೆಯನ್ನು ಇಂದಿಗೂ ಅರಗಿಸಿಕೊಂಡಿಲ್ಲ. ನಂದನಾ ಹುಟ್ಟುಹಬ್ಬದಂದು ಕೆ.ಎಸ್.ಚಿತ್ರಾ ತಮ್ಮ ಮಗಳ ನೆನಪುಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಈಗಲೂ ಹಾಕುತ್ತಾರೆ‌. ಎಸ್.ಚಿತ್ರಾ ಅವರ ಬದುಕು ನಂದನ ಅವರ ನೆನಪುಗಳನ್ನು ನಿಧಿಯಂತೆ ಕಾಪಾಡುತ್ತಿದೆ. ನಂದನಾಳ ನೆನಪುಗಳು ಮನದಲ್ಲಿ ಮೂಡಿದಾಗಲೆಲ್ಲ ಕೆ.ಎಸ್.ಚಿತ್ರಾ ಅವರ ಮಾತುಗಳು ಭಾವುಕವಾಗುತ್ತವೆ.

ಪ್ರತೀ ಏಪ್ರಿಲ್ 14ರಂದು ಮಗಳ ಪುಣ್ಯ ಸ್ಮರಣೆಯಾಗಿ ಚಿತ್ರಾ ಅವಳನ್ನು ನೆನೆದು ಭಾವುಕರಾಗುತ್ತಾರೆ. ಆಕೆಯ ಬಗ್ಗೆ ಅವರು ಅವತ್ತು ಫೇಸ್‌ಬುಕ್ ನಲ್ಲಿ ಬರೆದುಕೊಳ್ಳುವ ಬರಹಗಳು ಎಂತಹವರ ಕಣ್ಣಲ್ಲೂ ನೀರು ತರಿಸುತ್ತವೆ. ಈಗ ತಮ್ಮ ಎದೆಯತ್ತರಕ್ಕೆ ಬೆಳೆದು ನಿಲ್ಲಬೇಕಿದ್ದ ಮಗಳು ತನ್ನೊಂದಿಗಿಲ್ಲ ಎಂಬ ಅವರ ನೋವು ಹೇಗಿರಬಹುದು ಎನ್ನುವುದನ್ನು ಆ ಬರಹಗಳು ವಿಷಾದದ ಭಾವನೆಯೊಂದಿಗೆ ವಿವರಿಸುತ್ತವೆ. ಮಗಳ ದುರಂತ ಸಾವಿನ ಬಳಿಕ ಮೌನಕ್ಕೆ ಶರಣಾಗಿದ್ದ ಚಿತ್ರಾ ಮಾನಸಿಕವಾಗಿ ಚೇತರಿಸಿಕೊಂಡು ಮತ್ತೆ ಹಾಡಲು ಮುಂದಾಗುತ್ತಾರೆ. ಚೆನ್ನೈನಲ್ಲಿ ಸಾಂಗ್ ರೆಕಾರ್ಡಿಂಗ್‌ನಲ್ಲಿ ಪಾಲ್ಗೊಂಡು ಮಲಯಾಳಂನ 'ಇಷ್ಟಂ ಇಷ್ಟಂ' ಚಿತ್ರದ ಹಾಡೊಂದನ್ನು ಹಾಡಿ, ಆ ಹಾಡನ್ನು ತಮ್ಮ ಮಗಳಿಗೆ ಅರ್ಪಿಸುತ್ತಾರೆ.

ಯಾರೋ ಸುನ್ ಲೋ ಜರಾ,

ತುಮ್ ಬಿನ್,

ಜಾಗೇ ಹೇ ದೇರ್ ತಕ್,

ಇತ್ಯಾದಿ ಹಾಡುಗಳಲ್ಲಿ ಮೆಲಿಫ್ಲೂಯಸ್, ಸೆಡೆಕ್ಟಿವ್ ಅನಿಸುವ ಅವರ ಧ್ವನಿಯು, 'ಕೆಹನಾ ಹೆ ಮೆನೆ ಯಾದ್ ಕಿಯಾ ' ಎಂಬ ಆಲ್ಬಮ್ ನ ಗಜ಼ಲ್ ಗಳಲ್ಲಿ ಘನ ಗಂಭೀರ ಮೆಲೋಡಿಯಸ್ ಅನಿಸುವುದು ನನಗಂತೂ ಸೋಜಿಗ. ಕೇವಲ ಇವರ ಆಲಾಪಗಳೇ ಪ್ರಪಂಚದಾದ್ಯಂತ ಸಾವಿರಾರು ಸಂಗೀತ ಪ್ರಿಯರ ಹೃದಯವನ್ನು ಗೆದ್ದು ಆಕೆಯನ್ನು " ದಿ ಗಾಡೆಸ್ ಆಫ್ ಹಮ್ಮಿಂಗ್" ಎಂದು ಗುರುತಿಸುತ್ತವೆ ಅಂದರೆ ಆಕೆಯ ವಿದ್ವತ್ತು ಎಂತಹದಿರಬಹುದು ಯೋಚಿಸಿ! ಇಂತಹಾ ಅದ್ಭುತ ದಕ್ಷಿಣ ಭಾರತದ ಪ್ರತಿಭೆಯೊಂದನ್ನ ಬೆಳಕಿಗೆ ತಂದವರು ಮತ್ತು ಇಂಡಸ್ಟ್ರಿಯಲ್ಲಿ ಸಶಕ್ತವಾಗಿ ದುಡಿಸಿಕೊಂಡವರೆಂದರೆ ಎ ಆರ್ ರೆಹಮಾನ್, ಅನು ಮಲಿಕ್ ಮತ್ತು ಸಂದೇಶ್ ಶಾಂಡಿಲ್ಯ ಎಂಬ ತ್ರಿಮೂರ್ತಿಗಳು.

'ಪುನ್ನಕೈ ಮನ್ನನ್’ ಎಂಬ ಸಿನಿಮಾ ದಿಂದ ಶುರುವಾದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಚಿತ್ರಾ ಅವರ ಸಂಗೀತದ ಜುಗಲ್ಬಂದಿಯ ಸೊಬಗನ್ನ ಅಕ್ಷರಗಳಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ. ಅವರಿಬ್ಬರೂ ಜೊತೆಯಾಗಿ ಅತೀ ಹೆಚ್ಚು ಹಾಡು ಹಾಡಿದ್ದು ಇಳಯರಾಜಾ ಸರ್ ಮತ್ತು ಎ.ಆರ್. ರೆಹಮಾನ್‍ಗಾಗಿ. ಎಲ್ಲ ಹಾಡುಗಳೂ ರಸದೌತಣವೇ. ಚಿತ್ರಾ ಅವರ ಸಂಗೀತ ಮತ್ತು ಜೀವನದ ಬಗ್ಗೆ ಮಲಯಾಳಂ ನಲ್ಲಿ 'ಅನುಭವಂ, ಓರ್ಮ, ಯಾತ್ರಾ' (ಅನುಭವ, ನೆನಪು, ಪಯಣ) ಎಂಬ ಪುಸ್ತಕ 2017ರಲ್ಲಿ ಪ್ರಕಟವಾಗಿದೆ. ಈ ಪುಸ್ತಕದಲ್ಲಿ ಚಿತ್ರಾ ಮತ್ತು ಎಸ್‌ಪಿಬಿ ಅವರ ಒಡನಾಟದ ಬಗ್ಗೆ ಒಂದು ಅಧ್ಯಾಯವೇ ಇದೆ. ಉತ್ತರ ಭಾರತದ ಪಿಯಾ ಬಸಂತಿ ಎಂದು, ಆಂಧ್ರಪ್ರದೇಶ,ತೆಲಂಗಾಣದ ಸಂಗೀತ ಸರಸ್ವತಿ ಎಂದು, ತಮಿಳಿನ ಚಿನ್ನಾ ಕುಯಿಲ್ ಎಂದು, ಮಲಯಾಳಂನ ಮಲ್ಲು ಕುಟ್ಟಿ ಎಂದೂ ಕರೆಸಿಕೊಳ್ಳುವ ಚಿತ್ರಾ ಸುಮಾರು ನಾಲ್ಕು ದಶಕಗಳವರೆಗೂ ಸಂಗೀತ ಲೋಕವನ್ನು ಆಳಿದರು ಎಂದರೆ ಅದು ಸುಳ್ಳಲ್ಲ. ಕೆ. ಎಸ್. ಚಿತ್ರಾ ಅವರ ಗಾಯನ ನಮ್ಮನ್ನು ನಿರಂತರ ತಣಿಸುತ್ತಿರಲಿ. ಅವರ ಸಾಧನೆ ಮತ್ತೂ ಸಾವಿರವಾಗಲಿ. "ಸಂಗೀತ ನನ್ನ ಬದುಕು, ಅದರಿಂದಲೇ ನಾನಿವತ್ತು ಜೀವಂತವಾಗಿದ್ದೇನೆ" ಎನ್ನುವ ಚಿತ್ರಾ ದಶಕಗಳ ನಂತರವೂ ಸಂಗೀತ ಲೋಕದಲ್ಲಿ ಹೊಳೆಯುವ ಒಂದು ಅಮೂಲ್ಯ ರತ್ನ.

 

 

ಪ್ರಶಸ್ತಿಗಳಿಗೆ ಲೆಕ್ಕವಿಲ್ಲ!

6 ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವ ಚಿತ್ರಾ ಬ್ರಿಟಿಷ್ ಸಂಸತ್ತಿನಲ್ಲಿ ಮತ್ತು ಚೀನಾ ದೇಶದ ರಾಷ್ಟೀಯ ಚಲನಚಿತ್ರ ಮಹೋತ್ಸವದಲ್ಲಿ ಸನ್ಮಾನಗೊಂಡ ಭಾರತದ ಮೊದಲ ಮಹಿಳೆ.

1986ರಲ್ಲಿ ಇಳಯರಾಜರ ಸಂಗೀತದಲ್ಲಿ ತಮಿಳಿನ ಸಿಂಧು ಭೈರವಿ ಚಿತ್ರದ ಗಾಯನಕ್ಕೆ ಪ್ರಥಮ ರಾಷ್ಟ್ರೀಯ ಪ್ರಶಸ್ತಿ ಪಡೆದ ಕೆ. ಎಸ್. ಚಿತ್ರಾ ಅವರು, 1986ರಲ್ಲಿ ಮಲಯಾಳಂನ ನಖ ಕ್ಷತಂಗಳ್, 1989ರಲ್ಲಿ ಮಲಯಾಳಂನ ವೈಶಾಲಿ, 1996ರಲ್ಲಿ ತಮಿಳಿನ ಮಿನ್ಸಾರ ಕನವು, 1997ರಲ್ಲಿ ಹಿಂದಿಯ ವಿರಾಸಾತ್, 2004ರಲ್ಲಿ ತಮಿಳಿನ ಆಟೋಗ್ರಾಫ್ ಚಿತ್ರದ ಗಾಯನಗಳಿಗಾಗಿ 6 ಬಾರಿ ರಾಷ್ಟ್ರೀಯ ಚಲನಚಿತ್ರ ಶ್ರೇಷ್ಟ ಹಿನ್ನೆಲೆ ಗಾಯಕಿ ಪ್ರಶಸ್ತಿ ಪಡೆದಿದ್ದಾರೆ. ಚಿತ್ರಾ ಅವರಿಗೆ ಪದ್ಮಶ್ರೀ ಪ್ರಶಸ್ತಿ, ರಾಷ್ಟ್ರಪತಿಗಳಿಂದ ಶ್ರೇಷ್ಟ ಮಹಿಳಾ ಸಾಧಕಿಯರಿಗೆ ಸಂದ ಪ್ರಶಸ್ತಿ, ಅನೇಕ ರಾಜ್ಯಗಳ ಚಲನಚಿತ್ರ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ ಇತ್ಯಾದಿ ಪ್ರಶಸ್ತಿ ಗೌರವಗಳ ಮಹಾಪೂರವೇ ಹರಿದಿದೆ. ಪ್ರಪ್ರಥಮ ಬಾರಿಗೆ ಸ್ಟುಡಿಯೋ ಅಲ್ಬಂ ಹೊರತಂದದ್ದು ಚಿತ್ರಾ ಅವರ ಇನ್ನೊಂದು ಸ್ಪೆಷಾಲಿಟಿ .1993 ರಲ್ಲಿ 'ರಗ್ಗ ರಾಗಾ' ಎಂಬ ಅಲ್ಬಂ ಹೊರಬಂದಿದ್ದು, 2000 ದಲ್ಲಿ 'ಪಿಯಾ ಬಸಂತಿ' ಹಾಗು 'ಸನ್ ಪಾಯಿಂಟ್' ಎಂಬ ಹಿಂದಿ ಆಲ್ಬಂ ಹೊರತಂದಿದ್ದಾರೆ.