“ಅಮ್ಮ ಎಂದರೆ ಮೈ ಮನವೆಲ್ಲ ಹೂವಾಗುವುದಮ್ಮಾ, ಆ ಎರಡಕ್ಷರದಲಿ ಏನಿದೆ ಶಕ್ತಿ ಹೇಳುವವರಾರಮ್ಮಾ" ನೇತ್ರಾವತಿ.ಕೆ.ಬಿ

ಅಷ್ಟಕ್ಕೂ ನಾವು ತಿಪಟೂರಿನಲ್ಲಿ ಇದ್ದಷ್ಟೂ ವರ್ಷ ಸಿನಿಮಾಗೆ ಬಾಲ್ಕನಿಗೆ ಮಾತ್ರ ಟಿಕೆಟ್ ಪಡೆದು ಹೋಗಬೇಕಿತ್ತು, ಅಪ್ಪ ನಮ್ಮ ಜೊತೆ ಬರಲಿ ಬರದೆ ಇರಲಿ. ಇದು ಅಪ್ಪನ ಆರ್ಡರ್. ಅಪ್ಪ ಬಂದರಂತೂ ಸ್ಟ್ರಿಕ್ಟ್ ಆರ್ಡರ್. ಬಾಲ್ಕನಿಗೆ ಟಿಕೆಟ್ ತಗೋಬೇಕಿತ್ತು. ರಶ್ ಇದೆ ಅಂತ ಫಸ್ಟ್ ಕ್ಲಾಸಿಗೆ ಟಿಕೆಟ್ ತಗೊಳ್ಳೋ ಹಂಗಿರಲಿಲ್ಲ. ನಮಗೂ ಕೂಡ ತಾಕೀತು ಮಾಡಿತ್ತು?

“ಅಮ್ಮ ಎಂದರೆ ಮೈ ಮನವೆಲ್ಲ ಹೂವಾಗುವುದಮ್ಮಾ, ಆ ಎರಡಕ್ಷರದಲಿ ಏನಿದೆ ಶಕ್ತಿ ಹೇಳುವವರಾರಮ್ಮಾ"                         ನೇತ್ರಾವತಿ.ಕೆ.ಬಿ

ಜೀವದ ಕತೆ-14


ನೇತ್ರಾವತಿ ಕೆ.ಬಿ

ಅಮ್ಮ, ಎಷ್ಟು ಚೆಂದ ಈ ಪದ, ಆತ್ಮೀಯ, ಪ್ರೀತಿ!


   8 ನೇ ತರಗತಿಗೆ ಶಾಲೆ ಬಿಡಿಸಿದ್ದರಿಂದ ನಮ್ಮಮ್ಮ ಮುಂದೆ ಓದಲಿಲ್ಲವಂತೆ. ಆದರೂ ಅಮ್ಮನಿಗೆ ಕನ್ನಡದ ಜೊತೆ ಇಂಗ್ಲಿಷ್ ಓದಲು ಬರೆಯಲೂ ಬರುತ್ತಿತ್ತು, ಅರ್ಥಮಾಡಿಕೊಳ್ಳುತ್ತಿತ್ತು. ಅಪ್ಪ ಗಣಿತ, ಇಂಗ್ಲಿಷ್ ಹೇಳಿಕೊಟ್ಟರೆ ನಮ್ಮ ಎಲ್ಲ ಪಠ್ಯೇತರ ಚಟುವಟಿಕೆಗೆ ಅಮ್ಮನೇ ಸ್ಪೂರ್ತಿ. 


  ಅಮ್ಮ ಶಾಲೆಯಲ್ಲಿ ಹಾಡು ಚೆನ್ನಾಗಿ ಹೇಳುತ್ತಿದ್ದು ಬಹಳವೇ ಬಹುಮಾನ ಪಡೆದಿತ್ತಂತೆ, ಹಾಡುಗಳನ್ನು ಬರೆದುಕೊಂಡಿದ್ದ 100 ಪೇಜಿನ ಒಂದು ಪುಸ್ತಕವೇ ಅಮ್ಮನ ಬಳಿ ಇತ್ತು. ಆ ಕಾಲದ ಎಷ್ಟೋ ಹಾಡುಗಳನ್ನು ನಾವು ಕೇಳಿಯೇ ಇರಲಿಲ್ಲ, ಭಕ್ತಿ ಗೀತೆ, ದೇಶ ಭಕ್ತಿ ಗೀತೆ, ಜನಪದ ಗೀತೆ ಹೀಗೆ ಹಲವಾರು. ಹಾಗಾಗಿ ನಮಗೂ ಒಂದಷ್ಟು ಹಾಡುಗಳನ್ನು ಹೇಳಿಕೊಟ್ಟಿತ್ತು. ಅವುಗಳು ಉಪಯೋಗಕ್ಕೆ ಬರುತ್ತಿದ್ದುದು ಯಾರಾದರೂ ಕುಂಕುಮಕ್ಕೆ ಕರೆದಾಗ. ಅವರು ಹಾಡು ಹೇಳಿ ಎಂದ ತಕ್ಷಣ ಅಮ್ಮ ನಮ್ಮ ಕಡೆ ತಿರುಗಿ ಹೂಂ ಹಾಡಿ ಅನ್ನುವಂತೆ ನೋಡುತ್ತಿತ್ತು. ತಕ್ಷಣವೇ ಅಮ್ಮನ ಜೊತೆ ನಾನು ಅಕ್ಕ ಕೂಡಿ ಹಾಡು ಹೇಳುತ್ತಿದ್ದೆವು. ನನ್ನ ಧ್ವನಿ ನನಗೇನೂ ಅಷ್ಟು ಇಷ್ಟ ಆಗುತ್ತಿರಲಿಲ್ಲ.ಆದರೆ ಅಮ್ಮನ ಧ್ವನಿ, ಅಕ್ಕನ ಧ್ವನಿ ಸುಮಧುರವಾಗಿತ್ತು. ಬ್ರಹ್ಮಕುಮಾರೀಸ್‌ನಲ್ಲಿ ಇದ್ದ ಚಿಕ್ಕಜ್ಜಿ ಒಂದಷ್ಟು ಶಿವನ ಗೀತೆಗಳನ್ನು ಹಾಡುವುದನ್ನು ಜೊತೆಗೆ ಧ್ಯಾನ ಮಾಡುವುದನ್ನು ಹೇಳಿಕೊಟ್ಟಿತ್ತು. 


   ಅಮ್ಮನ ಅಣ್ಣ ಬರೆದಿದ್ದ ಗೀತೆಗಳು ಕೂಡ ಅಮ್ಮನ ಪುಸ್ತಕದಲ್ಲಿ ಇದ್ದವು, ಆ ಗೀತೆಗಳನ್ನು ಕೂಡ ಸಿನಿಮಾ ಹಾಡಿನ ರಾಗದಲ್ಲಿ ಸುಶ್ರಾವ್ಯವಾಗಿ ಹಾಡುತ್ತಿದ್ದೆವು, ಒಂದು ಉದಾಹರಣೆ,


 ( “ಇದು ಬಾಪೂಜಿ ಬೆಳಗಿದ ಭಾರತ” ಎಂಬ ಹಾಡಿನ ರಾಗದಲ್ಲಿ)


ಗಣನಾಥನನ್ನು ಪೂಜಿಸುವೆ ಮನದಿ 
ವಿನಯದೆ ಭಜಿಸುವೆ ನಾ ಮೋದದಿ
ನಿನ್ನ ಬಳಿ ಬಂದು ಬೇಡುವೆ ಸ್ವಾಮಿಯೇ 
ನೀ ದಯಮಾಡಿ ಪೊರೆಯೋಳ್ ಭರದಿ
ಅಗಣಿತ ಗಣಪ ಅಜಗಾಣ ಭೂಪ
ಭಜಕಾರ ಪೊರೆಯುವ ವಿನಾಯಕ
ನಾಗಾದಿ ಯಜ್ಷದೆ ಸೂತ್ರಧಾರ, 
ರಾಗದ್ವೇಷರಹಿತ ನೀ ಗಣನಾಥನೇ 
ನಿನ್ನ ಬಳಿ ಬಂದು ಬೇಡುವೆ ಸ್ವಾಮಿಯೇ 
ನೀ ದಯಮಾಡಿ ಪೊರೆಯೋಳ್ ಭರದಿ
ಪಾಶಾಂಕುಶಧರ ಪಾರ್ವತಿ ತನಯ 
ಪಾಲಿಸು ನಂಬಿಹೆ ನಿನ್ನಿರವ

---

2. ವಿದ್ಯೆಯ ಕರುಣಿಸಿ ಮಿಥ್ಯೆಯ ತೊಲಗಿಸಿ
ಸರಸ್ವತಿ ಎಮ್ಮನು ಸಲಹೇ
ತೋರೇ ಜೀವನ ದಾರಿ
--

3. ನೀ ಗಜಮುಖ ಸೌಖ್ಯದಾತ
ಲೋಕಾಧೀಶ ಪೊರೆಯೋ ನಮಿಪೆವು ನೀ
---


       ತೋಟದಲ್ಲಿದ್ದಾಗ ನಮಗೆ ಬೇರೇನೂ ಎಂಟರ್‌ಟೈನ್‌ಮೆಂಟ್ ಇರಲಿಲ್ಲ. ಹಾಗಾಗಿ ಯಾವಾಗಲೂ ರೇಡಿಯೋ ಆನ್ ಇರುತ್ತಿತ್ತು ಒಂದು ಸ್ಟೇಷನ್ ಮುಗಿದಾಗ ಮತ್ತೊಂದು ಹಾಗೆ ಮತ್ತೊಂದು ಹೀಗೆ ರಾತ್ರಿ ವಿವಿಧ ಭಾರತಿ ಸ್ಟೇಷನ್‌ನಲ್ಲಿ ಬರುತ್ತಿದ್ದ ಎಲ್ಲ ಬಗೆಯ ಹಿಂದಿ ಸಿನಿಮಾ ಹಾಡುಗಳನ್ನು ಕೇಳಿ ರಾತ್ರಿ 11ಕ್ಕೆ ಪ್ರೊಗ್ರಾಮ್ ಕ್ಲೋಸ್ ಆಗಿ ಕುಯ್ ಎನ್ನುವ ಸೌಂಡ್ ಬರುವವರೆಗೆ ರೇಡಿಯೋ ಆನ್ ಇರುತ್ತಿತ್ತು, ರೇಡಿಯೋದಲ್ಲಿ ಬರುವ ಸಿನಿಮಾ ನಾಟಕ ಎಲ್ಲಾ ಕೇಳುತ್ತಿದ್ದೆವು. ಹೊಸ ಸಿನಿಮಾ ಬಂದಾಗ ಅಮ್ಮ ನಮ್ಮನ್ನು ಚಿನಾಹಳ್ಳಿಯ ಟೆಂಟ್‌ಗಳಿಗೆ ಕರೆದೊಯ್ಯುತ್ತಿತ್ತು. ಯಾವಾಗಲೂ ನಾವು ಬಸ್ ಹಿಡಿದು ಹೋಗುವ ಹೊತ್ತಿಗೆ ಸಿನಿಮಾ ಶುರುವಾಗಿರುತ್ತಿತ್ತು, ಹಾಗಾಗಿ ಮುಂದಿನ ನೆಲದ ಮೇಲೆ ಕೂರುತ್ತಿದ್ದ ನೆನಪು.


    ಚಿಕ್ಕ ವಯಸ್ಸಿಗೇ ನಮಗೆ ಹಿಂದಿ ಹಾಡುಗಳು ಕಿವಿ ಮೇಲೆ ಬೀಳುತ್ತಾ, ಪಕ್ಕದ ತೋಟದ ಮುಸ್ಲಿಮರ ಮಾತುಗಳು ಕಿವಿ ಮೇಲೆ ಬೀಳುತ್ತಾ ಹಿಂದಿ ಬಹಳ ಸುಲಭವಾಗಿ ಅರ್ಥವಾಗುತ್ತಿತ್ತು. ನಾನು ಹಿಂದಿ ಬರೆಯಲು ಕಲಿತದ್ದು ತಿಪಟೂರಿನಲ್ಲಿ ಹಿಂದಿ ಪ್ರಚಾರ ಸಮಿತಿಯ ʼಬೋಧʼ ಎಕ್ಸಾಮ್ ಕಟ್ಟಿದಾಗ.


   ಎಲ್ಲಾ ಹಿಂದಿ ಹಾಡುಗಳ ಗಾಯಕರು, ಗೀತ ರಚನೆಕಾರರು, ಹಾಡುಗಾರರ ಬಗ್ಗೆ ಅಮ್ಮನಿಗೆ ತಲೆ ತಿನ್ನುವಂತೆಯೇ ಈ ರೇಡಿಯೋದಲ್ಲಿ ಮನುಷ್ಯರು ಕುಳಿತು ಹೇಗೆ ಹಾಡುತ್ತಾರೆ ಅಂತ ?!. ಕೇಳುತ್ತಿದ್ದೆವು. ಅಮ್ಮ ಹೇಳುವಷ್ಟು ಹೇಳಿ ಕಡೆಗೆ ನಮ್ಮದೇ ಧಾಟಿಯಲ್ಲಿ ಅದರೊಳಗಿನ ಟ್ರಾನ್ಸ್ ಸಿಸ್ಟರ್‌ಗಳನ್ನು ತೋರಿಸಿ ಅಲ್ಲಿ ಕುಳಿತು ಹಾಡುತ್ತಾರೆ ಅಂತ ಹೇಳಿತ್ತು, ಅದಕ್ಕೆ ನಾವು ಹಾಗಾದ್ರೆ ಎಷ್ಟು ಜನ ಹಾಡುಗಾರರಿದ್ದಾರೋ ಅಷ್ಟೂ ಅವು ರೇಡಿಯೋ ಒಳಗೆ ಇದೆಯಾ ಅಂತ ಕೇಳುತ್ತಿದ್ದೆವು. ಹೂಂ ಹೌದು ಅಂತ ಅಮ್ಮ ಹೇಳಿದ ದಿನದಿಂದ ತಲೆಕೆಡಿಸಿಕೊಂಡು ಸುಮ್ಮನಾದೆವು.


     ಇದೇ ಅಭ್ಯಾಸ ನಮಗೆ ಹೇಗೆ ಮುಂದುವರಿಯಿತು ಅಂದರೆ ನಾವು ತಿಪಟೂರಿಗೆ ಹೋದ ಮೇಲೂ ಕೂಡ ನಾವು ಓದುತ್ತಿರುವಾಗಲೂ ರೇಡಿಯೋ ಹಾಡುತ್ತಿತ್ತು. ಇದನ್ನು ಕೇಳಿಸಿಕೊಂಡ ಪಕ್ಕದ ಮನೆಯಾಕೆ “ಹೂಂ ರೇಡಿಯೋ ಹಾಕಿಕೊಂಡು ಅದೇನು ಓದುತ್ತಾರೋ ನಾ ಬೇರೆ ಕಾಣೆ?” ಅಂತ ಉದ್ಗಾರ ತೆಗೆದದ್ದು ನಮಗೆ ಕೇಳಿಸಿಯೂ ಸುಮ್ಮನಿದ್ದೆವು. ಏಕೆಂದರೆ ಅದು ನಮಗೆ ಡಿಸ್ಟರ್ಬ್ ಮಾಡುವ ವಿಷಯ ಆಗಿರಲಿಲ್ಲ. ಕಾರಣ ಸಣ್ಣ ಧ್ವನಿಯಲ್ಲಿ ಆ ರೇಡಿಯೋ ಹಾಡುತ್ತಿದ್ದರೆ ಸುಮಧುರವಾಗಿರುತ್ತಿತ್ತು. ಜೋರಾಗಿ ಹಾಕಿದರೆ ಮಾತ್ರವೇ ಅದು ಕರ್ಕಶವಾಗುತ್ತದೆ. ಅದೇ ಅಭ್ಯಾಸವನ್ನು ಮುಂದುವರಿಸಿದ ನಾನು ರೇಡಿಯೋವನ್ನು ಹಾಸ್ಟೆಲ್ ಗೂ ಒಯ್ದಿದ್ದೆ. ಅಲ್ಲಿ ಒಮ್ಮೆ ಹಾಸ್ಟೆಲ್ ವಾರ್ಡನ್ ಅನಿರೀಕ್ಷಿತ ಭೇಟಿಯಿಂದ ಸಿಕ್ಕಿಬಿದ್ದು ಮತ್ತೊಮ್ಮೆ ಕಂಡರೆ ಆಚೆ ಎಸೆಯುತ್ತೇನೆ ಎಂಬ ಧಮ್ಕಿಗೆ ಹೆದರಿ ಸ್ವಲ್ಪ ಸ್ವಲ್ಪ ಕೇಳುವುದು ಕಮ್ಮಿ ಮಾಡಿದೆ (ಹಗಲು ಹೊತ್ತು ಕೇಳುತ್ತಿರಲಿಲ್ಲ) ಅಂತೆಯೇ ಕಾಗ್ಗೆರೆ ಹಾಸ್ಟೆಲ್‌ಗೆ ಶಿಫ್ಟ್ ಆದ ಮೇಲೆ ರೂಮ್ ಮೇಟ್ “ಸ್ವಲ್ಪ ಸಣ್ಣ ಧ್ವನಿಯಲ್ಲಿ ಇಡು ನನಗೆ ನಿದ್ದೆ ಬರುತ್ತಿಲ್ಲ” ಅಂತ ಹೇಳಿದಾಗಿನಿಂದ (ಅವಳು ಬೇಗ ಮಲಗಿ ಬೆಳಿಗ್ಗೆ ಎರಡಕ್ಕೆ ಏಳುತ್ತಿದ್ದಳು, ನಾನು ರಾತ್ರಿ ಒಂದರವರೆಗೆ ಓದಿ ಮಲಗುತ್ತಿದ್ದೆ) ಮತ್ತೆ ಸ್ವಲ್ಪ ಕಡಿಮೆ ಆಗಿ ಹಾಗೇ ಆ ಅಭ್ಯಾಸ ಬಿಟ್ಟು ಹೋಯಿತು.


     ಹೀಗೆ ನಮಗೆ ಹಾಡು, ಅಡುಗೆ, 6 ಎಳೆ ದಾರದಿಂದ ಕ್ರೋಶಾ ಉಪಯೋಗಿಸಿ ಟೇಬಲ್ ಮೇಲೆ ಇಡುವ ಕ್ಲಾತ್ ಹೆಣೆಯುವುದು, ರಂಗೋಲಿ ಹಾಕುವುದು, ಚಿತ್ರ ಬಿಡಿಸುವುದು ಹೀಗೇ ಅಮ್ಮ ಹಲವು ರೀತಿ ನಮಗೆ ಬ್ಯುಸಿಯಾಗಿಡುತ್ತಿತ್ತು.


     ಅದರ ಮುಂದುವರಿಕೆ ನಾನು ಸರ್ಕಾರಿ ಗರ್ಲ್ಸ್ ಹೈಸ್ಕೂಲ್ ಸೇರಿದಾಗ ಅಲ್ಲಿ ನಮಗೆ ಹೊಲಿಗೆ ತರಗತಿ, ಡ್ರಾಯಿಂಗ್ ಕ್ಲಾಸ್ ಕೂಡ ಇದ್ದು ಅವುಗಳನ್ನು ಕಲಿಯುವುದು ಕಂಪಲ್ಸರಿ ಆಗಿದ್ದರೂ ಕೂಡಾ ನನಗೆ ಅದನ್ನು ಇಷ್ಟ ಪಟ್ಟು ಕಲಿಯುವಷ್ಟು ಆಸಕ್ತಿ ನನ್ನಲ್ಲಿ ಬರಲು ಕಾರಣ ಅಮ್ಮ. ಅಂತೆಯೇ ಡ್ರಾಯಿಂಗ್ ಲೋಯರ್ ಮತ್ತು ಹೈಯರ್ ಪಾಸ್ ಮಾಡಿಕೊಂಡುಬಿಟ್ಟೆ. ಬಟ್ಟೆ ಹೊಲಿಯುವಷ್ಟು ಹೊಲಿಗೆ ಕಲಿತುಕೊಂಡೆ, ಕರ್ಚೀಫ್ ಡಿಸೈನ್ ಮಾಡುವುದು, ಮನೆಗೆ ಅಲಂಕಾರಕ್ಕೆ ವಿವಿಧ ಕುಸುರಿ ಕಲೆಯ ಹೆಣಿಗೆ ಹೆಣೆಯುವುದು, ವಾಸ್, ಬುಟ್ಟಿ, ಸ್ವೆಟರ್ ಹೀಗೆ ಅದರ ಜೊತೆಗೆ ಶಾಲೆಯಲ್ಲಿ ಆಪ್ಷನಲ್ ಮಹಾಭಾರತ, ರಾಮಾಯಣ ಇವುಗಳನ್ನು ಓದಿ ಎಕ್ಸಾಮ್ ಬರೆಯಲು ಇತ್ತು. ನಾನು ಮಹಾಭಾರತ ತೆಗೆದುಕೊಂಡಿದ್ದೆ ಪುಸ್ತಕವನ್ನ ಪೂರ್ತಿ ಓದಿದ್ದೆ, ಎಕ್ಸಾಮ್ ಬರೆದ ನೆನಪಿಲ್ಲ, ಬರೆದಿದ್ದರೆ ಸರ್ಟಿಫಿಕೇಟ್ ಕೊಡುತ್ತಿದ್ದರು, 


     ಅದೇ ರೀತಿ ಅಮ್ಮ ಬರುವ ಎಲ್ಲ ಸಿನಿಮಾಗಳನ್ನು ತೋರಿಸುತ್ತಿತ್ತು, ಬರು ಬರುತ್ತಾ ಅಕ್ಕ ಓದಿನಲ್ಲಿ ಸ್ವಲ್ಪ ನಿಧಾನ, ಜೊತೆಗೆ ಅವಳ ಅನಾರೋಗ್ಯದ ಕಾರಣ ಅಂತ ಹೆಚ್ಚಿಗೆ ನನ್ನನ್ನು ಸಿನಿಮಾಗೆ ಕರೆದುಕೊಂಡು ಹೋಗುತ್ತಿತ್ತು, ಒಮ್ಮೆ ವಿಷ್ಣುವರ್ಧನ್ ಹೀರೋ ಆಗಿದ್ದ ‘ಆರಾಧನೆ’ ಸಿನಿಮಾ ರಿಲೀಸ್ ಆಗಿತ್ತು ನಮಗೆ 8ನೇ ತರಗತಿ ಪ್ರಿಪರೇಟರಿ ಎಕ್ಸಾಮ್ ನಡೆಯುತಿತ್ತು ಅಮ್ಮ ಶಾಲೆ ಬಳಿ ಬಂದು “ಬಾ ಸಿನಿಮಾಗೆ ಹೋಗುವ” ಅಂತ ಕರೆದುಕೊಂಡು ಹೋಯಿತು. ಸ್ನೇಹಿತೆಯರಿಗೆ ಎಲ್ಲಿಗೆ ಹೋಗುತ್ತಿದ್ದೀಯಾ ಎಕ್ಸಾಮ್ ಬಿಟ್ಟು ಅಂದರೆ ‘ಆರಾಧನೆ’ ಸಿನಿಮಾಗೆ ಅಂತ ಹೇಳಿಯೇ ಹೋಗಿದ್ದೆ. ಟೀಚರ್ ನಾನು ಏಕೆ ಎಕ್ಸಾಮ್‌ಗೆ ಬಂದಿಲ್ಲ ಅಂದರೆ ಫ್ರೆಂಡ್ಸ್ ಆರಾಧನೆಗೆ ಹೋಗಿದ್ದಾಳೆ ಅಂದಿದ್ದಾರೆ, ಅವರಿಗೆ ʼಸಿನಿಮಾʼ ಅನ್ನುವುದು ಕಿವಿ ಮೇಲೆ ಬಿದ್ದಿಲ್ಲ ʼಓ ಆರಾಧನೆಗಾʼ ಅಂತ ಸುಮ್ಮನಾದರಂತೆ.


     ಇನ್ನ ಈ ನಮ್ಮ ಸಿನಿಮಾ ಹುಚ್ಚು ನಿಲ್ಲಲು ಕಾರಣ ಕೂಡ ಒಂದು ಸಿನಿಮಾ, ಅಂಬರೀಶ್ ನಟನೆಯ ʼಹಸಿದ ಹೆಬ್ಬುಲಿʼ. ಆ ಸಿನಿಮಾ ನೋಡುತ್ತಿರುವಾಗಲೇ ಶಪಥ ಮಾಡಿದೆವು, ಇನ್ನು ಮುಂದೆ ಬರುವ ಎಲ್ಲಾ ಸಿನಿಮಾ ನೋಡುವುದು ಬೇಡ, ಚೆನ್ನಾಗಿದೆ ಅಂತ ತಿಳಿದ ಮೇಲೆ ಮಾತ್ರ ಸಿನಿಮಾ ನೋಡುವುದು ಅಂತ. ಹಂಗಾಗಿ ಒಮ್ಮೆಲೇ ನಮ್ಮ ಸಿನಿಮಾ ನೋಡುವ ಹವ್ಯಾಸಕ್ಕೆ ಕಡಿವಾಣ ಬಿತ್ತು. ಅಲ್ಲಿಂದ ಎಲ್ಲರ ಬಾಯಲ್ಲಿ ಸಿನಿಮಾ ಚೆನ್ನಾಗಿದೆ ಅಂತ ಬಂದರೆ ಅಥವಾ ರಿವ್ಯೂ ಚೆನ್ನಾಗಿ ಇದೆ ಅಂತ ಬಂದ ಮೇಲೆ ಮಾತ್ರ ಆ ಸಿನಿಮಾಗೆ ಹೋಗುತ್ತಿದ್ದೆವು. ಅದಕ್ಕೆ ಮುಂಚೆ ಮಾರ್ನಿಂಗ್ ಶೋ ಒಂದು ಸಿನಿಮಾ, ಮ್ಯಾಟಿನಿ ಮತ್ತೊಂದು ಸಿನಿಮಾ ನೋಡಿದ ದಿನ ಕೂಡ ಇದೆ. 


    ಅಷ್ಟಕ್ಕೂ ನಾವು ತಿಪಟೂರಿನಲ್ಲಿ ಇದ್ದಷ್ಟೂ ವರ್ಷ ಸಿನಿಮಾಗೆ ಬಾಲ್ಕನಿಗೆ ಮಾತ್ರ ಟಿಕೆಟ್ ಪಡೆದು ಹೋಗಬೇಕಿತ್ತು, ಅಪ್ಪ ನಮ್ಮ ಜೊತೆ ಬರಲಿ ಬರದೆ ಇರಲಿ. ಇದು ಅಪ್ಪನ ಆರ್ಡರ್. ಅಪ್ಪ ಬಂದರಂತೂ ಸ್ಟ್ರಿಕ್ಟ್ ಆರ್ಡರ್. ಬಾಲ್ಕನಿಗೆ ಟಿಕೆಟ್ ತಗೋಬೇಕಿತ್ತು. ರಶ್ ಇದೆ ಅಂತ ಫಸ್ಟ್ ಕ್ಲಾಸಿಗೆ ಟಿಕೆಟ್ ತಗೊಳ್ಳೋ ಹಂಗಿರಲಿಲ್ಲ. ನಮಗೂ ಕೂಡ ತಾಕೀತು ಮಾಡಿತ್ತು? ಬಹುಶಃ ಎಂಥದೋ ಹುಡುಗರು ಬಂದು ಪಕ್ಕ ಕೂತು ಕೀಟಲೆ ಮಾಡಬಹುದು ಅಂತ ಇರಬೇಕು. ಇಂಥದೇ ಅನುಭವ ನನಗೆ ದಾವಣಗೆರೆಯಲ್ಲಿ ಸ್ನೇಹಿತೆಯರ ಜೊತೆ ಸಿನಿಮಾ ನೋಡಲು ಹೋಗಿದ್ದಾಗ ಅಲ್ಲಿ ಹುಡುಗರು ನಡೆದುಕೊಂಡ ರೀತಿ ನನ್ನ ಜೀವನದಲ್ಲಿ ಇನ್ನೆಂದೂ ಸಿನಿಮಾ ಥಿಯೇಟರ್ ಹೋಗಿ ಸಿನಿಮಾ ನೋಡಬಾರದು ಅಂತ ತೀರ್ಮಾನಕ್ಕೆ ಬರುವಂತೆ ಮಾಡಿತ್ತು. ಅದಾದ ನಂತರ ಈ ಮಾಲ್‌ಗಳಲ್ಲಿನ ಮಲ್ಟಿಪ್ಲೆಕ್ಸ್ ಸಂಸ್ಕೃತಿ ಸ್ವಲ್ಪ ಮಟ್ಟಿಗೆ ಈ ಕಸಿವಿಸಿಯನ್ನ ಹೋಗಲಾಡಿಸಿದೆ. ಯಾರಾದರೂ ಕಿರುಕುಳ ಕೊಟ್ಟರೆ ನೀವು ಧೈರ್ಯವಾಗಿ ಎದುರಿಸಿ ಮಾತನಾಡಬಹುದು. 
ಅಮ್ಮನ ಮೆಚ್ಚಿನ ಹಾಡುಗಳಲ್ಲಿ ಒಂದು “ ಅಣ್ಣಾ ನಿನ್ನ ಸೋದರಿಯನ್ನ ಮರೆಯದಿರು ಎಂದೆಂದೂ ಓ ಅಣ್ಣಾʼ, ಎರಡನೇ ಮೆಚ್ಚಿನ ಹಾಡು ʼಕರೆಯೇ ಕೋಗಿಲೆ ಮಾಧವನ ಕಾತರ ತುಂಬಿದ ಈ ನಯನಾ”. ಮೊದಲನೆಯದು ತನ್ನ ಅಣ್ಣನ ಮೇಲಿದ್ದ ಅತೀವ ಪ್ರೀತಿಯ ಪ್ರತೀಕವಾಗಿ ಕೇಳುತ್ತಿದ್ದ ಅಮ್ಮ , ತನ್ನ ಅಣ್ಣ ಮದುವೆಯಾಗಿ ಆಸ್ತಿಗಾಗಿ ಎಲ್ಲರಿಂದ ದೂರವಾದ ಮೇಲೆ ಕಣ್ಣಲ್ಲಿ ನೀರು ತುಂಬಿ ಆ ಹಾಡು ಕೇಳುತ್ತಿತ್ತು. 


    ಅಮ್ಮನ ಮೆಚ್ಚಿನ ತಿಂಡಿ ಒಬ್ಬಟ್ಟು. ಟೀ ಅಂದರೆ ಅಚ್ಚುಮೆಚ್ಚು, ಅಜ್ಜಿ ನಂತರ ಅಮ್ಮನಿಗೆ ನಾನೇ ಟೀ ಪಾರ್ಟನರ್, ಅಕ್ಕ ಆರೋಗ್ಯದ ಕಾರಣ ಹಾಲು, ಟೀ, ಕಾಫಿ ಏನೂ ಕುಡಿಯುತ್ತಿರಲಿಲ್ಲ. ಅಮ್ಮ ಮಾಡುತ್ತಿದ್ದ ಟೀ ಅಪ್ಪನಿಗೆ ಅಚ್ಚುಮೆಚ್ಚು. ಊಟ ತಿಂಡಿ ಕೊಡದೆ ಇದ್ದರೂ ಟೀ ಮಾಡಿಕೊಟ್ಟರೆ ಸಾಕಿತ್ತು ಖುಷಿಯಿಂದ ಕುಡಿಯುತ್ತಿತ್ತು. ಅಮ್ಮ ಮಾಡುತ್ತಿದ್ದ ಅಡುಗೆಗಳಲ್ಲಿ ಕಡಲೆಕಾಳು, ಬಟಾಣಿ ನೆನೆಸಿ ಬೇಯಿಸಿ ಅದನ್ನು ಉಪ್ಪಿಟ್ಟಿಗೆ ಹಾಕಿ ಮಾಡುತ್ತಿದ್ದ ಕಾಳು ಉಪ್ಪಿಟ್ಟು, ಕ್ಯಾರೆಟ್ ತುರಿದು ಮಾಡುತ್ತಿದ್ದ ಪಲ್ಯ, ನನ್ನ ಅಚ್ಚುಮೆಚ್ಚುಗಳಲ್ಲಿ ಒಂದು. ಅಮ್ಮನಿಗೆ ಅಡುಗೆಗೆ ಹೆಚ್ಚು ಸಹಾಯ ಮಾಡುತ್ತಿದ್ದ ನಾನು ನಾಲ್ಕನೇ ತರಗತಿಗೇ ಒಬ್ಬಳೇ ಒಬ್ಬಟ್ಟು ಮಾಡಿ ತಟ್ಟಿ ಬೇಯಿಸುವಷ್ಟು ಚೆನ್ನಾಗಿ ಅಡುಗೆ ಕಲಿತಿದ್ದೆ . ಇದು ಎಲ್ಲರೂ ಆಶ್ಚರ್ಯ ಪಡಲು ಕಾರಣವಾಗಿತ್ತು.


ಅ   ಪ್ಪನ ಅಫೇರ್‌ಗಳಲ್ಲಿ ಒಂದನ್ನು ಬಿಡಿಸಲು ಹೋಗಿ ಅಮ್ಮ ಅಪ್ಪನ ಏಟಿಗೆ ಒಂದು ಕಿವಿಯನ್ನೇ ಕಳೆದುಕೊಂಡಿತ್ತು. ಅಂದಿನಿಂದ ಅಪ್ಪ ಹೋದ ಹಾದಿಗೆ ಬಿಟ್ಟು , ಅಷ್ಟು ನೋವು ಸಹಿಸಿಕೊಂಡು ಸಾಯುವ ತುಡಿತವನ್ನ ತಡೆದು ಮನೆಗೆ ಬರಲು ಕಾರಣ ನಾವುಗಳು. ಆ ಜವಾಬ್ದಾರಿಯನ್ನ ತನ್ನ ಕೊನೆವರೆಗೆ ಅಮ್ಮ ನಿಭಾಯಿಸಿತು. 
****


    ಅಮ್ಮ ನನ್ನ ಮಗಳನ್ನ ಎರಡು ವರ್ಷ ಬೆಳೆಸಿ ನನಗೆ ಕೊಟ್ಟಿತು, ಅವಳನ್ನ ಅದೆಷ್ಟು ಪ್ರೀತಿ ಮಾಡುತ್ತಿತ್ತು ಅಂದರೆ ಅವಳಿಗೆ ಎರಡು ವರ್ಷವಾದರೂ ಅವಳನ್ನ ನಡೆದಾಡಲು ಬಿಡದೆ ನಾವು ಬೆಂಗಳೂರಿಗೆ ಕರೆದುಕೊಂಡು ಬಂದು ನಡೆಯುವುದನ್ನ ಕಲಿಸಬೇಕಾಯಿತು. ಹಾಗೇ ಖಾರ ತಿನ್ನುವುದನ್ನು ರೂಡಿಸಿಕೊಡದೆ ಅವಳಿಗೆ ಒಂಚೂರು ಖಾರ ತಿಂದರೆ ಕಣ್ಣಲ್ಲಿ ನೀರು ಬರುವುದರ ಜೊತೆಗೆ ಖಾರ ಅಂತ ಅಳಲು ಶುರುಮಾಡುತ್ತಿದ್ದಳು ಅವಳು ತಿನ್ನುತ್ತಿದ್ದ ಖಾರ ಅಂದರೆ ಒಂದು ಉಪ್ಪಿನಕಾಯಿ ತುಣುಕು, ಮತ್ತೊಂದು ಪುಳಿಯೋಗರೆ!


    ಅಮ್ಮನ ಎಕನಾಮಿಕ್ಸ್ : ಅಪ್ಪ ಸಂಬಳ ತಂದು ಅಷ್ಟೂ ಅಮ್ಮನ ಕೈಗೆ ಕೊಟ್ಟುಬಿಡುತ್ತಿತ್ತು. ಅಮ್ಮ ಸರಳ ಜೀವಿ, ತಿಪಟೂರಿನಲ್ಲಿ ಇದ್ದಷ್ಟು ದಿನ ನಮ್ಮ ಕೈತೋಟದಲ್ಲಿ ಬೆಳೆದ ತರಕಾರಿ ಮಾತ್ರ ಬಳಸುತ್ತ ಉಳಿತಾಯ ಮಾಡುತ್ತಿತ್ತು. ಬೆಂಗಳೂರಿಗೆ ವಾಸಕ್ಕೆ ಬಂದಾಗ ಕೆಆರ್ ಮಾರ್ಕೆಟ್‌ಗೆ ಹೋಗಿ ಆರಿಸಿ ಚೆನ್ನಾಗಿರುವ ಗುಡ್ಡೆ ತರಕಾರಿ ತರುತ್ತಿತ್ತು, ಯಾವತ್ತೂ ಆಟೋ ಹತ್ತುತ್ತಿರಲಿಲ್ಲ. ಸುಮಾರು ಹತ್ತಿರದ ಜಾಗಕ್ಕೆಲ್ಲ ನಡೆದೇ ಹೋಗುತ್ತಿತ್ತು, ದೂರ ಅಂತ ಅನ್ನಿಸಿದರೆ ಓನ್ಲೀ ಸಿಟಿ ಬಸ್. 


   ಇನ್ನು ಬಟ್ಟೆ ವಿಷಯಕ್ಕೆ ಬಂದರೆ ನಮ್ಮ ಅಳತೆ ಎಷ್ಟೆಂದು ಕಣ್ಣಿನ ಅಂದಾಜಿನಲ್ಲಿ ಗೊತ್ತಿದ್ದರೂ ಜಾಸ್ತಿ ದಿನ ಬರಲಿ ಅಂತ ದೊಗಲೆ ಬಟ್ಟೆಗಳನ್ನು ನಮಗೆ (ಅಕ್ಕ ಮತ್ತು ನನಗೆ) ಆರಿಸಿ ತರುತ್ತಿತ್ತು. ಅದೇ ಅಭ್ಯಾಸವನ್ನ ನನ್ನ ಮಗಳಿಗೂ ಮಾಡಿ ಅವಳಿಗೆ ಕೂಡ ದೊಗಳೆ ಬಟ್ಟೆ ತಂದು ಹಾಕುತ್ತಿತ್ತು. ಅವಳು 2 ರಿಂದ ಮೂರು ವರ್ಷ ಹಾಕಿದ ಮೇಲೂ ಅವು ಅವಳ ಸೈಜ್‌ಗೆ ಬರುತ್ತಿರಲಿಲ್ಲ, ಇನ್ನೂ ಲೂಸಾಗೇ ಇರುತ್ತಿದ್ದವು. 


    ನಾನು ತುಮಕೂರಿನಲ್ಲಿ ಎನ್ ಜಿ ಓ ಒಂದರಲ್ಲಿ ಕೆಲಸದಲ್ಲಿದ್ದಾಗ ಮತ್ತು ಸರಕಾರಿ ಕೆಲಸಕ್ಕೆ ಸೇರಿದ ನಂತರ ಕೂಡ, ಎರಡನೇ ಬಾರಿ ಮದುವೆಯಾಗಿ ಹೆಂಡತಿಯ ಊರು ಸೇರಿದ್ದ ನನ್ನ ಹಾದಿ ಬಿಟ್ಟ ತಮ್ಮ, ಅದೂ ಇದೂ ನೆಪ ಹೂಡಿ ಬಂದು ಹಣಕ್ಕೆ ಪೀಡಿಸಿದಾಗ ನನ್ನನ್ನು ಗೋಗರೆದು ಅವನಿಗೆ ಹಣ ಕೊಡಿಸುತ್ತಿತ್ತು. ಇದರಿಂದ ನನ್ನ ತಿಂಗಳ ಎಕನಾಮಿಕ್ಸ್ ಹತೋಟಿ ತಪ್ಪುತ್ತಿತ್ತು. ಮಗನ ಕಂಡರೆ ಅದೇನೋ ಪ್ರೀತಿ ಏನು ಮಾಡುವುದು?


(ಅಮ್ಮನ ಕುರಿತ ಇನ್ನೂ ಒಂದು ಭಾಗವಿದೆ)


ಮುಂದಿನ ಕಿನ್ನರಿಗೆ..,