ಫ್ಲ್ಯಾಶ್ ಲೈಟ್ ನಂತೆ ಮಿಂಚಿ ಮರೆಯಾದ ಕೊಡಾಕ್ ಕ್ಲಿಕ್‌ಗಳು

1976ರ ಹೊತ್ತಿಗೆ ಕೊಡಾಕ್ ಎಷ್ಟು ಪ್ರಸಿದ್ಧಿಯಾಗುತ್ತದೆಂದರೆ ಇವರಿಗೆ ಮಾರ್ಕೆಟ್‌ನಲ್ಲಿ ಯಾರೂ ಎದುರಾಳಿಗಳೇ ಇರುವುದಿಲ್ಲ. ಕ್ಯಾಮೆರಾ ಮಾರ್ಕೆಟ್ ನಲ್ಲಿ 85% ಹಾಗೂ ಫಿಲಂ ಮಾರ್ಕೆಟ್‌ನಲ್ಲಿ 90% ಇವರೇ ವ್ಯಾಪಿಸಿದ್ದರು. 1975 ರಲ್ಲಿ ಅವರು ಅದೊಂದು ತಪ್ಪು ಮಾಡದಿದ್ದರೆ ಇಂದಿಗೂ ಕೊಡಾಕ್ ಮಹಾರಾಜನಂತೆ ಮೆರೆಯುತ್ತಿತ್ತೇನೋ.. 

ಫ್ಲ್ಯಾಶ್ ಲೈಟ್ ನಂತೆ ಮಿಂಚಿ ಮರೆಯಾದ ಕೊಡಾಕ್ ಕ್ಲಿಕ್‌ಗಳು

 

ಬಿಸಿನೆಸ್ ಡೈರಿ

ವಿಭಾ ವಿಶ್ವನಾಥ್


ನಮ್ಮನ್ನು ನಮಗೆ ತೋರಿಸುವುದು ಕನ್ನಡಿಯ ಬಿಂಬ ಹಾಗೂ ಭಾವಚಿತ್ರಗಳು. ಕನ್ನಡಿಯ ಬಿಂಬ ನಾವು ಮರೆಯಾದಂತೆ ಮರೆಯಾಗುತ್ತದೆ. ಆದರೆ, ಫೋಟೋ ಎಂದಿಗೂ ಅಚ್ಚಳಿಯದೇ ಉಳಿಯುತ್ತದೆ. ಫೋಟೋ ಎಂದರೆ ಈಗ ನೆನಪಾಗುವುದು ನಮ್ಮ ಸ್ಮಾರ್ಟ್ ಫೋನ್‌ಗಳು. ಅದರಿಂದ ತೆಗೆದುಕೊಳ್ಳುವ ಸೆಲ್ಫಿಗಳು, ಫೋಟೋಗಳು. ಸೆಕೆಂಡಿಗೆ ಒಂದರಂತೆ ಸೆಲ್ಫಿಗಳನ್ನು ನಾವಿಂದು ತೆಗೆದುಕೊಂಡರೂ.. ಯಾರಾದರೂ ನಮ್ಮ ಫೋಟೋ ತೆಗೆಯಲಿ ಎಂದೇ ಅಪೇಕ್ಷಿಸುತ್ತೇವೆ. ಅದರಲ್ಲಿಯೂ.. ಆ ಫೋಟೋಗಳು ಸ್ಪಷ್ಟವಾಗಿ ಮೂಡಿಬರಲಿ ಎಂದು ಆಶಿಸುತ್ತಾ ಅವುಗಳನ್ನು ನಾವು ಆ ಸಂದರ್ಭದಲ್ಲಿಯೇ ನೋಡಿ ನಮ್ಮ ಕುತೂಹಲವನ್ನು ತಣಿಸಿಕೊಳ್ಳುತ್ತೇವೆ. 


ಮೊಬೈಲ್ ಇಲ್ಲದ ದಿನಗಳನ್ನು ನೆನಪಿಸಿಕೊಂಡರೆ, ಫೋಟೋಗಳು ಬೇಕೆಂದರೆ ಮನೆಯಲ್ಲಿ ಕ್ಯಾಮೆರಾ ಇರಬೇಕಿತ್ತು ಇಲ್ಲವೇ ಫೋಟೋ ಸ್ಟುಡಿಯೋಗಳಿಗೆ ಹೋಗಿ ತೆಗೆಸಿಕೊಳ್ಳಬೇಕಿತ್ತು. ಮನೆಯ ಕ್ಯಾಮೆರಾದಲ್ಲಿ ತೆಗೆದ ಫೋಟೋಗಳನ್ನು ನೋಡಲು ಸಹಾ ಸ್ಟುಡಿಯೋಗೆ ಹೋಗಿ ಪ್ರಿಂಟ್ ಹಾಕಿಸಬೇಕಿತ್ತು. ಕ್ಯಾಮರಾ ಎಂದಾಗ ಮೊಟ್ಟ ಮೊದಲಿಗೆ ನೆನಪಾಗುವುದೇ 'ಕೊಡಾಕ್'.


ಈಗ ಹೊಸ ಕೊಡಾಕ್ ಕ್ಯಾಮೆರಾಗಳನ್ನು ಕಾಣುವುದು ಸಾಧ್ಯವಿಲ್ಲ. ಏಕೆಂದರೆ, 2012ರಲ್ಲಿಯೇ ಕೊಡಾಕ್ ದಿವಾಳಿಯಾಯಿತು. ಹಾಗಾದರೆ, ಕೊಡಾಕ್ ಪತನಕ್ಕೆ ಟೆಕ್ನಾಲಜಿ ಕಾರಣವಾ..?? ಖಂಡಿತವಾಗಿಯೂ ಇಲ್ಲವೆಂದೇ ನನ್ನ ಉತ್ತರ. ಏಕೆಂದರೆ, ಎಷ್ಟೇ ಕ್ಲಾರಿಟಿಯ ಮೊಬೈಲ್ ಇದ್ದರೂ.. ಮದುವೆಗಳಲ್ಲಿ, ಸಮಾರಂಭಗಳಲ್ಲಿ, ಫಿಲಂ ಶೂಟಿಂಗ್‌ನಲ್ಲಿ ಬಳಸುವುದು ಕ್ಯಾಮೆರಾಗಳನ್ನೇ ಎನ್ನುವುದಂತೂ ಸುಸ್ಪಷ್ಟ. ಕೊಡಾಕ್ ನಮ್ಮ ಕಣ್ಣಿನಿಂದ ಮರೆಯಾದದ್ದೇಕೆ..?? ಎನ್ನುವುದರ ಜೊತೆಗೆ ಅದು ನಡೆದು ಬಂದ ಹಾದಿಯನ್ನೂ ನೋಡೋಣ.


ಕೊಡಾಕ್ ಅಮೆರಿಕಾದ ಪಬ್ಲಿಕ್ ಕಂಪನಿ. 1880 ರಲ್ಲಿ ಶುರುವಾದ ಈ ಕಂಪನಿ ಜಾರ್ಜ್ ಈಸ್ಟ್ ಮನ್ ಹಾಗೂ ಎನ್ರಿ ಎ. ಸ್ಟ್ರಾಂಗ್ ಎನ್ನುವವರ ಕನಸಿನ ಕೂಸು. 


ಜಾರ್ಜ್ ಈಸ್ಟ್ಮನ್ ಜುಲೈ 12, 1854 ರಂದು ಆಮೆರಿಕಾದ ವಾಟರ್‌ವಿಲ್ಲೆ ಗ್ರಾಮದಲ್ಲಿ ಮಾರಿಯಾ ಕಿಲ್ಬೋರ್ನ್ ಮತ್ತು ಜಾರ್ಜ್ ವಾಷಿಂಗ್ಟನ್ ಈಸ್ಟ್ಮನ್‌ಗೆ ಮೂರನೆಯ ಮಗನಾಗಿ ಜನಿಸಿದರು. ಜಾರ್ಜ್ಗೆ 5 ವರ್ಷವಾದಾಗ ಅವರ ಕುಟುಂಬ ಅಲ್ಲಿಂದ ವಲಸೆ ಬಂದು ರೋಚೆಸ್ಟರಿನಲ್ಲಿ ನೆಲೆಸುತ್ತಾರೆ. ಅಲ್ಲಿಯೇ ಜಾರ್ಜ್ ವಿದ್ಯಾಭ್ಯಾಸ ಮುಂದುವರಿಯುತ್ತದೆ. ಕಾಮರ್ಸ್ ಕಾಲೇಜಿನಲ್ಲಿ ಓದುತ್ತಿರುವಾಗ ಅವರ ತಂದೆಯ ಮರಣದ ಕಾರಣದಿಂದ ಹಾಗೂ ಬಡತನದ ಕಾರಣಗಳಿಂದ ವಿದ್ಯೆ ಅವರ ತಲೆಗೆ ಹೋಗುವುದಿಲ್ಲ. ಆಸಕ್ತಿಯಿದ್ದರೂ.. ಸಾಂಪ್ರದಾಯಿಕ ವಿದ್ಯೆಯನ್ನು ಕಲಿಯುವ ಮನಸ್ಸು ಅವರಲ್ಲಿ ಉಳಿದಿರದಿದ್ದರಿಂದ ಅವರನ್ನು ಶಾಲೆಯಲ್ಲಿ ಉಳಿಸಿಕೊಳ್ಳುವುದಿಲ್ಲ. ತನ್ನ 14ನೇ ವಯಸ್ಸಿನಲ್ಲಿಯೇ ಕಾಲೇಜ್ ಡ್ರಾಪ್ ಔಟ್ ಎನ್ನಿಸಿಕೊಂಡ ಜಾರ್ಜ್ ಅನಿವಾರ್ಯವಾಗಿ ಯಾವುದಾದರೂ ವೃತ್ತಿಯನ್ನು ಹಿಡಿಯಲೇಬೇಕಾಗುತ್ತದೆ.


ಅವರು ಮೊದಲು ಸೇರಿದ್ದು, ವಿಮಾ ಸಂಸ್ಥೆಯೊAದರ ಸಂದೇಶವಾಹಕನಾಗಿ. ವಾರಕ್ಕೆ 3 ಡಾಲರ್ ಸಂಬಳ. ಒಂದು ವರ್ಷದ ನಂತರ, ಮತ್ತೊಂದು ವಿಮಾ ಸಂಸ್ಥೆಗೆ ಆಫೀಸ್ ಬಾಯ್ ಆದರು. ನಂತರ, ಪಾಲಿಸಿ ಫೈಲಿಂಗ್‌ನ ಉಸ್ತುವಾರಿ ವಹಿಸಿಕೊಂಡರು. ಅವರ ವೇತನ ಹೆಚ್ಚಾಗಿ ವಾರಕ್ಕೆ 5 ಡಾಲರ್ ಆಯಿತು. ಆದರೆ, ಇಷ್ಟು ಹೆಚ್ಚಳವಾದರೂ ಅವರ ಆದಾಯ ಕುಟುಂಬದ ಖರ್ಚಿಗೆ ಸಾಕಾಗುತ್ತಿರಲಿಲ್ಲ. ಉತ್ತಮ ಸಂಬಳದ ಕೆಲಸವನ್ನು ಪಡೆಯಲು ಅವರು ಮನೆಯಲ್ಲಿ ಸಂಜೆ ಅಕೌಂಟೆನ್ಸಿ ಅಧ್ಯಯನ ಮಾಡುತ್ತಿದ್ದರು. 1874 ರಲ್ಲಿ, ವಿಮಾ ವ್ಯವಹಾರದಲ್ಲಿ 5 ವರ್ಷ ಕೆಲಸದ ನಂತರ, ರೋಚೆಸ್ಟರ್ ಸೇವಿಂಗ್ಸ್ ಬ್ಯಾಂಕ್‌ನಲ್ಲಿ ಜೂನಿಯರ್ ಕ್ಲರ್ಕ್ ಆಗಿ ನೇಮಕಗೊಂಡರು. ಅವರ ಸಂಬಳ ಮೂರು ಪಟ್ಟು ಹೆಚ್ಚಾಯಿತು. ವಾರಕ್ಕೆ 15 ಡಾಲರ್‌ಗಿಂತ ಹೆಚ್ಚು.


ಈಸ್ಟ್ಮನ್ 24 ವರ್ಷದವನಾಗಿದ್ದಾಗ, ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿನ ಸಿಬ್ಬಂದಿಗಳೆಲ್ಲರೂ ಸ್ಯಾಂಟೋ ಡೊಮಿಂಗೊಗೆ ವಿಹಾರಕ್ಕೆ ಹೋಗುವ ಪ್ಲಾನ್ ಮಾಡಿದರು. ಸಹೋದ್ಯೋಗಿಯೊಬ್ಬರು.. ಪ್ರವಾಸವನ್ನು ನೆನಪಲ್ಲಿಟ್ಟುಕೊಳ್ಳಲು ಏನಾದರೂ ಮಾಡಲು ಸೂಚಿಸಿದಾಗ, ಈಸ್ಟ್ಮನ್‌ಗೆ ಕಂಡ ದಾರಿ ಫೋಟೋಗ್ರಾಫಿ. ಛಾಯಾಗ್ರಹಣಕ್ಕೆ ಬೇಕಾದ ಸಾಮಗ್ರಿಗಳ ಜೊತೆಗೆ ಉಡುಪನ್ನು ಖರೀದಿಸಿದರು.


ಕ್ಯಾಮರಾ ಮೈಕ್ರೋ ಓವನ್‌ನಷ್ಟು ದೊಡ್ಡದಾಗಿತ್ತು, ಅದನ್ನು ಇಡಲು ಭಾರವಾದ ಟ್ರೈಪಾಡ್ ಅಗತ್ಯವಿತ್ತು. ಮತ್ತು ಅದನ್ನು ಡೆವಲಪ್ ಮಾಡಲು ರಾಸಾಯನಿಕಗಳು, ಗಾಜಿನ ತೊಟ್ಟಿಗಳು, ಭಾರವಾದ ಪ್ಲೇಟ್ ಹೋಲ್ಡರ್, ನೀರಿನ ಜಗ್, ಟೆಂಟ್ ಎಲ್ಲವೂ ಬೇಕಿತ್ತು. ಇವೆಲ್ಲವೂ ಒಬ್ಬ ಮನುಷ್ಯನ ತೂಕಕ್ಕಿಂತಲೂ ಹೆಚ್ಚಾಗಿದ್ದವು. ಕ್ಯಾಮೆರಾ ಹೇಗೆ ಬಳಸಬೇಕೆಂದು ಕಲಿಯಲು 5 ಡಾಲರ್  ವೆಚ್ಚವಾಗಿತ್ತು. 


ಈಸ್ಟ್ಮನ್ ಸ್ಯಾಂಟೊ ಡೊಮಿಂಗೊ ಪ್ರವಾಸವನ್ನು ಮಾಡಲಿಲ್ಲ. ಆದರೆ, ಅವರು ಛಾಯಾಗ್ರಹಣದಲ್ಲಿ ಸಂಪೂರ್ಣವಾಗಿ ಮುಳುಗಿಹೋದರು. ಛಾಯಾಗ್ರಾಹಕರು ತಮ್ಮದೇ ಆದ ಜೆಲಾಟಿನ್ ಎಮಲ್ಷನ್‌ಗಳನ್ನು ತಯಾರಿಸುತ್ತಿದ್ದಾರೆ ಎಂದು ನ್ಯೂಸ್ ಪೇಪರಿನಲ್ಲಿ ಓದಿದರು. ಬ್ರಿಟಿಷ್ ಜರ್ನಲ್‌ಗಳಲ್ಲಿ ಒಂದರಿAದ ತೆಗೆದ ಸೂತ್ರವನ್ನು ಬಳಸಿಕೊಂಡು, ಈಸ್ಟ್ಮನ್ ಜೆಲಾಟಿನ್ ಎಮಲ್ಷನ್‌ಗಳನ್ನು ತಯಾರಿಸಲು ಪ್ರಾರಂಭಿಸಿದರು.ಹಗಲಿನಲ್ಲಿ ಬ್ಯಾಂಕಿನಲ್ಲಿ ಕೆಲಸ ಮಾಡಿ ರಾತ್ರಿ ಅಡುಗೆ ಮನೆಯಲ್ಲಿ ಪ್ರಯೋಗ ಮಾಡುತ್ತಿದ್ದರು.


1880ರಲ್ಲಿ ಲಂಡನ್ ನಲ್ಲಿ ಜಾರ್ಜ್ ಈಸ್ಟ್ಮನ್ ತನ್ನ ಪ್ಲೇಟ್-ಕೋಟಿಂಗ್ ಯಂತ್ರದ ಮೇಲೆ ಪೇಟೆಂಟ್ ಪಡೆದರು. ಏಪ್ರಿಲ್ 1880 ರಲ್ಲಿ, ಈಸ್ಟ್ಮನ್ ರೋಚೆಸ್ಟರ್‌ನ ಸ್ಟೇಟ್ ಸ್ಟ್ರೀಟ್‌ನಲ್ಲಿರುವ ಕಟ್ಟಡದ ಮೂರನೇ ಮಹಡಿಯನ್ನು ಬಾಡಿಗೆ ಪಡೆದು ಫಿಲಂ ರೋಲ್ ಕ್ಯಾಮೆರಾವನ್ನು ತಯಾರಿಸಲು ಶುರುವಿಟ್ಟರು. ಆಗ ಅವರ ಜೊತೆಯಾಗಿದ್ದು ಎನ್ರಿ ಎ. ಸ್ಟ್ರಾಂಗ್.


ಈಸ್ಟ್ ಮನ್ ಗೆ 'ಕೆ' ಎನ್ನುವ ಅಕ್ಷರ ಬಹಳ ಅಚ್ಚು ಮೆಚ್ಚು. ಮೊದಲ ಅಕ್ಷರವು ಕೆ ಇಂದ ಹಾಗೂ ಕೊನೆಯ ಅಕ್ಷರವು ಕೆ ಇಂದಲೇ ಇರಬೇಕು ಎಂದು ಹುಡುಕುತ್ತಿದ್ದಾಗ ಅಲ್ಲಿನ ವಿದ್ಯುತ್ ಚಿಹ್ನೆ ಒಂದರಿಂದ ದೊರೆತ ಪದವೇ ಕೊಡಾಕ್. ಮುಂದೆ ಅವರನ್ನು ಈಸ್ಟ್ ಮನ್ ಕೊಡಾಕ್ ಎಂದೇ ಗುರುತಿಸಲಾಗುತ್ತದೆ. ಕಾಲಕ್ರಮೇಣ, ರೋಚೆಸ್ಟರ್ ನಲ್ಲಿದ್ದ ಕಂಪನಿಯು ನ್ಯೂಜೆರ್ಸಿಗೆ ಸ್ಥಳಾಂತರಗೊಳ್ಳುತ್ತದೆ.


1889ರ ಹೊತ್ತಿಗೆ ಕೊಡಾಕ್ ತಯಾರಿಸಿದ ಮೊದಲ ಕ್ಯಾಮರಾ ಬಹಳವೇ ಪ್ರಸಿದ್ಧವಾಗುತ್ತದೆ. 1935ರಲ್ಲಿ 'ಕೊಡಾಕ್ರೋಮ್' ಎನ್ನುವ.. ಕಲರ್ ಮೆಟೀರಿಯಲ್ ಗಳನ್ನು ಬಳಸಿದ ಸಿನಿಮಾಟೋಗ್ರಫಿ ಹಾಗೂ ಸ್ಟಿಲ್ ಫೋಟೋಗ್ರಾಫಿಗೆ ಬಳಸುವ ಮೊದಲ ಯಂತ್ರ ಬಹಳ ಪ್ರಸಿದ್ಧಿಯಾಗುತ್ತದೆ. 1963ರಲ್ಲಿ ಇನ್ಸ್ಟಾಮ್ಯಾಟಿಕ್ ಕ್ಯಾಮೆರಾಗಳನ್ನು ಬಿಡುಗಡೆಗೊಳಿಸುತ್ತದೆ. ಬಿಡುಗಡೆಯಾದ ಮೊದಲ ವರ್ಷದಲ್ಲಿಯೇ ಇವು ಬಹಳ ಹೆಸರುವಾಸಿಯಾಗುತ್ತವೆ. ಏಕೆಂದರೆ, ಇದರಲ್ಲಿ ಅನುಭವವಿಲ್ಲದವರೂ.. ತರಬೇತಿ ಇಲ್ಲದೆಯೂ.. ಬಹಳ ಚಂದದ ಫೋಟೋಗಳನ್ನು ತೆಗೆಯಬಹುದಾಗಿತ್ತು. 1976ರ ಹೊತ್ತಿಗೆ ಕೊಡಾಕ್ ಎಷ್ಟು ಪ್ರಸಿದ್ಧಿಯಾಗುತ್ತದೆಂದರೆ ಇವರಿಗೆ ಮಾರ್ಕೆಟ್‌ನಲ್ಲಿ ಯಾರೂ ಎದುರಾಳಿಗಳೇ ಇರುವುದಿಲ್ಲ. ಕ್ಯಾಮೆರಾ ಮಾರ್ಕೆಟ್ ನಲ್ಲಿ 85% ಹಾಗೂ ಫಿಲಂ ಮಾರ್ಕೆಟ್‌ನಲ್ಲಿ 90% ಇವರೇ ವ್ಯಾಪಿಸಿದ್ದರು. 1975 ರಲ್ಲಿ ಅವರು ಅದೊಂದು ತಪ್ಪು ಮಾಡದಿದ್ದರೆ ಇಂದಿಗೂ ಕೊಡಾಕ್ ಮಹಾರಾಜನಂತೆ ಮೆರೆಯುತ್ತಿತ್ತೇನೋ.. 


1980ರ ದಶಕದ ಕೊನೆಯಲ್ಲಿ ಫೋಟೋಗ್ರಾಫಿ ಕಾಲ ಬದಲಾಗಿ ಡಿಜಿಟಲ್ ಫೋಟೋಗ್ರಫಿ ಬಳಕೆಗೆ ಬಂದಿತು. ಡಿಜಿಟಲ್ ಫೋಟೋಗ್ರಫಿ ಎಂದರೆ, ಈಗ ನಾವು ಮೊಬೈಲ್‌ನಲ್ಲಿ ತಕ್ಷಣಕ್ಕೆ ನೋಡುವಂತಹಾ ಫೋಟೋಗಳು. ಮೊದಲಿದ್ದ ಈ ಎಲ್ಲಾ ಅನಲಾಗ್ ಕ್ಯಾಮರಾಗಳ ಸೇಲ್ ಕಡಿಮೆಯಾಗುತ್ತಾ ಬಂದAತೆ.. ಡಿಜಿಟಲ್ ಕ್ಯಾಮೆರಾಗಳ ಸೇಲ್ ಹೆಚ್ಚಾಗುತ್ತಲೇಹೋಯಿತು. 1984 ರಲ್ಲಿ ಕೊಡಾಕ್ ನ ಅತ್ಯಂತ ಪ್ರಬಲವಾದ ಎದುರಾಳಿ ಜಪಾನಿನ ಫ್ಯೂಜಿ ಕಲರ್ ಫಿಲಂ ಒಂದನ್ನು ಬಿಡುಗಡೆ ಮಾಡಿತು. ಇದು ಕೊಡಾಕ್ ಗಿಂತಲೂ ಬಹಳ ಕಡಿಮೆ ದರಕ್ಕೆ ಲಭ್ಯವಿತ್ತು. 1981 ರಲ್ಲಿಯೇ ಸೋನಿ ತನ್ನ ಮೊದಲ ಎಲೆಕ್ಟ್ರಾನಿಕ್ ಕ್ಯಾಮೆರಾವನ್ನು ಬಿಡುಗಡೆಗೊಳಿಸಿತು. ಆದರೆ, ಸೋನಿ ಅಥವಾ ಫ್ಯೂಜಿ ಬಿಡುಗಡೆ ಮಾಡಿದ ಡಿಜಿಟಲ್ ಕ್ಯಾಮೆರಾಗಳು ಮೊದಲ ಕ್ಯಾಮರಗಳಲ್ಲ. ಬದಲಿಗೆ ಮೊದಲ ಡಿಜಿಟಲ್ ಕ್ಯಾಮೆರಾ ಆವಿಷ್ಕಾರವಾದದ್ದು ಕೊಡಾಕ್‌ನಲ್ಲಿಯೇ. ಅದೂ 1975ರಲ್ಲಿಯೇ. ಕೊಡಕ್‌ನಲ್ಲಿ ಕೆಲಸ ಮಾಡುತ್ತಿದ್ದ ಸ್ಟೀವ್ ಸಾಸ್ಸನ್ ಎನ್ನುವ ಇಂಜಿನಿಯರ್ ಡಿಜಿಟಲ್ ಕ್ಯಾಮೆರಾ ಒಂದನ್ನು ಕಂಡುಹಿಡಿದಿದ್ದ.


ಸಾಸ್ಸನ್ ಕಂಡುಹಿಡಿದಿದ್ದ ಕ್ಯಾಮೆರಾದ ಗಾತ್ರ ಒಂದು ಮೈಕ್ರೋಓವೆನ್ ನಷ್ಟಿತ್ತು. ಅಲ್ಲದೆ, ಅದರಲ್ಲಿ ಫೋಟೋ ತೆಗೆಯಲು 20 ಸೆಕೆಂಡುಗಳು ಬೇಕಾಗುತ್ತಿದ್ದವು. ಆ ಫೋಟೋವನ್ನು ನೋಡಲು ಅದನ್ನು ಟಿವಿಗೆ ಕನೆಕ್ಟ್ ಮಾಡಲಾಗುತ್ತಿತ್ತು. ಹಾಗೆ ಕನೆಕ್ಟ್ ಮಾಡಲಾದ ಆ ಫೋಟೋದ ಕ್ಲಾರಿಟಿ ಕೂಡಾ ಹೆಚ್ಚಿರಲಿಲ್ಲ. ಈ ಎಲ್ಲಾ ಅಂಶಗಳನ್ನು ಆತ ಇಂಪ್ರೊವೈಸೇಶನ್ ಮಾಡಲು ನೋಡಿದರೂ.. ಅವನ ಮೇಲಧಿಕಾರಿಗಳು ಪ್ರೋತ್ಸಾಹಿಸಲಿಲ್ಲ. ಬದಲಾಗಿ "ಈ ಕ್ಯಾಮೆರಾ ತುಂಬಾ ಕ್ಯೂಟ್ ಆಗಿದೆ. ಆದರೆ, ಇತರ ಬಗ್ಗೆ ಮಾತ್ರ ನೀನು ಎಲ್ಲಿಯೂ. ಯಾರ ಬಳಿಯೂ ಹೇಳಬೇಡ. ಇದರ ಕುರಿತು ಹೊರಜಗತ್ತಿಗೆ ತಿಳಿಸಿದವೆಂದರೆ.. ನಮ್ಮ ಕಾಲ ಮೇಲೆ ನಾವೇ ಕಲ್ಲು ಚಪ್ಪಡಿ ಹಾಕಿಕೊಂಡAತೆ" ಎಂದು ಅವನನ್ನು ಸುಮ್ಮನಾಗಿಸಿದರು. 


1975ರಲ್ಲಿಯೇ ಕಂಡುಹಿಡಿಯಲ್ಪಟ್ಟಿದ್ದರೂ, ಅದು ಅಧಿಕೃತವಾಗಿ ತನ್ನ ಮೊದಲ ಡಿಜಿಟಲ್ ಕ್ಯಾಮೆರಾವನ್ನು ಬಿಡುಗಡೆ ಮಾಡಿದ್ದು 1991ರಲ್ಲಿ. ಇಷ್ಟು ದಿನದ ಅಂತರಕ್ಕೆ ಕೊಡಾಕ್ ತೆತ್ತ ದಂಡ ಬಹಳ ದೊಡ್ಡದು. ನಂತರ, ಎಚ್ಚೆತ್ತು 1991 ರಿಂದ 2011ರವರೆಗೂ ಹಲವಾರು ಡಿಜಿಟಲ್ ಕ್ಯಾಮೆರಾ ಡಿಜಿಟಲ್ ಪ್ರಾಡೆಕ್ಟ್ ಗಳನ್ನು ಸತತವಾಗಿ ಮಾರ್ಕೆಟ್‌ಗೆ ಬಿಟ್ಟರು. ಅದಾಗಲೇ ಟೆಕ್ನಾಲಜಿಯನ್ನು ಬಳಸುವುದರಲ್ಲಿ ಎದುರಾಳಿಗಳು ನಿಸ್ಸೀಮರಾಗಿದ್ದರು. 2012ಕ್ಕೆ ಸರಿಯಾಗಿ ಕೊಡಕ್ ತನ್ನ ದಿವಾಳಿತನವನ್ನು ಘೋಷಿಸಿ.. ಕ್ಯಾಮೆರಾ ಪ್ರಪಂಚದಿಂದ ಹೇಳಹೆಸರಿಲ್ಲದಂತೆ ಮಾಯವಾಯಿತು. "ನೀವು ಒಂದು ಬಟನ್ ಪ್ರೆಸ್ ಮಾಡಿ ಸಾಕು. ನಾವು ಉಳಿದದ್ದೆಲ್ಲವನ್ನು ಮಾಡುತ್ತೇವೆ." ಎನ್ನುತ್ತಿದ್ದ ಜಾರ್ಜ್ ಕನಸು ಅಂದಿಗೇ ಮುಗಿದಿತ್ತು. 


ಹಾಗಾದರೆ.. ಕೊಡಕ್ ತಪ್ಪು ಮಾಡಿದ್ದು ಒಂದೇ ಬಾರಿಯಾ..?? ಖಂಡಿತಾ ಅಲ್ಲ. ಒಂದು ತಪ್ಪಿನಿಂದ ಯಾವ ಬ್ಯುಸಿನೆಸ್ ಕೂಡಾ ಮುಳುಗಲಾರದು. ಕೊಡಾಕ್ ಕಂಪನಿಯಲ್ಲಿ ಬಳಸುತ್ತಿದ್ದ ಬ್ಯುಸಿನೆಸ್ ಮಾಡೆಲ್ ಅದರ ಸೋಲಿನ ಅಡಿಪಾಯ ಎಂದರೂ ತಪ್ಪಾಗಲಾರದು. ಕೊಡಾಕ್ ಬಳಸುತ್ತಿದ್ದದ್ದು 'ರೇಜರ್ ಹಾಗೂ ಬ್ಲೇಡ್' ಬ್ಯುಸಿನೆಸ್ ಮಾಡಲ್. ಇದಕ್ಕೆ ಉದಾಹರಣೆ ಎಂದರೆ ಶೇವ್ ಮಾಡಿಕೊಳ್ಳಲು ರೇಜರ್ ಹಾಗೂ ಬ್ಲೇಡ್ ಬಳಸುತ್ತಿದ್ದೀರೆಂದರೆ ರೇಜರ್ ಅಥವಾ ಬ್ಲೇಡ್ ಬೆಲೆ ತುಂಬಾ ಹೆಚ್ಚಿರುವುದಿಲ್ಲ. ಆದರೆ, ಬ್ಲೇಡ್‌ಗಳನ್ನು ಸತತವಾಗಿಕೊಳ್ಳಲೇಬೇಕಾಗುತ್ತದೆ. ಅವುಗಳ ದರ ಹೆಚ್ಚಿರದಿದ್ದರೂ.. ಎಂದಿಗೂ ಮುಗಿಯದಂತಹ ವ್ಯಾಪಾರ ಅದು. ಇಲ್ಲಿ ನಿಜವಾಗಿ ಮಾರಾಟ ಮಾಡುವುದು ರೇಜರ್‌ಗಳನ್ನಲ್ಲ. ಬ್ಲೇಡ್ ಗಳನ್ನು. 


ಕೊಡಾಕ್ ತನ್ನ ಕ್ಯಾಮೆರಾವನ್ನು ಜಗತ್ತಿಗೆ ಪರಿಚಯಿಸಿತಾದರೂ. ಅದರಲ್ಲಿ ತೆಗೆದ ಫೋಟೋಗಳನ್ನು ಕೊಡಕ್ ಫೋಟೋಗ್ರಾಫಿ ಲ್ಯಾಬ್‌ಗಳಲ್ಲಿ ಪ್ರಿಂಟ್ ಮಾಡಲಾಗುತ್ತಿತ್ತು. ಈ ಪ್ರಿಂಟ್‌ಗೆ ತಗಲುವ ವೆಚ್ಚವನ್ನು ನಾವು ಬ್ಲೇಡ್‌ಗಳಿಗೆ ಹೋಲಿಸಬಹುದು. ಕ್ಯಾಮೆರಾವನ್ನು ರೇಜರ್‌ಗೆ ಹೋಲಿಸಬಹುದು. ಒಮ್ಮೆ ಕ್ಯಾಮರಾ ಕೊಂಡು ಫೋಟೋ ತೆಗೆಯುವ ಹುಚ್ಚಿಗೆ ಸಿಕ್ಕಿಕೊಂಡರೆ ಮುಗಿಯಿತು. ಫೋಟೋ ಪ್ರಿಂಟಿಂಗ್ ಎಂದಿಗೂ ನಿಲ್ಲದ ವ್ಯಾಪಾರವೆಂದೇ ಭಾವಿಸಿದ್ದರು. ಅದು ಹಾಗೆಯೇ ಆಗುತ್ತಿತ್ತು ಸಹಾ..


ಯಾವ ಬ್ಯುಸಿನೆಸ್‌ಗಳೂ ಟೆಕ್ನಾಲಜಿಗಳಿಂದ ಹೊರತಾದವಲ್ಲ. ಎಲ್ಲಾ ಕಂಪನಿಗಳೂ ಡಿಜಿಟಲ್ ಕಡೆ ಮುಖ ಮಾಡುತ್ತಿದ್ದಾಗ ಕೊಡಾಕ್ ಗ್ರಾಹಕರು ಇಷ್ಟಪಡುವುದು ಟಚ್ ಅಂಡ್ ಫೀಲ್ ಕೊಡುವ ಪ್ರಿಂಟೆಡ್ ಫೋಟೋಗಳನ್ನೇ ಹೊರತು ಡಿಜಿಟಲ್ ಫೋಟೋಗಳನ್ನಲ್ಲ ಎನ್ನುತ್ತಾ ತಮ್ಮದೇ ವಾದ ಮಾಡುತ್ತಾ 10 ಲಾಭದಾಯಕ ವರ್ಷಗಳನ್ನು ಕಳೆದುಬಿಟ್ಟರು. ಅಲ್ಲದೆ, ಅವರಿಗೆ ಯು.ಎಸ್.ಎ ನಾಗರೀಕರು ಎಂದಿಗೂ ಫ್ಯೂಜಿ ಬದಲಿಗೆೆ ಕೊಡಾಕ್ ಅನ್ನೇ ಅವಲಂಬಿಸುತ್ತಾರೆ ಎನ್ನುವ ಕಲ್ಪನೆಯೊಂದಿತ್ತು. ಅದೂ ಮಣ್ಣಾಯಿತು. ಮೀಡಿಯಾ ಹಾಗೂ ಮಾರ್ಕೆಟ್ ನಿಂದ ಬಂದ ಫೀಡ್ ಬ್ಯಾಕ್ ಎಲ್ಲವನ್ನೂ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಲ್ಲದೆ. ಗ್ರಾಹಕರಿಗೂ ನಮ್ಮ ಕ್ಯಾಮರಾಗಳು ಎಂದಿಗೂ ಡಿಜಿಟಲ್ ಕ್ಯಾಮೆರಾಗಳಿಗಿಂತಲೂ ಹೆಚ್ಚು ಉಪಯುಕ್ತ ಎಂದು ತಪ್ಪು ಮಾಹಿತಿ ನೀಡುತ್ತಾ ತಪ್ಪು ದಾರಿಗಿಳಿದಾಗಿತ್ತು. ಮತ್ತೆ ಅದು ಚೇತರಿಸಿಕೊಂಡು ಅಪ್‌ಡೇಟ್ ಆಗುವಷ್ಟರಲ್ಲಿ ಸಮಯ ಮಿಂಚಿತ್ತು.


2001ರಲ್ಲಿ ಕೊಡಾಕ್ ಫೇಸ್ ಬುಕ್ ಜೊತೆ ಸೇರಿ ಒಂದು ಹೊಸದಾದ ಬ್ಯುಸಿನೆಸ್ ಗೆ ಕಾಲಿಟ್ಟಿತು. ಅದೇ ಫೋಟೋ ಶೇರಿಂಗ್ ಸೈಟ್ ಆದ "ಓಫೋಟೋ"(ಇಂದಿನ ಇನ್ಸ್ಟಾಗ್ರಾಂ ನಂತಹಾ ಅಪ್ಲಿಕೇಶನ್). ಈ ಪ್ಲಾಟ್ ಫಾರಂ ಜನರನ್ನು ಡಿಜಿಟಲ್ ಫೋಟೋಗಳನ್ನು ಪ್ರಿಂಟ್ ಮಾಡಿಸುವಂತಹ ಸೆಳೆಯಬಹುದು ಎಂದು ಯೋಜಿಸಿತ್ತು. ಫೇಸ್ಬುಕ್ ಇದಕ್ಕೆ ಸಮ್ಮತಿ ಸೂಚಿಸಲಿಲ್ಲ. ಬದಲಾಗಿ ಅದು ಮತ್ತೊಂದು ಫೋಟೋ ಶೇರಿಂಗ್ ಸೋಶಿಯಲ್ ನೆಟ್ವರ್ಕ್ ಅನ್ನು 1 ಬಿಲಿಯನ್ ಡಾಲರ್ ಗೆ ಖರೀದಿಸಿತು. ಅದೇ ಇಂದಿನ ಇನ್ಸ್ಟಾಗ್ರಾಮ್. ಫೇಸ್ಬುಕ್ ತನ್ನ ಮುಂದಾಲೋಚನೆಯಿAದ ಮುಂದುವರಿದರೆ, ಕೊಡಾಕ್ ತನ್ನ ಅತಿ ಬುದ್ಧಿವಂತಿಕೆಯಿಂದ ಹಿಂದೆಯೇ ಉಳಿದಿತ್ತು. 


ಹೊರಗಿನಿಂದ ಬರುತ್ತಿದ್ದ ಫಂಡಿAಗ್‌ಗಳೆಲ್ಲ ನಿಂತುಹೋದವು. ಕೊಡಾಕ್ ಸಣ್ಣ-ಸಣ್ಣ ಕಂಪನಿಗಳನ್ನು ತೆಗೆದುಕೊಳ್ಳುವಲ್ಲಿ ತನ್ನ ಹೂಡಿಕೆಯನ್ನು ಕಳೆದುಕೊಳ್ಳುತ್ತಿತ್ತು. ಡಿಜಿಟಲ್ ಕ್ಯಾಮೆರಾಗಳಿಂದ ಬಂದ ಲಾಭವನ್ನು, ಫೋಟೋ ಪ್ರಿಂಟಿಂಗ್ ಕ್ಯಾಮೆರಾಗಳ ಜಾಹೀರಾತುಗಳಿಗೋಸ್ಕರ ಸುರಿದು ನಷ್ಟ ಮಾಡಿಕೊಂಡಿತು. 


2012 ಜನವರಿಯಲ್ಲಿ ಕೊಡಾಕ್ ದಿವಾಳಿಯಾದರೂ, ಕಡೆಯ ಪ್ರಯತ್ನ ಮಾಡೋಣ ಎನ್ನುತ್ತಾ ಸಿಟಿ ಗ್ರೂಪ್ ಅವರಿಂದ 950 ಮಿಲಿಯನ್ ಡಾಲರ್ ಗಳನ್ನು 18 ತಿಂಗಳು ಸಾಲಕ್ಕಾಗಿ ಪಡೆದುಕೊಂಡಿತ್ತು. ಆದರೆ, ಇದೂ ಫಲ ಕೊಡಲಿಲ್ಲ. ಹಾಗಾಗಿ, ತನ್ನ ಪ್ರೊಡಕ್ಷನ್ ಹಾಗೂ ಸೇಲ್‌ಗಳನ್ನು ನಿಲ್ಲಿಸಿ, ತನ್ನ ಕಂಪನಿಯ ಹಲವಾರು ಸೆಕ್ಷನ್ ಗಳನ್ನು ಒಂದೊಂದಾಗಿ ಮಾರಾಟ ಮಾಡುತ್ತಾ ಬಂದಿತು. ಕೊನೆಗೆ, ಪೇಟೆಂಟ್‌ಗಳನ್ನೂ ಮಾರಾಟ ಮಾಡಿತು. 


ಈಗಿನ ಮೊಬೈಲ್‌ಗಳಲ್ಲಿಯೂ ಕ್ಯಾಮೆರಾ ಅಳವಡಿಕೆಯಿರುತ್ತದಲ್ಲವಾ? ಹಾಗಾದರೆ, ಯಾವುದಾದರೂ ಮೊಬೈಲ್ ಕಂಪನಿಯ ಜೊತೆಗೆ ಒಪ್ಪಂದ ಮಾಡಿಕೊಳ್ಳಬಹುದಿತ್ತಲ್ಲವಾ?? ಎನ್ನುವ ಪ್ರಶ್ನೆ ಬರುತ್ತದೆ. ಈಗಾಗಲೇ ಜರ್ಮನಿಯ ಆಪ್ಟಿಕಲ್ ಕಂಪನಿ ಕಾರ್ಲ್ ಜೈಸ್ಸ್, ನೋಕಿಯಾ ಜೊತೆಗೆ. ಒನ್ ಪ್ಲಸ್ ಜೊತೆಗೆ ಹೊಸೆಲ್ ಬ್ಲ್ಯಾಡ್, ಲೈಕಾ ಜೊತೆಗೆ ಸ್ಯಾಮ್ಸಂಗ್ ಜೊತೆಯಾಗಿವೆ.


ಕೊಡಾಕ್‌ನಿಂದ ಈ ಪ್ರಯತ್ನವೂ ಆಗಿತ್ತು. ಒಪ್ಪೋ ಜೊತೆಗೆ ಒಪ್ಪಂದವಾಗಿ 3 ವರ್ಷ ಕಳೆದರೂ ಪ್ರಾಡಕ್ಟ್ ಹೊರಬರಲಿಲ್ಲ.


ಆಗಸ್ಟ್ 2020ರಲ್ಲಿ ಕೊಡಾಕ್ ಟಿ.ವಿ ಇಂಡಿಯಾ ಎನ್ನುತ್ತಾ ಮೇಡ್ ಇನ್ ಇಂಡಿಯಾ ಟಿ.ವಿಗಳನ್ನು ತಯಾರಿಸುತ್ತೇವೆಂದು ಉತ್ತರಪ್ರದೇಶದ ಹರ್ಪುರ್ ನಲ್ಲಿ ತನ್ನ ಘಟಕವನ್ನು ಸ್ಥಾಪಿಸಿ 4 ಮಾಡೆಲ್‌ಗಳ ಸ್ಮಾರ್ಟ್ ಟಿ.ವಿಯನ್ನೂ ತಯಾರಿಸಿತು. ಫ್ಲಿಫ್ ಕಾರ್ಟ್ ಹಾಗೂ ಅಮೆಜಾನ್ ಜೊತೆ ಒಪ್ಪಂದ ಮಾಡಿಕೊಂಡು 2021 ರಲ್ಲಿ ವ್ಯಾಪಾರ ಮಾಡಿತು. ಅತ್ಯಂತ ಕಡಿಮೆ ದುಡ್ಡಿನ ಟಿ.ವಿ ಎಂದು ಪ್ರಸಿದ್ಧವಾದರೂ ಹೆಚ್ಚು ಮಾರಾಟವಾಗಲಿಲ್ಲ. ಇಲ್ಲಿ ಕೂಡಾ ಕೊಡಾಕ್ ಫೇಲ್ ಆಗಿತ್ತು. ಮತ್ತೆ ಯಾವುದಾದರೂ ರೂಪದಲ್ಲಿ ಕೊಡಾಕ್ ನಮ್ಮ ಮುಂದೆ ಬರಬಹುದಾ ಕಾದು ನೋಡಬೇಕಷ್ಟೇ.


ಯಾವುದೇ ಬ್ಯುಸಿನೆಸ್ ಅಥವಾ ಜೀವನದಲ್ಲಿಯೇ ಆಗಲಿ ಮುಖಸ್ತುತಿ ಮಾಡುವವರನ್ನು ನಂಬುವುದರ ಬದಲಾಗಿ ನಮ್ಮ ತಪ್ಪುಗಳನ್ನು ತೋರಿಸುವವರತ್ತ ಗಮನಹರಿಸಬೇಕು. ಆಗಲೇ ನಾವು ಎಲ್ಲಿ ಎಡವಿದ್ದೇವೆ ಎನ್ನುವ ಅರಿವಾಗುವುದು. ಕೊಡಾಕ್ ಮೀಡಿಯಾ ಹಾಗೂ ಮಾರ್ಕೆಟ್ ಫೀಡ್ ಬ್ಯಾಕ್ ಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಎಡವಿತ್ತು.


ಯಾವತ್ತಿಗೂ ನಮ್ಮ ಬುದ್ಧಿವಂತಿಕೆ ಅಥವಾ ಬ್ಯುಸಿನೆಸ್ ಐಡಿಯಾ ಮೇಲೆ ನಂಬಿಕೆ, ವಿಶ್ವಾಸವಿರಬೇಕೇ ಹೊರತು ಅತಿಯಾದ ಆತ್ಮವಿಶ್ವಾಸ ಅಥವಾ ಕುರುಡು ನಂಬಿಕೆ ಇರಬಾರದು. ಕೊಡಾಕ್ ಎಡವಿದ್ದು ಇಲ್ಲಿ. ಫೋಟೋ ಪ್ರಿಂಟಿAಗ್ ಕ್ಯಾಮರಾಗಳಿಗೆ ಅತಿ ಹೆಚ್ಚಿನ ಲೈಫ್ ಇದೆ ಎಂದುಕೊಂಡು ಅದಕ್ಕೇ ಜೋತುಬಿದ್ದು ಕಣ್ಮುಚ್ಚಿ ಕುಳಿತದ್ದು. ಯಾವತ್ತಿಗೂ ಕಾಲಕಾಲಕ್ಕೆ ಅಪ್ ಡೇಟ್ ಆಗುತ್ತಲಿರಬೇಕು. ಅಪ್ ಡೇಟ್ ಆಗದಿದ್ದರೆ.. ಜನರೇಶನ್ ಗ್ಯಾಪ್ ಉಂಟಾಗಿಬಿಡುತ್ತದೆ. ಇಲ್ಲಿ ಬ್ಯುಸಿನೆಸ್ ಗ್ಯಾಪ್ ಉಂಟಾಯಿತು. ಯಾವತ್ತಿಗೂ ಎಡವಿ ಬಿದ್ದ ನಂತರ ಮತ್ತೆ ಚೇತರಿಸಿಕೊಳ್ಳಲು ಎಷ್ಟೋ ಸಮಯ ಹಿಡಿದುಬಿಡುತ್ತದೆ. ಅಷ್ಟರಲ್ಲಾಗಲೇ.. ಬೇರೆಯವರು ನಮ್ಮ ಸ್ಥಾನವನ್ನು ಆಕ್ರಮಿಸಿಯಾಗಿರುತ್ತದೆ. ಸೋಲಿನ ಮೂಲಕವೂ.. ಗೆಲುವಿನ ಹಾದಿಗೆ ಬೆಳಕು ಚೆಲ್ಲುತ್ತಾ.. ಈ ತಪ್ಪುಗಳನ್ನು ನಿಯಂತ್ರಿಸಿದರೆ ಫ್ಲ್ಯಾಶ್ ಲೈಟ್ ನಂತೆ ಮಿಂಚಿ ಮರೆಯಾಗದೆ ಬ್ಯುಸಿನೆಸ್ ಲೋಕದಲ್ಲಿ ಕ್ಲಿಕ್ ಆಗಬಹುದು ಎನ್ನುತ್ತದೆ ಕೊಡಾಕ್.


( ಸ್ಪಷ್ಟನೆ : ಈ ಲೇಖನದಲ್ಲಿ ಪರಿಚಯಿಸಲಾಗಿರುವ ಬ್ರ‍್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ ಹೊರತಾಗಿ ಅವುಗಳ ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ ಎನ್ನುತ್ತಾರೆ ಲೇಖಕರು)
ಕೃಪೆ: ಜೇನುಗಿರಿ ದಿನಪತ್ರಿಕೆ