ಕರ್ನಾಟಕದ ಮಹಿಳೆಯರು ಎತ್ತ ಹೋಗಬೇಕು ?
ಕರ್ನಾಟಕದ ಮಹಿಳೆಯರು ಎತ್ತ ಹೋಗಬೇಕು ?
ಮಹಿಳೆಯರ ವಿರುದ್ಧ ದ್ವೇಷ ಕಾರುವ ಮಾತುಗಳನ್ನಾಡಲು ಕರ್ನಾಟಕದ ಬಿಜೆಪಿ ನಾಯಕರು ಮತ್ತು ಸಚಿವರು ಪೈಪೋಟಿಯ ಮೇಲೆ ಮುಗಿಬಿದ್ದಿದ್ದಾರೆ. ಎರಡನೆ ಬಾರಿ ಆರೋಗ್ಯ ಸಚಿವರಾಗಿರುವ ಕೆ ಸುಧಾಕರ್, ನಿಮ್ಹಾನ್ಸ್ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡುತ್ತಾ “ ಉದಾತ್ತ ಭಾರತೀಯ ಕುಟುಂಬದ ” ಶಮನಕಾರಕ ಗುಣಲಕ್ಷಣಗಳನ್ನು ಕೊಂಡಾಡಿರುವುದೇ ಅಲ್ಲದೆ ಆಧುನಿಕ ಭಾರತದ ಮಹಿಳೆಯರು ವಿವಾಹವಾಗಲು ಸಮ್ಮತಿಸುವುದಿಲ್ಲ, ವಿವಾಹವಾದವರು ಮಕ್ಕಳನ್ನು ಹೆರಲು ಬಯಸುವುದಿಲ್ಲ ಅಥವಾ ಬಾಡಿಗೆ ತಾಯಂದಿರ ಮೊರೆ ಹೋಗುತ್ತಾರೆ ಎಂದು ಬಹಳ ವಿಷಾದದಿಂದ ಹೇಳಿದ್ದಾರೆ. ತಮ್ಮ ಈ ಪ್ರತಿಪಾದನೆಗೆ ಮಾನ್ಯ ಸಚಿವರು ರಾಷ್ಟಿçÃಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿಯನ್ನೇನೂ ಆಧರಿಸಿಲ್ಲ ಅಥವಾ ಸ್ಥಳೀಯ ಪ್ರಾದೇಶಿಕ ಸಮೀಕ್ಷೆಗಳನ್ನೂ ಅವಲಂಬಿಸಿಲ್ಲ.
ಸಿಪಿಆರ್ ಸಹಸ್ರಮಾನ ಸಮೀಕ್ಷೆಯ ವರದಿಯನ್ವಯ ಈ ಪ್ರವೃತ್ತಿಯಲ್ಲಿ ಯಾವುದೇ ಲಿಂಗಭೇದ ಕಾಣಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿರುವುದನ್ನು ಗಮನಿಸಿದ ನಂತರ ಆರೋಗ್ಯ ಸಚಿವರು ತಮ್ಮ ಮಾತಿಗೆ ಸಮಜಾಯಿಷಿ ನೀಡಿ, “ ಸಾಂಪ್ರದಾಯಿಕ ಕುಟುಂಬ ಪದ್ಧತಿ ”ಯ ಮೌಲ್ಯಗಳು ಮಾನಸಿಕ ಸಮಸ್ಯೆಗಳನ್ನು ಎದುರಿಸುವ ಯುವಜನತೆಗೆ ಸಾಂತ್ವನ ನೀಡುತ್ತವೆ ಎಂದು ಹೇಳಿದ್ದಾರೆ. ಆರೋಗ್ಯ ಸಚಿವರ ಈ ಅಸೂಕ್ಷö್ಮ ಹೇಳಿಕೆ ಅವರ ಸಹೋದ್ಯೋಗಿಗಳಿಗೆ ಮತ್ತಷ್ಟು ಬಲ ನೀಡಿದ್ದು , ರಾಜ್ಯದಲ್ಲಿ ರಾಜಕೀಯ ಸಂಕಥನವನ್ನು ರೂಪಿಸುವ ಬಿಜೆಪಿ ರಾಷ್ಟಿçÃಯ ಕಾರ್ಯದರ್ಶಿ ಸಿ ಟಿ ರವಿ ಈ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. “ ಎಲ್ಲ ಮಹಿಳೆಯರೂ ಹಾಗಿರುವುದಿಲ್ಲ ಆಧುನಿಕ ಮಹಿಳೆಯರಲ್ಲಿ ಮಾತ್ರ ಈ ಸಮಸ್ಯೆ ಇದೆ ” ಎಂದು ಹೇಳುವ ಮೂಲಕ ಸಿ ಟಿ ರವಿ, “ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ದುಡಿಯುವ ಆಧುನಿಕ ಮಹಿಳೆಯರು ಸಣ್ಣ ಕುಟುಂಬವನ್ನೇ ಆಶ್ರಯಿಸಿದ್ದು, ಅಮೆರಿಕ ಮತ್ತು ಇಂಗ್ಲೆAಡಿನ ಮಹಿಳೆಯರನ್ನು ಅನುಕರಿಸುತ್ತಾರೆ, ಆಧುನಿಕ ಮಹಿಳೆಯರ ಮನಸ್ಥಿತಿ ಬಹಳಷ್ಟು ವಿಶಾಲವಾಗಿದೆ ಎಂದು ಹೇಳಿದ್ದಾರೆ, ”
ಈ ಭ್ರಮಾತ್ಮಕ ಹೇಳಿಕೆಗಳು ರಾಜಕೀಯ ಅಧಿಕಾರವನ್ನು ಹೊಂದದಿರುವವರಿAದ ಬಂದಿದ್ದರೆ ನಿರ್ಲಕ್ಷಿಸಬಹುದಿತ್ತು. ಆಳುವ ಸರ್ಕಾರಗಳ ಆಡಳಿತ ನೀತಿಗಳನ್ನು ನಿರ್ಧರಿಸುವುದೇ ಅಲ್ಲದೆ ಕಾನೂನುಗಳನ್ನು ರೂಪಿಸುವ ಅಧಿಕಾರಸ್ಥ ರಾಜಕಾರಣಿಗಳಿಂದ ಇಂತಹ ಭ್ರಾಂತಿ ಜನಕ ಹೇಳಿಕೆಗಳು ಅಪಾಯಕಾರಿಯಾಗಿ ಕಾಣುತ್ತವೆ. ತಾವು ಕಲ್ಪಿಸಿಕೊಳ್ಳುವ ‘ ವಿಶಾಲ ಮನಸ್ಥಿತಿಯ ’ ಕರ್ನಾಟಕದ ಮಹಿಳೆಯರನ್ನು ಹಿಂಸಾತ್ಮಕ ಮಾರ್ಗಗಳ ಮೂಲಕ ಮೂಲೆಗುಂಪು ಮಾಡುವಂತಹ ಶಕ್ತಿಗಳೊಡನೆ ವೇದಿಕೆ ಹಂಚಿಕೊಳ್ಳುವ ಇಂತಹ ಅಧಿಕಾರಸ್ಥ ರಾಜಕಾರಣಿಗಳಿಂದ ಬರುವ ಈ ಹೇಳಿಕೆ ಮತ್ತಷ್ಟು ಅಪಾಯಕಾರಿಯಾಗಿಯೇ ಕಾಣುತ್ತದೆ. ಈಗಾಗಲೇ ರಾಜ್ಯದಲ್ಲಿ ಹೆಚ್ಚು ಸಕ್ರಿಯವಾಗಿರುವ ಭಜರಂಗದಳ, ಶ್ರೀರಾಮಸೇನೆ, ಹಿಂದೂ ಜಾಗರಣ ವೇದಿಕೆ ಮುಂತಾದ ಬಲಪಂಥೀಯ ಮಹಿಳಾ ಗುಂಪುಗಳು ಅಂತರ್ ಧರ್ಮೀಯ ಸಂಬAಧಗಳನ್ನು ಭಂಗಗೊಳಿಸುವ ನಿಟ್ಟಿನಲ್ಲಿ ಹಿಂಸಾತ್ಮಕ ಮಾರ್ಗಗಳನ್ನು ಅನುಸರಿಸುತ್ತಿರುವುದನ್ನು ಈ ಸಂದರ್ಭದಲ್ಲಿ ಗಮನಿಸಲೇಬೇಕಿದೆ.
ಅನ್ಯ ಮತದ ಪುರುಷನೊಂದಿಗಿದ್ದ ಬುರ್ಖಾ ತೊಟ್ಟ ಮಹಿಳೆಯೊಬ್ಬರ ವಿರುದ್ಧ ಜರುಗಿದ ಅನೈತಿಕ ಪೊಲೀಸ್‌ಗಿರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಪೊಲೀಸರು ಬಹಳ ಚುರುಕಾಗಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನೈತಿಕ ಮೌಲ್ಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಇಂತಹ ಕ್ರಿಯೆ ಪ್ರತಿಕ್ರಿಯೆಗಳು ಸಹಜವಾಗಿರುತ್ತವೆ ಎಂದು ಹೇಳಿದ್ದಾರೆ. ನೈತಿಕ ಪೊಲೀಸ್‌ಗಿರಿ ಮಾಡುವ ಹಿಂದೂ ಪುರುಷರ ಇಂತಹ ಚಟುವಟಿಕೆಗಳನ್ನು “ ಕ್ರಿಯೆ ಮತ್ತು ಪ್ರತಿಕ್ರಿಯೆ ”ಯ ಸಮೀಕರಣದ ಮೂಲಕ ಸಮರ್ಥಿಸಿಕೊಂಡಿರುವ ಬೊಮ್ಮಾಯಿ, ಅತಿ ಹೆಚ್ಚು ಧೃವೀಕರಣಕ್ಕೊಳಗಾಗಿರುವ ಒಂದು ಪ್ರದೇಶದಲ್ಲಿ “ ಸಮಾಜದ ಭಾವನೆಗಳಿಗೆ ಧಕ್ಕೆ ಉಂಟಾಗುವುದನ್ನು ತಡೆಗಟ್ಟಲು ” ಇಂತಹ ಪ್ರತಿಕ್ರಿಯೆಗಳು ಸಹಜವಾಗಿಯೇ ವ್ಯಕ್ತವಾಗುತ್ತವೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅನೈತಿಕ ಪೊಲೀಸ್‌ಗಿರಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಕರ್ನಾಟಕದ, ವಿಶೇಷವಾಗಿ ಬೆಂಗಳೂರಿನ ಐಷಾರಾಮಿ ಆರ್ಥಿಕ ಬದುಕಿನ ಒಂದು ಭಾಗವಾಗಿರುವ ಐಟಿ/ಬಿಟಿ ಕ್ಷೇತ್ರದ ಮಹಿಳೆಯರು ಇತ್ತೀಚೆಗೆ ತೀವ್ರವಾಗಿ ಹೆಚ್ಚಾಗುತ್ತಿರುವ ಸ್ತಿçà ದ್ವೇಷದ ವಾತಾವರಣಕ್ಕೆ ಪ್ರತಿರೋಧವನ್ನೂ ಒಡ್ಡದಿರುವುದು ಇತ್ತೀಚಿನ ಮಹಿಳಾ ಕೇಂದ್ರಿತ ರಾಜಕೀಯ ಸಂಕಥನದಲ್ಲಿ ಹೆಚ್ಚು ಚರ್ಚೆಗೊಳಗಾಗಿದೆ. ಆಗಸ್ಟ್ ತಿಂಗಳಲ್ಲಿ ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಪ್ರತಿಕ್ರಯಿಸಿದ್ದ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಎಂಬಿಎ ಪದವೀಧರೆಯಾದ ಸಂತ್ರಸ್ತೆಯನ್ನೇ ಆರೋಪಿಯಂತೆ ಬಿಂಬಿಸಲೂ ಹಿಂಜರಿಯಲಿಲ್ಲ. ಅಂತಹ ಅಪಾಯಕಾರಿ ಪ್ರದೇಶಗಳಿಗೆ ಆ ವೇಳೆಯಲ್ಲಿ ಹೋಗಿದ್ದೇಕೆ ಎಂದು ಇಬ್ಬರನ್ನೂ ಪ್ರಶ್ನಿಸುವ ಮೂಲಕ ಗೃಹ ಸಚಿವರು ಸಂತ್ರಸ್ತೆಯನ್ನೇ ಅಪಮಾನಗೊಳಿಸಲು ಯತ್ನಿಸಿದ್ದರು. ಈ ಮಾತುಗಳನ್ನು ಅಕ್ಷರಶಃ ಪಾಲಿಸಿದ ಮೈಸೂರು ವಿಶ್ವವಿದ್ಯಾಲಯ ಕೂಡಲೇ ಸುತ್ತೋಲೆ ಹೊರಡಿಸಿ ಮಹಿಳಾ ಹಾಸ್ಟಲ್‌ಗಳಲ್ಲಿರುವವರು ಸಂಜೆ ಆರು ಗಂಟೆಯ ನಂತರ ಹೊರಹೋಗುವಂತಿಲ್ಲ ಎಂದು ಆದೇಶಿಸಿದ್ದರು. ( ಸಾರ್ವಜನಿಕ ಒತ್ತಡಕ್ಕೆ ಮಣಿದು ಅದೇಶವನ್ನು ಹಿಂಪಡೆಯಲಾಯಿತು).
ಕರ್ನಾಟಕದಲ್ಲಿ, ದೇಶದಾದ್ಯಂತವೂ ಸಹ, ಪ್ರೀತಿ ಎನ್ನುವ ಪದ ಕೇವಲ ಅಕ್ಷರಗಳಾಗಿ ಪರಿಣಮಿಸುತ್ತಿದೆ. ಕಳೆದ 150 ವರ್ಷಗಳಿಂದಲೂ “ ಸಂಸ್ಕೃತಿ ಅಪಾಯದಲ್ಲಿದೆ ”, “ ಕುಟುಂಬ ಅಪಾಯದಲ್ಲಿದೆ ” ಎಂದು ಹುಯಿಲೆಬ್ಬಿಸಲಾಗುತ್ತಿದ್ದು, ಮಹಿಳೆಯರು ತಮ್ಮ ಶಿಕ್ಷಣ, ಉದ್ಯೋಗ, ಸುರಕ್ಷಿತ ಸಾರ್ವಜನಿಕ ಸ್ಥಳಗಳಿಗಾಗಿ ಆಗ್ರಹಿಸಿ ಹಕ್ಕೊತ್ತಾಯಗಳನ್ನು ಮಂಡಿಸಿದಾಗೆಲ್ಲಾ ಈ ಕೂಗು ಮುನ್ನೆಲೆಗೆ ಬರುತ್ತಿದೆ. 1970ರ ನಂತರದಲ್ಲಿ ಭಾರತೀಯ ಮಹಿಳೆಯರು ತಮ್ಮ ದಿಟ್ಟ ಹೋರಾಟಗಳ ಮೂಲಕ ಹಲವಾರು ಕಾನೂನು ಹೋರಾಟಗಳಲ್ಲಿ ಗೆಲುವು ಸಾಧಿಸಿರುವುದನ್ನು ಜೀರ್ಣಿಸಿಕೊಳ್ಳಲಾರದ ಸಂಪ್ರದಾಯವಾದಿಗಳಿಗೆ “ ಕುಟುಂಬ/ಸAಪ್ರದಾಯ ಅಪಾಯದಲ್ಲಿದೆ ” ಎಂಬ ಕೂಗು ಒಂದು ಬಂಡವಾಳವಾಗಿ ಪರಿಣಮಿಸಿದೆ. ಈಗ ಸಂಬAಧಗಳ ನೆಲೆಯಲ್ಲಿ, ರಾಷ್ಟಿçÃಯತೆಯ ಚೌಕಟ್ಟಿನಲ್ಲಿ ಮಹಿಳೆಯರು ಸಂಪಾದಿಸಿರುವ ಸ್ವಾಯತ್ತತೆ ಮತ್ತು ಹಕ್ಕುಗಳ ವಿರುದ್ಧ ದನಿ ಮೂಡಿಸುತ್ತಿರುವುದನ್ನು ಗಮನಿಸಬೇಕಿದೆ.
2020ರ ಎನ್‌ಸಿಆರ್‌ಬಿ ಮಾಹಿತಿಯ ಅನುಸಾರ ಮಹಿಳೆಯರ ವಿರುದ್ಧ ನಡೆಯುವ ಶೇ 30ರಷ್ಟು ಅಪರಾಧಗಳು ಕುಟುಂಬದ ಸದಸ್ಯರಿಂದಲೇ ಸಂಭವಿಸುತ್ತವೆ. ಗಂಡAದಿರು, ಗಂಡು ಮಕ್ಕಳು, ತಂದೆಯರು, ಪೋಷಕರು ಈ ಅಪರಾಧಗಳ ರೂವಾರಿಗಳಾಗಿರುತ್ತಾರೆ. ರಾಷ್ಟಿçÃಯ ಕುಟುಂಬ ಆರೋಗ್ಯ ಸಮೀಕ್ಷೆಯ ಐದನೆಯ ಸುತ್ತಿನ ವರದಿಯನ್ವಯ, ಕರ್ನಾಟಕದಲ್ಲಿ ಕುಟುಂಬ ಸದಸ್ಯರಿಂದ ನಡೆಯುವ ಅಪರಾಧಗಳ ಪ್ರಮಾಣ ನಾಲ್ಕನೆಯ ಸುತ್ತಿನ ವರದಿಗೆ ಹೋಲಿಸಿದರೆ ಶೇ 20.6 ರಿಂದ ಶೇ 44.4ಕ್ಕೆ ಏರಿಕೆಯಾಗಿದೆ. ಕುಟುಂಬ ಮತ್ತು ಸಂಸ್ಕೃತಿ ಅಪಾಯದಲ್ಲಿದೆ ಎಂಬ ಹುಯಿಲೆಬ್ಬಿಸುವ ಮೂಲಕ, ಕರ್ನಾಟಕದಲ್ಲಿ ಮಹಿಳೆಯರ ಪಾಲಿಗೆ ಕುಟುಂಬದ ಪರಿಸರವೇ ಅತ್ಯಂತ ಅಪಾಯಕಾರಿಯಾದ ಜಾಗ ಎಂಬ ದೇಶದ ಹೈಕೋರ್ಟ್ಗಳ ಎಚ್ಚರಿಕೆಯ ಸಂದೇಶವನ್ನು ಮರೆಮಾಚಲಾಗುತ್ತಿದೆ. ಈ ಕುರಿತ ಸಾರ್ವಜನಿಕ ಚರ್ಚೆಗಳನ್ನು ತಪ್ಪಿಸಲು ಕುಟುಂಬ/ಸAಸ್ಕೃತಿ ಅಪಾಯದಲ್ಲಿದೆ ಎಂಬ ಕೂಗನ್ನು ಗುರಾಣಿಯಂತೆ ಬಳಸಲಾಗುತ್ತಿದೆ. ಕೌಟುಂಬಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಕಾನೂನು ಶಿಕ್ಷಣ ನೀಡಲು, ಮಾನಸಿಕ ಆಪ್ತ ಸಲಹೆಯನ್ನು ಒದಗಿಸಲು ಮತ್ತು ಪರಿಹಾರ ಒದಗಿಸಲು ಸಾಂತ್ವನ ಕೇಂದ್ರಗಳನ್ನೂ ಸಹ ರಾಜ್ಯಾದ್ಯಂತ ಸ್ಥಾಪಿಸಲಾಗಿದೆ. ಕರ್ನಾಟಕದಾದ್ಯಂತ ಮಹಿಳೆಯರ ಮಾನಸಿಕ ಆರೋಗ್ಯ ರಕ್ಷಣೆಯ ನಿಟ್ಟಿನಲ್ಲಿ ಈ ಸಾಂತ್ವನ ಕೇಂದ್ರಗಳು ಎಷ್ಟು ನಿರ್ಣಾಯಕವಾಗಿ ಪರಿಣಮಿಸಿದ್ದವು ಎನ್ನುವುದನ್ನು 2015ರ ಒಂದು ವರದಿಯಲ್ಲಿ ವಿಸ್ತೃತವಾಗಿ ಉಲ್ಲೇಖಿಸಲಾಗಿದೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಈ ಸಾಂತ್ವನ ಕೇಂದ್ರಗಳ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಮುಸಲ್ಮಾನರೇ ಆಗಿದ್ದಾರೆ.
ಈಗ ಈ ಭಾರತೀಯ, ಅಂದರೆ ಹಿಂದೂ ಸಂಸ್ಕೃತಿಯ ಮೇಲೆ ನಡೆಯುವ ಕಲ್ಪಿತ ಆಕ್ರಮಣಗಳನ್ನು ತಡೆಗಟ್ಟಲು ನೈತಿಕ ಪೊಲೀಸ್‌ಗಿರಿಯ ಮೂಲಕ ಪುರುಷ ಸಮಾಜಕ್ಕೆ ನೇರವಾಗಿಯೇ ಅಧಿಕಾರವನ್ನು ನೀಡಲಾಗಿದೆ. ಹಾಗಾಗಿ ಅಂತರ್ ಧರ್ಮೀಯ ಸಂಬAಧಗಳನ್ನು ಭಂಗಗೊಳಿಸುವ ನಿಟ್ಟಿನಲ್ಲಿ ಕ್ರೂರ, ಹಿಂಸಾತ್ಮಕ ವಿಧಾನಗಳನ್ನು ಮುಕ್ತವಾಗಿ ಅನುಸರಿಸುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಬೆಳಗಾವಿಯ ಅರ್ಬಾಜ್ ಆಫ್ತಾಬ್ ಮುಲ್ಲಾ ಎಂಬ ಮುಸ್ಲಿಂ ಯುವಕನ ಶಿರಚ್ಚೇದನ ಮಾಡುವ ಮೂಲಕ ಶ್ರೀರಾಮಸೇನೆಯ ಕಾರ್ಯಕರ್ತರು ಈ ಅಧಿಕಾರವನ್ನು ಚಲಾಯಿಸಿದ್ದಾರೆ. ಈ ಹತ್ಯೆಯ ಪ್ರಕರಣದಲ್ಲಿ ಈವರೆಗೂ ಯಾರನ್ನೂ ಬಂಧಿಸಲಾಗಿಲ್ಲ. ಇಂತಹ ಹಿಂಸಾತ್ಮಕ ಕೃತ್ಯಗಳನ್ನೇ ಮುಖ್ಯಮಂತ್ರಿಗಳು ಸಾರ್ವಜನಿಕವಾಗಿ ಸಮ್ಮತಿಸಿದ್ದಾರೆ.
ಇದೇ ವೇಳೆ, ಉತ್ತರ ಪ್ರದೇಶದ ಆಡಳಿತ ಮಾದರಿಯನ್ನು ಮೀರಲಾಗದಿದ್ದರೂ, ಸರಿಗಟ್ಟುವ ಪ್ರಯತ್ನದಲ್ಲಿರುವ ಕರ್ನಾಟಕದ ಕಾತರ ತನ್ನದೇ ಆದ ರೂಪ ಪಡೆದುಕೊಳ್ಳುತ್ತಿದ್ದು, ಮಹಿಳೆಯರಿಗೆ ಸಮಾಜದಲ್ಲಿನ ಅವರ “ ಸ್ಥಾನಮಾನ ” ಮನದಟ್ಟು ಮಾಡಲು ಕಾನೂನಾತ್ಮಕ ಅಸ್ತçಗಳನ್ನೇ ರೂಪಿಸಲಾಗುತ್ತಿದೆ. ಲವ್ ಜಿಹಾದ್ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಆಗ್ರಹಿಸಲಾಗುತ್ತಿದೆ. ಕಾನೂನು ಮತ್ತು ಸಾರ್ವಜನಿಕ ಹಿಂಸೆ, ಎರಡನ್ನೂ ಬಳಸುವ ಈ ತಂತ್ರಗಾರಿಕೆಯನ್ನು ಅನುಸರಿಸುವ ಮೂಲಕ, ಮಹಿಳೆಯರ ಹಕ್ಕುಗಳ ಪ್ರಶ್ನೆಯನ್ನು ಬದಿಗೊತ್ತಿ, ರಾಷ್ಟç ಮತ್ತು ಕೌಟುಂಬಿಕ ಸಂಬAಧಗಳ ಪ್ರಶ್ನೆಗಳನ್ನು ಮುನ್ನೆಲೆಗೆ ತರಲಾಗುತ್ತಿದೆ. ಸಂತ್ರಸ್ತ ಮಹಿಳೆಯರಿಗೆ ಇರುವ ಕಾನೂನು ಮೊರೆ ಹೋಗುವ ಮತ್ತು ಅನುಕಂಪಭರಿತ ಆಪ್ತ ಸಲಹೆಯ ಮಾರ್ಗಗಳನ್ನು ಮುಚ್ಚಿ, ರಾಷ್ಟç ಮತ್ತು ಕೌಟುಂಬಿಕ ಸಂಬAಧಗಳನ್ನು ಮುನ್ನೆಲೆಗೆ ತರುವ ಮೂಲಕ ಪುರುಷ ಸಮಾಜಕ್ಕೇ ನಿರ್ಣಾಯಕ ಅಧಿಕಾರವನ್ನು ನೀಡಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಕರ್ನಾಟಕದ ಸಚಿವ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಸ್ತುವಾರಿಯನ್ನು ತಮ್ಮ ವಿರುದ್ಧ ಕ್ರಿಮಿನಲ್ ಅಪರಾಧದ ಆರೋಪ ಹೊತ್ತಿರುವ ಸಚಿವ ಆಚಾರ್ ಹಾಲಪ್ಪ ಬಸಪ್ಪ ಅವರಿಗೆ ವಹಿಸಲಾಗಿರುವುದನ್ನು ಗಮನಿಸಿದರೆ, ಕರ್ನಾಟಕದ ಹೆಣ್ಣುಮಕ್ಕಳು ತಮ್ಮ ರಕ್ಷಣೆಗೆ ಇವರನ್ನೇ ಮೊರೆ ಹೋಗುವುದು ಅನಿವಾರ್ಯವೂ ಆಗಿದೆ.
ಮೂಲ : ಜಾನಕಿ ನಾಯರ್ –ದ ಹಿಂದೂ 21-10
ಅನುವಾದ : ನಾ ದಿವಾಕರ