ರಾಮ ಎಂಬ ಪ್ರತಿಮಾ ಮತ್ತು ಪ್ರೊ  ಭಗವಾನ್

ವಿಶ್ಲೇಷಣೆ

   ರಾಮ ಎಂಬ ಪ್ರತಿಮಾ ಮತ್ತು ಪ್ರೊ  ಭಗವಾನ್

ಪ್ರತಿಕ್ರಿಯೆ

ಡಾ. ನಟರಾಜ ಕೆ. ಪಿ 

 

ರಾಮ ಎಂಬ ಪ್ರತಿಮಾ ಮತ್ತು ಪ್ರೊ  ಭಗವಾನ್

ಕುವೆಂಪು ಅವರ  ಕಿರಿಯ  ಒಡನಾಡಿಯಾಗಿದ್ದು ,  ‌ ಅವರ ಸಂದರ್ಶನವನ್ನೂ   ಮಾಡಿರುವ  ,  ತಮ್ಮ  ' ಶಂಕರಾಚಾರ್ಯ ಮತ್ತು ಪ್ರತಿಗಾಮಿತನ '  ಪುಸ್ತಕಕ್ಕೆ ಕುವೆಂಪು ಅವರಿಂದ  ಪ್ರಶಂಸೆಯನ್ನೂ ಪಡೆದಿರುವ , ಹಲವು ದಶಕಗಳ ಕಾಲ  ಇಂಗ್ಳಿಷ್ ಸಾಹಿತ್ಯದ ಪ್ರಾಧ್ಯಾಪಕರೂ  ಆಗಿ ನಿವೃತ್ತರಾಗಿರುವ   ಪ್ರೊ  ಕೆ ಎಸ್ ಭಗವಾನ್ ಅವರಿಗೆ   ಆಧುನಿಕ‌ ನವೋದಯದ ಮುಂಗೋಳಿ ಎಂದೇ ಹೆಸರಾಗಿರುವ ಕವಿ‌‌  ಮುದ್ದಣ   ಕಳೆದ ಶತಮಾನದ ಮುಂಜಾವದಲ್ಲಿಯೇ

  ''  ನಾಡಿನೋಳ್ ಎನಿತೊ‌‌ ರಾಮಾಯಣಂಗಳೊಳವು " ಎಂದು  ಹೇಳಿದ್ದೂ  ,   ನಮ್ಮ ಕಾಲದ ವಿದ್ವಾಂಸ ರಾಗಿದ್ದ  ಪ್ರೊ ಎ ಕೆ ರಾಮಾನುಜನ್ ಅವರು  "Three  hundred Ramayanas" ಎಂಬ  ಅಧ್ಯಯನಪೂರ್ಣ   ಬರೆಹ ಮಾಡಿದ್ದೂ   ಮನಸ್ಸಿಗಿಳಿದಿಲ್ಲ ಎಂದು ಕಾಣುತ್ತದೆ‌‌‌‌....

 

ಪ್ರೊ  ಭಗವಾನ್ ಅವರು  ವಾಲ್ಮೀಕಿ ರಾಮಾಯಣ ದ ಪಠ್ಯದಲ್ಲಿರುವ ರಾಮನಲ್ಲೇ   ಹೂತುಹೋಗಿದ್ದಾರೆ ವಿನಹ ಅವರು ,  ನಾಗಚಂದ್ರನ ಪಂಪ ರಾಮಾಯಣದಲ್ಲಿ ಚಿತ್ರಿತವಾಗುವ    ತೀರ್ಥಂಕರತ್ವ ಪ್ರಾಪ್ತವಾಗುವ  ‌ಮುನ್ನಿನ  ಭವದಲ್ಲಿರುವ ಅಹಿಂಸಾ ಬದ್ದ ರಾಮನನ್ನಾಗಲಿ   ಅಥವಾ  " ಶ್ರೀ ರಾಮಾಯಣ ದರ್ಶನಂ '" ನ ಕುವೆಂಪು ಕಲ್ಪಿತ  ರಾಮನನ್ನಾಗಲಿ     ಮುಖಾಮುಖಿಯಾಗೇ ಇಲ್ಲ..

 

ಇದು  ,ಬಲಪಂಥೀಯರಷ್ಟೇ   ಸ್ಥಗಿತ ಮನಸ್ಥಿತಿ   ಮತ್ತು ಈ  ಮನಸ್ಥಿತಿಯಿಂದ  ಹುಟ್ಟುವ ಮಾತುಗಳು  ಅನಗತ್ಯವಾಗಿ  ಸಮಾಜವನ್ನು  ಕೆರಳಿಸುತ್ತವೆ..‌ ಈ  ಪ್ರಚೋದನಾತ್ಮಕ ಮಾತುಗಳು  ಸ್ವಯಂ  ಪ್ರೊ  ಭಗವಾನ್ ರವರಿಗೂ  ಶ್ರೇಯ ತರುವುದಿಲ್ಲ.   ಬಲಪಂಥೀಯರೂ ವಾಲ್ಮೀಕಿ ಬರೆದ ರಾಮಾಯಣದ ರಾಮನಲ್ಲಿ  ಹೂತುಹೋಗಿದ್ದರೆ , ಭಗವಾನ್ ರವರೂ ಆತನಲ್ಲೇ ಹೂತುಹೋಗಿದ್ದಾರೆ ‌‌.   ಬಲಪಂಥೀಯರಿಗೆ ರಾಮ ಪೂಜನೀಯನಾಗಿ ಕಂಡರೆ , ಭಗವಾನ್ ಅವರು ಅವನ ಹುಳುಕುಗಳನ್ನು  ಹುಡುಕಿ ತೋರುತ್ತಾರೆ ‌‌

"ಜನರಲ್ಲಿ   ವೈಚಾರಿಕತೆಯನ್ನು  ತುಂಬುತ್ತಿದ್ದೇನೆ  '' ಎಂಬ ಅವರ  ಕಾಳಜಿ  ನಮ್ಮಂತಹ ಕೆಲವರಿಗಾದರೂ  ಗೊತ್ತು‌  ಆದರೆ  ಗಾಂಧೀಜಿ  ಅಂಬೇಡ್ಕರ್  ಲೋಹಿಯಾ ‍,  ಪೆರಿಯಾರ್  , ಕುವೆಂಪು  ಲಂಕೇಶ್ , ತೇಜಸ್ವಿ  . ಮುಂತಾದವರು ಕಟ್ಟಲು ಹೆಣಗಿದ ವೈಚಾರಿಕ ಯುಗ ನಮ್ಮ ಕಣ್ಮುಂದೆಯೇ ಕರಗಿಹೋಗಿ ,   ಆರೆಸ್ಸೆಸ್ ಮತ್ತು  ಇಸ್ಲಾಂ  ಧಾರ್ಮಿಕ‌ ಮೂಲಭೂತವಾದಗಳು ಕೈಕೈ  ಜೋಡಿಸಿ ಕಟ್ಟಿದ ಕೋಮುವಾದವು   ದೇಶದ  ತಲೆಹಿಡಿದಿರುವುದನ್ನು ಪ್ರೊ  ಭಗವಾನ್ ಅವರು ಅರಿಯದೆ ಹೋಗಿದ್ದಾರೆ.    ಅವರ ಮಾತುಗಳ  ಹಿಂದಿನ  ಕಾಳಜಿ   ದೊಡ್ಡದಾದರೂ ,    ಜನ ಮಾನಸದ ಪೂಜ್ಯ ಪ್ರತಿಮೆಯನ್ನು  ಭಗ್ನ ಗೊಳಿಸುತ್ತಿರುವ ಅಂದಾಜು ಇಲ್ಲದ  ಮತ್ತು  ಜನ ಸಮಷ್ಟಿಯ ಮೇಲೆ ಈ ಮಾತುಗಳು ಉಂಟು ಮಾಡುವ   ರಾಜಕೀಯ  ಪರಿಣಾಮಗಳ ಅಂದಾಜು‌ ಮಾಡದ  ಹೊಣೆಯರಿಯದ  ವಿದ್ಯಮಾನವಾಗಿ ರುವುದೂ ಅವರಿಗೆ ಗೊತ್ತಾಗುತ್ತಿಲ್ಲ‌.

ಇನ್ನು   ,  ಭಗವಾನ್ ಅವರ   ಮಾತುಗಳ ಆಧಾರದ ಮೇಲೆ , ಈ ವಿಚಾರಗಳು ,  ಕರ್ನಾಟಕದ  ಬುದ್ದಿಜೀವಿಗಳ , ಬರೆಹಗಾರರ ,  ಸಾಹಿತಿಗಳ  ಪ್ರಾತಿನಿಧಿಕ ವಿಚಾರಗಳೂ ಆಗಿವೆ ಎಂದು ಅಪಪ್ರಚಾರ , ಅಪವ್ಯಾಖ್ಯಾನ ಮಾಡುವ  ಬಲಪಂಥೀಯ ಮಾಧ್ಯಮಗಳ ದೆಸೆಯಿಂದ  ವಿಚಾರವಾದಿಗಳು  ,  ಬರೆಹಗಾರರು  ಮತ್ತು  ಚಿಂತಕರು   ನಮ್ಮ  ಪುರಾಣ ಕಾವ್ಯಗಳು ಮತ್ತು  ಅಲ್ಲಿರುವ ಪೂಜ್ಯ ಪ್ರತಿಮೆಗಳ ವಿರೋಧಿಗಳು ಎಂಬ    ಕೆಟ್ಟ ಅಭಿಪ್ರಾಯ ಮೂಡಲು  ಕಾರಣರಾಗುತ್ತಿದ್ದಾರೆ‌‌  ಇದು ವಿಷಾದಕರವಾದದ್ದು ಮತ್ತು ದುರದೃಷ್ಟಕರವಾದದ್ದು  .  ಇದೂ ಸಹ ಪ್ರೊ ಭಗವಾನ್ ಅವರಿಗೆ ಗೊತ್ತಾಗುತ್ತಿಲ್ಲ.

ರಾಮನ ಬಗ್ಗೆ ಮಾತಾಡಲು   ಇವರೇಕೆ   ರಾಮಚಂದ್ರ ಚರಿತ ಪುರಾಣದ. ಅಥವಾ ರಾಮಾಯಣ ದರ್ಶನಂನ    ಅಹಿಂಸಾ ವ್ರತ  ನಿರತನೂ  ; ಗಿರಿವನ ಪ್ರಿಯನೂ  ; ಹಲವು ಬಗೆಯಲ್ಲಿ ಧ್ಯೇಯವಾದಿಯೂ ಆದ  ರಾಮನನ್ನು   ಸಂಧಿಸುವುದಿಲ್ಲ‌? ಎಂಬ ಪ್ರಶ್ನೆಗಳೇಳುತ್ತವೆ ‌‌

ಪ್ರೊ ಭಗವಾನ್ ಅವರದ್ದು  ಕುವೆಂಪು  ಅವರು ಗುರುತಿಸುವಂತೆ ಪ್ರತಿಕೃತಿ ದೃಷ್ಟಿ  , ಪ್ರತಿಮಾ ದೃಷ್ಟಿ ಅಲ್ಲ . ಇದು  ಅಪಾಯಕಾರಿಯಾದ ದೃಷ್ಟಿ‌  . ವಾಲ್ಮೀಕಿ ರಾಮಾಯಣ ವೆಂಬ  Single book  ನಲ್ಲೆ   ಸ್ಥಗಿತವಾಗಿರುವ  ಸಂಘ ಪರಿವಾರದಷ್ಟೇ  ಇದು ಸಹ  ದೋಷಯುಕ್ತ ದೃಷ್ಟಿ .

ದಿಲ್ಲಿ  ವಿವಿಯಲ್ಲಿ  ಪಠ್ಯವಾಗಿದ್ದ ಪ್ರೊ ಎ ಕೆ ರಾಮಾನುಜನ್ ಅವರ ' ತ್ರೀ ಹಂಡ್ರೆಡ್ ರಾಮಾಯಣಾಸ್ '. ಕೃತಿಯನ್ನು  ಸಿಲಬಸ್ ನಿಂದ ಹೊರಹಾಕಿದ್ದು‌   , ವಿವಿಯ  ಬಲಪಂಥೀಯ ಹಿಡಿತದ  ಆಡಳಿತ   ಪ್ರೊ  ಭಗವಾನ್ ಅವರಂತೆಯೇ  ಏಕೈಕ ರಾಮಾಯಣದಲ್ಲಿ   -  ವಾಲ್ಮೀಕಿ ರಾಮಾಯಣ -  ಸಿಲುಕಿಬಿಟ್ಟ ಕಾರಣದಿಂದಾಗಿಯೆ  ಇದು  ರಾಮನ ವ್ಯಕ್ತಿತ್ವವನ್ನು  ಸುಧಾರಣೆಯತ್ತ , ಉದ್ದಾರದ  ಅವಸ್ಥೆಗಳತ್ತ ಚಲಿಸಲು ಬಿಡದೆ  ಸ್ಥಗಿತಗೊಳಿಸಿಬಿಡುತ್ತದೆ.

ಹಾಗೆ ನೋಡಿದರೆ , ಭಗವಾನ್ ಅವರ   ವೈಚಾರಿಕ ಪ್ರತಿರೋಧವು ಬಿಜೆಪಿ ಪರಿವಾರ. ಮಾಡುತ್ತಿರುವ  ವಾಲ್ಮೀಕಿ ರಾಮಾಯಣದ ರಾಮ ಕೇಂದ್ರಿತ ರಾಜಕಾರಣದ ವಿರುದ್ದ ಸಿಡಿದೆದ್ದು ರೂಪುಗೊಂಡಿರಬಹುದಾದರೂ  , ಅದನ್ನು ಮರೆಮಾಚುವಷ್ಟು  ಅದು . ವಾಲ್ಮೀಕಿ ಕೃತಿ ಕೇಂದ್ರಿತವಾಗಿ  ಸೀಮಿತಗೊಂಡುಬಿಟ್ಟಿದೆ‌.ಮತ್ತು  ತನ್ನ ಮಾತುಗಳ ಪರಿಣಾಮವನ್ನರಿಯದಷ್ಟು ಕುರುಡಾಗಿಬಿಟ್ಟಿದೆ

ಜನರನ್ನು ರಾಮಾಯಣ ಮತ್ತು ರಾಮರುಗಳನ್ನು  ಏಕ ಪಠ್ಯ ಮತ್ತು ಏಕಾಕಾರಿ ಪಾತ್ರ ದಲ್ಲಿ   ಸಿಲುಕಿಸುವ  ದುರುದ್ದೇಶದ  ಕಾರಣ ಉಂಟಾದ ಮಿಥ್ಯಾ ದೃಷ್ಟಿ ಇದಾಗಿದ್ದು .  ಈ ಮಿಥ್ಯಾ ದೃಷ್ಟಿಯು   ಭಾರತ , ಕಳೆದ  ಮೂರು ನಾಲ್ಕು ಸಾವಿರ  ವರ್ಷಗಳಿಂದಲೂ  ನೂರಾರು ಸಂಖ್ಯೆಯ ರಾಮಾಯಣಗಳನ್ನು ಬರೆದಿದೆ  ಮತ್ತು  ಪ್ರತಿಯೊಂದು ರಾಮಾಯಣವೂ  ಬಗೆಬಗೆಯ  ಲೋಕ ದೃಷ್ಟಿಯನ್ನು  ಪ್ರಕಟಿಸುತ್ತಿವೆ ಎನ್ನುವುದನ್ನು  ಒಪ್ಪಿಕೊಳ್ಳಲು  ಸಿದ್ದವಿಲ್ಲ.

 

ಕುವೆಂಪು ಅವರು ತಮ್ಮ  ರಾಮಾಯಣದ ಬಗ್ಗೆ ಮಾತಾಡುತ್ತ ಹೇಳಿದ   ‌ '' ನನ್ನ ರಾಮಾಯಣ , ರಾಮಾಯಣೋದ್ಧಾರವೂ ಹೌದು ,  ರಾಮೋದ್ಧಾರವೂ ಹೌದು '' ಎಂಬ ಮಾತುಗಳನ್ನು   ನಾವು  ರಾಮ ಮತ್ತು ರಾಮಾಯಣ ಪರಂಪರೆಯನ್ನು    ಅರ್ಥಮಾಡಿಕೊಳ್ಳುವಾಗ  ನೆನಪಿಟ್ಟುಕೊಳ್ಳಬೇಕಾಗುತ್ತದೆ‌.

ಪ್ರೊ  ಕೆ. ಎಸ್. ಭಗವಾನ್  ಅವರು ಎಲೆಕ್ಷನ್ ಕಾಲದಲ್ಲಿ   ಹಿಂದೂಗಳ ಆರಾಧ್ಯ  ದೈವ ರಾಮನ ಬಗ್ಗೆ  ಹೀನಾಯವಾಗಿ ಮಾತಾಡಿ  , ಹಿಂದೂಗಳ ಓಟು   ಬಿಜೆಪಿಯತ್ತ ಹೋಗಲು ಸಹಾಯ ಮಾಡ್ತಾರೆ.ಶಾಂತಿ‌ ಕಾಲದಲ್ಲಿ ‌   , ಬಿಜೆಪಿ  ಪರ  ಅಭಿಪ್ರಾಯ ರೂಪಿಸುವ  ಮಾಡುವ ಕೈಂಕರ್ಯಕ್ಕೆ ಕೈಜೋಡಿಸುತ್ತಾರೆ.

ವಿಚಾರವಾದ    ಹಿಂದೆ ಸರಿದು , (  ಹಾಗೆ ನೋಡಿದರೆ ಈ  ಪಾರ್ಶ್ವ ದೃಷ್ಟಿ ಯನ್ನು  ವಿಚಾರವಾದವೆಂದೂ  ಕರೆಯಲಾಗುವುದಿಲ್ಲ‌)    ಕೋಮುವಾದ ಜನ ಸಾಮಾನ್ಯನ ತಲೆ ಹಿಡಿದು  , ಅವನ ಮತಗಳನ್ನು  ಲೂಟಿಹೊಡೆಯುತ್ತ ಪರಮಾದಿಕಾರ  ಗ್ರಹಣ ಮಾಡಿರುವ ಕಾಲದಲ್ಲಿ  , ನಮ್ಮ   ವಿಚಾರವಾದಿಗಳಿಗೆ   ನಡೆ ನುಡಿ ಹೇಗಿರಬೇಕೆಂಬ ಪರಿಜ್ಞಾನವೇ ಇಲ್ಲ

ಏನು ಮಾಡುವುದು !

ಪ್ರೊ ಭಗವಾನ್  ಎನ್ನುವುದೀಗ  ಒಬ್ಬ ವ್ಯಕ್ತಿಯಾಗಿ  ಉಳಿದಿಲ್ಲ‌.‌, ಪ್ರಗತಿಪರ , ಜಾತ್ಯತೀತ  , ಲಿಬರಲ್ ಎಂಬೆಲ್ಲ ಹೆಸರುಗಳಿಂದ ಗುರುತುಗೊಳ್ಳುವ  ಮತ್ತು  ಇದೇ ಮಾದರಿಯ  ತಿಳುವಳಿಕೆಯನ್ಬು ' ವೈಚಾರಿಕತೆ'. ಎಂಬ   ಆತ್ಮ ವಿಶ್ವಾಸದಲ್ಲಿ   ಚಲಾವಣೆಗೆ  ಬಿಡಲು   ಹೆಣಗುತ್ತಿರುವ  ( ಅವರ ಕಾಳಜಿಯ ಪ್ರಾಮಾಣಿಕತೆಯನ್ನು  ಪ್ರಶ್ನಿಸಲಾಗುವುದಿಲ್ಲವಾದರೂ , ಅದರ ಪರಿಣಾಮವನ್ನರಿಯದ ) ಹಿಂದೂ  ಸಮುದಾಯದ. ಬುದ್ದಿಜೀವಿಗಳ  ಸಂಕೇತ

ಕಲಾಕೃತಿಯೊಂದನ್ನು   ಹಿಡಿದುಕೊಂಡು , ಅದನ್ನು ಇತಿಹಾಸದ ದಾಖಲೆಯೋ ಎಂಬಂತೆ ,  ಅದರಲ್ಲಿನ ಪಾತ್ರಗಳ  ದಿನಚರಿ ಪ್ರಸ್ತಾಪಿಸುತ್ತ  ಪಾತ್ರಗಳ  ಚಾರಿತ್ರ್ಯ ಮತ್ತು   ನಡೆನುಡಿ , ಸತ್ಯಾಸತ್ಯತೆ ಹುಡುಕುವವರು  , ಹಲವು ದಶಕಗಳ ಕಾಲ  ಸಾಹಿತ್ಯ ಬೋಧಿಸುವ ಪ್ರಾಧ್ಯಾಪಕರಾಗಿದ್ದರು ಎಂಬುದು ವಿಷಾದದ  ವಿಷಯ . ಇದು ಸಾಹಿತ್ಯ ಕೃತಿಯೊಂದನ್ನು  ( ಅಥವಾ ಯಾವುದೇ ಕಲಾ ಪ್ರಕಾರದ ಕೃತಿಯನ್ನಾಗಲಿ ) ಓದುವ , ಗ್ರಹಿಸುವ ಮತ್ತು ಬೆಲೆಕಟ್ಟುವ ತಪ್ಪು ಕ್ರಮ.

ತಮ್ಮ ಜೀವಿತಾವಧಿಯಿಡೀ  ರಾಮಾಯಣ ( ಅದೂ , ವಾಲ್ಮೀಕಿ ರಾಮಾಯಣವೊಂದನ್ನೇ )  ಮತ್ತು ರಾಮನನ್ನು ಬಟ್ಟೆ ಹಿಂಡಿದಂತೆ ಹಿಂಡುತ್ತಿರುವ   ಪ್ರೊ ಭಗವಾನ್ ಅವರಿಗೆ ರಾಮಾಯಣ  ಇತಿಹಾಸ ಅಲ್ಲ. Documented history ಅಥವಾ ರಾಮನ Biography ಅಲ್ಲ ಅನ್ನುವ ಅರಿವಿಲ್ಲದೆ ಇರುವುದು  ವಿಷಾದಕರ .

ಪ್ರೊ ಭಗವಾನ್  ಅವರು  ವಾಲ್ಮೀಕಿ  ರಾಮಾಯಣ ಮತ್ತು ಅಲ್ಲಿನ ರಾಮನನ್ನು ಹಿಡಿದುಕೊಂಡಿರುವುದು , ಮಾಸ್ತಿಯವರು   ಕುವೆಂಪು ಅವರ ' ಶೂದ್ರ ತಪಸ್ವಿ " ನಾಟಕದ ಬಗ್ಗೆ ‌.

" ಹಳೆಯ ಪುರಾಣಗಳ ಬಗ್ಗೆ  ಎಷ್ಟೇ ಬರೆದರೂ  ಹಳೆಯ ಗೀರು ಹಾಗೇ ಉಳಿದೇ ಉಳಿಯುತ್ತದೆ‌, ಹೊಸ  ಕಾಲದ ಸತ್ಯವನ್ನು ಹೇಳಲು ಹೊಸ ಕತೆಯನ್ನೇ  ಬರೆಯಬೇಕು . ಯಾರದೋ ತಳಹದಿಯ  ಮೇಲೆ ನನ್ನ ಮನೆ ಕಟ್ಟಲು ಹೊರಡುವುದು  ಸರಿಯಲ್ಲ " ಎಂಬ ಅಸಹನೆಯ ಟೀಕೆಯ ಮೂಲಕ ಎರಗಿ , ಕಾವ್ಯವನ್ನು  (ರಾಮಾಯಣವನ್ನು )  ಇತಿಹಾಸದಂತೆ ನೋಡಿದ  ವಿದ್ಯಮಾನ  ನೆನಪಾಗುತ್ತದೆ ..