ಅಂಚಿನ ಜನಗಳ ಆಜನ್ಮ ಬಂಧು “ ಮುಚೌ”

ನನ್ನ ಮೂವತ್ತು ವರ್ಷಗಳ ಕಾಲದ ಈ ಎನ್ಜಿಓಗಳ ಒಡನಾಟದಲ್ಲಿ ನಾನು ಗಳಿಸಿದ್ದು ಆಸ್ತಿಯನ್ನಲ್ಲ, ಹಣವನ್ನಲ್ಲ; ಜನರ ಪ್ರೀತಿ, ಅಪಾರ ಜ್ಞಾನ ಮತ್ತು ಅನುಭವವನ್ನು. ಇದಕ್ಕಿಂತ ಇನ್ನೇನು ಬೇಕು’’ ಎನ್ನುತ್ತಾರೆ ಮನುಷ್ಯಪ್ರೇಮಿ ಮುಚೌ.

ಅಂಚಿನ ಜನಗಳ ಆಜನ್ಮ ಬಂಧು “ ಮುಚೌ”

 

ವ್ಯಕ್ತಿ-ವ್ಯಕ್ತಿತ್ವ

ಬಸು ಮೇಗಲಕೇರಿ

     ಅದು 1994, ಉರ್ದು ವಾರ್ತೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಹಿಂದು-ಮುಸ್ಲಿಂ ಗಲಭೆಯಾಗಿತ್ತು. 25 ಮಂದಿ ಸತ್ತು, 150 ಜನ ಗಾಯಗೊಂಡು, ಲೆಕ್ಕವಿಲ್ಲದಷ್ಟು ಆಸ್ತಿ-ಪಾಸ್ತಿ ಲೂಟಿಯಾಗಿತ್ತು. ಅಂದಂದಿನ ದುಡಿಮೆ ನೆಚ್ಚಿ ಬದುಕುವ ಬಡವರ ಮನೆ-ಅಂಗಡಿಗಳು ಲೂಟಿಗೊಳಗಾಗಿ, ಸಾವು-ನೋವಿಗೆ ತುತ್ತಾಗಿ ಜನ ಕಂಗಾಲಾಗಿದ್ದರು. ನಗರ ಪ್ರಕ್ಷುಬ್ಧಗೊಂಡಿತ್ತು. ಅದು ರಾಜ್ಯಕ್ಕೂ ಹಬ್ಬುವ ಆತಂಕವಿತ್ತು.

  ಆ ಸಂದರ್ಭವನ್ನು ನೆನಪು ಮಾಡಿಕೊಂಡ ಮುನಿಚೌಡಪ್ಪ, ‘’ಡಿಗ್ರಿ ಮುಗಿದಿತ್ತು, ಆಗತಾನೆ ನೀನಾಸಂ ಡಿಪ್ಲಮೋ ಮುಗಿಸಿ ಬಂದಿದ್ದೆ, ‘ಪೀಪಲ್ ಟ್ರೀ’ ಎಂಬ ಎನ್ಜಿಓಗೆ ಸೇರಿದ್ದೆ, ಪ್ರಕ್ಷುಬ್ಧ ಪ್ರದೇಶಗಳ ಜನರ ನಡುವೆ ಕೆಲಸ ಮಾಡಲು ನಿಯೋಜನೆಗೊಂಡಿದ್ದೆ. ‘ಆಕ್ಸ್ಫಾಂ ಇಂಡಿಯಾ’ ಎಂಬ ಸಂಸ್ಥೆ ‘ಪೀಪಲ್ ಟ್ರೀ’ಗೆ ಫಂಡಿಂಗ್ ಮಾಡಿತ್ತು. ನಾವು, ಕೋಮುಗಲಭೆ ಪೀಡಿತ ಪ್ರದೇಶಗಳ ಸಂತ್ರಸ್ತ ಜನರನ್ನು ಗುರುತಿಸಿ, ನಿತ್ಯದ ಬದುಕಿಗೆ ಬೇಕಾದ ಅಕ್ಕಿ, ಬೇಳೆ, ಎಣ್ಣೆಯಂತಹ ಅಗತ್ಯ ವಸ್ತುಗಳನ್ನು ನೀಡುತ್ತಿದ್ದೆವು. ಜೊತೆಗೆ ನೊಂದ ಜನರಿಗೆ ಸಾಂತ್ವನ ಹೇಳುತ್ತಾ, ಮತೀಯ ಸೌಹಾರ್ದತೆ ಬಗ್ಗೆ ತಿಳಿಸಿಕೊಡುತ್ತಿದ್ದೆವು. ಬೆಂಗಳೂರಿನ ವಾಲ್ಮೀಕಿನಗರ, ಪಾದರಾಯನಪುರ, ಟ್ಯಾನರಿ ರಸ್ತೆಗಳಂತಹ ಕೋಮು ಪ್ರಕ್ಷುಬ್ಧ ಪ್ರದೇಶಗಳಲ್ಲಿ ಶಾಂತಿಯ ಹಬ್ಬ, ಎಲ್ಲಾ ಧರ್ಮೀಯರು ಒಂದುಗೂಡಿ ಸೌಹಾರ್ದಯುತವಾಗಿ ಬಾಳಲು ಅನುಕೂಲವಾಗುವಂತಹ ವಾತಾವರಣ ನಿರ್ಮಾಣ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಮಾಡುತ್ತಿದ್ದೆ,’’ ಎಂದರು.

      ಈಗ, ಹಿಂತಿರುಗಿ ನೋಡಿದರೆ, ಬರೋಬ್ಬರಿ ಮೂವತ್ತು ವರ್ಷಗಳ ಕಾಲ ಅಂತಹ ದಿಕ್ಕೆಟ್ಟ ದುರ್ಬಲ ಬಡವರೊಂದಿಗೇ ಬೆರೆತು ಬದುಕಿರುವ ಮುನಿಚೌಡಪ್ಪ, ‘’ಮಾಡಿದ ಕೆಲಸದಲ್ಲಿ ಸಮಾಧಾನವಿದೆ, ಸಾಕು,’’ ಎನ್ನುವ ಸಮಾಜ ಜೀವಿ.

      53ರ ಹರೆಯದ ಮುಚೌ (ಗೆಳೆಯರಿಟ್ಟ ಹೆಸರು) ಊರು ಕನಕಪುರ ತಾಲೂಕಿನ ಮಳಗಾಳು. ಅಪ್ಪ ಕರ್ನಾಟಕ-ತಮಿಳುನಾಡಿನ ಗಡಿ ಭಾಗದವರು, ಅಮ್ಮ ಕನಕಪುರದವರು. ಇವರಿಗೆ ನಾಲ್ಕು ಮಕ್ಕಳು. ಮನೆ ಕಡೆ ಸ್ಥಿತಿವಂತರಲ್ಲ, ಕೃಷಿಯಿಂದ ಕುಟುಂಬ ನಿಭಾವಣೆ ಸಾಧ್ಯವಿಲ್ಲವೆನಿಸಿದಾಗ ಕನಕಪುರದ ರೇಷ್ಮೆ ಕಕೂನ್ ಮಾರ್ಕೆಟ್ ಬಳಿ ಹೋಟೆಲ್ ತೆರೆದರು. ಅದಕ್ಕೆ ರೈತರು, ಕೂಲಿ ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಸ್ಥರೇ ಗಿರಾಕಿಗಳು. ಪ್ರತಿದಿನ ಬೆಳಗಿನ ಜಾವ 3ಕ್ಕೆ ಎದ್ದು, ಹೋಟೆಲಿನಲ್ಲಿ ಬಾಲಕಾರ್ಮಿಕನಾಗಿ ದುಡಿಯುತ್ತಲೇ, ಕರಿಯಪ್ಪನವರ ವಿದ್ಯಾ ಸಂಸ್ಥೆಯಲ್ಲಿ ಓದಿ ಪದವಿ ಪಡೆದ ಮುಚೌಗೆ, ಸರ್ಟಿಫಿಕೇಟ್ ನೆಪದಲ್ಲಿ ಕೆಲಸ ಗಿಟ್ಟಿಸುವುದು ಇಷ್ಟವಿರಲಿಲ್ಲ. ಇವರ ಮನದಿಂಗಿತ ಅರಿತವರಂತೆ ಅಮ್ಮ, ಇವರ ಸರ್ಟಿಫಿಕೇಟ್ಗಳನ್ನು ಪೇಪರ್ ಎಂದು ಭಾವಿಸಿ ಇಡ್ಲಿ ಕಟ್ಟಿಕೊಟ್ಟಿದ್ದರು.

     1993ರಿಂದ 2023ರವರೆಗೆ, ಮೂವತ್ತು ವರ್ಷಗಳಲ್ಲಿ ಸ್ಥಳೀಯ ಎನ್ಜಿಓ(ಸರ್ಕಾರೇತರ ಸಂಸ್ಥೆ)ಗಳಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದ ಸುಮಾರು 15 ಸಂಸ್ಥೆಗಳಲ್ಲಿ ಮುಚೌ ಕೆಲಸ ಮಾಡಿದ್ದಾರೆ. ಅವರಾರೂ ಸರ್ಟಿಫಿಕೇಟ್ ಕೇಳದೆ, ಅನುಭವ, ದಕ್ಷತೆ ಮತ್ತು ನಿಷ್ಠೆ ನೋಡಿ ಕೆಲಸ ಕೊಟ್ಟಿದ್ದಾರೆ. ಕೆಲಸ ನಿರ್ವಹಿಸಿದ ಸಂಸ್ಥೆಗಳಿಂದ ಸೈ ಎನಿಸಿಕೊಂಡಿದ್ದಾರೆ. ಅಂಚಿನ ಜನಗಳ ಆತ್ಮೀಯ ಬಂಧುವಾಗಿದ್ದಾರೆ. ಹತ್ತಾರು ಕ್ಷೇತ್ರಗಳ ಜ್ವಲಂತ ಸಮಸ್ಯೆಗಳ ಸಂಪನ್ಮೂಲ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

      ಮುಚೌ ಸೇರಿದ ಸಂಸ್ಥೆಗಳು, ನಿರ್ವಹಿಸಿದ ಕ್ಷೇತ್ರಗಳ ವ್ಯಾಪ್ತಿ, ಉದ್ದೇಶ ಮತ್ತು ಗುರಿ ವಿಶಿಷ್ಟವಾಗಿದೆ. ಅವರು ಮೊದಲಿಗೆ ಸೇರಿದ್ದು ‘ಪೀಪಲ್ ಟ್ರೀ’. ಇದು- ಕೋಮು ಗಲಭೆಗೆ ತುತ್ತಾದ ಪ್ರಕ್ಷುಬ್ಧ ಪ್ರದೇಶಗಳ ಜನರಿಗೆ ಸಹಬಾಳ್ವೆಯ ಮಹತ್ವ ತಿಳಿಹೇಳುವ ಕೆಲಸವಾಗಿತ್ತು. ಎರಡನೆಯದು, ‘ಸಿಕ್ರಂ’ ಸಂಸ್ಥೆ. ಇದು ಮಾನವ ಹಕ್ಕುಗಳ ಉಲ್ಲಂಘನೆ ಕುರಿತದ್ದು. ಕಾಡುಗಳ್ಳ ವೀರಪ್ಪನ್ ತಂಡದೊಂದಿಗೆ ಸಂಪರ್ಕವಿದೆ ಎಂಬ ಸುಳ್ಳು ಕಾರಣ ಮುಂದಿಟ್ಟು ಎನ್ಕೌಂಟರ್, ಅತ್ಯಾಚಾರ, ಟಾಡಾ ಕಾಯ್ದೆಯಡಿ ಬಂಧನ, ಕಾನ್ಸಂಟ್ರೇಷನ್ ಕ್ಯಾಂಪ್ ಗಳಿಗೆ ಹಾಕಿ ಚಿತ್ರಹಿಂಸೆಗೊಳಗಾದ ಜನರಿಗೆ ಸಂಬಂಧಿಸಿದ್ದು. ಸುಮಾರು 400 ಜನರನ್ನು ಭೇಟಿ ಮಾಡಿ, ಅವರಿಗಾದ ಅನ್ಯಾಯವನ್ನು ಸತ್ಯಶೋಧನಾ ವರದಿಯಲ್ಲಿ ದಾಖಲಿಸಿ, ಅದನ್ನು ನಿವೃತ್ತ ನ್ಯಾ. ಸದಾಶಿವ ಮತ್ತು ನರಸಿಂಹನ್ ಆಯೋಗದ ಮುಂದಿಟ್ಟು, ಅಮಾಯಕರಿಗೆ ನ್ಯಾಯ ಒದಗಿಸಿಕೊಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಮಧುರೈನ ‘ಪೀಪಲ್ ವಾಚ್’, ‘ಪಿಯುಸಿಎಲ್’, ‘ತಮಿಳುನಾಡು ಪಡಂಗುಡಿ ಮಕ್ಕಳ ಇಯಕಂ’, ‘ಸಿಕ್ರಂ’ ಸಕ್ರಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. ‘’ಸುಮಾರು ಎರಡು ವರ್ಷಗಳ ಕಾಲ ಕಾಡಿನ ಅಂಚಿನ ಜನರೊಂದಿಗೆ ಬೆರೆತು, ಅವರ ಕರುಳಿನ ಕತೆಯನ್ನು ದಾಖಲಿಸಿದ್ದು, ಮತ್ತು ಆ ವರದಿಯಿಂದ ಅವರೆಲ್ಲರಿಗೂ ಸರ್ಕಾರ ಪರಿಹಾರ ಕೊಟ್ಟಿದ್ದು ಬದುಕಿನ ಸಾರ್ಥಕ ಕ್ಷಣ,’’ ಎನ್ನುತ್ತಾರೆ ಮುಚೌ.

      ಆನಂತರ ‘ಸಂರಕ್ಷಾ’ ಸಂಸ್ಥೆ ಸೇರಿದ ಮುಚೌ, 90ರ ದಶಕದ ಮಹಾಪಿಡುಗು ಎಂದೇ ಜಗತ್ತಿನಾದ್ಯಂತ ಕುಖ್ಯಾತಿ ಪಡೆದಿದ್ದ ಎಚ್ಐವಿ(ಏಡ್ಸ್) ಸೋಂಕಿತರೊಂದಿಗೆ ಕೆಲಸ ಮಾಡಿದರು. ಸೋಂಕು ಹರಡುವಿಕೆ ಮತ್ತು ಪೀಡಿತರ ಗುರುತಿಸುವಿಕೆ; ಚಿಕಿತ್ಸೆ ಮತ್ತು ಪುನರ್ವಸತಿಗೆ ಸಂಬಂಧಿಸಿ ಹಿಂದುಳಿದ ಜಿಲ್ಲೆಗಳಾದ ರಾಯಚೂರು, ಗದಗ, ಕೊಪ್ಪಳ, ಹಾವೇರಿ ಜಿಲ್ಲೆಗಳಲ್ಲಿ ಬೀದಿನಾಟಕಗಳು, ಹಾಡುಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಎಚ್ಐವಿ ಪೀಡಿತರ ಬದುಕಿನಲ್ಲಿ ಭರವಸೆ ತುಂಬುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ‘’ಮೂರು ವರ್ಷಗಳ ಈ ಕಾರ್ಯದಲ್ಲಿ ಸಮಾಜಕ್ಕಂಟಿದ ತಪ್ಪು ತಿಳಿವಳಿಕೆ ನಿವಾರಿಸಲು ಶ್ರಮಿಸಿದ್ದು ಸಮಾಧಾನ ತಂದಿತು,’’ ಎನ್ನುತ್ತಾರೆ ಮುಚೌ.

      ಅಂಚಿನ ಜನರಿಗಾಗಿ ಅರ್ಧ ರಾತ್ರಿಯಲ್ಲೂ ಎದ್ದು ಹೋಗುವ ಮುಚೌ ಕೂಡ ಅಂಚಿನಲ್ಲಿಯೇ ಇದ್ದಾರೆ. ಒಂದು ಕೆಲಸ ಹೋದರೆ, ನೂರಾರು ಎನ್ನುವ ಮುಚೌ, ಆನಂತರ ‘ಗ್ರಾಮ ಸ್ವರಾಜ್’ ಸಂಸ್ಥೆ ಸೇರಿದರು. ಇದು ಜರ್ಮನ್ ಟೆಕ್ನಾಲಜಿ ಬಳಸಿಕೊಂಡು ಕೊಳೆಗೇರಿ(ಸ್ಲಂ) ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವ ಮತ್ತು ನೀರು ಮರುಬಳಕೆ ಕುರಿತ ತಂತ್ರಜ್ಞಾನವನ್ನು ತಿಳಿಸುವ ಕೆಲಸ. ನಗರದ ಸ್ಲಂಗಳಲ್ಲಿ ಬದುಕುತ್ತಿದ್ದ ಬಡವರ ಆರೋಗ್ಯ, ಸ್ವಚ್ಛತೆ, ನೈರ್ಮಲ್ಯ ಕುರಿತು ಜಾಗೃತಿ ಮೂಡಿಸುವುದು; ಶೌಚಾಲಯಗಳನ್ನು ನಿರ್ಮಿಸಿ, ನೀರು ಮರುಬಳಕೆಯ ತಂತ್ರಜ್ಞಾನವನ್ನು ಅಳವಡಿಸಿ, ಅವರ ಬದುಕನ್ನು ಹಸನಾಗಿಸುವುದು ಆ ಸಂಸ್ಥೆಯ ಉದ್ದೇಶವಾಗಿತ್ತು. ಎರಡು ವರ್ಷದ ಆ ಕೆಲಸದಲ್ಲಿ ಮುಚೌಗೆ ಬೆಂಗಳೂರಿನ ಹಲವು ಸ್ಲಂಗಳ ಸಾಕ್ಷಾತ್ ಪರಿಚಯವಾಗಿತ್ತು. ಅವರ ಮನೆ ಇವರ ಮನೆಯಾಗಿತ್ತು.

      ಇಷ್ಟಾದರೂ, ಎಲ್ಲೂ ನೆಲೆಗೊಳ್ಳದ ಮುಚೌ, ಮುಂದೆ ‘ಇಕ್ರಾ’ ಸಂಸ್ಥೆ ಸೇರಿದರು. ಈ ಸಂಸ್ಥೆ ಕರ್ನಾಟಕದ ಆಯ್ದ ಹನ್ನೊಂದು ಜಿಲ್ಲೆಗಳಲ್ಲಿ ರೈತರ ಆತ್ಮಹತ್ಯೆ ಕುರಿತು ಅಧ್ಯಯನ ಮಾಡುವುದಾಗಿತ್ತು. ಸುಮಾರು ಎರಡು ವರ್ಷಗಳ ಕಾಲ ಹನ್ನೊಂದು ಜಿಲ್ಲೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಕುಟುಂಬಗಳನ್ನು ಭೇಟಿ ಮಾಡಿ, ಕಾರಣ ಮತ್ತು ಸಮಸ್ಯೆಗಳನ್ನು ವಿವರವಾಗಿ ದಾಖಲಿಸಿದರು. ‘’ದುಡಿಯುವ ಮನೆಯ ಯಜಮಾನ ಆತ್ಮಹತ್ಯೆಗೆ ಒಳಗಾಗಿ, ಎಷ್ಟೋ ಕುಟುಂಬಗಳು ಬೀದಿ ಪಾಲಾಗಿವೆ. ಸರ್ಕಾರದಿಂದ ಯಾವ ಪರಿಹಾರವೂ ದೊರಕದೆ ದಿಕ್ಕೆಟ್ಟ ಸ್ಥಿತಿಯಲ್ಲಿವೆ. ಆದರೆ ಕೃಷಿ ನಂಬಿದ ಕುಟುಂಬಗಳ ಕಷ್ಟ ಕ್ಷೇತ್ರ ಕಾರ್ಯದಲ್ಲಿ ಕರುಳಿಗೆ ಇಳಿಯಿತು. ಕೃಷಿಕರ ಕರಾಳ ಬದುಕು ಮನಸ್ಸನ್ನು ಕಲಕಿತು,’’ ಎನ್ನುತ್ತಾರೆ ಮುಚೌ.

        ರೈತರ ಆತ್ಮಹತ್ಯೆಗಳ ಅಧ್ಯಯನದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ನಂತರ ‘ಇಕ್ರಾ’ ಸಂಸ್ಥೆಯ ಕೆಲಸ ಮುಗಿದಿತ್ತು. ಆನಂತರ ಮುಚೌ ಲೈಂಗಿಕ ಅಲ್ಪಸಂಖ್ಯಾತರ ಸಬಲೀಕರಣಕ್ಕಾಗಿ ಶ್ರಮಿಸುವ ‘ಸಂಗಮ’ ಸೇರಿದರು. ಬೆಂಗಳೂರಿನ ನಾಲ್ಕು ಡ್ರಾಪಿಂಗ್ ಸೆಂಟರ್ ಗಳಲ್ಲಿ ಒಂದಕ್ಕೆ ಮುಚೌ ಮುಖ್ಯಸ್ಥರಾದರು. ಅದು, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುವುದು ಮತ್ತು ಅಂದು ಅತಿಯಾಗಿದ್ದ ಪೊಲೀಸ್ ದೌರ್ಜನ್ಯವನ್ನು ತಡೆದು ಲೈಂಗಿಕ ಅಲ್ಪಸಂಖ್ಯಾತರು ಎಲ್ಲ ನಾಗರಿಕರಂತೆ ಬದುಕುವ ವಾತಾವರಣವನ್ನು ನಿರ್ಮಿಸುವುದಾಗಿತ್ತು. ಅದಕ್ಕೆ ಬೇಕಾದ ಪೂರಕ ತಿಳಿವಳಿಕೆ ತುಂಬುವ, ಕಾನೂನು ನೆರವು ನೀಡುವ ಕಾರ್ಯವನ್ನು ಮುಚೌ ನಿರ್ವಹಿಸಿದರು. ಯೋಜನೆ ನಿರೀಕ್ಷಿತ ಫಲ ನೀಡಿ, ಲೈಂಗಿಕ ಅಲ್ಪಸಂಖ್ಯಾತರೇ ಮುನ್ನಡೆಸುವಲ್ಲಿ ಸಬಲತೆ ಸಾಧಿಸಿದ ಮೇಲೆ ಅಲ್ಲಿಂದ ಹೊರಬಂದರು.

         ಆನಂತರ, ಆರ್.ಎಂ. ಪಾಟೀಲರ ‘ರೆಡ್ಸ್’ ಸಂಸ್ಥೆಯಿಂದ ಕರೆ ಬಂತು. ದೂರದ ತುಕ್ಕಾನಟ್ಟಿನಲ್ಲಿ ಕೆಲಸ. ಅದು ಕೂಡ ಲೈಂಗಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಸಂಸ್ಥೆ. ಲೈಂಗಿಕ ಕಾರ್ಯಕರ್ತೆಯರ ಸಂಘಗಳ ಒಕ್ಕೂಟದ ಸದಸ್ಯೆಯರಿಗೆ ಸಂಘಗಳ ನಿರ್ವಹಣೆ, ಅವರ ಹಕ್ಕುಗಳಿಗಾಗಿ ಹೋರಾಡುವ ಬಗೆಗಿನ ತಿಳಿವಳಿಕೆಯಂತಹ ತಾಂತ್ರಿಕ ಸಲಹೆ ನೀಡುವ ‘ಸಹಭಾಗಿನಿ’ ಸಂಸ್ಥೆಯಾಗಿತ್ತು. ಇದು ರಾಜ್ಯದ 21 ಜಿಲ್ಲೆಗಳಲ್ಲಿ, ಲೈಂಗಿಕ ಕಾರ್ಯಕರ್ತೆಯರಿಗೆ ಸಲಹೆ, ಸೂಚನೆ ನೀಡುವ ಕೆಲಸದಲ್ಲಿ ತೊಡಗಿಸಿಕೊಂಡಿತ್ತು. ಈ ಕೆಲಸ ಮುಗಿಯುತ್ತಿದ್ದಂತೆ, ‘ಪಯಣ’ ಎಂಬ ಸಂಸ್ಥೆಯಲ್ಲಿ ಮುಚೌ ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. ಅದು ಪ್ಯಾಂಟು-ಶರ್ಟು ತೊಡುವ ಲೈಂಗಿಕ ಅಲ್ಪಸಂಖ್ಯಾತರು- ಅಂದರೆ ಹೆಣ್ಣಿನ ಭಾವನೆಯುಳ್ಳ ಗಂಡಸರು ಸೇರಿ ಸಂಘ ಸಂಸ್ಥೆಯನ್ನು ಕಟ್ಟಿಕೊಂಡಿದ್ದರು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಇವರಿಗೇ ಆದ ಸಂಘ-ಸಂಸ್ಥೆಗಳಿದ್ದವು, ಅವರಿಗೆ ಅವರ ಹಕ್ಕುಗಳನ್ನು ತಿಳಿಸಿಕೊಡುವ, ತಾಂತ್ರಿಕ ಸಲಹೆ-ಸೂಚನೆಗಳನ್ನು ನೀಡುವ ಕೆಲಸದಲ್ಲಿ ಮುಚೌ ತೊಡಗಿಕೊಂಡಿದ್ದರು.

     ಮತ್ತೆ ನಿರುದ್ಯೋಗಿಯಾದ ಮುಚೌಗೆ ಅಂತಾರಾಷ್ಟ್ರೀಯ ಸಂಸ್ಥೆಯೊಂದರಿಂದ ಕರೆ ಬಂತು. ಅದು ‘ಜಸ್ಟೀಸ್ ಅಂಡ್ ಕೇರ್’ ಸಂಸ್ಥೆ. ಸಂಕಷ್ಟದಲ್ಲಿರುವ ಹೆಣ್ಣುಮಕ್ಕಳಿಗೆ, ಅದರಲ್ಲೂ ಮಾನವ ಅಕ್ರಮ ಸಾಗಾಣಿಕೆಗೆ ಒಳಗಾದ ಮಕ್ಕಳ ರಕ್ಷಣೆ ಹಾಗೂ ಪುನರ್ವಸತಿಗೆ ಸಂಬಂಧಿಸಿದ್ದು. ʼ’ಅಂತಾರಾಷ್ಟ್ರೀಯ ಮಟ್ಟದ ಬಹಳ ದೊಡ್ಡ ಸಂಸ್ಥೆ, ಹಣಕ್ಕೆ ಕೊರತೆ ಇರಲಿಲ್ಲ. ಒಳ್ಳೆಯ ಸಂಬಳ ಮತ್ತು ಹುದ್ದೆಯನ್ನೇ ನೀಡಿದ್ದರು. ಮೂರು ವರ್ಷಗಳ ಕಾಲ, ಇಡೀ ಸೌತ್ ಇಂಡಿಯಾ ಸುತ್ತಾಡಿದೆ. ನೇಪಾಳಕ್ಕೂ ಹೋಗಿಬಂದೆ. ಮೂರು ಸಾವಿರ ಮಕ್ಕಳನ್ನು ರಕ್ಷಣೆ ಮಾಡಿ, ಅವರವರ ಮನೆಗೆ ತಲುಪಿಸಿದ ಧನ್ಯತೆ ಇದೆ,’’ ಎಂದರು.

     ಇದಾದ ನಂತರ, ‘ಮೈ ಚಾಯ್ಸಸ್ ಫೌಂಡೇಷನ್’ ಎಂಬ ಸಂಸ್ಥೆಯ ಆಪರೇಷನ್ ರೆಡ್ ಅಲರ್ಟ್ ಪ್ರಾಜೆಕ್ಟ್ನ ಕರ್ನಾಟಕದ ಹೆಡ್ ಆದ ಮುಚೌ, 2025ರ ವೇಳೆಗೆ ಆಪರೇಷನ್ ರೆಡ್ ಅಲರ್ಟ್ ಎಲ್ಲೆಲ್ಲಿ ಕಾರ್ಯ ನಿರ್ವಹಿಸುತ್ತಿದೆಯೋ ಅಲ್ಲೆಲ್ಲ ಮಾನವ ಕಳ್ಳಸಾಗಾಣಿಕೆ ಶೂನ್ಯಕ್ಕೆ ಬಂದು ನಿಲ್ಲಬೇಕೆಂಬ ಟಾರ್ಗೆಟ್ನೊಂದಿಗೆ ಕೆಲಸ ಮಾಡುತ್ತಿದ್ದ ಸಂಸ್ಥೆಗಳ ಮೇಲ್ವಿಚಾರಕರಾಗಿದ್ದರು. ಆ ನಿಟ್ಟಿನ್ಲಲಿ ಕಳ್ಳಸಾಗಾಣಿಕೆಗೆ ಸುಲಭದ ತುತ್ತಾದ ಹಳ್ಳಿಗಳನ್ನು ಗುರುತಿಸಿ, ಅವರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಅಧ್ಯಯನ ಮಾಡಿ, ಪಂಚಾಯ್ತಿಗಳ ನೆರವು ಪಡೆದು ಮಾನವ ಕಳ್ಳಸಾಗಾಣಿಕೆಯ ಅಪಾಯಗಳನ್ನು ಕುರಿತು ತಿಳಿವಳಿಕೆ ತುಂಬುವ ಸ್ವಯಂ ಸೇವಾ ಸಂಸ್ಥೆಗಳಿಗೆ ತಾಂತ್ರಿಕ ಸಲಹೆ-ಸಹಾಯ ಕೊಡುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಕಿರುಚಿತ್ರಗಳನ್ನು ಪ್ರದರ್ಶಿಸಿ ಜನರಲ್ಲಿ ಜಾಗೃತಿ ಮೂಡಿಸಿದರು. ಸುಮಾರು ಎರಡು ವರ್ಷಗಳ ಕಾಲ ಕರ್ನಾಟಕದ ಸರಿಸುಮಾರು ಎಲ್ಲ ಹಳ್ಳಿಗಳನ್ನು ಎಡತಾಕಿ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಲ್ಲಿ, ಮಾನವ ಅಕ್ರಮ ಸಾಗಾಣಿಕೆಯನ್ನು ತಡೆಯುವ, ಅದಕ್ಕೆ ಒಳಗಾಗದಂತೆ ಪ್ರತಿರೋಧ ಒಡ್ಡುವ ಆತ್ಮಸ್ಥೈರ್ಯ ತುಂಬುವ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕ್ಕೆ ಬೆಂಬಲವಾಗಿ ನಿಂತರು.

     ಏತನ್ಮಧ್ಯೆ, ಕೇಂದ್ರ ಸರ್ಕಾರದ ಕಾಕದೃಷ್ಟಿಗೆ ಬಿದ್ದು ಅನೇಕ ಎನ್ಜಿಓ ಸಂಸ್ಥೆಗಳಿಗೆ ಬೀಗ ಬಿತ್ತು. ಮತ್ತೆ ಮುಚೌ ನಿರುದ್ಯೋಗಿಯಾದರು. ಆನಂತರ ಮುಚೌ, ‘ಪ್ಲಾಸ್ಟಿಕ್ ಫಾರ್ ಚೇಂಜ್’ ಎಂಬ ಸಂಸ್ಥೆ ಸೇರಿದರು. ಇದರ ಉದ್ದೇಶ, ಸಮುದ್ರಕ್ಕೆ ಪ್ಲಾಸ್ಟಿಕ್ ಸೇರದಂತೆ ತಡೆಯುವುದಾಗಿತ್ತು. ಆ ನಿಟ್ಟಿನಲ್ಲಿ ಮುಚೌ, ಚಿಂದಿ ಆಯುವವರನ್ನು ಗುರುತಿಸಿ, ಅವರಿಗೆ ಬ್ಯಾಗ್, ಟ್ರೈಸಿಕಲ್ ಕೊಡಿಸಿ, ಅವರು ಆಯ್ದ ಪ್ಲಾಸ್ಟಿಕ್ ಪದಾರ್ಥಗಳಿಗೆ ಹೆಚ್ಚಿನ ಹಣ ಸಿಗುವಂತೆ ನೋಡಿಕೊಂಡರು. ಪ್ಲಾಸ್ಟಿಕ್ ಸಮುದ್ರಕ್ಕೆ ಸೇರದಂತೆ, ಚಿಂದಿ ಆಯುವವರ ಬದುಕು ಬಲಗೊಳ್ಳುವಂತೆ ಮಾಡುವ ಕೆಲಸ ನಿರ್ವಹಿಸಿದರು. ಜೊತೆಗೆ ಪ್ಲಾಸ್ಟಿಕ್ ಮರುಬಳಕೆಯಿಂದ ಉದ್ಯೋಗ-ಉತ್ಪನ್ನವನ್ನು ಉತ್ತೇಜಿಸುವಂತಹ ಕಾರ್ಯದಲ್ಲಿ ತೊಡಗಿಸಿಕೊಂಡರು. ಈ ಕೆಲಸ ಸಮುದ್ರ ತೀರವನ್ನು ಅವಲಂಬಿಸಿತ್ತು. ಅಂದರೆ ಚನ್ನೈ, ಪಾಂಡಿಚೆರಿ, ವಿಶಾಖಪಟ್ಟಣ, ಗೋವಾ, ಕನ್ಯಾಕುಮಾರಿ, ಮಂಗಳೂರು, ಕಾರವಾರವನ್ನೊಳಗೊಂಡಿತ್ತು.

     ಮುಚೌಗೊಂದು ಖಯಾಲಿ ಇದೆ. ಸೆಕೆಂಡ್ ಹ್ಯಾಂಡ್ ಬೈಕ್ ಕೊಳ್ಳುವುದು(ಇಲ್ಲಿಯವರೆಗೆ ಹನ್ನೊಂದು ಬೈಕ್ ಕೊಂಡಿದ್ದಾರೆ), ಎರಡು ಮೂರು ವರ್ಷ ಓಡಿಸಿ, ಮಾರುವುದು. ಆರು ಭಾಷೆಗಳನ್ನು ಬಲ್ಲ ಮುಚೌ, ಈ ಸೆಕೆಂಡ್ ಹ್ಯಾಂಡ್ ಬೈಕ್ ನಲ್ಲಿಯೇ ದೇಶದಾದ್ಯಂತ ತಿರುಗಾಡಿದ್ದಾರೆ. ಅದು ಕೊಡುವ ಕಷ್ಟ ಮತ್ತು ಖುಷಿಯನ್ನು ಸಮಾನವಾಗಿ ಸ್ವೀಕರಿಸಿದ್ದಾರೆ. ಒಂದು ಸಂಸ್ಥೆಯಿಂದ ಮತ್ತೊಂದು ಸಂಸ್ಥೆ ಸೇರುವುದನ್ನೂ ಸಮಚಿತ್ತದಿಂದ ಸ್ವೀಕರಿಸಿದ್ದಾರೆ. ಪ್ಲಾಸ್ಟಿಕ್ ರೀಸೈಕ್ಲಿಂಗ್ ಕೆಲಸ ಬಿಟ್ಟ ಮಚೌ, ಆನಂತರ ‘ಅಸೋಸಿಯೇಷನ್ ಆಫ್ ಪೀಪಲ್ಸ್ ವಿಥ್ ಡಿಸಬಿಲಿಟಿ’ ಎಂಬ ಸಂಸ್ಥೆ ಸೇರಿದರು. ಅದು ಸಾರ್ವಜನಿಕ ಸ್ಥಳಗಳ ಪ್ರತಿಯೊಂದು ಕಟ್ಟಡದಲ್ಲಿ ವಿಕಲಚೇತನರಿಗೆ ಓಡಾಡಲು ಅನುಕೂಲವಾಗುವ ರಾಂಪ್‌ , ರೈಲ್ ಗಳ ಕಡ್ಡಾಯ ನಿರ್ಮಾಣಕ್ಕೆ ಒತ್ತಾಯಿಸುವುದಾಗಿತ್ತು. ಶಾಸಕ ಮತ್ತು ಸಂಸದರ ನಿಧಿಯಿಂದ ಈ ಕೆಲಸಗಳನ್ನು ಮಾಡಿಸುವುದು ಮತ್ತು ಸರ್ಕಾರಿ ಕಚೇರಿಗಳ ಕಟ್ಟಡದಲ್ಲಿ ಕಡ್ಡಾಯವಾಗಿ ನಿರ್ಮಾಣವಾಗುವಂತೆ ನೋಡಿಕೊಳ್ಳುವುದು ಈ ಸಂಸ್ಥೆಯ ಕೆಲಸವಾಗಿತ್ತು. ಅದನ್ನು ವಿಕಲಚೇತನರ ರಾಜ್ಯ ಮಟ್ಟದ ಅಕ್ಸೆಸಬಿಲಿಟಿ ಟಾಸ್ಕ್ ಫೋರ್ಸ್ ಮೂಲಕ ಮಾಡಲಾಗಿತ್ತು. ಅದನ್ನು ಸಂಘಟಿಸುವ, ಪ್ರೋತ್ಸಾಹಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಅದು ಆರು ತಿಂಗಳ ನಿಯೋಜನಾ ಕಾರ್ಯವಾಗಿತ್ತು.

       ಇದರ ನಡುವೆಯೇ ನೆದರಲ್ಯಾಂಡ್ ಪ್ರಾಜೆಕ್ಟ್ ವೊಂದಕ್ಕೆ ಕೆಲಸ ಮಾಡಿದ ಮುಚೌ, ‘’ಅದು ಕಡುಬಡವರಿಗೆ ಮನೆ ಕಟ್ಟಿಸಿಕೊಡುವ ಪ್ರಾಜೆಕ್ಟ್. ಸಂಸ್ಥೆ 42 ಸಾವಿರ ಹಣ ಕೊಡುತ್ತಿತ್ತು. ನಾವು ಬಡವರನ್ನು ಗುರುತಿಸಿ, ಅವರು ಕಟ್ಟುವ ಮನೆಗೆ ಬೆಂಬಲವಾಗಿ ನಿಂತು, ಮನೆ ಪೂರ್ಣಗೊಳಿಸಿಕೊಡುತ್ತಿದ್ದೆವು,’’ ಎಂದರು. ಈ ಯೋಜನೆಯ ಮೂಲಕ ನೂರಾರು ಜನರಿಗೆ ಮನೆ ಕಟ್ಟಿಸಿಕೊಟ್ಟ ಮುಚೌ, ತಮಗಾಗಿ ಒಂದು ಸ್ವಂತ ಮನೆ ಬೇಕು ಎಂದು ಯೋಚಿಸಲಿಲ್ಲ. ಇವತ್ತಿಗೂ ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಿರುವ ಮುಚೌ, 2003ರಲ್ಲಿ ತಮ್ಮಂತೆಯೇ ಎನ್ಜಿಓನಲ್ಲಿ ಕೆಲಸ ಮಾಡುತ್ತಿದ್ದ ಕಾಂಚನಾರನ್ನು ಮದುವೆಯಾದರು. ಕಾಂಚನಾರ ಮೊದಲ ಪತಿಗೆ ಜನಿಸಿದ್ದ ಇಬ್ಬರು ಹೆಣ್ಣುಮಕ್ಕಳನ್ನು ತಮ್ಮ ಮಕ್ಕಳೆಂದೇ ಭಾವಿಸಿ, ವಿದ್ಯಾಭ್ಯಾಸ ಕೊಡಿಸಿ, ಮದುವೆ ಮಾಡಿಕೊಟ್ಟರು. ತಮಗೆ ಜನಿಸಿದ ಒಬ್ಬ ಮಗನಿಗೆ ಚೆಗುವೆರಾ ಎಂದು ಹೆಸರಿಟ್ಟರು. ಈಗ ಆತ ಪಿಯುಸಿ ಓದುತ್ತಿದ್ದಾನೆ.

     ‘’ನೀನಾಸಂನಿಂದ ಹೊರಬಂದಾಗ ರಂಗಭೂಮಿ, ಸಿನೆಮಾಕ್ಕೆ ಹೋಗಬಹುದಿತ್ತು. ಆದರೆ ಹೆಸರು ಮಾಡುವವರೆಗೂ ಕಾಯಬೇಕಾಗಿದ್ದ ಕ್ಷೇತ್ರ ಬಿಟ್ಟು, ದುಡಿಮೆಯ ದಾರಿ ಹಿಡಿದೆ’’ ಎನ್ನುವ ಮುಚೌ, ಲಂಕೇಶರ ಅಪ್ಪಟ ಅಭಿಮಾನಿ. ‘’ಸರ್ಕಾರ, ಸಮಾಜವನ್ನು ನೋಡುವ ದೃಷ್ಟಿಕೋನ ಕಲಿಸಿದ್ದೇ ಪತ್ರಿಕೆ. ಅದನ್ನು ಓದಿದ ಕಾರಣಕ್ಕೆ ಬಡವರ ಪರ ಕೆಲಸ ಮಾಡುವಂತಾಯಿತು, ಪ್ರಗತಿರಂಗದ ಕಾರ್ಯಕರ್ತನಾಗಿದ್ದೆ, ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದೆ,’’ ಎನ್ನುವುದನ್ನು ಮರೆಯುವುದಿಲ್ಲ.

    ಈಗ ‘ಪ್ರಕೃತಿ’ ಎಂಬ ಸಂಸ್ಥೆ ಸೇರಿದ್ದಾರೆ. ಇದು ಎಲ್ಲ ಹೆಣ್ಣುಮಕ್ಕಳಿಗೂ ಸುರಕ್ಷಿತ ಮತ್ತು ಮುಕ್ತವಾಗಿರುವ ಜಗತ್ತನ್ನು ನಿರ್ಮಿಸುವುದಕ್ಕೆ ಸಂಬಂಧಿಸಿದ್ದು. ಈ ಬಗ್ಗೆ ಹೆಚ್ಚಿಗೆ ಹೇಳಿಕೊಳ್ಳಲು ಇಷ್ಟಪಡದ ಮುಚೌ, ‘‘ಕೇಂದ್ರ ಸರ್ಕಾರ ಎನ್ಜಿಓಗಳ ಬಗ್ಗೆ ತಳೆದ ನಿಲುವು ಸರಿಯಲ್ಲ. ಕೆಲವು ಕಪಟ ಸಂಸ್ಥೆಗಳಿರಬಹುದು, ಆದರೆ ಹೆಚ್ಚಿನವು ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಸೌಲಭ್ಯಗಳನ್ನು ಜನರಿಗೆ ತಿಳಿಸುವ, ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಜನಪರ ಸಂಸ್ಥೆಗಳು. ಅಂಚಿಗೆ ತಳ್ಳಲ್ಪಟ್ಟ ಅಸಹಾಯಕರ ಪರವಾಗಿ ಕೆಲಸ ಮಾಡುವ ಸಂಸ್ಥೆಗಳು. ನನ್ನ ಮೂವತ್ತು ವರ್ಷಗಳ ಕಾಲದ ಈ ಎನ್ಜಿಓಗಳ ಒಡನಾಟದಲ್ಲಿ ನಾನು ಗಳಿಸಿದ್ದು ಆಸ್ತಿಯನ್ನಲ್ಲ, ಹಣವನ್ನಲ್ಲ; ಜನರ ಪ್ರೀತಿ, ಅಪಾರ ಜ್ಞಾನ ಮತ್ತು ಅನುಭವವನ್ನು. ಇದಕ್ಕಿಂತ ಇನ್ನೇನು ಬೇಕು’’ ಎನ್ನುತ್ತಾರೆ ಮನುಷ್ಯಪ್ರೇಮಿ ಮುಚೌ.

(ಸೌಜನ್ಯ:ಈದಿನ.ಕಾಮ್ )