ನದಿಯ ರೂಪಕದ ದಾರಿ
ಕಾವ್ಯ
ಡಾ.ವೆಂಕಟೇಶ್ ನೆಲ್ಲುಕುಂಟೆ
ನಿನ್ನೆ ಅಲ್ಲ ಮೊನ್ನೆ
ಬುದ್ಧ ಸಿಕ್ಕಿದ್ದ
ಬದಲಾಗಿದ್ದೇನೂ ಕಾಣಲಿಲ್ಲ
ಕಣಿವೆಯೊಳಗುದುರುವ ಪುಡಿ ಕಲ್ಲು ನಾನು
ಕಡಲ ನಡುವಿನ ದೀರ್ಘನದಿ ಅವನು
ಗುರುವೇ
ಜೀವನ ಅಂದರೇನು?
ಮೆಲ್ಲಗೆ ನಕ್ಕ
ಧ್ಯಾನಿಸಿ ನುಡಿದ
'ನದಿಯೊಂದರ ಬಿಂದು ನೋಡು
ಕಡೆಗೆ ಅಗಾಧ ಸಿಂಧುವನ್ನು'
ತೊಟ್ಟಿಕ್ಕುವ ಬಿಂದುಗಳು
ಕೂಸಿನ ಕೊನರು ಹೆಜ್ಜೆಗಳಂತೆ
ತೀವ್ರವಾದೊಡನೆ
ಕುಣಿವ ಗೆಜ್ಜೆಗಳಂತೆ
ಬಾಚಿ ಕೊಳೆ ಕಸ
ಹಳ್ಳಿ ಹಾಡಿಗಳ ತೊಳೆದು
ಕೆಂಪಗಾಗುವ ಮೊದಲು
ನೂರಾರು ಮಾಲೆಗಳು
ಮಾಲೆಗೊಂದೊಂದು ನೆನಪುಗಳು
ಬಿದ್ದದ್ದು ಎದ್ದದ್ದು
ಅಮ್ಮನ ಎದೆ ಕಣಿವೆಯೊಳಗೆ ಹುದುಗಿ ಕುಳಿತದ್ದು
ಬಿಕ್ಕಳಿಸಿ ತೂಗಿ ತೊನೆದದ್ದು
ನದಿಗೂ ನೆನಪುಗಳಿವೆ
ಬೊಗಸೆ ಬೋಗುಣಿಯಲ್ಲಿ
ಬಣ್ಣ ಬಣ್ಣದ ಮೀನು
ಕಚಗುಳಿ ಇಟ್ಟು
ಚಿತ್ತಾರ ಬರೆದಂತೆ
ಮುಂದಕ್ಕೆ ನಡೆದೆ..
ಕೆಂಪನೆ ಕೆನ್ನೀರು
ಬೆದೆ ಬಂದ ಆನೆ
ಸಣ್ಣ ಪುಟ್ಟದ್ದೆಲ್ಲ ಚಿಂದಿ ಚಿಂದಿ
ಎಡಕ್ಕೆ ಬಡಿದ ಅಲೆ ಬಲಕ್ಕೆ
ಬಲಕ್ಕೆ ಬಡಿದದ್ದೂ ಹಾಗೆ..
ಎಡ ಬಲಗಳಿಲ್ಲಿ ನೀರಿನಂತೆ
ದಡ ಮೀರಿ ಹೋಗುವ ಉತ್ಸಾಹಕ್ಕೇನೂ ಕಮ್ಮಿ ಇಲ್ಲ
ಭೋರ್ಗರೆತ ತಕಧಿಮಿತ
ಅಪ್ಪ ಅಮ್ಮನ ಮಾತು ಕೇಳಿದ್ದೆಲ್ಲಿ?
ಗಟ್ಟಿ ಜಘನದ ಹುಡುಗಿ ಬರಲೇಬೇಕು
ತಡೆದು ನಿಲ್ಲಿಸಬೇಕು ಬೆತ್ತಲೆ,
ಅಪಾಪೋಲಿ
ಆಕಾಶಕ್ಕೇರುವ ಹುಸಿ ಕನಸಿಗೊಂದು ಕಟ್ಟೆ ಕಟ್ಟಬೇಕು
ನಿಂತೀತೆ?
ಕಟ್ಟೆ ಒಡೆದು ಕೋಡಿ ಹರಿದು
ಕಡಲಿಗೇರಲೆ ಬೇಕು
ಶಿಲುಬೆಯಂತೆ
ನಗರ ಬಂತು;
ಬಣ್ಣ ಬಣ್ಣ
ಪ್ಲಾಸ್ಟೀಕು ಮಚ್ಚೆ
ಹೆಣ ತೇಲುವ ಹಚ್ಚೆ
ಬುರುಗು ನೊರೆ
ಕುಡಿದದ್ದು ಹಾಲೊ ಹಾಲಾಹಾಲವೊ
ಎದೆ ಮಾರಿದ ಮಧ್ಯವಯಸ್ಕ
ಪೊಲ್ಲಮೆಯಾದರೂ
ನಲ್ಲೆ ಇರಲೆನ್ನುವ ವಿಟ
ಮಹಾನಟ
ನಾರುತ್ತಿದ್ದರೂ
ನೆನಪಿನ ಅಮಲಲ್ಲಿ ತೇಲುವ
ಸಂಸ್ಕೃತಿ ಪ್ರತಿಪಾದಕ
ಮುಂದೊಂದು ಅಡವಿ
ಕೊಳೆತ ನೀರಿಗೆ
ಉದುರಿದ ಹೊಂಗೆ
ಸಂಪಿಗೆ ಮಲ್ಲಿಗೆ
ಜಾಲರಿ ಮಿಲ್ಡೆ ಕಕ್ಕೆ
ಧೂಪದಾರತಿ ಬಿಕ್ಕೆ
ಸತ್ತ ದನದ ದಟ್ಟದೊಳಗೆ
ನುಗ್ಗಿ ಬಂದ ಹಾವು
ಅತ್ತರ ಮಜ್ಜನ ಮಾಡಿದಂತೆ
ನದಿ ಹರಡುತ್ತಾ ಹೋಯ್ತು
ಬೃಹನ್ಮೊಲೆಗಳ ಮುದುಕಿ ತೊಗಲಿನಂತೆ
ಪೈಲ್ವಾನನ ಸೋತ ತೋಳುಗಳಂತೆ
ಭತ್ತ ಬಂಗಾರ ತಲೆ ದೂಗಿ ವಂದಿಸಿತು
ಕಡಲು ಕಾಣುತ್ತಿದೆ ನೀಲಿ
ಸೇರಲಾರೆನಯ್ಯೊಯ್ಯೊ
ಒಲ್ಲೆ ಒಲ್ಲೆ
ತಲೆಯಲ್ಲಾಡಿಸುವ ಮುದುಕಿ
ಅಳಿವೆ ಬಂತು
ಒದೆಯುತ್ತಿದೆ ಕಡಲು
ಪಾಪದೆಲ್ಲ ಕೊಳೆ ಮನೆಯಾಚೆ ಬಿಡುವಂತೆ
ಮನಸ್ಸೇನ ಮಾಡುವುದು?
ಲೀನವಾಯ್ತು
ನೀಲಿಯಾಯ್ತು
ಕೃಷ್ಣ ನೀಲಿ
ಕಪ್ಪುಗಟ್ಟಿದ ಕಾಳಿ ನೀಲಿ
ಕುಣಿವ ಬೇಡರ ಹುಡುಗ
ಶಿವನೂ ನೀಲಿ
ಬಿಳಿತನಕೆ ಹಂಬಲಿಸಿ ರಾಮನೂ ನೀಲಿ
ಮುಗಿಲು ಹೆಪ್ಪುಗಟ್ಟಿದೆ ಈಗ ರಕ್ತ ನೀಲಿ
ಗೊತ್ತು ಕೂರುತ್ತಿದೆ ನೀಲಿ ಚಿತ್ತದೊಳಗೆ
ಹಿಂದೆ ನೋಡಿದರೆ ಬುದ್ಧನಿಲ್ಲ.