“ ಈಡೇರದ ಭರವಸೆಗಳು, ಉಲ್ಬಣಿಸುತ್ತಿರುವ ಕನ್ನಡ ಶಾಲಾ ಸಮಸ್ಯೆಗಳು”
ಕೂಡಲೇ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಜರುಗಿಸಬೇಕೆಂದು ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ನ್ಯಾಯಾಲಯ ಎಚ್ಚರಿಕೆ ನೀಡಿದ್ದರೂ ಸರ್ಕಾರ ಒಂದು ವರ್ಷದಿಂದ ಈ ಹುದ್ದೆಗಳ ಭರ್ತಿಗೆ ಅನುಮತಿ ನೀಡದಿರುವುದು ದುರದೃಷ್ಟಕರ ಸಂಗತಿ. ಆದೇಶ ಪಾಲಿಸುವ ಬದಲು ನ್ಯಾಯಾಲಯ ನೀಡಿರುವ ಆದೇಶವೇ ಸರಿಯಿಲ್ಲ, ಕೂಡಲೇ ಈ ಆದೇಶವನ್ನು ರದ್ದು ಪಡಿಸಬೇಕೆಂದು ಮೇಲ್ಮನವಿಯನ್ನು ದಾಖಲಿಸಿ ವೃಥಾ ಕಾ¯ಹರಣ ಮಾಡುತ್ತಿದೆ. ಪ್ರಾಥಮಿಕ/ಪ್ರೌಢಶಿಕ್ಷಣದ ಬಗ್ಗೆ ಸರ್ಕಾರ ತಾಳಿರುವ ಬೇಜವಾಬ್ದಾರಿ ವರ್ತನೆ ಸೂಕ್ತವಲ್ಲ.
ಚಿಂತನೆ
ದೇವರಾಜಯ್ಯ
ಸಮಸ್ಯೆ-ಪರಿಹಾರ ಇದೊಂದು ಪ್ರಾಕೃತಿಕ ನಿಯಮ. ಯಾವುದೇ ಸಮಸ್ಯೆಗಳು ಉದ್ಭವಿಸಿದಾಗ ತಕ್ಷಣವೇ ಪರಿಹಾರ ಸಿಗಬೇಕು. ಇಲ್ಲವಾದಲ್ಲಿ ಅಥವಾ ವಿಳಂಬವಾದಷ್ಟೂ ಸಮಸ್ಯೆಗಳು ಉಲ್ಬಣಗೊಂಡು, ಸಾಮಾಜಿಕ ಆವಾಂತರಕ್ಕೆ ಕಾರಣೀ ಭೂತವಾಗುವುದು ಸತ್ಯ. ಇದು ಎಲ್ಲಾ ಕ್ಷೇತ್ರಕ್ಕೂ ಅನ್ವಯ. ಕರ್ನಾಟಕದಲ್ಲಿ ಕನ್ನಡ ಭಾಷೆೆ, ಕನ್ನಡ ಶಾಲೆಗಳ ಅಭಿವೃದ್ದಿಗೆ ಮಾರಕವಾಗಿರುವ ದೊಡ್ಡ ಸಮಸ್ಯೆಯೆಂದರೆ ಶಿಕ್ಷಕರ ಕೊರತೆ. ಇದರಿಂದ ಶಿಕ್ಷಣ ಕ್ಷೇತ್ರವೇ ಆವಾಂತರಕ್ಕೆ ಸಿಲುಕಿದೆ. ಶಿಕ್ಷಣವೇ ಸರ್ವಸ್ವ ಎಂದು ನಂಬಿ ಕನ್ನಡ ಮಾಧ್ಯಮದಲ್ಲಿ ಕಲಿಯಲು ಬಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಿದೆ.
ಕನ್ನಡ ಪ್ರಾಥಮಿಕ ಶಾಲೆಗಳಿಗೆ 19 ವರ್ಷಗಳಿಂದ ಶಿಕ್ಷಕರ ನೇಮಕಾತಿ ಆಗಿಲ.್ಲ ಇನ್ನು ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರಿಂದ ಬೋಧನೆ. ಪದವಿ, ಸ್ನಾತಕೋತ್ತರಪದವಿ, ಬಿ.ಇಡಿಪದವಿ ಹೀಗೆ ಎರಡು-ಮೂರು ಪದವಿ ಪಡೆದ ಸುಶಿಕ್ಷಿತ ಯುವಕರಿಗೆ ಮಾಸಿಕ 10500-/- ರೂ.ಗೌರವ ಧನ ನಿಗದಿ. ಅಂದರೆ ದಿನಕ್ಕೆ 350ರೂ ಕೂಲಿ. ಇದು ಸರ್ಕಾರೀ ಜೀತ ಪದ್ದತಿಯಲ್ಲದೆ ಬೇರೇನೂ ಅಲ್ಲ. ಪವಿತ್ರ ಶಿಕ್ಷಣ ಕ್ಷೇತ್ರದಲ್ಲಿ “ಗುರು” ಸ್ಥಾನದಲ್ಲಿರುವ ಶಿಕ್ಷಕರ ಬದುಕು ಹೋಟೆಲ್ ಮಾಣಿಗಳಿಗಿಂತ ಹೀನಾಯ. ಹೀಗಾಗಿ ಅತಿಥಿ ಶಿಕ್ಷಕರ ರೋದನೆಯೇ ಹೆಚ್ಚಿರುವಾಗ, ಬೋಧನೆಗೆ ಮನಸೇಗೆ ಬಂದೀತು!. ಇದು ಸರ್ಕಾರಿ ಕನ್ನಡ ಶಾಲೆಗಳ ಪರಿಸ್ಥಿತಿಯಾದರೆ, ಇನ್ನು ಅನುದಾನಿತ ಶಾಲೆಗಳ ಪರಿಸ್ಥಿತಿ ಶೋಚನೀಯ.
ಕಳೆದ 10 ವರ್ಷಗಳಿಂದ ಶಿಕ್ಷಕರ ನೇಮಕಾತಿಗೆ ಸರ್ಕಾರ ಅವಕಾಶ ನೀಡಿಲ್ಲ. ಶೇ.60 ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ. ಇಲ್ಲಿ ಅತಿಥಿ ಶಿಕ್ಷಕರಿಗೆ ಅವಕಾಶವಿಲ್ಲ. ಬೋಧನೆಗೆ ಪರ್ಯಾಯ ವ್ಯವಸ್ಥೆಯೂ ಇಲ್ಲ. ಶಾಲೆಗೆ ಶಿಕ್ಷಕರೇ ಬುನಾದಿ. ಶಿಕ್ಷಕರಿಲ್ಲದ ಶಾಲೆಗಳೇಕೆ? ಇಂತಹ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವವರಾರು? ಇಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆಯುವುದಾದರೂ ಹೇಗೆ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಾಣದೆ ಸಾರ್ವಜನಿಕರು ಅನಿವಾರ್ಯವಾಗಿ ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ದುಬಾರಿ ಹಣ ತೆತ್ತು, ಇಂಗ್ಲೀಷ್ ಮಾಧ್ಯಮ ಶಾಲೆಗಳತ್ತ ಪಲಾಯಾನ ಮಾಡುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು, ವ್ಯಾಪಾರಿಗಳು ಒಟ್ಟಾರೆ ಹಣವಂತರು ತಮ್ಮ ಮಕ್ಕಳನ್ನು ಪ್ರತಿಷ್ಠಿತ ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ದಾಖಲಿಸಿ ಶಿಕ್ಷಣ ಕೊಡಿಸುತ್ತಿದ್ದಾರೆ. ಹೀಗಾಗಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಮಕ್ಕಳ ಬಗ್ಗೆ ಹಾಗೂ ಕನ್ನಡ ಶಾಲೆಗಳ ಬಗ್ಗೆ ಅಧಿಕಾರಿಗಳಾಲೀ, ಸರ್ಕಾರವಾಗಲೀ ಗಂಭೀರ ಚಿಂತನೆ ಮಾಡುತ್ತಿಲ್ಲ. ಕಾರಣ ಅವರ ಮಕ್ಕಳ ಭವಿಷ್ಯಕ್ಕೆ ಯಾವುದೇ ತೊಂದರೆಯಾಗುತ್ತಿಲ್ಲ.
ಕನ್ನಡ ಶಾಲೆಗಳಿಗೆ ಕಾಲ-ಕಾಲಕ್ಕೆ ಸರ್ಕಾರ ಶಿಕ್ಷಕರ ನೇಮಕಾತಿ ಮಾಡದೆ ಇರುವುದರಿಂದ, ಗ್ರಾಮೀಣ ಭಾಗದ ಬಡ ಮಕ್ಕಳ ಶೈಕ್ಷಣಿಕ ಗುಣಮಟ್ಟ ತನ್ನಿಂ ತಾನೇ ಕುಸಿಯುತ್ತಿದೆ. ಶಿಕ್ಷಣದ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ಆತಂಕಕಾರೀ ವರದಿಗಳು ಸರ್ಕಾರಕ್ಕೆ ಸಲ್ಲಿಕೆಯಾಗಿವೆ. ಈ ವರದಿಗಳ ಬಗ್ಗೆಯೂ ಸರ್ಕಾರ ಗಂಭೀರ ಚಿಂತನೆ ಮಾಡುತ್ತಿಲ್ಲ. ಭವಿಷ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಮಕ್ಕಳು, ಇಂಗ್ಲೀಷ್ ಮಾಧ್ಯಮದ ಮಕ್ಕಳೊಂದಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪೈಪೋಟಿ ನೀಡಲಾಗದೆ, ಉನ್ನತ ಶಿಕ್ಷಣ ಪಡೆಯಲು ವಿಫಲರಾಗುವ ಪರಿಸ್ಥಿತಿ ನಿರ್ಮಾಣವಾಗಿ. ಬಡವ-ಬಲ್ಲಿದರೆಂಬ ಅಂತರ ಇಲ್ಲಿಂದಲೇ ಪ್ರಾರಂಭವಾಗುವ ಆತಂಕ ಎದುರಾಗಿದೆ.
ಶಿಕ್ಷಕರ ನೇಮಕಾತಿ ಸಮಸ್ಯೆ ಕುರಿತಂತೆ ಕರ್ನಾಟಕ ಉಚ್ಚ ನ್ಯಾಯಾಲಯ ತನ್ನ ರಿಟ್ ಪಿಟಿಷನ್ ಸಂಖ್ಯೆ:11667-22 ರಲ್ಲಿ ದಿನಾಂಕ:08-12-2023ರಂದು 73 ಪುಟಗಳ ಅದ್ಬುತ ಆದೇಶವನ್ನು ನೀಡಿದೆ. ಸಂವಿಧಾನದ ನೀತಿ ನಿಯಮಗಳು, ಶಿಕ್ಷಣ ಮಸೂದೆಯ ಆಶಯಗಳು, ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯ ಉದ್ದೇಶ-ಇತ್ಯಾದಿಗಳನ್ನು ವಿವರವಾಗಿ ವಿಶ್ಲೇಷಿಸಿ ಸ್ಟಷ್ಟ ಅಭಿಪ್ರಾಯವನ್ನು ನೀಡಿದೆ. ಈ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳು ಈಗಾಗಲೇ ಆರ್ಥಿಕ ಇಲಾಖೆಯ ಅನುಮೋದನೆಯೊಂದಿಗೆ ಅನುದಾನಕ್ಕೆ ಒಳಪಟ್ಟ ಹುದ್ದೆಗಳಾಗಿವೆ. ಇವುಗಳ ಭರ್ತಿಗೆ ಹಣದ ಕೊರತೆ ಬರುವುದಿಲ್ಲ. ಆದ್ದರಿಂದ ವಿಳಂಬ ಮಾಡದೆ, ತಿರಸ್ಕಾರ ಮಾಡದೆ, ಕೂಡಲೇ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಜರುಗಿಸಬೇಕೆಂದು ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ನ್ಯಾಯಾಲಯ ಎಚ್ಚರಿಕೆ ನೀಡಿದ್ದರೂ ಸರ್ಕಾರ ಒಂದು ವರ್ಷದಿಂದ ಈ ಹುದ್ದೆಗಳ ಭರ್ತಿಗೆ ಅನುಮತಿ ನೀಡದಿರುವುದು ದುರದೃಷ್ಟಕರ ಸಂಗತಿ. ಆದೇಶ ಪಾಲಿಸುವ ಬದಲು ನ್ಯಾಯಾಲಯ ನೀಡಿರುವ ಆದೇಶವೇ ಸರಿಯಿಲ್ಲ, ಕೂಡಲೇ ಈ ಆದೇಶವನ್ನು ರದ್ದು ಪಡಿಸಬೇಕೆಂದು ಮೇಲ್ಮನವಿಯನ್ನು ದಾಖಲಿಸಿ ವೃಥಾ ಕಾ¯ಹರಣ ಮಾಡುತ್ತಿದೆ. ಪ್ರಾಥಮಿಕ/ಪ್ರೌಢಶಿಕ್ಷಣದ ಬಗ್ಗೆ ಸರ್ಕಾರ ತಾಳಿರುವ ಬೇಜವಾಬ್ದಾರಿ ವರ್ತನೆ ಸೂಕ್ತವಲ್ಲ.
ಹಾಗಾದರೇ ಶಿಕ್ಷಕರ ನೇಮಕಾತಿ ಬೇಡವೇ? ಈ ಕಾರಣದಿಂದಲೇ ಪ್ರತೀ ವರ್ಷ ನೂರಾರು ಕನ್ನಡ ಶಾಲೆಗಳು ಮುಚ್ಚಿ ಹೋಗುತ್ತಿವೆ. ಉಳಿದಿರುವ ಶಾಲೆಗಳನ್ನು ಮುಚ್ಚುಲು ಅಧಿಕಾರಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈ ಜಂಜಾಟದಲ್ಲಿ ಗ್ರಾಮೀಣ ಭಾಗದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಶಿಶು ಕೇಂದ್ರಿತ ಶಿಕ್ಷಣ ವ್ಯವಸ್ಥೆ(CHILD CENTERED EDUCATION) ಯಲ್ಲಿ ಮಕ್ಕಳೇ ದೇವರು, 6 ವರ್ಷದಿಂದ 14 ವರ್ಷ ವಯೋಮಾನದ ಮಕ್ಕಳಿಗೆ ಉಚಿತ ಕಡ್ಡಾಯ ಶಿಕ್ಷಣ ನೀಡುವುದು ಸರ್ಕಾರದ ಆದ್ಯ ಕರ್ತವ್ಯ ಹಾಗೂ ಹೊಣೆಗಾರಿಕೆ ಕೂಡ. ಶಿಕ್ಷಕರಿಲ್ಲದೆ ಬೋಧನೆ ಕ್ರಮವಾಗಿ ಆಗುತ್ತಿಲ್ಲ. ಮಕ್ಕಳ ಕಲಿಕೆ ಸುಸುತ್ರವಾಗಿ ನಡೆಯುತ್ತಿಲ್ಲ. ಗುಣಮಟ್ಟ ಕುಸಿದು ಪಾತಾಳ ಸೇರಿದೆ. ಕೂಡಲೇ ಸರ್ಕಾರ ಗುಣಮಟ್ಟ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶಾಸನ ಸಭೆಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ, ಹಾಗೂ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳು ಕಾರ್ಯ ರೂಪಕ್ಕೆ ಬರಬೇಕು. ಒಟ್ಟಾರೆ ಗ್ರಾಮೀಣ ಭಾಗದ ಬಡ ಮಕ್ಕಳೇ ಬಲಿ ಪಶುಗಳು. ಕನ್ನಡ ಭಾಷಾ ಉದ್ದಾರಕ್ಕಾಗಿ ಕೊಟ್ಯಾಂತರ ಹಣ ಖರ್ಚು ಮಾಡಿ ಸರ್ಕಾರ ಸಾಹಿತ್ಯ ಸಮ್ಮೇಳನಗಗಳನ್ನು ಮಾಡುತ್ತದೆ, ಇಂಥ ಸಮ್ಮೇಳನಗಳಲ್ಲಿ ತೆಗೆದುಕೊಳ್ಳುವ ಕನ್ನಡ ಪರ ನಿರ್ಣಯಗಳು ಕಾರ್ಯರೂಪಕ್ಕೆ ಬರಬೇಕು. ಕನ್ನಡ ಶಾಲೆಗಳ ಉಳಿವಿಗಾಗಿ ಈ ಶಾಲೆಗಳಿಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಶ್ರೇಯಸ್ಸಿಗಾಗಿ, ವಿಶೇಷ ಪ್ಯಾಕೇಜ್ ಘೋಷಿಸಿ ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡಪರ ಸಂಘ ಸಂಸ್ಥೆಗಳು, ಕನ್ನಡ ಶಾಲೆಗಳನ್ನು ಮುಚ್ಚದಂತೆ ಸರ್ಕಾರಕ್ಕೆ ಸೂಕ್ತ ಸಲಹೆ ನೀಡಬೇಕು.
ಇಂಗ್ಲಿಷ್ ಮೇಲುಗೈ
ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಿಂದ ಒಟ್ಟು 42,14,988 ಮಕ್ಕಳು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದರೆ, ಖಾಸಗಿ ಇಂಗ್ಲೀಷ್ ಶಾಲೆಗಳಲ್ಲಿ ಒಟ್ಟು 48,42,168 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.