ಹೂಂ, ರಿಸರ್ವೇಶನ್ ಇದೆ, ಆಗದೆ ಏನು ಮಾಡ್ತೀರಾ?! -ನೇತ್ರಾವತಿ.ಕೆ.ಬಿ

ರಿಸರ್ವೇಶನ್ ಅಂದರೆ ಏನು ಅಂತ ಆಗ ನನಗೆ ಗೊತ್ತಿರಲಿಲ್ಲ. ನಾನು ಎಲ್ಲರಿಗಿಂತ ಚೆನ್ನಾಗಿ ಓದುತ್ತೇನೆ ಅಂದ ಮೇಲೆ ಸೀಟು ಸಿಕ್ಕೇ ಸಿಗುತ್ತದೆ .ಈ ರಿಸರ್ವೇಶನ್ ಅಂದರೆ ಏನು ಟೀಚರ್ ಯಾಕೆ ಹಾಗೆ ಹೇಳಿದರು ಅಂತ ಸ್ವಲ್ಪ ಹೊತ್ತು ತಲೆಕೆಡಿಸಿಕೊಂಡೆ, ನಂತರ ಅದನ್ನು ಮರೆತುಬಿಟ್ಟೆ, ನನಗೆ ಸ್ಕಾಲರ್ ಶಿಪ್ ಬರುತ್ತಿತ್ತು ಆದರೆ ಅದೂ ಒಂದು ಜಾತಿಯ ಸೌಲಭ್ಯ ಎಂಬುದು ಆಗ ನನಗೆ ತಿಳಿದಿರಲಿಲ್ಲ.

ಹೂಂ, ರಿಸರ್ವೇಶನ್ ಇದೆ, ಆಗದೆ ಏನು ಮಾಡ್ತೀರಾ?!                                                                                                                   -ನೇತ್ರಾವತಿ.ಕೆ.ಬಿ

ಜೀವದ ಕತೆ – 7

ಕೆ.ಬಿ.ನೇತ್ರಾವತಿ

(ಹಿಂದಿನ ʼಕಿನ್ನರಿʼಯಿಂದ)

      4ನೇ ತರಗತಿಯಲ್ಲಿ ಟೀಚರ್ ಎಲ್ಲರನ್ನೂ ನೀವೇನಾಗ ಬಯಸುತ್ತೀರಿ ಎಂದು ಕೇಳುತ್ತಿದ್ದರು. ಅಂದಿನ ಎಲ್ಲರಂತೆ ನಾನು, “ ನಾನೂ , ನಮ್ಮಕ್ಕ ಇಬ್ಬರೂ ಡಾಕ್ಟರ್ ಆಗುತ್ತೇವೆ” ಎಂದೆ. 


   ಅದಕ್ಕೆ ಟೀಚರ್ “ ಹೂಂ, ರಿಸರ್ವೇಶನ್ ಇದೆ, ಆಗದೆ ಏನು ಮಾಡ್ತೀರಾ ಅಂದರು”.


    ಟೀಚರ್ ಮಾತು ಕೇಳಿ ಕ್ಲಾಸಿನ ಎಲ್ಲಾ ಮಕ್ಕಳು ನನ್ನನ್ನೊಮ್ಮೆ ತಿರುಗಿ ನೋಡಿದರು. ನನಗೆ ಅರ್ಥವಾಗಲಿಲ್ಲ. ರಿಸರ್ವೇಶನ್ ಅಂದರೆ ಏನು ಅಂತ ಆಗ ನನಗೆ ಗೊತ್ತಿರಲಿಲ್ಲ. ನಾನು ಎಲ್ಲರಿಗಿಂತ ಚೆನ್ನಾಗಿ ಓದುತ್ತೇನೆ ಅಂದ ಮೇಲೆ ಸೀಟು ಸಿಕ್ಕೇ ಸಿಗುತ್ತದೆ .ಈ ರಿಸರ್ವೇಶನ್ ಅಂದರೆ ಏನು ಟೀಚರ್ ಯಾಕೆ ಹಾಗೆ ಹೇಳಿದರು ಅಂತ ಸ್ವಲ್ಪ ಹೊತ್ತು ತಲೆಕೆಡಿಸಿಕೊಂಡೆ, ನಂತರ ಅದನ್ನು ಮರೆತುಬಿಟ್ಟೆ, ನನಗೆ ಸ್ಕಾಲರ್ ಶಿಪ್ ಬರುತ್ತಿತ್ತು ಆದರೆ ಅದೂ ಒಂದು ಜಾತಿಯ ಸೌಲಭ್ಯ ಎಂಬುದು ಆಗ ನನಗೆ ತಿಳಿದಿರಲಿಲ್ಲ.


   ನಾನು ಎಷ್ಟೇ ಚೆನ್ನಾಗಿ ಗಣಿತದಲ್ಲಿ ಪ್ರಶ್ನೆಗಳನ್ನು ಬಿಡಿಸಿದರೂ, ಎಲ್ಲರಿಗಿಂತ ಮೊದಲು ಮಾಡಿದರೂ ಟೀಚರ್ ನನಗೆ ಎಂದೂ ʼಗುಡ್ʼ ಹಾಕಿದ್ದಿಲ್ಲ ಅಥವಾ ಹಾಗೆಂದು ಹೇಳಿದ್ದಿಲ್ಲ. ಅದಕ್ಕೆಲ್ಲ ಹೊರತಾದಂತೆ ಸೋಷಿಯಲ್ ಸ್ಟಡೀಸ್ ತೆಗೆದುಕೊಳ್ಳುತ್ತಿದ್ದ ಎಂಎ ಮಾಡಿ ಬಂದಿದ್ದ ಅಯ್ಯಂಗಾರರ ಟೀಚರ್ ಹೇಮಲತಾ ಶಾಲಾ ವಾರ್ಷಿಕೋತ್ಸವಕ್ಕೆ ಡ್ಯಾನ್ಸ್ ಗೆಂದು “ಗುಮ್ಮನ ಕರೆಯದಿರೆ “ ಹಾಡನ್ನು ಸಂಯೋಜಿಸಿದ್ದರು. ಆ ಹಾಡಿಗೆ ಯಶೋಧೆಯ ಪಾತ್ರಕ್ಕೆ ನನ್ನನ್ನ ಸೆಲೆಕ್ಟ್ ಮಾಡಿದ್ರು, ಆ ನೃತ್ಯಕ್ಕೆ ಸ್ಟೆಪ್ಸ್ ಹೇಳಿಕೊಡಲು ಶೈಲಜಾ ಬಂದರು, ಅವರು ಬ್ರಾಹ್ಮಣರು, ಯಶೋಧೆ ಪಾತ್ರಕ್ಕೆ ನಾನು ಅಂತ ಗೊತ್ತಾಗಿ ಅವರಿಗೆ ಆಶ್ಚರ್ಯ. “ಯಾಕೆ ಇವಳನ್ನ ಆಯ್ಕೆ ಮಾಡಿದ್ದೀರಿ” ಅಂತ ಬೇಸರ ಹಾಗೂ ಆಶ್ಚರ್ಯದಿಂದ ಜೊತೆಗೆ ಆಕೆಗೆ ಬುದ್ಧಿ ಇಲ್ಲ ಅಂತ ಹೇಳುವ ರೀತಿ ಕೇಳಿದರು. ಅದಕ್ಕೆ ನಮ್ಮ ಟೀಚರ್ ಕೂಲ್ ಆಗಿ “ಏ ಯಶೋಧೆ ಕಪ್ಪು ಅಲ್ಲವಾ, ಅದಕ್ಕೆ ಇವಳು ಚೆನ್ನಾಗಿ ಸೂಟ್ ಆಗ್ತಾಳೆ, ನೀವು ಶುರು ಮಾಡಿ” ಅಂದರು. ಒಲ್ಲದ ಮನಸ್ಸಿಂದ ಹೇಳಿಕೊಡಲು ಶುರು ಮಾಡಿದ ಮಾಡಿದ ಆಕೆಯ ಸ್ಟೆಪ್ಸ್ ಜೊತೆಗೆ ನಾನೂ ಮಾಡಬೇಕು ಅಂದರು. ಅದು ಹೇಗೆ ಅಲ್ಲೀವರೆಗೂ ನಾನು ಯಾವ ಡ್ಯಾನ್ಸನ್ನೂ ಮಾಡಿರಲಿಲ್ಲ ಜೊತೆಗೆ ಡಾನ್ಸ್ ಕಲಿತಿರಲಿಲ್ಲ. ಅವರು ಒಂದು ಸ್ಟೆಪ್ ಮಾಡಿದ ಮೇಲೆ ತಾನೆ ನನಗೆ ಅದು ಯಾವ ಸ್ಟೆಪ್ ಎನ್ನುವುದು ತಿಳಿಯುವುದು. ಹಾಗಂದುಕೊಂಡು ನಾನು ಅವರು ಒಂದು ಸ್ಟೆಪ್ ಮಾಡಲು ಶುರು ಮಾಡಿದ ಕೂಡಲೇ ಅವರ ಸ್ಟೆಪ್ ಮಾಡುತ್ತಿದ್ದೆ, ಒಂದರ್ಧ ಘಳಿಗೆ ವ್ಯತ್ಯಾಸವಾಗುತ್ತಿತ್ತು. ಅವರಿಗೆ ಅದು ಸರಿ ಕಾಣಲಿಲ್ಲ. ಮಾರನೆ ಬೆಳಿಗ್ಗೆ ಎಂದಿನಂತೆ ಪ್ರಾಕ್ಟಿಸ್ ಗೆ ಹೋದೆ. ಯಶೋಧೆ ಪಾತ್ರಕ್ಕೆ ನನ್ನ ಬದಲಿಗೆ ಮತ್ತೊಂದು ಬ್ರಾಹ್ಮಣರ ಹುಡುಗಿಯನ್ನ ಆಯ್ಕೆ ಮಾಡಲಾಗಿತ್ತು. ನಮ್ಮ ಸೋಷಿಯಲ್ ಟೀಚರ್ ನನಗೆ ಸಾರಿ ಹೇಳಿ ಮುಂದಿನ ಡ್ಯಾನ್ಸ್ ಗೆ ಸೇರಿಸಿಕೊಳ್ಳುವೆ, ಆ ಟೀಚರ್‌ಗೆ ಆ ಹುಡುಗಿಯೇ ಬೇಕಂತೆ ಅಂದರು. ಒತ್ತರಿಸಿ ಬಂದ ಅಳು ತಡೆದುಕೊಂಡು ಕ್ಲಾಸಿಗೆ ಹಿಂತಿರುಗಿದೆ.


  ಇಂತಹ ಎಷ್ಟೋ ಘಟನೆಗಳು ನಮ್ಮ ಮನಸ್ಸುಗಳ ಮೇಲೆ ಬಹಳಷ್ಟು ಪರಿಣಾಮ ಬೀರುತ್ತವೆ, ನಮ್ಮ ಅಸ್ತಿತ್ವ ಅಲುಗಾಡಿಸುತ್ತವೆ. ನಮ್ಮ ಕಾನ್ಫಿಡೆನ್ಸ್ ಕಳೆದುಕೊಳ್ಳುವಂತೆ ಮಾಡುತ್ತದೆ ಎನ್ನುವುದು ಆ ಜನರಿಗೆ ತಿಳಿಯುವುದಿಲ್ಲ.


  ಅಂದೇ ಶಪಥ ಮಾಡಿಕೊಂಡೆ ಸರಿ ಅವರ ಡ್ಯಾನ್ಸ್ ಹಾಡು ಅವರೇ ಇಟ್ಟುಕೊಳ್ಳಲಿ, ನನಗೆ ನನ್ನ ಓದು ಸಾಕು. ಓದಿನಲ್ಲಿ ಎಲ್ಲವನ್ನೂ ಸಾಧಿಸಿ ತೋರಿಸುವೆ ಅಂತ.


    ಅಂದಿನಿಂದ ನನ್ನ ಜೀವನದಲ್ಲಿ ಎಂದೂ ನಾನು ಡ್ಯಾನ್ಸ್ ಹಾಡು ಅಂತ ಈ ಮೇಲ್ಜಾತಿಯವರ ಒಡನಾಟ ಇರುವ ಯಾವುದಕ್ಕೂ ಸೇರಲಿಲ್ಲ. ಅದರಿಂದಲೇ ಮುಂದೆ ನಾನು ಉಳಿದ ಕ್ಲಾsಸ್ ಗಳಲ್ಲಿ 3 ಮತ್ತು ಎರಡನೇ ಖಂಓಏ ಗಳಲ್ಲಿ ಪೈಪೋಟಿಯೊಂದಿಗೆ ಖಂಓಏ ಪಡೆಯುತ್ತಿದ್ದೆ ಹಾಗಂತ ಮೊದಲ ಖಂಓಏ ಪಡೆದವನು ನನಗಿಂತ ಬುದ್ಧಿವಂತ ಅಂತ ಅಲ್ಲ. ಆದರೆ ಆತನಿಗೆ ಅದು ಹೇಗೋ 2 ಅಥವಾ 3 ಮಾರ್ಕ್ ಜಾಸ್ತಿ ಬರುತ್ತಿತ್ತು , ಬ್ರಾಹ್ಮಣರ ಹುಡುಗ ಆತ?!. 


     ಹೈಸ್ಕೂಲ್ ಗೆ ಇಂಗ್ಲಿಷ್ ಮೀಡಿಯಂ ತೆಗೆದುಕೊಂಡೆ, 8ನೇ ತರಗತಿ ಫಲಿತಾಂಶ, ಶಾಲೆಗೆ ನಾನೇ ಪ್ರಥಮ. ಆದರೆ ಯಾರೂ ನನ್ನ ಸ್ನೇಹಿತೆಯರು ಮತ್ತು ಟೀಚರ್ ಗಳು ನನಗೆ ಒಂದು ಕಂಗ್ರಾಟ್ಸ್ ಹೇಳಲಿಲ್ಲ. ಅದೇ 9ನೇ ತರಗತಿಯಲ್ಲಿ ಲಿಂಗಾಯಿತರ ಹುಡುಗಿ ನನಗಿಂತ 5 ಮಾರ್ಕ್ ಜಾಸ್ತಿ ಪಡೆದು ಮೊದಲು ಬಂದಳು ಅಂತ ಅವಳಿಗೆ ಎಲ್ಲರೂ ಶುಭಾಶಯಗಳನ್ನು ಹೇಳಿದ್ದೇ ಹೇಳಿದ್ದು, ಅಲ್ಲದೆ, ನನಗೆ ಕೇಳಿಸುವಂತೆ ನನ್ನ ಬೆನ್ನ ಹಿಂದೆ , “ಇವಳಿಗೆ ತಾನೇ ಮೊದಲ ಖಂಓಏ ಬರುವುದೆಂದು ಜಂಭ, ಇವಳಿಗೆ ಹಂಗೇ ಆಗಬೇಕು. ಮುಂದಿನ ಸಲ ಕೂಡ ಬಿಟ್ಟುಕೊಡಬೇಡ” ಅಂತ ಅವಳಿಗೆ ಸೂಚನೆ ಕೂಡ ಕೊಟ್ಟರು. ಆದರೆ ಅವರು ಇಂಗ್ಲಿಷ್ ಎಸ್ಸೇ ರೈಟಿಂಗ್, ಕನ್ನಡ ಎಸ್ಸೇ ರೈಟಿಂಗ್, ಇಂಗ್ಲಿಷ್ ರಿಸೈಟಿಂಗ್ ಮತ್ತು ಕನ್ನಡ ರಿಸೈಟಿಂಗ್ ಗಳಲ್ಲಿ ನನ್ನನ್ನ ಯಾರೂ ಮೀರಿಸಲಾಗಲಿಲ್ಲ. ಸದಾ ಮೊದಲ ಬಹುಮಾನ ನನಗೇ. ಎಸ್ಎಸ್ಎಲ್ಸಿಯಲ್ಲಿ ಕೂಡ ಶಾಲೆಗೆ ನಾನೇ ಪ್ರಥಮ. ಆಗಲೂ ಕೂಡ ಯಾರೂ ನನಗೆ ವಿಷ್ ಮಾಡಲಿಲ್ಲ ಅದೊಂದು ವಿಷಯವೇ ಅಲ್ಲ ಎನ್ನುವ ರೀತಿ ಇದ್ದರು. ಹೆಚ್ ಎಂ ಮಾತ್ರ ನನ್ನನ್ನು ಒಳ ಕರೆಯದೆ ಅಪ್ಪನನ್ನ ಛೇಂಬರ್ ಗೆ ಕರೆದು ಕಂಗ್ರಾಚುಲೇಷನ್ ಅಂತ ಹೇಳಿ ಎಂದು ಟೀ ತರಿಸಿ ಕೊಟ್ಟು ಕಳಿಸಿದರು. ನಾನೇ ಸ್ಕೂಲಿಗೆ ಫಸ್ಟ್ ಎಂದು ಶಾಲಾ ವಾರ್ಷಿಕೋತ್ಸವದಲ್ಲೇ ತುಂಬಾ ಜನರಿಗೆ ವಿಷಯ ತಿಳಿದದ್ದು, ನಾನು ಶಾಲೆಗೇ ಮೊದಲು ಬಂದ ಸಂಗತಿಯನ್ನು ಹಾಗೆ ಗೌಪ್ಯವಾಗಿ ಇಟ್ಟಿದ್ದರು.


****


     ನಾನು 8 ನೇ ತರಗತಿ ಇಂಗ್ಷಿಷ್ ಮೀಡಿಯಂಗೆ ಸೇರಿದಾಗ ಸೈನ್ಸ್ ಟೀಚರ್ ಒಂಚೂರು ಪಾಠ ಸರಿಯಾಗಿ ಮಾಡುತ್ತಿರಲಿಲ್ಲ. ನನ್ನ ಸ್ನೇಹಿತೆಯರೆಲ್ಲ ಟಿವಿ ಎನ್ನುವವರ ಮನೆಗೆ ಟ್ಯೂಷನ್ ಗೆ ಹೋಗುತ್ತಿದ್ದರು. ರೋಹಿಣಿ ನನ್ನ ಸಹಪಾಠಿಗೆ ಗಣಿತ ಕಷ್ಟದ ವಿಷಯ .ಆಕೆಗೆ ನಾನು ಬಹಳ ಸಲ ಗಣಿತ ಹೇಳಿಕೊಡುತ್ತಿದ್ದೆ. ಅದರ ರುಣ ತೀರಿಸು ರೀತಿಯಲ್ಲಿ ಅವಳು ನನಗೂ ಟ್ಯೂಷನ್ ಗೆ ಬಾ ಅಂತ ದುಂಬಾಲು ಬಿದ್ದಳು. ಅಪ್ಪನನ್ನ ಕೇಳಿದೆ, ತಿಂಗಳಿಗೆ ಎಲ್ಲ ವಿಷಯ ಸೇರಿ 20 ರೂ (ಹಿಂದಿ ಮತ್ತು ಕನ್ನಡ ಉಳಿದು) ನನಗೆ ಎಲ್ಲ ವಿಷಯಗಳ ಅವಶ್ಯಕತೆ ಇರಲಿಲ್ಲ. ಸೈನ್ಸ್ ಪಾಠ ಸರಿಯಾಗಿ ಮಾಡದ ಕಾರಣ ಅದಕ್ಕೆ ಒಂಚೂರು ಸಹಾಯ ಬೇಕಿತ್ತು. ಆದರೆ ಅಪ್ಪ “ಪರವಾಗಿಲ್ಲ ಹೋಗು” ಅಂತು. ರೋಹಿಣಿ ಮೊದಲೇ “ನನ್ನ ಸ್ನೇಹಿತೆಯನ್ನು ಕರೆ ತರುತ್ತೇನೆ” ಅಂತ ಟೀಚರ್ ಗೆ ತಿಳಿಸಿದ್ದರಿಂದ. “ಸರ್ ನನ್ನ ಸ್ನೇಹಿತೆ” ಅಂತ, ಅವಳೇ ಪರಿಚಯಿಸಿದಳು. ಅವರು ನನಗೆ ಕೇಳಿದ ಮೊದಲ ಪ್ರಶ್ನೆ ತೆಲುಗಿನಲ್ಲಿ “ಊಟ ಆಯ್ತಾ,ಚೆನ್ನಾಗಿದ್ದೀಯಾ” ಅಂತ ನೆನಪು, ಅಂದರೆ ಅವರು ನನ್ನ ಬಣ್ಣ ನೀಡಿ ನಾವು ಶೆಟ್ರು ಅಂತ ಊಹಿಸಿದ್ದರು!


 ನಾನು “ನನಗೆ ತೆಲುಗು ಬರಲ್ಲ ಸರ್” ಅಂದೆ. 


“ ನೀವು ಶೆಟ್ರು ಅಲ್ಲವಾ” ಅಂದರು.


 “ಇಲ್ಲ ಸರ್” ಅಂದೆ.


ಪ್ರಶ್ನಾರ್ಥಕವಾಗಿ ನೋಡಿದರು, 


“ಎಸ್ಸಿಗೆ ಬರುತ್ತೇವೆ” ಅಂದೆ.


    ಅವರು ಮುಂದಕ್ಕೆ ಮಾತನಾಡಲಿಲ್ಲ. ಕುಳಿತುಕೊಳ್ಳುವಂತೆ ಸನ್ನೆ ಮಾಡಿದರು. ನನಗೇಕೋ ಟ್ಯೂಷನ್ ಗೆ ಬರಬಾರದಾಗಿತ್ತು ಅನ್ನಿಸಿತು. ಆದರೆ ನನ್ನ ಸ್ನೇಹಿತೆಯ ಶಿಫಾರಸ್ಸಿನ ಮೇರೆಗೆ ಇರಬೇಕು, ಅವರು ಮತ್ತೆಂದೂ ಜಾತಿ ಕೇಳಲಿಲ್ಲ. ಆದರೆ ಜಾತಿಯ ತಾರತಮ್ಯದಿಂದ ಹೊರತಾಗಿರಲಿಲ್ಲ. 


     ತಿಪಟೂರಿನಲ್ಲಿ ನೀರಿನ ಸಮಸ್ಯೆ ಅಂತ ಹೇಳಿದ್ದೆನಲ್ಲ ,ಅವರ ಮನೆಗೂ ನೀರು ಬಾರದಿದ್ದಾಗ ಟ್ಯೂಷನ್ ಬಂದಿದ್ದ ಎಲ್ಲ ಮಕ್ಕಳನ್ನೂ ಬೋರ್ ವೆಲ್ ಗೆ ಕಳಿಸಿ ಉದ್ದ ಸಾಲು ಮಾಡಿಕೊಂಡು ಅಲ್ಲಿಂದ ಮನೆ ತನಕ ನೀರು ತರಬೇಕಿತ್ತು. ಹಾಗೆ ಎಲ್ಲರೂ ಹೋದಾಗ ನಾನೂ ಹೊರಟೆ.


   “ ಬೇಡ ಬೇಡ ನೀನು ಹೋಗಬೇಡ ಇಲ್ಲೇ ಕೂತ್ಕೋ”


     ಅಂತ ನನ್ನನ್ನ ಟ್ಯೂಷನ್ ರೂಮ್ ನಲ್ಲೇ ಕೂರಿಸಿದರು. ದೊಡ್ಡ ನಿಟ್ಟುಸಿರು ಬಂತು, ಛೆ ! ನಾನು ನೀರು ತಂದರೆ ಅವರಿಗೆ ಮೈಲಿಗೆಯಗುತ್ತದೆ. ಯಾಕೆಂದರೆ ಅವರು ಲಿಂಗಾಯಿತರು, ನಾನು ಎಸ್‌ಸಿ. ಆದರೆ ನೀರು ತರುವ ಕೆಲಸ ತಪ್ಪಿತಲ್ಲ ಅಂತ ಒಂಚೂರು ಖುಷಿಯೂ ಆಗಿತ್ತು.


     ಪ್ರತಿ ಕ್ಷಣ, ಪ್ರತಿ ಹೆಜ್ಜೆ, ಯಾವಾಗ ನಮ್ಮ ಜಾತಿ ಕೀಳರಿಮೆಯನ್ನ ನಮಗೆ ತೋರಿಸುತ್ತದೋ ಈ ಸಮಾಜ ಎನ್ನುವುದು ನನಗೆ ತಿಳಿಯದ ವಿಷಯವಾಗಿತ್ತು. ಅಷ್ಟೇ ಏಕೆ ನನ್ನ ಜಾತಕವನ್ನು ಅಜ್ಜಿ ದಬ್ಬೆಗಟ್ಟದ ಅಯ್ಯನೋರಿಗೆ ಕೊಟ್ಟು ಬರೆಸಿತ್ತು. ಆತ ಎಲ್ಲವನ್ನೂ ಸರಿಯಾಗಿ ಬರೆದು ʼಬʼʼಬೋ” ಎಂಬ ಅಕ್ಷರ ಬರುತ್ತದೆ, ಅದರಂತೆ “ಬೋರಮ್ಮʼ ಎಂಬ ನಾಮಧೇಯಸ್ಯ ಎಂದು ಆತ ಬರೆದಿದ್ದ. ಅಂದರೆ ನಾವು ಹುಟ್ಟಿದಾಗಲೇ ನಮ್ಮನ್ನ ಜಾತಿ ಸೂಚ್ಯಕವಾಗಿ ಆಕರ್ಷಕವಲ್ಲದ ಹೆಸರುಗಳನ್ನು ಅವರೇ ನಮಗೆ ಕಟ್ಟುತ್ತಾರೆ. ಆದರೆ ನನಗೆ ನೇತ್ರಾವತಿ ಎಂದು ಹೆಸರಿಟ್ಟಿದ್ದರ ಹಿಂದೆ ಒಂದು ಸಣ್ಣ ಕತೆ ಇದೆ.


     ನಾನು ಅಮ್ಮನ ಹೊಟ್ಟೆಯಲ್ಲಿದ್ದಾಗ, ನಮ್ಮ ದೊಡ್ಡ ಸೋದರಮಾವ ಧರ್ಮಸ್ಥಳಕ್ಕೆ ಹೋಗಿತ್ತೆಂದೂ ಅಲ್ಲಿ ನೇತ್ರಾವತಿ ನದಿಯಲ್ಲಿ ಸ್ನಾನಮಾಡುವಾಗ, ನದಿಯ ಸೊಬಗಿಗೆ ಮನಸೋತ ಮಾಮ ತನ್ನ ತಂಗಿಗೆ ಹೆಣ್ಣು ಮಗು ಹುಟ್ಟಿದರೆ “ನೇತ್ರಾವತಿ” ಅಂತ ಹೆಸರಿಡುವೆ ಎಂದು ಹರಸಿಕೊಂಡಿತ್ತಂತೆ. ಅಂತೆಯೇ ನಾನು ಹುಟ್ಟಿದ ಎರಡು ದಿನಕ್ಕೆ ಅಳಲು ಶುರು ಮಾಡಿದ್ದು ಸುಮ್ಮನಾಗುತಿರಲಿಲ್ಲವೆಂದೂ ಡಾಕ್ಟರ್ ಹತ್ತಿರ ಕರೆದುಕೊಂಡು ಹೋದಾಗ ಆತ ಏನು ಹೆಸರಿಟ್ಟಿದ್ದೀರ ಎಂದು ಕಳಿದನಂತೆ ಅದಕ್ಕೆ ಅಮ್ಮ ತನ್ನ ಅಣ್ಣನ ಆಸೆಯಂತೆ ನೇತ್ರಾವತಿ ಅಂತ ಹೇಳಿತಂತೆ ತಕ್ಷಣ ಅಳು ನಿಲ್ಲಿಸಿದೆನಂತೆ, ಆಗ ಅಮ್ಮ ಡಾಕ್ಟರ್ ನನಗೆಂದು ಬರೆದುಕೊಟ್ಟ ಔಷಧಿ ಕೂಡ ಹಾಕಲಿಲ್ಲವಂತೆ. ಹಾಗಾಗಿ ನನ್ನ ಹೆಸರು ಅಯ್ನೋರು ಬರೆದುಕೊಟ್ಟಿದ್ದ “ಬೋರಮ್ಮ” ಬದಲಿಗೆ ನೇತ್ರಾವತಿ.