ತುಮಕೂರು ಲೋಕಸಭೆ: ಯಾರ ಯಾರ ಚಿತ್ತ ಯಾರತ್ತ !?
2014ರ ಚುನಾವಣೆಯಲ್ಲಿ ಕಾಂಗ್ರೆಸ್ ಗುರುತಿನಿಂದ ಗೆದ್ದ ಮುದ್ದಹನುಮೇಗೌಡರಿಗೆ ಮಧುಗಿರಿ ಮತ್ತು ಕೊರಟಗೆರೆಗಳು ತಲಾ 35 ಸಾವಿರದಷ್ಟು ಲೀಡಿಂಗ್ ಕೊಟ್ಟಿದ್ದವು. 2014ರ ಫಲಿತಾಂಶ ಈ ಸಲವೂ ರಿಪೀಟ್ ಆಗಬೇಕೆಂದರೆ ಅಷ್ಟೇ ಪ್ರಮಾಣದ ಲೀಡಿಂಗ್ ಬರುವ ಜೊತೆಗೆ ತುಮಕೂರು ನಗರ ಮತ್ತು ಗ್ರಾಮಾಂತರ ಕ್ಷೇತ್ರಗಳಲ್ಲೂ ದೊಡ್ಡ ಪ್ರಮಾಣದ ಓಟು ಮುದ್ದಹನುಮೇಗೌಡರ ಪಾಲಿಗೆ ಒದಗಿಬರಬೇಕಿದೆ.
99% ಲೋಕಲ್
ಕುಚ್ಚಂಗಿ ಪ್ರಸನ್ನ
ತುಮಕೂರು: 2024ರ ಈ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಓಟುದಾರರಾದ ನಿಮಗೆ ಓಟು ಹಾಕಲು ಇನ್ನು ಕೇವಲ ಐದು ರಾತ್ರಿಗಳು ಉಳಿದಿವೆ. ಇಂಗ್ಲಿಷಿನ ಓಟ್ ಎಂಬುದನ್ನು ಕನ್ನಡಕ್ಕೆ ಅದ್ಯಾವ ಮತದವರು ʼಮತದಾರʼ ಅಂತ ಮೊಟ್ಟ ಮೊದಲಿಗೆ ಕರೆದು ಖಾಯಂ ಮಾಡಿಬಿಟ್ಟರೋ ಗೊತ್ತಿಲ್ಲ, ನನಗಂತೂ ಈ ವೋಟ್ ಅನ್ನು ಮತ ಅಂತ ಕರೆಯಲು ಇಷ್ಟವಿಲ್ಲ.
ತುಮಕೂರು ಲೋಕಸಭಾ ಕ್ಷೇತ್ರವನ್ನು ಗೆದ್ದೇ ತೀರಬೇಕೆಂಬ ಹಂಬಲದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ವಿ.ಸೋಮಣ್ಣನವರು ಹಟ ತೊಟ್ಟಂತಿದೆ. ಸೋಮಣ್ಣ ತುಮಕೂರಿನ ಅಭ್ಯರ್ಥಿ ಅಂತ ಘೋಷಣೆಯಾದ ದಿನದಿಂದಲೂ ನಿರಂತರ ಸಭೆ,ಸಮಾವೇಶ, ಮೆರವಣಿಗೆ, ವ್ಯಕ್ತಿಗಳು, ಗುಂಪುಗಳೊಂದಿಗೆ ಚರ್ಚೆ, ಮಠ, ದೇವಾಲಯಗಳಿಗೆ ಭೇಟಿ ಹೀಗೆ ಸಿಕ್ಕ ಯಾವ ಅವಕಾಶವನ್ನೂ ಸೋಮಣ್ಣನವರು ಬಿಟ್ಟಿಲ್ಲ. ಬಿಜೆಪಿ ಈ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿಮಾಡಿಕೊಂಡಿರುವ ಪರಿಣಾಮ ಜೆಡಿಎಸ್‌ನ ಇಬ್ಬರು ಶಾಸಕರು, ಪರಾಜಿತ ಮತ್ತು ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಿಂದಿನ ಚುನಾವಣೆಯಲ್ಲಿ ಖುದ್ದು ದೇವೇಗೌಡರೂ ಬಂದು ಇಲ್ಲಿ ನಿಂತಿದ್ದಾಗಲೂ ಓಡಾಡದಷ್ಟು ಓಡಾಡುತ್ತಿದ್ದಾರೆ, ತಮ್ಮ ಅಧಿನಾಯಕನ ಪರ ಕೇಳಿದ್ದಕ್ಕಿಂತ ಹತ್ತು ಪಟ್ಟು ಶ್ರಮ ಹಾಕಿ ಓಟುಗಳನ್ನು ಕೂಡಿ ಹಾಕುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೇ ಕಂಡು ಬರುತ್ತದೆ.
ಜೊತೆಗೆ ಜೆಡಿಎಸ್ 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮಾಡಿಕೊಂಡಿದ್ದ ಮೈತ್ರಿಗೆ ಇದ್ದ ಅಡ್ಡಿ,ಅಪನಂಬಿಕೆ,ಅಪಸ್ವರ ಮತ್ತು ವಿರೋಧ ಈ ಸಲ ಬಿಜೆಪಿ ಜೊತೆಗಿನ ಮೈತ್ರಿಗೆ ಕಂಡು ಬರುತ್ತಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ದೇವೇಗೌಡರ ವಿರುದ್ಧ ಕಾಂಗ್ರೆಸ್‌ನ ಕೆ.ಎನ್.ರಾಜಣ್ಣನವರು ಅಧಿಕೃತವಾಗಿಯೇ ಬಂಡಾಯ ಸಾರಿಬಿಟ್ಟಿದ್ದರು ಎಂಬುದು ಮಧುಗಿರಿಯಲ್ಲಿ ಬಿಜೆಪಿಯ ಜಿ.ಎಸ್.ಬಸವರಾಜ್ ಅವರಿಗೆ ಬಂದ ಲೀಡಿಂಗ್ ಕನ್ನಡಿ ಹಿಡಿದಿತ್ತು. ಈ ಸಲದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜೆಡಿಎಸ್‌ನಲ್ಲಿ ಗೋವಿಂದರಾಜು ಮತ್ತು ಗೌರಿಶಂಕರ್ ಸೈದ್ಧಾಂತಿಕ ಕಾರಣ ಕೊಟ್ಟು ಹೊರ ಬಂದು ಕಾಂಗ್ರೆಸ್ ಸೇರಿದ್ದನ್ನು ಬಿಟ್ಟರೆ ಆಂತರಿಕವಾಗಿ ಯಾರ ವಿರೋಧವನ್ನು ಯಾರೂ ಕಾಣಲಿಲ್ಲ. ಮಾಧುಸ್ವಾಮಿಯವರು ಸೋಮಣ್ಣನವರ ವಿರುದ್ಧ ಗುಡುಗಿದರು, ಸುಮ್ಮನಾದರು. ಪಕ್ಷ ಸೂಚಿಸಿದಂತೆ ಚಿತ್ರದುರ್ಗ, ಚಿಕ್ಕಮಗಳೂರು ಕ್ಷೇತ್ರ ವೀಕ್ಷಣೆಯಲ್ಲಿ ತೊಡಗಿದ್ದಾರೆ. ಅವರ ಬೆಂಬಲಿಗರು ಸದ್ದಿಲ್ಲದೇ ಸೋಮಣ್ಣನವರ ಜೊತೆ ಅಡ್ಡಾಡುತ್ತಿದ್ದಾರೆ.
2014ರ ಚುನಾವಣೆಯಲ್ಲಿ ಕಾಂಗ್ರೆಸ್ ಗುರುತಿನಿಂದ ಗೆದ್ದ ಮುದ್ದಹನುಮೇಗೌಡರಿಗೆ ಮಧುಗಿರಿ ಮತ್ತು ಕೊರಟಗೆರೆಗಳು ತಲಾ 35 ಸಾವಿರದಷ್ಟು ಲೀಡಿಂಗ್ ಕೊಟ್ಟಿದ್ದವು. 2014ರ ಫಲಿತಾಂಶ ಈ ಸಲವೂ ರಿಪೀಟ್ ಆಗಬೇಕೆಂದರೆ ಅಷ್ಟೇ ಪ್ರಮಾಣದ ಲೀಡಿಂಗ್ ಬರುವ ಜೊತೆಗೆ ತುಮಕೂರು ನಗರ ಮತ್ತು ಗ್ರಾಮಾಂತರ ಕ್ಷೇತ್ರಗಳಲ್ಲೂ ದೊಡ್ಡ ಪ್ರಮಾಣದ ಓಟು ಮುದ್ದಹನುಮೇಗೌಡರ ಪಾಲಿಗೆ ಒದಗಿಬರಬೇಕಿದೆ.
ತುಮಕೂರು ನಗರ ಮತ್ತು ಗ್ರಾಮಾಂತರ ಕ್ಷೇತ್ರಗಳಲ್ಲಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಇದ್ದಂತ ರಾಜಕೀಯ ವಾತಾವರಣ ಈ ಸಲದ ಲೋಕಸಭಾ ಚುನಾವಣೆಗೆ ಇಲ್ಲವಾಗಿದೆ. ತುಮಕೂರು ನಗರದಲ್ಲಿ 2023ರಲ್ಲಿ ಸುಮಾರು 56ಸಾವಿರ ಓಟು ಗಳಿಸಿದ ಉದ್ಯಮಿ ಗೋವಿಂದರಾಜು ಈಗ ಕಾಂಗ್ರೆಸ್ ಸೇರಿಕೊಂಡಿದ್ದಾರೆ, ಹಿಂದಿನ ಎರಡು ಚುನಾವಣೆಗಳಲ್ಲೂ ಇನ್ನೇನು ಗೆದ್ದೇಬಿಡುತ್ತಾರೆ ಎಂಬಂತಿದ್ದ ಈ ಮನುಷ್ಯ ಕೇವಲ ಮೂರು ಸಾವಿರ ಚಿಲ್ಲರೆ ಓಟಿನಲ್ಲಿ ಸೋಲಲು ಖುದ್ದು ಆತನ ಖಾಸಗಿ ಖಯಾಲಿಗಳೇ ಕಾರಣವೇ ಹೊರತು ಓಟು ಹಾಕಿನ ಮುಗ್ದ ಜನರಲ್ಲ. ಈಗ ಅದ್ಯಾರ ವಿವೇಕದ ಮಾತು ಕೇಳಿ ಕಾಂಗ್ರೆಸ್ ಸೇರಿಕೊಂಡರೋ ತಿಳಿಯದು.( 2023ರ ವಿಧಾನಸಭೆಯ ಓಟು ಗಳಿಕೆ ವಿವರ ಬಾಕ್ಸ್‌ನಲ್ಲಿದೆ ನೋಡಿ)
ಆದರೆ, ತುಮಕೂರು ಗ್ರಾಮಾಂತರದಲ್ಲಿ ವಿಧಾನ ಸಭೆಯಲ್ಲಿ 84,500 ಓಟು ಗಳಿಸಿ ಸೋಲು ಕಂಡ ಜೆಡಿಎಸ್‌ನ ಡಿ.ಸಿ.ಗೌರಿಶಂಕರ್ ಬಿಜೆಪಿ ಜೊತೆಗಿನ ಸಖ್ಯವನ್ನು ವಿರೋಧಿಸಿ ಅವರ ನೆಚ್ಚಿನ ಅಪ್ಪಾಜಿಯನ್ನು ತೊರೆದು ʼಕೈʼ ಪಕ್ಷದ ಕೈ ಹಿಡಿದಿದ್ದರಲಿ ತುಸು ರಾಜಕೀಯ ತಿಳುವಳಿಕೆ ಇದೆ. ತೆನೆ ಹೊತ್ತ ಮಹಿಳೆಯನ್ನು ಕೆಳಗಿಳಿಸಿದರೂ ಈ ಲೋಕ ಸಭಾ ಚುನಾವಣೆಯಲ್ಲಿ ತನ್ನ ಶಕ್ತಿ ಮೀರಿ ತಾನು ಗಳಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದ ಓಟುಗಳನ್ನು ಮುದ್ದಹನುಮೇಗೌಡರಿಗೆ ಕೊಡಿಸಿ ಕೊಡುವ ರಿಸ್ಕನ್ನೂ ತಲೆಯ ಮೇಲೆ ಹೊತ್ತು ಕೊಂಡಿದ್ದಾರೆ.
ತುಮಕೂರು ನಗರದಲ್ಲಿ ವಿಧಾನ ಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ದಿನದಿಂದ ಓಟು ಎಣಿಕೆ ಆಗುವತನಕ ಓಟುದಾರರ ಕಣ್ಣಿಗೆ ಕಾಣಿಸಿಕೊಳ್ಳದೇ ಬುರ್ಖಾ ಹಾಕಿಕೊಂಡಂತೆಯೇ ಇದ್ದ ಕಾಂಗ್ರೆಸ್‌ನ ಇಕ್ಬಾಲ್ ಅಹಮದ್ ಸೌ ಕಮ್ ಸೈಂಥಾಲೀಸ್ ಹಜಾರ್ ಓಟ್ ಕೈಸೇ ಕಮಾಯ ಅಂತ ಎಲ್ಲರೂ ಅಚ್ಚರಿ ಪಟ್ಟಿದ್ದರು, ಈಗಲೂ ನೆನಪಿಗೆ ಬಂದಾಗ ಅರೇ ಕೈಸೇ ಆಯಾರೇ ಇತ್ನಾ ಜ್ಯಾದಾ ಓಟ್ ಅಂತಾನೇ ಕೇಳುತ್ತಾರಂತೆ. ಈ ಇಕ್ಬಾಲ್ ಅಹಮದ್ ಅವರಿಗೆ ಟಿಕೆಟ್ ಕೊಟ್ಟುಬಿಟ್ಟರು ಅಂತ ಮಾಜಿ ಶಾಸಕ ಷಫಿ ಅಹ್ಮದ್ ತಮ್ಮ ಮಗನಿಗೆ ಟಿಕೆಟ್ ಕೊಡಲಿಲ್ಲ ಅಂತ ಡೈರೆಕ್ಟ್ ಆಗಿ ಬಿಜೆಪಿ ಸೇರಲಾಗದೇ, ಜೆಡಿಎಸ್ ಸೇರಿದಂತೆ ಮಾಡಿ ಮತ್ತೆ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ ಮನೆಗೆ ಹಿಂದಿರುಗಿದರು. ಅವರ ಅಳಿಯ ಡಾ.ಎಸ್.ರಫೀಕ್ ಅಹ್ಮದ್ ತಮಗೆ ಟಿಕೆಟ್ ಬೇಡ ಅಂದಿದ್ದರು ಎಂಬ ಗಾಸಿಪ್ ಅನ್ನು ಖಚಿತ ಪಡಿಸಲೂ ಇಲ್ಲ, ಪಕ್ಷ ಬಿಡಲೂ ಇಲ್ಲ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲೂ ಇಲ್ಲ ಎಂಬಂತೆ ಸೈಲೆಂಟಾಗಿ ಇದ್ದುಬಿಟ್ಟರು. ಈ ಇವರೆಲ್ಲ ಸೇರಿ ಈ ಸಲ ಮುದ್ದಹನುಮೇಗೌಡರಿಗೆ ತುಮಕೂರು ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗಳೆರಡೂ ಗಳಿಸಿದಷ್ಟು ಅಂದರೆ ಸುಮಾರು ಒಂದು ಲಕ್ಷದಷ್ಟು ಅಥವಾ ತಾಖತ್ ಇದ್ದರೆ ಇನ್ನೂ ಹೆಚ್ಚಿನ ಓಟನ್ನು ತಂದುಕೊಡಬೇಕಿದೆ.
ಆದರೆ ತುಮಕೂರು ನಗರ ಮತ್ತು ಗ್ರಾಮಾಂತರ ಕ್ಷೇತ್ರಗಳಲ್ಲಿನ ದೃಶ್ಯಗಳೇ ಬೇರೆ ರೀತಿಯಾಗಿಬಿಟ್ಟಿವೆ. ನಗರ ಕ್ಷೇತ್ರದ ಬಿಜೆಪಿ ಶಾಸಕರಾಗಿ ಅವರಿಗೇ ಅಚ್ಚರಿಯಾಗುವ ಗೆಲುವನ್ನು ಕಂಡ ಜ್ಯೋತಿಗಣೇಶ್ ತಮ್ಮ ಚುನಾವಣೆಗೆ ಹಾಕಿದ್ದಕ್ಕಿಂದ ಹೆಚ್ಚಿನ ಶ್ರಮವನ್ನು ಸೋಮಣ್ಣನವರಿಗಾಗಿ ಹಾಕುತ್ತಿದ್ದಾರೆ. ತುಮಕೂರು ಲೋಕ ಸಭಾ ಕ್ಷೇತ್ರದ ಎಂಟು ವಿಧಾನ ಸಭಾ ಕ್ಷೇತ್ರಗಳ ಪೈಕಿ ತುಮಕೂರು ಗ್ರಾಮಾಂತರ ಮತ್ತು ಮಧುಗಿರಿಗಳಲ್ಲಿ 2018ರ ಸೋಲಿನ ಸೇಡನ್ನು ತೀರಿಸಿಕೊಂಡವರಂತೆ ತಲಾ 90 ಸಾವಿರದಷ್ಟು ಓಟು ಗಳಿಸಿ ಮತ್ತೆ ಶಾಸಕರಾಗಿ ಹೊರಹೊಮ್ಮಿದವರು ಬಿ.ಸುರೇಶಗೌಡರು ಮತ್ತು ಕೆ.ಎನ್.ರಾಜಣ್ಣನವರು. ಗ್ರಾಮಾಂತರದ ನಿಕಟಪೂರ್ವ ಶಾಸಕ ಗೌರಿಶಂಕರ್ ಈಗ ಜೆಡಿಎಸ್‌ನಲ್ಲಿಲ್ಲ. ಹಾಗಾಗಿ ಬಿಜೆಪಿಯಲ್ಲಿ ಗಳಿಸಿದ 89 ಸಾವಿರ ಓಟುಗಳ ಜೊತೆಗೆ ಜೆಡಿಎಸ್‌ನ ಗೌರಿಶಂಕರ್ ಗಳಿಸಿದ್ದ ಓಟುಗಳ ಅರ್ಧದಷ್ಟನ್ನು ಸೇರಿಸಿ ಒಂದು ಅಥವಾ ಒಂದೂಕಾಲು ಲಕ್ಷದಷ್ಟು ಓಟುಗಳನ್ನು ಸುರೇಶಗೌಡರು ಸೋಮಣ್ಣನವರಿಗೆ ಕೊಡಿಸಬೇಕಿದೆ. ಇದಕ್ಕಾಗಿ ಇವರ ಜೊತೆಗೆ ಮಾಜಿ ಶಾಸಕ ಹೆಚ್.ನಿಂಗಪ್ಪನವರು ಬೇರೆ ಜೆಡಿಎಸ್ ಸೇರಿಕೊಂಡಿದ್ದಾರಲ್ಲ.
ತುಮಕೂರು ಜಿಲ್ಲೆಯ ಕಾಂಗ್ರೆಸ್‌ನ ಪರಂಪರೆಯೇ ಆಗಿಹೋಗಿರುವ ಪಕ್ಷಗಳನ್ನು ಮೀರಿದ ವೈಯಕ್ತಿಕ ಹೊಂದಾಣಿಕೆ ರಾಜಕಾರಣ, ಬೆಂಕಿ ಬಿದ್ದ ಮೇಲೂ ಬಾವಿ ತೋಡದೆ ಎಂದೋ ಬರಬಹುದಾದ ಮಳೆಗೆ ಕಾಯುತ್ತ ಕೂರುವ ಕಾಂಗ್ರೆಸ್ಸಿಗರ ಜಡತ್ವಗಳು, ಟಿಕೆಟ್‌ಗಾಗಿ ತುಸು ತಾಳ್ಮೆಯೇ ಇಲ್ಲದೇ ಪಕ್ಷಗಳನ್ನು ಬದಲಿಸುತ್ತಾರೆ ಎಂಬ ಆರೋಪ, ಯಾರನ್ನೂ ನಂಬರು, ಈ ಚುನಾವಣೆಯಲ್ಲಿ ಕುಣಿಗಲ್‌ನ ನೆಂಟರು, ಇಷ್ಟರನ್ನೇ ತುಮಕೂರು ಕ್ಷೇತ್ರದ ಉಸ್ತುವಾರಿಗೆ ಬಿಟ್ಟಿದ್ದಾರೆ, ತೀರಾ ಅಂಟು, ಜಿಗುಟು ಎಂಬ ವಿಶೇಷಣಗಳನ್ನು ಪಡೆದಿರುವ ದಕ್ಷ ಸಂಸದ ,ಪಾರ್ಲಿಮೆಂಟಿನಲ್ಲಿ 700ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿದ ದಾಖಲೆ ಇರುವ ಮುದ್ದಹನುಮೇಗೌಡರ ಹೆಜ್ಜೆಗಳಿಗೆ ಅಡ್ಡಗಾಲಾದರೆ ಏನೂ ಮಾಡಲಾಗದು.
ಇಷ್ಟೆಲ್ಲ ಹೇಳಿದರೂ, ತುಮಕೂರು ಲೋಕಸಭಾ ಕ್ಷೇತ್ರವನ್ನು ಸೋಮಣ್ಣನವರು ಆವರಿಸಿಕೊಳ್ಳುತ್ತಿರುವುದನ್ನುಯಾರೂ ನಿರಾಕರಿಸಲಾಗುತ್ತಿಲ್ಲ. ಬಿನ್ನಿಪೇಟೆ, ಗೋವಿಂದರಾಜನಗರ, ಚಾಮರಾಜನಗರ, ವರುಣಾ ಕ್ಷೇತ್ರಗಳ ಬಳಿಕ ತುಮಕೂರಿನಲ್ಲೂ ಒಂದು ಕೈ ನೋಡೇ ಬಿಡುವ ಅಂತ ಕಾಲಿಟ್ಟಿರುವ ಸೋಮಣ್ಣನವರ ಪರವಾಗಿ ರಾಜಕೀಯ ವಾತಾವರಣ ಇದೆ ಎನ್ನುವಂತಿಲ್ಲ.
ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರ ಪ್ರಿನ್ಸ್ ವಿಜಯೇಂದ್ರ ತಮ್ಮ ಸಾಮರ್ಥ್ಯವನ್ನು ನಿರೂಪಿಸುವ ಸಲುವಾಗೇ 2020ರ ಶಿರಾ ಬೈ ಎಲೆಕ್ಷನ್‌ಗೆ ಬಂದು ಬೆಳ್ಳಾವಿ ಕ್ರಾಸ್‌ನ ಗೆಸ್ಟ್ ಹೌಸ್‌ನಲ್ಲಿ ನೆಲೆಯೂರಿಬಿಟ್ಟಿದ್ದರು. ಆಗಲೂ ಅಷ್ಟೇ, “ವಿಜಯೇಂದ್ರ ಹರಿಸುವ ಹಣದ ಹೊಳೆಯಲ್ಲಿ ಜಯಚಂದ್ರ ಕೊಚ್ಚಿ ಹೋದರೆ ಯಾರೂ ಏನೂ ಮಾಡಲಾಗದು”ಅಂತ ಬರೆದಿದ್ದೆ, ಅದು ನಿಜವಾಗಿತ್ತು. ಈ ಸಲ ವಿಜಯೇಂದ್ರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿದ್ದಾರೆ. ಜೊತೆಗೆ ಮುತ್ಸದ್ಧಿ ಯಡಿಯೂರಪ್ಪನವರಿದ್ದಾರೆ.
24ರಂದು ಕೆಬಿ ಕ್ರಾಸ್‌ನಲ್ಲಿ ಅಮಿತ್ ಶಾ ನಡೆಸಲಿರುವ ಹಿಂದುಳಿದ ವರ್ಗಗಳ ಸಮಾವೇಶ, ಅಷ್ಟೂ ಇಷ್ಟೋ ಉಳಿದುಕೊಂಡಿರುವ ಮೋದಿ ಪ್ರಭಾವ ಸೋಮಣ್ಣನವರ ನೆರವಿಗೆ ಬರಬಹುದೇ, ನೋಡೋಣ.
ಗುಬ್ಬಿಯಲ್ಲಿ ಕೇವಿಯಟ್ ಜೊತೆಗೆ ನಿರೀಕ್ಷಣಾ ಜಾಮೀನು!
ಲೋಕಸಭಾ ಚುನಾವಣೆ ಘೋಷಣೆಯಾದ ದಿನವೇ ಗುಬ್ಬಿ ಕ್ಷೇತ್ರ ಎಂದೂ ಕಾಂಗ್ರೆಸ್‌ಗೆ ಲೀಡ್ ಕೊಟ್ಟಿದ್ದೇ ಇಲ್ಲ,ಏನಿದ್ದರೂ ಬಿಜೆಪಿಗೇ ಹೆಚ್ಚಿನ ಓಟುಗಳು ಬರುವುದು ಎಂದು ಕೇವಿಯಟ್ ಹಾಕಿ ನಿರೀಕ್ಷಣಾ ಜಾಮೀನು ಪಡೆದುಕೊಂಡು ಬಿಟ್ಟಿರುವುದರಿಂದ ಮುದ್ದಹನುಮೇಗೌಡರು ಗುಬ್ಬಿಯಿಂದ ಹೆಚ್ಚಿನ ಓಟನ್ನು ನಿರೀಕ್ಷಿಸುವಂತಿಲ್ಲ. ಆದರೆ ಮುದ್ದಹನುಮೇಗೌಡರನ್ನು ಬಿಜೆಪಿ ಕೆಸರಿನಿಂದ ಹೊರಗೆಳೆದು ತಂದು ಕಾಂಗ್ರೆಸ್ ದಡ ಸೇರಿಸಿದ ಕ್ರೆಡಿಟ್ ಮಾತ್ರ ಈ ಶ್ರೀನಿವಾಸ್ ಅವರದು ಎನ್ನುವುದನ್ನೂ ಮರೆಯುವಂತಿಲ್ಲ.
ಮೊನ್ನೆ ಕುಂಚಿಟಿಗ ಭವನದಲ್ಲಿ ನಡೆದ ಸಮುದಾಯದ ಸಭೆಯಲ್ಲಿ “ ನಾನು ನಾಮಿನೇಶನ್ ಮಾಡಿದೆ ಎಂದರೆ ಗೆದ್ದೇ ಅಂತಲೇ ಅರ್ಥ ಘೋಷಿಸಿದ ಗುಬ್ಬಿ ಕ್ಷೇತ್ರದ ಸೋಲರಿಯದ ಸರದಾರ ಎಸ್.ಆರ್.ಶ್ರೀನಿವಾಸ್ ಪ್ರತಿ ಚುನಾವಣೆಯಲ್ಲಿ ತಾವು ಗೆದ್ದದ್ದು ಹೇಗೆ ಎಂಬ ಗುಟ್ಟನ್ನು ಬಹಿರಂಗ ಪಡಿಸಿಲ್ಲ, ಆದರೂ, ಮಾಜಿ ಸಚಿವ ಮಾಧುಸ್ವಾಮಿಯವರು ತಮ್ಮನ್ನು ಬಿಟ್ಟು ಸೋಮಣ್ಣನವರಿಗೆ ಬಿಜೆಪಿ ಟಿಕೆಟ್ ದಕ್ಕಿತು ಅಂತ ಗೊತ್ತಾದ ತಕ್ಷಣ ಮಾಧ್ಯಮಗಳ ಎದುರು ಕೂತು ಗಂಟೆಗೂ ಹೆಚ್ಚು ಕಾಲ ತಮ್ಮನ್ನು ನೋವನ್ನು ತೋಡಿಕೊಳ್ಳುವಾಗ, “ಈ ಎಂಪಿ ಜಿ.ಎಸ್.ಬಸವರಾಜು ಗುಬ್ಬಿಯಲ್ಲಿ ದಿಲೀಪ್ ಮತ್ತು ಚಿಕ್ಕನಾಯಕನಹಳ್ಳಿಯಲ್ಲಿ ನನ್ನನ್ನು ಗೆಲ್ಲಲು ಬಿಟ್ಟಿದ್ದರೆ ಇವತ್ತು ಲೋಕಸಭೆಗೆ ಅವರು ಹೇಳಿದವರಿಗೆ ಗೆಯ್ಮೆ ಮಾಡುತ್ತಿದ್ದೆವು” ಎಂದು ಹೇಳಿದ್ದನ್ನು ಲೆಕ್ಕಕ್ಕೆ ತೆಗೆದುಕೊಂಡದ್ದೇ ಆದಲ್ಲಿ ಬಿಜೆಪಿ 51ಸಾವಿರ ಮತ್ತು ಜೆಡಿಎಸ್ 43 ಸಾವಿರ ಓಟು ಕಿತ್ತರೂ ಶ್ರೀನಿವಾಸ್ ಅವರ ಐದನೇ ಜಯಘೋಷದ ಹಿಂದಿನ ರೂವಾರಿ ಯಾರು ಎಂಬುದು ಅರ್ಥವಾದಂತೇ ಅಲ್ಲವೇ.
ತುರುವೇಕೆರೆಯಲ್ಲಿ ದೇವೇಗೌಡರ ಪ್ರತಿಮೆ ಇದೆ
2014ರಲ್ಲಿ ಮುದ್ದಹನುಮೇಗೌಡರಿಗೆ 17 ಸಾವಿರದಷ್ಟು ಓಟುಗಳ ಲೀಡಿಂಗ್ ಕೊಟ್ಟಿದ್ದ ತುರುವೇಕೆರೆ 2019ರಲ್ಲಿ ದೇವೇಗೌಡರಿಗೆ ಇನ್ನೂ ಮೂರು ಸಾವಿರ ಹೆಚ್ಚಿನ ಓಟಿನ ಲೀಡಿಂಗ್ ಕೊಟ್ಟಿತ್ತು. ಆದರೆ, ಈ ಸಲ ಹಂಗಿಲ್ಲ, ತುರುವೇಕೆರೆಯ ತಾಲೂಕಾಫೀಸ್ ಸರ್ಕಲ್‌ನಲ್ಲಿ ದೇವೇಗೌಡರ ಪುಟ್ಟ ಪ್ರತಿಮೆ ಇದೆ. ಪ್ರತಿ ಚುನಾವಣೆ ಬಂದಾಗಲೂ ಆ ಪ್ರತಿಮೆಗೆ ಬಟ್ಟೆ ಸುತ್ತಲಾಗುತ್ತದೆ. ಜೊತೆಗೆ ನಾನು ತುರುವೇಕೆರೆಗೆ ಹೆಚ್ಚೂ ಕಡಿಮೆ ಹೋಗಿರುವುದೆಲ್ಲ ಚುನಾವಣೆ ದಿನಗಳಲ್ಲೇ ಹಾಗಾಗಿ, ಒಂದು ಸಲವೂ ಆ ಪ್ರತಿಮೆಯಲ್ಲಿ ದೇವೇಗೌಡರು ಹೇಗೆ ಕಾಣುತ್ತಾರೆ ಅಂತ ನೋಡಲು ಆಗೇ ಇಲ್ಲ! ಆದರೆ, ತುರುವೇಕೆರೆಯಲ್ಲಿ ದೇವೇಗೌಡರಿಗೆ ಮೀಸಲಾದ ಒಂದಷ್ಟು ಸಾವಿರ ಓಟುಗಳಿವೆ, ಈ ಸಲ ಅಷ್ಟೂ ಓಟು ಸೋಮಣ್ಣನವರ ಪಾಲಿಗೇ ಎನ್ನುತ್ತಾರೆ ಸಿಎಸ್‌ಪುರದ ನರಸೇಗೌಡರು.
ಮೊನ್ನೆ ಬಿಜೆಪಿ ಸೇರಿಕೊಂಡ ಚೌದ್ರಿ ರಂಗಪ್ಪನವರು 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗಳಿಸಿದ್ದ 24,500 ಓಟುಗಳಿಗೆ ತಮ್ಮ ಶಕ್ತಿ ಮೀರಿ ಆರು ಸಾವಿರ ಹೆಚ್ಚಿನ ಓಟುಗಳನ್ನು ಕೂಡಿಸಿಕೊಂಡದ್ದೇ ನೆಲಮಂಗಲದ ಬೆಮೆಲ್ ದೊಡ್ಡ ಸಾಧನೆ ಎನ್ನುತ್ತಾರೆ ಅವರನ್ನು ಕಾಂಗ್ರೆಸ್ ಮತ್ತು ತುರುವೇಕೆರೆಗೆ ಕರೆದುಕೊಂಡು ಬಂದ ಅವರ ದೋಸ್ತ್. ಹಾಗಾಗಿ ತುರುವೇಕೆರೆಯಿಂದ ಈ ಸಲ ಹೆಚ್ಚಿನ ನಿರೀಕ್ಷೆಯನ್ನು ಮುದ್ದಹನುಮೇಗೌಡರು ಇಟ್ಟುಕೊಳ್ಳುವಂತಿಲ್ಲ.
ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರುಗಳಲ್ಲಿ ..,
ಬಿಜೆಪಿ ಅಥವಾ ಜೆಡಿಎಸ್‌ನವರೇ ಶಾಸಕರಾಗಿ ಚುನಾಯಿತರಾಗುತ್ತ ಬಂದಿರುವ ಚಿಕ್ಕನಾಯಕನಹಳ್ಳಿಯಲ್ಲಿ ಲೋಕಸಭೆಯ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್‌ಗೆ ಲೀಡ್ ಬರುವುದು ಅಹಿಂದ ವಿಸ್ಮಯ. ಇಲ್ಲಿ ಈಗ ಜೆಡಿಎಸ್ ಪರ್ವ, ಜೆಡಿಎಸ್ ಶಾಸಕ ಸುರೇಶಬಾಬು ಬಿಜೆಪಿಯ ಸೋಮಣ್ಣನವರ ಕೈ ಹಿಡಿದು ಕ್ಷೇತ್ರ ಪೂರಾ ಸುತ್ತಾಡಿಸುತ್ತಿದ್ದಾರೆ. ಹುಳಿಯಾರು ಭಾಗದಲ್ಲಿ ಪ್ರಭಾವಿಯಾಗಿರುವ ವಿಧಾನ ಸಭಾ ಚುನಾವಣೆಗೆ ಕೆಲವೇ ದಿನಗಳಿವೆ ಎನ್ನುವಾಗ ಕಾಂಗ್ರೆಸ್ ಸೇರಿ ಸೋತ ಮಾಜಿ ಶಾಸಕ ಕಿರಣ್ ಕುಮಾರ್ ಹಾಗೂ 2013ರಲ್ಲಿ ಪಕ್ಷದ ಟಿಕೆಟ್ ಪಡೆದರೂ 2018ರಲ್ಲಿ ಅವಕಾಶ ವಂಚಿತರಾದ ಕ್ಷೇತ್ರದ ಹಿಂದುಳಿದ ವರ್ಗಗಳಲ್ಲಿ ಪ್ರಬಲವಾದ ಕಾಡು ಗೊಲ್ಲ ಸಮುದಾಯದ ನಾಯಕನಂತಿರುವ ಡಾ.ಸಾಸಲು ಸತೀಶ್ ಮುದ್ದಹನುಮೇಗೌಡರ ಪರ ಹಳ್ಳಿಗಳನ್ನು ಸುತ್ತುತ್ತಿದ್ದಾರೆ.
ತಿಪಟೂರು ಎಂದಿಗೂ ಕಾಂಗ್ರೆಸ್ ಗೆ ಲೀಡ್ ಕೊಟ್ಟ ವಿಧಾನ ಸಭಾ ಕ್ಷೇತ್ರವಲ್ಲ. ಸೋಮಣ್ಣನವರ ಪರ ಮಾಜಿ ಶಾಸಕ ಬಿ.ಸಿ.ನಾಗೇಶ್ ಪ್ರಚಾರ ಮಾಡುತ್ತಿದ್ದಾರೆ. ಕಳೆದ ವಾರವಷ್ಟೇ ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ ಅಲ್ಪಾವಧಿಯ ಕಾಂಗ್ರೆಸ್ ತೊರೆದು ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದಾರೆ. ಇಲ್ಲಿ ಕಾಂಗ್ರೆಸ್ ಶಾಸಕರೇ ಇದ್ದರೂ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತರು ಅಭ್ಯರ್ಥಿಯಾದರು ಎಂದ ಕ್ಷಣ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿಬಿಡುತ್ತಾರೆ.
ಜೊತೆಗೆ ಇಲ್ಲಿ ಬೆಳೆದು ನೆಲೆಕಂಡುಕೊಳ್ಳಲು ಯತ್ನಿಸುತ್ತಿರುವ ಯುವಕರನ್ನೂ ಸಹಿಸಿಕೊಳ್ಳುವ ಶಕ್ತಿಯೂ ಶಾಸಕ ಷಡಕ್ಷರಿಯವರಿಗೆ ಇಲ್ಲ ಎನ್ನುವುದು ಕಳೆದ ಭಾನುವಾರ ಕೆಬಿ ಕ್ರಾಸ್‌ನಲ್ಲಿ ನಡೆದ ಸಿಎಂ,ಡಿಸಿಎಂ ಹಾಜರಾಗಿದ್ದ ಕಾಂಗ್ರೆಸ್ ಸಮಾವೇಶದ ವೇದಿಕೆಗೆ ಕಾಂಗ್ರೆಸ್ ಪದಾಧಿಕಾರಿ ಆಗಿರುವ ಟೂಡಾ ಶಶಿಧರ್ ಹಾಗೂ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್ ಮುಂತಾದ ಸ್ವಜಾತಿ ಮುಖಂಡರನ್ನು ಹತ್ತದಂತೆ ನೋಡಿಕೊಂಡದ್ದು ಬೆಳಕಿಗೆ ಬಂತು.
ಕೊರಟಗೆರೆ ಹಾಗೂ ಮಧುಗಿರಿಯಲ್ಲಿ ಹೇಗಿದೆ?
ಉಳಿದ ಕೊರಟಗೆರೆ ಮತ್ತು ಮಧುಗಿರಿ ಹೇಳಿ ಕೇಳಿ ಮಳೆಯನ್ನೇ ನಂಬಿದ ಒಣ ತಾಲೂಕುಗಳು. ಮತ್ತು ಇವೆರಡೂ ಕ್ಷೇತ್ರಗಳಲ್ಲಿ ಬಂದ ದೊಡ್ಡ ಮೊತ್ತದ ಲೀಡಿಂಗ್‌ನಿಂದಲೇ ಮುದ್ದಹನುಮೇಗೌಡರು 2014ರಲ್ಲಿ ಗೆದ್ದದ್ದು. ಆದರೆ ಹತ್ತು ವರ್ಷದ ನಂತರ ನಡೆದಿರುವ ಚುನಾವಣೆಯಲ್ಲಿ ವಾತಾವರಣ ಹಿಂದಿನಂತಿಲ್ಲವಂತೆ.
2013ರಲ್ಲಿ ಸೋತರೂ ನಂತರ 2018ರಲ್ಲಿ ಗೆದ್ದು ಉಪಮುಖ್ಯಮಂತ್ರಿ ಹಾಗೂ 2023ರಲ್ಲಿ ಗೃಹ ಮಂತ್ರಿಯಾಗಿರುವ ಡಾ.ಜಿ.ಪರಮೇಶ್ವರ ಅವರಿಗೆ ಅವರು ಮೊದಲು ಪ್ರತಿನಿಧಿಸುತ್ತಿದ್ದ ಮಧುಗಿರಿಯ ಮೇಲೂ ಸಾಕಷ್ಟು ಹಿಡಿತವಿದೆ ಎನ್ನುವುದು ಅವರು ಆ ಕ್ಷೇತ್ರದಲ್ಲಿ ಹಾಜರಾಗುವ ಮದುವೆ, ನಾಮಕರಣಗಳೇ ಸಾಕ್ಷಿ. ಜೊತೆಗೆ ಅವರು ಜಿಲ್ಲಾ ಉಸ್ತುವಾರಿ ಸಚಿವರೂ ಹೌದು. 2009ರ ಮಹಾ ಚುನಾವಣೆಯಲ್ಲಿ ಬಿಜೆಪಿಯ ಜಿ.ಎಸ್.ಬಸವರಾಜ್ ಎದುರು ಜೆಡಿಎಸ್‌ನಿಂದ ನಿಂತು ಕೇವಲ 21,445 ಓಟುಗಳಿಂದ ಸೋತಿದ್ದ ಮುದ್ದಹನುಮೇಗೌಡರನ್ನು 2014ರ ಚುನಾವಣೆಯಲ್ಲಿ ಸ್ಪಾನ್ಸರ್ ಮಾಡಿ ಗೆಲ್ಲಿಸಿದವರೂ ಡಾಕ್ಟರ್‌ಜೀಯವರೇ ಎನ್ನುವುದು ಇಡೀ ಜಗತ್ತಿಗೆ ಗೊತ್ತು. ಆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ನಿವೃತ್ತ ಐಪಿಎಸ್ ಅಧಿಕಾರಿ ಕೋದಂಡರಾಮಯ್ಯನವರು ಒಂದೂಮುಕ್ಕಾಲು ಲಕ್ಷ ಓಟು ಗಳಿಸಿದ್ದರು ಮತ್ತು 2014ರ ಚುನಾವಣೆಯಲ್ಲಿ ದಿವಂಗತ ಎ.ಕೃಷ್ಣಪ್ಪನವರು ಜೆಡಿಎಸ್ ಅಭ್ಯರ್ಥಿಯಾಗಿ ಎರಡೂವರೆ ಲಕ್ಷಕ್ಕೂ ಹೆಚ್ಚು ಓಟು ಗಳಿಸಿದ್ದರು. ಈ ಕೋದಂಡರಾಮಯ್ಯ ಮತ್ತು ಕೃಷ್ಣಪ್ಪನವರು ಹಿಂದುಳಿದ ವರ್ಗದ ಗೊಲ್ಲ ಜಾತಿಯವರೇ ಆಗಿದ್ದರು ಹಾಗೂ 1996ರಲ್ಲಿ ಇದೇ ಜೆಡಿಎಸ್‌ನಿಂದ ಮತ್ತೊಂದು ಪ್ರಬಲ ಹಿಂದುಳಿದ ಕುರುಬ ಜಾತಿಯ ದಿವಂಗತ ಸಿ.ಎನ್.ಭಾಸ್ಕರಪ್ಪನವರೂ ಈ ಕ್ಷೇತ್ರದಿಂದ ಗೆದ್ದು ಪಾರ್ಲಿಮೆಂಟ್ ತಲುಪಿದ್ದನ್ನುನೆನಪಿಸಿಕೊಂಡರೆ ಜಿಲ್ಲೆಯಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿರುವ ಹಿಂದುಳಿದ ವರ್ಗಗಳ ಯಾರಿಗಾದರೂ ಟಿಕೆಟ್ ಕೊಡಬಹುದಿತ್ತು ಎನ್ನಿಸುತ್ತದೆ. ಆದರೆ, ಎ.ಕೃಷ್ಣಪ್ಪನವರನ್ನು ಪಕ್ಷದಿಂದ ಕಣಕ್ಕಿಳಿಸಿ ತಮ್ಮ ಜಾತಿಯ ಮುದ್ದಹನುಮೇಗೌಡರು ಗೆಲ್ಲಲು ಸಹಕರಿಸಿದರು, ಆ ಸೋಲಿನ ನೋವಿನಲ್ಲೇ ಕೃಷ್ಣಪ್ಪನವರು ತೀರಿಕೊಂಡರು ಎಂಬ ಗೊಲ್ಲ ಸಮುದಾಯದವರ ಆಪಾದನೆಯಿಂದ ಜೆಡಿಎಸ್ ವರಿಷ್ಟ ದೇವೇಗೌಡರು ಇನ್ನೂ ಮುಕ್ತರಾಗಿಲ್ಲ.
ಎಂಥ ವಿಚಿತ್ರ ನೋಡಿ, ಕೇವಲ ಐದೇ ವರ್ಷಗಳಲ್ಲಿ 2019ರ ಚುನಾವಣೆಯಲ್ಲಿ ಅದೇ ದೇವೇಗೌಡರು ತುಮಕೂರಿನಿಂದ ಕಣಕ್ಕಿಳಿದಾಗ ಸಿಟ್ಟಿಂಗ್ ಎಂಪಿಯಾಗಿದ್ದ ತಮಗೆ ಅನ್ಯಾಯವಾಯಿತು ಎನ್ನುವ ಸಾತ್ವಿಕ ಸಿಟ್ಟಿನಿಂದ ಕೆಎನ್‌ಆರ್ ಬೆಂಬಲದೊಂದಿಗೆ ದೊಡ್ಡ ಮೆರವಣಿಗೆ ತೆಗೆದು ನಾಮಿನೇಶನ್ ಕೂಡಾ ಮಾಡಿದ್ದ ಮುದ್ದಹನುಮೇಗೌಡರೇ ತಮ್ಮನ್ನು ಸೋಲಿಸಿದರು ಅಂತ ಐದು ವರ್ಷದ ನಂತರ ದೇವೇಗೌಡರು ಕ್ಷೇತ್ರದ ಬಹಿರಂಗ ಸಭೆಗಳಲ್ಲಿ ಹೇಳುತ್ತಿರುವುದು ನಿಜವಲ್ಲ, ದೇವರ ಮುಂದೆ ಪ್ರಮಾಣ ಮಾಡುವೆ ಎಂದು ಮುದ್ದಹನುಮೇಗೌಡರು ಎಲ್ಲ ಸಭೆಗಳಲ್ಲೂ ಹೇಳಬೇಕಾಗಿ ಬಂದಿದೆ.
ಕೊರಟಗೆರೆಯಲ್ಲಿ 2023ರ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಸುಧಾಕರ ಲಾಲ್ ಮತ್ತು ಬಿಜೆಪಿಯ ಮಾಜಿ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಪಡೆದಿದ್ದ 88 ಸಾವಿರ ಓಟುಗಳ ಎದುರು 2014ರ ಚುನಾವಣೆ ರೀತಿಯಲ್ಲೇ ಹೆಚ್ಚಿನ ಲೀಡಿಂಗ್‌ನ್ನು ಕೊರಟಗೆರೆ ಕೊಡಬಲ್ಲದೇ ಕಾದು ನೋಡಬೇಕು.
ಮಧುಗಿರಿಯಲ್ಲೂ ಅಷ್ಟೇ , ಕ್ಷೇತ್ರದ ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲೇ ಅತಿ ಹೆಚ್ಚಿನ ಓಟು ಅಂದರೆ 91,166 ಓಟು ಗಳಿಸಿ ಗೆದ್ದು ಸಹಕಾರ ಸಚಿವರೂ ಆಗಿರುವ ಸಹಕಾರ ರತ್ನ ಕೆ.ಎನ್.ರಾಜಣ್ಣನವರ ದೊಡ್ಡ ಮಟ್ಟದ ಸಹಕಾರ ಮುದ್ದಹನುಮೇಗೌಡರಿಗೆ ಬೇಕಿದೆ. 2019ರಲ್ಲಿ ಕೆಎನ್‌ಆರ್ ಅವರಿಂದ ದೊಡ್ಡ ಹೊಡೆತ ತಿಂದ ದೊಡ್ಡ ಗೌಡರು ಮತ್ತು ಅವರ ಕುಟುಂಬದ ಯಾರೇ ತುಮಕೂರು, ಕೊರಟಗೆರೆ ಮತ್ತು ಮಧುಗಿರಿಗೆ ಬಂದಾಗಲೆಲ್ಲ ರಾಜಣ್ಣನವರ ವಿರುದ್ಧ ಅದೂ ಇದೂ ಮಾತನಾಡಿ, ಕಣ್ಣೀರು ಸುರಿಸುವುದು ಸಾಮಾನ್ಯ, ಶುಕ್ರವಾರ ಮಧುಗಿರಿಯಲ್ಲಿ ಕುಮಾರಸ್ವಾಮಿ ಮಾಡಿದ್ದೂ ಅದನ್ನೇ, ಇಡೀ ಜಿಲ್ಲೆಯ ಬಡ ಜನರು, ಕಷ್ಟದಲ್ಲಿರುವ ಜನರು ಕೊಂಡಾಡುವ ರೀತಿಯಲ್ಲಿ ಡಿಸಿಸಿ ಬ್ಯಾಂಕಿನ ಸಾಲಗಳನ್ನು ಕೊಡುತ್ತ ಜನರ ಜೀವನ ಮಟ್ಟವನ್ನು ಉತ್ತಮ ಪಡಿಸುತ್ತಿರುವ ಕೆಎನ್‌ಆರ್ ಮತ್ತು ಅವರ ಮಗ ಎಂಎಲ್‌ಸಿ ರಾಜೇಂದ್ರ ಅವರನ್ನು ರೌಡಿಯಿಸಂ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಮಾಡಿರುವ ಆಪಾದನೆಗೆ ತಕ್ಕ ಉತ್ತರವನ್ನು ಓಟುಗಳ ಲೆಕ್ಕದಲ್ಲೇ ಮಧುಗಿರಿ ಕೊಡುವುದೇ ಕಾದುನೋಡಬೇಕಿದೆ.
ಕುಂಚಿಟಿಗರು ಏನು ಮಾಡುತ್ತಾರೆ ಗೊತ್ತಾ?
ಕೊರಟಗೆರೆ ಮತ್ತು ಮಧುಗಿರಿಗಳಲ್ಲಿ ಒಕ್ಕಲಿಗರ ಪಂಗಡಗಳಲ್ಲಿ ಒಂದಾದ ಕುಂಚಿಟಿಗರು ಚುನಾವಣೆಗಳಲ್ಲಿ ಗೆಲುವನ್ನು ನಿರ್ಣಯಿಸುವ ಸಂಖ್ಯೆಯಲ್ಲಿದ್ದಾರೆ ಮತ್ತು ಇತರ ಸಮುದಾಯಗಳ ಮೇಲೆ ಪ್ರಭಾವ ಬೀರಬಲ್ಲ ಪ್ರಾಬಲ್ಯವನ್ನೂ ಹೊಂದಿದ್ದಾರೆ. ಈ ಸಲದ ಚುನಾವಣೆಯಲ್ಲಿ ಈ ಸಮುದಾಯ 100ಕ್ಕೆ 60 ರಷ್ಟು ಮಾತ್ರವೇ ಮುದ್ದಹನುಮೇಗೌಡರ ಕೈ ಹಿಡಿದರೂ ಪರವಾಗಿಲ್ಲ ಎಂದು ತುಮಕೂರಿನ ಕುಂಚಿಟಿಗ ಭವನದಲ್ಲಿ ಕರೆದಿದ್ದ ಸಮುದಾಯದ ಮುಖಂಡರ ಸಭೆಯಲ್ಲಿದ್ದ ಎಲ್ಲ ಮುಖಂಡರೂ ಮನವಿ ಮಾಡಿಕೊಂಡರು.
ಆದರೆ, ಇದೇ ಸಭೆಯಲ್ಲಿ ಮಾತನಾಡಿದ, ರಾಜ್ಯ ಸರ್ಕಾರದ ದಿಲ್ಲಿ ವಿಶೇಷ ಪ್ರತಿನಿಧಿ -1 ಹಾಗೂ ಕುಂಚಿಟಿಗರ ಏಕೈಕ ಶಾಸಕರಾಗಿರುವ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಮುದ್ದಹನುಮೇಗೌಡರಿಗೆ ಬೆಂಬಲ ಕೊಡುವ ಮಾತುಗಳನ್ನು ಆಡುತ್ತಲೇ ಟಿಕೆಟ್ ಆಕಾಂಕ್ಷಿಗಳಾಗಿದ್ದ ತಮ್ಮ ಎರಡನೇ ಮಗ ಸಂಜಯ್ ಅಥವಾ ಮುರಳೀಧರ ಹಾಲಪ್ಪನವರನ್ನಾದರೂ ಪರಿಗಣಿಸಬಹುದಿತ್ತು ಅಂತ ನೋವಿನಿಂದಲೇ ಹೇಳಿದಾಗ ಯಾಕೋ ಗೊತ್ತಿಲ್ಲ ಯಾರೂ ಚಪ್ಪಾಳೆ ಹೊಡೆಯಲೇ ಇಲ್ಲ.
ಅವರೇ ಹೇಳಿಕೊಂಡಂತೆ ರಾಜ್ಯದ 224 ಶಾಸಕರ ಪೈಕಿ ಕುಂಚಿಟಿಗರ ಏಕೈಕ ಶಾಸಕರಾಗಿರುವ ಜಯಚಂದ್ರ ಅವರಿಗೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮಧುಗಿರಿ, ಕೊರಟಗೆರೆ, ಗುಬ್ಬಿ ಹಾಗೂ ತುಮಕೂರು ನಗರಗಳಲ್ಲಿರುವ ಸಮುದಾಯದ ಮೇಲೆ ಓಟು ಕೊಡಿಸುವಷ್ಟು ಪ್ರಭಾವ ಬೀರುವ ಶಕ್ತಿ ಇದೆ, ಆದರೆ ತಮ್ಮ ಮಗನಿಗೆ ಟಿಕೆಟ್ ಕೊಡಲಿಲ್ಲ ಎಂಬ ನೋವನ್ನು ನುಂಗಿಕೊಂಡು ಅವರು ಮುದ್ದಹನುಮೇಗೌಡರಿಗೆ ನೆರವಾಗಬಲ್ಲರೇ ಅಥವಾ ಮುದ್ದಹನುಮೇಗೌಡರು ಅವರ ನೆರವನ್ನು ಪಡೆದುಕೊಳ್ಳಬಲ್ಲರೇ ಗೊತ್ತಿಲ್ಲ.
2013ರಲ್ಲಿ ಅದು ಹೇಗೋ ಗೆದ್ದು ಬಿಟ್ಟಿದ್ದ ವೀರಭದ್ರಯ್ಯನವರು ಮಧುಗಿರಿ ತಾಲೂಕಿನ ಕೈಮರದಲ್ಲಿರುವ ಅವರ ಮನೆ ಬೀಗ ತೆಗೆದು ಒಳಗೆ ಕಾಲಿಟ್ಟು ಹತ್ತು ತಿಂಗಳೇ ಆಗಿತ್ತಂತೆ, ಇದೀಗ ಚುನಾವಣೆಗಾಗಿ ಹಗಲು ಬಂದು ಹೋಗುತ್ತಿದ್ದಾರಂತೆ, ಜೊತೆಗೆ ಆ ಮನೆಯನ್ನು ಮಾರಾಟಕ್ಕೂ ಇಟ್ಟಿದ್ದಾರಂತೆ. ಇವರಿಂದಾಗಿ ದೊಡ್ಡಗೌಡರನ್ನೂ ಕಳೆದುಕೊಂಡೆವು ಮುದ್ದಹನುಮೇಗೌಡರಾದರೂ ಗೆಲ್ಲಲಿ ಎಂದು ಮಧುಗಿರಿ, ಕೊರಟಗೆರೆಯ ಕುಂಚಿಟಿಗರು ಮನಸ್ಸು ಮಾಡುವರೇ ಎಂದೂ ಕಾದುನೋಡಬೇಕಿದೆ.
ಕ್ರ.ಸಂ |
ವಿಧಾನಸಭಾ ಕ್ಷೇತ್ರ |
ಶಾಸಕರು/ಪರಾಜಿತರು |
ಪಕ್ಷ |
2023 |
ಕಾಂಗ್ರೆಸ್ |
ಜೆಡಿಎಸ್ |
ಬಿಜೆಪಿ |
ಬಿಜೆಪಿ+ಜೆಡಿಎಸ್ |
128 |
ಚಿಕ್ಕನಾಯಕನಹಳ್ಳಿ |
ಸಿ.ಬಿ.ಸುರೇಶ ಬಾಬು |
ಜೆಡಿಎಸ್ |
71,036 |
50,996 |
71,036 |
60,994 |
1,32,030 |
ಜೆ.ಸಿ.ಮಾಧುಸ್ವಾಮಿ |
ಬಿಜೆಪಿ |
60,994 |
||||||
ಕಿರಣ್ ಕುಮಾರ್ |
ಕಾಂಗ್ರೆಸ್ |
50,996 |
||||||
129 |
ತಿಪಟೂರು |
ಕೆ.ಷಡಕ್ಷರಿ |
ಕಾಂಗ್ರೆಸ್ |
71,415 |
71,415 |
25,811 |
53,753 |
79,564 |
ಬಿ.ಸಿ.ನಾಗೇಶ್, |
ಬಿಜೆಪಿ |
53,753 |
||||||
ಶಾಂತಕುಮಾರ |
ಜೆಡಿಎಸ್ |
25,811 |
||||||
130 |
ತುರುವೇಕೆರೆ |
ಎಂ.ಟಿ.ಕೃಷ್ಣಪ್ಪ |
ಜೆಡಿಎಸ್ |
68,163 |
30,536 |
68,163 |
58,240 |
1,26,403 |
ಮಸಾಲಾ ಜಯರಾಂ, |
ಬಿಜೆಪಿ |
58,240 |
||||||
ಬೆಮೆಲ್ ಕಾಂತರಾಜು |
ಕಾಂಗ್ರೆಸ್ |
30,536 |
||||||
132 |
ತುಮಕೂರು ನಗರ |
ಜಿ.ಬಿ.ಜ್ಯೋತಿಗಣೇಶ್ |
ಬಿಜೆಪಿ |
59,165 |
46,900 |
55,967 |
59,165 0,8954 |
1,24,086 |
ಗೋವಿಂದರಾಜು, |
ಜೆಡಿಎಸ್ |
55,967 |
||||||
ಇಕ್ಬಾಲ್ ಅಹಮದ್ |
ಕಾಂಗ್ರೆಸ್ |
46,900 |
||||||
ಸೊಗಡು ಶಿವಣ್ಣ |
ಬಿಜೆಪಿ ಬಂ |
0,8954 |
||||||
133 |
ತು.ಗ್ರಾಮಾಂತರ |
ಬಿ.ಸುರೇಶಗೌಡ |
ಬಿಜೆಪಿ |
89,191 |
0,4056 |
84,597 |
89,191 |
1,73,788 |
ಡಿ.ಸಿ.ಗೌರಿಶಂಕರ್ |
ಜೆಡಿಎಸ್ |
84,597 |
||||||
ಷಣ್ಮುಖಪ್ಪ |
ಕಾಂಗ್ರೆಸ್ |
0,4056 |
||||||
134 |
ಕೊರಟಗೆರೆ(ಎಸ್‌ಸಿ) |
ಡಾ.ಜಿ.ಪರಮೇಶ್ವರ |
ಕಾಂಗ್ರೆಸ್ |
79,099 |
79,099 |
64,752 |
24,091 |
88,843 |
ಸುಧಾಕರ ಲಾಲ್, |
ಜೆಡಿಎಸ್ |
64,752 |
||||||
ಬಿ.ಹೆಚ್.ಅನಿಲ್‌ಕುಮಾರ್ |
ಬಿಜೆಪಿ |
24,091 |
||||||
135 |
ಗುಬ್ಬಿ |
ಎಸ್.ಆರ್.ಶ್ರೀನಿವಾಸ್ |
ಕಾಂಗ್ರೆಸ್ |
60,520 |
60,520 |
43,046 |
51,979 |
95025 |
ದಿಲೀಪ್ |
ಬಿಜೆಪಿ |
51,979 |
||||||
ನಾಗರಾಜು |
ಜೆಡಿಎಸ್ |
43,046 |
||||||
138 |
ಮಧುಗಿರಿ |
ಕೆ.ಎನ್.ರಾಜಣ್ಣ |
ಕಾಂಗ್ರೆಸ್ |
91,166 |
91,166 |
55,643 |
15,162 |
70,805 |
ವೀರಭದ್ರಯ್ಯ, |
ಜೆಡಿಎಸ್ |
55,643 |
||||||
ಎಲ್.ಸಿ.ನಾಗರಾಜ್ |
ಬಿಜೆಪಿ |
15,162 |
||||||
|
|
13,25,232 |
4,34,688 |
4,69,015 |
4,21,529 |
8,90,544 |