ಒಂದು ಗಳಿಗೆ - ಕುಚ್ಚಂಗಿ ಪ್ರಸನ್ನ - "ಕಾಂಗ್ರೆಸ್ಸೇ ಸಾಕಾ, ‘ಕಾರೂ’ ಪಕ್ಕದಲ್ಲಿ ಇರಬೇಕಾ?!"

ondugalige by kuchangi prasanna about gubbi political aspirants in bevarahani news paper

ಒಂದು ಗಳಿಗೆ  - ಕುಚ್ಚಂಗಿ ಪ್ರಸನ್ನ     - "ಕಾಂಗ್ರೆಸ್ಸೇ ಸಾಕಾ, ‘ಕಾರೂ’ ಪಕ್ಕದಲ್ಲಿ ಇರಬೇಕಾ?!"
Kuchchangi prasanna
ಒಂದು ಗಳಿಗೆ  - ಕುಚ್ಚಂಗಿ ಪ್ರಸನ್ನ     - "ಕಾಂಗ್ರೆಸ್ಸೇ ಸಾಕಾ, ‘ಕಾರೂ’ ಪಕ್ಕದಲ್ಲಿ ಇರಬೇಕಾ?!"
ಒಂದು ಗಳಿಗೆ  - ಕುಚ್ಚಂಗಿ ಪ್ರಸನ್ನ     - "ಕಾಂಗ್ರೆಸ್ಸೇ ಸಾಕಾ, ‘ಕಾರೂ’ ಪಕ್ಕದಲ್ಲಿ ಇರಬೇಕಾ?!"
ಒಂದು ಗಳಿಗೆ  - ಕುಚ್ಚಂಗಿ ಪ್ರಸನ್ನ     - "ಕಾಂಗ್ರೆಸ್ಸೇ ಸಾಕಾ, ‘ಕಾರೂ’ ಪಕ್ಕದಲ್ಲಿ ಇರಬೇಕಾ?!"
ಒಂದು ಗಳಿಗೆ  - ಕುಚ್ಚಂಗಿ ಪ್ರಸನ್ನ     - "ಕಾಂಗ್ರೆಸ್ಸೇ ಸಾಕಾ, ‘ಕಾರೂ’ ಪಕ್ಕದಲ್ಲಿ ಇರಬೇಕಾ?!"
ಒಂದು ಗಳಿಗೆ  - ಕುಚ್ಚಂಗಿ ಪ್ರಸನ್ನ     - "ಕಾಂಗ್ರೆಸ್ಸೇ ಸಾಕಾ, ‘ಕಾರೂ’ ಪಕ್ಕದಲ್ಲಿ ಇರಬೇಕಾ?!"
ಒಂದು ಗಳಿಗೆ  - ಕುಚ್ಚಂಗಿ ಪ್ರಸನ್ನ     - "ಕಾಂಗ್ರೆಸ್ಸೇ ಸಾಕಾ, ‘ಕಾರೂ’ ಪಕ್ಕದಲ್ಲಿ ಇರಬೇಕಾ?!"

ಒಂದು ಗಳಿಗೆ


ಕುಚ್ಚಂಗಿ ಪ್ರಸನ್ನ

ಕಾಂಗ್ರೆಸ್ಸೇ ಸಾಕಾ, ‘ಕಾರೂ’ ಪಕ್ಕದಲ್ಲಿ ಇರಬೇಕಾ?!

ವಿವಾದಗಳಿಗೂ ಗುಬ್ಬಿಯ ಎಂಎಲ್‌ಎ ಎಸ್.ಆರ್.ಶ್ರೀನಿವಾಸ್ ಅವರಿಗೂ ಎಲ್ಲಿಲ್ಲದ ನಂಟು, ಗುಬ್ಬಿ ತಾಲೂಕಿನ ಸೇರ‍್ವೆಗಾರರ ಪಾಳ್ಯದ ಅಚ್ಚ ಕನ್ನಡದಲ್ಲಿ ಎಗ್ಗು ಸಿಗ್ಗಿಲ್ಲದೇ ಮಾತನಾಡುವ ಈ ವಾಸಣ್ಣ ಶಾಸಕರಾದ ಈ ಎರಡು ದಶಕಗಳಲ್ಲಿ ಹಲವಾರು ಕಾಂಟ್ರವರ್ಸಿಗಳನ್ನು ಸೃಷ್ಟಿಸಿದ್ದಾರೆ. ನೀರಿನಲ್ಲಿ ಮುಳುಗುತ್ತಿದ್ದ ಬಾಲಕನ ಜೀವ ಉಳಿಸಿ ಅವಾರ್ಡ್ ಪಡೆದಿರುವ ದೇಶದ ಏಕೈಕ ಎಂಎಲ್‌ಎ ಇವರು. ಬಿಜೆಪಿ ಅಧ್ಯಕ್ಷ ಸುರೇಶ ಗೌಡರು ಆಪರೇಶನ್ ಕಮಲಕ್ಕೇ ಆಪರೇಶನ್ ಮಾಡಿದ ಖ್ಯಾತಿ ವಾಸಣ್ಣನವರದು. 


ಸರಿ ಸುಮಾರು 12 ವರ್ಷದ ಹಿಂದೆ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶಗೌಡರು ವಾಸಣ್ಣನವರನ್ನು ಜೆಡಿಎಸ್ ತೊರೆದು ಬಿಜೆಪಿಗೆ ಬರುವಂತೆ ಕರೆಯುತ್ತಾರೆ. ಎಷ್ಟು ಕೊಡ್ತೀರಾ, ಒಂದ್ ನೂರು ಕೋಟಿ ರೂಪಾಯಿ ಕೊಡ್ತೀರಾ ಅಂತ ವಾಸಣ್ಣ ಕೇಳ್ತಾರೆ, ಅಯ್ಯೋ ಅಷ್ಟೊಂದು ಆಗಲ್ಲ, 15 ಕೋಟಿ ಕೊಡ್ತೀವಿ ಜೊತೆಗೆ ಒಂದು ಪೋಸ್ಟ್ ಅಂತ ಸುರೇಶ್ ಗೌಡರು ಹೇಳ್ತಾರೆ, ಕಡೇ ಪಕ್ಷ 20 ಕೋಟೀನಾರ ಬ್ಯಾಡ್ವಾ ಅಂತ ಕೇಳ್ತಾರೆ ವಾಸಣ್ಣ, ಸರಿ, ಅಶೋಕಣ್ಣನ ಕೇಳಿ ಹೇಳ್ತೀನಿ ಅಂತಾರೆ ಗೌಡರು, ಕಡೆಗೆ 25 ಕೋಟಿಗೆ ಡೀಲ್ ಆಗಿತ್ತು ಅಂತ ವಾಸಣ್ಣ ಅಕ್ಟೋಬರ್ ತಿಂಗಳ ಕಡೇ ವಾರದಲ್ಲಿ ದೂರವಾಣಿ ಮಾತುಕತೆಯ ವಿಡಿಯೋ ಬಿಡುಗಡೆ ಮಾಡ್ತಾರೆ. ಈ ಘಟನೆ ಇಡೀ ಬಿಜೆಪಿಗೆ ದೊಡ್ಡದೊಂದು ಆಘಾತವಾಗಿ ಪರಿಣಮಿಸಿತ್ತು. 


ಕಾಂಗ್ರೆಸ್ ಅಧ್ಯಕ್ಷರಾಗಿದ್ದ ತಂದೆಯ ಹೆಜ್ಜೆಗಳಲ್ಲೇ ಹೆಜ್ಜೆ ಇಡುತ್ತ ರಾಜಕೀಯ ಪ್ರವೇಶಿಸಿ 2000ದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಶ್ರೀನಿವಾಸ್ 2004ರಲ್ಲಿ ದಿವಂಗತ ಜಿ.ಎಸ್.ಶಿವನಂಜಪ್ಪನವರ ಎದುರು ಕಾರಿನ ಗುರುತು ಪಡೆದು ಇಂಡಿಪೆಂಡೆಂಟ್ ಅಭ್ಯರ್ಥಿಯಾಗಿ ನಿಂತು 11 ಸಾವಿರಕ್ಕೂ ಹೆಚ್ಚು ಲೀಡಿಂಗ್‌ನಿಂದ ಗೆದ್ದು ಗುಬ್ಬಿಯ ಶಾಸಕರಾಗಿ ಬಿಡುತ್ತಾರೆ, ಸ್ವಾರಸ್ಯದ ಸಂಗತಿ ಎಂದರೆ ಹಾಲಿ ತುಮಕೂರು ಲೋಕಸಭಾ ಸದಸ್ಯರಾಗಿರುವ ಜಿ.ಎಸ್.ಬಸವರಾಜು 1994ರಲ್ಲಿ ಪಕ್ಷದ ಟಿಕೆಟ್ ತಪ್ಪಿಸಿ ತಾವೇ ಖುದ್ದು ಕಣಕ್ಕಿಳಿದುಬಿಟ್ಟಾಗ ಕಾಂಗ್ರೆಸ್ ಶಾಸಕರಾಗಿದ್ದ ಇದೇ ಶಿವನಂಜಪ್ಪನವರು ಇದೇ ಕಾರಿನ ಗುರುತು ಪಡೆದು ಇಂಡಿಪೆಂಡೆಂಟ್ ಆಗಿ ನಿಂತು ಗೆದ್ದಿದ್ದರು. 


ವಾಸಣ್ಣ 2004ರಿಂದ ನಾಲ್ಕು ಚುನಾವಣೆಗಳಲ್ಲೂ ನಿರಂತರ ಗೆಲ್ಲುತ್ತಲೇ ಬಂದಿದ್ದಾರೆ, ಎರಡನೇ ಚುನಾವಣೆಯಲ್ಲಿ ಮೊದಲ ಸಲಕ್ಕಿಂತ ಮೂರು ಸಾವಿರ ಹೆಚ್ಚು ಲೀಡಿಂಗ್ ಪಡೆದರು, 2013ರಲ್ಲಿ ಬಿಜೆಪಿಯ ಬೆಟ್ಟಸ್ವಾಮಿ ಎದುರು ಅವರ ಲೀಡಿಂಗ್ ಏಳು ಸಾವಿರಕ್ಕೆ ಇಳಿಯಿತು. 2018ರಲ್ಲಿ ಇದೇ ಬೆಟ್ಟಸ್ವಾಮಿ ಎದುರು ಇನ್ನೂ ಎರಡು ಸಾವಿರ ಹೆಚ್ಚು ಲೀಡಿಂಗ್ ಪಡೆದರಾದರೂ, ಬಿಜೆಪಿ ಬಂಡಾಯ ಅಭ್ಯರ್ಥಿ ಎಂಬಂತೆ ದಿಲೀಪ್ ನಿಂತು 30 ಸಾವಿರ ಚಿಲ್ಲರೆ ಓಟು ಕೀಳದೇ ಹೋಗಿದ್ದರೆ ಇವರಿಗೆ ಕಷ್ಟವಾಗುತ್ತಿತ್ತು.


“ ಪ್ರತಿ ಎಲೆಕ್ಷನ್‌ನಲ್ಲೂ ಮೀಡಿಯಾದೋರು ನಾನು ಸೋಲ್ತೀನಿ ಅಂತಾನೇ ಹೇಳ್ತಾ ಇರ‍್ತಾರೆ, ಆದರೆ ರಿಸಲ್ಟ್ ಮಾತ್ರ ಬೇರೆ ಬರುತ್ತೆ’ ಅಂತ ಆಗಾಗ ವಾಸಣ್ಣ ಹೇಳ್ತಾ ಇರ‍್ತಾರೆ, ಪ್ರತಿ ಚುನಾವಣೇಲೂ ಇವರಿಗೆ ಯಾರೋ ಹೇಗೋ ನೆರವಿಗೆ ಬಂದು ಬಿಡ್ತಾರೆ, ಅಷ್ಟೇ ಅಲ್ಲ ಇವರೂ ಕೂಡಾ ಪಕ್ಷದ ಮುಖ ಮೋರೆ ನೋಡದೇ ಇತರ ಚುನಾವಣೆಗಳಲ್ಲಿ ನೆರವು ಕೇಳಿದವರಿಗೆ ಇಲ್ಲ ಅನ್ನದೇ ನೆರವಾಗುತ್ತಾರೆ. ಕೆಲವೊಂದು ಸಲ ಅವರ ಮನಸ್ಸಿನ ಮಾತನ್ನೂ ಮೀರಿ ಕಾಳಗಕ್ಕೆ ಇಳಿದು ಬಿಡುತ್ತಾರೆ. ಕಳೆದ ವರ್ಷ ಗುಬ್ಬಿ ತಾಲೂಕಿನಲ್ಲಿ ಎಂಪಿ ಬಸವರಾಜು ವಿರುದ್ಧ ವೇದಿಕೆಯಲ್ಲೇ ನೇರಾ ನೇರಾ ಏಕವಚನಕ್ಕೆ ಜಗಳಕ್ಕೆ ಇಳಿದ ಪ್ರಸಂಗ ನೆನಪಿಸಿಕೊಳ್ಳಿ . 


ಸದ್ಯ ಜೆಡಿಎಸ್‌ನಿಂದ ಹೊರ ಬರುವುದು ಖಚಿತವಾಗಿರುವ ಹಾಗೂ ಕಾಂಗ್ರೆಸ್ ಸೇರುವುದನ್ನು ಬಹಿರಂಗವಾಗಿ ಖಚಿತವಾಗಿ ಹೇಳಿಕೊಳ್ಳದೇ ಇರುವ ವಾಸಣ್ಣನವರ ಬೆನ್ನಿಗೆ ಮಧುಗಿರಿ ಮಾಜಿ ಶಾಸಕರಾದ ಕೆ.ಎನ್.ರಾಜಣ್ಣನವರು ಗಟ್ಟಿಯಾಗಿ ನಿಂತಿದ್ದಾರೆ. ಈ ಸಲದ ವಿಧಾನ ಪರಿಷತ್ ಚುನಾವಣೆಯಲ್ಲಿ ವಾಸಣ್ಣ ಮತ್ತು ಅದೇ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಬೆಮೆಲ್ ಕಾಂತರಾಜು ಇಬ್ಬರೂ ಕೆಎನ್‌ಆರ್ ಮಗ ರಾಜೇಂದ್ರ ಅವರ ಪರ ಗಟ್ಟಿಯಾಗಿ ನಿಂತು ಗೆಲುವಿಗೆ ಸಹಕರಿಸಿದರು. ಮತ್ತು ಬೆಮೆಲ್ ಕಾಂತರಾಜು ಈಗಾಗಲೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ತುರುವೇಕೆರೆಯಲ್ಲಿ ಕಚೇರಿ ತೆರೆದು ಕೆಲಸ ಆರಂಭಿಸಿಬಿಟ್ಟಿದ್ದಾರೆ. ಆದರೆ ವಾಸಣ್ಣ ಮಾತ್ರ ಇನ್ನೂ ಏನನ್ನೂ ಹೇಳದೇ ಕಾದು ನೋಡುವ ತಂತ್ರದಲ್ಲೇ ಇದ್ದಾರೆ. ಅದಕ್ಕೆ ಸಕಾರಣವೂ ಇದೆ. ಒಂದು ಈಗಲೇ ಕಾಂಗ್ರೆಸ್ ಸೇರ್ಪಡೆ ಘೋಷಿಸಿದರೆ ಶಾಸಕತ್ವ ಇಲ್ಲವಾಗಿಬಿಡುತ್ತದೆ. ಮತ್ತೊಂದು ವಾಸಣ್ಣ ಸೇರ್ಪಡೆ ಹಾಗೂ ಟಿಕೆಟ್ ನೀಡಿಕೆಗೆ ಗುಬ್ಬಿ ತಾಲೂಕು ಕಾಂಗ್ರೆಸ್‌ನೊಳಗಿನ ತೀವ್ರ ವಿರೋಧ, ಗುಬ್ಬಿ ಕಾಂಗ್ರೆಸ್‌ನಲ್ಲಿ 2013ರ ಚುನಾವಣೆಗೆ ಟಿಕೆಟ್ ಪಡೆದು ಕಣಕ್ಕಿಳಿದು 18 ಸಾವಿರ ಚಿಲ್ಲರೆ ಓಟು ಪಡೆದು ಮೂರನೇ ಸ್ಥಾನಕ್ಕಿಳಿದಿರುವ ವೈನ್ ಮರ್ಚೆಂಟ್ಸ್ ಅಧ್ಯಕ್ಷ ಹೊನ್ನಗಿರಿಗೌಡರು ಹಾಗೂ 2018ರ ಚುನಾವಣೆಯಲ್ಲಿ ಅಂದಿನ ಸಂಸದ ಮುದ್ದಹನುಮೇಗೌಡರ ರಾಜಿಕಬೂಲಿ ರಾಜಕೀಯದಿಂದಾಗಿ ಮತದಾನ ಹತ್ತಿರ ಬರುತ್ತಿದ್ದಂತೆ ನಾಪತ್ತೆಯಾದ ರಿಯಲ್ ಎಸ್ಟೇಟ್ ಏಜೆಂಟ್ ಕುಮಾರ್‌ಗೆ ಟಿಕೆಟ್ ದೊರೆತು ತನಗೆ ಟಿಕೆಟ್ ಸಿಗಲಿಲ್ಲ, ಈ ಸಲವಾದರೂ ಟಿಕೆಟ್ ಕೊಡಿ ಎಂದು ದುಂಬಾಲು ಬಿದ್ದಿರುವ ಹೈಕೋರ್ಟ್ ವಕೀಲರಾದ ಜಿ.ಎಸ್.ಪ್ರಸನ್ನಕುಮಾರ್ ವಾಸಣ್ಣನವರ ಕಾಂಗ್ರೆಸ್ ಸೇರ್ಪಡೆಗೆ ದೊಡ್ಡ ಅಡ್ಡಿಯಾಗಿದ್ದಾರೆ. 


ಹಾಗಾಗಿ ಕಾಂಗ್ರೆಸ್ ಉನ್ನತ ವಲಯದಲ್ಲಿ ತಮಗೆ ಟಿಕೆಟ್ ಗ್ಯಾರಂಟಿ ಎಂಬಂತಿದ್ದರೂ ವಾಸಣ್ಣ ಘೋಷಣೆ ಮಾಡಲು ಮುಂದಾಗಿಲ್ಲ. ಜೊತೆ ಜೊತೆಗೇ ತಮ್ಮ ನೂರಾರು ಆಪ್ತ ಬೆಂಬಲಿಗರೊಂದಿಗೆ ಹಲವಾರು ಸಲ ಸಮಾಲೋಚನೆ ಮಾಡಿ, ಓಟಿಂಗ್ ಕೂಡಾ ಮಾಡಿಸಿ, ಕಾಂಗ್ರೆಸ್‌ಗೆ ಹೋಗಿ ನಿಲ್ಲುವುದು ಸೂಕ್ತವಾ ಅಥವಾ 2004ರಂತೆ ಇಂಡಿಪೆಂಡೆಂಟ್ ಆಗಿ ನಿಲ್ಲುವುದೇ ಸರೀನಾ ಎಂದು ಅಳೆದು ತೂಗುತ್ತಿದ್ದಾರೆ.


ಗುಬ್ಬಿ ಕ್ಷೇತ್ರದಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಳ್ಳಲು ಈಗ ಬಿಜೆಪಿಯಲ್ಲಿ ಸಂಸದರಾಗಿರುವ ಜಿ.ಎಸ್.ಬಸವರಾಜು ಅವರೇ ಕಾರಣ ಎಂದು ಪಕ್ಷ ಹೇಳುತ್ತದೆ. ಹೇಗಪ್ಪಾ ಅಂದರೆ, ತುರುವೇಕೆರೆ ಮೂಲದ ಜಿ.ಎಸ್.ಶಿವನಂಜಪ್ಪನವರು 1985 ಹಾಗೂ 1989ರಲ್ಲಿ ಗುಬ್ಬಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ಶಾಸಕರಾಗಿದ್ದರು. ಆದರೆ 1994ರಲ್ಲಿ ಇವರಿಗೆ ಟಿಕೆಟ್ ತಪ್ಪಿಸಿ ಜಿ.ಎಸ್.ಬಸವರಾಜು ಅವರೇ ಕಾಂಗ್ರೆಸ್ ಬಿ ಫಾರಂ ಪಡೆದು ನಿಂತು ಬಿಟ್ಟರು. ಈ ಇಬ್ಬರ ಕಾಲದಲ್ಲಿ ಇಡೀ ಗುಬ್ಬಿ ತಾಲೂಕಿನ ಹಳ್ಳಿಗಳಲ್ಲಿ ಲಿಂಗಾಯಿತರಲ್ಲೇ ಎರಡು ಬಣಗಳು ಸೃಷ್ಟಿಯಾಗಿ ಪೈಪೋಟಿ ಏರ್ಪಟಿತ್ತು. ಆ ಚುನಾವಣೆಯಲ್ಲಿ ಶಿವನಂಜಪ್ಪನವರು ಬಂಡಾಯವಾಗಿ ನಿಂತು ಜಿಎಸ್‌ಬಿ ಅವರನ್ನು 10 ಸಾವಿರ ಚಿಲ್ಲರೆ ಓಟುಗಳಿಂದ ಸೋಲಿಸಿಬಿಟ್ಟರು. 2004ರ ಚುನಾವಣೆಯಲ್ಲಿ ಶಿವನಂಜಪ್ಪನವರು ಜೆಡಿಎಸ್ ಕ್ಯಾಂಡಿಡೇಟ್ ಆಗಿದ್ದರು, ಆದರೆ ಆಗ ತಾನೇ ರಾಜಕೀಯ ಪ್ರವೇಶಿಸಿದ ಹುರುಪಿನಲ್ಲಿದ್ದ ಕುಮಾರಣ್ಣ ವಾಸಣ್ಣನವರ ಪರ ನಿಂತರು. ಪರಿಣಾಮ ಶಿವನಂಜಪ್ಪನವರು ಸೋತರು. 2004 ಮತ್ತು ಆ ನಂತರದ ಮೂರೂ ಚುನಾವಣೆಗಳಲ್ಲಿ ಪ್ರತಿ ಸಲವೂ ಕಾಂಗ್ರೆಸ್ ಅಭ್ಯರ್ಥಿಗಳು ಬದಲಾಗುತ್ತ ಬಂದಿದ್ದಾರೆ ಹಾಗೂ ಆ ಪಕ್ಷ ಕ್ರಮವಾಗಿ ನಾಲ್ಕು ಮತ್ತು ಮೂರನೇ ಸ್ಥಾನಕ್ಕೆ ಇಳಿದು ನಿಲ್ಲಬೇಕಾಗಿ ಬಂದಿದೆ.


1957ರಿಂದಲೂ ಗುಬ್ಬಿ ಕ್ಷೇತ್ರ ಇಂಡಿಪೆಂಡೆಂಟ್ ಅಥವಾ ಬಂಡಾಯವಾಗಿ ನಿಂತವರನ್ನೇ ಹೆಚ್ಚು ಗೆಲ್ಲಿಸುತ್ತ ಬಂದಿದೆ. 1957ರಲ್ಲಿ ಸಿ.ಜೆ.ಮುಕ್ಕಣ್ಣಪ್ಪ, 1962ರಲ್ಲಿ ವಿ.ಎಂ.ದೇವ್, 1994ರಲ್ಲಿ ಶಿವನಂಜಪ್ಪ ಹಾಗೂ 2004ರಲ್ಲಿ ಶ್ರೀನಿವಾಸ್ ಹೀಗೆ ಗೆದ್ದಿದ್ದಾರೆ, 1972, ಮತ್ತು 1978ರಲ್ಲಿ ಕಾಂಗ್ರೆಸ್‌ನ ಘಟ್ಟಿ ಚಂದ್ರಶೇಖರ್, 1983ರಲ್ಲಿ ಎರಡು ವರ್ಷದ ಅವಧಿಗೆ ಜನತಾಪಕ್ಷದ ಎಸ್.ರೇವಣ್ಣ ಗುಬ್ಬಿಯಿಂದ ಶಾಸಕರಾಗಿದ್ದರು. ನಂತರದ ಎರಡು ಅವಧಿಗೆ ಕಾಂಗ್ರೆಸ್‌ನಿಂದ ಜಿಎಸ್‌ಎಸ್ ಹೀಗೆ ಚುನಾವಣಾ ಇತಿಹಾಸವಿದೆ.


ಇವೆಲ್ಲವನ್ನು ಮೀರಿ 2018-19ರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಜೆಡಿಎಸ್‌ನಿಂದ ಎರಡು ಖಾತೆಗಳ ಮಂತ್ರಿಯೂ ಆಗಿದ್ದ ಶ್ರೀನಿವಾಸ್ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ನಡುವೆ ಅದ್ಯಾವ ಘನಂದಾರಿ ಕಾರಣಕ್ಕೆ ವಿವಾದ ಉಂಟಾಯಿತು ಎಂಬುದನ್ನು ಇಬ್ಬರೂ ಬಾಯಿ ಬಿಟ್ಟು ಹೇಳಲಿಲ್ಲವಾದರೂ, ವಿಘಟನೆ ಆಗೇ ಬಿಟ್ಟಿತು. ವಾಸಣ್ಣನವರ ಹಳ್ಳಿ ವರಸೆಯ ಮಾತುಗಳೂ ಕಾರಣ ಎನ್ನುವವರೂ ಇದ್ದಾರೆ. ಅದೆಲ್ಲ ಈಗ ಲೆಕ್ಕಕ್ಕಿಲ್ಲ, ಜೆಡಿಎಸ್ ಇದೇ ವಾಸಣ್ಣನವರ ನೆರವಿನೊಂದಿಗೆ ರಾಜಕಾರಣ ಮಾಡುತ್ತಿದ್ದ ನಾಗರಾಜು ಅವರನ್ನು ಅಭ್ಯರ್ಥಿ ಅಂತ ಘೋಷಿಸಿದೆ, ಶನಿವಾರ ತಾನೇ ಬಿದರೆ ಗ್ರಾಪಂ ಅಧ್ಯಕ್ಷರೂ ಸೇರಿ 263 ಜೆಡಿಎಸ್ ಕಾರ್ಯಕರ್ತರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಕೊಟ್ಟು ‘ವಾಸಣ್ಣನವರ ಪಕ್ಷ’ ಸೇರಿದ್ದಾರೆ. ಈ ರಾಜಿನಾಮೆ ಪರ್ವಕ್ಕೆ ಇವರು ನಾಂದಿ ಹಾಡಿದ್ದಾರೆ. ಹೀಗೆ ಬಲಾಬಲ ಪ್ರದರ್ಶನಕ್ಕೆ ವಾಸಣ್ಣ ಅಖಾಡ ಸಜ್ಜುಗೊಳಿಸಿಕೊಂಡಿದ್ದಾರೆ. 


ಇತ್ತ ರಾಹುಲ್ ಗಾಂಧಿ ಪಾದಯಾತ್ರೆ ಕೂಡಾ ಬರುವ ವಾರ ಗುಬ್ಬಿ ಕ್ಷೇತ್ರದೊಳಗಿಂದ ಹಾದು ಹೋಗುತ್ತಿದೆ. ಕಾಂಗ್ರೆಸ್ ಸೇರ್ಪಡೆಗೆ ಸಿದ್ದರಾಗಿರುವ ವಾಸಣ್ಣ ಇಂಥ ಐತಿಹಾಸಿಕ ಸಂದರ್ಭವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ದಿನ ತಪ್ಪದೇ ಕ್ಷೇತ್ರಕ್ಕೆ ಭೇಟಿ ನೀಡುವ ಅವರಿಗೆ ಇಂಥದ್ದೆಲ್ಲ ದೊಡ್ಡದು ಎನಿಸುವುದಿಲ್ಲ. ಜಸ್ಟ್ ವೇಟ್ ಅಂಡ್ ಸೀ.