ಔಟ್ ಗೋಯಿಂಗ್ ಎಂಪಿ ಜಿ.ಎಸ್.ಬಸವರಾಜ್ ಸೋಮಣ್ಣನವರನ್ನು ಗೆಲ್ಲಿಸುವರೇ?!

   ತಂತ್ರಗಾರಿಕೆಯಲ್ಲಿ ನಿಪುಣರಾದವರನ್ನು ಚಾಣಕ್ಯ ಅಂತ ಕರೆಯುತ್ತಾರೆ, ಇಂದಿಗೆ 2300 ವರ್ಷಗಳ ಹಿಂದೆ ಇದ್ದ ವಿಷ್ಣು ಗುಪ್ತ ಎಂಬ ಹೆಸರಿನ ಕೌಟಿಲ್ಯ ಎಂದೇ ಪ್ರಸಿದ್ಧನಾದ ವ್ಯಕ್ತಿ ಈ ಚಾಣಕ್ಯ. ಚಣಕನ ಮಗನಾಗಿದ್ದರಿಂದ ಚಾಣಕ್ಯ ಎಂಬ ಹೆಸರು ಬಂತೆAದು ಹೇಳುತ್ತಾರೆ, ಅಥವಾ ಚಾಣಾಕ್ಷ ಎಂಬ ಪದವೇ ಕಾಲಾನುಕ್ರಮದ ಬಳಕೆಯಲ್ಲಿ ಚಾಣಕ್ಯ ಎಂದಾಗಿರಬೇಕು. ಇವತ್ತಿನ ಪಾಕಿಸ್ತಾನ- ಆಘ್ಘಾನಿಸ್ತಾನಕ್ಕೆ ಸೇರಿಹೋಗಿರುವ ಆ ಕಾಲದ ಗಾಂಧಾರ ದೇಶದ ಪ್ರಖ್ಯಾತ ತಕ್ಷ ಶಿಲಾ ವಿಶ್ವವಿದ್ಯಾಲಯದಲ್ಲಿ ಈತ ಅರ್ಥಶಾಸ್ತ್ರದ ಪ್ರಾಧ್ಯಾಪಕನಾಗಿದ್ದನಂತೆ.

ಔಟ್ ಗೋಯಿಂಗ್ ಎಂಪಿ ಜಿ.ಎಸ್.ಬಸವರಾಜ್ ಸೋಮಣ್ಣನವರನ್ನು ಗೆಲ್ಲಿಸುವರೇ?!

 

ಕುಚ್ಚಂಗಿ ಪ್ರಸನ್ನ

99% ಲೋಕಲ್

         ಅಸಾಧಾರಣ ಪ್ರತಿಭಾವಂತ. ಹಿಡಿದ ಕೆಲಸವನ್ನು ಪಟ್ಟು ಹಿಡಿದು, ಸಾಧಿಸುವ ಸ್ವಭಾವದವನು. ಸಕಲ ಶಾಸ್ತ್ರ ಪಾರಂಗತ, ಅರ್ಥಶಾಸ್ತ್ರ ಪ್ರವೀಣ. ರಾಜನೀತಿ ವಿಶಾರದ. ಸಾಮ, ದಾನ, ಭೇದ, ದಂಡ ಎಂಬ ಚತುರೋಪಾಯಗಳಲ್ಲಿ ಪರಿಣಿತನಾದವನು, ತುಂಬಾ ಅನುಭವಿ, ಸೂಕ್ಷ್ಮಮತಿ. ಆತನ ಮನಸ್ಸಿನ ಅಭಿಪ್ರಾಯವನ್ನು ಹೀಗೆಂದು ತಿಳಿಯಲು ಯಾರಿಗೂ ಸಾಧ್ಯವಿಲ್ಲ. ಬಹಳ ರಹಸ್ಯವಾಗಿ ಕೆಲಸ ಮಾಡುವವನು. ಬಹುದೂರದ ಅಲೋಚನೆ, ಯಾವ ಕೆಲಸದಲ್ಲಿಯೇ ಆಗಲಿ ಆತ ಇಟ್ಟ ಗುರಿ, ಮಾಡಿದ ಅಂದಾಜು ಎಂದೂ ತಪ್ಪುತ್ತಿರಲಿಲ್ಲ. ಮಹಾತ್ಯಾಗಿ, ಮಹಾ ತಪಸ್ವಿ. ಹೊರನೋಟಕ್ಕೆ ತುಂಬ ಕಠಿಣ ಸ್ವಭಾವದವನು. ಅಪಾರ ಲೋಕಾನುಭವವಿದ್ದವನು. ಶತ್ರುಗಳನ್ನು ಸಂಹಾರ ಮಾಡುವುದರಲ್ಲಿ ಬಗೆಬಗೆಯ ತಂತ್ರಗಳನ್ನು ಸಮಯವರಿತು ಎಚ್ಚರಿಕೆಯಿಂದ ಮಾಡುವಾತ. ಆತನಿಗೆ ತಿಳಿಯದ ಶಾಸ್ತ್ರವಿಲ್ಲ. ಗೊತ್ತಿಲ್ಲದ ವಿಚಾರವಿಲ್ಲ. ಅದೊಂದು ಪ್ರತಿಭಾಪುಂಜ. ಹೀಗೆ ಚಾಣಕ್ಯನನ್ನು ಬಣ್ಣಿಸಲಾಗಿದೆ.

ಇಂಡಿಯಾದ ರಾಜಕಾರಣದ ಮಟ್ಟಿಗೆ ಇವತ್ತು ಒಕ್ಕೂಟ ಸರ್ಕಾರದ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಚಾಣಕ್ಯ ಅಂತ ಕರೆಯುತ್ತಿದ್ದಾರೆ, ಹಾಗೆಯೇ ತುಮಕೂರು ಜಿಲ್ಲೆಯ ರಾಜಕಾರಣಿಗಳ ಮಟ್ಟಿಗೆ ತುಮಕೂರು ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಅವರನ್ನು ಚಾಣಕ್ಯ ಅಂತ ಬರೆದದ್ದನ್ನು ಮೊನ್ನೆ ಎಲ್ಲೋ ಓದಿದೆ. ಸಂಸತ್ತಿನಲ್ಲಿ ನಮ್ಮ ಜಿಲ್ಲೆಯನ್ನು ಐದು ಸಲ ಅಂದರೆ 25 ವರ್ಷ ಅಂದರೆ ಕಾಲು ಶತಮಾನ ಪ್ರತಿನಿಧಿಸಿದವರು ಈ ಜಿ.ಎಸ್.ಬಸವರಾಜ್.

ಇವರ ಕುರಿತು ವಿಕಿಪೀಡಿಯಾದಲ್ಲಿ ಹೀಗೆ ದಾಖಲಿಸಲಾಗಿದೆ:

“ಗಂಗಸಂದ್ರ ಸಿದ್ದಪ್ಪ ಬಸವರಾಜ್ (ಜನನ 1941) ಒಬ್ಬ ಭಾರತೀಯ ರಾಜಕಾರಣಿ. ಅವರು ಲೋಕಸಭೆಯ ಸದಸ್ಯರಾಗಿದ್ದಾರೆ (2019–ಇಂದಿನವರೆಗೆ), 2019 ರಲ್ಲಿ ತುಮಕೂರು ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ. ಅವರು ತಮ್ಮ ರಾಜಕೀಯ ಜೀವನವನ್ನು ಕಾಂಗ್ರೆಸ್‌ನೊಂದಿಗೆ ಪ್ರಾರಂಭಿಸಿದರು ಮತ್ತು ಈಗ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರಾಗಿದ್ದಾರೆ . ಅವರು 2019 ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸುಮಾರು 15,000(13,339) ಮತಗಳ ಅಂತರದಿಂದ ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡರನ್ನು ಸೋಲಿಸಿದರು. ಇವರು ತುಮಕೂರಿನಿಂದ ಐದು ಬಾರಿ ಲೋಕಸಭೆಗೆ ಚುನಾಯಿತರಾಗಿದ್ದಾರೆ, 1984, 1989 ಮತ್ತು 1999 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿ ಮತ್ತು 2009 ಮತ್ತು 2019 ರಲ್ಲಿ ಬಿಜೆಪಿ ಸದಸ್ಯರಾಗಿ. 2004 ರ ಚುನಾವಣೆಯಲ್ಲಿ ಇವರು ತುಮಕೂರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಹಿಂದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೂರನೇ ಸ್ಥಾನ ಪಡೆದರು. ಈ ಸೋಲಿನ ನಂತರ ಅವರು ಬಿಜೆಪಿ ಸೇರಿದರು. 2014ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋತಿದ್ದರು.” 2019ರಲ್ಲಿ ದೇವೇಗೌಡರ ವಿರುದ್ಧ ಗೆದ್ದರು, 2024ರಲ್ಲಿ ಅವರು ಚುನಾವಣೆಯಲ್ಲಿ ವಯೋಮಾನದ ಕಾರಣಕ್ಕೆ ಸ್ಪರ್ಧಿಸಿಲ್ಲ.

     ಇವತ್ತು ಬಹುಪಾಲು ತುಮಕೂರಿನ ಭಾಗವಾಗಿರುವ, ಈ ಮಹಾನಗರದ ಪಶ್ಚಿಮ ಭಾಗದಲ್ಲಿರುವ ಒಂದು ಪುಟ್ಟ ಹಳ್ಳಿ ಗಂಗಸಂದ್ರ. ಮೆಳೆಕೋಟೆ, ಸದಾಶಿವನಗರ ಅಥವಾ ಗುಬ್ಬಿ ಗೇಟ್ ಮುಖಾಂತರ ರಿಂಗ್ ರಸ್ತೆ ದಾಟಿ ಗಂಗಸಂದ್ರ ತಲುಪಬಹುದು. ರೈತ ಕುಟುಂಬದಲ್ಲಿ ಮೂವರು ಸೋದರರಲ್ಲಿ ಒಬ್ಬರಾಗಿ ಜನಿಸಿದ ಜಿ.ಎಸ್.ಬಸವರಾಜು ಕಾನೂನು ಪದವೀಧರರು, ಜೊತೆಗೆ ತಮ್ಮ ಶಿವಣ್ಣನವರ ಪರಶಿವ ಟ್ರೇಡರ್ಸ್ನಲ್ಲಿ ಕೈ ಬೋರ್, ಪಂಪು,ಮೋಟರ್‌ಗಳ, ಆನಂತರ ಮಂಡಿಯ ವ್ಯವಹಾರ ಗಮನಿಸುತ್ತಿದ್ದವರು. ರಾಜಕೀಯವಾಗಿ ಅಂದಿನ ಕಾಂಗ್ರೆಸ್ ಲೋಕಸಭಾ ಸದಸ್ಯ ದಿವಂಗತ ಕೆ.ಲಕ್ಕಪ್ಪನವರನ್ನು ಅನುಸರಿಸಿ ಬೆಳೆದವರು. ಕೆ.ಲಕ್ಕಪ್ಪನವರ ಊರು ಗೂಳೂರು-ಕೈದಾಳಕ್ಕೆ ಲಗತ್ತಾದ ಕೊಂಡಾಪುರ . ಕೊಂಡಾಪುರದಲ್ಲಿ ಬಸವರಾಜು ಅವರ ಸಂಬಂಧಿಕರಿದ್ದರು. ಕೆ.ಲಕ್ಕಪ್ಪನವರು ಪ್ರಾಕ್ಟೀಸಿಂಗ್ ಕ್ರಿಮಿನಲ್ ಲಾಯರ್ ಆಗಿದ್ದರು, ಬಸವರಾಜು ಲಾ ಓದಿ ವಕೀಲರಾಗಿ ದಿವಂಗತ ಸಂಸದ ಎಸ್.ಮಲ್ಲಿಕಾರ್ಜುನಯ್ಯನವರ ಜೂನಿಯರ್ ಆದವರು.

      ಕೆ.ಲಕ್ಕಪ್ಪನವರು ಪ್ರಜಾ ಸೋಶಲಿಷ್ಟ್ ಪಾರ್ಟಿ(ಪಿಎಸ್‌ಪಿ) ಯಲ್ಲಿ ಸಕ್ರಿಯರಾಗಿದ್ದರು, ಅವರ ತಂಗಿ ಗಂಡ ಎಸ್.ತಿಮ್ಮಯ್ಯನವರು ಆಗ ತಾಲೂಕು ಬೋರ್ಡ್ ಮೆಂಬರ್ ಆಗಿದ್ದರು. ಲಕ್ಕಪ್ಪನವರು ತಿಮ್ಮಯ್ಯನವರಿಗೆ ರಾಜಿನಾಮೆ ಕೊಡಿಸಿ ಬಸವರಾಜು ಅವರನ್ನು ತಾಲೂಕು ಬೋರ್ಡ್ ಮೆಂಬರ್ ಮಾಡುತ್ತಾರೆ. ನಂತರ ಎಪಿಎಂಸಿಗೂ ಬಸವರಾಜು ಅವರನ್ನು ನಾಮಿನೇಟ್ ಮಾಡಿಸುತ್ತಾರೆ .ಸ್ವತಂತ್ರ ಭಾರತದಲ್ಲಿ ಚುನಾವಣೆಗಳು ಆರಂಭಗೊಂಡ ನಂತರದ ಎರಡು ಚುನಾವಣೆಗಳಲ್ಲೂ ಕ್ರಮವಾಗಿ ಕಾಂಗ್ರೆಸ್‌ನ ಅಭ್ಯರ್ಥಿಗಳೇ ಗೆಲ್ಲುತ್ತಾ ಬಂದಿದ್ದರು. 1957ರಲ್ಲಿ ಸಿ.ಆರ್.ಬಸಪ್ಪ ಮತ್ತು 1962ರಲ್ಲಿ ಎಂ.ವಿ.ಕೃಷ್ಣಪ್ಪ ತುಮಕೂರಿನಿಂದ ಲೋಕಸಭೆಗೆ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. 1967ರಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಪಿಎಸ್‌ಪಿ ಅಭ್ಯರ್ಥಿಯಾಗಿ ಕೆ.ಲಕ್ಕಪ್ಪನವರು ಚುನಾಯಿತರಾಗಿ ಈ ಕ್ಷೇತ್ರದ ಮೇಲೆ ಕಾಂಗ್ರೆಸ್ ಹೊಂದಿದ್ದ ಹಿಡಿತವನ್ನು ಸಡಿಲಗೊಳಿಸುತ್ತಾರೆ.

      1969ರ ನವೆಂಬರ್ 12ರಂದು ಇಂದಿರಾ ಗಾಂಧಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಕಾರಣದಿಂದ ಉಚ್ಚಾಟಿಸಿದ ಪರಿಣಾಮ ಕಾಂಗ್ರೆಸ್ ವಿಭಜನೆಗೊಳ್ಳುತ್ತದೆ. ಕಾಮರಾಜ್, ಮೊರಾರ್ಜಿ ದೇಸಾಯಿ ತರದ ಹಿರಿಯರು ಉಳಿದುಕೊಂಡ ಕಾಂಗ್ರೆಸ್ (ಓ) ಆಗುತ್ತದೆ, ಇಂದಿರಾ ಅವರ ಬಣ ಕಾಂಗ್ರೆಸ್ (ಆರ್) ಅಂತಲೂ ನಂತರ ಕಾಂಗ್ರೆಸ್ (ಐ) ಎಂತಲೂ ಈಗ ಬರೀ ಕಾಂಗ್ರೆಸ್ ಆಗಿಯೂ ಉಳಿದು ಬಂದಿದೆ. ಕಾಂಗ್ರೆಸ್ (ಓ) 1977ರ ತುರ್ತು ಪರಿಸ್ಥಿತಿ ನಂತರದ ಚುನಾವಣೆಯಲ್ಲಿ ಜನತಾ ಪಕ್ಷದ ಹೆಸರಿನಲ್ಲಿ ಕಣಕ್ಕಿಳಿಯುತ್ತದೆ, ಇದು ಇತಿಹಾಸ. ಲಕ್ಕಪ್ಪನವರು 1970ರಲ್ಲಿ ಕಾಂಗ್ರೆಸ್ ಸೇರಿ 1971ರ ಮಹಾ ಚುನಾವಣೆಯಲ್ಲಿ ತುಮಕೂರಿನಿಂದ ಲೋಕಸಭೆಗೆ ಎರಡನೇ ಭಾರಿಗೆ ಚುನಾಯಿತರಾಗುತ್ತಾರೆ. ಲಕ್ಕಪ್ಪನವರ ನೆರಳಲ್ಲೇ ಬಸವರಾಜು ಅವರೂ ರಾಜಕಾರಣ ಪ್ರವೇಶಿಸಿ ಕಾಂಗ್ರೆಸ್ ಸೇರುತ್ತಾರೆ.

     1978ರಲ್ಲಿ ಗುಬ್ಬಿ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಕಣಕ್ಕಿಳಿಯುವ ಮೂಲಕ ಜಿ.ಎಸ್.ಬಸವರಾಜ್ ಅವರ ಚುನಾವಣಾ ರಾಜಕೀಯ ಜೀವನ ಆರಂಭಗೊಳ್ಳುತ್ತದೆ. ಮೊದಲ ಚುನಾವಣೆಯಲ್ಲಿ ಬಸವರಾಜ್ ಕೇವಲ 3076 ಓಟು ಪಡೆಯುವ ಮೂಲಕ ಮೂರನೇ ಸ್ಥಾನಕ್ಕಿಳಿಯುತ್ತಾರೆ. ಜನತಾ ಪಕ್ಷದ ಸಾಗರನಹಳ್ಳಿ ರೇವಣ್ಣನವರು 24,117 ಓಟು ಪಡೆದು ಸೋತರೆ, 28,186 ಓಟು ಗಳಿಸಿದ ಕಾಂಗ್ರೆಸ್ (ಐ)ನ ಗಟ್ಟಿ ಚಂದ್ರಶೇಖರ್ ಶಾಸಕರಾಗಿ ಚುನಾಯಿತರಾಗುತ್ತಾರೆ. ಗುಬ್ಬಿ ತಾಲೂಕು ತಮ್ಮ ಪೂರ್ವಿಕರ ಊರು ಎಂಬ ನೆನಪಿನಲ್ಲೋ ಏನೋ ಜಿ.ಎಸ್.ಬಸವರಾಜ್ ಗುಬ್ಬಿಯಿಂದ ಶಾಸಕರಾಗಬೇಕು ಎಂಬ ಹಂಬಲವನ್ನು ಲೋಕಸಭಾ ಸದಸ್ಯರಾದ ಮೇಲೂ ಬಿಡುವುದೇ ಇಲ್ಲ. ಹಾಗಾಗಿ, 1994ರಲ್ಲಿ ಅಂದಿನ ಹಾಲಿ ಶಾಸಕ ದಿವಂಗತ ಜಿ.ಎಸ್.ಶಿವನಂಜಪ್ಪನವರಿಗೆ ಪಕ್ಷದ ಟಿಕೆಟ್ ತಪ್ಪಿಸಿ ತಾವೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ. ಆದರೆ ಟಿಕೆಟ್ ವಂಚಿತರಾದ ಜಿ.ಎಸ್.ಶಿವನಂಜಪ್ಪನವರು ಪಕ್ಷೇತರರಾಗಿ ಕಾರಿನ ಗುರುತಿನಿಂದ ಕಣಕ್ಕಿಳಿದು 37374 ಓಟು ಗಳಿಸಿ ಜಿ.ಎಸ್.ಬಸವರಾಜ್ ಅವರನ್ನು ಸೋಲಿಸುತ್ತಾರೆ. ಆ ಚುನಾವಣೆಯಲ್ಲಿ ಬಸವರಾಜು ಅವರು ಗಳಿಸಿದ ಓಟುಗಳ ಸಂಖ್ಯೆ 28,684. ಐದು ಸಲ ಎಂಪಿಯಾದರೂ ಒಂದೇ ಒಂದು ಸಲ ಗುಬ್ಬಿಯಿಂದ ಶಾಸಕರಾಗಿ ಗೆಲ್ಲಲು ಸಾಧ್ಯವಾಗದೇ ಇರುವ ಕಾರಣದಿಂದಾಗಿಯೇ ಏನೋ ಆ ಕ್ಷೇತ್ರದಿಂದ ಕಣಕ್ಕಿಳಿಯುವ ಯಾವ ಲಿಂಗಾಯತ ಅಭ್ಯರ್ಥಿಯನ್ನೂ ಗೆಲ್ಲಲು ಜಿಎಸ್‌ಬಿ ಬಿಡುತ್ತಿಲ್ಲ ಎಂಬ ಆಪಾದನೆ ಅವರ ಮೇಲಿದೆ. ಮೊನ್ನೆ ತುಮಕೂರು ಲೋಕಸಭೆಗೆ ಸ್ಪರ್ಧಿಸಿಲು ಅವಕಾಶ ದೊರಕಲಿಲ್ಲ ಎಂದು ಕೋಪದಿಂದ ಕ್ರುದ್ಧರಾದ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿಯವರು ಮಾಧ್ಯಮಗಳ ಮುಂದೆ ಒಂದು ಗಂಟೆ ಕಾಲ ಮಾತನಾಡುವಾಗ , “2023ರ ವಿಧಾನ ಸಭಾ ಚುನಾವಣೆಯಲ್ಲಿ ಇದೇ ಜಿ.ಎಸ್.ಬಸವರಾಜು ಅವರ ಹಿಂಬಾಲಕರ ಮೂಲಕ ಗುಬ್ಬಿಯಲ್ಲಿ ದಿಲೀಪ್ ಮತ್ತು ಚಿಕ್ಕನಾಯಕನಹಳ್ಳಿಯಲ್ಲಿ ನನ್ನನ್ನು ಸೋಲಿಸಿದರು. ನಮ್ಮಿಬ್ಬರನ್ನು ಶಾಸಕರಾಗಿ ಚುನಾಯಿತರಾಗಲು ಬಿಟ್ಟಿದ್ದರೆ ಈ ಲೋಕಸಭಾ ಚುನಾವಣೆಯಲ್ಲಿ ನಾವಿಬ್ಬರೂ ಅವರು ಹೇಳಿದವರಿಗೆ ಗೇಯ್ಮೆ ಮಾಡುತ್ತಿದ್ದೆವು” ಎಂದು ಹೇಳಿದ್ದನ್ನು ಗಮನಿಸಬೇಕಿದೆ. ಇದು ಬಸವರಾಜು ಅವರ ರಾಜಕಾರಣದ ಒಂದು ಸ್ಯಾಂಪಲ್ ಅಷ್ಟೇ.

    ಮೂರು ಸಲ ಕಾಂಗ್ರೆಸ್‌ನಿಂದ ಎರಡು ಸಲ ಬಿಜೆಪಿಯಿಂದ ಲೋಕಸಭೆಯಲ್ಲಿ ತುಮಕೂರನ್ನು ಪ್ರತಿನಿಧಿಸಿದ ಜಿ.ಎಸ್.ಬಸವರಾಜ್ ತುಮಕೂರು ಜಿಲ್ಲೆಯನ್ನು ಅಭಿವೃದ್ಧಿ ಮಾಡುವುದು ಇರಲಿ, ತೀವ್ರ ಸಂಕಷ್ಟದಲ್ಲಿರುವ ಜಿಲ್ಲೆಯ ರೈತರ ಸಮಸ್ಯೆಗಳ ಬಗ್ಗೆ ಎಂದಾದರೂ ಸಂಸತ್‌ನಲ್ಲಿ ಮಾತನಾಡಿದ್ದು ಉಂಟೇ, ಜಿಲ್ಲೆಯ ಒಣಪ್ರದೇಶಗಳಾದ ಪಾವಗಡ, ಮಧುಗಿರಿ, ಕೊರಟಗೆರೆ, ಶಿರಾ ಮತ್ತು ಗುಬ್ಬಿ ತಾಲೂಕುಗಳನ್ನು ತನುವು ಮಾಡಲು ಸಾಧ್ಯವಿರುವ ಭದ್ರ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ರೂ.5300 ಕೋಟಿ ನಿಗದಿ ಪಡಿಸಿ, ಒಂದು ರೂಪಾಯಿಯನ್ನೂ ಬಿಡುಗಡೆ ಮಾಡದೇ ಇದ್ದಾಗ ಆ ಮೊತ್ತವನ್ನು ಬಿಡುಗಡೆ ಮಾಡಿ ಎಂದು ಯಾಕೆ ಕೇಳಲಿಲ್ಲ, ಜಿಲ್ಲೆಯಲ್ಲಿ ಕಾಮಗಾರಿಗಳು ಆರಂಭಗೊಂಡು ನಂತರ ಸ್ಥಗಿತಗೊಂಡಿರುವ ರಾಯದುರ್ಗ ಮತ್ತು ದಾವಣಗೆರೆ ರೈಲ್ವೆ ಯೋಜನೆಗೆ ಹಣ ಬಿಡುಗಡೆ ಮಾಡಿಸಲು ಯಾವ ಕ್ರಮ ಕೈಗೊಂಡಿದ್ದಾರೆ, ಎಂಪಿ ಗ್ರಾಂಟ್ ಏನಾಯಿತು, ಆದರ್ಶ ಗ್ರಾಮಗಳು ಎಲ್ಲಿ ಎಂದೆಲ್ಲ 2014-2019ರ ಅವಧಿಯಲ್ಲಿ ಈ ಕ್ಷೇತ್ರದ ಸಂಸದರಾಗಿದ್ದು , 2019ರಲ್ಲಿ ಟಿಕೆಟ್ ವಂಚಿತರಾಗಿ ಈಗ ಮತ್ತೆ 2024ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಎಸ್.ಪಿ.ಮುದ್ದಹನುಮೇಗೌಡರು ಕೇಳುವ ಪ್ರಶ್ನೆಗೆ ಜಿ.ಎಸ್.ಬಸವರಾಜ್ ಬೇಡ, ಅವರೊಂದಿಗೆ ಹೆಚ್ಚೂ ಕಮ್ಮಿ ಕಳೆದ 40 ವರ್ಷಗಳಿಂದ (ದೇವೇಗೌಡರಿಗೆ ದತ್ತ ಇದ್ದಂತೆ) ಇರುವ ಮಹಾನ್ ಪ್ಲಾನುಗಾರ ಕುಂದರನಹಳ್ಳಿ ರಮೇಶ್ ಏನು ಹೇಳುತ್ತಾರೆ ಕೇಳಿ ನೋಡಿ.

     ವಯೋಮಾನದ ಕಾರಣಕ್ಕೆ ಚುನಾವಣೆಗೆ ಇಳಿಯುವುದಿಲ್ಲ ಎಂದು ವರ್ಷದ ಮೊದಲೇ ಘೋಷಿಸಿದ ಜಿ.ಎಸ್.ಬಸವರಾಜ್ ಕಳೆದ ಚುನಾವಣೆಯಲ್ಲಿ ಯಾವ ದೇವೇಗೌಡರನ್ನು ಹೇಮಾವತಿ ನೀರು ಮತ್ತು ಕ್ಷೇತ್ರದ ಹೊರಗಿನವರು ಎಂಬ ಕಾರಣಗಳನ್ನು ಮುಂದಿಟ್ಟು ಸೋಲಿಸಿದರೋ ಅದೇ ದೇವೇಗೌಡರ ಅಕ್ಕಪಕ್ಕ ಕೂತು ಮತ್ತದೇ ʼಹೊರಗಿನವರುʼ ಎಂಬ ಹಣೆಪಟ್ಟಿ ಹೊತ್ತಿರುವ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ವಿ.ಸೋಮಣ್ಣನವರನ್ನು ಗೆಲ್ಲಿಸಲು ಪ್ರಯಾಸಪಡುತ್ತಿದ್ದಾರೆ. ಮತ್ತು ಈ ಸೋಮಣ್ಣನವರಿಗೆ ತುಮಕೂರಿನಿಂದ ಟಿಕೆಟ್ ಕೊಡಿಸಲು ಬಹಳ ಶ್ರಮಪಟ್ಟರು ಎಂಬ ಕಾರಣದಿಂದಾಗಿಯೇ ಮಾಜಿ ಸಚಿವ ಮಾಧುಸ್ವಾಮಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

     ಇವರ ರಾಜಕೀಯ ಗ್ರಾಫ್‌ನಲ್ಲಿ ಸೋಲು, ಗೆಲುವು, ಮೂರನೇ ಸ್ಥಾನ ಇಂಥವುಗಳೆಲ್ಲ ಲೆಕ್ಕಕ್ಕಿಲ್ಲ. ಸೋತರೇನು ಸೂಲು ತಪ್ಪಿದರೆ ಗೊಡ್ಡೇ ಎನ್ನುತ್ತಾರೆ ಪಕ್ಕಾ ರೈತ ಜಿಎಸ್‌ಬಿ. ಜಿ.ಎಸ್.ಬಸವರಾಜ್ ಲೋಕಸಭಾ ಚುನಾವಣೆಯಲ್ಲಿ ಐದು ಸಲ ಗೆದ್ದು ಮಾಡಿರುವ ದಾಖಲೆಯನ್ನು ಇವತ್ತಿನ ಅತಂತ್ರ ರಾಜಕೀಯ ಸನ್ನಿವೇಶದಲ್ಲಿ ಮುಂದಿನ ಚುನಾವಣೆಗಳಲ್ಲಿ ಯಾರೂ ಮಾಡಲಾರರು ಅಂತಾನೇ ಹೇಳಬೇಕು. ಆರಂಭದಲ್ಲೇ ಹೇಳಿದಂತೆ ನಮ್ಮ ಎಂಪಿ ಜಿ.ಎಸ್.ಬಸವರಾಜ್ ಯಾವ ರೀತಿಯಲ್ಲಿ ಚಾಣಕ್ಯ ಎಂಬುದನ್ನು ಅವರಿಂದ ರಾಜಕೀಯ ಹೊಡೆತ ತಿಂದವರಿಗೆ ಅರ್ಥವಾಗಿದೆ. ಒಂದAತೂ ನಿಜ, ಅವರ ಮಗ ಜ್ಯೋತಿಗಣೇಶ್ ಅವರನ್ನು ಎರಡನೇ ಸಲಕ್ಕೂ ಗೆಲ್ಲಿಸಿಕೊಳ್ಳುವಲ್ಲಿ ಜಿಎಸ್‌ಬಿ ಮಾಡಿದ ತಂತ್ರಗಳನ್ನು ನೋಡಿದರೆ ಆ 2300 ವರ್ಷದ ಹಿಂದಿನ ನಿಜ ಚಾಣಕ್ಯನೂ ದಂಗಾಗಿಬಿಡುವುದರಲ್ಲಿ ಆಚ್ಚರಿಯಿಲ್ಲ. ಅದೆಷ್ಟು ಚೆನ್ನಾಗಿ ಓಟುಗಳನ್ನು ಸೆಟ್ ಮಾಡಿಕೊಂಡರು ಅಂತೀರಾ. ತಮ್ಮ ಕಾಂಗ್ರೆಸ್ ಅವಧಿಯ ರಾಜಕೀಯ ಜೀವನದ ಎಲ್ಲ ಕಾಂಟಾಕ್ಟ್ಗಳನ್ನು ಇವತ್ತಿಗೂ ಜೀವಂತವಾಗಿರಿಸಿಕೊಂಡು, ತುಮಕೂರಿನ ಮೂವರು ಕಾಂಗ್ರೆಸ್ ಘಟಾನುಘಟಿ ಮುಖಂಡರನ್ನೂ, ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕರುಳಬಳ್ಳಿಗಳಂತೆ ಆಡುವ ರಿಯಲ್ ಎಸ್ಟೇಟ್ ಅಪ್ಪ,ಮಕ್ಕಳನ್ನೂ ತಮ್ಮ ಪುತ್ರನ ಗೆಲುವಿಗೆ ದುಡಿಯುವಂತೆ ಮಾಡಿಕೊಂಡ ಬಸವರಾಜ್ ಯಾವ ಚಾಣಕ್ಯನಿಗೆ ಕಮ್ಮಿಹೇಳಿ ನೋಡೋಣ.

     ಜಿ.ಎಸ್.ಬಸವರಾಜ್ ತುಮಕೂರು ಕ್ಷೇತ್ರದ ಹಾಲಿ ಸಂಸದರಲ್ವಾ, ಹಾಗಾದರೆ ಅವರ ಪಕ್ಷದ ಅಭ್ಯರ್ಥಿ ಸೋಮಣ್ಣನವರ ಪರ ಯಾಕೆ ಹಳ್ಳಿಹಳ್ಳಿಗೂ ಹೋಗಿ ಜನರ ಮುಂದೆ ನಿಂತು , “ ನೋಡಿ ಇವರೇ ನನ್ನ ಉತ್ತರಾಧಿಕಾರಿ, ನನ್ನನ್ನು ಐದು ಸಲ ಗೆಲ್ಲಿಸಿದಂತೆಯೇ ಈ ಸಲ ಇವರನ್ನು ಗೆಲ್ಲಿಸಿಕೊಡಿʼ ಅಂತ ಯಾಕೆ ಮತದಾರರನ್ನು ಕೇಳುತ್ತಿಲ್ಲ ಎಂಬ ಪ್ರಶ್ನೆ ಇಷ್ಟೊತ್ತಿಗೆ ನಿಮ್ಮೊಳಗೆ ಮೂಡಿರಬಹುದು. ಆದರೆ ಪ್ರಚಾರ ಆರಂಭದ ಒಂದೆರಡು ದಿನ ಕೆಲವು ಹಳ್ಳಿಗಳಲ್ಲಿ ಜನರು “ ಐದು ವರ್ಷದ ಹಿಂದೆ ಗೆಲ್ಲುವ ಮುಂಚೆ ಓಟು ಕೇಳಲು ಬಂದವರು ಈಗ ಮತ್ತೆ ಚುನಾವಣೆ ಬಂದಾಗ ಬಂದಿದ್ದೀರಾ ಎಂದು ಜಿಎಸ್‌ಬಿ ವಿರುದ್ಧ ಗದ್ದಲ ಎಬ್ಬಿಸಿದ್ದನ್ನು ಕಂಡು, ಸೋಮಣ್ಣನವರೇ ಜಿಎಸ್‌ಬಿ ಅವರನ್ನು ಐವತ್ತು ನೂರು ಜನರ ಎದುರು ನಿಂತು ನೇರಾನೇರಾ ಓಟು ಕೇಳುವ ಗ್ರಾಮ ಮಟ್ಟದ ಪ್ರಚಾರ ಸಭೆಗಳಿಗೆ ಬರಬೇಡಿ ಅಂತ ರಿಕ್ವೆಸ್ಟ್ ಮಾಡಿಕೊಳ್ಳುತ್ತಿದ್ದಾರಂತೆ. ಇಂತಾ ಪರಿಸ್ಥಿತಿಯಲ್ಲಿ ಬಿಜೆಪಿ ಅಭ್ಯರ್ಥಿ – ಜೆಡಿಎಸ್ ಕಾರ್ಯಕರ್ತರು ಎನ್ನುವಂತಾಗಿಬಿಟ್ಟು ಪಾಪ ಸೋಮಣ್ಣ ಅಂತ ಅನ್ನಿಸಲ್ವಾ.

    ಹೀಗಾಗಿ ಔಟ್ ಗೋಯಿಂಗ್ ಎಂಪಿ ಜಿ.ಎಸ್.ಬಸವರಾಜ್ ಅವರು ಹಳ್ಳಿಗಳಿಗೆ ನೇರ ಹೋಗುತ್ತಿಲ್ಲ, ಊರ ಹೊರಗೆ ನಿಂತು ಫೋನ್ ಮಾಡಿಸಿ ತಮಗೆ ಬೇಕಾದವರನ್ನುಕರೆಸಿ ಸೂಚನೆಗಳನ್ನು ಕೊಡುತ್ತಿದ್ದಾರೆ. ಮನೆಯಲ್ಲೇ ಕೂತು ಇಡೀ ಜಿಲ್ಲೆಯ ರಾಜಕಾರಣವನ್ನು ಪಕ್ಷಾತೀತವಾಗಿ ನಿಭಾಯಿಸುವ ಛಾತಿ ಮತ್ತು ಕಲೆ ಇರುವುದು ಜಿಎಸ್‌ಬಿಗೆ ಮಾತ್ರವೇ ಎಂದು ಅವರ ರಾಜಕೀಯ ವಿರೋಧಿಗಳೂ ಬಣ್ಣಿಸುತ್ತಾರೆ. ಈ ಲೆಕ್ಕದಲ್ಲಿ ಸೋಮಣ್ಣನವರನ್ನು ಗೆಲ್ಲಿಸಿಕೊಂಡಲ್ಲಿ ಜಿಎಸ್‌ಬಿ ಅವರನ್ನು ಅಮಿತ್ ಶಾ ಅವರನ್ನು ಮೀರಿಸಿದ ಚಾಣಕ್ಯ ಅಂತಲೂ ಅನ್ನಬೇಕಾಗುತ್ತದೆ. ಏನಂತೀರಿ.