ರಾಹುಲ್‌ ಅನರ್ಹತೆ: ಭವಿಷ್ಯದ ಭಾರತಕ್ಕೆ ಒಳಿತಲ್ಲ

ಭಾರತ್‌ ಜೋಡೋ ಯಾತ್ರೆಯ ನಂತರ ರಾಹುಲ್‌ ಗಾಂಧಿ ಸಾಮಾನ್ಯ ಜನರ ನಡುವೆ ವರ್ಚಸ್ಸನ್ನು ಹೆಚ್ಚಿಸಿಕೊಂಡಿರುವುದು

ರಾಹುಲ್‌ ಅನರ್ಹತೆ: ಭವಿಷ್ಯದ ಭಾರತಕ್ಕೆ ಒಳಿತಲ್ಲ

 

 

ಆಡಳಿತ ವಿರೋಧ ದನಿಗಳನ್ನು ಹಿಮ್ಮೆಟ್ಟಿಸುವ ಅಥವಾ ಮಣಿಸುವ ಸಲುವಾಗಿ ಆಡಳಿತಾರೂಢ ಪಕ್ಷಗಳು ಎಲ್ಲ ರೀತಿಯ ಸಾಂಸ್ಥಿಕ, ಕಾನೂನಾತ್ಮಕ ಮತ್ತು ಸಾಂವಿಧಾನಿಕ ಕ್ರಮಗಳನ್ನೂ ಅನುಸರಿಸುವ ಒಂದು ಪರಂಪರೆ 1975ರ ತುರ್ತುಪರಿಸ್ಥಿತಿಯಿಂದಲೇ ಆರಂಭವಾಗಿದೆ. ಈಗ ಭಾರತದ ಅಧಿಕಾರ ರಾಜಕಾರಣದ ಕೇಂದ್ರಗಳು ಈ ನಿಟ್ಟಿನಲ್ಲಿ ಪರಿಣತಿಯನ್ನೂ ಪಡೆದುಕೊಂಡಿವೆ.  ಈ ತುರ್ತುಪರಿಸ್ಥಿತಿಯಲ್ಲಿ ಸೃಷ್ಟಿಯಾಗಿದ್ದ ನಿರಂಕುಶಾಧಿಕಾರಿ ಧೋರಣೆಯ ವಿರುದ್ಧ ಹೋರಾಡಿದ ರಾಜಕೀಯ ನಾಯಕರೇ ವರ್ತಮಾನದ ರಾಜಕಾರಣದಲ್ಲಿ ಪ್ರಧಾನವಾಗಿ ಕಾಣುತ್ತಾರೆ.

 

ರಾಹುಲ್‌ ಅನರ್ಹತೆ: ಭವಿಷ್ಯದ ಭಾರತಕ್ಕೆ ಒಳಿತಲ್ಲ

- ನಾ ದಿವಾಕರ

    ಕೋಲಾರದಲ್ಲಿ 2019ರ ತಮ್ಮ ಚುನಾವಣಾ ಪ್ರಚಾರ ಭಾಷಣವೊಂದರಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮೋದಿ ಎಂಬ ಜಾತಿ ಸೂಚಕ ಉಪನಾಮವನ್ನು ಹಿಡಿದು ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿ ಗುಜರಾತ್‌ನ ಬಿಜೆಪಿ ಶಾಸಕರೊಬ್ಬರು ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ  , ರಾಹುಲ್‌ ಗಾಂಧಿಯನ್ನು ಅಪರಾಧಿ ಎಂದು ಘೋಷಿಸಲಾಗಿದೆ. ಎರಡು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿರುವ ಸೂರತ್‌ ನ್ಯಾಯಾಲಯದ ತೀರ್ಪನ್ನು ಅಧರಿಸಿ, ರಾಹುಲ್‌ ಗಾಂಧಿಯನ್ನು ಸಂಸತ್‌ ಸದಸ್ಯತ್ವದಿಂದಲೂ ಅನರ್ಹಗೊಳಿಸಲಾಗಿದೆ.

ಕಾಂಗ್ರೆಸ್‌ ಪಕ್ಷ ಸಹಜವಾಗಿಯೇ ಇದು ದ್ವೇಷ ರಾಜಕಾರಣದ ಫಲ ಎಂದು ಹೇಳುತ್ತಿದ್ದು, ಬಿಜೆಪಿ ನಾಯಕರು ಕಾನೂನು ಎಲ್ಲರಿಗೂ ಒಂದೇ ಎನ್ನುವುದನ್ನು ಈ ನಿರ್ಧಾರ ಸ್ಪಷ್ಟಪಡಿಸಿದೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಭಾರತ್‌ ಜೋಡೋ ಯಾತ್ರೆಯ ನಂತರ ರಾಹುಲ್‌ ಗಾಂಧಿ ಸಾಮಾನ್ಯ ಜನರ ನಡುವೆ ವರ್ಚಸ್ಸನ್ನು ಹೆಚ್ಚಿಸಿಕೊಂಡಿರುವುದು ಮತ್ತು ಸಂಸತ್‌ ಅಧಿವೇಶನದಲ್ಲಿ ಸರ್ಕಾರಕ್ಕೆ ಮುಜುಗರ ಉಂಟುಮಾಡುವ ರೀತಿಯಲ್ಲಿ ಅದಾನಿ ಹಗರಣದ  ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿರುವುದೂ ಸಹ ಈ ಬೆಳವಣಿಗೆಗಳಿಗೆ ಕಾರಣವಾಗಿರಬಹುದು ಎಂದು ರಾಜಕೀಯ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.

 

ಕಾನೂನು ದೃಷ್ಟಿಯಿಂದ ನೋಡಿದಾಗ, ರಾಹುಲ್‌ ಗಾಂಧಿಯ ಅನರ್ಹತೆಯ ಪ್ರಶ್ನೆ ಹಲವು ಜಟಿಲ ಸಮಸ್ಯೆಗಳನ್ನು ಹುಟ್ಟುಹಾಕುವಂತಿದೆ. ಗಂಭೀರ ಸ್ವರೂಪದ ಕ್ರಿಮಿನಲ್‌ ಅಪರಾಧಗಳನ್ನು ಎಸಗಿರುವ, ವಂಚನೆ, ಭ್ರಷ್ಟಾಚಾರ ಅಥವಾ ಹಿಂಸಾತ್ಮಕ ಅಪರಾಧಗಳನ್ನು ಎಸಗಿರುವ, ಪ್ರಚೋದಿಸಿರುವ ಜನಪ್ರತಿನಿಧಿಗಳನ್ನು ಶಾಸನಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸುವ ಅವಕಾಶ ಕಾನೂನಿನಲ್ಲಿದೆ. ಈ ಹಿಂದೆಯೂ ಹಲವು ಪ್ರಕರಣಗಳಲ್ಲಿ ಹಲವು ಶಾಸಕರು, ಸಂಸದರು ಈ ರೀತಿ ಅನರ್ಹತೆಯನ್ನು ಎದುರಿಸಿದ್ದಾರೆ. ಆದರೆ ಈ ಪ್ರಕರಣದಲ್ಲಿ ನ್ಯಾಯಾಧೀಶರು ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್‌ 8(3)ರ  ಅಡಿ ಅನರ್ಹತೆಗೆ ಅಗತ್ಯವಾದ ಕನಿಷ್ಟ ಶಿಕ್ಷೆಗೆ ಹೋಲುವಂತೆ ಶಿಕ್ಷೆ ವಿಧಿಸಿದ್ದಾರೆ. ಇದು ಹಲವು ಕಾನೂನಾತ್ಮಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಮೂಲತಃ ಈ ಪ್ರಕರಣವೇ ಪ್ರಶ್ನಾರ್ಹವಾಗಿದೆ ಎಂದು ಕಾನೂನು ವಿದ್ವಾಂಸ ಗೌತಮ್‌ ಭಾಟಿಯಾ ತಮ್ಮ ಟ್ವೀಟ್‌ ಒಂದರಲ್ಲಿ ಹೇಳುತ್ತಾರೆ.

 

ರಾಹುಲ್‌ ಪ್ರಕರಣದಲ್ಲಿ ಒಂದು ಸಮುದಾಯವನ್ನು ಅಪಮಾನಿಸುವ ಆರೋಪ ಹೊರಿಸಲಾಗಿದ್ದು, ಕಾನೂನಾತ್ಮಕವಾಗಿ ನೋಡಿದಾಗ, ಅವಹೇಳನಕ್ಕೊಳಗಾದ ವ್ಯಕ್ತಿಗೆ ನೇರವಾಗಿ ಅನ್ವಯಿಸದೆ ಇದ್ದಲ್ಲಿ, ಜಾತಿ ವಿಶಿಷ್ಟವಾಗಿ ಉದ್ದೇಶಿಸಿದ ಉಲ್ಲೇಖಗಳು ಮಾನಹಾನಿ ಕಾನೂನು ಪ್ರಕ್ರಿಯೆಗೆ ಒಳಪಡುವುದಿಲ್ಲ ಎಂದು ಭಾಟಿಯಾ ಹೇಳುತ್ತಾರೆ. ಈ ಪ್ರಕರಣದಲ್ಲಿ ರಾಹುಲ್‌ ತಮ್ಮ ಭಾಷಣದಲ್ಲಿ ಅರ್ಜಿದಾರರಾದ ಗುಜರಾತ್‌ನ ಬಿಜೆಪಿ ಶಾಸಕ ಪೂರ್ಣೇಶ್‌ ಮೋದಿಯವರನ್ನು ನೇರವಾಗಿ ಉಲ್ಲೇಖಿಸಿಲ್ಲ. ಹಾಗಾಗಿ ಅರ್ಜಿದಾರರಿಗೆ ಮಾನನಷ್ಟ ವ್ಯಕ್ತಿಗತ ನೆಲೆಯಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ಕಾನೂನಾತ್ಮಕವಾಗಿ ಅವಕಾಶವಿದೆಯೆ ಎಂಬ ಜಟಿಲ ಪ್ರಶ್ನೆ ಉದ್ಭವಿಸುತ್ತದೆ ಈ ಪ್ರಕರಣದ ಹಿನ್ನೆಲೆಯಲ್ಲಿ ದ್ವೇಷಭಾಷಣಗಳನ್ನೂ ಒಳಗೊಂಡಂತೆ ನಿರ್ದಿಷ್ಟ ಜಾತಿ-ಸಮುದಾಯಗಳ ವಿರುದ್ಧ ನಿಂದನಾತ್ಮಕವಾಗಿ ಆಡುವ ಮಾತುಗಳೆಲ್ಲವೂ ಸಹ ಮಾನನಷ್ಟ ಮೊಕದ್ದಮೆಗಳಿಗೆ ಎಡೆಮಾಡಿಕೊಡುವ ಸಾಧ್ಯತೆಗಳಿವೆ.

 

ರಾಜಕೀಯವಾಗಿ ಅನರ್ಹತೆಯ ನಿರ್ಧಾರದಿಂದ ರಾಹುಲ್‌ ಗಾಂಧಿ  2024ರ ಚುನಾವಣೆಗಳಲ್ಲಿ ಸ್ಪರ್ಧಿಸುವ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ. ಮೇಲ್ಮನವಿಯ ನಂತರ ಉನ್ನತ ನ್ಯಾಯಾಲಯವು ಶಿಕ್ಷೆಯ ಅವಧಿಯನ್ನು ಕಡಿತಗೊಳಿಸಿದರೆ ಅಥವಾ ಸೂರತ್‌ ನ್ಯಾಯಾಲಯದ ತೀರ್ಪನ್ನು ಅಸಿಂಧು ಎಂದು ತೀರ್ಪಿತ್ತರೆ ರಾಹುಲ್‌ ಗಾಂಧಿಯ ಅನರ್ಹತೆಯ ಆದೇಶವೂ ಅಸಿಂಧುವಾಗುತ್ತದೆ. ಸಂಸತ್‌ ಸದಸ್ಯತ್ವದಿಂದ ಅನರ್ಹವಾದರೂ ರಾಹುಲ್‌ ಚುನಾವಣಾ ಪ್ರಚಾರದಿಂದ ನಿರ್ಬಂಧಿತರಾಗುವುದಿಲ್ಲ. ಒಂದು ವೇಳೆ ಈಗಾಗಲೇ ವಿಧಿಸಿರುವ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಉನ್ನತ ನ್ಯಾಯಾಲಯವೂ ಎತ್ತಿಹಿಡಿದರೆ ಆಗ ರಾಹುಲ್‌ ಈ ಅವಕಾಶವನ್ನೂ ಕಳೆದುಕೊಳ್ಳಲಿದ್ದಾರೆ. ಆದರೆ ರಾಜಕೀಯ ನೆಲೆಯಲ್ಲಿ ನೋಡಿದಾಗ ಜೈಲಿನಲ್ಲಿರುವ ರಾಹುಲ್‌ ಗಾಂಧಿ ಭಾವನಾತ್ಮಕ ನೆಲೆಯಲ್ಲಿ ವಿರೋಧ ಪಕ್ಷಗಳ ಪ್ರತಿರೋಧದ ಧ್ವನಿಗೆ ಒಂದು ಶಕ್ತಿಯಾಗಿ ಪರಿಣಮಿಸಲಿದ್ದಾರೆ. ರಾಹುಲ್‌ ಗಾಂಧಿಯ ವಿರುದ್ಧ ಸತತವಾಗಿ ದಾಳಿ ನಡೆಸುವ ಮೂಲಕ ಬಿಜೆಪಿ ವಿರೋಧ ಪಕ್ಷಗಳ ನಡುವೆ ಅವರ ಸ್ಥಾನವನ್ನು ಇನ್ನೂ ಹೆಚ್ಚಿಸುತ್ತದೆ ಎನ್ನುವುದು ನಿರ್ವಿವಾದ ಅಂಶ. ಮತ್ತೊಂದೆಡೆ ಕುಟುಂಬ ರಾಜಕಾರಣದ ವಿರುದ್ಧ ತನ್ನ ಸಮರದಲ್ಲಿ ಬಿಜೆಪಿ ರಾಹುಲ್‌ ಗಾಂಧಿಯನ್ನೇ ಪ್ರಧಾನ ಅಸ್ತ್ರದಂತೆ ಬಳಸುತ್ತಿರುವುದರಿಂದ, ರಾಹುಲ್‌ ಅವರನ್ನು ಅಪಮಾನಗೊಳಿಸಿದಷ್ಟೂ, ರಾಜಕೀಯವಾಗಿ ಮೂಲೆಗುಂಪುಮಾಡಿದಷ್ಟೂ ಬಿಜೆಪಿಗೆ ರಾಜಕೀಯ ಲಾಭವಾಗುವುದು ವಾಸ್ತವ.

 

ಇತ್ತೀಚೆಗೆ ರಾಹುಲ್‌ ಗಾಂಧಿ ತಮ್ಮ ಲಂಡನ್‌ ಭೇಟಿಯ ಸಂದರ್ಭದಲ್ಲಿ ಭಾರತದಲ್ಲಿ ಪ್ರಜಾಪ್ರಭುತ್ವ ಶಿಥಿಲವಾಗುತ್ತಿರುವುದರ ಬಗ್ಗೆ ಮಾತನಾಡಿರುವುದನ್ನು ದೇಶದ್ರೋಹಿ ನಡೆ ಎಂದು ಟೀಕಿಸಲಾಗುತ್ತಿದೆ. ವಿದೇಶಿ ನೆಲದಲ್ಲಿ ನಿಂತು ಭಾರತದ ಆಡಳಿತ ವ್ಯವಸ್ಥೆಯನ್ನು, ಪ್ರಜಾಸತ್ತಾತ್ಮಕ ಧೋರಣೆಯನ್ನು ಖಂಡಿಸುವುದು ದೇಶದ ಸಮಗ್ರತೆಯ ದೃಷ್ಟಿಯಿಂದ ಅಪೇಕ್ಷಣೀಯವಲ್ಲವಾದರೂ, ಈ ಹಿಂದೆಯೂ ಹಲವಾರು ಸಂದರ್ಭಗಳಲ್ಲಿ ಈ ರೀತಿಯ ಹೇಳಿಕೆಗಳು ವಿವಿಧ ರಾಜಕೀಯ ನಾಯಕರ ಮೂಲಕ ವ್ಯಕ್ತವಾಗಿರುವುದನ್ನು ಗುರುತಿಸಬಹುದು. ಆದರೂ ಪ್ರಸ್ತುತ ಸಂದರ್ಭದಲ್ಲಿ ರಾಹುಲ್‌ ಗಾಂಧಿಯ ವರ್ಚಸ್ಸನ್ನು ಕುಗ್ಗಿಸಲು ಯತ್ನಿಸುತ್ತಿರುವ ಬಿಜೆಪಿಗೆ ಈ ಪ್ರಸಂಗವೂ ಪೂರಕವಾಗಿ ಪರಿಣಮಿಸಿದೆ. ಇತ್ತೀಚಿನ ತಮ್ಮ ಭಾರತ್‌ ಜೋಡೋ ಯಾತ್ರೆಯ ಮೂಲಕ ರಾಹುಲ್‌ ಗಾಂಧಿ, ತಳಮಟ್ಟದ ಜನಸಾಮಾನ್ಯರಿಗೆ ಸ್ಪಂದಿಸಿರುವುದೇ ಅಲ್ಲದೆ ಕೇಂದ್ರ ಸರ್ಕಾರದ ಆಡಳಿತ ನೀತಿಗಳ ವಿರೋಧವನ್ನು ಜನರ ನಡುವಿನಿಂದಲೇ ಸೃಷ್ಟಿಸಲೂ ಯತ್ನಿಸಿದ್ದಾರೆ.

 

ಸಾಂಸ್ಥಿಕ ನೆಲೆಗಳಲ್ಲಿ ಈ ವಿರೋಧವನ್ನು ವ್ಯಕ್ತಪಡಿಸುವ ಅವಕಾಶಗಳು ಕ್ಷೀಣಿಸುತ್ತಿರುವುದರಿಂದ ರಾಹುಲ್‌ ಜನ ಸಾಮಾನ್ಯರೊಡನೆ ಬೆರೆತು ತಮ್ಮ ವಿರೋಧವನ್ನು ವ್ಯಕ್ತಪಡಿಸಲು ಯತ್ನಿಸಿದ್ದಾರೆ. ಈ ಕಾರಣಗಳಿಗಾಗಿಯೂ ಕೇಂದ್ರ ಬಿಜೆಪಿ ಸರ್ಕಾರ ರಾಹುಲ್‌ ಗಾಂಧಿಯನ್ನು ಭಾರತದ ರಾಜಕಾರಣದಲ್ಲಿ ಆದಷ್ಟೂ ಮಟ್ಟಿಗೆ ಅಪ್ರಸ್ತುತಗೊಳಿಸಲು ಯತ್ನಿಸುತ್ತಿದೆ. ಬಹುಪಾಲು ಮಾಧ್ಯಮಗಳು ಸರ್ಕಾರದ ಅಥವಾ ಬಿಜೆಪಿಯ ಪರವಾಗಿಯೇ ಇರುವುದರಿಂದ, ರಾಹುಲ್‌ ವಿರುದ್ಧ ಸಾರ್ವಜನಿಕ ಅಭಿಪ್ರಾಯವನ್ನೂ ಸೃಷ್ಟಿಸುವುದು ಸುಲಭವಾಗುತ್ತಿದೆ. ಏನೇ ಆದರೂ ರಾಹುಲ್‌ ಅನರ್ಹತೆಯ ಪ್ರಸಂಗದಿಂದ ವಿರೋಧ ಪಕ್ಷಗಳಿಗೂ ಬಿಸಿಮುಟ್ಟಿದಂತೆ ತೋರುತ್ತಿದೆ. ಮುಂಬರುವ ಚುನಾವಣೆಗಳಲ್ಲಿ ಇನ್ನೂ ಹೆಚ್ಚಿನ ಐಕ್ಯತೆಯ ಮೂಲಕ ಬಿಜೆಪಿ ವಿರುದ್ಧ ಸೆಣಸಲು ವಿರೋಧ ಪಕ್ಷಗಳಿಗೆ ಈ ಪ್ರಸಂಗವು ಅವಕಾಶವನ್ನು ನೀಡಿದೆ.  ಇದು ಭಾರತದ ಪ್ರಜಾಪ್ರಭುತ್ವವನ್ನು ರಕ್ಷಿಸುವ ನಿಟ್ಟಿನಲ್ಲಿ ಅತ್ಯವಶ್ಯವೂ ಆಗಿದೆ. ಏಕಪಕ್ಷದ ಆಧಿಪತ್ಯವನ್ನು ವಿರೋಧಿಸುತ್ತಲೇ ಭಾರತದ ಪ್ರಜಾತಂತ್ರವು 75 ವರ್ಷಗಳ ಕಾಲ ತನ್ನ ಸಾಂವಿಧಾನಿಕ ಸ್ವರೂಪವನ್ನು ಉಳಿಸಿಕೊಂಡು ಬಂದಿದೆ.

 

ಏಕೆಂದರೆ, ಮೂಲತಃ ಇಲ್ಲಿ ಅಪಾಯಕ್ಕೊಳಗಾಗಿರುವುದು ಭಾರತದ ಪ್ರಜಾತಂತ್ರ ವ್ಯವಸ್ಥೆ. ರಾಹುಲ್‌ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಕಾರಣ ಅವರು ಒಂದು ಇಡೀ ಸಮುದಾಯವನ್ನು ನಿಂದಿಸಿದ್ದಾರೆ ಎಂಬ ಕಾರಣಕ್ಕಾಗಿ ಅಲ್ಲ. ಬದಲಾಗಿ ಕಳಂಕಿತ ವಾಣಿಜ್ಯೋದ್ಯಮಿಗಳ ಹೆಸರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಸರಿನೊಡನೆ ಸಮೀಕರಿಸಿ ಮಾತನಾಡಿದ್ದ ಕಾರಣಕ್ಕಾಗಿ. ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಮೋದಿ ವಿರುದ್ಧ ಬಂಡವಾಳ ಸ್ನೇಹಿ ಎಂಬ ಆರೋಪಗಳು ಕೇಳಿಬರುತ್ತಿರುವಂತೆಯೇ, ಸ್ವಜನಪಕ್ಷಪಾತದ ಆರೋಪಗಳೂ ಕೇಳಿಬರುತ್ತಿವೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರಾರೂಢ ಸರ್ಕಾರದ ವಿರುದ್ಧ, ಪ್ರಧಾನಮಂತ್ರಿ, ಮುಖ್ಯಮಂತ್ರಿಗಳ ವಿರುದ್ಧ ಆರೋಪಗಳು ಬರುವುದು ಸಹಜವಾದಷ್ಟೇ, ಅವಶ್ಯವೂ ಆಗಿರುತ್ತದೆ.  ವಿರೋಧ ಪಕ್ಷಗಳ ಟೀಕೆ-ಖಂಡನೆಗಳಿಗೆ ಮುಕ್ತ ಅವಕಾಶವನ್ನು ಸದನದಲ್ಲೇ ನೀಡುತ್ತಿದ್ದ ನೆಹರೂ-ವಾಜಪೇಯಿ ನಮಗೆ ನಿದರ್ಶನವಾಗಿ ಕಾಣುತ್ತಾರೆ.

 

ಆದರೆ ಪ್ರಸ್ತುತ ರಾಜಕಾರಣದಲ್ಲಿ ಪ್ರಧಾನಮಂತ್ರಿಗಳ ವಿರುದ್ಧ ಅಥವಾ ಸರ್ಕಾರದ ಮಾಡುವ ಯಾವುದೇ ಆರೋಪವನ್ನು ಇಡೀ ದೇಶದ ವಿರುದ್ಧ ಆರೋಪ ಮಾಡಿದಂತೆ ಪರಿಗಣಿಸುವ ಒಂದು ಸನ್ನಿವೇಶವನ್ನೂ ಕಾಣುತ್ತಿದ್ದೇವೆ. ದೆಹಲಿಯಲ್ಲಿ ಬಿಜೆಪಿಯನ್ನು ಸೋಲಿಸುವ ದೃಷ್ಟಿಯಿಂದ ಪ್ರಧಾನಿ ಮೋದಿಯವರನ್ನು ಟೀಕಿಸುವ ಪೋಸ್ಟರ್‌ಗಳನ್ನು ಅಂಟಿಸಿದ್ದ ಕಾರಣಕ್ಕಾಗಿ ಹಲವರನ್ನು ಬಂಧಿಸಿ, ಎಫ್‌ಐಆರ್‌ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲೇ ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದರ ವಿರುದ್ಧ ಸಂಸತ್ತಿನಲ್ಲಿ ದನಿ ಎತ್ತಿರುವ ರಾಹುಲ್‌ ಗಾಂಧಿ ಹಿಂಡನ್‌ಬರ್ಗ್‌ ವರದಿಯ ಹಿನ್ನೆಲೆಯಲ್ಲಿ ಗೌತಮ್‌ ಅದಾನಿ ವಿರುದ್ಧ ಕೇಳಿಬರುತ್ತಿರುವ ಆರೋಪಗಳ ಬಗ್ಗೆಯೂ ಪ್ರಧಾನಿ ಮೋದಿಯವರನ್ನು ನೇರವಾಗಿ ಪ್ರಶ್ನಿಸಿದ್ದಾರೆ. ಆದರೆ ಸಂಸತ್ತಿನಲ್ಲಿ ರಾಹುಲ್‌ ಅವರಿಗೆ ನೇರವಾದ ಮಾತನಾಡುವ ಅವಕಾಶವನ್ನೇ ನೀಡಲಾಗಿಲ್ಲ. ರಾಹುಲ್‌ ಗಾಂಧಿ ಎತ್ತಿದ ಯಾವುದೇ ಪ್ರಶ್ನೆಗಳಿಗೂ ನೇರವಾದ ಉತ್ತರ  ಲಭಿಸಿಲ್ಲ ಎನ್ನುವುದು ವಾಸ್ತವ.

 

ಆಡಳಿತ ವಿರೋಧ ದನಿಗಳನ್ನು ಹಿಮ್ಮೆಟ್ಟಿಸುವ ಅಥವಾ ಮಣಿಸುವ ಸಲುವಾಗಿ ಆಡಳಿತಾರೂಢ ಪಕ್ಷಗಳು ಎಲ್ಲ ರೀತಿಯ ಸಾಂಸ್ಥಿಕ, ಕಾನೂನಾತ್ಮಕ ಮತ್ತು ಸಾಂವಿಧಾನಿಕ ಕ್ರಮಗಳನ್ನೂ ಅನುಸರಿಸುವ ಒಂದು ಪರಂಪರೆ 1975ರ ತುರ್ತುಪರಿಸ್ಥಿತಿಯಿಂದಲೇ ಆರಂಭವಾಗಿದೆ. ಈಗ ಭಾರತದ ಅಧಿಕಾರ ರಾಜಕಾರಣದ ಕೇಂದ್ರಗಳು ಈ ನಿಟ್ಟಿನಲ್ಲಿ ಪರಿಣತಿಯನ್ನೂ ಪಡೆದುಕೊಂಡಿವೆ.  ಈ ತುರ್ತುಪರಿಸ್ಥಿತಿಯಲ್ಲಿ ಸೃಷ್ಟಿಯಾಗಿದ್ದ ನಿರಂಕುಶಾಧಿಕಾರಿ ಧೋರಣೆಯ ವಿರುದ್ಧ ಹೋರಾಡಿದ ರಾಜಕೀಯ ನಾಯಕರೇ ವರ್ತಮಾನದ ರಾಜಕಾರಣದಲ್ಲಿ ಪ್ರಧಾನವಾಗಿ ಕಾಣುತ್ತಾರೆ. ಆದರೂ ಆಡಳಿತ ವ್ಯವಸ್ಥೆಯ ವಿರುದ್ಧ ಟೀಕೆ, ಖಂಡನೆ ಅಥವಾ ಪ್ರತಿರೋಧಗಳನ್ನು ಸಹಿಸಿಕೊಳ್ಳುವ ವ್ಯವಧಾನ ಕ್ಷೀಣಿಸುತ್ತಲೇ ಇದೆ. ರಾಜ್ಯ ಮಟ್ಟದಲ್ಲಿ ಹಾಗೂ ರಾಷ್ಟ್ರಮಟ್ಟದಲ್ಲೂ ಸಹ ಪ್ರತಿರೋಧವನ್ನು ಸಹಿಸಿಕೊಳ್ಳದ ಒಂದು ಧೋರಣೆ ಹೆಚ್ಚಾಗುತ್ತಿರುವುದನ್ನು ವಿಷಾದದಿಂದಲೇ ಗಮನಿಸಬೇಕಿದೆ. ವಿರೋಧ ಪಕ್ಷಗಳನ್ನು ಶತ್ರುಗಳಂತೆ ನೋಡುವ ಬೆಳವಣಿಗೆಗೂ ನಾವು ಸಾಕ್ಷಿಯಾಗುತ್ತಿದ್ದೇವೆ.

 

ವಿರೋಧ ಪಕ್ಷಗಳ ನಾಯಕರನ್ನೂ ಒಳಗೊಂಡಂತೆ, ಸಾಮಾನ್ಯ ಜನತೆಗೂ ಸಹ ಆಡಳಿತದಲ್ಲಿರುವವರನ್ನು ಟೀಕಿಸುವ ಹಕ್ಕು ಇದ್ದೇ ಇರಬೇಕಾಗುತ್ತದೆ. ರಾಹುಲ್‌ ಗಾಂಧಿಯ ವಿರುದ್ಧ ನ್ಯಾಯಾಲಯ ನೀಡಿರುವುದು ರಾಜಕೀಯ ತೀರ್ಪು ಅಲ್ಲ. ಈ ತೀರ್ಪನ್ನು ರಾಹುಲ್‌ ಉನ್ನತ ಕೋರ್ಟ್‌ನಲ್ಲಿ ಪ್ರಶ್ನಿಸುವ ಮೂಲಕ, ದೋಷಮುಕ್ತರೂ ಆಗಬಹುದು. ಆದರೆ ಮೇಲ್ಮನವಿ ಸಲ್ಲಿಸುವ ಮುನ್ನವೇ, ಅವಸರದಲ್ಲಿ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿರುವುದು ಪ್ರಜಾಸತ್ತಾತ್ಮಕ ಲಕ್ಷಣವಾಗಿ ಕಾಣುವುದಿಲ್ಲ.

 

ಮೇಲಾಗಿ ಮಾನಹಾನಿಗೆ ಸಂಬಂಧಿಸಿದ ಕಾನೂನಿಗೆ ಸೂರತ್‌ ನ್ಯಾಯಾಲಯವು ನೀಡಿರುವ ವ್ಯಾಖ್ಯೆಯನ್ನೇ ಹಲವು ಕಾನೂನು ತಜ್ಞರು ಆಕ್ಷೇಪಿಸಿದ್ದಾರೆ.  ರಾಹುಲ್‌ ಮಾಡಿರುವ ಅಪರಾಧಕ್ಕೂ ಅವರಿಗೆ ನೀಡಲಾಗಿರುವ ಶಿಕ್ಷೆಯ ಪ್ರಮಾಣಕ್ಕೂ ತಾಳೆಯಾಗುವುದಿಲ್ಲ ಎಂಬ ಅಭಿಪ್ರಾಯವೂ ಕಾನೂನು ತಜ್ಞರಿಂದ ಕೇಳಿಬರುತ್ತಿದೆ. ಇನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸುವುದೇ ಆದರೆ, ಇನ್ನೂ ಗಂಭೀರ ಆರೋಪಗಳನ್ನು ಹೊತ್ತಿರುವ ಹಲವು ಸಂಸದರು ನಮ್ಮ ನಡುವೆ ಇದ್ದಾರೆ. ಸಂಸತ್ತಿನ ಹೊರಗೂ ಸಹ ನರಮೇಧಕ್ಕೆ ಕರೆ ನೀಡಿದ ಧಾರ್ಮಿಕ, ರಾಜಕೀಯ ನಾಯಕರು, ದ್ವೇಷ ಭಾಷಣದ ಮೂಲಕ ಜನರನ್ನು ಪ್ರಚೋದಿಸುವವರು, ಶಾಂತಿ ಸೌಹಾರ್ದತೆಯನ್ನು ಕದಡುವಂತಹ ಸಾರ್ವಜನಿಕ ಭಾಷಣ ಮಾಡಿರುವವರು ನಮ್ಮ ನಡುವೆ ಇದ್ದಾರೆ. ಅಂತಹ ವ್ಯಕ್ತಿಗಳ ಮೇಲೆ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದೂ ಸಹ ಯೋಜನೆಗೀಡುಮಾಡುವ ವಿಚಾರವಾಗಿದೆ. ಈ ಇಡೀ ಪ್ರಸಂಗಗಳು ಭಾರತದಲ್ಲಿ ಪ್ರಜಾಪ್ರಭುತ್ವದ ತಳಪಾಯ ಶಿಥಿಲವಾಗುತ್ತಿರುವುದನ್ನು ಬಿಂಬಿಸುತ್ತದೆ.

 

ರಾಹುಲ್‌ ಶಿಕ್ಷೆಗೆ ಕಾರಣವಾದ ಸಾರ್ವಜನಿಕ ಹೇಳಿಕೆ ಸರ್ವಥಾ ಸಮರ್ಥನೀಯವಲ್ಲ. ಆದರೆ ಈ ತಪ್ಪು ಎಸಗುತ್ತಿರುವವರಲ್ಲಿ ಅವರೇ ಮೊದಲಿಗರೇನಲ್ಲ. ಕಳೆದ ಹತ್ತು ವರ್ಷಗಳಲ್ಲಿ ಭಾರತದ ರಾಜಕೀಯ ಸಂಕಥನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ರಾಜಕೀಯ ಸಂವಾದಗಳೇ ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ. ಸಭ್ಯತೆ, ಸಂಯಮ, ಸೌಜನ್ಯದ ಎಲ್ಲೆ ಮೀರಿದ ಮಾತುಗಳು ರಾಜಕೀಯ ನಾಯಕರಿಂದ ಹರಿದುಬರುತ್ತಲೇ ಇರುವುದನ್ನು ಗಮನಿಸುತ್ತಲೇ ಇದ್ದೇವೆ.  ಆದರೆ ಪ್ರಸ್ತುತ ಸಂದರ್ಭದಲ್ಲಿ ನ್ಯಾಯದಾನ ವ್ಯವಸ್ಥೆಯೂ ಸಹ ಇದನ್ನು ಸ್ವಯಂ ಪ್ರೇರಿತವಾಗಿ ಪರಿಗಣಿಸುತ್ತಿಲ್ಲ ಎನ್ನುವುದು ವಿಷಾದಕರ. ರಾಹುಲ್‌ ಗಾಂಧಿ ವಿರುದ್ಧ ಸೂರತ್‌ ನ್ಯಾಯಾಲಯ ನೀಡಿರುವ ತೀರ್ಪನ್ನು ಉನ್ನತ ನ್ಯಾಯಾಲಯ ಎತ್ತಿಹಿಡಿದಲ್ಲಿ, 2024ರ ಚುನಾವಣೆಗಳಲ್ಲಿ ರಾಹುಲ್‌ ಸ್ಪರ್ಧಿಸುವುದಿರಲಿ, ಪ್ರಚಾರದಿಂದಲೂ ದೂರ ಉಳಿಯಬೇಕಾಗುತ್ತದೆ. ಇದು ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ.

 

ಭಾರತದ ಸಂವಿಧಾನ ವಿಶ್ವಮಾನ್ಯತೆ ಪಡೆದಿರುವುದೇ ಇಂತಹ ಒಂದು ಪ್ರಜಾಪ್ರಭುತ್ವವನ್ನು ಪೋಷಿಸಿರುವುದಕ್ಕಾಗಿ. ಆಂತರಿಕವಾಗಿ ಏನೇ ಲೋಪದೋಷಗಳಿದ್ದರೂ ಭಾರತದಲ್ಲಿ ಸಾಂವಿಧಾನಿಕ ಚೌಕಟ್ಟು ಬಿಗಿಯಾಗಿದ್ದು, ಪ್ರಜಾಪ್ರಭುತ್ವದ ಆಶಯಗಳನ್ನು ಕಾಪಾಡಿಕೊಂಡು ಬಂದಿವೆ. ಇದರಲ್ಲಿ ನ್ಯಾಯಾಂಗದ ಪಾತ್ರವೂ ಮಹತ್ವದ್ದಾಗಿದೆ.

ವಿರೋಧಿ ದನಿಗಳನ್ನು ದಮನಿಸುವ ಹಲವು ವಿಧಾನಗಳನ್ನು ಭಾರತದ ರಾಜಕಾರಣದಲ್ಲಿ ಅನುಸರಿಸಲಾಗುತ್ತಿದ್ದು, ಇದಕ್ಕೆ 50 ವರ್ಷಗಳ ಸುದೀರ್ಘ ಇತಿಹಾಸವೂ ಇದೆ. 1975ರ ತುರ್ತುಪರಿಸ್ಥಿತಿಯಲ್ಲಿ ಭಾರತದ ಜನಸಾಮಾನ್ಯರು ಈ ಕರಾಳಯುಗವನ್ನು ಪ್ರತ್ಯಕ್ಷವಾಗಿ ಕಂಡಿದ್ದಾರೆ. ಭಾರತ ಮತ್ತೊಮ್ಮೆ ಅಂತಹುದೇ ಪರಿಸ್ಥಿತಿಗೆ ಮರಳುತ್ತಿದೆಯೇ ಎಂಬ ಆತಂಕವನ್ನು ಹಲವಾರು ರಾಜಕೀಯ ತಜ್ಞರು, ವಿದ್ವಾಂಸರು ವ್ಯಕ್ತಪಡಿಸುತ್ತಿದ್ದಾರೆ. ಸಾಮಾನ್ಯ ಜನತೆಯಲ್ಲೂ, ದುಡಿಯುವ ವರ್ಗಗಳಲ್ಲೂ ಈ ಆತಂಕವು ದಿನೇದಿನೇ ಹೆಚ್ಚಾಗುತ್ತಿದೆ.

75 ವರ್ಷಗಳ ಆಳ್ವಿಕೆಯ ನಂತರ ಭಾರತ ಈ ಧೋರಣೆಯಿಂದ ಮುಕ್ತವಾಗಿ ಒಂದು ಪ್ರಬುದ್ಧ ಪ್ರಜಾಸತ್ತೆಯಾಗಿ ಹೊರಹೊಮ್ಮಬೇಕಿತ್ತು. ದುರಾದೃಷ್ಟವಶಾತ್‌ ವಿರೋಧ ಪಕ್ಷಗಳೇ ಇಲ್ಲದ ಆಡಳಿತ ವ್ಯವಸ್ಥೆಗಾಗಿ ದೇಶದ ಬೃಹತ್‌ ಜನಸಮೂಹವು ಹಪಹಪಿಸುತ್ತಿದೆ. ಬಹುಸಂಖ್ಯಾವಾದದ ಪಾರಮ್ಯ ಅತಿಯಾದಷ್ಟೂ, ರಾಜಕಾರಣದಲ್ಲಿ, ಸಾಮಾಜಿಕ ಚಟುವಟಿಕೆಗಳಲ್ಲಿ, ಪ್ರತಿರೋಧದ ಅವಕಾಶಗಳು ಕ್ಷೀಣಿಸುತ್ತಾ ಹೋಗುತ್ತವೆ. ಹೀಗೆಯೇ ಮುಂದುವರೆದಲ್ಲಿ ಭಾರತವನ್ನು ವಿಶ್ವದ ಶ್ರೇಷ್ಠ ಪ್ರಜಾಪ್ರಭುತ್ವವಾಗಿ ರೂಪಿಸಲು ತಮ್ಮ ಜೀವ ತೆತ್ತ ಸ್ವಾತಂತ್ರ್ಯಪೂರ್ವದ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಹಲವಾರು ಮಹನೀಯರ ಕನಸುಗಳು ನುಚ್ಚು ನೂರಾಗುತ್ತದೆ.

-೦-೦-೦-೦-