ಕಸ್ತೂರಿ ಮತ್ತು ಶಿಶುಗಳ ದುರ್ಮರಣಕ್ಕೆ ಯಾರು ಹೊಣೆ?

ಕಸ್ತೂರಿ ಮತ್ತು ಶಿಶುಗಳ ದುರ್ಮರಣಕ್ಕೆ ಯಾರು ಹೊಣೆ?- ಒಂದು ಗಳಿಗೆ-ಕುಚ್ಚಂಗಿ ಪ್ರಸನ್ನ

ಕಸ್ತೂರಿ ಮತ್ತು ಶಿಶುಗಳ ದುರ್ಮರಣಕ್ಕೆ ಯಾರು ಹೊಣೆ?

ಕಸ್ತೂರಿ ಮತ್ತು ಶಿಶುಗಳ ದುರ್ಮರಣಕ್ಕೆ ಯಾರು ಹೊಣೆ?

ಒಂದು ಗಳಿಗೆ-ಕುಚ್ಚಂಗಿ ಪ್ರಸನ್ನ

ಒಂಬತ್ತು ತಿಂಗಳು ಒಂಬತ್ತು ದಿನ ಎರಡು ಶಿಶುಗಳನ್ನು ಉದರದಲ್ಲಿ ಹೊತ್ತಿದ್ದ ತಾಯಿಯೊಬ್ಬಳು ಆಸ್ಪತ್ರೆಗೆ ದಾಖಲಾಗದೇ, ಮನೆಯಲ್ಲೂ ಸೂಲಗಿತ್ತಿಯ ನೆರವಿಲ್ಲದೇ ಮಲಗಿದಲ್ಲೇ ಒದ್ದಾಡಿ ತನ್ನೆರಡೂ ಕೂಸುಗಳೊಂದಿಗೆ ಪ್ರಾಣ ಕಳೆದುಕೊಂಡ ಘಟನೆಯ ವರದಿ ಹಾಗೂ ಕರುಳುಬಳ್ಳಿಯ ಸಹಿತ ಹೊರಬಂದು ತಾಯ ಕಾಲ ಬಳಿ ಮಲಗಿ ಹೆಣವಾಗಿರುವ ಎಳೆ ಕಂದನ ಫೋಟೋ ಅಂದು ನನ್ನನ್ನು ಬಹಳ ಡಿಸ್ಟರ್ಬ್ ಮಾಡಿತು. ಕಳೆದ ಗುರುವಾರ ಬೆಳಗಿನ ಜಾವ ಸಂಭವಿಸಿದ ಈ ಹೃದಯ ವಿದ್ರಾವಕ ಘಟನೆಯಲ್ಲಿ ಮತ್ತೊಂದು ಕೂಸು ತಾಯಿಯ ಗರ್ಭ ಕಂಠದಿಂದ ತಲೆ ಹೊರಗೆ ತೂರಿಸಲಾಗದೇ ಅಲ್ಲೇ ಉಳಿದು ಅಸು ನೀಗಿದೆ, ಸಣ್ಣ ಜೀವಗಳೊಂದಿಗೆ ದೊಡ್ಡ ಜೀವವೂ ಇಲ್ಲವಾಯಿತು ಎಂದು ಹೇಳಿದ ಆ ನನ್ನ ನೆಚ್ಚಿನ ವರದಿಗಾರ ಗೆಳೆಯ.


ಅಮ್ಮ ಮತ್ತು ಜನಿಸುವ ಮುನ್ನವೇ ಕಣ್ಮುಚ್ಚಿ ಕೊಂಡ ಇಬ್ಬರು ತಮ್ಮಂದಿರ ಹೆಣಗಳು ಒಳಗೆ ಮಲಗಿರುವಾಗಲೇ ಮನೆಯ ಹೊರಗೆ ನಿಂತ ಐದಾರು ವರ್ಷದ ಆ ಹುಡುಗಿ ಅನಾಥವಾಗಿ ನಿಂತು ಪಕ್ಕದ ಮನೆಯರ‍್ಯಾರೋ ಕೊಟ್ಟ ಬನ್ ಅನ್ನು ಒಂದು ಕೈಯಲ್ಲಿ ಹಿಡಿದುಕೊಂಡು, ಬಾಯಿಗಿರಿಸಿ ಕಚ್ಚಿ ತಿನ್ನಲೂ ಆಗದೇ, ಗಟ್ಟಿಯಾಗಿ ಅಳಲೂ ಆಗದೇ, ಕೆನ್ನೆಗಳಿಂದ ಇಳಿಯುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳಲೂ ಆಗದೇ ಬೆದರಿದ ಕಂಗಳಲ್ಲಿ ಇನ್ನೇನು ತನ್ನನ್ನು ತಿಂದೇ ಬಿಡುತ್ತವೆ ಎಂಬಂತೆ ಗುರಾಯಿಸುತ್ತಿದ್ದ ಕ್ಯಾಮರಾಗಳ ಕಣ್ಣೊಳಗೆ ಕಣ್ಣಿಟ್ಟು ನೋಡುತ್ತ ನಿಂತಿದ್ದಳು. 


ಈ ಅಬ್ಬೇಪಾರಿ ಮಹಿಳೆಗೆ ತುಮಕೂರಿನಂತ ನಗರದಲ್ಲಿ ಈಕೆಗೆ ಹೀಗೆ ಅನಾಥ ಸಾವನ್ನು ಸ್ವೀಕರಿಸುವ ಅನಿವಾರ್ಯತೆ ಏನೂ ಇರಲಿಲ್ಲ, ತುಮಕೂರು ಮಹಾನಗರದ ಭಾರತಿ ನಗರ ಎಂಬ ಬಡತನ ರೇಖೆಯ ಕೆಳಗಿರುವ ಜನರ ಬಡಾವಣೆಯಲ್ಲಿ ಈ ಕಸ್ತೂರಿ ಎಂಬ ತಮಿಳುನಾಡಿನ ಮಹಿಳೆ, ಕೇವಲ ಒಂದೂವರೆ ತಿಂಗಳ ಹಿಂದೆ,  ನೇರವಾಗಿ ಕಾಲು ಚಾಚಿ ಮಲಗುವಷ್ಟು ವಿಸ್ತಾರವೂ ಇಲ್ಲದ ಕೋಣೆಯೊಂದನ್ನು ಬಾಡಿಗೆಗೆ ಪಡೆದುಕೊಂಡಿದ್ದಳು,  ಗಂಡನೆಂಬ ಪ್ರಾಣಿ ಇದ್ದನೋ, ಬದುಕಿದ್ದನೋ, ಇರಲೇ ಇಲ್ಲವೋ ಎಂಬುದೂ ಯಾರಿಗೂ ಗೊತ್ತಿರಲಿಲ್ಲ. 


ಈ ನತದೃಷ್ಟ ಗರ್ಭಿಣಿಗೆ ಹಿಂದಿನ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಾಗ, ಅವರಿವರು ಕೂಡಿಸಿಕೊಟ್ಟ 150 ರೂಪಾಯಿಯೊಂದಿಗೆ ನೆರೆಮನೆಯ ಸರೋಜಮ್ಮ ಬಲವಂತ ಮಾಡಿ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಆಕೆಯ ಬಳಿ ಯಾವುದೇ ದಾಖಲೆಗಳು ಇರಲಿಲ್ಲ ಎಂಬ ಕಾರಣಕ್ಕೆ ದಾಖಲು ಮಾಡಿಕೊಳ್ಳಲಿಲ್ಲವೆಂದೂ, ಹೀಗಾಗಿ ಆಕೆಗೆ ಮನೆಯಲ್ಲೇ ಹೆರಿಗೆ ಆಗಿ ಮರಣ ಹೊಂದಿದಳೆಂದೂ ವರದಿಗಳು ಬರತೊಡಗಿದವು. ಜಿಲ್ಲಾ ಸರ್ಜನ್ ಡಾ.ವೀಣಾ ಹಾಗೂ ಡಿಹೆಚ್‌ಓ ಸುರೇಶ್ ಅವರ ಹೇಳಿಕೆಗಳೂ ಹೀಗೇ ಬರತೊಡಗಿ, ಕಡೆಗೆ ಮಧ್ಯರಾತ್ರಿ ಭೇಟಿ ಕೊಟ್ಟ ಆರೋಗ್ಯ ಸಚಿವ ಸುಧಾಕರ್ ಕೂಡಾ ಇಂಥದ್ದೇ ಹೇಳಿಕೆ ನೀಡಿದರು. ಜೊತೆಗೆ ಅಂದು ಕರ್ತವ್ಯದ ಮೇಲಿದ್ದ ಗೈನಕಾಲಜಿಸ್ಟ್ ಉಷಾ ಹಾಗೂ ದಾದಿಯರಾದ ಯಶೋಧ, ಸವಿತ ಹಾಗು ದಿವ್ಯ ಭಾರತಿ ಎಂಬ ನಾಲ್ವರನ್ನು ಅಮಾನತುಗೊಳಿಸಿದ ಆದೇಶ ಮರುದಿನ ಹೊರಬಿತ್ತು. 


ಪಾಪ, ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿಕೊಂಡಿದ್ದರೆ ಮೂವರೂ ಬದುಕುಳಿಯುತ್ತಿದ್ದರು ಎಂದು ಎಲ್ಲರೂ ಹೇಳುತ್ತಿದ್ದುದರಲ್ಲಿ ತಪ್ಪೇನೂ ಕಾಣಿಸುತ್ತಿರಲಿಲ್ಲ. ಆದರೆ, ಮೃತ ಕಸ್ತೂರಿಗೆ ತಾನು ಆಸ್ಪತ್ರೆಗೆ ದಾಖಲಾಗುವುದು ಇಷ್ಟವೇ ಇರಲಿಲ್ಲ, ಆಸ್ಪತ್ರೆ ಸಿಬ್ಬಂದಿ ಮುಂದೆ ತನ್ನ ಹೆಸರು ಹೇಳಿಕೊಳ್ಳಲೂ ಆಕೆ ಸಿದ್ಧವಿರಲಿಲ್ಲ ಎಂಬ ಸಂಗತಿ ಆನಂತರ ಪ್ರಾಮುಖ್ಯತೆ ಪಡೆದುಕೊಳ್ಳತೊಡಗಿತು. 


“ ನಾನು ನ.2ರಂದು ಬುಧವಾರ ಬೆಳಿಗ್ಗೆ  9ಗಂಟೆಯಿಂದ ಸಂಜೆ 5 ಗಂಟೆವರೆಗೆ ಓಪಿಡಿಯಲ್ಲಿ ಕಾರ್ಯನಿರ್ವಹಿಸಿದ್ದೆ, ಸಂಜೆ 5.30ರ ನಂತರ 9.30ರವರೆಗೂ ಸಿಸೇರಿಯನ್ ಮೊದಲಾದ ಸರ್ಜರಿ ಮಾಡಿದ್ದೆ, ಮೆಟರ್ನಿಟಿ ವಾರ್ಡ್ ಕಡೆ ಹೋಗುವಾಗ ಈ ಮಹಿಳೆ ಹಿಂದಿರುಗಿ ಹೋಗುತ್ತಿದ್ದುದನ್ನು ಕಂಡೆ, ಆಕೆ ದಾಖಲಾಗಲು ಸಿದ್ಧವಿಲ್ಲದ ಕಾರಣ ವಾಪಸ್ ಹೋಗುತ್ತಿದ್ದಾಳೆ ಎಂದು ಸಿಬ್ಬಂದಿ ಹೇಳಿದರು. ನೆರೆಮನೆಯ ಸರೋಜಮ್ಮ ಆಕೆಯನ್ನು ಬಲವಂತವಾಗಿ ಕರೆತಂದಿದ್ದರಂತೆ’ ಎಂದು ಸಸ್ಪೆಂಡ್ ಆದ ವೈದ್ಯೆ ಉಷಾ ಐಎಂಎ ಹಾಗೂ ಪ್ರಕರಣದ ತನಿಖೆಗೆ ಬಂದಿದ್ದ ನಿರ್ದೇಶಕಿ ಇಂದುಮತಿ ಮುಂದೆ ಲಿಖಿತ ಹೇಳಿಕೆ ನೀಡಿದ್ದಾರೆ. ಘಟನೆ ನಡೆದು ಹತ್ತು ದಿನಗಳಾದರೂ ಉಷಾ ಮತ್ತು ಅವರ ವೈದ್ಯ ಪತಿ ನಾಗರಾಜು ಅವರ ಮೊಬೈಲ್‌ಗಳು ಡೆಡ್ ಆಗೇ ಉಳಿದಿವೆ. ಇವರೊಂದಿಗೇ ಸಸ್ಪೆಂಡ್ ಆಗಿರುವ ದಾದಿಯರೂ ಅದೇ ಸ್ಥಿತಿಯಲ್ಲಿದ್ದಾರೆ. 


ಮೃತ ಕಸ್ತೂರಿ ತನ್ನ ವೈಯಕ್ತಿಕ ಕಾರಣಗಳಿಗಾಗಿ ಆಸ್ಪತ್ರೆಗೆ ದಾಖಲಾಗಲು ಒಲ್ಲದೇ ಮನೆಗೆ ಹಿಂದಿರುಗಿದ್ದ ಸಂಗತಿ ಖಚಿತವಾದರೂ ಜಿಲ್ಲಾ ಸರ್ಜನ್ ಡಾ.ವೀಣಾ ಮತ್ತು ಡಿಹೆಚ್‌ಓ ಸುರೇಶ್, ತಾಯಿ ಕಾರ್ಡ್ ಮತ್ತು ಆಧಾರ್ ಕಾರ್ಡ್ ಇಲ್ಲದೇ ಇದ್ದುದರಿಂದ ಆಕೆಯನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸಲಾಯಿತು ಎಂದು ಮಾಡದೇ ಇದ್ದ  ತಪ್ಪನ್ನು ತಮ್ಮ ಸಿಬ್ಬಂದಿ ಮೇಲೆ ಹಾಕಿ ಸಸ್ಪೆಂಡ್ ಆದೇಶ ಹೊರಬೀಳಲು ಕಾರಣರಾದರೇಕೆ? ಜಸ್ಟ್ ಮೃತ ಕಸ್ತೂರಿ ಮನೆಯ ಮುಂದೆ ಸೇರಿದ್ದ ಜನಜಂಗುಳಿ, ಜನಪ್ರತಿನಿಧಿಗಳ ಪ್ರತಿಭಟನೆ ಹಾಗೂ ಮಾಧ್ಯಮಗಳ ವರದಿಗಳಿಗೆ ಬೆದರಿ ತಮ್ಮ ಅಮಾಯಕ ಸಿಬ್ಬಂದಿಯನ್ನು ಬಲಿ ಕೊಟ್ಟು ಬಿಟ್ಟರೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. 


ಮೂರು ದಿನಗಳ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ಅವರ ಮುಂದೆ ಮಾಧ್ಯಮಗಳವರು ಈ ಪ್ರಶ್ನೆಗಳನ್ನು ಕೇಳತೊಡಗಿದಾಗ, ಇಡೀ ಪ್ರಕರಣದ ಬಗ್ಗೆ ತಮಗೆ ವಿಷಾದವಿದೆ ಅಂತ ಹೇಳಿ ಜಾರಿಕೊಂಡು ಬಿಟ್ಟರು ಸಚಿವರು. 


ಇಡೀ ಪ್ರಕರಣದಲ್ಲಿ ಸತ್ತ ಕಸ್ತೂರಿ ಹೊರತುಪಡಿಸಿ ಮತ್ತಾರೂ ತಪ್ಪಿತಸ್ಥರೇ ಅಲ್ಲ ಎಂಬಂತಾಗಿ, ಛೇ ಏನಿದು, ಏಕೆ ಹೀಗಾಯಿತು ಎನ್ನುವ ವಿಷಾದ ಭಾವ ಆವರಿಸಿಕೊಂಡಿದೆ. ಹಾಗಾಗಿ ಯಾರನ್ನೂ ತಪ್ಪಿತಸ್ಥರೆಂದು ಹೊಣೆ ಮಾಡಲಾಗದ ವಿಶಿಷ್ಟ ಘಟನೆಯಾಗಿಬಿಟ್ಟಿತು. ಇದೇ ಮಾತುಗಳನ್ನು ಐಎಂಎ ಅಧ್ಯಕ್ಷ ಡಾ.ಚಂದ್ರಶೇಖರ್ ಕೂಡಾ ಹೇಳಿದ್ದಾರೆ. ಸರಿ ಇದನ್ನು ಇಲ್ಲಿಗೇ ಬಿಟ್ಟು ಬಿಡೋಣ ಎಂದುಕೊಂಡರೂ ವೈದ್ಯೆ ಉಷಾ ಮತ್ತು ಮೂವರು ದಾದಿಯರ ಸಸ್ಪೆಂಡ್ ಆದೇಶ ರದ್ದಾಗಬೇಕು, ಈ ಅವಧಿಯನ್ನು ಕರ್ತವ್ಯ ಎಂದೇ ಪರಿಗಣಿಸಬೇಕು. ಅದೆಲ್ಲ ಅಷ್ಟು ಜರೂರಾಗಿ ಆಗುವುದಿಲ್ಲ, ಅಲ್ಲಿವರೆಗೂ ಅವರಿಗೆ ಮಾನಸಿಕ ವ್ಯಥೆ ತಪ್ಪಿದ್ದಲ್ಲ ಬಿಡಿ.


ಆದರೆ ಜಿಲ್ಲಾಸ್ಪತ್ರೆಗೆ ಹೋಗುವ ರೋಗಿಗಳ ವ್ಯಥೆ ಮಾತ್ರ ಇಲ್ಲಿಗೇ ನಿಲ್ಲುವುದಿಲ್ಲ. ಗೈನಕಾಲಜಿಸ್ಟ್ ಉಷಾ ಐಎಂಎಗೆ ನೀಡಿರುವ ಮನವಿಯ ಅಂಶಗಳನ್ನು ಮತ್ತೊಮ್ಮೆ ಓದಿ ನೋಡಿ, ಅವರು ನ.2ರ ಬುಧವಾರ ಬೆಳಗಿನ 9.30ರಿಂದ ಸಂಜೆ 5.30ರನಕ ಹೊರರೋಗಿ ವಿಭಾಗ ಹಾಗೂ ಸಂಜೆಯ ನಂತರ ರಾತ್ರಿ 9.30ರವರೆಗೆ ಹೆರಿಗೆ ಸಂಬAಧಿತ ಸರ್ಜರಿಗಳನ್ನು ಮಾಡುತ್ತಿದ್ದೆ ಎಂದಿದ್ದಾರೆ. ಅಷ್ಟು ದೊಡ್ಡ ಜಿಲ್ಲಾಸ್ಪತ್ರೆಯಲ್ಲಿ ಹೀಗೆ ಇಡೀ ದಿನ ಬೆಳಗಿನಿಂದ ಮಧ್ಯರಾತ್ರಿವರೆಗೆ ಒಬ್ಬರೇ ಗೈನಕಾಲಜಿಸ್ಟ್ ಡ್ಯೂಟಿ ಮಾಡಬೇಕಾದ ಅನಿವರ‍್ಯತೆ ಏಕೆ ಬಂತು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ ಅಲ್ಲವೇ. 


ನಮ್ಮ ಜಿಲ್ಲಾಸ್ಪತ್ರೆಯಲ್ಲಿ ಒಟ್ಟು ಆರು ಮಂದಿ ಗೈನಕಾಲಜಿಸ್ಟ್ಗಳು ಅಂದರೆ ಹೆರಿಗೆ ತಜ್ಞ ವೈದ್ಯರಿದ್ದಾರೆ, ತಲಾ ಇಬ್ಬರು ಹೆರಿಗೆ ತಜ್ಞ ವೈದ್ಯರ ನೇತೃತ್ವದ ಮೂರು ಯೂನಿಟ್‌ಗಳನ್ನು ಮಾಡಿದ್ದು, ಸರದಿಯಂತೆ ವಾರಕ್ಕೆ ಎರಡು ಬಾರಿ ಈ ಯುನಿಟ್‌ಗಳು ಕರ‍್ಯನಿರ್ವಹಿಸುತ್ತವೆ. ವರ್ಷಗಳ ಹಿಂದೆ ಕೇವಲ ಇಬ್ಬರು ಗೈನಕಾಲಜಿಸ್ಟ್ಗಳು ಮಾತ್ರವೇ ಇದ್ದು, ಆಗ ಆ ಇಬ್ಬರೇ ದಿನಬಿಟ್ಟು ದಿನ ಇಡೀ ಆಸ್ಪತ್ರೆಯ ಹೆರಿಗೆ ಸಂಬAಧಿ ಹೊರ ಮತ್ತು ಒಳರೋಗಿಗಳನ್ನು ನೋಡಿಕೊಳ್ಳಬೇಕಿತ್ತು.


ಅಲ್ಲದೇ ಆಸ್ಪತ್ರೆಯಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ವೈದ್ಯರು, ದಾದಿಯರು ಮತ್ತು ಇತರ ಸಿಬ್ಬಂದಿಯ ನಡವಳಿಕೆ ಸಿಸಿಟಿವಿಯಲ್ಲಿ ದಾಖಲಾಗಿರುತ್ತದೆ. ತಮ್ಮ ಸಿಬ್ಬಂದಿಯದೇ ತಪ್ಪಿತ್ತೇ ಇಲ್ಲವೇ ಎಂಬ ಪ್ರಾಥಮಿಕ ವಿಚಾರಣೆಯನ್ನೂ ಜಿಲ್ಲಾ ಸರ್ಜನ್ ಮಾಡಬೇಕಿತ್ತು. ಮೃತ ಕಸ್ತೂರಿ ತನ್ನ ಹೆಸರು ಮತ್ತು ಇತರ ಮಾಹಿತಿಯನ್ನು ಹೇಳಲು ಒಪ್ಪದೇ , ಮನೆಯಲ್ಲೇ ಹೆರಿಗೆ ಮಾಡಿಕೊಳ್ಳುವುದಾಗಿ ಹೇಳುತ್ತ ಹೊರಹೋದ ಮಾಹಿತಿಯನ್ನು ಜೊತೆಯಲ್ಲಿ ಬಂದಿದ್ದ ಸರೋಜಮ್ಮ ಹೇಳಿದ ಮೇಲೂ ತಮ್ಮ ಸಿಬ್ಬಂದಿಯನ್ನು ರಕ್ಷಿಸಿಕೊಳ್ಳಲು ಮುಂದಾಗಲಿಲ್ಲವೇಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ಸ್ವತಃ ಜಿಲ್ಲಾ ಸರ್ಜನ್ ಡಾ.ವೀಣಾ ನಿರಾಕರಿಸುತ್ತಾರೆ.


ಆರೋಗ್ಯ ಇಲಾಖೆ ನಿರ್ದೇಶಕಿ ಡಾ.ಇಂದುಮತಿ ಅವರ ಮುಂದೆ ಡಾ.ಉಷಾ ಹೇಳಿಕೆ ನೀಡಿದ್ದಾರೆ, ಜೊತೆಗೆ ಐಎಂಎ ಅಧ್ಯಕ್ಷ ಡಾ.ಚಂದ್ರಶೇಖರ್ ಕೂಡಾ ಲಿಖಿತ ಹೇಳಿಕೆ ನೀಡಿ ಅಮಾನತು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದ್ದಾರೆ.


ಗರ್ಭಿಣಿಯರನ್ನು ನೋಡಿಕೊಳ್ಳುವ ಕರ್ತವ್ಯ ಆಸ್ಪತ್ರೆ ಮಾತ್ರವೇ ಅಲ್ಲದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೂ ಸೇರಿದ ಜವಾಬ್ದಾರಿಯಾಗಿದೆ. ಭಾರತಿ ನಗರದಲ್ಲಿ ಮೃತ ಗರ್ಭಿಣಿಯ ಮನೆಗೆ ಕೇವಲ 50 ಅಡಿ ದೂರದಲ್ಲೇ ಅಂಗನವಾಡಿ ಕೇಂದ್ರವಿದೆ. ಅಂಗನವಾಡಿ ಸಹಾಯಕಿಯರು ಅವರ ವ್ಯಾಪ್ತಿಯ ಗರ್ಭಿಣಿಯರನ್ನು ಗುರುತಿಸಿ, ಅವರಿಗೆ ಪೌಷ್ಟಿಕ ಆಹಾರದ ಕಿಟ್ ನೀಡುವ ಹೊಣೆ ಹೊಂದಿರುತ್ತಾರೆ, ಜೊತೆಗೆ ಆಶಾ ಕಾರ್ಯಕರ್ತೆಯರು ಹಾಗೂ ಕೋತಿತೋಪಿನಲ್ಲಿರುವ ಆರೋಗ್ಯ ಕೇಂದ್ರದ ಸಿಬ್ಬಂದಿಗೂ ಇಂಥ ಜವಾಬ್ದಾರಿಗಳಿವೆ ಎನ್ನುತ್ತಾರೆ ಡಾ.ಚಂದ್ರಶೇಖರ್.


ಜಿಲ್ಲಾ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ ಇದೆ, ಇತ್ತು ಮತ್ತು ಇರುತ್ತದೆ ಎಂಬ ಸಾರ್ವಜನಿಕರ ಮಾತಿನಲ್ಲಿ ಸತ್ಯಾಂಶವಿಲ್ಲದೇ ಏನೂ ಇಲ್ಲ. ಗುತ್ತಿಗೆ ಆಧಾರದ ಸಿಬ್ಬಂದಿಗೆ ಡ್ಯೂಟಿ ಹಾಕುವುದರಿಂದ ಹಿಡಿದು ರೋಗಿಗಳಿಂದ ಹಣ ಕೀಳುವುದು ಇದ್ದೇ ಇದೆ. ಒಂದು ಸಹಜ  ಹೆರಿಗೆಗೆ ಕನಿಷ್ಟ ಎಂಟತ್ತು ಸಾವಿರ ರೂಪಾಯಿ ತೆರಬೇಕು ಎಂದು ಜನರು ಹೇಳುತ್ತಾರೆ. ಅದು ಪ್ರತ್ಯೇಕ ವಿಚಾರ, ಆಸ್ಪತ್ರೆ ಸಿಬ್ಬಂದಿ ಮತ್ತು ಅಧಿಕಾರಿಗಳ ಭ್ರಷ್ಟತನವನ್ನು ಈ ಪ್ರಕರಣಕ್ಕೆ ತಳುಕುಹಾಕುವಂತಿಲ್ಲ.


ವೈದ್ಯರು ಸರ್ಕಾರಿ ಸೇವೆಗೆ ಬರಲು ನಿರಾಕರಿಸುತ್ತಿರುವ ಕಾಲದಲ್ಲಿ ಹೀಗೆ ವಿನಾಕಾರಣ ವೈದ್ಯರು ಹಾಗೂ ದಾದಿಯರನ್ನು ಅಮಾನತ್ತುಗೊಳಿಸಿ ಮನೆಯಲ್ಲಿ ಇರಿಸುವ ಕಾರಣವೇ ಇರಲಿಲ್ಲ ಎಂಬುದು ಇಡೀ ಪ್ರಸಂಗವನ್ನು ವಿಶ್ಲೇಷಿಸಿದಾಗ ಅರ್ಥವಾಗುತ್ತದೆ. ಆಡಳಿತಗಾರರು ದುರ್ಬಲವಾಗಿದ್ದಾಗ ಇಂಥ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ತಮ್ಮ ಚರ್ಮವನ್ನು ಉಳಿಸಿಕೊಳ್ಳಲು ಹೋಗಿ ಇತರರನ್ನು ಬಲಿಪಶು ಮಾಡಿದರು ಎಂದೇ ಎಲ್ಲರೂ ಹೇಳುತ್ತಿದ್ದಾರೆ. 


ಸರ್ಕಾರಿ ನೌಕರರನ್ನು ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವುದು ಅವರಿಗೆ ವಿಧಿಸುವ ಶಿಕ್ಷೆಯಲ್ಲ ಎಂಬುದೇನೋ ನಿಜವೇ ಆದರೂ ತಪ್ಪೇ ಮಾಡದೇ ಮನೆಯಲ್ಲಿ ಕೂರುವುದೂ ಒಂಥರಾ ಶಿಕ್ಷೆಯೇ ಆಲ್ಲವೇ.