ದೆಹಲಿಯಲ್ಲಿ ಕಣ್ಣೀರಿಡುತ್ತಿರುವ ಪ್ರಜಾಪ್ರಭುತ್ವ

ದೆಹಲಿ ಎಂಸಿಡಿಯ ( ದೆಹಲಿ ಮುನ್ಸಿಪಲ್‌ ಕಾರ್ಪೋರೇಶನ್‌ )

ದೆಹಲಿಯಲ್ಲಿ ಕಣ್ಣೀರಿಡುತ್ತಿರುವ ಪ್ರಜಾಪ್ರಭುತ್ವ

ವರ್ತಮಾನ

ಪುರುಷೋತ್ತಮ ಬಿಳಿಮಲೆ

 

ದೆಹಲಿಯಲ್ಲಿ ಕಣ್ಣೀರಿಡುತ್ತಿರುವ ಪ್ರಜಾಪ್ರಭುತ್ವ

 

     ದೆಹಲಿ ಎಂಸಿಡಿಯ ( ದೆಹಲಿ ಮುನ್ಸಿಪಲ್‌ ಕಾರ್ಪೋರೇಶನ್‌ ) ಹಿಂದಿನ ಚುನಾವಣೆ ನಡೆದದ್ದು ೨೦೧೭ರ ಎಪ್ರಿಲ್‌ ತಿಂಗಳಲ್ಲಿ. ಅದರಲ್ಲಿ ಬಿಜೆಪಿ ಬಹುಮತ ಪಡದಿತ್ತು. ಅದರ ಅಧಿಕಾರದವಧಿ ಮುಗಿದು 2022ರ ಎಪ್ರಿಲ್‌ ತಿಂಗಳಲ್ಲಿ ಮತ್ತೆ 250 ಕೌನ್ಸಿಲರ್‌ ಸೀಟುಗಳಿಗೆ ಚುನಾವಣೆ ನಡೆಯಬೇಕಿತ್ತು. ಚುನಾವಣಾ ಆಯೋಗವು ಇದಕ್ಕೆ ಸಂಬಂಧಿಸಿದಂತೆ ಕೆಲವು ಸೂಚನೆಗಳನ್ನೂ ಆಗ ಕೊಟ್ಟಿತ್ತು. ಮಾರ್ಚ್‌ 9, 2022 ರಂದು ಆಯೋಗವು ಪತ್ರಿಕಾಗೋಷ್ಠಿ ಕರೆದು ಎಪ್ರಿಲ್‌ ತಿಂಗಳಲ್ಲಿ ಚುನಾವಣೆಗಳು ನಡೆಯಲಿವೆ ಎಂದು ಘೋಷಿಸಿತ್ತು. ಆದರೆ ಬಿಲ್‌ ತಿದ್ದುಪಡಿಯ ನೆಪ ಹೇಳಿ ( ಅದನ್ನು ಚುನಾವಣೆ ಮುಗಿದ ಮೇಲೆಯೂ ಮಾಡಲು ಸಾಧ್ಯವಿತ್ತು) ಚುನಾವಣೆಯನ್ನು ಅನಿರ್ದಿಷ್ಟವಾಗಿ ಮುಂದಕ್ಕೆ ಹಾಕಲಾಯಿತು. ಬಿಜೆಪಿ ಹೆಚ್ಚುವರಿ 10 ತಿಂಗಳು ಅಧಿಕಾರದಲ್ಲಿ ಮುಂದುವರೆಯಿತು.

ಕೊನೆಗೂ ಎಂಸಿಡಿಯ 250 ಕೌನ್ಸಿಲರುಗಳಿಗೆ 2022ರ ದಿಶಂಬರ ತಿಂಗಳ ನಾಲ್ಕನೇ ತಾರೀಕಿನಂದು ಚುನಾವಣೆ ನಡೆಯಿತು. ದಶಂಬರ ಏಳರಂದು ಫಲಿತಾಂಶ ಪ್ರಕಟವಾಯಿತು. ಆಪ್‌ ಬಹಳ ಸ್ಪಷ್ಟವಾದ ಬಹುಮತ ಪಡೆಯಿತು. ಒಟ್ಟು 250 ಸೀಟುಗಳಲ್ಲಿ ಆಪ್‌ ಗೆ 134 ಸೀಟುಗಳೂ, ಬಿಜೆಪಿಗೆ 104 ಸೀಟುಗಳೂ ದೊರಕಿದುವು. ಇದಾದ ಕೆಲವು ದಿನಗಳಲ್ಲಿ ಮೇಯರ್‌ ಚುನಾವಣೆ ನಡೆದು ಸುಸೂತ್ರವಾಗಿ ಗೆದ್ದವರು ಆಡಳಿತ ನಡೆಸಿಕೊಂಡು ಹೋಗಬೇಕಾಗಿತ್ತು. ಆದರೆ ಫಲಿತಾಂಶ ಪ್ರಕಟವಾಗಿ ಇವತ್ತಿಗೆ 48 ದಿನಗಳಾದರೂ ಮೇಯರ್‌ ಆಯ್ಕೆ ಆಗಲೇ ಇಲ್ಲ. ಚುನಾವಣಾ ಆಯೋಗ, ದೆಹಲಿ ಗವರ್ನರ್‌, ಪ್ರಧಾನಿಗಳು, ಗೃಹಮಂತ್ರಿಗಳು ಯಾರೂ ಈ ಕುರಿತು ಮಾತಾಡುತ್ತಲೂ ಇಲ್ಲ. ಎಂಸಿಡಿಯ ನಿಯಮದಂತೆ ಮೇಯರ್‌ ಆಯ್ಕೆಯಲ್ಲಿ ಹೆಚ್ಚುವರಿ ಕೆಲವು ಓಟುಗಳಿವೆ. ಅವೆಲ್ಲವನ್ನೂ ಸೇರಿಸಿದರೆ ಇವತ್ತಿಗೆ ಆಪ್‌ ನ ಹತ್ತಿರ 151 ಮತಗಳೂ ಬಿಜೆಪಿಯ ಹತ್ತಿರ 111 ಮತಗಳೂ ಇವೆ.

ಚುನಾವಣಾ ಫಲಿತಾಂಶ ಪ್ರಕಟವಾದ ದಿನವೇ ಬಿಜೆಪಿಯು ʼ ಮೇಯರ್‌ ನಮ್ಮ ಜನʼ ಎಂದು ಹೇಳಿತ್ತು. ಮೆಜಾರಿಟಿ ಇಲ್ಲದಿದ್ದರೂ ಇವರು ಹೇಗೆ ಹೇಳ್ತಾರೆ ಅಂತ ದೆಹಲಿಯ ಮತದಾರನಾದ ನನಗೆ ಕುತೂಹಲ ಇತ್ತು. ಆಪರೇಶನ್‌ ಕಮಲದಲ್ಲಿ ನುರಿತರಾದ ಅವರು ಏನೂ ಮಾಡಬಹುದೆಂಬುದನ್ನು ಕಲ್ಪಿಸಿಕೊಳ್ಳುತ್ತಿದ್ದೆ. ಆದರೆ ಹಾಗೇನೂ ಆಗಲಿಲ್ಲ. ಗೆದ್ದವರ ಮತ್ತು ಸೋತವರ ಅಂತರ ಬಹಳ ಹೆಚ್ಚಿರುವುದೇ ಇದಕ್ಕೆ ಕಾರಣ ಆಗಿರಬಹುದು.

ತಮ್ಮ ಮೇಯರ್‌ ಅಭ್ಯರ್ಥಿ ಗೆಲ್ಲುವ ಎಲ್ಲ ಸಾಧ್ಯತೆಗಳೂ ಇರುವಾಗ ಆಪ್‌ ಕೌನ್ಸಿಲರುಗಳೇ ಗಲಾಟೆ ಮಾಡಿದರು ಎಂದು ಬಿಜೆಪಿಯು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಜನಬಲ ಮತ್ತು ಧನಬಲದಿಂದ ಕೊಬ್ಬಿರುವ ಬಿಜಿಪಿಯು ಚುನಾವಣೆಯಲ್ಲಿ ಸೋತರೂ ಗೆದ್ದವರನ್ನು ಆಡಳಿತ ನಡೆಸಲು ಬಿಡುವುದಿಲ್ಲ ಎಂಬುದು ಈಗ ಸ್ಪಷ್ಟವಾಗುತ್ತಿದೆ.

ಪ್ರಜಾಪ್ರಭುತ್ವ ಕಣ್ಣೀರಿಡುತ್ತಿದೆ.

  

ದೆಹಲಿ ಎಂಸಿಡಿಯ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಆಪ್ ಈ ಕೆಳಗಿನ ಎರಡು ಕೋರಿಕೆಗಳೊಂದಿಗೆ ಸುಪ್ರೀಂ ಕೋರ್ಟಿನ ಮೆಟ್ಟಲೇರಿದೆ.‌

೧. ಚುನಾವಣೆ ನಡೆದ ಆನಂತರ ನಿಗದಿ ಪಡಿಸಿದ ಅವಧಿಯ ಒಳಗೆ ಮೇಯರ್ ಚುನಾವಣೆ ನಡೆಯಲೇಬೇಕು. ( ಈಗ ಗಲಾಟೆ ನಡೆಸಿ ಮೇಯರ್ ಚುನಾವಣೆ ನಡೆಯದಂತೆ ಮಾಡಲಾಗಿದೆ).

೨. ನಾಮ ನಿರ್ದೇಶಿತ ಸದಸ್ಯರಿಗೆ ಮೇಯರ್ ಚುನಾವಣೆಯಲ್ಲಿ ಮತದಾನದ‌ ಹಕ್ಕು ಇರಬಾರದು.

ಕೋರಿಕೆ ಸಮರ್ಪಕವಾಗಿದೆ. ಕೋರ್ಟ್ ಏನು ಹೇಳುವುದೋ ನೋಡೋಣ.ನಿಧಾನವಾಗಿ ಚುನಾವಣೆಗಳು ತಮ್ಮ ಮಹತ್ವ ಕಳೆದುಕೊಳ್ಳುತ್ತಿವೆ. ಮತದಾರನನ್ನು ಅಣಕಿಸಲಾಗುತ್ತಿದೆ.

--*--