ಯಡಿಯೂರಪ್ಪನವರಿಗೆ ಮತ್ತೆ ಶರಣೆಂದಿತೇ ಬಿಜೆಪಿ ಹೈಕಮಾಂಡ್
ttumakur-politics-yediyurappa
ಒಂದು ಗಳಿಗೆ
ಕುಚ್ಚಂಗಿ ಪ್ರಸನ್ನ
ಯಡಿಯೂರಪ್ಪನವರಿಗೆ ಮತ್ತೆ ಶರಣೆಂದಿತೇ ಬಿಜೆಪಿ ಹೈಕಮಾಂಡ್
ಚುನಾವಣೆ ದಿನಗಳ ಇಳಿಗಣನೆ ವೇಗ ಪಡೆದುಕೊಳ್ಳುತ್ತಿದೆ. ಮತದಾರರ ಪಟ್ಟಿ ಹೊರಬಿದ್ದಿದೆ, ನಿಮ್ಮ ಹೆಸರು ಇದೆಯೋ ಇಲ್ಲವೋ ಬೇಗ ನೋಡಿಕೊಳ್ಳಿ, ಇದ್ದರೆ ಸರಿಯಾಗಿ ಇದೆಯೋ ಇಲ್ಲವೋ ಗಮನಿಸಿ, ತಿದ್ದಿಸಿಕೊಳ್ಳಿ. ಈಗ ಸುಮ್ಮನೇ ಇದ್ದು ಓಟು ಹಾಕುವ ದಿನ ಅಯ್ಯೋ ನನ್ನ ಓಟು ಇಲ್ಲವಲ್ಲಪ್ಪಾ ಅಂತ ಯಾರನ್ನೂ ದೂರುವಂತಿಲ್ಲ.
ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲೂ ಹಾಲಿ ಶಾಸಕರು ಮತ್ತೆ ಗೆಲ್ಲುವುದು ಹೇಗೆ ಎಂಬ ಲೆಕ್ಕಾಚಾರದಲ್ಲಿದ್ದರೆ, ಟಿಕೆಟ್ ಪಡೆಯುವ ತಂತ್ರಗಾರಿಕೆಯಲ್ಲಿ ಹೊಸಬರು ತೊಡಗಿದ್ದಾರೆ.
ತುಮಕೂರು ವಿಧಾನ ಸಭಾ ಕ್ಷೇತ್ರದಲ್ಲಿ ಮೂರನೇ ಚುನಾವಣೆ ಎದುರಿಸಲು ಸಜ್ಜಾಗುತ್ತಿರುವ ಜೆಡಿಎಸ್‌ನ ಗೋವಿಂದರಾಜು ಎಂದಿನಂತೆ ತಮ್ಮ ಆಣೆ ಪ್ರಮಾಣ ಮಾಡಿಸಿಕೊಳ್ಳುವ ತಂತ್ರವನ್ನು ಮುಂದುವರೆಸಿದ್ದಾರೆ.
ಮೊನ್ನೆ ಬುಧವಾರ ಕೂಡಾ ನಗರದ ಎನ್ ಆರ್ ಕಾಲೋನಿಯಿಂದ ಹತ್ತು ಬಸ್ ಗಳಲ್ಲಿ ಹೆಣ್ಣು ಮಕ್ಕಳನ್ನು ಗೂಳೂರು ಸಮೀಪದ ಎತ್ತೇನಹಳ್ಳಿಗೆ ಕರೆದುಕೊಂಡು ಹೋಗಿ ತೆನೆ ಹೊತ್ತ ಮಹಿಳೆ ಗುರುತಿಗೇ ಓಟು ಹಾಕುತ್ತೇವೆ ಎಂದು ಆ ಹೆಣ್ಣುಮಕ್ಕಳಿಂದ ಆಣೆ ಪ್ರಮಾಣ ಮಾಡಿಸಿಕೊಳ್ಳುತ್ತಿದ್ದಾರೆ. ಕಳೆದ ಚುನಾವಣೆಯಲ್ಲೂ ಹೀಗೇ ಪ್ರಮಾಣ ಮಾಡಿಸಿಕೊಂಡೇ ಗೆಲುವಿನ ಹತ್ತಿರ ತಲುಪಿ ರನ್ನರ್ ಅಪ್ ಆಗಿದ್ದು ಎನ್ನುವುದು ಅವರ ಗಾಢ ನಂಬಿಕೆ.
ಸುಮ್ಮನೇ ಬಸ್ಸು ಹತ್ತಿಸಿಕೊಂಡು ಎತ್ತೇನಹಳ್ಳಿಗೆ ಕರೆದುಕೊಂಡು ಹೋಗಿ ಬಿಟ್ಟರೆ ಆ ಹೆಣ್ಣುಮಕ್ಕಳೆಲ್ಲ ಓಟು ಹಾಕಿಬಿಡುತ್ತಾರೆ ಅಂದು ಕೊಳ್ಳಬೇಡಿ, ಇಲ್ಲಿ ಬಸ್ಸು ಹತ್ತುವ ಮೊದಲು ಈ ಹೆಣ್ಣುಮಕ್ಕಳ ಕೈಗೆ ಒಂದು ಟೋಕನ್ ಕೊಟ್ಟಿರುತ್ತಾರೆ, ಅಲ್ಲಿ ದೇವಾಲಯಕ್ಕೆ ಹೋಗಿ ಪೂಜೆ ಗೀಜೆ ಮುಗಿದ ಮೇಲೆ ಆ ಟೋಕನ್ ಅನ್ನು ಕೊಟ್ಟರೆ ಟಿಕೆಟ್ ಆಕಾಂಕ್ಷಿ ಕಡೆಯವರು ಒಂದು ಟೋಕನ್‌ಗೆ ರೂ.1000/- ಕೊಡುತ್ತಾರೆ, ಇದು ಅಡ್ವಾನ್ಸ್ ಮಾತ್ರ, ಇನ್ನೂ ಮುಂದೆ ಕೊಡೋದು ಇದ್ದೇ ಇರುತ್ತಲ್ಲ.
ಐದು ವರ್ಷ ನಿರಾಳವಾಗಿ, ನಿರಾತಂಕವಾಗಿ ಶಾಸಕರಾಗಿದ್ದ ಜಿ.ಬಿ.ಜ್ಯೋತಿಗಣೇಶ್ ಇಷ್ಟು ದಿನ ಮಾಜಿ ಸಚಿವ ಹಾಗೂ ಬಿಜೆಪಿಯ ನಾಲ್ಕು ಅವಧಿಯ ಶಾಸಕ ಸೊಗಡು ಶಿವಣ್ಣ ಮಾತ್ರವೇ ತಮಗೆ ಪೈಪೋಟಿ ಅಂತ ಅಂದುಕೊಂಡಿದ್ದರು ಅಂತ ಕಾಣುತ್ತೆ, ಆದರೆ ಮೊನ್ನೆ ಬಳ್ಳಾರಿಯ ಮಾಜಿ ಗಣಿ ಧಣಿ ಜನಾರ್ಧನ ರೆಡ್ಡಿಗಾರು ಮುಸ್ಸಂಜೆ ಕತ್ತಲಲ್ಲಿ ತುಮಕೂರಿನ ಹೊರಪೇಟೆಯ ಕರಿಬಸವಸ್ವಾಮಿ ಮಠಕ್ಕೆ ಬಂದು ಹೋದ ಸಂಗತಿ ತುಸು ಅತಂಕವನ್ನು ಹುಟ್ಟು ಹಾಕಿದೆ ಅಂತ ಅಂದುಕೊಳ್ಳಬಹುದು. ಜನಾರ್ಧನ ರೆಡ್ಡಿಯವರು ಅವರ ಪಾಡಿಗೆ ಅವರು ಬಂದು ಬಳ್ಳಾರಿ ಮೂಲದ ಕರಿಬಸವಸ್ವಾಮಿ ಮಠಕ್ಕೆ ಭೇಟಿ ಕೊಟ್ಟು ಹೋಗಿದ್ದರೆ ಏನೋ ಹೋಗಲಿ ಅನ್ನಬಹುದಿತ್ತು. ಬಹಳ ಗುಟ್ಟಿನಲ್ಲಿ ನಡೆದ ಈ ವಿಸಿಟ್ ಸಂದರ್ಭದಲ್ಲಿ ಹಿಂದೊಮ್ಮೆ ಬೆಳ್ಳಾವಿಯಿಂದ ವಿಧಾನಸಭೆಗೆ ಸ್ಪರ್ಧಿಸಿ ಸೋತ ಸುಪ್ರಸಿದ್ಧ ಶ್ರೀ ನಂಜುಂಡೇಶ್ವರ ಬೇಕರಿ ಹಾಗೂ ಹೋಟೆಲ್‌ನ ಸಾಹಸ ಪ್ರವೃತ್ತಿಯ ಮಾಲೀಕ ಸಿ.ವಿ.ಮಹದೇವಯ್ಯನವರೂ ಜನಾರ್ಧನ ರೆಡ್ಡಿಯವರೊಂದಿಗೆ ಕೂತು ಗಂಟೆ ಕಾಲ ಮಾತುಕತೆ ನಡೆಸಿದರು ಎಂಬ ಸಂಗತಿ ಹಾಲಿ ಶಾಸಕರ ಆತಂಕಕ್ಕೆ ನಿಜ ಕಾರಣ ಎನ್ನಲಾಗಿದೆ( ಫೋಟೋ ನೋಡಿ).
ಬಿಜೆಪಿಯನ್ನೇ ಬೆಂಬಲಿಸುತ್ತ ಬಂದಿರುವ ತುಮಕೂರು ನಗರದ ಲಿಂಗಾಯತರಲ್ಲಿನ ಪಂಚಪೀಠಕ್ಕೆ ಸೇರಿದ ವೀರಶೈವರು ಅದೇನೇ ಕಷ್ಟವಾಗಲಿ ಮತ್ತೆ ಜ್ಯೋತಿಗಣೇಶ್ ನಮಗೆ ಬೇಡ ಎಂದು ಪಟ್ಟು ಹಿಡಿದಿದ್ದು, ಈ ಕಾರಣದಿಂದಾಗಿಯೇ ಬಿಜೆಪಿಯಲ್ಲೇ ಇದ್ದು ಹೊರಬಂದಿರುವ ಜನಾರ್ಧನ ರೆಡ್ಡಿಯವರ ಹೊಸ ರಾಜಕೀಯ ಪಕ್ಷದ ಅಭ್ಯರ್ಥಿಯನ್ನಾಗಿ ಮತ್ತೊಬ್ಬ ಲಿಂಗಾಯತರನ್ನು ಕಣಕ್ಕಿಳಿಸುವ ಲೆಕ್ಕಾಚಾರ ಹಾಕಿದ್ದಾರೆಯೇ ಎಂಬುದರ ಸ್ಪಷ್ಟ ಚಿತ್ರಣ ಇನ್ನಷ್ಟೇ ದೊರಕಬೇಕಾಗಿದೆ.
ಕಾಂಗ್ರೆಸ್ ಮಾಜಿ ಶಾಸಕ ರಫೀಕ್ ಅಹ್ಮದ್ ಅವರಿಗೇ ಮತ್ತೆ ಟಿಕೆಟ್ ಕೊಡುತ್ತದೋ ಅಥವಾ ಅವರಿಗಿಂತ ಸ್ಥಳೀಯ ಮುಸ್ಲಿಮರಲ್ಲಿ ಜನಪ್ರಿಯರಾಗಿರುವ ಇಕ್ಬಾಲ್ ಅಹಮದ್ ಅವರನ್ನು ಕಣಕ್ಕಿಳಿಸುತ್ತದೆಯೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಜೆಡಿಎಸ್ ಹಾಗೂ ಆಮ್ ಆದ್ಮಿ ಪಕ್ಷ ಕಾಯುತ್ತಿವೆ.
ಜೆಡಿಎಸ್ ಅಭ್ಯರ್ಥಿಯನ್ನು ಯಾವ ಗಳಿಗೆಯಲ್ಲಿ ಬೇಕಾದರೂ ಬದಲಿಸಬಹುದು ಎಂದು ಖುದ್ದು ಹೆಚ್.ಡಿ.ಕುಮಾರಸ್ವಾಮಿಯವರೇ ಇತ್ತೀಚಿನ ಪಂಚರತ್ನ ಯಾತ್ರೆಯಲ್ಲಿ ಪದೇ ಪದೇ ಹೇಳಿ ಹೋಗಿದ್ದು, ಬೊಮ್ಮನಳ್ಳಿ ಬಾಬು ಅಲಿಯಾಸ್ ಅಟ್ಟಿಕಾ ಬಾಬು ಎಂಬ ಮುಸ್ಲಿಮ್ ಆಸಾಮಿಯನ್ನು ಸ್ಪೇರ್ ಕ್ಯಾಂಡಿಡೇಟ್ ಆಗಿ ಇಟ್ಟುಕೊಂಡಿದ್ದಾರೆ. ಜೊತೆಗೆ ಆಮ್ ಆದ್ಮಿ ಪಾರ್ಟಿ ಒಬ್ಬ ಮುಸ್ಲಿಮ್ ಹಾಗೂ ಮತ್ತೊಬ್ಬ ಕುರುಬ ಸಮುದಾಯಕ್ಕೆ ಸೇರಿದವರನ್ನು ಸಂಭಾವ್ಯ ಅಭ್ಯರ್ಥಿಗಳನ್ನು ಅಕ್ಕಪಕ್ಕ ಇರಿಸಿಕೊಂಡು ದಿನ ಎಣಿಸುತ್ತಿದೆ. ಕಾಂಗ್ರೆಸ್ ಮುಸ್ಲಿಮೇತರರಿಗೆ ಟಿಕೆಟ್ ಕೊಟ್ಟರೆ ನಾವೇಕೆ ಮುಸ್ಲಿಮರನ್ನು ಕಣಕ್ಕಿಳಿಸಬಾರದು, ಇಲ್ಲವಾದರೇ ಜೀನಿ ಜಗದೀಶ್ ಬಾಬು ಇದ್ದಾರಲ್ಲ ಬಿಡಿ ಎನ್ನುತ್ತಿದೆ ಆಪ್.
ಹೀಗಾಗಿ ತುಮಕೂರು ವಿಧಾನ ಸಭಾ ಕ್ಷೇತ್ರದಲ್ಲಿ ಈ ಸಲದ ಚುನಾವಣೆ ಯಾರೂ ಊಹಿಸಿರದ ಆಯಾಮಗಳನ್ನು ಪಡೆದುಕೊಳ್ಳತೊಡಗಿದೆ.
ತುಮಕೂರಿನ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರ ತಂದೆ ತುಮಕೂರು ಲೋಕಸಭಾ ಕ್ಷೇತ್ರದ ಸದಸ್ಯ ಜಿ.ಎಸ್.ಬಸವರಾಜು ಅವರ ರಾಜಕೀಯ ಜೀವನ ಆರಂಭಿಸಿದ್ದು ಹಾಗೂ ಹೆಚ್ಚು ಅವಧಿ ಕಳೆದದ್ದು ಕಾಂಗ್ರೆಸ್‌ನಲ್ಲಿ. ಯಡಿಯೂರಪ್ಪನವರು ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ ಅವರ ಜೊತೆ ಹೋಗಿದ್ದವರು, ಬಿಜೆಪಿಯ ನಾಲ್ಕು ಅವಧಿಯ ಶಾಸಕ ಸೊಗಡು ಶಿವಣ್ಣನವರು ಪಕ್ಷ ನಿಷ್ಟೆಯ ಕಾರಣದಿಂದ ಯಡಿಯೂರಪ್ಪನವರನ್ನು ಅನುಸರಿಸಿ ಕೆಜೆಪಿಗೆ ಹೋಗಲಿಲ್ಲ, ಹೀಗಾಗಿ ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪನವರು ಜಿ.ಎಸ್.ಬಸವರಾಜ್ ಮಗ ಜ್ಯೋತಿಗಣೇಶ್ ಗೆ ಟಿಕೆಟ್ ಕೊಟ್ಟರು.
2006ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಜೊತೆ ಸೇರಿ( ಬಿಜೆಪಿ ಅನ್ನುವುದಕ್ಕಿಂತ ಯಡಿಯೂರಪ್ಪ ಜೊತೆ ಸೇರಿ ಎನ್ನುವುದೇ ಸರಿ) ಸರ್ಕಾರ ರಚಿಸಿದರು, ವಿಧಾನಸಭಾ ಚುನಾವಣೆಗಳಲ್ಲಿ ಕನಿಷ್ಟ ಸರಳಬಹುಮತ ಪಡೆದಾದರೂ ಸರಕಾರ ರಚಿಸಬೇಕು ಅಂತ ಕಾಯುತ್ತೆ ಕೂತರೆ ಆಗಲ್ಲ ಎಂದು ಭಾವಿಸಿದ ಯಡಿಯೂರಪ್ಪನವರು ಕುಮಾರಸ್ವಾಮಿ ಮಂತ್ರಿಮಂಡಲದಲ್ಲಿ ಉಪ ಮುಖ್ಯಮಂತ್ರಿ ಪದವಿಯನ್ನೂ ವಿನಯದಿಂದಲೇ ಸ್ವೀಕರಿಸಿದರು.
20-20 ಒಪ್ಪಂದವನ್ನು ಹೆಚ್‍ಡಿಕೆ ಮುರಿದ ಪರಿಣಾಮ, ನಂತರದ ಚುನಾವಣೆಯಲ್ಲಿ ಅನುಕಂಪದ ಅಲೆಯ ಮೇಲೆ ತೇಲಿದ ಯಡಿಯೂರಪ್ಪನವರು ಬಿಜೆಪಿಯ 110 ಶಾಸಕರು ಚುನಾಯಿಸುವಲ್ಲಿ ಯಶಸ್ವಿಯಾದರು, ಕೈ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ, ಸರಳ ಬಹುಮತಕ್ಕೆ ಕೊರತೆಯಾದ ಸೀಟುಗಳನ್ನು ಆಪರೇಶನ್ ಕಮಲದ ಮೂಲಕ ಖರೀದಿಸುವ ಮೂಲಕ ಹೊಸ ರಾಜಕೀಯ ನಡವಳಿಕೆಗೆ ನಾಂದಿ ಹಾಡಿದವರು ಯಡಿಯೂರಪ್ಪ. ಆದರೆ ಲೋಕಾಯುಕ್ತ ತನಿಖೆಯೇ ಕಾರಣವಾಗಿ ಬಿಎಸ್‍ವೈ ಅಧಿಕಾರ ವಂಚಿತರಾದರು.
ಮತ್ತೆ 2018ರ ಚುನಾವಣೆ ನಂತರ ರೂಪುಗೊಂಡ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಕೆಡವಿ, ಆ ಎರಡೂ ಪಕ್ಷಗಳ ಶಾಸಕರನ್ನು ಖರೀದಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತಂದದ್ದೂ ಇದೇ ಯಡಿಯೂರಪ್ಪನವರೇ. ಆದರೂ ಅವರನ್ನು ಅವಧಿ ಪೂರ್ಣಗೊಳಿಸಲು ಬಿಡದೇ ಕೆಳಗಿಳಿಸಿ, ಬಸವರಾಜ ಬೊಮ್ಮಾಯಿ ಅವರನ್ನು ಕೈಗೊಂಬೆ ಮುಖ್ಯಮಂತ್ರಿ ಎಂಬಂತೆ ತಂದು ಕೂರಿಸಿತು ಬಿಜೆಪಿ ಹೈಕಮಾಂಡ್.
ಆದರೆ ಯಡಿಯೂರಪ್ಪ ಮತ್ತು ಅವರ ಮಗ ಬಿ.ವೈ.ವಿಜಯೇಂದ್ರ ಅವರ ಯಾವ ಅತೀವ ಭ್ರಷ್ಟಾಚಾರದ ಕಾರಣಕೊಟ್ಟು ಕೆಳಗಿಳಿಸಲಾಯಿತೋ ಅವರ ನಂತರ ಅಧಿಕಾರ ಕೊಟ್ಟು ಕೂರಿಸಿದ ಬೊಮ್ಮಾಯಿ ಕೂಡಾ ಅವರಿಗಿಂತ ಹೆಚ್ಚು ಭ್ರಷ್ಟಾಚಾರದ ಹಗರಣಗಳನ್ನು ಸೃಷ್ಟಿಸಿಕೊಂಡಿದ್ದು, ಚುನಾವಣೆಯ ನಾಯಕತ್ವ ವಹಿಸಿಕೊಂಡು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಸ್ಥಿತಿಯಲ್ಲಿಲ್ಲ ಎಂಬುದು ಆ ಪಕ್ಷದ ದಿಲ್ಲಿ ನಾಯಕರಿಗೆ ಮನವರಿಕೆ ಆಗಿಬಿಟ್ಟಿದೆ.
ಹೀಗಾಗಿ ಯಡಿಯೂರಪ್ಪನವರನ್ನ ಯಾವ ಕಾರಣಕ್ಕೂ ನೆಗ್‍ಲೆಕ್ಟ್ ಮಾಡಬಾರದೆಂದು ಸಿಎಂ ಬೊಮ್ಮಾಯಿ ಅವರಿಗೆ ಹೈಕಮಾಂಡ್ ಸೂಚನೆ ನೀಡಿದೆಯಂತೆ.
ಏಪ್ರಿಲ್-ಮೇನಲ್ಲಿ ನಡೆಯಲಿರುವ ರಾಜ್ಯದ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಲೇಬೇಕೆಂಬ ಲೆಕ್ಕದಲ್ಲಿ 79 ವರ್ಷದ ಯಡಿಯೂರಪ್ಪನವರನ್ನೇ ಬ್ರಹ್ಮಾಸ್ತ್ರವನ್ನಾಗಿ ಮಾಡಿಕೊಳ್ಳಲಿದೆ ಬಿಜೆಪಿ. ಈ ಅನುಸಂಧಾನದ ಪರಿಣಾಮ , ಯಡಿಯೂರಪ್ಪನವರ ಖಾಸಾ ವಿಧಾನ ಸಭಾ ಕ್ಷೇತ್ರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ ಅವರ ಮಗ ಬಿ.ವೈ.ವಿಜಯೇಂದ್ರ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ.
ಹಿಮಾಚಲ ಪ್ರದೇಶ ರಾಜ್ಯವನ್ನು ಕಾಂಗ್ರೆಸ್‍ಗೆ ಕಳೆದುಕೊಂಡ ಬಿಜೆಪಿ, ದಕ್ಷಿಣ ಭಾರತದಲ್ಲಿ ತನ್ನ ಕೈಯಲ್ಲಿರುವ ಏಕೈಕ ರಾಜ್ಯವಾಗಿರುವ ಕರ್ನಾಟಕವನ್ನು ಭ್ರಷ್ಟಾಚಾರದ ಹಗರಣಗಳು,ಆಂತರಿಕ ಭಿನ್ನಮತ ಮತ್ತು ವೈಮನಸ್ಯಗಳ ಕಾರಣಕ್ಕೆ ಸೃಷ್ಟಿಯಾಗಿರುವ ಆಡಳಿತ ವಿರೋಧಿ ಅಲೆಯ ಕಾರಣಕ್ಕೆ ಕಳೆದುಕೊಳ್ಳಲು ಹೈಕಮಾಂಡ್ ಸಿದ್ದವಿಲ್ಲ. ಹಾಗಾಗಿ ಯಡಿಯೂರಪ್ಪನವರನ್ನ ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿ ಸದಸ್ಯರನ್ನಾಗಿ ಮಾಡಿಕೊಳ್ಳಲಾಯಿತು, ಅಲ್ಲದೇ ಗುಜರಾತಿನಲ್ಲಿ ಚುನಾವಣೆ ಗೆದ್ದ ನಂತರದ ಶಾಸಕಾಂಗ ಪಕ್ಷದ ಸಭೆಗೆ ವೀಕ್ಷಕರನ್ನಾಗಿ ಬಿಎಸ್‍ವೈ ಅವರನ್ನೇ ಕಳಿಸಲಾಯಿತು. ಆದರೆ ಹೈಕಮಾಂಡ್‍ನ ಇಂತದ್ದೆಲ್ಲ ಪೂಸಿ ಹಚ್ಚುವ ಕ್ರಿಯೆಗೆ ಮರುಳಾಗುವವರಲ್ಲ ಯಡಿಯೂರಪ್ಪ ಅಂತ ಅವರಿಗೂ ಗೊತ್ತಿದೆ. ಹಾಗಾಗಿ ಇತ್ತೀಚಿನ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಮುಗಿದ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯಡಿಯೂರಪ್ಪನವರ ಜೊತೆ 15 ನಿಮಿಷ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಈ ಮಾತುಕತೆಯಲ್ಲಿ ವಿಜಯೇಂದ್ರ ಅವರಿಗೆ ವಿಧಾನ ಸಭೆಯಿಂದ ಟಿಕೆಟ್ ಕೊಡಬೇಕೆಂಬ ಪ್ರಮುಖ ಬೇಡಿಕೆಯನ್ನು ಬಿಎಸ್‍ವೈ ಇಟ್ಟರೆಂದು ಹೇಳಲಾಗಿದೆ, ಇಲ್ಲ ಅದೇನೂ ಮುಖ್ಯವಲ್ಲ, ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿಯವರನ್ನು ಆಹ್ವಾನಿಸಲಾಯಿತು ಎನ್ನುತ್ತಾರೆ ಅವರ ಮತ್ತೊಬ್ಬ ಮಗ ಎಂಪಿ ಬಿ.ವೈ.ರಾಘವೇಂದ್ರ.
ಫೆಬ್ರವರಿ 27 ಯಡಿಯೂರಪ್ಪನವರ 80ನೇ ಜನ್ಮ ದಿನ, ಅಂದೇ ಶಿವಮೊಗ್ಗದ ವಿಮಾನ ನಿಲ್ದಾಣವನ್ನು ಜನತೆಗೆ ಅರ್ಪಿಸಲು ಪ್ರಧಾನಿ ಬರುತ್ತಾರೆ.
ಕಳೆದ ಐದಾರು ತಿಂಗಳಲ್ಲಿ ರಾಜ್ಯದಲ್ಲಿ ಬಿಜೆಪಿ-ಆರ್‍ಎಸ್‍ಎಸ್ ಮೂರ್ನಾಲ್ಕು ಸಮೀಕ್ಷೆಗಳನ್ನು ಮಾಡಿಸಿದ್ದು, ಯಾವ ಸಮೀಕ್ಷೆಯೂ ಬಿಜೆಪಿ ಸರಳ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂಬ ಫೇವರಬಲ್ ವರದಿ ಕೊಟ್ಟಿಲ್ಲ ಎಂಬ ಅಂಶವೂ ಹೈಕಮಾಂಡ್ ಬಿಎಸ್‍ವೈ ಅವರನ್ನು ಓಲೈಸಲು ಮುಖ್ಯ ಕಾರಣವಾಗಿದೆ.
2018ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಯನ್ನು ಕೈ ಹಿಡಿದಿರುವುದು ಎರಡೇ ಜಾತಿಗಳು, ಒಂದು ಲಿಂಗಾಯಿತರು ಮತ್ತೊಂದು ಒಕ್ಕಲಿಗರು. 2ಎ ಮೀಸಲಾತಿ ಕೋರಿಕೆ ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿರುವ ಪಂಚಮಸಾಲಿ ಲಿಂಗಾಯಿತರ ಕೋಪವನ್ನು ಶಮನಗೊಳಿಸಿ ಚುನಾವಣೆಗೆ ಅಣಿಗೊಳಿಸುವ ಶಕ್ತಿ ಯಡಿಯೂರಪ್ಪನವರನ್ನು ಹೊರತುಪಡಿಸಿ ಮತ್ಯಾವ ಲಿಂಗಾಯಿತ ರಾಜಕಾರಣಿಗೂ ಇಲ್ಲ ಎಂಬುದು ಹೈಕಮಾಂಡ್‍ನ ಬಲವಾದ ನಂಬಿಕೆ.
ರಾಜ್ಯದ ಮತ್ತೊಂದು ಪ್ರಬಲ ಜಾತಿ 14% ನಷ್ಟಿರುವ ಒಕ್ಕಲಿಗರನ್ನೂ ಬಿಜೆಪಿ ಬಲವಾಗಿ ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿದೆ. ಹಳೇ ಮೈಸೂರು ಜಿಲ್ಲೆಗಳಲ್ಲಿ ಜೆಡಿಎಸ್‍ನ ಮುಖ್ಯ ಮತದಾರರಾದ ಒಕ್ಕಲಿಗರನ್ನು ಬಿಜೆಪಿಗೆ ಸೆಳೆಯುವುದು ಹೇಗೆ ಎಂಬುದು ಬಿಜೆಪಿ ಲೆಕ್ಕಚಾರವಾಗಿದೆ.
ಹಾಲಿ ವಿಧಾನ ಸಭೆಯ 224 ಶಾಸಕರಲ್ಲಿ 100 ಮಂದಿ ಒಕ್ಕಲಿಗ ಹಾಗೂ ಲಿಂಗಾಯಿತ ಶಾಸಕರಿದ್ದಾರೆ. ಇವರಲ್ಲಿ 58 ಲಿಂಗಾಯಿತರು ಹಾಗೂ 42 ಮಂದಿ ಒಕ್ಕಲಿಗರು. ಇವರಲ್ಲಿ 38 ಲಿಂಗಾಯಿತ ಶಾಸಕರು ಬಿಜೆಪಿಯಲ್ಲಿದ್ದಾರೆ. 23 ಒಕ್ಕಲಿಗ ಶಾಸಕರು ಜೆಡಿಎಸ್‍ನಲ್ಲಿದ್ದಾರೆ, 2018ರ ಚುನಾವಣೆಯಲ್ಲಿ ಬಿಜೆಪಿ ಹಳೇ ಮೈಸೂರು ಜಿಲ್ಲೆಗಳ ಒಟ್ಟು 64 ಕ್ಷೇತ್ರಗಳ ಪೈಕಿ 13ರಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿರುವುದು. ಹಾಗಾಗಿ ಬಿಜೆಪಿ 2021ರಲ್ಲಿ ಬೊಮ್ಮಾಯಿಯವರ ಮಂತ್ರಿ ಮಂಡಲದಲ್ಲಿ ಏಳು ಒಕ್ಕಲಿಗರನ್ನು ಮಂತ್ರಿಗಳನ್ನಾಗಿ ಮಾಡಿತು. ಜೊತೆಗೆ ಶೋಭಾ ಕರಂದ್ಲಾಜೆ ಅವರನ್ನು ಕೇಂದ್ರದಲ್ಲಿ ರಾಜ್ಯ ಸಚಿವೆಯನ್ನಾಗಿ ಸೇರಿಸಿಕೊಂಡದ್ದು ಮತ್ತು ಸಿ.ಟಿ.ರವಿಯನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿಕೊಂಡದ್ದು. ಇದೆಲ್ಲ ಒಕ್ಕಲಿಗರನ್ನು ಕುಮಾರಸ್ವಾಮಿ-ದೇವೇಗೌಡರ ಹತೋಟಿಯಿಂದ ಕೈತಪ್ಪಿಸುವ ಸಲುವಾಗಿಯೇ ಮಾಡಿದ ಓಲೈಕೆ.
ಜೊತೆಗೆ ದಲಿತರಲ್ಲಿ ಎಡಗೈ ಸಮುದಾಯದ ಓಟುಗಳನ್ನು ಒಳಮೀಸಲಾತಿ ಆಮಿಷ ತೋರಿಸುತ್ತಲೇ ಉಳಿಸಿಕೊಳ್ಳುವುದು, ಒಕ್ಕಲಿಗರ ಓಟುಗಳನ್ನು ಜೆಡಿಎಸ್‍ನಿಂದ ಎಳೆದುಕೊಳ್ಳುವುದು, ಲಿಂಗಾಯಿತರನ್ನು ಇಡಿಯಾಗಿ ಉಳಿಸಿಕೊಳ್ಳುವುದು ಬಿಜೆಪಿ ಹೈಕಮಾಂಡ್ ಮುಂದಿರುವ ತುರ್ತಾಗಿದೆ.
ಈ ಅಂಶಗಳ ಹಿನ್ನೆಲೆಯಲ್ಲಿ ತುಮಕೂರು ವಿಧಾನ ಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಪಕ್ಷದ ಟಿಕೆಟ್ ಪಡೆಯಬೇಕೆಂಬ ಸೊಗಡು ಶಿವಣ್ಣನವರ ಹಂಬಲ ಎಷ್ಟರಮಟ್ಟಿಗೆ ಈಡೇರುವುದೋ ಕಾದು ನೋಡಬೇಕು.