ಸ್ವಾರ್ಥ ವಂಶವಾಹಿನಿ 

ಸ್ವಾರ್ಥ ವಂಶವಾಹಿನಿ 

ಪ್ರಬಂಧ

ಪ್ರಸನ್ನ ಸಂತೇಕಡೂರು



ಎರಡು ತಿಂಗಳ ಹಿಂದೆ ಹೊಸ ಪುಸ್ತಕಗಳನ್ನು ಖರೀದಿಸಲು ಎಂ. ಜಿ. ರೋಡಿನ ಗಲ್ಲಿಯೊಂದರಲ್ಲಿರುವ ಪುಸ್ತಕದ ಅಂಗಡಿಗೆ ಹೋಗಿದ್ದೆ. ನನ್ನ ಕಂಡು ಪುಸ್ತಕಗಳ ಪರ್ವತದ ಮಧ್ಯ ಗುಹೆಯಂತಿದ್ದ ಜಾಗದಿಂದ ಎದ್ದು ಬಂದ ಆ ಅಂಗಡಿಯ ಬಿಳಿ ತಲೆ ಕೂದಲಿನ ಉದ್ದನೆಯ ಗಡ್ಡದ ಮುದುಕ ನಗುತ್ತಲೇ ನನ್ನನ್ನು ಒಳ ಬರಮಾಡಿಕೊಂಡನು. ನಾನು ಎಲ್ಲಾ ಪುಸ್ತಕಗಳ ಮೇಲೆ ಕಣ್ಣಾಡಿಸುತ್ತಿದ್ದೆ. ಆ ಮುದುಕ ಇದ್ದಕಿದ್ದಂತೆ "ಈ ಮನುಷ್ಯ ಎಷ್ಟು ಸ್ವಾರ್ಥಿ! ತಾನೇ ಈ ದೇಶದ ಪ್ರಧಾನ ಮಂತ್ರಿಯಾಗಬೇಕು, ತನ್ನ ಮಗ ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು, ತನ್ನ ಇನ್ನೊಬ್ಬ ಮಗ ಆ ಜಿಲ್ಲೆಯ ಲೋಕಸಭಾ ಸದಸ್ಯ ಆಗಬೇಕು, ತನ್ನ ಮೊಮ್ಮಗ ಆ ತಾಲ್ಲೂಕಿನ ವಿಧಾನ ಸಭಾ ಸದಸ್ಯ ಆಗಬೇಕು, ತನ್ನ ಸೊಸೆ ಇನ್ನೇನೋ ಆಗಬೇಕು. ಈ ದೇಶವನ್ನು ಇವನ ಮುತ್ತಾತನ ಜಾಗೀರು ಅಂದುಕೊಂಡಿದ್ದಾನೆಯೇ ? " ಎಂದು ಯಾವುದೋ ದಿನಪತ್ರಿಕೆಯನ್ನು ಓದುತ್ತಾ ಯಾವುದೋ ರಾಜಕಾರಣಿಯನ್ನು ಜಾಡಿಸುತ್ತಿದ್ದನು.


ಆ ಮುದುಕನ ಮಾತುಗಳು ಕೇಳಿ ಆಶ್ಚರ್ಯಗೊಂಡ ನಾನು "ಪ್ರಜಾಪ್ರಭುತ್ವದಲ್ಲಿ ಜನ ವಂಶ ಪರಂಪರೆಯ ರಾಜಕೀಯವನ್ನು ಎಲ್ಲಾ ಪಕ್ಷಗಳಲ್ಲೂ ಎಲ್ಲಾ ರಾಜ್ಯಗಳಲ್ಲೂ ಒಪ್ಪಿಕೊಂಡಿದ್ದಾರೆ. ನೀವೇಕೆ ಸುಮ್ಮನೇ ಕೋಪಕ್ಕೆ ಒಳಗಾಗುತ್ತಿದಿರಾ? " ಎಂದು ಆ ಮುದುಕನಿಗೆ ಪ್ರಶ್ನೆ ಮಾಡುವ ಮೂಲಕ ಅವನಿಗೆ ಸಮಾಧಾನ ಮಾಡಿದೆ. ಅವನ ಮುಖದಲ್ಲಿ ಭಾರತದ ಇಂದಿನ ರಾಜಕೀಯ ವ್ಯವಸ್ಥೆಯ ಬಗ್ಗೆ ಏನೋ ಅಸಮಾಧಾನ ಎದ್ದು ಕಾಣುತ್ತಿತ್ತು.


ಆ ಮುದುಕ ಮತ್ತೇ ಇದ್ದಕ್ಕಿದಂತೆ "ಎಲ್ಲರೂ ಕಳ್ಳರು, ತಾನು, ತನ್ನ ಮಕ್ಕಳು, ತನ್ನ ಕುಟುಂಬ ಮಾತ್ರ ರಾಜಕೀಯಕ್ಕೆ ಬರಬೇಕು ಎಂದು ಸಾಯುತ್ತಾರೆ. ಇದ್ಯಾವುದೂ ಆಗದಿದ್ದಾಗ ತನ್ನ ಜಾತಿಯವನು ಉದ್ದಾರ ಆದರೆ ಸಾಕು " ಎಂದು ಮತ್ತ್ಯಾವುದೋ ರಾಜಕಾರಣಿಗೆ ಬಯ್ಯಲು ಆರಂಭಿಸಿದನು.


ಆ ಮುದುಕನ ಬಗ್ಗೆ ಕುತೂಹಲ ಗೊಂಡ ನಾನು "ನಿಮ್ಮ ಆರೋಗ್ಯ ಚೆನ್ನಾಗಿದೆ ತಾನೇ?" ಎಂದು ಕೇಳಿದೆ.
ತಕ್ಷಣವೇ ಅವನು ಇತ್ತೀಚೆಗೆ "ಸ್ವಲ್ಪ ಎದೆ ನೋವು ಕಾಣಿಸಿಕೊಳ್ಳುತ್ತಿದೆ. ರಕ್ತದ ಒತ್ತಡ ಹೆಚ್ಚಾಗಿದೆ. ನನ್ನ ಮುತ್ತಾತನ ಕಾಲದಿಂದ ಈ ಪುಸ್ತಕ ವ್ಯಾಪಾರ ಮಾಡುತ್ತ ಬಂದಿದ್ದೇವೆ. ಈಗ ಈ ವ್ಯಾಪಾರ ನನ್ನ ಮಕ್ಕಳಿಗೂ, ಮೊಮ್ಮಕಳಿಗೂ ಬೇಡವಾಗಿದೆ. ನನ್ನ ಕುಟುಂಬದ ಯಾರು ಇದನ್ನು ನೋಡಿಕೊಳ್ಳಲು ತಯಾರಿಲ್ಲ. ಅದೇ ನನಗೆ ದೊಡ್ಡ ಚಿಂತೆಯಾಗಿದೆ. ನಾನು ಸತ್ತ ನಂತರ ಲಕ್ಷಕ್ಕಿಂತ ಹೆಚ್ಚಾಗಿರುವ ಈ ಪುಸ್ತಕಗಳ ಗತಿ ಏನು? " ಎಂದು ಯೋಚಿಸುತ್ತಿದ್ದೇನೆ ಅಂದನು.


"ನೀವು ನಿಮ್ಮ ಸಾವಿನ ನಂತರದ ದಿನಗಳ ಬಗ್ಗೆ ಹೆಚ್ಚು ಯೋಚಿಸಬೇಡಿ. ಬದುಕಿರುವ ತನಕ ಆರೋಗ್ಯವಂತರಾಗಿ ನೆಮ್ಮದಿಯಿಂದ ಚೆನ್ನಾಗಿರಿ" ಎಂದು ಬಿಟ್ಟಿ ಉಪದೇಶ ಕೊಟ್ಟೆ. ಆ ಮುದುಕ ಸ್ವಲ್ಪ ತಣ್ಣಗಾದನು.


"ನಿಮ್ಮ ಅಂಗಡಿಯಲ್ಲಿ ತುಂಬಾ ಖರ್ಚಾಗುವ, ಜನರು ಹೆಚ್ಚು ಖರೀದಿಸುವ ಪುಸ್ತಕ ಯಾವುದು? " ಅಂದೇ.
ಅವನು "ಈ ಬೆಂಗಳೂರಿನ ಜನ ಕನ್ನಡ ಪುಸ್ತಕ ಓದುವುದು ಬಿಟ್ಟು ತುಂಬಾ ವರ್ಷಗಳೇ ಆದವು. ಈಗೋ ನೋಡಿ ಈ ಇಂಗ್ಲಿಷ್ ಪುಸ್ತಕವನ್ನು ಎಲ್ಲರೂ ಹೆಚ್ಚು ಕೊಳ್ಳುತ್ತಾರೆ" ಎಂದು ಹೇಳಿ ರಿಚರ್ಡ್ ಡಾಕಿನ್ಸ್ ಎಂಬ ಬ್ರಿಟಿಷ್ ಲೇಖಕ ಬರೆದ "The Selfish Gene"(ಸ್ವಾರ್ಥ ವಂಶವಾಹಿನಿ)" ಪುಸ್ತಕವನ್ನು ನನ್ನ ಮುಂದೆ ಇಟ್ಟನು. ಆ ಪುಸ್ತಕದ ಶೀರ್ಷಿಕೆಯೇ ನನ್ನನ್ನು ತುಂಬಾ ಆಕರ್ಷಿಸಿತು.


"ಪ್ರತಿ ದಿನ ಹತ್ತು ಪ್ರತಿಗಳು ಖರ್ಚಾಗುತ್ತಿವೆ. ಜನ ಈ ಪುಸ್ತಕದಲ್ಲಿ ಏನನ್ನೋ ಕಂಡುಕೊಳ್ಳುತ್ತಿದ್ದಾರೆ ಅನಿಸುತ್ತೇ " ಅಂದನು ಮುದುಕ.


"ನನಗೆ ಒಂದು ಪ್ರತಿ ಕೊಡಿ " ಎಂದು ನಾನು ಆ ಪುಸ್ತಕವನ್ನು ಕೊಂಡುಕೊಂಡು ಮನೆಗೆ ಹೊರಟೆ.
"ನೀವು ಏನು ಉದ್ಯೋಗ ಮಾಡುತ್ತಿದ್ದೀರಾ? " ಎಂದು ಆ ಮುದುಕ ನನ್ನನ್ನು ತಡೆದು ಕುತೂಹಲದಿಂದ ಕೇಳಿದ.


"ನಾನೊಬ್ಬ ಶಾಸನಗಳ ತಜ್ಞ. ಹಳೆಯ ಕಲ್ಲಿನ ಶಾಸನಗಳನ್ನು ಓದಿ ಅರ್ಥೈಸುತ್ತೇನೆ" ಎಂದು ಉತ್ತರಿಸಿದೆ.
ಆ ಮಾತನ್ನು ಕೇಳಿದ ತಕ್ಷಣವೇ ಮುದುಕ ಸಂತೋಷದಿಂದ " ನಾವು ಮೂಲತಃ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣ ಎಂಬ ಗ್ರಾಮದವರು. ಅಲ್ಲಿ ನಮ್ಮ ಪೂರ್ವಜರ ಮನೆಯ ಮುಂದೆ ಒಂದು ಶಾಸನವಿದೆ. ಅದನ್ನು ಓದಿ ಅರ್ಥ ಹೇಳಬೇಕು. ಅದರಲ್ಲಿ ಏನು ಬರೆದಿದ್ದಾರೆ ಎಂದು ತಿಳಿಯಲು ತುಂಬಾ ದಿನದಿಂದ ಉತ್ಸುಕನಾಗಿದ್ದೇನೆ. ಅದು ನಿಮ್ಮಿಂದ ಆಗುತ್ತದೆಯೇ?" ಎಂದು ನನಗೊಂದು ಕೆಲಸ ಕೊಟ್ಟ.


"ನಾನು ಅದನ್ನು ಓದುವುದಕ್ಕಾಗಿ ಅಲ್ಲಿಗೆ ಹೊಗಬೇಕಿಲ್ಲ. ಹಳೇ ಮೈಸೂರು ಗೆಜೇಟಿಯರ್ ಓದಿ ನಿಮ್ಮ ಊರಿನ ಶಾಸನದ ಬಗ್ಗೆ ತಿಳಿಸುತ್ತೇನೆ" ಎಂದು ಅವನ ಫೋನ್ ನಂಬರ್ ಮತ್ತು ವಿಳಾಸ ತೆಗೆದುಕೊಂಡು ಮನೆಯ ಕಡೆ ಹೆಜ್ಜೆ ಹಾಕಿದೆ.


ಒಂದು ತಿಂಗಳು ಕಳೆಯಿತು. ನಾನು ಆ ಬಸವಾಪಟ್ಟಣದ ಶಾಸನದ ಬಗ್ಗೆ ಮರೆತುಹೋದೆ. ಆ ದಿನ ನನ್ನ ಹೆಂಡತಿ ಎಲ್ಲೋ ಮನೆಯಿಂದ ಹೊರಗೆ ಹೋಗಿದ್ದಳು. ನಾನು The Selfish Gene ಬುಕ್ ತೆಗೆದು ಓದುತ್ತಿದ್ದೆ. ಮೂರು ವರ್ಷದ ನನ್ನ ಒಬ್ಬಳೇ ಮಗಳು ಹೊರಗೆ ಆಟ ಆಡುತ್ತಿದ್ದವಳು ಓಡಿ ಬಂದು ನನ್ನ ತೊಡೆಯ ಮೇಲೆ ಹಾಗೆ ನಿದ್ರೆ ಹೋದಳು. 


ಅವಳನ್ನು ಹಾಗೆ ಮಲಗಿಸಿಕೊಂಡು ನಾನು ಆ ಪುಸ್ತಕ ಓದುತ್ತಾ ಹೋದ ಹಾಗೆ ನನಗೆ ತಿಳಿದದ್ದನ್ನು ಇಲ್ಲಿ ಬರೆಯುತ್ತಿದ್ದೇನೆ. ಲೇಖಕ ರಿಚರ್ಡ್ ಡಾಕಿನ್ಸ್ ಈ ಪುಸ್ತಕದಲ್ಲಿ ಹೇಳುವ ಹಾಗೆ ಅವನು ವಿಕಾಸವಾದದದಲ್ಲಿ ತುಂಬಾ ಹೆಸರು ಮಾಡಿರುವ ಬ್ರಿಟಿಷ್ ವಿಜ್ಞಾನಿ ಹ್ಯಾಮಿಲ್ಟನ್ನಿನಿಂದ ಪ್ರಭಾವಿತನಾಗಿದ್ದಾನೆ. ಅವನು ವಿಕಾಸವಾದದ ಬಗ್ಗೆ ತಿಳಿಸುವ ಹಾಗೆ ನಾವು ಮತ್ತು ನಮ್ಮ ಮಕ್ಕಳು, ಮೊಮ್ಮಕ್ಕಳು ಈ ಪ್ರಪಂಚಕ್ಕೆ ಸುಮ್ಮನೆ ಬಂದಿರುತ್ತೇವೆ. ಅಂದರೆ ಮಾನವನ ವಿಕಾಸದ ಹಾದಿಯಲ್ಲಿ ನಾವು ಕೇವಲ ನಿಮಿತ್ತ ಮಾತ್ರ ಎಂದು ಪ್ರತಿಪಾದಿಸುತ್ತಾನೆ. ಈ ವಿಕಾಸ ಕ್ರಿಯೆಯು ತಲೆತಲಾಂತರಗಳಿಂದ ನಮಗೆ ಬಂದು ನಮ್ಮ ಮೂಲಕ ಮುಂದಿನ ತಲೆಮಾರುಗಳಲ್ಲಿ ಸಾಗುತ್ತ ಪುನರಾಭಿವೃದ್ಧಿಯಾಗುತ್ತಿರುವುದು ನಾವಲ್ಲ ಅದು ನಮ್ಮ ವಂಶವಾಹಿನಿ ಎಂದು ಹೇಳುತ್ತಾನೆ. ಅವನು ಹೇಳುವ ಪ್ರಕಾರ ನಮ್ಮ ಪ್ರತಿಯೊಂದು ಜೀವಕೋಶದಲ್ಲಿರುವ ವಂಶವಾಹಿನಿಗಳು ವೀರ್ಯಾಣುವಿನ ಅಥವಾ ಅಂಡಾಣುವಿನ ರೂಪದಲ್ಲಿ ನಮ್ಮ ಮುಂದಿನ ತಲೆಮಾರುಗಳಿಗೆ ಸಾಗುತ್ತವೆ. ನಮಗೆ ಹುಟ್ಟುವ ಮಕ್ಕಳು ನಮ್ಮ ವಂಶವಾಹಿನಿಗಳ ವಾರಸುದಾರರಾಗುತ್ತಾರೆ. ನಮ್ಮ ವಂಶವಾಹಿನಿಗಳು ಅವರ ದೇಹದಲ್ಲಿ ಇರುತ್ತವೆ. ನಾವು ನಶಿಸಿದರೂ ನಮ್ಮ ಮಕ್ಕಳ ಮೊಮ್ಮಕ್ಕಳ ಮೂಲಕ ಅವು ಮುಂದಿನ ತಲೆಮಾರಿಗೆ ಸಾಗುತ್ತವೆ.


"ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ" ಎಂದು ಕನಕದಾಸರು ಹೇಳಿದ್ದಾರೆ. ಆದರೆ ಈ ರಿಚರ್ಡ್ ಡಾಕಿನ್ಸ್ "ಎಲ್ಲಾರು ಮಾಡುವುದು ತಮ್ಮ ವಂಶವಾಹಿನಿಯನ್ನು ಮುಂದಿನ ತಲೆಮಾರಿಗೆ ಸಾಗಿಸುವುದಕ್ಕಾಗಿ" ಎಂದು ಹೇಳುತ್ತಾನೆ.


ಪುಸ್ತಕ ಓದಿ ಮುಗಿಸುವ ಹೊತ್ತಿಗೆ ಆ ಪುಸ್ತಕದ ಅಂಗಡಿಯ ಮುದುಕ ಜ್ಞಾಪಕಕ್ಕೆ ಬಂದ. ಅವನು ಹೇಳಿದ ಬಸವಾಪಟ್ಟಣದ ಶಾಸನ ಜ್ಞಾಪಕಕ್ಕೆ ಬಂತು. ಅಂತರ್ಜಾಲದಲ್ಲಿ ಬಿ. ಲೇವಿಸ್ ರೈಸ್ ಅವರು ಸಂಪಾದಿಸಿರುವ ಹಾಸನ ಜಿಲ್ಲೆಗೆ ಸಂಬಂಧಿಸರುವ "ಎಫಿಗ್ರಾಫಿಯಾ ಕಾರ್ನಾಟಿಕಾ" ಪುಸ್ತಕ ತೆಗೆದು ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣದ ಶಾಸನ ಹುಡುಕಿದೆ. ಆ ಮುದುಕ ಹೇಳಿದ ಶಾಸನ ಸಿಕ್ಕಿತು.


ಅದನ್ನು ತೀವ್ರ ಕುತೂಹಲದಿಂದ ಓದಲು ಆರಂಭಿಸಿದೆ. ಕ್ರಿಸ್ತ ಶಕ 1514 ರಲ್ಲಿ ಬರೆಸಿರುವ ಆ ಶಾಸನದಲ್ಲಿ "ಮಹಾರಾಜಧಿರಾಜ ರಾಜ ಪರಮೇಶ್ವರ ಕಠಾರಿ ಸಾಳುವ ವೀರ ಪ್ರತಾಪ ಶ್ರೀ ಕೃಷ್ಣದೇವರಾಯ ಮಹಾರಾಯನು ತನ್ನ ಆಸ್ಥಾನವನ್ನು ಸುಖ, ನೆಮ್ಮದಿ ಮತ್ತು ಬುದ್ದಿವಂತಿಕೆಯಿಂದ ಆಳುತ್ತಿದ್ದನು. ಕಾವೇರಿ ತೀರದ ಶ್ರೀ ರಾಮನಾಥಪುರದ ದೇವರು ಶ್ರೀ ಪಟ್ಟಾಭಿರಾಮನ ಪೂಜೆಗೆ ಬಸವಾಪಟ್ಟಣ ಸ್ಥಳದ ವ್ಯಾಪ್ತಿಗೆ ಸೇರುವ ನೀಲಕುಂದ ಸ್ಥಳದ ಸಿಂಗನಕುಪ್ಪೆ ಗ್ರಾಮವನ್ನು ರಾಯರು ದಾನವಾಗಿ ಕೊಟ್ಟಿರುತ್ತಾರೆ. ಇದನ್ನು ದೇವಸ್ಥಾನದ ಖರ್ಚು ವೆಚ್ಚಗಳಿಗೆ ಬಳಸಿಕೊಳ್ಳಬಹುದು. ಆ ದೇವರು ಶ್ರೀ ಕೃಷ್ಣದೇವರಾಯರನ್ನು ಅವರ ಮಕ್ಕಳನ್ನು, ಅವರ ವಂಶವನ್ನು, ತನ್ನ ಭಕ್ತರನ್ನು ಅವರ ಮಕ್ಕಳನ್ನೂ ಚೆನ್ನಾಗಿ ಕಾಪಾಡಲಿ. ಆ ಮಕ್ಕಳು ಸಾವಿರಾರು ತಲೆಮಾರುಗಳು ಬಾಳಲಿ. ನಮ್ಮ ತಲೆಮಾರುಗಳು ಕೂಡ ಸಾವಿರಾರು ವರ್ಷ ಬಾಳಲಿ. ಆ ದೇವರು ವಿಜಯನಗರದ ಸಾಮ್ರಾಜ್ಯದ ಈ ಗ್ರಾಮವನ್ನು ಸುಖ, ಶಾಂತಿ, ನೆಮ್ಮದಿಯಿಂದ ಕಾಪಾಡಲಿ " ಎಂದು ಬರೆದಿತ್ತು.


ಆ ಶಾಸನ ಓದಿ ಮುಗಿಸಿದೆ. ತೊಡೆಯ ಮೇಲಿದ್ದ ಮಗಳನ್ನು ಪಕ್ಕದ ಹಾಸಿಗೆ ಮೇಲೆ ಮಲಗಿಸಲು ನೋಡಿದೆ. ಮಗಳು ನಿದ್ರೆಯಲ್ಲಿ "ನಾನು ಕಿತ್ತೂರು ಚೆನ್ನಮ್ಮ! ಹೇ ಥ್ಯಾಕರೇ ನಿನ್ನನ್ನು ಮತ್ತು ನಿಮ್ಮ ಬ್ರಿಟಿಷ್ ವಂಶವನ್ನು ಸರ್ವನಾಶ ಮಾಡುತ್ತೇನೆ. ನಿನ್ನ ರುಂಡವನ್ನು ಚೆಂಡಾಡುತ್ತೇನೆ" ಎಂದು ನೆನ್ನೆ ಟಿವಿಯಲ್ಲಿ ನೋಡಿದ ಕಾರ್ಯಕ್ರಮವೊಂದರ ಸಂಭಾಷಣೆಯನ್ನು ಕನವರಿಸುತ್ತಿದ್ದಳು. ಅವಳನ್ನು ಎಚ್ಚರ ಮಾಡಿ ಪಕ್ಕಕ್ಕೆ ಮಲಗಿಸಲು ನೋಡಿದೆ.


ಅದೇ ವೇಳೆಗೆ ಎಲ್ಲಿಂದಲೋ ಒಂದು ದೈತ್ಯ ಕಡಜ ನನ್ನ ಮಗಳನ್ನು ಕಚ್ಚಲು ಅವಳ ಮೇಲೆ ಹಾರಿತು. ವಾರದ ಹಿಂದೆ ಮನೆಯೊಳಗೆ ಅದು ಕಟ್ಟಿದ್ದ ಅದರ ಗೂಡನ್ನು ಕಿತ್ತಿದ್ದೆ. ಆ ಗೂಡಿನಲ್ಲಿದ್ದ ಹಲವು ಕಡಜಗಳಲ್ಲಿ ಒಂದು ನನ್ನ ಮಗಳನ್ನು ಕಚ್ಚಿತ್ತು. ಈಗ ಅದರ ವಂಶವನ್ನು ನಾಶಮಾಡಿದ್ದರಿಂದ ಅದು ಮತ್ತೇ ಸೇಡು ತೀರಿಸಿಕೊಳ್ಳಲು ಬಂದಿತ್ತು. ನಾನು ಪಕ್ಕದಲ್ಲಿಯೇ ಇದ್ದ ಪುಸ್ತಕ ತೆಗೆದು ಅದರಲ್ಲಿ ಆ ಕಡಜಕ್ಕೆ ಬಾರಿಸಲು ಪ್ರಯತ್ನಿಸಿದೆ. ಅದು ತಪ್ಪಿಸಿಕೊಂಡಿತು. ನನ್ನ ಮತ್ತು ಕಡಜದ ಶಬ್ದಕ್ಕೆ ಮಗಳು ಎಚ್ಚರವಾದಳು.


ಆ ಕಡಜವನ್ನ ನೋಡಿ ಭಯಗೊಂಡ ಅವಳು. "ಪಪ್ಪಾ, ಅದು ಥ್ಯಾಕರೇ, ಅದು ಥ್ಯಾಕರೇ. ಅದರ ರುಂಡ ಚೆಂಡಾಡು " ಎಂದು ಕೂಗುತ್ತ ತನ್ನ ಪ್ಲಾಸ್ಟಿಕ್ ಕ್ರಿಕೆಟ್ ಬ್ಯಾಟನ್ನು ನನ್ನ ಕೈಗೆ ಕೊಟ್ಟಳು.


ಆ ಕ್ರಿಕೆಟ್ ಬ್ಯಾಟಿನಲ್ಲಿ ಕಡಜವನ್ನು ಹೊಡೆಯಲು ಪ್ರಯತ್ನಿಸಿದೆ. ಅದು ನಮ್ಮ ರೂಮಿನಲ್ಲೆಲ್ಲಾ ತಪ್ಪಿಸಿಕೊಂಡು ಹಾರುತ್ತಾ ಹೆಲಿಕಾಫ್ಟರ್ ರೀತಿ ಸುತ್ತುತಿತ್ತು. ಎಷ್ಟೋ ಹೊತ್ತಿನ ನಂತರ ಕೊನೆಗೂ ನಾನು ಬೀಸಿದ ಬ್ಯಾಟಿಗೆ ಸಿಕ್ಕಿ ಅದರ ರುಂಡ ಮುಂಡ ಬೇರ್ಪಡೆಯಾಗಿ, ಅದರ ರುಂಡ The Selfish Gene ಪುಸ್ತಕದ ಹಿಂಭಾಗದಲ್ಲಿದ್ದ ರಿಚರ್ಡ್ ಡಾಕಿನ್ಸ್ ಚಿತ್ರದ ಮೇಲೆ ಬಿತ್ತು. ಮುಂಡ ನೆಲದ ಮೇಲೆ ಬಿದ್ದು ಒದ್ದಾಡುತಿತ್ತು. ಮಗಳು "ಥ್ಯಾಕರೇ ಸತ್ತ. ಬ್ರಿಟಿಷ್ ವಂಶ ನಾಶವಾಯಿತು" ಎಂದು ನಾಟಕದ ಸಂಭಾಷಣೆಯನ್ನು ಕೂಗುತ್ತಿದ್ದಳು. ಪಾಪ ಮಗಳಿಗೆ ಗೊತ್ತಿಲ್ಲ" ರಿಚರ್ಡ್ ಡಾಕಿನ್ಸ್" ಕೂಡ ಬ್ರಿಟಿಷ್ ಲೇಖಕ ಎಂದು. "ಪಾಪ ಆ ಕಡಜವನ್ನು ಹೊಡೆಯಬಾರದಿತ್ತು" ಎಂದು ನನ್ನ ಅಂತರಾತ್ಮ ತುಂಬಾ ಕೊರಗುತಿತ್ತು.


ನಾನು ಆ ಬಸವಾಪಟ್ಟಣದ ಶಾಸನದ ಬಗ್ಗೆ ತಿಳಿಸಲು ಪುಸ್ತಕದ ಅಂಗಡಿಯ ಮುದುಕನಿಗೆ ಕರೆ ಮಾಡಿದೆ. ಆ ಕಡೆ ಯಾರೋ ಬೇರೆಯ ವ್ಯಕ್ತಿಯ ಧ್ವನಿ ಕೇಳಿ ಬಂತು. "ನೀವು ಯಾರು ?" ಅಂತ ನಾನೇ ಕೇಳಿದೆ.


"ನಾನು ಈ ಅಂಗಡಿಯ ಮುದುಕನ ಮೊಮ್ಮಗ. ಒಂದು ವಾರದ ಹಿಂದೆ ಅವರು ಸತ್ತು ಹೋದರು. ಈಗ ಈ ಪುಸ್ತಕದ ಅಂಗಡಿಯನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ " ಎಂಬ ಉತ್ತರ ಬಂತು. ಅಷ್ಟರಲ್ಲಿ ಮಗಳು "ಪಪ್ಪಾ, ನಾನು ನೀನು ಮ್ಯಾಚಿಂಗ್" ಎಂದು ಹೇಳುತ್ತಿದ್ದಳು. ನನ್ನ ರೂಪವನ್ನು ಅವಳಲ್ಲಿ ಕಾಣುತ್ತ ಅವಳನ್ನೇ ನೋಡುತ್ತಾ ಹಾಗೆ ಕುಳಿತುಕೊಂಡೆ. 


(ಲೇಖಕರು ನಾಲ್ಕು ವರ್ಷದ ಹಿಂದೆ ಬರೆದಿರುವ ಬರಹವಿದು)