ಕೈಬಿಟ್ಟ ಕೋವಿ

ಪತ್ರಿಕೆ ಸಂಪಾದಕನಾಗಿ ಲಂಕೇಶ್ ರ ನಿಲುವು

ಕೈಬಿಟ್ಟ ಕೋವಿ

ಗಾಂಧೀಜಿ, ಆಹಿಂಸೆಯ ಬಗ್ಗೆ ನಡೆದು ಕೊಂಡದ್ದಕ್ಕಿಂತ ಆತ ಪತ್ರಕರ್ತನ ಕರ್ತವ್ಯದ ಬಗ್ಗೆ ಹೇಳಿದ್ದನ್ನು ಇಲ್ಲಿ ಕಾಣಿಸಬಹುದು. ಅವರು ಹೇಳಿದರು, ನೇರವಾಗಿ, ಸ್ಪಷ್ಟವಾಗಿ, ಗಟ್ಟಿ ಮಾತಿನಲ್ಲಿ, ಧೈರ್ಯವಾಗಿ, ಪ್ರಾಮಾಣಿಕವಾಗಿ ಬರಿ, ಸತ್ಯವನ್ನು ತಿರುಚುವುದು, ಸುತ್ತಿ ಬಳಸಿ ಮಾತಾಡುವುದು ತಪ್ಪು, ಜನಸಾಮಾನ್ಯರ ಪರವಾಗಿ ಬರಿ: ವಸ್ತು ನಿಷ್ಟೆಯ ಹೆಸರಲ್ಲಿ ಜನರಿಗೆ ದ್ರೋಹ ಬಗೆದರೆ ನಿನ್ನ ನಾಶ ಖಂಡಿತ.

ಕೈಬಿಟ್ಟ ಕೋವಿ

 

  ಬಹಳ ಜನ ಪತ್ರಿಕೆಯವರು ಏಕೆ ನೇರವಾಗಿ, ಕಂಡದ್ದನ್ನು ಕಂಡಂತೆ, ಕರಾರು ವಕ್ಕಾದ ಮಾತುಗಳಲ್ಲಿ ಬರೆಯುವುದಿಲ್ಲ ಎಂಬುದಕ್ಕೆ ಕೇವಲ ಅಪ್ರಾಮಾಣಿಕತೆ ಮಾತ್ರ ಕಾರಣವಲ್ಲ. ಅಪ್ರಾಮಾಣಿಕತೆಯನ್ನು ಪತ್ರಕರ್ತನ ಮೇಲೆ ಹೇರುವ ಅನೇಕ ಪ್ರಸಂಗಗಳಿರುತ್ತವೆ.

 

   ಒಂದು ಕಡೆ ಜಾಹೀರಾತುಗಳ ಕಾಟ ಇರುತ್ತದೆ. ನಿಮಗೆ ಗೊತ್ತಿರಬಹುದು. ಪತ್ರಿಕೆಯ ಒಟ್ಟು ಜಾಹೀರಾತುಗಳಲ್ಲಿ ಹತ್ತೋ ಹದಿನೈದು ಭಾಗ ಮಾತ್ರ ಸರ್ಕಾರದ ಜಾಹೀರಾತುಗಳಾದರೂ, ಈ ಸರ್ಕಾರಕ್ಕೆ ನೇರ ಸಂಬಂಧವುಳ್ಳ ಖಾಸಗಿ ಜಾಹೀರಾತುದಾರರು ಬಹಳ ಜನ ಇರುತ್ತಾರೆ: ಇವರೆಲ್ಲರನ್ನೂ ಒಂದಾಗಿ ಹೆಣೆದ ಜಾಹೀರಾತು ಏಜನ್ಸಿಗಳಿರುತ್ತವೆ. ಇವರು ಪತ್ರಕರ್ತನ ಕಟು ಮಾತು ಸಹಿಸುವುದಿಲ್ಲ.

ಇದು ಒಂದು ಮುಖ ಮಾತ್ರ.

ನಮ್ಮ ಬಂಡವಾಳಶಾಹಿಗಳು, ಕಪ್ಪುಹಣದವರು, ರಾಜಕೀಯ ಪುಢಾರಿಗಳು, ಜನಕ್ಕೆ ಹಲವಾರು ರೀತಿಯಲ್ಲಿ ಉಪಟಳ ನೀಡುವ ಅವಾಂತರಕಾರಿಗಳು, ನೆಲಗಳ್ಳರು, ಸಲೀಸು ಆದಾಯದಿಂದ ಕೊಬ್ಬಿದ ಪುಂಡು ಪೋಲಿಗಳು ಸಾಮಾನ್ಯವಾಗಿ ತಮ್ಮದೇ ಆದ ಸಣ್ಣ ಖಾಸಗಿ ಸೈನ್ಯ ಇಟ್ಟುಕೊಂಡಿರುತ್ತಾರೆ. ನೀವೆಲ್ಲರೂ ಬಲ್ಲ ಆರೆಸೆಸ್ ಒಂದು ಬಗೆಯ ಸೈನ್ಯವಾದರೆ, ಅನೇಕ ಧರ್ಮಾಧಿಕಾರಿಗಳು, ಬಾಬಾಗಳು, ಯೋಗಿ ಗಳು, ಹಲವಾರು ಸಿನಿಮಾ ನಟರು, ನಿರ್ಮಾಪಕರುಗಳು ತಮ್ಮ ರಕ್ಷಣೆಗಾಗಿ ಈ ಖಾಸಗಿ ಸೈನ್ಯ ಬಳಸುತ್ತಾರೆ. ಇವೆಲ್ಲ ಅನೇಕ ಹೆಸರುಗಳಿಂದ ಕರೆಯಲ್ಪಡುತ್ತವೆ. ಒಂದು ಕಡೆ ಇವರು ಸ್ವಯಂ ಸೇವಕರು, ಸಹಾಯಕರು, ಸೆಕ್ಯೂರಿಟಿ ಸಿಬ್ಬಂದಿಯಾದರೆ, ಇನ್ನೊಂದು ಕಡೆ ಇವರು ತಮ್ಮ ಹೌದಪ್ಪಗಳಾದವರ ಕಾರ್ಮಿಕ ಸಂಘ, ಮತ್ತೊಂದು ಕಡೆ ಅಭಿಮಾನಿಗಳ ಸಂಘ ಆಗಿರುತ್ತವೆ. ವಾಟಾಳರ ಅಭಿಮಾನಿಗಳ ಸಂಘ, ಅರಸುವಿನ ಇಂದಿರಾ ಬ್ರಿಗೇಡ್, ಸಂಜಯಗಾಂಧಿಯ ಮಿತ್ರರುಗಳು, ಖಾನ್ ಸಾಹೇಬರ ಕಾರ್ಮಿಕ ಸಂಘಗಳೆಲ್ಲ ಹುಟ್ಟಿಕೊಳ್ಳುವುದು ಹೀಗೆ. ಅರಸುವಿನಂಥ ಮುಖ್ಯಮಂತ್ರಿಯ ಅಭಯಹಸ್ತವುಳ್ಳ ಸಂಘಗಳಂತೂ ಅರಸುವಿಗೆ ಚಳ್ಳೆಹಣ್ಣು ತಿನ್ನಿಸುವ ಮಟ್ಟಕ್ಕೆ ಹೋದದ್ದನ್ನು ಜಯರಾಜ್‌ ಪ್ರಕರಣದಿಂದಲೇ ನೋಡಬಹುದು; ಬಂಗಾರಪ್ಪನ ಪತನಕ್ಕೆ ಈ “ಮಿತ್ರರು” ನೀಡಿದ ಕಾಣಿಕೆ ಅಷ್ಟಿಷ್ಟಲ್ಲ.

ತನ್ನ ದೈಹಿಕ, ಮಾನಸಿಕ ಹಿತ ಬಯಸುವ ಪತ್ರಕರ್ತ ಸಾಮಾನ್ಯವಾಗಿ ಇಂಥ "ಖಾಸಗಿ ಸೈನ್ಯ”ಗಳ ಕೆಂಗಣ್ಣು ಎದುರಿಸಲು ಇಷ್ಟಪಡುವುದಿಲ್ಲ. ಪತ್ರಕರ್ತ ತನ್ನ "ದಿಟ್ಟ" ವರದಿ ಸಿದ್ಧಪಡಿಸಿದರೂ ಅದು ಸಂಪಾದಕನ ಒಪ್ಪಿಗೆ ಪಡೆದು ಪ್ರಕಟವಾಗುವ ಸಂಭವ ಕಡಿಮೆ. ಪ್ರಕಟವಾದ ಮೇಲೆ ಪತ್ರಿಕೆಯ ಮಾಲೀಕ ಅದನ್ನು ಇಷ್ಟಪಡುವ ಸಾಧ್ಯತೆ ಇನ್ನೂ ಕಡಿಮೆ, ಇವರೆಲ್ಲರ ಕಣ್ಣು ತಪ್ಪಿಸಿ ಪ್ರಕಟವಾದ ಮೇಲೆ ರೌಡಿಗಳ ಕಾಟದಿಂದ ಪಾರಾಗುವುದು ಬಡ ಪತ್ರಕರ್ತನಿಗೆ ಕಷ್ಟ,

ಇದಕ್ಕೆ ಉತ್ತರವೇನು ? ಪತ್ರಕರ್ತ ಏನು ಮಾಡಬೇಕು.? ನಿಮಗೆ ಅಚ್ಚರಿಯಾಗಬಹುದು, ಹೋದವರ್ಷದ ಆರಂಭದಲ್ಲಿ ತಮ್ಮ ಮತ್ತು ಗುಂಡೂರಾವ್ ಭೇಟಿಯನ್ನು ವರ್ಣಿಸಿ ಸುದ್ದಿ ಮಾಡಿದ ಅರುಣ್ ಶೌರಿ ಬೆಂಗಳೂರಲ್ಲಿ ಸಿಕ್ಕಾಗ ಕೊಂಚ ಭಯಗೊಂಡಿದ್ದರು. ಗುಂಡೂರಾವ್ ಕಡೆಯ ಗೂಂಡಾಗಳು ನನ್ನ ಮೇಲೆ ಏರಿಬರಬಹುದು ಅಂತ ಕೆಲವರು ಹೇಳ್ತಿದ್ದಾರೆ" ಎಂದು ಮುಗುಳ್ನಗುತ್ತ ಶೌರಿಯವರು ಹೇಳಿದರೂ ಸಹಜವಾಗಿಯೇ ಅವರ ಧ್ವನಿಯಲ್ಲಿ ಆತಂಕವಿತ್ತು, ನಾವು "ಅದೆಲ್ಲ ಯೋಚಿಸಬೇಡಿ, ನಿಮ್ಮ ತಂಟೆಗೆ ಬರೋಲ್ಲ" ಎಂದೆವು.

 

ನನ್ನ ಅನುಭವ ಕೂಡ ವಿಚಿತ್ರವಾಗಿದೆ. ಈ ಪತ್ರಿಕೆ ಹೊರಡುವುದಕ್ಕಿಂತ ಮುಂಚೆಯೇ ಜನಪ್ರಿಯವಲ್ಲದ, ಆದರೆ ನನಗೆ ಸತ್ಯವೆನಿಸಿದ ನಿಲುವು ತೆಗೆದುಕೊಂಡು ಗೂಂಡಾಗಳ ಸಿಟ್ಟಿಗೊಳಗಾದವನು ನಾನು. ಬಸವಲಿಂಗಪ್ಪನವರ ಬೂಸಾ ಪ್ರಕರಣದಲ್ಲಿ “ಬಸವಲಿ೦ಗಪ್ಪನಾಗಲಿ ಯಾವನೇ ಆಗಲಿ ತನಗನ್ನಿಸಿದ್ದನ್ನು ಹೇಳುವ ಹಕ್ಕಿದೆ. ಆತನ ಮಾತನ್ನು ಬೇಕಾದರೆ ವಾದದಿಂದ ಎದುರಿಸಿ, ಚಾಕುಚೂರಿಯಿಂದ ಅಲ್ಲ" ಎಂದು ಹೇಳಿ ಈ ವಿಚಿತ್ರ ಗೂಂಡಾ ಸೈನ್ಯದ ಪ್ರಹಾರಕ್ಕೊಳಗಾಗಬೇಕಾಯಿತು. ಇಂಥ ಹಲ ವಾರು ಪ್ರಸಂಗ ಬಲ್ಲ ನಾನು ಪತ್ರಿಕೆ ಹೊರತಂದಾಗ ಗೂಂಡಾಗಳ (ಮೂಲಭೂತವಾಗಿ ಪುಕ್ಕಲುಗಳ) ತರಲೆಗೆ ಹೆದರಬೇಕಾದ್ದಿರಲಿಲ್ಲ. ಸ್ಯಾಂಪಲ್‌ಗಾಗಿ ಈ ವಾಟಾಳ್‌ರ ಗುಂಪನ್ನು ಎತ್ತಿಕೊಂಡೆವು; ಆತ ಮಾಡುವ ಕೆಲಸಗಳು ಎಲ್ಲ ಪತ್ರಿಕೆಗಳವರಿಗೂ ಗೊತ್ತಿದ್ದರೂ, ಆತನ ಒಂದೊಂದು ಮಾತೂ, ಜಾಹೀರಾತೂ ಸುಳ್ಳಿನಮಯವಾಗಿದ್ದರೂ ಯಾರೂ ಅದನ್ನು ಹೇಳಿರಲಿಲ್ಲ. ಇಲ್ಲಿ ವಿವರ ಅನಗತ್ಯ. ನನ್ನ ಮೇಲೆ ಆತನ ಪುಂಡರ ಹಲ್ಲೆಯಾದ ಮೇಲೆ ಶಾಸಕಿಯೊಬ್ಬರು ಕೇಳಿದರು, “ನೀವು ತಿರುಗಿ ಅವರಿಗೆ ಹೊಡೆಯಲಿಲ್ಲವೆ . " “ಇಲ್ಲ” ಅಂದು ನಕ್ಕೆ.

"ಅದು ತಪ್ಪು. ಅವರಿಗೆ ತಿರುಗಿಸಿ ನಾಲ್ಕು ಕೊಟ್ಟಿದ್ದರೆ ಅಲ್ಲಿಂದ ಪರಾರಿ ಯಾಗ್ತಿದ್ರು. ನೀವು ಕೂಡಲೆ ಕರಾಟೆ, ಜೂಡೋ ಕಲೀಬೇಕು.”

ನಾನು ಅವರಿಗೆ ತಮಾಷೆ ಮಾಡಿ, “ಇದು ಕರಾಟೆ ತರಬೇತಿ ಕೇಂದ್ರವಾಗುತ್ತೆ, ಪತ್ರಿಕೆಯಾಗಿ ಉಳಿಯೋಲ್ಲ, ಅದೆಲ್ಲ ಮಾಡಬಾರದು” ಅಂದೆ.

ಇನ್ನೂ ಅಚ್ಚರಿ ಕಾದಿತ್ತು. ವಾಟಾಳ್ ಗುಂಪು ಟೀಕೆಗೆ ಒಳಗಾದೊಡನೆ ಆತನ ಶತ್ರುಗಳಾಗಿ ಬದಲಾಗಿದ್ದ ಅಷ್ಟೇ ಕೊಳಕರ ಗುಂಪಿನವರು ನನಗೆ ರಕ್ಷಣೆ ನೀಡಲು ಬಂದರು; ನನ್ನನ್ನು ಭಾಷಣಕ್ಕೆ ಕರೆದರು: ನಾನು ಅವರಿಗೆ ಬೈದು ಓಡಿಸಿದೆ. ಕೆಲವು ಸಂಘಸಂಸ್ಥೆಗಳವರು "ಈಗಲೇ ಹೋಗಿ ಆತನ ಮೂಗು ಮೂತಿ ಇಲ್ಲದಂತೆ ಮಾಡುತ್ತೇವೆ " ಅಂದರು. ಅವರಿಗೂ ತಣ್ಣೀರೆರಚಿ ಕಳಿಸಿದೆ.

ಇದಾದ ಮೇಲೆ ನಾವು ಹಲವಾರು ಕಪ್ಪು ಜೀವಿಗಳ ಖದೀಮತನ ವರ್ಣಿಸಿದೆವು. ಇವುಗಳಲ್ಲಿ ಒಬ್ಬ ಯೋಗಿಯ ಧಾಂಡಿಗರು ಫೋನ್ ಮೂಲಕ ಮತ್ತು ಖುದ್ದಾಗಿ ಬಂದು ಹಲ್ಲೆಯ ಮಾತಾಡತೊಡಗಿದರು. ಅವರನ್ನು ದಿವ್ಯ ನಿರ್ಲಕ್ಷದಿಂದ ಹೊರಗಟ್ಟಿದ ಮೇಲೆ, ಮತ್ತೆ ಕೆಲವು ಪುಂಡರ ಗುಂಪಿನ ಕಾಟ ಶುರುವಾಯಿತು,ನಮ್ಮ ಆಫೀಸಿನಲ್ಲಿ  ಆತಂಕ ತುಂಬಿತು.

ಸುಮಾರು ಎರಡು ವರ್ಷದಿಂದ ದೂರದಿಂದ ಮತ್ತು ಹತ್ತಿರದಿಂದ ನನ್ನನ್ನು ನೋಡುತ್ತಿದ್ದ ಮಿತ್ರರು ಕೆಲವರು, 'ನೀನು ಒಬ್ಬನೇ ಓಡಾಡ್ತೀಯ, ಆ ಊರುಗಳಿಗೆ ಕಾರಿನಲ್ಲಿ ಒಬ್ಬನೇ ಹೋಗ್ತೀಯ. ನಿನಗೆ ಮಿತ್ರರಿರುವಷ್ಟೇ ಜನ ಶತ್ರುಗಳಿದ್ದಾರೆ. ನಿನ್ನ ರಕ್ಷಣೆ ಬಗ್ಗೆ ಗಮನ ಕೊಡು; ಕೆಲವರು ಅಂಗರಕ್ಷಕರನ್ನಾದರೂ ಜೊತೆಗೆ ಇಟ್ಟುಕೊ' ಎಂದು ಹೇಳತೊಡಗಿದ್ದರು.

ನಾನು ಮಹಾ ಧೈರ್ಯಶಾಲಿಯೆಂದಾಗಲಿ, ಅತಿರಥ ಮಹಾರಥನೆಂದಾಗಲಿ ನನ್ನ ಬಗ್ಗೆ ಭ್ರಮಿಸಿಲ್ಲವಾದರೂ ಇದೆಲ್ಲ ತೀರಾ ವಿಚಿತ್ರ ಹಿತವಚನವಾಗಿ ನನಗೆ  ಕಂಡಿತ್ತು. ಇದಕ್ಕೆ ಮುಖ್ಯ ಕಾರಣ, ನಾನು ಎಲ್ಲರ ಜೊತೆಗೆ ಓಡಾಡುವ ಸ್ವಾತಂತ್ರ್ಯದಷ್ಟೇ ಒಬ್ಬನೇ ಅಡ್ಡಾಡುವ ಸ್ವಾತಂತ್ರ್ಯವನ್ನು ಕೂಡ ಇಷ್ಟಪಡುವವ ಅನಗತ್ಯವಾಗಿ ಯಾರನ್ನೂ ನೋಯಿಸಲು ಇಷ್ಟಪಡದ, ಅಗತ್ಯಬಿದ್ದರೆ ಕಿಡಿ ಕಾರಲು ಬಯಸುವ ನಾನು, ಎಲ್ಲ ಊರಲ್ಲಿ ಸ್ನೇಹಿತರು, ಓದುಗರನ್ನುಳ್ಳ, ನನ್ನ ಮಾತನ್ನು ನಂಬುವ ನನ್ನೊ೦ದಿಗಿನ ಅನುಭವಗಳನ್ನ ಹಂಚಿಕೊಳ್ಳಬಲ್ಲ ಜನರನ್ನುಳ್ಳ ನಾನೇ ಹೆದರಿಕೊಂಡು ಗುಂಪಗಟ್ಟಿಕೊಂಡು ಓಡಾಡಿದರೆ ಬಡವರಾದವರ, ಆಬಲೆಯಾದವರ, ಅಸಹಾಯಕರಾದ ಒಬ್ಬಂಟಿ ಜೀವಿಗಳ ಗತಿಯೇನು ? ನಾವು ನಿರ್ಮಿಸಲು ಕನಸು ಕಾಣುವ ಸಮಾಜದ ಎಲ್ಲರೂ ಪುಂಡರಿಗೆ ಹೆದರಿಕೊಂಡೇ ಬದುಕಬೇಕೆ ?

 

ಇಷ್ಟಾದರೂ ಹಲವೊಮ್ಮೆ ಅನ್ನಿಸಿತ್ತು. ತೀರಾ ಬೇಜವಾಬ್ದಾರಿತನದಿಂದ ದುಷ್ಟರ ಹೊಡೆತಕ್ಕೆ ಸಿಕ್ಕು ನಾಶವಾಗುವ ಬದಲು ಒಂದು ಬಗೆಯ ರಕ್ಷಣೆ ಒಳ್ಳೆ ದಿರಬಹುದು ಅನ್ನಿಸಿತ್ತು, ಆ ಸಮಯಕ್ಕೆ ಎಂದೋ ಓದಿ ಮರೆತಿದ್ದ ನವರತ್ನ ರಾಮ ರಾಯರ 'ಕೆಲವು ನೆನಪುಗಳು' ಎಂದು ಪುಸ್ತಕ ಓದಿದೆ. ಆತ ತಹಶೀಲ್ದಾರನಾಗಿದ್ದಾಗ ಐದು ಗುಂಡುಗಳ ರಿವಾಲ್ವರ್ ಇಟ್ಟುಕೊಂಡಿದ್ದರು. ಅವರನ್ನು ನಾಲ್ಕೈದು ಸಲ ಅಪಮಾನ ಮತ್ತು ಪ್ರಾಣಾಪಾಯದಿಂದ ಾ ಗನ್ನು ಕಾಪಾಡಿತ್ತು. ಒಮ್ಮೆ ಪೋಕರಿಗಳ ಒಂದು ಗುಂಪಿಗೆ ಅವರು ಗನ್ನು ತೋರಿಸಿ, “ನಾನು ಸಾಯುವುದಕ್ಕೆ ಮುಂಚೆ ಐದು ಜನರನ್ನು ಬೀಳಿಸಿ ಕಣ್ಣುಮುಚ್ಚುತ್ತೇನೆ, ಎಚ್ಚರಿಕೆ” ಎಂದು ಹೇಳಿ ಗೂಂಡಾ ಗುಂಪನ್ನು ನಾಶಮಾಡಿದ್ದರು.ಇದನ್ನು ಓದುತ್ತಿದಂತೆ ನಾನು ಕೂಡ ಯಾಕೆ ಒಂದು ರಿವಾಲ್ವರ್ ಇಟ್ಟು ಕೊಳ್ಳಬಾರದು' ಎಂಬ ಯೋಚನೆ ಬಂತು. ಇದಕ್ಕೆ ಇನ್ನೊಂದು ಕಾರಣವಿತ್ತು. ನಾನು ಕಾಲೇಜಿನಲ್ಲಿದ್ದಾಗ ಒಮ್ಮೆ "ಆಕ್ಸಿಲರಿ ಆರ್ಮಿ'ಯ ತರಬೇತಿ ' ಕೇಂದ್ರದಲ್ಲಿ  ಐನೂರು ಜನ ವಿದ್ಯಾರ್ಥಿಗಳಿಂದ ಆಯ್ಕೆ ಅತ್ಯುತ್ತಮ ಗುರಿಕಾರರಾದ ಹನ್ನೆರಡು ಜನರಲ್ಲೊಬ್ಬನಾಗಿದ್ದೆ. ಇವತ್ತಿಗೂ ರೈಫಲ್‌ನ್ನು ಅನುಭವಿಗಳಷ್ಟೇ ಕರಾರುವಕ್ಕಾಗಿ ಬಳಸಬಲ್ಲೆ,

ಇದೆಲ್ಲ ಗೊಂದಲ ಮತ್ತು ಗೆಳೆಯರ ಒತ್ತಾಯಕ್ಕೆ ಈಚೆಗೆ ರಿವಾಲ್ವರ್ ಲೈಸೆನ್ಸ್‌ ಗೆ ಅರ್ಜಿ ಹಾಕಿದೆ. ಲೈಸೆನ್ಸ್‌ ಕೊಡುವುದು ಕಷ್ಟವಾದರೂ, ನಾನು ಯಾರನ್ನೂ ನೋಡಿ ಪ್ರಭಾವ ಬೀರದಿದ್ದರೂ ಲೈಸೆನ್ಸ್‌ ಸಿಕ್ಕೇಬಿಟ್ಟಿತು.

 

ರಿವಾಲ್ವರ್ ಖರೀದಿ ಮಾಡುವ ಹಂತದಲ್ಲಿ ನನಗೆ ನಾಚಿಕೆಯಾಗತೊಡಗಿತು. ಯೋಚಿಸಿದೆ. ನನ್ನಲ್ಲಿ ರಿವಾಲ್ವರ್ ಇದೆಯೆಂದು ಎಲ್ಲರಲ್ಲಿ ಭಯ ಹುಟ್ಟಿಸಿ ಅಹಂಕಾರದಿಂದ ಮೆರೆಯಬಹುದೇ ಹೊರತು ಅದನ್ನು ಯಾಕೆ, ಯಾವ ಸಂದರ್ಭದಲ್ಲಿ ಯಾರ ಮೇಲೆ ಬಳಸಬಲ್ಲೆ ? ಹುಸಿ ಗುಂಡು ಹಾರಿಸಿಯ ? ಅದನ್ನು ತೋರಿಸಿಯೇ ? ಯಾವನನ್ನಾದರೂ ಕೊಲ್ಲುವ ಮೂಲಕವೆ ?

ರಕ್ತವನ್ನು ನೋಡಲು ಹಿಂಜರಿವ ನನ್ನ ಕಣ್ಣು ಮತ್ತು ರಕ್ತಪಾತವನ್ನು ಎಂದೂ ಇಷ್ಟಪಡದ ಮೂಲಭೂತವಾಗಿ ಅಹಿಂಸಾ ಜೀವಿಗಳಾದ ನಮ್ಮ ಜನರನ್ನು ನೆನೆದೆ. ಈ ಗನ್ನು ನನಗೆ ಮತ್ತು ನನ್ನ ಜನಕ್ಕೆ ಒಂದು ಬಗೆಯ ಮೋಸದಂತೆ ನನಗೆ ಕಾಣಿಸತೊಡಗಿತು.

ಅಲ್ಲದೆ ಗನ್ನು, ಚಾಕು, ಚೂರಿಗಳಿಂದ ನನ್ನನ್ನು ನಾನು ರಕ್ಷಿಸಿಕೊಳ್ಳ ಬಲ್ಲನಾದರೆ ಹಾಗೆ ರಕ್ಷಿಸಿಕೊಂಡು ಬದುಕಿಯ ಉಪಯೋಗವಿಲ್ಲ.

ನನಗೆ ಗೊತ್ತಿದೆ. ಪೋಲೀಸರು ಸದಾ ರಕ್ಷಿಸಲು ಆಗುವುದಿಲ್ಲ. ಪತ್ರಿಕೆ ಓದುವ ಎಲ್ಲರೂ ಸದಾ ನನ್ನನ್ನು ಪೊರೆಯುವುದು ಕಷ್ಟ, ಅವರ ಕಷ್ಟ ನೋವು ಆತಂಕಗಳೇ ಸಾಕಷ್ಟಿರುತ್ತವೆ. ಹಾಗೆಯೇ ಗನ್ನು, ಚೂರಿಗಳೂ ನನ್ನನ್ನು ರಕ್ಷಿಸುವುದಿಲ್ಲ: ಅಕಸ್ಮಾತ್ ನಾನು ಗೂಂಡಾಗಳ ಗುಂಪನ್ನೇ ಇಟ್ಟುಕೊಂಡರೂ, ಅಂಥ ಎಲ್ಲ ಗುಂಪುಗಳಂತೆಯೇ ಅವರು ನಾಶಮಾಡುವುದು ತಾವು ರಕ್ಷಿಸುವ ವ್ಯಕ್ತಿಯನ್ನೇ

"ಗನ್ನು ನನಗೆ ಬೇಡ" ಎಂದು ಹೇಳಿದೆ.

 

ಇಲ್ಲಿ ಗಾಂಧೀಜಿಯ ಹೆಸರು ತರುವುದು ಸುಲಭ. ಆದರೆ ಅದು ತಪ್ಪು. ನಾವೆಲ್ಲ ಆತನ ನಾಡಲ್ಲಿ ಇರುವವರಷ್ಟೇ ಹೊರತು ಆತನ ಛಲ ಮತ್ತು ಸ್ಪಷ್ಟ ನಿಲುವಿಗೆ ಹತ್ತಿರ ಕೂಡ ಹೋಗಲಾರದವರು. ಆದರೆ ಗಾಂಧೀಜಿ, ಆಹಿಂಸೆಯ ಬಗ್ಗೆ ನಡೆದು ಕೊಂಡದ್ದಕ್ಕಿಂತ ಆತ ಪತ್ರಕರ್ತನ ಕರ್ತವ್ಯದ ಬಗ್ಗೆ ಹೇಳಿದ್ದನ್ನು ಇಲ್ಲಿ ಕಾಣಿಸಬಹುದು. ಅವರು ಹೇಳಿದರು, ನೇರವಾಗಿ, ಸ್ಪಷ್ಟವಾಗಿ, ಗಟ್ಟಿ ಮಾತಿನಲ್ಲಿ, ಧೈರ್ಯವಾಗಿ, ಪ್ರಾಮಾಣಿಕವಾಗಿ ಬರಿ, ಸತ್ಯವನ್ನು ತಿರುಚುವುದು, ಸುತ್ತಿ ಬಳಸಿ ಮಾತಾಡು ಇದು ತಪ್ಪು, ಜನಸಾಮಾನ್ಯರ ಪರವಾಗಿ ಬರಿ: ವಸ್ತು ನಿಷ್ಟೆಯ ಹೆಸರಲ್ಲಿ ಜನರಿಗೆ ದ್ರೋಹ ಬಗೆದರೆ ನಿನ್ನ ನಾಶ ಖಂಡಿತ.

ಇದು ನನ್ನ ರಕ್ಷಣೆಯಾಗುವುದು ನನಗೆ ಇಷ್ಟ.

ಗನ್ ಅಲ್ಲ.

(ಡಿಸೆಂಬರ್ 18, 1983)

ಕೃಪೆ: ಪತ್ರಿಕೆ ಪ್ರಕಾಶನ

ಲಂಕೇಶ್ ಕ್ಯಾರಿಕೇಚರ್ ಕೃಪೆ: ಸಂತೋಷ್,

(ಸಂಪಾದಕನ ಟಿಪ್ಪಣಿ: ಲಂಕೇಶ್ ತಮ್ಮ ಲಂಕೇಶ್ ಪತ್ರಿಕೆಯಲ್ಲಿ 40 ವರ್ಷಗಳ ಹಿಂದೆ ಬರೆದಿದ್ದ ಸಂಪಾದಕೀಯ ಕಂ ಅಂಕಣ ಬರಹವಿದು, ನಾಲ್ಕು ದಶಕಗಳ ನಂತರವೂ ಅವರ ಚಿಂತನೆ ಎಷ್ಟರ ಮಟ್ಟಿಗೆ ತಾಜಾ ಆಗಿದೆ ಎಂದರೆ ಇವತ್ತಿಗೂ ನಮ್ಮ ಮನುಷ್ಯ ಪರಿಸರದಲ್ಲಿ ಹೇಳಿಕೊಳ್ಳುವಂತ ಯಾವ ಬದಲಾವಣೆಯೂ ಆಗಿಲ್ಲ ಅಂತ ಅನಿಸಿಬಿಡುತ್ತದೆ. )