ಸೋಲಾರ್ ಪಾರ್ಕಿನಿಂದಾಗಿ ಪಾವಗಡ ತಾ.ನಲ್ಲಿ ತಾಪ ಹೆಚ್ಚಳ: ಅಧ್ಯಯನಕ್ಕೆ ಸಚಿವರ ಸೂಚನೆ
solar park
ಸೋಲಾರ್ ಪಾರ್ಕಿನಿಂದಾಗಿ ಪಾವಗಡ ತಾ.ನಲ್ಲಿ ತಾಪ ಹೆಚ್ಚಳ: ಅಧ್ಯಯನಕ್ಕೆ ಸಚಿವರ ಸೂಚನೆ
ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಸ್ಥಾಪಿಸಿರುವ ಭಾರತದ ಅತಿ ದೊಡ್ಡ ಸೋಲಾರ್ ಪಾರ್ಕ್ ನಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ತಾಪಮಾನ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಕುರಿತು ಅಧ್ಯಯನ ನಡೆಸುವಂತೆ ರಾಜ್ಯ ಇಂಧನ ಸಚಿವ ವಿ. ಸುನಿಲ್ ಕುಮಾರ್ ಕ್ರೆಡೆಲ್‍ಗೆ ಸೂಚನೆ ನೀಡಿದ್ದಾರೆ.
ಸೋಲಾರ್ ವಿದ್ಯುತ್ ಉತ್ಪಾದನೆ ಹೆಚ್ಚಳದ ಪ್ರಸ್ತಾವನೆ ಜೊತೆ ಜೊತೆಗೇ ಸೋಲಾರ್ ಪಾರ್ಕ್ ಗಳ ಪರಿಸರದಲ್ಲಿ ಜೀವಿಸುತ್ತಿರುವ ಮಂದಿಯ ಆತಂಕಗಳನ್ನು ನಿವಾರಿಸಲು ಕ್ರಮ ಕೈಗೊಳ್ಳುವುದರ ಭರವಸೆ ನೀಡಿದ್ದಾರೆ.
ಪಾವಗಡದ ತಾಲೂಕಿನ ಹಲವು ಗ್ರಾಮಗಳಲ್ಲಿ ತಾಪಮಾನ ಹೆಚ್ಚಳವಾಗಿದೆ. ಇದಕ್ಕೆ ಸೋಲಾರ್ ಪಾರ್ಕ್ ಕಾರಣವಿರಬಹುದು ಎಂಬುದು ತಜ್ಞರ ಅಭಿಪ್ರಾಯ. ಈ ಬಗ್ಗೆ ಸರ್ಕಾರ ಗಮನ ಹರಿಸಿದೆಯಾ? ಹಾಗೂ ಈ ಸಂಬಂಧ ಏನು ಮಾಡಲಾಗುತ್ತಿದೆ? ಈ ಸೋಲಾರ್ ಪಾರ್ಕ್ ಗಳ ಪರಿಸರದಲ್ಲಿ ತಾಪಮಾನ ಹೆಚ್ಚುತಿರುವುದಾಗಿ ವಿಷಯ ತಜ್ಞರನ್ನು ಉಲ್ಲೇಖಿಸಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಗಳನ್ನು ಗಮನಿಸಿರುವ ಸಚಿವರು ತಾಪಮಾನ ಹೆಚ್ಚಳಕ್ಕೆ ಕಾರಣವಾದ ಅಂಶಗಳನ್ನು ಅಧ್ಯಯನ ಮಾಡಿ ವರದಿ ನೀಡುವಂತೆ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತಕ್ಕೆ ಸೂಚನೆ ನೀಡಿದ್ದಾರೆ.
ತಾಪಮಾನ ಹೆಚ್ಚಳಕ್ಕೆ ಸೋಲಾರ್ ಪಾರ್ಕ್ ಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಮರಗಿಡಗಳು ಇಲ್ಲದೇ ಇರುವುದು ಕಾರಣ ಎನ್ನಲಾಗುತ್ತಿದೆ. ಸರ್ಕಾರ ಸೋಲಾರ್ ಪವರ್ ಯೋಜನೆಯನ್ನು ಇನ್ನೂ ವಿಸ್ತರಿಸುವುದಾಗಿ ಹೇಳುತ್ತಿದ್ದು, ಈ ಸಮಸ್ಯೆಗಳನ್ನು ಹೇಗೆ ನಿಭಾಯಿಸಲಿದೆ?
ಯೋಜನೆಯ ಪ್ರಕಾರ ಸೋಲಾರ್ ಪ್ಯಾನಲ್ ಗಳಿರುವ ಪ್ರದೇಶಗಳಲ್ಲಿ ಕನಿಷ್ಟ ಶೇ.30 ರಷ್ಟು ಪ್ರದೇಶಗಳಲ್ಲಿ ಮರಗಳನ್ನು ಬೆಳೆಸಬೇಕಿದೆ, ಆದರೆ ಪಾವಗಡ ತಾಲೂಕಿನಲ್ಲಿ ಈ ಸೂಚನೆ ಅನುಷ್ಟಾನಕ್ಕೆ ಬಂದಿಲ್ಲ. ಪಾವಗಡ ತಾಲೂಕಿನಲ್ಲಿ ಸಾಕಷ್ಟು ಮಳೆಯಾಗುವುದಿಲ್ಲ ಎನ್ನುವ ಸಬೂಬನ್ನು ಸಚಿವರಿಗೆ ಹೇಳಿ ಇಂಜಿನಿಯರ್ ಗಳು ಕೈ ತೊಳೆದುಕೊಂಡಿದ್ದಾರೆ.
ಈಗ ಪರ್ಯಾಯ ಮಾರ್ಗದ ಮೂಲಕ ಮರಗಳನ್ನು ಬೆಳೆಸಲು ಇರುವ ಮಾರ್ಗಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಸಚಿವರು ಆ ಪತ್ರಿಕೆಗೆ ಸ್ಪಷ್ಟೀಕರಣ ನೀಡಿದ್ದಾರೆ.
ಶೌಚಾಲಯ ನಿರ್ಮಾಣಕ್ಕೆಂದೇ ರೂ.68 ಕೋಟಿ ಸಿಎಸ್‍ಆರ್ ನಿಧಿ
ಪಾವಗಡದಲ್ಲಿ ಹಲವು ಗ್ರಾಮಗಳಲ್ಲಿ ಶೌಚಾಲಯದಂಥ ಮೂಲಸೌಕರ್ಯ ಒದಗಿಸಿಲ್ಲವೇಕೆ ಎಂಬ ವರದಿಗಾರರ ಪ್ರಶ‍್ನೆಗೆ ಪ್ರತಿಕ್ರಿಯೆ ನೀಡಿರುವ ಸಚಿವರು, ಸೋಲಾರ್ ಪಾರ್ಕ್ ಕಂಪನಿಗಳು ಅವುಗಳ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಲಿಟಿ ಉಪಕ್ರಮದ ಅಡಿಯಲ್ಲಿ ನೀಡಿರುವ 68 ಕೋಟಿ ರೂ. ಅನುದಾನ ತುಮಕೂರು ಜಿಲ್ಲಾಧಿಕಾರಿಗಳ ಬಳಿ ಇದೆ. ಈ ಮೊತ್ತವನ್ನು ಪಾವಗಡದ ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣ ಮಾಡುವುದು ಸೇರಿದಂತೆ ಆದ್ಯತೆಯ ಆಧಾರದಲ್ಲಿ ಮೂಲಸೌಕರ್ಯ ಒದಗಿಸಲು ನಿರ್ದೇಶನ ನೀಡಲಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ವಿವರಗಳನ್ನು ಅಂತಿಮಗೊಳಿಸಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆಂದು ವರದಿಯಾಗಿದೆ.
ಯೋಜನೆ ಜಾರಿಗೊಳ್ಳುವಾಗ ಸ್ಥಳೀಯರಿಗೆ ಹಾಗೂ ಮಾಜಿ ನಕ್ಸಲರಿಗೆ ಉದ್ಯೋಗ ನೀಡುವ ಭರವಸೆ ನೀಡಿತ್ತು. ಅದು ಇನ್ನೂ ಈಡೇರಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸಚಿವರು,
ಸೋಲಾರ್ ವಿದ್ಯುತ್ ತಯಾರಿಕಾ ಕಂಪನಿಗಳು ಸ್ಥಳೀಯರನ್ನು ಹಾಗೂ ಮಾಜಿ ನಕ್ಸಲರನ್ನು ಅವರ ಅರ್ಹತೆಗಳ ಆಧಾರದಲ್ಲಿ ನೌಕರಿಗೆ ನೇಮಿಸಿಕೊಳ್ಳುತ್ತವೆ. ನಾವು ಉದ್ಯೋಗ ನೀಡುವಂತೆ ಕಂಪನಿಗಳಿಗೆ ನಿರ್ದೇಶನ ನೀಡಲು, ಒತ್ತಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ ಸಚಿವರು.