ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು- ಒಂದೇ ಕುಟುಂಬದ ಮೂವರ ದುರ್ಮರಣ
ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕುಟುಂಬ
ಶಿರಾ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕೆರೆಗೆ ಉರುಳಿದ ಬಿದ್ದ ಪರಿಣಾಮ ಒಂದೇ ಕುಟುಂಬದ ಮೂರು ಮಂದಿ ಸಾವನ್ನಪ್ಪಿರುವ ಘಟನೆ ಸಿರಾ ತಾಲ್ಲೂಕಿನ ರಾಮಲಿಂಗಾಪುರದಲ್ಲಿ ಭಾನುವಾರ ಮುಂಜಾನೆ ನಡೆದಿದೆ.
ಮೃತರು ಸಿರಾ ತಾಲ್ಲೂಕು ಪಟ್ಟನಾಯಕನಹಳ್ಳಿ ಸಮೀಪದ ವೀರಾಪುರ ಗ್ರಾಮದವರಾಗಿದ್ದು, ದೊಡ್ಡಣ್ಣ (70), ಸಣ್ಣಮ್ಮ(62) ಹಾಗೂ ಇವರ ಪುತ್ರಿ ಯಮುನ(30) ಎಂದು ಗುರುತಿಸಲಾಗಿದೆ. ಇವರನ್ನು ಕಾರಿನಲ್ಲಿ ಧರ್ಮಸ್ಥಳಕ್ಕೆ ಕರೆದೊಯ್ಯುತ್ತಿದ್ದ ಅಳಿಯ ಹಾಗೂ ಸಿರಾದಲ್ಲಿರುವ ಭರಣಿ ಮೆಡಿಕಲ್ಸ್ ಮಾಲೀಕ್ ಪ್ರದೀಪ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮುಂಜಾನೆ ಧರ್ಮಸ್ಥಳಕ್ಕೆ ಹೊರಟಿದ್ದ ಕಾರಿನಲ್ಲಿದ್ದ ನತದೃಷ್ಟರು, ಮಾರ್ಗ ಮಧ್ಯದಲ್ಲಿ ಮಣ್ಣಮ್ಮ ದೇವಿ ದರ್ಶನ ಪಡೆಯಲು ತೀರ್ಮಾನಿಸಿದ್ದರು ಎನ್ನಲಾಗಿದೆ.
ದೇವಾಲಯದಿಂದ ರಾಮಲಿಂಗಾಪುರ ಮೂಲಕ ಬುಕ್ಕಾಪಟ್ಟಣ ಮಾರ್ಗವಾಗಿ ಸಾಗುತ್ತಿದ್ದ ಕಾರು, ಕೆರೆ ಏರಿಯ ಮೇಲೆ ಸಾಗುವಾಗ ಚಾಲಕ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದೆ. ಈ ಪರಿಣಾಮ ಕಾರಿನಲ್ಲಿದ್ದ ನಾಲ್ವರ ಪೈಕಿ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರೆ, ಪ್ರದೀಪ್ ಮಾತ್ರ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಸುದ್ದಿ ತಿಳಿಯುತ್ತಿದ್ದಂತೆ ರಾಮಲಿಂಗಾಪುರ ಹಾಗೂ ವೀರಾಪುರ ಗ್ರಾಮಸ್ಥರು, ಸಿರಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಕಾರದೊಂದಿಗೆ ಕೆರೆಯಲ್ಲಿ ಕಾರ್ಯಾಚರಣೆ ನಡೆಸಿ, ಕಾರಿನ ಸಹಿತ ಮೃತರ ಶರೀರಗಳನ್ನು ಹೊರತೆಗೆದಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಸಿರಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.