ದ್ರೌಪದಿ : ಪುರುಷ ಪ್ರಾಧಾನ್ಯತೆಯ ಪುರಾತನ ರೂಪಕ ?

ವಿಶ್ಲೇಷಣೆ

ದ್ರೌಪದಿ : ಪುರುಷ ಪ್ರಾಧಾನ್ಯತೆಯ ಪುರಾತನ ರೂಪಕ ?

ವಿಶ್ಲೇಷಣೆ

ಡಾ.ಕೆ.ಪಿ.ನಟರಾಜ್‌

 

ಮಹಾಭಾರತದ ಮಹಾ ಪಾತ್ರವಾದ ದ್ರೌಪದಿಯ    ಐವರು ಪತಿಗಳ ಬಗ್ಗೆ  ಚರ್ಚಿಸುವವರು  , ಆ ಕಾಲದ  ರೀತಿರಿವಾಜುಗಳಲ್ಲಿ  ಕುಲ ಪದ್ದತಿಗಳಲ್ಲಿ  ಇದರ  ಮೂಲ ಹುಡುಕುತ್ತಾ  , ಆಗೆಲ್ಲ  ಬಹು ಪತಿತ್ವ ಇತ್ತು , ಹೀಗಾಗಿ  ದ್ರೌಪದಿಯ ಪಂಚಪಾತಿವ್ರತ್ಯ  ಮತ್ತು ವಿವಾಹ ಪದ್ಧತಿ  ಎಲ್ಲವೂ ಸಮ್ಮತಾರ್ಹ ಎಂದು  ಲೋಕಾಭಿರಾಮ ದೋರಣೆಯಲ್ಲಿ ಸಮರ್ತಿಸುವುದು  ಮತ್ತು ಅದನ್ನು ಅತ್ಯಂತ ಸಹಜವೆಂಬಂತೆ ಸ್ವೀಕರಿಸುವುದು ಕಾಣುತ್ತದೆ .

ಆದರೆ   ಯಾಜ್ಙಸೇನಿ , ಅಗ್ನಿ‌ಕನ್ಯೆ  ಕೃಷ್ಣ ನಿಗೆ ಸರಿ ಸಮನಾದವಳು  , ಆತ್ಮ ಸಮ್ಮಾನದ ಅಭಿಮಾನ ನಿಧಿ  ಎಂದೆಲ್ಲ ಹೆಸರಾದ   ಅಸಾಮಾನ್ಯ ಮಹಿಳೆಯಾಗಿದ್ದ ದ್ರೌಪದಿಯ ಈ ಮದುವೆ  ಅಥವಾ ದಾಂಪತ್ಯ , ಅವಳ ಆಯ್ಕೆಯಾಗದೆ ಹೇರಿಕೆಯಾಗಿತ್ತಲ್ಲವೆ ? ಎಂಬ ಜಿಜ್ಙಾಸೆಯಿಲ್ಲದೆ   ದ್ರೌಪದಿಯ ವಿವಾಹವನ್ನು   ಸ್ವೀಕರಿಸಿದ    ನಮ್ಮ   ಸಮಾಜಗಳ ಕಾಲ ಕಾಲದ ವಿಮರ್ಶೆಗಳು  , ಸ್ತ್ರೀತ್ವದ ಮೇಲಿನ  ಲೈಂಗಿಕ ದಬ್ಬಾಳಿಕೆಯನ್ನು ಗುರುತಿಸದೇ ಹೋದವೆ? ಅನ್ನಿಸುತ್ತದೆ‌..

ಕೃಷ್ಣನೊಬ್ಬ ಮಾತ್ರ  ಸದಾ ಕಾಲವೂ ದ್ರೌಪದಿಯ ಮಾನ ಕಾಪಾಡಲು   ಕಟಿಬದ್ದನಾಗಿದ್ದುದು   ನಮಗೆ ಗೋಚರಿಸುತ್ತದೆ . ದ್ರೌಪದಿಯನ್ನು  ವ್ಯಕ್ತಿಯಾಗಿ , ಗೌರವಾನ್ವಿತ ಮಹಿಳೆಯಾಗಿ  ನೋಡಿದ್ದು  ಕೃಷ್ಣ ಒಬ್ಬನೇ ಇರಬೇಕೇನೋ   ಅನ್ನಿಸುತ್ತದೆ.

ಅರ್ಜುನ ' ನರ' ನಾಗಿ  (ತನ್ನ ದೌರ್ಬಲ್ಯಗಳ‌ ನಡುವೆಯೂ ) ಈ ನಾರಾಯಣನ   ಆದೇಶಪಾಲಕನಾಗಿ ಹಿಂಬಾಲಿಸುತ್ತಾನೆ  ಎನ್ನುವುದೊಂದೇ ಸಮಾಧಾನದ ಸಂಗತಿ. ದ್ರೌಪದಿಯಂತಹ ದ್ರೌಪದಿಯನ್ನೇ   ಪುರುಷನ ( ಲೈಂಗಿಕ )  ಅಧೀನಜೀವಿಯನ್ನಾಗಿ ಕಡೆದ   ಪ್ರಾಚೀನ ಭಾರತ , ಹೆಣ್ಣನ್ನು   ಈ ಸಮಾಜ ಹೇಗೆ ನೋಡುತ್ತ ನಡೆಸಿಕೊಳ್ಳುತ್ತ  ಬಂತು ಎನ್ನುವುದನ್ನು  ಪ್ರತಿಮಿಸುತ್ತದೆ...

ಹೀಗಾಗಿ  ಮಹಾಭಾರತದಿಂದ ಮೊದಲುಗೊಂಡು ಎಲ್ಲ ಕಾಲಗಳ  'ದರ್ಮ ರಾಜ್ಯ' ಗಳಲ್ಲೂ  ಸ್ತ್ರೀ ಅಧೀನತೆ   ಸ್ವೀಕೃತ   ಸಾಮಾಜಿಕ ಮೌಲ್ಯವಾಗಿದ್ದಂತೆ  ಕಾಣುತ್ತದೆ ಕೃಷ್ಣನಂತಹ ಅವತಾರಿಯ ಯುಗದಲ್ಲೇ  ದ್ರೌಪದಿಯ ಪ್ರೇಮ  ಒಂದು  "ಅಯ್ಕೆ" ಯಾಗದೆ ಅದು ವಿವಾಹದಲ್ಲಿ   ಫಲಿಸದೆ  , ಹೇರಿಕೆಯ ದಾಂಪತ್ಯದ ಬಲಿಪಶುವಾಗಬೇಕಾಗಿಬಂದಿದ್ದನ್ನು  ನೋಡಿದರೆ ‌ ಸ್ತ್ರೀ ಘಾತುಕ  ಅನ್ಯಾಯದ   ಕಬಂಧ ಬಾಹುಗಳ ಚಾಚು ಮತ್ತು ಬಿಗಿತ   ಎಷ್ಟು   ಬಲಿಷ್ಟವಾದದ್ದು ಎನ್ನುವುದು ಗೊತ್ತಾಗುತ್ತದೆ ..

 

ಪ್ರಜಾಪ್ರಭುತ್ವ ಯುಗವಾದ ,  ವ್ಯಕ್ತಿ ಸ್ವಾತಂತ್ರ್ಯ ವನ್ನು ಎತ್ತಿ ಹಿಡಿಯುವ ಇವತ್ತೂ ಸಹ  ಹಳೆಯ  'ದರ್ಮ ರಾಜ್ಯ'ವೇ ನಡೆಯುತ್ತಿರುವುದು  ದುರದೃಷ್ಟಕರ ವಾಗಿದೆ  . ಈ ಬಗೆಗಿನ ನಮ್ಮ ಕಾಲದ  ನೋಟವೂ ಸಹ ಅಸೂಕ್ಷ್ಮವಾಗಿರುವುದು  ನಮಗೆ ಗೊತ್ತಾಗುತ್ತಿಲ್ಲ.

ಹಳೆಯ ದೇವದಾಸಿ‌ ಪದ್ದತಿ  ,  ಯಾವ ಸ್ವರೂಪದಲ್ಲಿ  ಈಗ  ಚಾಲ್ತಿಯಲ್ಲಿದೆಯೊ ಗೊತ್ತಿಲ್ಲ.. ಅದರೆ  ವೇಶ್ಯಾವಾಟಿಕೆಗಳಲ್ಲಿ   ಹಲವು ಗಂಡಸರ ಲೈಂಗಿಕ ಜೀತ ಮಾಡುವ ಪರಿಸ್ತಿತಿ  ಈಗ ಇದೆಯಲ್ಲ, ಈಗ ಸಹ   ವೇಶ್ಯಾವೃತ್ತಿ ನಿರತ ಹೆಣ್ಣುಮಕ್ಕಳು  ( ಹಲವು ಲಕ್ಷ ಸಂಖ್ಯೆಯಲ್ಲಿದ್ದಾರೆ  ಎಂಬ ಅಂಕಿಸಂಖ್ಯೆ ಇದೆ . ಈ ಲೈಂಗಿಕ ಉದ್ಯಮದ ವಾರ್ಷಿಕ ವಹಿವಾಟು  ಹತ್ತಿರ ಹತ್ತಿರ  ಮುಕ್ಕಾಲು  ಲಕ್ಷ ಕೋಟಿ ಮುಟ್ಟಿದೆ ಎನ್ನಲಾಗುತ್ತದೆ )   ತಮ್ಮ  ಇಷ್ಟಾನಿಷ್ಟವನ್ನು  ಅಲಕ್ಷಿಸಿ  ಹಲವು ಗಂಡಸರ  ಲೈಂಗಿಕ ಹಸಿವನ್ನು ತೀರಿಸಬೇಕಾದ  ಅನಿವಾರ್ಯ ತೆಗೆ ಸಿಕ್ಕಿ ದೌರ್ಜನ್ಯಕ್ಕೊಳಗಾಗುತ್ತಿರುವ ದ್ರೌಪದಿಯರೇ ಆಗಿದ್ದಾರೆ ‌‌.. .. 

ವಿಷಾದವೆಂದರೆ  ಹಲವು ಮಹಿಳಾ ಸಂಘಟನೆಗಳೇ    ವೇಶ್ಯಾವೃತ್ತಿಯನ್ನು  ವೃತ್ತಿಯೆಂದು ಘೋಷಿಸಿ ,  ಆ  'ವೃತ್ತಿ ' ನಿರತ ಮಹಿಳೆಯರಿಗೆ  ಕೆಲವು ನಾಗರಿಕ  ಸೌಲಬ್ಯಗಳನ್ನು  ನೀಡಬೇಕು  ಎಂಬ  ಸುಪ್ರೀಂ ಕೋರ್ಟ್  ತೀರ್ಪನ್ನು ಸ್ವಾಗತಿಸಿದ್ದನ್ನು  ನೋಡುತ್ತೇವೆ...  ಅಂದರೆ  ವೇಶ್ಯಾವೃತ್ತಿಯನ್ನು ಈ ತೀರ್ಪು  ಸ್ತಿರೀಕರಿಸುತ್ತಿರುವುದನ್ನು  ಈ ಮಹಿಳಾ ಸಮೂಹ   ಸಮೂಹ ಗಮನಿಸದೇಹೋದ ಅಸೂಕ್ಷ್ಮತೆಯನ್ನು ನೆನೆದರೆ  ದಿಗ್ಭ್ರಾಂತಿಯುಂಟಾಗುತ್ತದೆ.

ವೇಶ್ಯಾವಾಟಿಕೆಗಳನ್ನು   ನಿಷೇದಿಸಿ  ಮಹಿಳಾ ಕುಲಕ್ಕೆ    ಘನತೆಯ  ಬದುಕನ್ನು   ನೀಡಲು ಇದುವರೆವಿಗೂ  ಸಮರ್ಥವಾಗದ ಪ್ರಜಾಪ್ರಭುತ್ವ ವು   ಹಳೆಯ   ಸ್ತ್ರೀ ದಮನದ ದ್ರೌಪದೀಯುಗದ ಮೌಲ್ಯಗಳ ದಾಸನಾಗಿದೆ ಎಂದೇ ಹೇಳಬೇಕಾಗಿದೆ.

ವೇಶ್ಯಾಪದ್ದತಿಯನ್ನು  ಇಲ್ಲವಾಗಿಸಿ ಮಹಿಳೆಯರು ಘನತೆಯ ಬದುಕನ್ನು ಬದುಕುವ  ಅವಕಾಶಗಳನ್ನು ಕಲ್ಪಿಸುವುದಿರಲಿ ,  ಶಾಸಕಾಂಗದಲ್ಲಿ ಮೀಸಲಾತಿ ನೀಡುವ ಮೂಲಕ ಮಹಿಳೆಯರನ್ನು ರಾಜ್ಙಿಯರಾಗಿ  ಮಾಡುವ  ಮಸೂದೆಯನ್ನು ಕಳೆದ ಮೂರು ದಶಕಗಳಿಂದಲೂ    ಕಸದ ತಿಪ್ಪೆಗೆಸೆದು .. ಈಗ. ಮೋದಿಯ  ಹತ್ತು ವರ್ಷದ  ಆಡಳಿತ  ತನ್ನ ಅವದಿ ತೀರಲು ಮೂರು ಮತ್ತೊಂದು ದಿನವಿರುವಾಗ. ಮತ್ತೆ   ಈ ಮಸೂದೆಗೆ ಜೀವ ಬರಬಾರದೆಂಬ  ದುರುದ್ದೇಶದಿಂದ  ಹತ್ತಿಪ್ಪತ್ತು  ವರ್ಷಗಳಷ್ಟು ಕಾಲ ಕಾಯ್ದೆಯಾಗದಂತೆ  ತಡೆದಿದ್ದನ್ನು ನೋಡಿದರೆ.

ಈ ದೇಶದ ಗಂಡಾಳ್ವಿಕೆ ಎಷ್ಟರಮಟ್ಟಿಗೆ  ಸ್ತ್ರೀವಿರೋಧಿಯಾಗಿದೆ ಎನ್ನುವುದು ಗೊತ್ತಾಗುತ್ತದೆ. ಮಹಾಭಾರತದ ದ್ರೌಪದಿಗೆ  ಐವರು ಗಂಡರು, ದರೆ ಅವಳ ಪ್ರೇಮ ವೃತ್ತಾಂತವೆ ಇಲ್ಲ‌.  ಅಂದರೆ ಅವಳಿಗೆ  ಪ್ರೇಮಿಯೇ ಇಲ್ಲ‌ ಅನ್ನಿಸುತ್ತದೆ.ಅರ್ಜುನನ ಕಡೆಗಿನ ಏಕಮುಖ ಪ್ರೇಮ  ಹಲವರನ್ನು  ದೈಹಿಕವಾಗಿ  ಸ್ವೀಕರಿಸಬಕಾದ ಅನಿವಾರ್ಯತೆಯಲ್ಲಿ  ಉಂಟಾದ ಮುಖಮುನಿಸಿನಲ್ಲಿ  ಕ್ಷಯಿಸಿತೆಂದೆ ಕಾಣುತ್ತದೆ ‌. ಅರ್ಜುನನ  ತುಟಿಬಿಚ್ಚದ ಮೌನದಲ್ಲಿ  ದ್ರೌಪದಿ ಕೆರಳಿ   ಕ್ರುದ್ದಳಾಗಿರಬಹುದು ....

ನಂತರ   ಸುಭದ್ರೆ , ಉಲೂಚಿ , ಚಿತ್ರಾಂಗದೆಯರ ಪತಿಯಾಗುವ ಅರ್ಜುನ ,  ಮಾನಸಿಕವಾಗಿ ದ್ರೌಪದಿಯ ಮನೋ ಕ್ಷಿತಿಜದಿಂದ ಕ್ರಮೇಣ  ದೂರವಾಗಿರಬಹುದು.  ಹೀಗಾಗಿ  , ಪ್ರೇಮವಿಲ್ಲದೆ   ಈ ಭೂಮಿಯಿಂದ  ವಿದಾಯ ಹೇಳಿದ ಹೆಣ್ಣು  ದ್ರೌಪದಿ.

ಅದರೆ  , ಕೃಷ್ಣ ಮಾತ್ರ  ಅವಳ ಪ್ರೇಮಿಯಾಗುವ ಅರ್ಹತೆ ಹೊಂದಿದ್ದ  ಅನ್ನಿಸುತ್ತದೆ ..   ಕೃಷ್ಣ ಮತ್ತು ಕೃಷ್ಣೆ  .. ಎಂಬ ಮಹಾಭಾರತದ ಜೋಡು ನುಡಿ ‌ ಅದನ್ನೇ  ಉಸಿರುತ್ತಿರಬಹುದು . ಅರ್ಜುನ , ಸ್ವಯಂವರದಲ್ಲಿ ಆಕೆಯನ್ನು  ಗೆದ್ದು ಪಡೆದ ಬಳಿಕ.

ಕೃಷ್ಣೆಯ  ಮಾನಾಪಮಾನಗಳನ್ನು  ಕಾಪಾಡುವ ಅಪ್ತ ಮಿತ್ರನ  ಸ್ಥಾನವನ್ನು  ಅವನು ಧಾರಣ ಮಾಡಿದ್ದ ...  ಆ ಸಂಬಂಧದಿಂದ ಕೃಷ್ಣನೂ ಅತ್ತಿತ್ತ ಚಲಿಸಲಿಲ್ಲ.. ಅಥವಾ  ಕೃಷ್ಣೆಯೂ  ಚಲಿಸಲಿಲ್ಲ. ಕಷ್ಟ ಪರಂಪರೆಯಲ್ಲಿ  ಹಾಯ್ದುಬಂದ ದ್ರೌಪದಿ ಯ ಬದುಕು   ತನ್ನ ವ್ಯಕ್ತಿ ವಿಶಿಷ್ಟತೆಯನ್ನೂ  ಗನತೆಯನ್ನೂ ಅರಿಯಬಲ್ಲ ಕೃಷ್ಣನಿರದಿದ್ದಲ್ಲಿ  ಗೌರವ ಶೂನ್ಯವಾಗಿರುತ್ತಿತ್ತೋ ಏನೋ .ಭೀಮನಂತಹ ಭೀಮನಿದ್ದೂ ಸಹ ..

ಇತಿಹಾಸ ಪೂರ್ವ   ಅಥವಾ ನಾಗರಿಕತೆಯ ಪೂರ್ವ ಯುಗಗಳಲ್ಲಿ  ಬಹು ಪತಿತ್ವ ಮತ್ತು ಬಹು ಪತ್ನಿತ್ವ ..  ಅಥವಾ ಸರಿಯಾಗಿ ಹೇಳಬೇಕೆಂದರೆ ಮನಮೆಚ್ಚನ್ನನುಸರಿಸಿ  ಬಹು ಗಂಡುಗಳೊಡನೆ ಮತ್ತು  ಬಹು ಹೆಣ್ಣುಗಳೊಡನೆ  ಸಂಬಂಧ ವಿದ್ದಿದ್ದು  ನಿಜವೆನ್ನಿಸುತ್ತದೆ . ಈ ಪ್ರಾಥಮಿಕ  ಪ್ರವೃತ್ತಿಯ  ಕುರುಹಿನ ಉದಾಹರಣೆ ಯೇ  ದ್ರೌಪದೀ  ಸಂಬಂಧ ಅನ್ನಿಸುತ್ತದೆ  ನಂತರ     ಬೇರೆ ಬೇರೆ  ಕುಲಗಳ ಪುರಾಣಾದಿಗಳಲ್ಲಿ  ಈ ಬಗ್ಗೆ    ತಪ್ಪು  ಒಪ್ಪಿನ ಜಿಜ್ಙಾಸೆಗಳಿದ್ದಿರಲು ಸಾಧ್ಯವಿದೆ.

ಈಗಲೂ ಅಷ್ಟೆ ..  ಗಂಡುಹೆಣ್ಣುಗಳಾದಿಯಾಗಿ ನಮ್ಮೆಲ್ಲರಲ್ಲೂ  ಜೀವಂತವಾಗಿರುವ  ಏಕ ಸಂಗಾತಿಗಿಂತ ಹೆಚ್ಚಿನ  ಸಂಗಾತಿ ಕಡೆಗಿನ ಆಕರ್ಷಣೆಯ  Tendency ಯಲ್ಲಿ ಅಂದರೆ ಗಂಡಿನ ,   ಬಹು ಹೆಣ್ಣುಗಳ ಕಡೆಗಿನ ಆಕರ್ಷಣೆಯಲ್ಲಿ .. ಅಥವಾ ಹೆಣ್ಣಾದರೆ ಬಹು ಪುರುಷರತ್ತ ಅಕರ್ಷಣೆಯಲ್ಲಿ ಈ ಪ್ರಿಮಿಟಿವ್ ಪ್ರವ್ರುತ್ತಿಯ  ಅಂಶಗಳಿವೆ . ಆದರೆ ದ್ರೌಪದಿ ಯ ವಿಚಾರದಲ್ಲಿ  ಆದದ್ದು ಮಾತ್ರ ಬೇರೆಯೇ   .. ಅದು  ಆಕೆಯ ಅಯ್ಕೆಯ ಬಹು ಗಂಡುಗಳ ಕಡೆಗಿನ ಸಂಬಂದವಲ್ಲ..  ಅದು ಆಕೆಯ ಮೇಲೆ  ದುರಂತಮಯವಾದ  , ದುರದೃಷ್ಟಕರ ವಾದ ಬಹು ಗಂಡಸರ ಹೇರಿಕೆ .

ಆಯ್ಕೆಯೇ ಬೇರೆ  ಹೇರಿಕೆಯೆ ಬೇರೆ ‌... ಮಹಾಬಾರತದಲ್ಲಿ  ಆಕೆಯ ಆಯ್ಕೆಯ ಗಂಡಸರೇ ಗೋಚರಿಸದಿರುವುದು  ಅವಳ   ದಾರು ಣ  ಪರಿಸ್ಥಿತಿ ಯನ್ನು  ತೋರುತ್ತದೆ. ಕರ್ಣನತ್ತ ಅವಳು   ಅಕರ್ಷಿತಳಾಗಿದ್ದಳು ಎನ್ನಲಾಗುತ್ತದೆ.. ಆದರೆ ಅದಕ್ಕೆ ಸಾಕಷ್ಟು ಅಧಾರ ಇದ್ದಂತೆ ಕಾಣುವುದಿಲ್ಲ  . ಆತನಿಗೂ ಅಷ್ಟೇ ದ್ರೌಪದಿಯತ್ತ  ಆತ ಮೆಚ್ಚುಗೆಯಿಂದ  ಅಥವಾ  ಗೌರವಯುತವಾಗಿ  ನೋಡಿದ್ದಾಗಲಿ ನಡೆಸಿಕೊಂಡಿದ್ದಾಗಲಿ ಕಾಣುವುದಿಲ್ಲ.  ಬದಲಾಗಿ ದುರ್ಯೋಧನ ಮತ್ತು  ದುಶ್ಯಾಸನರ  ಜೊತೆಗೆ ದ್ರೌಪದಿಯ ಮಾನ  ಭಂಗಕ್ಕೆ  ಕೈಜೋಡಿಸುವ ಕರ್ಣ ನಲ್ಲಿ   ದ್ರೌಪದಿ ಗೆ  , ಪ್ರೇಮದಂತಹ ಮಾರ್ದವಪೂರ್ಣ ಸಂವೇದನೆಯಾದರೂ ಹುಟ್ಟಲು ಹೇಗೆ ಸಾದ್ಯ ?

 

ಡಾ ನಟರಾಜ ಕೆ ಪಿ