ದಯವಿಟ್ಟು ಹೇಳಿ, ಮತಾಂತರ ಯಾಕೆ ತಪ್ಪು? ಎನ್ .ಎಸ್.ಶಂಕರ್ -part 1

why-conversion-is-wrong-please-tell-n-s-shankar-part-1

   ದಯವಿಟ್ಟು ಹೇಳಿ, ಮತಾಂತರ ಯಾಕೆ ತಪ್ಪು?  ಎನ್ .ಎಸ್.ಶಂಕರ್  -part 1

ಭೈರಪ್ಪನವರು ಹಿಂದೂಧರ್ಮದ ಧಾರ್ಮಿಕ ವೈಶಾಲ್ಯಕ್ಕೆ ಕೊಡುವ ಇನ್ನೊಂದು ಉದಾಹರಣೆ- ಸಿದ್ದಗಂಗೆ ಸ್ವಾಮಿಗಳದ್ದು: ಸಿದ್ದಗಂಗಾ ಸ್ವಾಮಿಗಳು ಸನ್ಯಾಸಿ ಧರ್ಮವಾದ ಭಿಕ್ಷಾಟನೆಯಿಂದ ದಿನಕ್ಕೆ ಮೂರು ನಾಲ್ಕು ಹಳ್ಳಿಗಳನ್ನು ಸುತ್ತಿ ದಾಸೋಹದ ಪ್ರಮಾಣವನ್ನು ಬೆಳೆಸಿದರು. ಎಲ್ಲ ಜಾತಿ ಎಲ್ಲ ಪಂಗಡಗಳ ಮಕ್ಕಳನ್ನೂ ಬೆಳೆಸಿದರು. ಮುಸಲ್ಮಾನ ಹುಡುಗರನ್ನೂ ಅಲ್ಲಿ ನೋಡಿದ್ದೇನೆ. ಯಾರಿಗೂ ಲಿಂಗಧಾರಣೆ ಮಾಡಿಲ್ಲ. ತುಮಕೂರಿನ ಮಠದ ಜಾತ್ಯತೀತ ಅನ್ನ/ ಜ್ಞಾನದಾಸೋಹದ ಬಗ್ಗೆ ಜಗತ್ತಿಗೇ ಗೊತ್ತಿದೆ. ಆದರೆ ಭೈರಪ್ಪನವರ ಈ ಉಲ್ಲೇಖದ ಹಿಂದೆ ಕಳ್ಳ ಜಾಣತನದ ಘಾಟು ಹೊಡೆಯುತ್ತಿಲ್ಲವೇ? ಭೈರಪ್ಪನವರು, ಮುಸಲ್ಮಾನರು ಬೇಡ, ಯಾವುದೇ ಬ್ರಾಹ್ಮಣೇತರರನ್ನು ಸಮಾನವಾಗಿ ಕೂರಿಸಿಕೊಳ್ಳುವ ಅಂಥ ಒಂದಾದರೂ ಬ್ರಾಹ್ಮಣಮಠದ ನಿದರ್ಶನ ಕೊಡಬಲ್ಲರೇ?

 

 

ದಯವಿಟ್ಟು ಹೇಳಿ, ಮತಾಂತರ ಯಾಕೆ ತಪ್ಪು?

ಎನ್ .ಎಸ್.ಶಂಕರ್

-------------------------------------

ಬೆಂಡಿಗೇರಿ- ಬೆಳಗಾವಿ ತಾಲೂಕಿನ ಹಳ್ಳಿ. ಮಂಡಲ್ ಪಂಚಾಯ್ತಿ ಕೇಂದ್ರವೂ ಹೌದು. ಅಲ್ಲಿ 1987ರ ಆಗಸ್ಟ್ ತಿಂಗಳಲ್ಲಿ ಒಂದು ದಾರುಣ ಘಟನೆ ನಡೆಯಿತು. ಈ ಘಟನೆ ಅಲ್ಲಿನ ಪಂಚಾಯ್ತಿ ರಾಜಕಾರಣದ ಅಡ್ಡ ಪರಿಣಾಮವಾದರೂ, ಹಿಂದೂ ಸಮಾಜದ ಅಂತರಂಗಕ್ಕೆ ಇದಕ್ಕಿಂತ ನಿಚ್ಚಳ ಕನ್ನಡಿ ಬೇಕಿಲ್ಲವಾದ್ದರಿಂದ ಇಲ್ಲಿ ಉಲ್ಲೇಖಿಸುತ್ತಿದ್ದೇನೆ.

ಮಾರನೇ ದಿನ ದೇವರಿಗೆ ಹೋಗುವವರಿದ್ದ- ದಲಿತರಾದ- ಕಲ್ಲಪ್ಪ ದ್ಯಾಮಪ್ಪ ತಳವಾರ, ಸುಭಾಷ್ ಕಿಲ್ಲಪ್ಪ ಕೋಲ್ಕಾರ ಮತ್ತು ಮರಾಠಿ ಭಾಷೆಯ ಮುದುಕಪ್ಪ ಹೈಬತ್ತಿ ತಮ್ಮ ದನಗಳಿಗೆ ಮೇವು ತರಲು ಹೊಲದ ಕಡೆ ಹೊರಟರು. ಮಧ್ಯದಲ್ಲೇ ಮಳೆ ಬಂದಿದ್ದರಿಂದ, ದೂರದ ತಮ್ಮ ಹೊಲಗಳಿಗೆ ಹೋಗಲಾರದೆ ಸನಿಹದ ಸಿದ್ದೇಗೌಡ ಎಂಬುವವರ ಹೊಲದಲ್ಲಿ ಜೋಳ ಕುಯ್ದು ತಂದರು. ಇದು ಆಗಸ್ಟ್ 2ನೇ ತಾರೀಕಿನ ವಿದ್ಯಮಾನ.

ಮರುದಿನ 3ನೇ ತಾರೀಕು ಇವರಿಗೆ ಬುಲಾವ್ ಬಂತು. ಸಂಜೆ ಮಲಗೌಡ ಮೇಳೇದ ಪಾಟೀಲ ಎಂಬ ಧುರೀಣರ ಮನೆಯಲ್ಲಿ ಸೇರಿದ್ದ ಗಣ್ಯ ಲಿಂಗಾಯಿತ ಮುಖಂಡರು, ಜೋಳ ಕೊಯ್ದಿದ್ದು ತಮ್ಮ ಹೊಲದಲ್ಲೇ ಎಂದು ಸಾಧಿಸುತ್ತ ಇವರಿಗೆ ಬೈದು ಹೊಡೆಯತೊಡಗಿದರು. ಇವರುಗಳು ಎಷ್ಟು ಗೋಗರೆದರೂ, ದೊಣ್ಣೆಯೇಟುಗಳಿಗೆ ಮಣಿದು ವಿಧಿಯಿಲ್ಲದೆ ಹೌದು ಎಂದು ಒಪ್ಪಿಕೊಳ್ಳಬೇಕಾಯಿತು. ಬಿಡಿಸಿಕೊಳ್ಳಲು ಬಂದ ಸುಭಾಷ್ ತಾಯಿಗೂ ಹೊಡೆತಗಳು ಬಿದ್ದವು. ಮತ್ತೆ ‘ನಿಮಗೆ ಜೋಳ ಕುಯ್ಯಲು ಹೇಳಿ ಕಳಿಸಿದವರ ಹೆಸರು ಹೇಳಿರಿ, ಬಿಟ್ಟುಬಿಡುತ್ತೇವೆ’ ಎಂದರು. ಯಾರಾದರೂ ಹೇಳಿ ಕಳಿಸಿದ್ದರೆ ತಾನೇ ಇವರು ಬಾಯಿ ಬಿಡುವುದು? ಕಡೆಗೆ ತಪ್ಪಾಯಿತು ಎಂದು ಹೇಳಿಸಿ ಕಳಿಸಿದರು.

ಕತೆ ಇಲ್ಲಿಗೆ ಮುಗಿಯಲಿಲ್ಲ. ಮರುದಿನ- ಆಗಸ್ಟ್ 4ರಂದು- ಮತ್ತೆ ಎಲ್ಲರನ್ನೂ ಕರೆಸಿ ಹಿರಿಯರ ಕಾಲಿಗೆ ಬೀಳಿಸಿ ಕ್ಷಮಾಪಣೆ ಕೇಳಿಸಿದ್ದಾಯಿತು. ಈ ದಿನವೂ ಹೊಡೆತಗಳು, ಮತ್ತೆ ‘ಯಾರು ಹೇಳಿ ಕಳಿಸಿದ್ದು ಹೇಳಿ’ ಎಂಬ ಅದೇ ದಬಾವಣೆ ಮುಂದುವರೆದವು. ಕಡೆಗೆ ಹೊಡೆದು ಸುಸ್ತಾದ ಸಂಗಪ್ಪ ಪಡೆಪ್ಪ ಚವ್ವಾಳಿಯವರು “ಹೊಲೆ ಸೂಳೆಮಕ್ಕಳಿರಾ! ನಮ್ಮ ಹೊಲದಲ್ಲಿ ಜೋಳ ಕುಯ್ಯಲು ಹೇಳಿದವರಾರು? ಅವರು ಹೇಲು ತಿನ್ನು ಅಂತಾರೆ. ತಿಂತೀರಾ? ಇನ್ನು ಬಾಯಲ್ಲಿ ಹೇಳುವುದು ಬೇಡ. ಮಾಡಿ ತೋರಿಸಿದರೆ ಸರಿ” ಎಂದರು! ಇದರಿಂದ ಉತ್ತೇಜಿತರಾದ ಶಿವಪ್ಪ ಬಸವನಗೌಡ ಪಾಟೀಲರು “ಮಗನೇ, ಹೋಗಿ ಹೇಲು ತಗೊಂಡು ಬಂದು ತಿಂದು ಹೋಗಿ. ಇಲ್ಲದಿದ್ದರೆ ಏನು ಮಾಡಬೇಕೋ ಮಾಡುತ್ತೇವೆ” ಎಂದು ಕುಡಗೋಲು ಹಿಡಿದು ಮುಂದೆ ಬಂದರು. ಬಂದವರು ಸುಭಾಷ್ ಕೋಲ್ಕಾರರನ್ನು ಕುಡಗೋಲು ಹಿಡಿದೇ ಮನೆಯ ಸಂದಿಗೆ ಕರೆದೊಯ್ದು, ಜೀವಭಯ ಒಡ್ಡಿ ಪೇಪರಿನಲ್ಲಿ ಹೇಲೆತ್ತಿಸಿ ಎಲ್ಲರ ಮುಂದೆ ತರಿಸಿ ಇಟ್ಟರು. ವೃತ್ತಿಯಲ್ಲಿ ಮಕ್ಕಳಿಗೆ ಪಾಠ ಹೇಳುವ ಮೇಷ್ಟ್ರಾದ ಸಂಗಪ್ಪ ಆಗ- “ಇದು ನಿಮಗೆ ಟಾನಿಕ್ಕು. ಇದನ್ನು ತಿಂದರೆ ನಿಮಗೆ ಯಾವ ರೋಗವೂ ಬರುವುದಿಲ್ಲ. ತಿನ್ನುವವರು ಈ ಜಗತ್ತಿನಲ್ಲಿ ಹುಟ್ಟಿಲ್ಲ. ಈವತ್ತು ನೀವು ತಿನ್ನಿ” ಎಂದರು! ಈ ಜನ ಏನು ಮಾಡಲೂ ತೋಚದೆ ಹಾಗೇ ಕೂತಿದ್ದಾಗ ಕೊಡಲಿ, ಮಚ್ಚು ಹಿಡಿದ ನಾಲ್ವರು “ಮಕ್ಕಳಾ, ತಿನ್ನುತ್ತೀರೋ ಇಲ್ಲ ಬಡಿಯಬೇಕೋ?” ಎಂದು ವೀರಾವೇಶದಿಂದ ತಮ್ಮ ಆಯುಧಗಳನ್ನು ಝಳಪಿಸತೊಡಗಿದರು. ಈಗ ಇವರು ತಮ್ಮ ಜೀವ ತೆರುವ ಬದಲು, ಕರುಳು ಕಿತ್ತು ವಾಂತಿ ಬರುವಂತಾದರೂ ಹೇಲು ತಿಂದು ಪ್ರಾಣ ಉಳಿಸಿಕೊಂಡರು....

ತಕ್ಞಣಕ್ಕೆ ಎಲ್ಲೂ ವರದಿಯಾಗದೆ ಎಲ್ಲ ತಣ್ಣಗಿದ್ದರೂ, ಮುಂದಕ್ಕೆ ಈ ಘಟನೆ ದೊಡ್ಡ ಸುದ್ದಿಯಾಗಿ ವಿಧಾನಸಭೆಯಲ್ಲೂ ಗದ್ದಲವೆದ್ದಾಗ ಅಪರೂಪದ ದಲಿತ ವೈದ್ಯ ಹಾಗೂ ರಾಜಕಾರಣಿ ದಿವಂಗತ ಡಾ. ಬಿ.ಎಂ. ತಿಪ್ಪೇಸ್ವಾಮಿಯವರ ಅಧ್ಯಕ್ಷತೆಯಲ್ಲಿ ತನಿಖೆಗೆಂದು ಜಂಟಿ ಸದನ ಸಮಿತಿ ರಚಿಸಲಾಯಿತು. ಸಮಿತಿಯಲ್ಲಿ ಎಲ್ಲ ಜಾತಿಯ ಶಾಸಕರಿದ್ದರು. ಈ ಸಮಿತಿ ತನಿಖೆ ನಡೆಸಿ ಘಟನೆಯ ಪ್ರತಿಯೊಂದೂ ವಿವರ ಸಂಗ್ರಹಿಸಿ ನವೆಂಬರ್ ನಾಲ್ಕರಂದು ತನ್ನ ವರದಿ ಸಲ್ಲಿಸಿತು. (ಮೇಲಿನ ವಿವರಗಳೆಲ್ಲ ಆ ವರದಿಯಿಂದಲೇ ಉದ್ಧೃತ) ಇದಾದ ಮೇಲೆ ಡಾ. ತಿಪ್ಪೇಸ್ವಾಮಿಯವರು ನನಗೇ ನೀಡಿದ ಸಂದರ್ಶನದಲ್ಲಿ ನಿಡುಸುಯ್ದು ಹೇಳಿದ್ದು-

“ಅಲ್ಲಪ್ಪ, ಇಂಥದೊಂದು ಘಟನೆ ನಡೆದಿದೆ ಅಂದರೆ ಪತ್ರಿಕೆಯವರೂ ಬರೆದಿಲ್ಲ. ಹರಿಜನರಿಗೆ ಸಮಾಜ ವಿರುದ್ಧವಾಗಿದೆ. ಸಮುದಾಯವೂ ನಿರ್ಲಿಪ್ತವಾಗಿದೆ. ಸರ್ಕಾರ ಅದಕ್ಷವಾಗಿದೆ. ಇಂಥ ಸ್ಥಿತಿಯಲ್ಲಿ ಏನು ಮಾಡಬೇಕು? ಮೀನಾಕ್ಷಿಪುರಂನಲ್ಲಿ ಕೆಲವರು ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದರು ಎಂದ ಕೂಡಲೇ ಎಲ್ಲ ಧರ್ಮಗುರುಗಳು, ಮಠಾಧೀಶರೂ ಹಿಂದೂಧರ್ಮ ಕಿತ್ತುಹೋಯ್ತೇನೋ ಅಂತ ಅಲ್ಲೇ ಹೋಗಿ ಬುದ್ಧಿ ಹೇಳಿ ಎಲ್ಲ ಮಾಡಿದರು. ಈಗ ಅವರು ಯಾರೂ ಉಸಿರು ಎತ್ತುವುದಿಲ್ಲವಲ್ಲ. ಏನಿದು? ಯಾವುದು ಈ ಧರ್ಮ? ಈ ಘಟನೆ ಯಾವುದಾದರೂ ಎರಡು ಬೇರೆ ಧರ್ಮಗಳ ನಡುವೆ ನಡೆದಿದ್ದರೆ ಇದೇ ಒಂದು ರಾಷ್ಟ್ರಮಟ್ಟದ ಸಮಸ್ಯೆಯಾಗಿಬಿಡುತ್ತಿರಲಿಲ್ಲವಾ?....”

*

ಎರಡನೇ ಘಟನೆ ಇನ್ನೂ ಈಚಿನದು. ಕೋಲಾರದ ಕಂಬಾಲಪಲ್ಲಿಯಲ್ಲಿ ನಡೆದ- ‘ದಲಿತರ ಜಲಿಯನ್ವಾಲಾಬಾಗ್’ ಎಂದೇ ಕುಖ್ಯಾತವಾದ- ನರಮೇಧ. ಈ ಪ್ರಕರಣದ ವಿವರಗಳಿಗೆ ಹೋಗದೆ ಅಗತ್ಯವಾದಷ್ಟನ್ನು ಮಾತ್ರ ಇಲ್ಲಿ ನಮೂದಿಸುತ್ತೇನೆ.

ಚಿಂತಾಮಣಿ ತಾಲೂಕಿನ ಕಂಬಾಲಪಲ್ಲಿ. 2000ನೇ ಇಸವಿ ಮಾರ್ಚಿ 11ರ ಸಂಜೆ ಸುಮಾರು ಏಳೂವರೆ. ಆಂಜನಪ್ಪ ಎಂಬ 11 ವರ್ಷದ ದಲಿತ ಬಾಲಕ ಮನೆಯಲ್ಲಿ ಚಪಾತಿ ತಿನ್ನುತ್ತಿದ್ದವನು, ಹೊರಗೆ ವಿಪರೀತ ಗಲಾಟೆ ಕೇಳಿ ಅಮ್ಮ ಕದಿರಮ್ಮನೊಂದಿಗೆ ಹೊರಗೆ ಬಂದು ನೋಡಿದರೆ, ಕೃಷ್ಣಾರೆಡ್ಡಿ ಎಂಬುವವರ ಶವ ನೀರಿನ ಟ್ಯಾಂಕಿನ ಹತ್ತಿರ ಬಿದ್ದಿತ್ತು. ಅಲ್ಲಿ ನೂರಕ್ಕೂ ಹೆಚ್ಚು ಜನ ಜಮಾಯಿಸಿದ್ದರು. ನೆರೆದಿದ್ದ ರೆಡ್ಡಿ/ ಒಕ್ಕಲಿಗ ಸಮುದಾಯಗಳ ಗಣ್ಯರು “ಈ ಮಾದಿಗ ನನ್ನ ಮಕ್ಕಳು ಪೊಲೀಸರ ಮುಂದೆಯೇ ನಮ್ಮವರನ್ನು ಕೊಲೆ ಮಾಡಿದ್ದಾರೆ. ಇವರನ್ನು ಮುಗಿಸಿಬಿಡಬೇಕು” ಎಂದು ಕಲ್ಲು ಬೀಸುತ್ತ ಕೂಗಾಡುತ್ತ ಸಿಕ್ಕ ಸಿಕ್ಕ ದಲಿತರನ್ನು ಬೆನ್ನಟ್ಟತೊಡಗಿದರು. ಆಗ ತಾನೇ ಚಿಂತಾಮಣಿಯಿಂದ ಬಸ್ಸಿಳಿದು ಬಂದ ಆಂಜನಪ್ಪ ಮತ್ತು ಶ್ರೀರಾಮಪ್ಪನವರನ್ನು ಅಟ್ಟಾಡಿಸಿಕೊಂಡು ಬಂದಾಗ ಅವರು ಹೆದರಿ ನಡುಗುತ್ತ ಓಡಿ ಹೋಗಿ ಮನೆಯೊಳಗೆ ಸೇರಿಕೊಂಡು ಬಾಗಿಲು ಹಾಕಿಕೊಂಡರು. ಗಲಭೆನಿರತರು ಆಗ ಅವರ ಹಾಗೂ ಪಕ್ಕದ ಮನೆಗಳಿಗೆ ಹೊರಗಿನಿಂದ ಚಿಲಕ ಜಡಿದು ಬಾಗಿಲ ಹತ್ತಿರ ಹುಲ್ಲು ಮೆದೆ ಪೇರಿಸಿ, ಸೀಮೆಣ್ಣೆ ಸುರಿದು ಬೆಂಕಿ ಹಚ್ಚಿದರು. ಪರಿಣಾಮವಾಗಿ ವೆಂಕಟರಾಯಪ್ಪನವರ ಮಕ್ಕಳಾದ ಆಂಜನಪ್ಪ, ಶ್ರೀರಾಮಪ್ಪ, ಸೊಸೆ ಸರಸ್ವತಮ್ಮ, ಸಂಬಂಧಿಗಳಾದ ಶಂಕರಪ್ಪ ಮತ್ತು ನರಸಿಂಹಪ್ಪ- ಇವರು ವೆಂಕಟರಾಯಪ್ಪನವರ ಮನೆಯಲ್ಲಿ ದಹಿಸಿಹೋದರೆ, ಇನ್ನೊಂದು ಮನೆಯಲ್ಲಿ ಆ ಬಾಲಕ ಆಂಜನಪ್ಪನ ತಂದೆ ಚಿಕ್ಕಪಾಪಣ್ಣ ಜೀವಂತ ಸುಟ್ಟುಹೋದರು. ಮನೆಯಲ್ಲಿ ಹೊಗೆ ತುಂಬಿ ಉಸಿರಾಡಲೂ ಕಷ್ಟವಾದಾಗ ತಾಯಿ ಕದಿರಮ್ಮ ಮೂಲೆಯಲ್ಲಿ ತನ್ನ ಸೆರಗು ಮರೆ ಮಾಡಿ ಹೊದಿಸಿ ಬೆಂಕಿಯ ಝಳದಿಂದ ಆ ಹುಡುಗ ಆಂಜನಪ್ಪನಿಗೆ ರಕ್ಷಣೆ ಕೊಡಲು ಹೆಣಗುತ್ತಿದ್ದಳು. ಸ್ವತಃ ವೆಂಕಟರಾಯಪ್ಪ ತಮ್ಮ ಸಂಬಂಧಿ ಗಂಗುಲಪ್ಪನವರ ಮನೆಯಲ್ಲಿ ಸೇರಿಕೊಂಡಾಗ ಅವರ ಮನೆಗೂ ಹುಲ್ಲುಮೆದೆಯಿಟ್ಟು ಪೆಟ್ರೋಲ್ ಸುರಿದು ಬೆಂಕಿ ಕೊಟ್ಟರು. ಪಕ್ಕದ ಗುಡ್ಡಿ ಯಾಮನ್ನರ ಮನೆಗೂ ಬೆಂಕಿ ಬಿತ್ತು. ಎರಡೂ ಮನೆಗಳ ದವಸ ಧಾನ್ಯಗಳೆಲ್ಲ ಸುಟ್ಟುಹೋಗುವ ವೇಳೆಗೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಬಂದು ವೆಂಕಟರಾಯಪ್ಪ ಮತ್ತು ಗಂಗುಲಪ್ಪನವರನ್ನು ಬಚಾವ್ ಮಾಡಿದರು. ಅರೆಬೆಂದ ಪಾಪಮ್ಮ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಸತ್ತರು. ಅತ್ತ ಚಿಕ್ಕಪಾಪಣ್ಣನವರ ಮನೆಯಲ್ಲಿ ಪೂರ್ತಿ ಬಾಗಿಲೇ ಸುಟ್ಟು ಬಿದ್ದು ಹೋದಾಗ ಅವರಮ್ಮ ಹೊರದಬ್ಬಿದ್ದರಿಂದ ಆ ಹುಡುಗ ಆಂಜನಪ್ಪ ಹೇಗೋ ಓಡಿ ಅವಿತುಕೊಂಡು ಬಚಾವಾದ. ಆದರೆ ಎಲ್ಲರೂ ಅಷ್ಟು ಅದೃಷ್ಟವಂತರಾಗಿರಲಿಲ್ಲ. ಇನ್ನು ಕೆಲವರು ಓಡಿ ಬರಲು ಯತ್ನಿಸಿದರೆ ಅವರ ಮೇಲೆ ಕಲ್ಲು ತೂರಿ ಹೊರಬರದಂತೆ ತಡೆದರು. ಕೈಗೆ ಸಿಕ್ಕಿದ್ದರಲ್ಲಿ ಹೊಡೆದರು. ಬೆಂಕಿ ಆರಿಸಲು ಬಂದ ಅಗ್ನಿಶಾಮಕ ದಳದವರನ್ನೂ ತಡೆದರು!...

ಘಟನೆಗೆ ನೂರಾರು ಪ್ರತ್ಯಕ್ಷದರ್ಶಿಗಳಿದ್ದರು. ಬದುಕುಳಿದವರು ಪೊಲೀಸರ ಮುಂದೆ ವಿಸ್ತಾರ ಸಾಕ್ಷ್ಯ ಹೇಳಿದರು. ಮರುದಿನ ಮಾಧ್ಯಮದವರು ಮತ್ತಿತರರು ಬಂದಾಗ ಮನುಷ್ಯರ ಸುಟ್ಟ ದೇಹದ ಕರಕಲು ಕಮಟು ಇನ್ನೂ ಮೂಗಿಗೆ ಅಡರುತ್ತಿತ್ತು.... ಸೋನಿಯಾಗಾಂಧಿ ಆದಿಯಾಗಿ ನಾಯಕರೆಲ್ಲ ಬಂದು ಕಣ್ಣೀರು ಸುರಿಸಿ ಹೋಗಿದ್ದೂ ಆಯಿತು.

ಕೋರ್ಟಿನಲ್ಲಿ ಆರೂವರೆ ವರ್ಷ 56 ಸಾಕ್ಷಿಗಳ ವಿಚಾರಣೆ ನಡೆದು 2007 ಡಿಸೆಂಬರ್ 4ರಂದು ತೀರ್ಪು ಹೊರಬಿತ್ತು. ತೀರ್ಪು ಬರುವ ವೇಳೆಗೆ ವೆಂಕಟರಾಯಪ್ಪ ಮತ್ತು ಆ ಬಾಲಕ ಆಂಜನಪ್ಪನಾದಿಯಾಗಿ ಎಲ್ಲರೂ ಪ್ರತಿಕೂಲ ಸಾಕ್ಷಿಗಳಾಗಿ ಮಾರ್ಪಟ್ಟಿದ್ದರು! ಬೆದರಿಕೆ ಮತ್ತು ಆಮಿಷ- ಈ ದೇಶದಲ್ಲಿ ದಲಿತರ ಬಾಯಿ ಮುಚ್ಚಿಸಲು ಇಷ್ಟು ಸಾಲದೇ? ಪರಿಣಾಮ ಎಲ್ಲ 32 ಆರೋಪಿಗಳು ಖುಲಾಸೆಯಾಗಿ ಕೇಸೇ ಬಿದ್ದುಹೋಯಿತು! ಇಡೀ ನಾಡು ನ್ಯಾಯದಾನದ ಈ ವೈಖರಿಗೆ ದಂಗು ಬಡಿದು, ಆಘಾತಕ್ಕೆ ಮಾತು ಹೊರಡದೆ ಕೂತಿದ್ದ ವೇಳೆಯಲ್ಲೇ ಮಹಾರಾಷ್ಟ್ರದ ಖೈರ್ಲಾಂಜಿ ಎಂಬಲ್ಲಿ ಒಬ್ಬ ದಲಿತ ರೈತನ ಹೆಂಡತಿ, ಪ್ರಾಯಕ್ಕೆ ಬಂದ ಒಬ್ಬ ಮಗಳು ಮತ್ತು ಇಬ್ಬರು ಗಂಡುಮಕ್ಕಳನ್ನು ಊರೆಲ್ಲ ಬೆತ್ತಲೆ ತಿರುಗಿಸಿ, ಹೆಣ್ಣುಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕುಟುಂಬದ ಅಷ್ಟೂ ಹೆಣ್ಣುಗಳನ್ನು ಕೊಂದ ಘಟನೆ ಸುದ್ದಿ ಮಾಡುತ್ತಿತ್ತು....!

ಇದು ಭಾರತ. ಹಿಂದೂ ಸಮಾಜದ ಪರಂಪರೆ. ಭೈರಪ್ಪನವರಿಗೆ ಈಗ ಕೇಳಬಾರದೇ?- ಇಂಥ ಘಟನೆ ಬೇರೆ ಯಾವ ದೇಶದಲ್ಲಿ ನಡೆದೀತು?

‘ಹಿಂದೂ ಎಲ್ಲ ಒಂದು’ ಎಂಬ ಪುಗಸಟ್ಟೆ ಮಾತುಗಳನ್ನಾಡುತ್ತ, ಗೋಡೆಗಳ ಮೇಲೆ ಬರೆಯುತ್ತ ಇತರರ ಮೇಲೆ ಹಿಂದೂಗಳನ್ನು ಎತ್ತಿಕಟ್ಟಬೇಕೆನ್ನುವವರೆಲ್ಲರೂ ಅರೆಗಳಿಗೆ ಕಣ್ಣು ಮುಚ್ಚಿ ಈ ಘಟನೆಗಳನ್ನು ಧ್ಯಾನಿಸಲಿ. ಒಂದು ಕ್ಷಣ ಬೆಂಡಿಗೇರಿಯನ್ನು ಮನಸ್ಸಿಗೆ ತಂದುಕೊಂಡು ತಮ್ಮ ತಿನ್ನುವ ತಟ್ಟೆಯಲ್ಲಿ ಹೇಲನ್ನು, ಸುತ್ತ ಮುತ್ತ ಜೀವ ಬೆದರಿಕೆ ಒಡ್ಡುವ ಕೊಡಲಿ ಮಚ್ಚುಗಳನ್ನು ಕಲ್ಪಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ.

ಯಾಕೆಂದರೆ, ಮತಾಂತರದ ಮೂಲ ಬೀಜ ಈ ಮೇಲು ಕೀಳಿನ ಹೊಲಸಿನಲ್ಲಿದೆಯೇ ಹೊರತು ಆಮಿಷ ಬಲಾತ್ಕಾರಗಳ ಕುಂಟುನೆಪದಲ್ಲಲ್ಲ.

ಎಲ್ಲ ಹಿಂದೂತ್ವವಾದಿಗಳಂತೆಯೇ ಮಾನ್ಯ ಎಸ್.ಎಲ್. ಭೈರಪ್ಪನವರಿಗೂ ಹಿಂದೂ ಸಮಾಜವನ್ನು ಅಖಂಡ ಒಗ್ಗಟ್ಟಿನ ಏಕಾಕೃತಿಯಾಗಿ ಕಾಣಲು, ಕಾಣುವುದಕ್ಕಿಂತ ಹೆಚ್ಚಾಗಿ ಬಿಂಬಿಸಲು ಇಷ್ಟ.

ಈ ಹಾದಿಯಲ್ಲಿ ಅವರು ಹಿಂದೂಧರ್ಮವನ್ನು ಆಧ್ಯಾತ್ಮದ ಉತ್ತುಂಗ ಶಿಖರದಲ್ಲಿ ಕೂರಿಸುತ್ತಾರೆ:

(ಮತಪ್ರಚಾರದಿಂದ) ಯಾವ ಆಧ್ಯಾತ್ಮ ಸಾಧನೆಯಾಗುತ್ತದೆ? ಭಾರತೀಯರಿಗೆ ಇದು ಅರ್ಥವಾಗದ ಸಮಸ್ಯೆ. ಏಕೆಂದರೆ ಭಾರತೀಯರಿಗೆ ಆಧ್ಯಾತ್ಮವೆಂದರೆ ಕಾಡಿನ ಪರ್ಣಶಾಲೆಯಲ್ಲಿ, ಬೆಟ್ಟದ ಗುಹೆಗಳಲ್ಲಿ, ಹಿಮಾಲಯದ ಹೆಪ್ಪುಗಟ್ಟಿಸುವ ಎತ್ತರದಲ್ಲಿ ಕುಳಿತು ಅಂತರ್ಮುಖಿಯಾಗುವ ಸಾಧನೆ. ತನ್ನೊಳಗೆ ಬೆಳಕು ಸಾಧಿಸುವ ಮುನ್ನ ಅನ್ಯರಿಗೆ ಉಪದೇಶ ಮಾಡುವ ಅಧಿಕಾರವಿರುವುದಿಲ್ಲ. ಉಪದೇಶ ಮಾಡುವುದಾದರೂ ಏನನ್ನು? ಅಂತರ್ಮುಖಿಯಾಗು. ನಿನ್ನನ್ನು ನೀನು ಅರಿ. ಧರ್ಮವೆಂದರೆ ಈ ಅರಿವು. ಅದನ್ನು ವಿವರಿಸುವ ರೀತಿಗೆ ಜಿಜ್ಞಾಸೆ ಎಂದು ಹೆಸರು. ಆದರೆ ಕ್ರೈಸ್ತ ಮತದ ತಿರುಳಾಗಲಿ, ರೀತಿಯಾಗಲಿ ಅದಲ್ಲ...

ಎಂಥ ರಮ್ಯ ಮನೋಹರ ಚಿತ್ರಣ!

ಇದೇ ಸೊಲ್ಲಿನಲ್ಲಿ ಅವರು ಬೌದ್ಧಧರ್ಮವೂ ಸೇರಿದಂತೆ ಉಳಿದೆಲ್ಲ ಬಂಡಾಯ ಧರ್ಮಪಂಥಗಳೂ ಹಿಂದೂಧರ್ಮದ ಶಾಖೆಗಳೇ ಎಂದು ನಂಬಿಸಹೊರಡುತ್ತಾರೆ. ಏನಾದರೂ ವ್ಯತ್ಯಾಸಗಳು ಕಂಡರೆ, “ಅವೆಲ್ಲ ಬ್ರಿಟಿಷರ ಹುನ್ನಾರದ ಫಲ! ಮೆಕಾಲೆಯ ವಿದ್ಯಾಭ್ಯಾಸ ನೀತಿ, ಆರ್ಯರು ಹೊರಗಿನಿಂದ ಬಂದವರೆಂಬ ಸಿದ್ಧಾಂತ, ಭಾರತದ ಇತಿಹಾಸ ವ್ಯಾಖ್ಯಾನ, ಬೌದ್ಧರು, ಜೈನರು, ಸಿಕ್ಖರು, ಹಿಂದೂಗಳಲ್ಲವೆಂಬ ಸಿದ್ಧಾಂತ, ಆರ್ಯ ದ್ರಾವಿಡ ಸಿದ್ಧಾಂತ, ಮುಸ್ಲಿಮರ ಪ್ರತ್ಯೇಕತಾವಾದದ ಪೋಷಣೆ ಮೊದಲಾದ ವಿಘಟನಾತ್ಮಕ ವ್ಯಾಖ್ಯಾನ...”- ಇವೆಲ್ಲವೂ ಬ್ರಿಟಿಷರ ಅಪಪ್ರಚಾರ. ಒಟ್ಟಿನಲ್ಲಿ ‘ನಾವೆಲ್ಲ ಅಣ್ಣತಮ್ಮಂದಿರು, ಜಗಳವಾಡಿದರೂ ಅದೆಲ್ಲ ಬಾಗಿಲು ಹಾಕಿಕೊಂಡ ಮನೆಯೊಳಗೆ’ ಎಂಬ ಧಾಟಿ. ಅದಕ್ಕೆ ತಕ್ಕುದಾಗಿ ‘ಏಕಂ ಸತ್ ವಿಪ್ರಾಃ ಬಹುಧಾ ವದಂತಿ’ ಎಂಬ ವೇದೋಕ್ತಿ ಉಲ್ಲೇಖಿಸಿ ಅದೇ ಭಾರತೀಯ ಆಧ್ಯಾತ್ಮಿಕ ಪರಂಪರೆ ಎನ್ನುತ್ತಾರೆ. (‘ಸತ್ ಎಂಬುದು ಒಂದೇ, ಬ್ರಾಹ್ಮಣರು ಅದನ್ನು ಹಲವು ವಿಧಗಳಲ್ಲಿ ಹೇಳುತ್ತಾರೆ’ ಎಂಬ ಅರ್ಥದ ಉಕ್ತಿಯನ್ನು ‘ತಿಳಿದವರು ಹಲವು ವಿಧಗಳಲ್ಲಿ ಹೇಳುತ್ತಾರೆ’ ಎಂದು ಮಾರ್ಪಡಿಸುತ್ತಾರೆ ಬೇರೆ).

 

ಭೈರಪ್ಪನವರು ಹಿಂದೂಧರ್ಮದ ಧಾರ್ಮಿಕ ವೈಶಾಲ್ಯಕ್ಕೆ ಕೊಡುವ ಇನ್ನೊಂದು ಉದಾಹರಣೆ- ಸಿದ್ದಗಂಗೆ ಸ್ವಾಮಿಗಳದ್ದು: ಸಿದ್ದಗಂಗಾ ಸ್ವಾಮಿಗಳು ಸನ್ಯಾಸಿ ಧರ್ಮವಾದ ಭಿಕ್ಷಾಟನೆಯಿಂದ ದಿನಕ್ಕೆ ಮೂರು ನಾಲ್ಕು ಹಳ್ಳಿಗಳನ್ನು ಸುತ್ತಿ ದಾಸೋಹದ ಪ್ರಮಾಣವನ್ನು ಬೆಳೆಸಿದರು. ಎಲ್ಲ ಜಾತಿ ಎಲ್ಲ ಪಂಗಡಗಳ ಮಕ್ಕಳನ್ನೂ ಬೆಳೆಸಿದರು. ಮುಸಲ್ಮಾನ ಹುಡುಗರನ್ನೂ ಅಲ್ಲಿ ನೋಡಿದ್ದೇನೆ. ಯಾರಿಗೂ ಲಿಂಗಧಾರಣೆ ಮಾಡಿಲ್ಲ.

ತುಮಕೂರಿನ ಮಠದ ಜಾತ್ಯತೀತ ಅನ್ನ/ ಜ್ಞಾನದಾಸೋಹದ ಬಗ್ಗೆ ಜಗತ್ತಿಗೇ ಗೊತ್ತಿದೆ. ಆದರೆ ಭೈರಪ್ಪನವರ ಈ ಉಲ್ಲೇಖದ ಹಿಂದೆ ಕಳ್ಳ ಜಾಣತನದ ಘಾಟು ಹೊಡೆಯುತ್ತಿಲ್ಲವೇ? ಕರ್ನಾಟಕದಲ್ಲೋ, ಭಾರತದಲ್ಲೋ ಈ ಪರಂಪರೆಯುಳ್ಳ ಒಂದಾದರೂ ಬ್ರಾಹ್ಮಣಮಠವಿದೆಯೇ? ಭೈರಪ್ಪನವರು, ಮುಸಲ್ಮಾನರು ಬೇಡ, ಯಾವುದೇ ಬ್ರಾಹ್ಮಣೇತರರನ್ನು ಸಮಾನವಾಗಿ ಕೂರಿಸಿಕೊಳ್ಳುವ ಅಂಥ ಒಂದಾದರೂ ಬ್ರಾಹ್ಮಣಮಠದ ನಿದರ್ಶನ ಕೊಡಬಲ್ಲರೇ?

ಅವರು ಇಲ್ಲಿಗೂ ನಿಲ್ಲುವುದಿಲ್ಲ. ಇವರ ಹಿಂದೂತ್ವದ ತತ್ವಕ್ಕೇ ಬಲಿಯಾಗಿ ಪ್ರಾಣ ತೆತ್ತ ಗಾಂಧೀಜಿ; ಭಾರತವನ್ನು ‘ಅಸ್ಪೃಶ್ಯ ನರಕ’ ಎಂದು ಕರೆದು ‘ಪೂಜಾರಿ, ಪುರೋಹಿತರನ್ನು ಒದ್ದೋಡಿಸು’ ಎಂದು ಕರೆ ನೀಡಿದ ವಿವೇಕಾನಂದ- ಇವರೆಲ್ಲರನ್ನೂ ನಿಗೂಢವಾಗಿ ಉಲ್ಲೇಖಿಸುತ್ತ ಭೈರಪ್ಪ, ತಮ್ಮ ತತ್ವದ ಪರವಾಗಿ ನೊಂದಾಯಿಸಿಕೊಂಡು ಬಿಡುತ್ತಾರೆ! ಇದಕ್ಕಿಂತ ದೊಡ್ಡ ನಾಚಿಕೆಗೇಡಿನ ಮೋಸ ಎಂದರೆ ಒಂದು ಕಾಲದಲ್ಲಿ ಬುದ್ಧ ಹಾಗೂ ಆತನ ಧರ್ಮವನ್ನು ಹೀಗಳೆಯಲೆಂದೇ ‘ಸಾರ್ಥ’ ಕಾದಂಬರಿ ಬರೆದ ಭೈರಪ್ಪನವರೇ ಇಂದು ಬೌದ್ಧಧರ್ಮವನ್ನು ಬೋಧಿಸಿದ ಬುದ್ಧನು ಪ್ರವಾದಿಯಲ್ಲ, ಋಷಿ. ಉಪನಿಷತ್ ಯುಗದ ಧರ್ಮಜಿಜ್ಞಾಸೆಗೆ ತೊಡಗಿದ ಮಹರ್ಷಿ ಎಂದು ಅವನನ್ನೂ ತಮ್ಮ ಪಕ್ಷಕ್ಕೆ ಮತಾಂತರ ಮಾಡಿಕೊಂಡುಬಿಟ್ಟಿದ್ದಾರೆ!....

(ನಾಳಿನ ಸಂಚಿಕೆಗೆ)