ದಯವಿಟ್ಟು ಹೇಳಿ, ಮತಾಂತರ ಯಾಕೆ ತಪ್ಪು? --ನಿನ್ನೆಯ ಸಂಚಿಕೆಯಿಂದ

why-conversion-is-wrong-please-tell-me-n-s-shankar-part-2

ದಯವಿಟ್ಟು ಹೇಳಿ, ಮತಾಂತರ ಯಾಕೆ ತಪ್ಪು? --ನಿನ್ನೆಯ ಸಂಚಿಕೆಯಿಂದ


ಮತಾಂತರದ ಬಗ್ಗೆ ನಾನು ನಿನ್ನೆ ಬರೆದಿದ್ದರ ಮುಂದುವರೆದ- ಅಂತಿಮ ಭಾಗ ಇಲ್ಲಿದೆ-
-------------------------------


ದಯವಿಟ್ಟು ಹೇಳಿ, ಮತಾಂತರ ಯಾಕೆ ತಪ್ಪು?
-------------------------------------
ನಿನ್ನೆಯ ಸಂಚಿಕೆಯಿಂದ

ತುಸುವಾದರೂ ಇತಿಹಾಸ ಓದಿದವರೆಲ್ಲರಿಗೂ ಗೊತ್ತು- ಬೌದ್ಧ ತಾತ್ವಿಕತೆ ಹುಟ್ಟಿದ್ದೇ ಹಿಂದೂ ಸಮಾಜದ ವಿಷಮಯ ಅಸಮಾನತೆ ಹಾಗೂ ಅಮಾನವೀಯತೆಗೆ ಸೆಡ್ಡು ಹೊಡೆದು. ಅಂಬೇಡ್ಕರ್ ಬರೆಯುತ್ತಾರೆ- `ಮುಸ್ಲಿಂ ದಾಳಿಗಳಿಗೆ ಮುಂಚಿನ ಭಾರತದ ಇತಿಹಾಸವೆಂದರೆ ಬೌದ್ಧಧರ್ಮ ಹಾಗೂ ಬ್ರಾಹ್ಮಣಧರ್ಮಗಳ ನಡುವಣ ಮಾರಕ ಕಾಳಗದ ಚರಿತ್ರೆಯೇ...' ಮೌರ್ಯರ ಆಳ್ವಿಕೆಯಲ್ಲಿ ರಾಜಧರ್ಮವಾಗಿ ಮನ್ನಣೆ ಪಡೆದು ಆಳಿದ ಬೌದ್ಧ ಉಚ್ಛಾçಯದ ಕಾಲದಲ್ಲಿ ``ಬ್ರಾಹ್ಮಣರು ನಿಮ್ನ ವರ್ಗವಾಗಿ ಜೀವಿಸಿದ್ದರು'' ಎಂಬುದನ್ನೂ ಅಂಬೇಡ್ಕರ್ ಸಂಶೋಧನೆ ದಾಖಲಿಸಿದೆ. (ವಿವರಗಳಿಗೆ: ಅಂಬೇಡ್ಕರರ ಬ್ರಾಹ್ಮಣಧರ್ಮದ ದಿಗ್ವಿಜಯ. ಪ್ರ: ಆದಿಮ ಪ್ರಕಾಶನ, ಕೋಲಾರ) ಆ ಕಾಲದಲ್ಲಿ ``ಸಾಮ್ರಾಟ್ ಅಶೋಕ, ಬೌದ್ಧಧರ್ಮವನ್ನು ರಾಜಧರ್ಮವಾಗಿ ಘೋಷಿಸಿದ. ಮತ್ತು ಬ್ರಾಹ್ಮಣಧರ್ಮದ ಜೀವಾಳವಾದ ಎಲ್ಲ ಬಗೆಯ ಪ್ರಾಣಿಬಲಿಯ ಯಜ್ಞ ಯಾಗಾದಿಗಳನ್ನು ನಿಷೇಧಿಸಿದ. ಬ್ರಾಹ್ಮಣರು ರಾಜಾಶ್ರಯ ಮಾತ್ರವಲ್ಲದೆ, ಯಜ್ಞಗಳನ್ನು ಮಾಡಿ ತಮ್ಮ ಜೀವನಕ್ಕಾಗಿ ಪಡೆಯುತ್ತಿದ್ದ ದಕ್ಷಿಣೆಯನ್ನೂ ಕಳೆದುಕೊಂಡಿದ್ದರಿಂದ ಅವರಿಗೆ ವೃತ್ತಿನಷ್ಟವೂ ಆದಂತಾಯಿತು...''


ಮೌರ್ಯರ ಆಳ್ವಿಕೆಯ 140 ವರ್ಷ ಕಾಲ ಬೌದ್ಧಪ್ರಾಬಲ್ಯದ ವಿರುದ್ಧ ಕುದಿಯುತ್ತಿದ್ದ ದ್ವಿಜರು ಬಂಡಾಯವೆದ್ದಿದ್ದು ಕ್ರಿಸ್ತಪೂರ್ವ (185)೧೮೫ರಲ್ಲಿ. ಆ ವರ್ಷ, ಬ್ರಾಹ್ಮಣನು ಶಸ್ತç ಹಿಡಿಯಬಾರದೆಂಬ ಆರ್ಯ ಕಟ್ಟಳೆಯನ್ನೂ ಮೀರಿ, ಶುಂಗಗೋತ್ರದ ಸಾಮವೇದಿ ಬ್ರಾಹ್ಮಣನಾಗಿದ್ದ ಪುಷ್ಯಮಿತ್ರನು ತಾನೇ ಕತ್ತಿ ಹಿರಿದು ಕೊನೆಯ ಮೌರ್ಯ ದೊರೆಯನ್ನು ಕೊಂದು ತಾನೇ ರಾಜನೂ ಆದ. (ಅದಕ್ಕೇ ಪುಷ್ಯಮಿತ್ರನನ್ನು ಕವಿ ಬಾಣ `ಅನಾರ್ಯ' ಎಂದೇ ಬಣ್ಣಿಸುತ್ತಾನೆ.) ಜಾತಿ ಶ್ರೇಣೀಕರಣವು ಹಿಂದೂ ಸಮಾಜದ ಕಟ್ಟಪ್ಪಣೆಯಾಗಿ ಜಾರಿಯಾದದ್ದು ಇವನ ಕಾಲದಲ್ಲೇ; ಸುಮತಿ ಭಾರ್ಗವ ವಿರಚಿತ ಕಾನೂನು ಸಂಹಿತೆ ಮನುಸ್ಮೃತಿಯ ಮೂಲಕ. ಆದ್ದರಿಂದ ಪುಷ್ಯಮಿತ್ರನೇ ಭಾರತದಲ್ಲಿ ಜಾತಿಪದ್ಧತಿಯನ್ನು ಈಗಿನ ಸಾಂಸ್ಥಿಕ ಸ್ವರೂಪದಲ್ಲಿ ಉದ್ಘಾಟಿಸಿದವನು ಎನ್ನಬಹುದು.
ಅವನ ಕ್ರಾಂತಿಯ ಒಟ್ಟು ಉದ್ದೇಶವನ್ನು ಅಂಬೇಡ್ಕರ್ ಸಂಗ್ರಹಿಸುವುದು ಹೀಗೆ-
``ರಾಜಧರ್ಮವಾಗಿದ್ದ ಬೌದ್ಧಧರ್ಮವನ್ನು ನಾಶ ಮಾಡುವುದು, ಮತ್ತು ಬ್ರಾಹ್ಮಣರನ್ನೇ ಭಾರತದ ಸಾರ್ವಭೌಮ ದೊರೆಗಳನ್ನಾಗಿ ಮಾಡಿ ಆ ರಾಜಕೀಯ ಅಧಿಕಾರದ ಮೂಲಕ ಬೌದ್ಧಧರ್ಮದ ವಿರುದ್ಧ ಬ್ರಾಹ್ಮಣಧರ್ಮದ ವಿಜಯ ಸಾಧಿಸುವುದು- ಇವೇ ಪುಷ್ಯಮಿತ್ರನ ರಾಜಹತ್ಯೆಯ ಉದ್ದೇಶವಾಗಿತ್ತು...''
ಈಗ ಭೈರಪ್ಪನವರು ಬುದ್ಧನನ್ನು ಉಪನಿಷತ್ ಮಹರ್ಷಿ ಎಂದು ಕರೆಯುತ್ತಿದ್ದಾರೆ! ಕಾರಣ ಸ್ಪಷ್ಟ: ಭೈರಪ್ಪನವರಿಗೆ ನೆಪಮಾತ್ರಕ್ಕೂ ಸತ್ಯಶೋಧನೆಯ ಉದ್ದೇಶವಿಲ್ಲ. ಅವರಿಗೇನಾದರೂ ಸತ್ಯಾನ್ವೇಷಣೆಯ ಕಾಳಜಿ ಇದ್ದಿದ್ದೇ ಆದರೆ, ಇಸ್ಲಾಂ ಮತ್ತು ಕ್ರೆöÊಸ್ತ ಪಂಥಗಳಲ್ಲಿ ಮತಪ್ರಚಾರ ಸಂಸ್ಕöÈತಿ ಬಂದಿದ್ದೇ ಸಾಮ್ರಾಜ್ಯವಾದಿ ವಿಸ್ತರಣೆಯ ಅಂಗವಾಗಿ ಎಂದು ತಿಳಿಯುತ್ತಿತ್ತು. ಮತ್ತು ಆ ಧರ್ಮಗಳು ಪ್ರದರ್ಶಿಸಿದ ಹಿಂಸೆ, ಕ್ರೌರ್ಯ ಮತ್ತು ಬಲಾತ್ಕಾರಗಳೆಲ್ಲವೂ ಮೂಲದಲ್ಲಿ ಸಾಮ್ರಾಜ್ಯವಾದಿ ಆಕ್ರಮಣದ ಲಕ್ಷಣಗಳೇ ಹೊರತು ಆಯಾ ಧರ್ಮಗಳ ಮೂಲ ಗುಣವಾಗಿರಬೇಕಿಲ್ಲ ಎಂಬುದು ಹೊಳೆಯುತ್ತಿತ್ತು. ಮುಂದುವರೆದು, ಇಂಥದೇ ಸಾಮ್ರಾಜ್ಯವಾದಿ ಅವಕಾಶ ಸಿಕ್ಕಿದ್ದಿದ್ದರೆ, ತನ್ನ ಆಕ್ರಮಣಶೀಲ ಕ್ರೌರ್ಯದಲ್ಲಿ ಹಿಂದೂಧರ್ಮವೂ ಉಳಿದೆಲ್ಲರಿಗೆ ಸರಿಸಾಟಿಯಾಗಿರುತ್ತಿತ್ತು ಎಂಬುದು ಬೋಧೆಯಾಗುತ್ತಿತ್ತು. ಯಾಕೆಂದರೆ ಹಿಂದೂ ಕ್ರೌರ್ಯದ ಸ್ವರೂಪಕ್ಕೆ ಪುಷ್ಯಮಿತ್ರನ ಕ್ರಾಂತಿಯೇ ಪ್ರಮಾಣ ಒದಗಿಸಿದೆ. ಅಂಬೇಡ್ಕರ್ ಬರೆಯುತ್ತಾರೆ-
``...ಪುಷ್ಯಮಿತ್ರನು ಪಟ್ಟಕ್ಕೆ ಬಂದ ಕೂಡಲೇ ಬೌದ್ಧರು ಹಾಗೂ ಬೌದ್ಧಧರ್ಮದ ವಿರುದ್ಧ ಅತ್ಯುಗ್ರ ಹಿಂಸಾತ್ಮಕ ಆಂದೋಲನವನ್ನೇ ಆರಂಭಿಸಿದ... ಬೌದ್ಧಧರ್ಮದ ವಿರುದ್ಧ ಪುಷ್ಯಮಿತ್ರನ ಪೀಡನೆ ಎಷ್ಟು ನಿರ್ದಯವಾಗಿತ್ತೆನ್ನಲು ಬೌದ್ಧ ಭಿಕ್ಷುಗಳ ವಿರುದ್ಧ ಆತ ಹೊರಡಿಸಿದ ಕಟ್ಟಪ್ಪಣೆಯೇ ಸಾಕ್ಷಿಯಾಗಿದೆ. ಪ್ರತಿಯೊಬ್ಬ ಭಿಕ್ಷುವಿನ ತಲೆಗೆ ಆತ ನೂರು ಚಿನ್ನದ ನಾಣ್ಯಗಳ ಬೆಲೆ ಕಟ್ಟಿದ್ದ...!''
ಚರಿತ್ರೆಯ ಚಕ್ರ ಉರುಳಿದೆ. ಆ ಕಾಲದ ಹಿಂಸಾತ್ಮಕ ಮತಾಂತರ ಇಂದು ಸಾಧ್ಯವಿಲ್ಲ ಎಂಬುದನ್ನು ಭೈರಪ್ಪನವರೂ ಪರೋಕ್ಷವಾಗಿ ಒಪುö್ಪತ್ತಾರೆ. ಅವರು `ಚರ್ಚು ತನ್ನ ಮತ ವಿಸ್ತರಣೆಯ ವಿಧಾನದಲ್ಲಿ ಕ್ರೌರ್ಯವನ್ನು ಕಡಿಮೆ ಮಾಡಿಕೊಂಡಿದ್ದಕ್ಕೆ ಪ್ರಮುಖ ಕಾರಣವೆಂದರೆ ಯೂರೋಪಿನಲ್ಲಿ ನವೋದಯ ಉಂಟಾಗಿ ವಿಜ್ಞಾನ ತಂತ್ರಜ್ಞಾನಗಳ ಬೆಳವಣಿಗೆಯಾಗಿ ಯೂರೋಪಿನ ಹಲವು ರಾಜ್ಯಗಳು ಹೊಸ ಭೂಮಿಗಳನ್ನು ಆಕ್ರಮಿಸಿ ಸಾಮ್ರಾಜ್ಯ ಸ್ಥಾಪನೆ ಮಾಡತೊಡಗಿ ಧರ್ಮವೆಂದರೆ ಈಚಿನ ಧರ್ಮವೊಂದೇ ಅಲ್ಲ, ಪ್ರಪಂಚದಲ್ಲಿ ಬೇರೆ ಬೇರೆ ನಂಬಿಕೆಗಳಿವೆ ಎಂಬ ತಿಳುವಳಿಕೆಯು ಮೇಲುವರ್ಗದವರಲ್ಲಿ ಉಂಟಾದದ್ದು' ಎಂಬ ಗೊಂದಲಮಯ ನಿರ್ಣಯ ಕೊಟ್ಟರೂ, ವಿಷಯ ಅದಲ್ಲ. ಯಾಕೆಂದರೆ ಇಂದು ವಿಶ್ವ ರಂಗದಲ್ಲಿ ರಾಜಕೀಯ ಸಾಮ್ರಾಜ್ಯಶಾಹಿಗೇ ಅವಕಾಶವಿಲ್ಲ.
ಇಷ್ಟು ಗೊತ್ತಿದ್ದೂ ಭೈರಪ್ಪನವರು ಮತಾಂತರದ ಕ್ರೌರ್ಯ ಹಿಂಸೆಗಳ ಇತಿಹಾಸವನ್ನು ಅಷ್ಟು ಸವಿಸ್ತಾರವಾಗಿ ಯಾಕೆ ಕೆದಕಿಕೊಂಡು ಕೂತಿದ್ದಾರೆ?
ಗೆಳೆಯ ಕೋಟಿಗಾನಹಳ್ಳಿ ರಾಮಯ್ಯ ಹಿಂದೊಮ್ಮೆ ಹೇಳಿದ್ದರು- ಪ್ರಾಣಿಗಳು ತಮ್ಮ ಗಾಯಗಳನ್ನು ನೆಕ್ಕಿಕೊಳ್ಳುತ್ತವೆ. ಅವುಗಳ ಜೊಲ್ಲಿನಲ್ಲೇ ದೇವರು ಔಷಧಿ ಇಟ್ಟಿರುವುದರಿಂದ ನೆಕ್ಕಿಕೊಂಡೇ ವಾಸಿ ಮಾಡಿಕೊಳ್ಳುತ್ತವೆ. ಆದರೆ ಮನುಷ್ಯ ತನ್ನ ಹಳೇ ಗಾಯವನ್ನು ನೆಕ್ಕಿಕೊಂಡ ಕೂಡಲೇ ಒಸರುವುದು ನಂಜು, ವಿಷ ಮಾತ್ರ.
*
ಭೈರಪ್ಪನವರು ಕೇಳಿಕೊಳ್ಳದಿದ್ದರೇನಂತೆ? ನಾವೇ ಕೇಳೋಣ: ಬೇರೆ ಧರ್ಮಗಳ ಹಾಗೆ ಹಿಂದೂಧರ್ಮ ಯಾಕೆ ಸಾಮ್ರಾಜ್ಯವಾದಿ ಧರ್ಮವಾಗಿ ಬೆಳೆಯಲೇ ಇಲ್ಲ? ಆಮಿಷವೋ ಆಕರ್ಷಣೆಯೋ, ಇತರೆ ಧರ್ಮಗಳಿಂದ ಅನುಯಾಯಿಗಳನ್ನು ಸಂಪಾದಿಸಬಲ್ಲ ಮಿಷನರಿ ಧರ್ಮ ಯಾಕಾಗಲಿಲ್ಲ?
ಮೊದಲ ಕಾರಣ- ಇಲ್ಲಿನ ಶ್ರೇಣೀಕೃತ ಮೇಲು ಕೀಳು. ಬೇರೆ ಧರ್ಮದವರನ್ನು ಒಂದು ಪಕ್ಷ ಸೆಳೆಯುವುದಾದರೂ, ಯಾವ ಜಾತಿಗೆ ಸೇರಿಸಿಕೊಳ್ಳುವುದು?... ಈ ಅಸಮಾನತೆ ಒಂದೆಡೆ ಯಾವ ಜಾತಿವರ್ಗವೂ ಇನ್ನೊಂದರ ವಿರುದ್ಧ ಬಂಡಾಯದ ಹಾದಿ ಹಿಡಿಯದಂತೆ ಸಮಾಜದ ಉಸಿರುಗಟ್ಟಿಸಿದ್ದರೆ, ಇನ್ನೊಂದು ಕಡೆ- ಅಂಬೇಡ್ಕರ್ ಹೇಳುವಂತೆ- ``ವಿಷಪ್ರಾಶನದ ಮಾರಣಾಂತಿಕ ಪರಿಣಾಮಗಳು ವಿಷ ಕೊಡುವವನ ಮೂಲ ಉದ್ದೇಶಗಳಿಗೆ ಮಾತ್ರ ಸೀಮಿತವಾಗಿರಲು ಎಂದೂ ಸಾಧ್ಯವಿಲ್ಲ... ಬ್ರಾಹ್ಮಣೇತರರನ್ನು ನಿಶ್ಚೇತನಗೊಳಿಸುವುದು ಬ್ರಾಹ್ಮಣಧರ್ಮದ ಯೋಜನೆಯಾಗಿತ್ತು.... ಆದರೆ ಜಾತಿವಿಷದ ಪರಿಣಾಮ ಎಂಥದೆAದರೆ, ಜನರು ಬ್ರಾಹ್ಮಣಧರ್ಮದ ವಿರುದ್ಧವಷ್ಟೇ ಅಲ್ಲ, ವಿದೇಶೀಯರ ವಿರುದ್ಧವೂ ನಿಷ್ಕಿçಯರಾದರು...'' ಒಟ್ಟಾರೆ ಜಾತಿ ಕಟ್ಟಳೆ ಭಾರತೀಯ ಸಮಾಜದ ಕರ್ತÈತ್ವ, ಉಲ್ಲಾಸ, ಸೋದರತ್ವಗಳನ್ನೇ ಶಾಶ್ವತವಾಗಿ ಕೊಂದುಹಾಕಿತು. ಹೀಗೆ ತನ್ನೊಳಗೇ ಮುರುಟುತ್ತ, ಕೊಳೆಯುತ್ತ ಹೋಗುವ ಜಡ ವ್ಯವಸ್ಥೆಯಾಗಿಹೋದ ಹಿಂದೂಧರ್ಮ, ಮಿಷನರಿ ಧರ್ಮ ಆಗಲು ಎಲ್ಲಿ ಸಾಧ್ಯವಿತ್ತು?
ಮೊದಲಲ್ಲಿ ಹೇಳಿದ ದೌರ್ಜನ್ಯದ ಪ್ರಕರಣಗಳಲ್ಲಿ ಯಾವ ಬ್ರಾಹ್ಮಣರ ಪಾತ್ರವೂ ಇರಲಿಲ್ಲ. ನಿಜ. ಆದರೆ ಆ ಪ್ರಸಂಗಗಳಲ್ಲಿ ದೌರ್ಜನ್ಯ, ಕೊಲೆ ಅತ್ಯಾಚಾರಗಳಿಗೆ ನಿರಾತಂಕವಾಗಿ ಮುಂದಾದವರೆಲ್ಲರೂ ಮನುಸ್ಮöÈತಿಯ ಪರಂಪರೆಯನ್ನು ಶತಮಾನಗಳ ಕಾಲ ಒಪ್ಪಿ ಪಾಲಿಸುತ್ತ ಬಂದವರೇ.
ಇಸ್ಲಾAನಲ್ಲಾಗಲೀ, ಕ್ರೆöÊಸ್ತಧರ್ಮದಲ್ಲಾಗಲೀ, ಅಥವಾ ಜಗತ್ತಿನ ಇನ್ನಾವುದೇ ಧರ್ಮದಲ್ಲಿ- ಆ ಧರ್ಮದ ಅನುಯಾಯಿಗಳಲ್ಲಿ ಒಳ ತಾರತಮ್ಯವಿಲ್ಲ. ಆದರೆ ಜಾತಿ ಎಂಬ ಮಲವನ್ನು ತಲೆ ಮೇಲೆ ಹೊತ್ತ ಹಿಂದೂ ಸಮಾಜ, ಆ ಕಾರಣಕ್ಕೇ ತಾನೂ ಒಡೆದು, ಅನ್ಯಾಕ್ರಮಣಕ್ಕೆ ಸುಲಭವಾಗಿ ಪಕ್ಕಾಗುವ ದುರ್ಬಲ ಸಮಾಜವಾಗಿಯೇ ಉಳಿದುಬಂತು.
ಈಗ ಭೈರಪ್ಪನವರು ಮತಾಂತರವನ್ನು ಪಿಡುಗು ಎನ್ನುತ್ತಾರೆ. ರಾಮಕೃಷ್ಣ ಆಶ್ರಮದ ಸ್ವಾಮೀಜಿಯೊಬ್ಬರು ಮತಾಂತರವೆನ್ನುವುದು ದೇಶದ್ರೋಹದ ಕೆಲಸ; ಒಬ್ಬ ಮತಾಂತರಗೊAಡರೆ, ದೇಶದ್ರೋಹಿಯೊಬ್ಬ ಹುಟ್ಟಿದಂತೆ ಎಂದು ಅಪ್ಪಣೆ ಕೊಡಿಸಿದರು. ಇನ್ನು ಇದ್ದಬದ್ದ ಮಠಾಧೀಶರೆಲ್ಲ ಸೇರಿ ಮತಾಂತರ ನಿಷೇಧ ಕಾನೂನು ತನ್ನಿ ಎಂದು ರಾಜ್ಯಪಾಲರಿಗೆ ಮನವಿ ಕೊಟ್ಟರು.
ಸರಿ. ಆದರೆ ಇವರು ಯಾರೂ ಮತಾಂತರ ಯಾಕೆ ತಪುö್ಪ ಎಂದು ಬಿಡಿಸಿ ಹೇಳುವ ಗೋಜಿಗೇ ಹೋಗಿಲ್ಲ! ಇವರು ಹಾಕುತ್ತಿರುವ ಬೊಬ್ಬೆ ನೋಡಿದರೆ ಇಡೀ ಭಾರತವೇ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳ ಆಮಿಷಕ್ಕೆ ಬಲಿಯಾಗಿ ಧರ್ಮಾಂತರ ಮಾಡಲು ತುದಿಗಾಲಲ್ಲಿ ನಿಂತಿದೆಯೇನೋ ಅಂದುಕೊಳ್ಳಬೇಕು! ನಮ್ಮ ದೇಶದಲ್ಲಿ ಬೆಂಡಿಗೇರಿ, ಕಂಬಾಲಪಲ್ಲಿಗಳು ಪ್ರತಿನಿತ್ಯದ ವಿದ್ಯಮಾನಗಳಾದರೂ ನಮ್ಮ ಜನ ತಲತಲಾಂತರದ ನಿರಂತರ ಅವಮಾನವನ್ನು ಸಹಿಸಿಕೊಂಡಾದರೂ ಸ್ವಧರ್ಮದಲ್ಲಿ ಉಳಿದು ಬಂದಿದ್ದಾರೆ. ಅಂಬೇಡ್ಕರ್ ``ಭಾರತಕ್ಕೆ ಸ್ವರಾಜ್ಯ ಎಷ್ಟು ಅಗತ್ಯವೋ, ಅಸ್ಪöÈಶ್ಯರಿಗೆ ಮತಾಂತರ ಅಷ್ಟೇ ಅಗತ್ಯ'' ಎಂದು ಬೋಧಿಸಿದಾಗ್ಯೂ, ಇಲ್ಲಿನ ದಲಿತ ವರ್ಗಗಳು ವಿಚಲಿತರಾಗಲಿಲ್ಲ. ಇಲ್ಲದಿದ್ದರೆ ಇಷ್ಟು ಕಾಲದಲ್ಲಿ ಅರ್ಧಕ್ಕರ್ಧ ಜನ ಹಿಂದೂಧರ್ಮ ತೊರೆದು ಹೋಗಿರಬೇಕಿತ್ತು. ಇದುವರೆಗೆ ಜಾತಿ ಅಸಮಾನತೆಯ ಬಗ್ಗೆ ಅಪ್ಪಿತಪ್ಪಿಯೂ ಚಕಾರ ಎತ್ತದ ಧಾರ್ಮಿಕ ಮುಖಂಡರು ಹಾಗೂ ಹಿಂದೂತ್ವವಾದಿಗಳು ಈಗ ಮತಾಂತರದ ವಿರುದ್ಧ ಹುಯಿಲೆಬ್ಬಿಸುತ್ತಾರೆಂದರೆ ಏನರ್ಥ? ಜಾತಿ, ಅಸ್ಪöÈಶ್ಯತೆಯಂಥ ಅನ್ಯಾಯಗಳು ನಿರಂತರವಾಗಿ, ಶಾಶ್ವತವಾಗಿ ಉಳಿದಿರಬೇಕು ಎಂಬುದೇ ಅವರ ಒಳಾಸೆ ಎಂದರ್ಥ!....
ಹಾಗೆ ನೋಡಿದರೆ, ಭಾರತದ ಧಾರ್ಮಿಕ ಚರಿತ್ರೆಯೇ ಮತಾಂತರಗಳ ಚರಿತ್ರೆ. ಇಲ್ಲಿ ಹೊಸ ಹೊಸದಾಗಿ ಹುಟ್ಟಿದ ಎಲ್ಲ ಧಾರ್ಮಿಕ ಪಂಥಗಳೂ- ಬೌದ್ಧ, ಜೈನ, ಸಿಖ್, ವೀರಶೈವ... ಜನ್ಮ ತಳೆದಿದ್ದೇ ಮತಾಂತರಗಳ ಮೂಲಕ. ಅಂಬೇಡ್ಕರ್- `ಹಿಂದೂ ಆಗಿ ಹುಟ್ಟಿದ್ದೇನೆ. ಆದರೆ ಹಿಂದೂ ಆಗಿ ಸಾಯಲಾರೆ' ಎಂದು ಘೋಷಿಸಿಯೇ ಸಹಸ್ರಾರು ಅನುಯಾಯಿಗಳೊಂದಿಗೆ ಬೌದ್ಧಧರ್ಮವನ್ನು ಅಪ್ಪಿಕೊಂಡರು. ಆದರೆ ಈ ಎಲ್ಲ ಧರ್ಮಪಂಥಗಳೂ ಹುಟ್ಟಿದ್ದು ಹಿಂದೂ ಸಮಾಜದಲ್ಲಿ ಹಾಸುಹೊಕ್ಕಾದ ಜಾತಿ ತಾರತಮ್ಯಕ್ಕೆ ಪ್ರತಿಭಟನೆಯಾಗಿ ಎಂಬುದು ಭೈರಪ್ಪನವರ ಗಂಟಲಲ್ಲಿ ಇಳಿಯಲಿಕ್ಕಿಲ್ಲ! ಮತಾಂತರ ದೇಶದ್ರೋಹ ಅನ್ನುವುದಾದರೆ- ಮಹಾವೀರ, ಬುದ್ಧ, ಬಸವಣ್ಣ, ಅಂಬೇಡ್ಕರ್- ಇವರೆಲ್ಲರೂ ಮಹಾನ್ ದೇಶದ್ರೋಹಿಗಳೇ!
ಆದರೆ ಅವರೆಲ್ಲ ಯಾಕೆ ಹೀಗೆ ``ದೇಶದ್ರೋಹಿ''ಗಳಾದರು? ಉತ್ತರವಾಗಿ ಬೌದ್ಧಧರ್ಮವನ್ನು ಅಪ್ಪಿಕೊಳ್ಳುವ ಹೊಸ್ತಿಲಲ್ಲಿ ಅಂಬೇಡ್ಕರ್ (ತಮ್ಮ ಸುಪ್ರಸಿದ್ಧ ಮತಾಂತರ ಯಾಕೆ? ಎಂಬ ವ್ಯಾಖ್ಯಾನದಲ್ಲಿ) ಮಾಡಿದ ವಿಶ್ಲೇಷಣೆಯನ್ನು ಗಮನಿಸಬೇಕು:
``ನೀವು (ಅಸ್ಪöÈಶ್ಯರು) ಸವರ್ಣೀಯರೊಡನೆ ಸರಿಸಮಾನವಾಗಿ ವರ್ತಿಸಿದ ಮಾತ್ರಕ್ಕೇ ಅವರಿಗೆ ಅವಮಾನವಾಗುತ್ತದೆ. ಅಸ್ಪöÈಶ್ಯತೆಯೆನ್ನುವುದು ಅಲ್ಪಕಾಲಿಕವಾದ ಅಥವಾ ತಾತ್ಕಾಲಿಕವಾದ ಸ್ಥಿತಿಯಲ್ಲ, ಶಾಶ್ವತವಾದದ್ದು. ನೇರವಾಗಿ ಹೇಳುವುದಾದರೆ, ಹಿಂದೂಗಳು ಮತ್ತು ಅಸ್ಪöÈಶ್ಯರ ನಡುವಣ ಸಂಘರ್ಷವೇ ಶಾಶ್ವತವಾದದ್ದು. ಹಿಂದೂ ಸವರ್ಣೀಯರ ನಂಬಿಕೆಯAತೆ ನಿಮ್ಮನ್ನು ಸಮಾಜದ ಕನಿಷ್ಠತಮ ಸ್ಥಾನದಲ್ಲಿ ಇರಿಸಿರುವ ಧರ್ಮವೇ ನಿರಂತರವಾದದ್ದು. ಆ ಕಾರಣ, ಈ ಸಂಘರ್ಷವೂ ನಿರಂತರವಾದದ್ದು. ಇದರಲ್ಲಿ ಕಾಲ, ಸಂದರ್ಭಕ್ಕನುಗುಣವಾದ ಯಾವ ಮಾರ್ಪಾಡೂ ಸಾಧ್ಯವಿಲ್ಲ. ಇಂದು ನೀವು ಅತ್ಯಂತ ಕೆಳಸ್ಥಾನದಲ್ಲಿದ್ದೀರಿ ಮತ್ತು ಎಂದೆAದಿಗೂ ಅದೇ ಕೆಳಸ್ಥಾನದಲ್ಲೇ ಉಳಿಯುತ್ತೀರಿ. ಅಂದರೆ, ಹಿಂದೂಗಳು- ಅಸ್ಪöÈಶ್ಯರ ಸಂಘರ್ಷವೂ ಅವಿರತವಾಗಿ ಉಳಿದೇ ಉಳಿಯುತ್ತದೆ...
``...ಹಿಂದೂಧರ್ಮದಲ್ಲಿ ವ್ಯಕ್ತಿಗೆ ಯಾವುದೇ ಸ್ಥಾನವಿಲ್ಲ. ಹಿಂದೂಧರ್ಮ ರಚನೆಗೆ ವರ್ಗ ಕಲ್ಪನೆಯೇ ಆಧಾರ. ಒಬ್ಬ ವ್ಯಕ್ತಿ ಇನ್ನೊಬ್ಬನೊಡನೆ ಹೇಗೆ ವರ್ತಿಸಬೇಕೆಂದು ಹಿಂದೂಧರ್ಮ ಹೇಳಿಕೊಡುವುದಿಲ್ಲ.... ಒಬ್ಬ ವ್ಯಕ್ತಿಯ ಉನ್ನತಿಗೆ ಮೂರು ಅಂಶಗಳು ಬೇಕು- ಸಹಾನುಭೂತಿ, ಸಮಾನತೆ ಮತ್ತು ಸ್ವಾತಂತ್ರ÷್ಯ. ಈ ಮೂರರಲ್ಲಿ ಯಾವುದಾದರೂ ಒಂದು ಹಿಂದೂಧರ್ಮದಲ್ಲಿ ಸಿಕ್ಕುವುದೆಂದು ನಿಮ್ಮ ಅನುಭವದಿಂದ ಹೇಳಬಲ್ಲಿರಾ?.....''
ಅಂಬೇಡ್ಕರ್ ಅಂದು ಎತ್ತಿದ ಪ್ರಶ್ನೆಗಳ ಗಹನತೆ ಮತ್ತು ಮಹತ್ವ ಇಂದಿಗೂ ತಗ್ಗಿಲ್ಲ ಅನ್ನುವುದರಲ್ಲೇ ಹಿಂದೂ ಸಮಾಜದ ನಿರಂತರ ದುರಂತದ ಬೇರುಗಳಿವೆ. ಅದಕ್ಕೇ ಮತ್ತೆ ಕೇಳುತ್ತೇನೆ- ಭಾರತ ಸಂವಿಧಾನವೇ ಮುಕ್ತ ಧಾರ್ಮಿಕ ಸ್ವಾತಂತ್ರ÷್ಯ ನೀಡಿರುವಾಗ, ಮತಾಂತರವನ್ನು ಯಾವ ಆಧಾರದ ಮೇಲೆ ತಪುö್ಪ ಅನ್ನುತ್ತೀರಿ? ದಯವಿಟ್ಟು ವಿವರಿಸಿ.
ಆಗಲಿ. ವಾದಕ್ಕೆ ಮತಾಂತರ ತಪುö್ಪ ಎಂದೇ ಭಾವಿಸೋಣ. ಭೈರಪ್ಪನವರು ಯಾವ ಅಂಕಿ ಅಂಶಗಳ ಹಂಗೂ ಇಲ್ಲದೆ ದಿನಕ್ಕೆ ಐದು ಸಾವಿರ ಮತಾಂತರಗಳು ನಡೆಯುತ್ತಿವೆ ಎಂದು ಅಪ್ಪಣೆ ಕೊಡಿಸುತ್ತಾರೆ. ಅದನ್ನೂ ನಿಜವೆಂದು ತಕ್ಷಣಕ್ಕೆ ಭಾವಿಸೋಣ. ಈಗ ಈ ಮತಾಂತರ ವಿರೋಧಿಗಳೆಲ್ಲರಿಗೂ ನನ್ನದೊಂದು ಬಿನ್ನಹ. ಹೀಗೆ ಮತಾಂತರ ಸ್ವಾತಂತ್ರ÷್ಯ ಹೊಂದಿರುವವರೆಲ್ಲರನ್ನೂ,- ಏಕಕಾಲದಲ್ಲಿ ಹಿಂದೂ, ಮುಸ್ಲಿಂ, ಬೌದ್ಧ, ಕ್ರೆöÊಸ್ತ, ಯಹೂದಿ, ಪಾರ್ಸಿ ಎಲ್ಲವೂ ಆದಂಥ ನಾನು ಹಾಗೂ ನನ್ನಂಥವರು- ಮರಳಿ ಹಿಂದೂಧರ್ಮದ ಬಾಗಿಲಿಗೆ ತಂದುಬಿಡಲು ತಯಾರಿದ್ದೇವೆ. ಆದರೆ ಒಂದೇ ಒಂದು ಷರತ್ತು:
ಹೀಗೆ ಮರಳಿ ಬರುವವರೆಲ್ಲರೂ, ಹಿಂದೂ ಚೌಕಟ್ಟಿನಲ್ಲಿ ತಮಗೆ ಇಷ್ಟವಾದ ಜಾತಿಯನ್ನು ಆರಿಸಿಕೊಳ್ಳಲು ಅವಕಾಶ ಕೊಡಬೇಕು. ಅಂದರೆ ಬ್ರಾಹ್ಮಣನಾಗ ಬಯಸುವವನಿಗೆ ಬ್ರಾಹ್ಮಣ ಜಾತಿ, ಸ್ಥಾನಮಾನ, ಆಸ್ತಿ ಅಂತಸ್ತು ಕಲ್ಪಿಸಬೇಕು. ಅಥವಾ ಲಿಂಗಾಯ್ತನೋ, ಒಕ್ಕಲಿಗನೋ ಆಗುವ ಆಸೆಯಿದ್ದರೆ ಅದಕ್ಕೆ ತಕ್ಕಂತೆ ಭೂಮಿಕಾಣಿ, ಸ್ಥಾನಮಾನ... ಇತ್ಯಾದಿ. ಈ ಹಿಂದೂತ್ವವಾದಿಗಳು ಇದಿಷ್ಟಕ್ಕೆ ಅವಕಾಶ ಮಾಡಿಕೊಟ್ಟರೆ ಸಾಕು, ಎಲ್ಲ ಮತಾಂತರಿಗಳನ್ನೂ ಖಂಡಿತ ಮರಳಿ ಕರೆತರಬಹುದು.
ಒಪ್ಪಿಗೆಯೇ?
ಭೈರಪ್ಪನವರ ನಿರೀಕ್ಷೆ ಹೀಗಿರಲಾರದು. ಯಾಕೆಂದರೆ ಅವರು ಓಬೀರಾಯನ ಕಾಲದ ಹಿಂಸೆಯ ಪುರಾಣಗಳನ್ನೆಲ್ಲ ಬಿಚ್ಚಿ ತೆಗೆಯುವ ಉದ್ದೇಶ ಈಗಿನ ಹಿಂದೂ ಹಿಂಸಾಚಾರವನ್ನು ಸಮರ್ಥಿಸುವುದಷ್ಟೇ! ತಮ್ಮ `ಆವರಣ' ಕಾದಂಬರಿಯಲ್ಲಿ ಮುಸ್ಲಿಮರನ್ನು ಬಲಿ ಹಾಕಿದ ನಂತರ ಅವರ ದೃಷ್ಟಿ ಈಗ ಕ್ರೆöÊಸ್ತರ ಮೇಲೆ ಬಿದ್ದಿದೆ. ಅವರ ಮುಂದೆ ನಿಂತು, ಕ್ರೆöÊಸ್ತರಿಂದ ಭಾರತೀಯ ಸಮಾಜಕ್ಕೆ ಸಂದ ಕೊಡುಗೆಯನ್ನೆಲ್ಲ ಪಟ್ಟಿ ಮಾಡಿ ಒಪ್ಪಿಸುವುದರಿಂದ ಪ್ರಯೋಜನವೇನು? ಹೇಗಿದ್ದರೂ ಕುರುಡರಿಗೆ ಯಾವ ಬಣ್ಣ ಕಾಣಿಸಲು ಸಾಧ್ಯ?
ಭೈರಪ್ಪನವರ ಬರಹದ ಒಟ್ಟು ವಾದವೇನೆಂದರೆ- ಮತಾಂತರಕ್ಕೆ ಒಪ್ಪದವರಿಗೆ ಕೊಡುತ್ತಿದ್ದ ಕ್ರೂರ ಹಿಂಸೆ ಮತ್ತು ದೇವಾಲಯ ನಾಶಗಳಲ್ಲಿ ಈ ಕ್ರೆöÊಸ್ತರಿಗೂ ಭಾರತದಲ್ಲಿ ಇದೇ ಕೆಲಸ ಮಾಡಿದ ಮುಸಲ್ಮಾನ ದೊರೆಗಳಿಗೂ ಯಾವ ವ್ಯತ್ಯಾಸವೂ ಇಲ್ಲ.... ಸರಿ, ಮತಾಂತರಗಳ ಪ್ರಕರಣಗಳು ಈಗಲೂ ಅಷ್ಟೇ ರಕ್ತಸಿಕ್ತವಾಗಿವೆಯೇ? ಈ ಪ್ರಶ್ನೆಯಲ್ಲಿ ಭೈರಪ್ಪನವರಿಗೆ ಆಸಕ್ತಿಯಿಲ್ಲ. ಅವರು ಅಂತಿಮವಾಗಿ ಹೇಳುವುದು:
ಪ್ರಜಾಪ್ರಭುತ್ವಾತ್ಮಕವಾಗಿ, ಕಾನೂನುಸಮ್ಮತವಾದ ವಿಧಾನಗಳಿಂದ ಮತಾಂತರದ ಪಿಡುಗನ್ನು ತಡೆಯುವುದು ಸಾಧ್ಯವಿಲ್ಲವೆಂಬ ಸ್ಥಿತಿಯಲ್ಲಿ ಕೆಲವರಾದರೂ ಹತಾಶರು ಹಿಂಸಾಮಾರ್ಗಕ್ಕೆ ಇಳಿದು ಹಿಂಸಾ ಮಾರ್ಗದ ಪರಿಣಾಮದಿಂದ ತಪ್ಪಿಸಿಕೊಳ್ಳಲು ಭೂಗತ ಮಾರ್ಗವನ್ನು ಅನುಸರಿಸಿದರೆ ಅದಕ್ಕೆ ನೈತಿಕ ಹೊಣೆ ಯಾರದು?....
ಮೊನ್ನೆ ಅಂದರೆ ತೀರಾ ಮೊನ್ನೆ, ಅಕ್ಟೋಬರ್ ೨೪ರ ಶುಕ್ರವಾರ ಒರಿಸ್ಸಾ ಗಲಭೆಗಳ ಸಮಯದಲ್ಲಿ ತನ್ನ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಹೃದಯ ವಿದ್ರಾವಕ ವಿವರಗಳನ್ನು ಮೀನಾ ಎಂಬ ಕ್ರೆöÊಸ್ತ ಸನ್ಯಾಸಿನಿ ಪತ್ರಿಕೆಗಳ ಮುಂದೆ ತೋಡಿಕೊಂಡರು. ದೂರು ಕೊಡಲು ಹೋದರೆ ಪೊಲೀಸರು ದಾಖಲಿಸುವುದಿಲ್ಲ. ರಾಜಕಾರಣಿಗಳು ಕಿವಿಗೊಡಲಿಲ್ಲ. ಅವರೆಲ್ಲ ದುಷ್ಕರ್ಮಿಗಳೊಂದಿಗೆ ಶಾಮೀಲಾಗಿರುವುದರಿಂದ ತನ್ನ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಿ ನ್ಯಾಯ ದೊರಕಿಸಬೇಕೆಂದು ಮೊರೆಯಿಟ್ಟರು. ಅಷ್ಟೆಲ್ಲ ದುರಾಕ್ರಮಣವನ್ನು ಹಾದುಬಂದ ಆಕೆಯ ಮನಃಸ್ಥಿತಿ ಈಗ ಹೇಗಿರಬಹುದೆಂದು ಊಹಿಸುವುದು ಕಷ್ಟವಾದರೂ ಪತ್ರಿಕೆಯಲ್ಲಿ ಬಂದ ಅಲ್ಪ ವಿವರಗಳೇ ಮನ ಕಲಕುವಂತಿವೆ:
`...ಕೇಡಿಗರು ನನ್ನನ್ನು ಮನೆಯ ಜಗುಲಿಯೊಂದಕ್ಕೆ ಎಳೆದು ತಂದು ಹಾಕಿದರು. ಅಲ್ಲಿ ಗಾಜಿನ ಚೂರುಗಳು ಬಿದ್ದಿದ್ದವು. ನನ್ನನ್ನು ಅದರ ಮೇಲೇ ಕೆಡವಿದರು. ನನ್ನ ಸೀರೆ ಎಳೆದು ಬಿಸಾಕಿದರು. ಒಬ್ಬ ನನ್ನ ಬಲಗೈ ಮೇಲೆ ನಿಂತರೆ, ಇನ್ನೊಬ್ಬ ನನ್ನ ಎಡಗೈ ಮೇಲೆ ನಿಂತ. ಮೂರನೆಯವನು ಅತ್ಯಾಚಾರಕ್ಕೆ ತೊಡಗಿದ....'


ಇದು- ಭೈರಪ್ಪನವರ ಪ್ರಕಾರ- ನಮ್ಮ ದೇಶದ ಸಂಸ್ಕöÈತಿ ರಕ್ಷಣೆಗೆ ಕೆಲವು ಹತಾಶ ಯುವಕರು ತಾವಾಗಿ ಹುಡುಕಿಕೊಂಡ ಮಾರ್ಗ! ಬಹುಶಃ ಕಾಡಿನ ಪರ್ಣಶಾಲೆಯಲ್ಲಿ, ಬೆಟ್ಟದ ಗುಹೆಗಳಲ್ಲಿ, ಹಿಮಾಲಯದ ಹೆಪುö್ಪಗಟ್ಟಿಸುವ ಎತ್ತರದಲ್ಲಿ ಕುಳಿತು ಅಂತರ್ಮುಖಿಯಾಗುವ ಸಾಧನೆಯ ಮೂಲಕ ಸಾಧಿಸಿಕೊಂಡ ಆಧ್ಯಾತ್ಮಿಕ ಬೆಳಕು ಇಂಥ ಕೃತ್ಯಗಳಿಗೆ ಪ್ರೇರಣೆಯಾಗಿರಬೇಕು! ಹೇಗೇ ಇರಲಿ, ಈ ಅಧಾರ್ಮಿಕ ಮೃಗೀಯತೆಯ ಸಮರ್ಥನೆಗಾಗಿ ಭೈರಪ್ಪ ಯಾವ ಅಳುಕು, ಪಶ್ಚಾತ್ತಾಪಗಳಿಲ್ಲದೆ ಮಾರುದ್ದ ಬರೆಯುತ್ತಾರೆ.
ಭೈರಪ್ಪನವರ ನೀತಿ ತತ್ವಗಳೇನೇ ಇರಲಿ. ಈವರೆಗೆ ಅವರೆಂದೂ ರಾಜಕೀಯ ಪಕ್ಷ/ ಸಂಘಟನೆಯೊAದರ ವಕ್ತಾರರಾಗಿ ವರ್ತಿಸಿದ್ದಿಲ್ಲ, ಬರೆದಿದ್ದಿಲ್ಲ. ಆದರೆ ಈಗ ಹಿಂದೂವಾದಿಗಳ ಮುಖವಾಣಿಯಾಗಿ, ಅವರ ಪಾಪಕೃತ್ಯಗಳ ಸಮರ್ಥಕರೂ ಆಗಿಬಿಟ್ಟಿದ್ದಾರೆ.


ಅಂಥ ದೊಡ್ಡ ಜನಪ್ರಿಯ ಲೇಖಕನಿಗೆ ಇಂಥ ದುರವಸ್ಥೆಯೇ?!