ಕೃಷಿ- ಖುಷಿ ಮಲ್ಲಿಕಾರ್ಜುನ ಹೊಸಪಾಳ್ಯ
ಕೃಷಿ- ಖುಷಿ
ಮಲ್ಲಿಕಾರ್ಜುನ ಹೊಸಪಾಳ್ಯ
ಮಲ್ಲಿಕರ‍್ಜುನ ಹೊಸ ಪಾಳ್ಯ ಅವರು ಕನ್ನಡ ನಾಡಿನ ಒಕ್ಕಲು ಮಕ್ಕಳು ಅವರ ರೈತಾಪಿ ಜೀವನದಲ್ಲಿ ಪರಂಪರೆಯಿಂದ ಅನುಸರಿಸುತ್ತಾ ಬಂದಿರುವ ಆಚರಣೆಗಳ ಕುರಿತು ಕ್ಷೇತ್ರ ಅಧ್ಯಯನ ಮಾಡಿ ಪ್ರಕಟಿಸಿದ ‘ ಈ ನೆಲದ ಬದುಕು ‘ ಪುಸ್ತಕದ ಪರಿಷ್ಕೃತ ಆವೃತ್ತಿಯನ್ನು ಪ್ರಕಟಿಸುತ್ತಿದ್ದಾರೆ. ಸದರಿ ಪುಸ್ತಕದ ಆಯ್ದ ಅಧ್ಯಾಯ ‘ ಕಿನ್ನರಿ’ ಯ ಓದುಗರಿಗಾಗಿ ಇಲ್ಲಿದೆ- ಸಂಪಾದಕ
ಬದಲಾದ ಬದುಕು- ಮರೆಯಾದ ಸಂಭ್ರಮ!
ಕನ್ನಡನಾಡಿನ ಸಂಸ್ಕೃತಿ, ಜನಜೀವನ ಹಾಗೂ ಸಂಪ್ರದಾಯಗಳನ್ನು ಗಮನಿಸಿದರೆ ಸಾವಿರಾರು ವರ್ಷಗಳಿಂದ ಅವರ ದಿನ ನಿತ್ಯದ ಬದುಕಿನಲ್ಲಿ ಕೃಷಿ ಆಚರಣೆಗಳು ಹಾಸುಹೊಕ್ಕಾಗಿರುವುದು ಅರಿವಾಗುತ್ತದೆ. ಇವು ನಮ್ಮ ಒಕ್ಕಲುಮಕ್ಕಳ ವೈವಿಧ್ಯಪೂರ್ಣ ಬದುಕಿನ ದರ್ಶನ ಮಾಡಿಸುತ್ತವೆ. ಪ್ರದೇಶದಿಂದ ಪ್ರದೇಶಕ್ಕೆ ಆಚರಣೆಯ ವಿಧಾನಗಳಲ್ಲಿ ಬದಲಾವಣೆಯಿರಬಹುದು, ಆದರೆ ಉದ್ದೇಶ ಮಾತ್ರ ಒಂದೇ. ನಮ್ಮ ರಾಜ್ಯ ವೈವಿಧ್ಯಮಯ ಭೂಪ್ರದೇಶವನ್ನು ಹೊಂದಿದೆ. ಅದಕ್ಕನುಗುಣವಾಗಿಯೇ ಕೃಷಿ ಪದ್ಧತಿಗಳೂ ಸಹ ರೂಪುಗೊಂಡಿವೆ. ಒಂದೊAದು ಪ್ರದೇಶಕ್ಕೂ ವಿಭಿನ್ನ ಹವಾಮಾನ, ಮಳೆಗಾಲ, ವಿಭಿನ್ನ ಬೆಳೆಗಳು ಮತ್ತು ಬೆಳೆ ಪದ್ಧತಿಗಳಿದ್ದು ಬೆಳೆ ಇಡುವ ಕಾಲಮಾನದಲ್ಲೂ ಸಹ ಭಿನ್ನತೆ ಇರುವುದನ್ನು ಕಾಣಬಹುದು. ಮಣ್ಣಿನ ಗುಣ ಸ್ವಭಾವದಲ್ಲೂ ಸಹ ಇದೇ ಪರಿಸ್ಥಿತಿಯಿದೆ.
ಕೃಷಿ ಆಚರಣೆಗಳು ಕೃಷಿಕರ ನಿಸರ್ಗಾರಾಧನೆ ಎಂ¨ ಮಾತು ನೂರಕ್ಕೆ ನೂರರಷ್ಟು ಸತ್ಯ. ಏಕೆಂದರೆ ಬೀಜ ಬಿತ್ತನೆಯಿಂದ ಮೊದಲುಗೊಂಡು ಬೆಳೆ ಕಟಾವಾಗಿ, ಒಕ್ಕಣೆಯಾಗಿ ಕಾಳು ಮನೆಗೆ ಬರುವ ಪ್ರತಿಯೊಂದು ಹಂತದಲ್ಲೂ ಆಚರಣೆಗಳಿವೆ. ಈ ಆಚರಣೆಗಳ ಚಕ್ರದ ಮೇಲೆಯೇ ಕೃಷಿಕರ ಬದುಕು ಸಾಗುತ್ತಾ ಬರುತ್ತದೆ. ಜನಪದ ಬದುಕಿನ ಬಹುಭಾಗವನ್ನು ಆವರಿಸಿರುವ ಈ ಆಚರಣೆಗಳು ಋತುಮಾನಕ್ಕನುಗುಣವಾಗಿ ಬಳಕೆಯಲ್ಲಿವೆ. ಕೃಷಿ ಸಂಸ್ಸöÈತಿಯ ಮುಖ್ಯ ಅಂಗವಾಗಿ ಸಾಗಿ ಬಂದಿರುವ ಈ ಆಚರಣೆಗಳು ಕೃಷಿಕರ ಬದುಕಿನ ರಕ್ಷಣೆಯ ಹೊಣೆಯನ್ನೂ ಹೊತ್ತು ನಿಂತಿವೆ ಎನ್ನಬಹುದು. ಇವಕ್ಕೆ ಕೊನೆ ಮೊದಲೆಂಬುದಿಲ್ಲ.
ಕೃಷಿ ಆಚರಣೆಗಳೆಂದರೆ ಊರೊಗ್ಗಟ್ಟಿನ ಸಂಕೇತ. ಅದಕ್ಕಿಂತಲೂ ಮಿಗಿಲಾಗಿ ಇವು ಕೃಷಿಕರನ್ನು ಭೂಮಿ, ಮಳೆ, ಜಾನುವಾರು, ಬೀಜ ಮತ್ತು ಪ್ರಕೃತಿಯ ಇತರೆಲ್ಲಾ ಅಂಗಗಳೊAದಿಗೆ ಗಾಢ ಸಂಬAಧವನ್ನು ಬೆಸೆಯುವ ಕೊಂಡಿಗಳು. ಒಂದು ಗ್ರಾಮ, ಸುತ್ತಲ ಹತ್ತೆಂಟು ಹಳ್ಳಿಗಳು, ಆ ಮೂಲಕ ಒಟ್ಟು ಸಮಾಜದ ಸಮಗ್ರತೆಯನ್ನು ಕಾಯ್ದುಕೊಳ್ಳುವಲ್ಲಿ ಆಚರಣೆಗಳ ಪರಿಕಲ್ಪನೆ ಪೂರಕವಾಗಿರುವುದು ಗಮನಿಸಬೇಕಾದ ಅಂಶ. ಅಷ್ಟೇ ಅಲ್ಲದೆ ಇವು ಹಿರಿಯರ ಬೇಸಾಯ ಜ್ಞಾನ, ಶ್ರದ್ಧೆ-ನಂಬಿಕೆಗಳು, ಸಮಷ್ಟಿ ಪ್ರಜ್ಞೆಗಳು ಕಿರಿಯ ತಲೆಮಾರುಗಳಿಗೆ ಕೈಬದಲಾಗುವ ಮಾರ್ಗಗಳೂ ಹೌದು.
ಬೇಸಾಯದಲ್ಲಿ ಅನಿರೀಕ್ಷಿತವಾಗಿ ಬರುವ ನೈಸರ್ಗಿಕ ವಿಕೋಪಗಳಿಗೆ ಪರಿಹಾರವಾಗಿ ನಮ್ಮ ಪೂರ್ವಿಕರು ವಿವಿಧ ಆಚರಣೆಗಳನ್ನು ಪ್ರಾರಂಭಿಸಿದರು. ಜೊತೆಗೆ ಕಣಜ ತುಂಬುವಷ್ಟು ಕಾಳು ನೀಡಿದ ಪ್ರಕೃತಿಗೆ ಧನ್ಯವಾದ ಸಲ್ಲಿಸುವ ವಿಧಾನವಾಗಿಯೂ ಸಹ ಆಚರಣೆಗಳು ಬೆಳೆದು ಬಂದವು. ಬೆಳೆ ನಷ್ಟವಾದಂತಹ ಮತ್ತು ಉತ್ತಮ ಫಸಲು ಬಂದ ಎರಡೂ ಸಂದರ್ಭಗಳಲ್ಲಿ ಕೃಷಿ ಆಚರಣೆಗಳಿರುವುದನ್ನು ಕಾಣಬಹುದು.
ಆದರೆ...
ಬದಲಾದ ಕಾಲಘಟ್ಟದಲ್ಲಿ ನಮ್ಮ ಬದುಕಿನ ರೀತಿ-ನೀತಿಗಳು ವ್ಯತ್ಯಾಸವಾಗಿವೆ. ಕೃಷಿ ಮತ್ತು ಕೃಷಿಕನ ವ್ಯಾಖ್ಯಾನವೇ ಮಾರ್ಪಾಟಾಗಿದೆ. ಪರಸ್ಪರ ಸಂಬAಧಗಳೇ ಬದಲಾಗಿ ಹೋಗಿವೆ. ಇವೆಲ್ಲದರ ಪರಿಣಾಮವಾಗಿ ಕೃಷಿ ಆಚರಣೆಗಳೂ ಸಹ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡಿವೆ ಹಾಗೂ ಎಷ್ಟೋ ಕಣ್ಮರೆಯಾಗಿ ಹೋಗಿವೆ.
ಕಾರಣಗಳು ಹಲವಾರು; 60ರ ದಶಕದಲ್ಲಿ ಬಂದ ಹಸಿರು ಕ್ರಾಂತಿಯ ಪರಿಣಾಮ ನಮ್ಮಲ್ಲಿದ್ದ ವೈವಿಧ್ಯಮಯ ಬೆಳೆ ಪದ್ಧತಿ ನಾಶವಾಗಿ ಏಕ ಬೆಳೆ ಪದ್ಧತಿಯ ಆಗಮನವಾಯಿತು. ಸಾಂಪ್ರದಾಯಿಕ ತಳಿಗಳ ಜಾಗವನ್ನು ಹೈಬ್ರಿಡ್ ತಳಿಗಳು ಆಕ್ರಮಿಸಿದವು. ವಾಣಿಜ್ಯ ಬೆಳೆಗಳ ದಾಂಗುಡಿಯಾಯಿತು. ದಿಢೀರ್ ಹಸಿರುಕ್ಕಿಸುವ ರಾಸಾಯನಿಕ ಗೊಬ್ಬರಗಳಿಂದಾಗಿ ಸಗಣಿ ಗೊಬ್ಬರಕ್ಕೆ ಎಳ್ಳುನೀರು, ದನ-ಕರುಗಳ ಸಾಕಾಣಿಕೆ ಕುಂಠಿತ. ಹೀಗೆ ಆಧುನಿಕ ಸ್ಪರ್ಷ ಪಡೆದ ಕೃಷಿ ರಂಗದಿAದ ಸಹಜವಾಗಿಯೇ ಆಚರಣೆಗಳು ನಿರ್ಗಮಿಸತೊಡಗಿದವು.
ಬಿತ್ತನೆಗೆ ಟ್ರಾಕ್ಟರ್ ಬಂದಾಗ ನೇಗಿಲು ಪೂಜೆಗೆ ಜಾಗವೆಲ್ಲಿ? ರಾಗಿ ಬೆಳೆಯೇ ಇಲ್ಲದಿರುವಾಗ ಕರಿಬಂಟನ ಅಗತ್ಯವೇನು? ಒಕ್ಕಣೆ ಟಾರು ರಸ್ತೆಗೆ ಬಂದಾಗ ಇಲ್ಲವೇ ಒಕ್ಕಣೆ ಯಂತ್ರ ಬಳಸಿದಾಗ ಕಣದ ಪೂಜೆ, ರಾಶಿ ಪೂಜೆಗಳನ್ನು ಮಾಡುವುದು ಹೇಗೆ?
ಮಳೆಯ ಏರು-ಪೇರು ಮತ್ತು ಬೆಳೆ ಇಡುವ ಹಂಗಾಮುಗಳು ಬದಲಾಗಿದ್ದೂ ಸಹ ಆಚರಣೆಗಳು ಮಸುಕಾಗಲು ಕಾರಣವಾಯಿತು. ಮಗೆ ಮುಂಡುಗನನ್ನು ಹಾಕಬೇಕಾದರೆ ಆ ಹೊತ್ತಿಗೆ ಗದ್ದೆ ಬೆಳವಣಿಗೆ ಹಂತದಲ್ಲಿರಬೇಕು, ಆದರೆ ಮಳೆ ಸರಿಯಾಗಿ ಆಗದೆ ಬಿತ್ತನೆ ತಡವಾದರೆ ಮಗೆ ಮುಂಡುಗನ ಪೂಜೆ ಸಾಧ್ಯವೇ ಇಲ್ಲ.
ದೇಸೀ ದನ-ಕರುಗಳೇ ಇಲ್ಲದಿರುವಾಗ ಸಂಕ್ರಾAತಿ ಸಡಗರ ಎಲ್ಲಿಯದು? ಈಗ ಹಳ್ಳಿಗಳಲ್ಲಿರುವುದು ಕೇವಲ ಹಾಲು ಹಿಂಡುವ ಸೀಮೆ ಹಸುಗಳು, ಅವುಗಳನ್ನು ಕಿಚ್ಚು ಹಾಯಿಸುವಂತಿಲ್ಲ, ಬೆದರಿಸುವಂತಿಲ್ಲ.
ಇನ್ನು ಕಂಬಳ, ಹುತ್ತರಿ, ದೀಪಾವಳಿ ಮುಂತಾದ ಆಚರಣೆಗಳು ತನ್ನ ಮೂಲ ಅರ್ಥ, ಸ್ವರೂಪವನ್ನು ಕಳಚಿಕೊಂಡಿವೆ. ತಿರುಳು ಹೋಗಿ ಬರೀ ಸಿಪ್ಪೆ ಉಳಿಯಿತು ಎಂಬAತಾಗಿದೆ. ಅವುಗಳಿಗೂ ರಾಜಕೀಯ ಲೇಪ ಅಂಟಿಗೊAಡುಬಿಟ್ಟಿದೆ. ಆಚರಣೆಗಳಿಗೂ ಗ್ರಾಮೀಣ ಕಸುಬುಗಳಿಗೂ ಅಂತರ್ ಸಂಬAಧವಿದೆ. ಉದಾಹರಣೆಗೆ ಕರಿಬಂಟನ ಆಚರಣೆಗೆ ಉಬ್ಬೆ, ಕಮ್ಮಾರ ಮತ್ತು ಕುಂಬಾರನ ಮನೆ ಬೂದಿಗಳು ಅಗತ್ಯ ಬೇಕು, ಆ ಕಸುಬುಗಳೇ ಇಂದು ನಶಿಸಿವೆ, ಇದರ ಪರಿಣಾಮ ಕರಿಬಂಟನ ಆಚರಣೆಯ ಮೇಲೆ ಖಂಡಿತ ಉಂಟಾಗಿದೆ. ಆಟಿಕಳೆಂಜ ವೇಷ ಹಾಕುವವರು ಕೆಳ ವರ್ಗದ ಜನ, ಆದರೆ ಅವರ ಸಾಮಾಜಿಕ ಜೀವನದಲ್ಲುಂಟಾದ ಪಲ್ಲಟದಿಂದಾಗಿ ಅವರು ಆ ವೇಷ ಹಾಕಲು ಹಿಂಜರಿಯುತ್ತಿದ್ದಾರೆ.
ಕಾಲ ಬದಲಾದಂತೆ ಕೃಷಿ ಆಚರಣೆಗಳು ಬದಲಾದರೂ ಪರೋಕ್ಷವಾಗಿ ಕಂಡುಬರುವ ಅವುಗಳ ಎಳೆಗಳನ್ನು ಆಧಾರವಾಗಿಟ್ಟುಕೊಂಡು ವಿವೇಚಿಸಬಹುದು. ಆದರೆ ಇದು ಸಾಧ್ಯವಾಗುವುದು ಅವುಗಳ ದಾಖಲಾತಿ ರೂಪದಲ್ಲಿ ಲಭ್ಯವಿದ್ದಾಗ ಮಾತ್ರ. ದುರಂತವೆAದರೆ ಈ ಆಚರಣೆಗಳು ಇಂದಿಗೂ ಮೌಖಿಕವೇ ಹೊರತು ಅಕ್ಷರ ರೂಪಕ್ಕಿಳಿದಿಲ್ಲ, ಅವುಗಳ ಒಳ-ಹೊರಗನ್ನು ಬಲ್ಲಂತಹ ತಲೆಮಾರೂ ಸಹ ಅಳಿಯುತ್ತಿದೆ.
ಇಂದು ಕೃಷಿಕ ತಲುಪಿರುವ ದೈನ್ಯ, ಅಭದ್ರ, ಅತಂತ್ರ ಸ್ಥಿತಿಗೆ ಹಳ್ಳಿಗಳಿಂದ ಕಣ್ಮರೆಯಾದ ಸಾಂಪ್ರದಾಯಿಕ ವಾತಾವರಣ ಸಹ ಕಾರಣ, ಕೃಷಿ ಆಚರಣೆಗಳು ಚಿಕ್ಕ-ಚಿಕ್ಕ ಕ್ರಿಯೆಗಳಾದರೂ ಮನಸ್ಸಿಗೆ ಮುದ, ಧೈರ್ಯ, ಆತ್ಮವಿಶ್ವಾಸ ನೀಡುತ್ತಿದ್ದವು, ಪರಸ್ಪರ ಸಂಬಂಧ ಬೆಸೆಯುತ್ತಿದ್ದವು. ಅಂತಹ ವಾತಾವರಣದಿಂದ ಇಂದಿನ ಕೃಷಿಕ ವಂಚಿತನಾಗಿರುವುದೇ ದುರಂತ.
ಉಳಿದಿರುವ ಹಿರಿ ತಲೆಗಳನ್ನು ಮಾತಾಡಿಸಿ, ಈಗಲೂ ಆಧುನಿಕತೆ ಅಷ್ಟಾಗಿ ಸೋಕದ ಕಾಡುಹಳ್ಳಿಗಳಲ್ಲಿ ಅಡ್ಡಾಡಿ ಅಳಿದುಳಿದ ಆಚರಣೆಗಳನ್ನು ಸಮಗ್ರವಾಗಿ ದಾಖಲಿಸುವುದೇ ನಮಗಿರುವ ಮಾರ್ಗ.
ಲೇಖಕರ ಕುರಿತು
ಮಲ್ಲಿಕಾರ್ಜುನ ಹೊಸಪಾಳ್ಯ : ಹುಟ್ಟೂರು ತುಮಕೂರು ಜಿಲ್ಲೆ ಹೊಸಪಾಳ್ಯ. ಒಕ್ಕಲುತನದ ಕುಟುಂಬ. ಮಧುಗಿರಿ, ತುಮಕೂರು, ಬೆಂಗಳೂರು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ. ಅರ್ಥಶಾಸ್ತç ಹಾಗೂ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ‍್ಯಾಂಕ್‌ನೊAದಿಗೆ ಎರಡು ಚಿನ್ನದ ಪದಕ ಮತ್ತು ಪದವಿಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚಿನ ಅಂಕ ಗಳಿಕೆಗಾಗಿ ಟಿ.ಪಿ.ಕೈಲಾಸಂ ಚಿನ್ನದ ಪದಕ.
ದೇಸಿ ತಳಿ, ನಾಟಿ ಬೀಜಗಳ ಸಂರಕ್ಷಣೆ ಕುರಿತು ವಿಶೇಷ ಆಸಕ್ತಿ, ಜಲಸಂರಕ್ಷಣೆ, ಸುಸ್ಥಿರ ಕೃಷಿ, ಸಿರಿಧಾನ್ಯ ಚಟುವಟಿಕೆಗಳಿಗೆ ಬೆಂಬಲ; ಜಲಜಾಗೃತಿಗಾಗಿ ಕಾರ್ಯಕ್ರಮ ಸಂಘಟನೆ; ಪಾರಂಪರಿಕ ಜಲನಿಧಿಗಳಾದ ತಲಪರಿಗೆ ಬಗ್ಗೆ ಅಧ್ಯಯನ; ಪುನರುಜ್ಜೀವನಕ್ಕಾಗಿ ಪರಿಶ್ರಮ. ವಿವಿಧ ಸಂಸ್ಥೆ ಹಾಗೂ ಸರ್ಕಾರಿ ಯೋಜನೆಗಳಲ್ಲಿ ದಾಖಲಾತಿ ಸಮಾಲೋಚಕ ವೃತ್ತಿ. ಹವ್ಯಾಸಿ ಬರಹಗಾರ. ಕನ್ನಡ ಪ್ರಭ, ವಿಜಯಕರ್ನಾಟಕ ಹಾಗೂ ಉದಯವಾಣಿ ಪತ್ರಿಕೆಗಳಲ್ಲಿ ಕೃಷಿ ವಿಚಾರಗಳ ಅಂಕಣ ಬರವಣಿಗೆ. ಪ್ರಬಂಧ ಹಾಗೂ ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟ.
ಕೃಷಿ ಮಾಧ್ಯಮ ಕೇಂದ್ರದ ಕೃಷಿ ಪತ್ರಿಕೋದ್ಯಮ ಪ್ರಶಸ್ತಿ. ಸಿಡಿಎಲ್ ಸಂಸ್ಥೆಯ ‘ಚರಕ’ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ‘ಮುರುಘಾಶ್ರೀ’ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಸುಕೃತ ಕೃಷಿ ಬರಹಗಾರ ಪ್ರಶಸ್ತಿ ಪುರಸ್ಕತ. ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಕಥಾ ಸ್ಪರ್ಧೆಯಲ್ಲಿ ಮೂರನೇ ಬಹುಮಾನ.
ತೇಜಸ್ವಿ ನೆನಪಲ್ಲಿ ಅಲ್ಮೆರಾ ರಿಪೇರಿ ಪ್ರಬಂಧಗಳ ಪುಸ್ತಕವೂ ಸೇರಿದಂತೆ, ಕೃಷಿ ಮತ್ತು ನೀರಿಗೆ ಸಂಬAಧಪಟ್ಟ ನೆಟ್ಟಿರಾಗಿ, ಕೃಷಿ ಆಚರಣೆ, ಪೈರುಪಚ್ಚೆ, ಕೊರಲೆ, ಚೌಳು ನೆಲದ ಬಂಗಾರ, ಸಿರಿಧಾನ್ಯ ಪರಂಪರೆ, ನಶಿಸುತ್ತಿರುವ ನೀರಿನ ಜ್ಞಾನ, ತಲಪರಿಗೆ ಇತ್ಯಾದಿ 13 ಪುಸ್ತಕಗಳ ಪ್ರಕಟಣೆ.