ನಾನು ಕಂಡ ‘ವೈ.ಕೆ.ಬಾಲಕೃಷ್ಣಪ್ಪ’

ಹುಟ್ಟಿ ಬೆಳೆದ ಹಳ್ಳಿಗಳಲ್ಲಿ ಹೈಸ್ಕೂಲು ಮುಗಿಸಿ, ಕಾಲೇಜಿಗೆಂದು ತುಮಕೂರಿಗೆ ಬಂದು, ಓದಿನ ನಂತರ ಇದೇ ಊರಲ್ಲಿ ಹೊಟ್ಟೆ ಹೊರೆಯುತ್ತ ನೆಲೆಸಿರುವ ಅಸಂಖ್ಯ ಜನರಿದ್ದಾರೆ, ಆದರೆ ಈ ನೆಲದ  ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಸ್ಥಿತಿಗತಿಯ ಬದಲಾವಣೆಗೆ ತುಡಿಯುತ್ತಿರುವವರು ಮಾತ್ರ ಕೆಲವೇ ಮಂದಿ, ಅಂಥ ಕೆಲವರಲ್ಲಿ ಡಾ.ವೈ.ಕೆ.ಬಾಲಕೃಷ್ಣಪ್ಪ ಮುಖ್ಯ. ಈತ ನನ್ನ ಕಾಲೇಜು ದಿನಗಳ ಗೆಳೆಯ, ಬಾಲ, ಬಾಲು, ಬಾಲಕೃಷ್ಣ, ವೈಕೆಬಿ, ಬಾಲಕೃಷ್ಣಪ್ಪ, ಏಶ್ಯನ್ ಲೀಡರ್ ಕುಸುರಿ ಇವೆಲ್ಲ ಡಾ.ವೈ.ಕೆ.ಬಾಲಕೃಷ್ಣಪ್ಪರನ್ನ ನಾವೆಲ್ಲ ಕರೆಯುವ ಆಪ್ತ ಹೆಸರುಗಳು.  ಮಳೆ ಬೀಳುವುದೇ ಇಲ್ಲವೇನೋ ಎಂಬಂತ ಒಣ ಪ್ರದೇಶವಾಗಿರುವ ಶಿರಾ ಸೀಮೆಯಲ್ಲೂ ಸದಾ ಹಸಿರು ತುಂಬಿರುವ ಬಂಗಾಳಿ ಜಾಲಿಯಷ್ಟೇ ಗಟ್ಟಿ ಮನುಷ್ಯನೀತ. ದೇಹಕ್ಕೆ ಅರವತ್ತು ಪೂರೈಸಿದ ಕಾರಣಕ್ಕೆ ರೇಷ್ಮೆ ಉಪನರ‍್ದೇಶಕ ಹುದ್ದೆಯಿಂದ ನಿವೃತ್ತಿಯಾಗಿರುವ ಡಾ.ವೈ.ಕೆ.ಬಾಲಕೃಷ್ಣಪ್ಪ ಅವರನ್ನು ಇವತ್ತು ತುಮಕೂರಿನ ಲೈಬ್ರರಿ ಸಭಾಂಗಣದಲ್ಲಿ ರೇಷ್ಮೆ ಕೃಷಿಕರು, ಚಾಕಿ ಸಾಕಾಣಿಕೆದಾರರು,ಸಹೋದ್ಯೋಗಿಗಳು, ಎಸ್ಸಿ, ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಮಿತಿ ಸಂಗಾತಿಗಳು ಹಾಗೂ ಎಲ್ಲ ಗೆಳೆಯರು ಸೇರಿ ಇವರನ್ನು ಅಭಿನಂದಿಸುತ್ತಿದ್ದಾರೆ. ವೈಕೆಬಿ ಕುರಿತ ʼ ಕುಸುರಿʼ ಕೃತಿಗೆ ಗೆಳೆಯ ಹೈಕರ‍್ಟ್ ವಕೀಲ ಹೆಚ್.ವಿ.ಮಂಜುನಾಥ ಬರೆದಿರುವ ತುಮಕೂರಿನ ಸಮಾಜವಾದಿ ಸಂಘಟನೆಗಳ ಕಳೆದ ನಾಲ್ಕು ದಶಕದ ಇತಿಹಾಸದ ತುಣುಕಿನಂತೆಯೂ ಇರುವ ಆಪ್ತ ಬರಹ ಇಲ್ಲಿದೆ ಓದಿ                                                                    - ಕುಚ್ಚಂಗಿ ಪ್ರಸನ್ನ, ಸಂಪಾದಕ 

ನಾನು ಕಂಡ ‘ವೈ.ಕೆ.ಬಾಲಕೃಷ್ಣಪ್ಪ’


ಎಚ್.ವಿ.ಮಂಜುನಾಥ


     ʼಯಂಜಲಗೆರೆ ಕುಸುರಿ ಕೆಂಚಪ್ಪ ಬಾಲಕೃಷ್ಣಪ್ಪ( ವೈ.ಕೆ.ಬಾಲಕೃಷ್ಣಪ್ಪ)  ಮತ್ತು ನನ್ನ ನಡುವಿನ ಸ್ನೇಹ ವಿಚಿತ್ರವಾದದ್ದು. ನಾವಿಬ್ಬರೂ ಒಂದೇ ವಯಸ್ಸಿನವರಲ್ಲ. ಅವರು ನನಗಿಂತ ಹತ್ತು ವರ್ಷ ದೊಡ್ಡವರು ಮತ್ತು ಮೂಲತಃ ನನ್ನ ದೊಡ್ಡಣ್ಣನ ಸ್ನೇಹಿತರು. ಅವರು ಬಲು ಮಾತುಗಾರ ಅಷ್ಟೇ ಅಲ್ಲ ಕೆಂಡದುಂಡೆಯಂತಹ ಮಾತಿಗೂ ಪ್ರಸಿದ್ಧಿ. ಸ್ನೇಹಿತರಿಗೆ ಅಡ್ಡಹೆಸರು ನೀಡಿ ಛೇಡಿಸುವುದರಲ್ಲಿ ನಿಸ್ಸೀಮರು. ಸಿನಿಮಾ ಎಂದರೆ ಅಷ್ಟಾಗಿ ಆಸಕ್ತಿ ತೋರದಿದ್ದರೂ ಪ್ರವಾಸಕ್ಕೆ ಉತ್ಸಾಹ ಜಾಸ್ತಿ. ವೃತ್ತಿಯಲ್ಲಿ ಅವರು ರೇಷ್ಮೆ ಆಧಿಕಾರಿಯಾದರೆ ನಾನು ನ್ಯಾಯವಾದಿ. ನಾವಿಬ್ಬರೂ ಕೆಲವೊಂದು ವಿಚಾರಗಳಲ್ಲಿ ಮಾತ್ರ ಸಮಾನ ಆಸಕ್ತಿಯುಳ್ಳವರು. ಉಳಿದಂತೆ ಭಿನ್ನತೆ ಮತ್ತು ಸಣ್ಣಪುಟ್ಟ ಜಗಳಗಳಿದ್ದರೂ ಮೂರು ದಶಕಗಳಿಗೂ ಮೇಲ್ಪಟ್ಟ ನಮ್ಮಿಬ್ಬರ ಸ್ನೇಹಕ್ಕೆ ಎಂದೂ ಅಡ್ಡಿಯಾಗಿಲ್ಲ. ಆ ವಿಷಯದಲ್ಲಿ ಇಬ್ಬರೂ ಸಮನ್ವಯ ಸಾಧಿಸಿಕೊಂಡು ಬಂದಿದ್ದೇವೆ ಎಂದು ಹೇಳಬಹುದು.


    “ವೈಕೆಬಿ” ಎಂದೇ ನಮ್ಮ ಸಮಾಜವಾದಿ ಗೆಳೆಯರ ನಡುವೆ ಕರೆಯಲ್ಪಡುವ ಬಾಲಕೃಷ್ಣಪ್ಪನವರು ನನ್ನ ಹೈಸ್ಕೂಲು ದಿನಗಳಲ್ಲಿ ನನ್ನಣ್ಣನೊಂದಿಗೆ ನಮ್ಮ ಹಳ್ಳಿಗೆ ಬಂದಿದ್ದರು. ಆಗಲೇ ಅವರನ್ನು ನಾನು ಮೊದಲು ನೋಡಿದ್ದು. ಸಣ್ಣಗೆ ಬೆಳ್ಳಗೆ ಇದ್ದಿದ್ದರಿಂದ ಅವರು ಬ್ರಾಹ್ಮಣರಿರಬೇಕು ಎಂದುಕೊಂಡಿದ್ದೇನಾದರೂ ನಮ್ಮಮ್ಮ ಮಾಡಿದ ನಾಟಿ ಕೋಳಿ ಸಾರಿನ ಊಟವನ್ನು ಬಡ್ತಾ ಬಡಿದಿದ್ದನ್ನು ನೋಡಿ ಗೊಂದಲಗೊಂಡಿದ್ದೆ.


      1989-90 ರಲ್ಲಿ ನಾನು ತುಮಕೂರಿನಲ್ಲಿ ಪಿ.ಯು.ಸಿ. ಓದುತ್ತಿದ್ದಾಗ ನನ್ನ ಅವರ ಒಡನಾಟ ಶುರುವಾಯಿತು. ಅವರು ಆಗತಾನೆ ಬೆಂಗಳೂರಿನಲ್ಲಿ ಎಂಎಸ್ಸಿ ಮುಗಿಸಿ ಬಂದಿದ್ದರು. ಅದೇ ವೇಳೆಗೆ ತುಮಕೂರಿನ ಯುವ ಸಮಾಜವಾದಿ ಮಿತ್ರರೆಲ್ಲ ಸೇರಿಕೊಂಡು “ಸಮತಾ ವಿದ್ಯಾರ್ಥಿ ಒಕ್ಕೂಟ” ಎಂಬ ಸಂಘಟನೆಯನ್ನು ಹುಟ್ಟು ಹಾಕಿದರು. ಇದರಲ್ಲಿದ್ದ ಬಹಳಷ್ಟು ಮಂದಿ ಸಮಾಜವಾದಿ ಯುವಜನ ಸಭಾ,  ದಲಿತ ಸಂರ‍್ಷ ಸಮಿತಿ, ರೈತಸಂಘಗಳ ಹಿನ್ನಲೆಯುಳ್ಳವರಾಗಿದ್ದರು. ಬಾಲಕೃಷ್ಣಪ್ಪನವರು ಆ ವೇಳೆಗಾಗಲೇ ರೈತ ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕರ‍್ಯರ‍್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಅವರ ಜೊತೆಗೆ ರೈತ ವಿದ್ಯಾರ್ಥಿ ಒಕ್ಕೂಟದಲ್ಲಿ  ಈಗ ಹೆರಿಗೆ ತಜ್ಞರು, ಸಾಮಾಜಿಕ ಕಾಳಜಿಯುಳ್ಳ ಡಾ.ಡಿ.ಅರುಂಧತಿ, ವಕೀಲ ಹಾಗೂ ಜಾತ್ಯತೀತ ಯುವ ಸಂಘಟನೆ ಮುಖಂಡ ಎಚ್. ಮಾರುತಿಪ್ರಸಾದ್ ಮತ್ತು  ʼಬೆವರ ಹನಿʼ ದಿನಪತ್ರಿಕೆಯ ಸಂಪಾದಕ ಕುಚ್ಚಂಗಿ ಪ್ರಸನ್ನ ಮೊದಲಾದವರು ಇದ್ದರು.  


     ಸಮುದಾಯದ ಮತ್ತು ಬೇರೆ ಬೇರೆ ಸಂಘಟನೆಯೊಂದಿಗೆ ಗುರುತಿಸಿಕೊಂಡು ಚದುರಿದಂತೆ ಇದ್ದು ಸಮ ಸಮಾಜದ ಕನಸು ಕಾಣುವ ಸಮಾನ ಮನಸ್ಕರನ್ನು ಒಂದೇ ವೇದಿಕೆಯಡಿ ತರಬೇಕೆಂಬ ಉದ್ದೇಶದಿಂದ “ಸಮತಾ ವಿದ್ಯಾರ್ಥಿ ಒಕ್ಕೂಟ” ಆರಂಭಿಸಿದ್ದರು. ಒಕ್ಕೂಟದಲ್ಲಿ ಮೊದಲ ವರ್ಷ ನಾನು ಸದಸ್ಯನಾಗಿದ್ದೆ. ಎರಡನೇ ವರ್ಷದಲ್ಲಿ ಮತ್ತೆ ಪದಾಧಿಕಾರಿಗಳ ಆಯ್ಕೆ ನಡೆದು ನಾನು ಒಕ್ಕೂಟದ ಜಿಲ್ಲಾ ಕಾರ್ಯದರ್ಶಿಯಾದೆ, ಹೇಮಲತಾ ಎಂಬುವವರು ಜಿಲ್ಲಾ ಸಂಚಾಲಕರಾದರೆ ವೈ.ಕೆ.ಬಾಲಕೃಷ್ಣಪ್ಪ ರಾಜ್ಯ ಸಂಚಾಲಕರಾದರು. ಆ ಮೂಲಕ ಅವರು ನನ್ನ ನಾಯಕರಾದರು. 


      ವೈ.ಕೆ.ಬಾಲಕೃಷ್ಣಪ್ಪನವರು ರಾಜ್ಯ ಸಂಚಾಲಕರಾಗಿದ್ದರೂ ಒಕ್ಕೂಟವನ್ನು ಹೊಸದಾಗಿ ಆರಂಭಿಸಿದ್ದರಿಂದ ತುಮಕೂರು ನಗರದಲ್ಲಿ ವಿದ್ಯಾರ್ಥಿಗಳನ್ನು ಮೊದಲು ಸಂಘಟಿಸಬೇಕಿತ್ತು. ಆಗಿನ್ನೂ ಹೊಸದಾಗಿ ವಿದ್ಯಾರ್ಥಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ನನಗೆ ವಿದ್ಯಾರ್ಥಿಗಳನ್ನು ಸಂಘಟಿಸಲು ಬೇಕಾಗಿದ್ದ ಭಾಷಣ ಕಲೆಯಾಗಲಿ ಮತ್ತು ಚತುರತೆಯಾಗಲಿ ಇರಲಿಲ್ಲ. ಹಾಗಾಗಿ ಬಾಲಕೃಷ್ಣಪ್ಪನವರೇ ತುಮಕೂರಿನ ಕಾಲೇಜುಗಳಿಗೆ ಭೇಟಿ ಮಾಡಿ ಒಕ್ಕೂಟದ ಧ್ಯೇಯೋದ್ಧೇಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ ಸಂಘಟನೆ ಬಲಪಡಿಸುವ ಕಾರ್ಯಕ್ಕೆ ಮುಂದಾದರು. ನಾನು ಮತ್ತು ಇನ್ನಿತರ ಸ್ನೇಹಿತರು ಅವರಿಗೆ ಬೆಂಬಲವಾಗಿ ಕೆಲಸ ಮಾಡುತ್ತಿದ್ದೆವು. ಮತ್ತು ಜೊತೆಯಲ್ಲಿ ಕಾಲೇಜುಗಳಿಗೆ ಸುತ್ತಾಡಿ ವಿದ್ಯಾರ್ಥಿಗಳನ್ನು ಸಂಘಟಿಸುತ್ತಿದ್ದೆವು. ವಿಷಯಾಧಾರಿತವಾಗಿ ಬೀದಿ ಹೋರಾಟ ನಡೆಸುವುದು ಸಾಮಾನ್ಯವಾಗಿತ್ತು.  ಡಾ.ರಾಮ ಮನೋಹರ ಲೋಹಿಯಾರ ಶಿಷ್ಯ ಮತ್ತು ಹಿರಿಯ ಸಮಾಜವಾದಿಯಾಗಿದ್ದ ಕಿಷನ್ ಪಟ್ನಾಯಕ್‌ರನ್ನು ಕರೆಯಿಸಿ ವಿದ್ಯಾರ್ಥಿ-ಯುವಜನರಿಗಾಗಿ ತುಮಕೂರಿನ ಕಾಳಿದಾಸ ಕಾಲೇಜಿನಲ್ಲಿ ಎರಡು ದಿನಗಳ ಅಧ್ಯಯನ ಶಿಬಿರ ನಡೆಸಿದ್ದರು. ಶಿಬಿರದಲ್ಲಿ ಫ್ರೊ.ರವಿವರ್ಮಕುಮಾರ್, ಡಿ.ಎಸ್.ನಾಗಭೂ಼ಷಣ್ ಮುಂತಾದವರು ಭಾಗವಹಿಸಿದ್ದರು.  


      ತದನಂತರ ವೈಕೆಬಿ ಪಿಎಚ್‌ಡಿ ಮಾಡಲು ಮೈಸೂರು ಸೇರಿದರು. ಸುಮ್ಮನಿರುವ ಜಾಯಮಾನದವರಲ್ಲದ ಬಾಲಕೃಷ್ಣಪ್ಪನವರು ಮತ್ತೆ ಅಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟದ ಸಂಘಟನೆಗೆ ತೊಡಗಿ ಮೈಸೂರಿನ ಅಲೋಕಾದಲ್ಲಿ ಸಿ.ಕೆ ಉಮಾಪತಿ ಮತ್ತಿತರ ಸ್ನೇಹಿತರ ಸಹಕಾರದೊಂದಿಗೆ ಮತ್ತು ಮೈಸೂರಿನ ವಿಚಾರವಾದಿ  ಕೆ.ರಾಮದಾಸ್, ಕವಿ ಹೆಚ್. ಗೋವಿಂದಯ್ಯನವರ ಮಾರ್ಗದರ್ಶನದಲ್ಲಿ ಯುವಜನರ ರಾಜ್ಯಮಟ್ಟದ ಅಧ್ಯಯನ ಶಿಬಿರವನ್ನು ನಡೆಸಿದರು. ಆ ಶಿಬಿರದಲ್ಲಿ ತುಮಕೂರಿನ ಸಮತಾ ವಿದ್ಯಾರ್ಥಿ ಒಕ್ಕೂಟದ ಪರವಾಗಿ ನಾನು ಮತ್ತು ಗೆಳೆಯ ರಂಗಪ್ಪ ಭಾಗವಹಿಸಿದ್ದೆವು. ಸಂವಿಧಾನ ಮತ್ತು ಸಾಮಾಜಿಕ ನ್ಯಾಯ ಮತ್ತಿತರ ವಿಷಯಗಳನ್ನು ಕುರಿತು ನಡೆದ ಆ ಅಧ್ಯಯನ ಶಿಬಿರ ಬಾಲಕೃಷ್ಣಪ್ಪನವರ ಮುಂದಾಳತ್ವದಲ್ಲಿ ನಡೆದ ಮಹತ್ವದ ಶಿಬಿರವಾಗಿತ್ತು.  


      ತೊಂಭತ್ತರ ದಶಕದ ಆರಂಭದ ಕಾಲದಲ್ಲಿ ಪಿಎಚ್.ಡಿ ಮಾಡುತ್ತಿದ್ದ ಬಾಲಕೃಷ್ಣಪ್ಪ ಬಹು ಬೇಡಿಕೆಯ ಸುಂದರ ತರುಣ. ಇವರು ಯಾರನ್ನು ಮದುವೆಯಾಗಬಹುದು ಎಂಬ ಕುತೂಹಲ ನಮ್ಮ ಸ್ನೇಹಿತರ ನಡುವೆ ಇತ್ತು. ಅದು ಹೇಗೋ ಮಾನಸ ಗಂಗೋತ್ರಿಯ ಪರಿಸರದಲ್ಲಿ ಅವರು ಮತ್ತು ಚೇತನಾರವರ ನಡುವೆ ಪ್ರೇಮವರಳಿತ್ತು.  1993 ರಲ್ಲಿ ಬಾಲಕೃಷ್ಣಪ್ಪ ಮತ್ತು ಚೇತನಾರವರ ಮದುವೆ ಮಂತ್ರಮಾAಗಲ್ಯ ರೀತಿಯಲ್ಲಿ  ನಡೆಯುವುದೆಂದು ತೀರ್ಮಾನವಾಯಿತು. ಮೈಸೂರು-ತುಮಕೂರು ಸಮಾಜವಾದಿ ಮಿತ್ರರೊಂದಿಗೆ ಸೇರಿ ಅವರಿಬ್ಬರೂ ಈ ತೀರ್ಮಾನ ತೆಗೆದುಕೊಂಡಿದ್ದರು. ಆಗಿನ್ನೂ ಅಂತರ್ಜಾತಿ ವಿಹಾಹಿತರ ವೇದಿಕೆಯಾದ ಮಾನವ ಮಂಟಪದ ಉದಯ ಆಗಿರಲಿಲ್ಲ. ಮದುವೆ ತುಮಕೂರಿನಲ್ಲಿಯೇ ಆಗಬೇಕು ಮತ್ತು ಸಮತಾ ವಿದ್ಯಾರ್ಥಿ ಒಕ್ಕೂಟದಡಿಯಲ್ಲಿಯೇ ಆಗಬೇಕು ಎಂಬುದು ಬಾಲಕೃಷ್ಣಪ್ಪನವರ ಪ್ರಬಲ ಇಚ್ಚೆಯಾಗಿತ್ತು. ಹಾಗಾಗಿ ಹಣಕಾಸಿನ ವಿಚಾರ ಹೊರತುಪಡಿಸಿ ಮದುವೆಯ ಎಲ್ಲ ಜವಾಬ್ದಾರಿಗಳು ನಮ್ಮ ಒಕ್ಕೂಟದಲ್ಲಿದ್ದ ಕಾಲೇಜು ವಿದ್ಯಾರ್ಥಿಗಳದ್ದೆ ಆಗಿತ್ತು. ತುಮಕೂರಿನ ಬಿ.ಎಚ್.ರಸ್ತೆಯಲ್ಲಿರುವ ಕಾಳಿದಾಸ ಹಾಸ್ಟೆಲಿನ ಆವರಣದಲ್ಲಿ 16.05.1993 ರಂದು ಮದುವೆ ನಡೆಯಿತು. ದೇವನೂರ ಮಹಾದೇವ, ಪ್ರೊ.ರವಿವರ್ಮಕುಮಾರ್, ಹಿ.ಶಿ.ರಾಮಚಂದ್ರೇಗೌಡ, ಅನುಸೂಯಮ್ಮ, ಕೆ.ಬಿ.ಸಿದ್ಧಯ್ಯ, ಕೆ.ದೊರೈರಾಜು ಮುಂತಾದ ಹಿರಿಯರು ವೇದಿಕೆ ಕಾರ್ಯಕ್ರಮದಲ್ಲಿದ್ದರು. ಒಕ್ಕೂಟದ ಗೆಳೆಯ-ಗೆಳೆತಿಯರೆಲ್ಲ ಒಗ್ಗೂಡಿ ಊಟ ಬಡಿಸುವುದರಿಂದ ಹಿಡಿದು ಎಲ್ಲ ಕೆಲಸಗಳನ್ನು ಓಡಾಡಿಕೊಂಡು ಮಾಡಿ ನಮ್ಮ ನಾಯಕ ಬಾಲಕೃಷ್ಣಪ್ಪನವರ ಸರಳವಾದ ಮಂತ್ರಮಾAಗಲ್ಯ ಮದುವೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟವು. 


         ಮದುವೆಯ ದಿನ ಕುತೂಹಲಕರ ಘಟನೆಯೊಂದು ನಡೆಯಿತು. ಆಗ ಕುಸುಮಬಾಲೆ ಬಂದು ದೇವನೂರ ಮಹಾದೇವ ಸೆಲೆಬ್ರಿಟಿಯಾಗಿದ್ದರು. ನಮ್ಮ ಜಿಲ್ಲಾ ಸಂಚಾಲಕಿಯಾಗಿದ್ದ ಹೇಮಲತಾರವರ ತಂದೆ ದೇವನೂರರನ್ನು ನೋಡಬೇಕೆಂದು ಮದುವೆ ಕಾಂiÀiðಕ್ರಮಕ್ಕೆ ಬಂದರು. ದೇವನೂರರು ಹವಾಯಿ ಚಪ್ಪಲಿ ಐರನ್ ಆಗಿರದ ಪ್ಯಾಂಟು ಶರ್ಟು ಧರಿಸಿ ಒಂದು ಚಿಕ್ಕದಾದ ಬಟ್ಟೆ  ಬ್ಯಾಗೊಂದನ್ನು ಹೆಗಲ ಮೇಲೆ ಎಸೆದುಕೊಂಡು ಬಂದು ಬೇರೆ ಜಾತಿ ಹುಡುಗಿಯನ್ನು ಮದುವೆಯಾಗುತ್ತಿದ್ದಾನೆಂದು ಸಿಟ್ಟಿಗೆದ್ದಿದ್ದ ಬಾಲಕೃಷ್ಣಪ್ಪನವರ ಅಕ್ಕಂದಿರನ್ನು ಸಮಾಧಾನ ಮಾಡಲೆತ್ನಿಸಿ ಅದು ಸಾಧ್ಯವಾಗದೆ ಟೆನ್ಷೆನ್ ತಗೊಂಡು ವೇದಿಕೆಗಾಗಿ ಹಾಕಿದ್ದ ಶಾಮಿಯಾನದ ಹಿಂದಕ್ಕೆ ಹೋಗಿ ಬೀಡಿ ಸೇದುತ್ತಿದ್ದರು. ಅದೇ ವೇಳೇಲಿ ನಮ್ಮ ಹೇಮಲತಾರವರ ತಂದೆ “ದೇವನೂರ ಮಹಾದೇವ” ಯಾರು ತೋರಿಸು ಅಂತ ಗಂಟುಬಿದ್ದರು. ನಾನು ತೋರಿಸಿದರು ಅವರು ನಂಬದ ಕಾರಣ ಕರೆದುಕೊಂಡು ಹೋಗಿ ಪರಿಚಯ ಮಾಡಿಕೊಟ್ಟೆ. ಅವರು ಹೆಚ್ಚೇನು ಮಾತನಾಡದೆ “ವೋ..ಹೌದ?” ಎಂದು ನಕ್ಕು ಕೈ ಕೊಟ್ಟು ಬೀಡಿಯನ್ನು ಧ್ಯಾನಸ್ಥನಂತೆ ಎಳೆಯತೊಡಗಿದರು. ಆದರೆ ಅವರನ್ನು ನೋಡಬೇಕೆಂದು ಬಯಸಿದ್ದ ವ್ಯಕ್ತಿಯ ಮುಖ ಹುಳ್ಳಗೆ ಆಗಿತ್ತು. ದೇವನೂರ ಮಹಾದೇವರ ಹೆಸರು ಆ ಮಟ್ಟಿಗೆ ಕೇಳಿ ಬರುತ್ತಿದ್ದ ರೀತಿಯಿಂದ ಅವರನ್ನು ಒಬ್ಬ ಸಿನಿಮಾ ಸ್ಟಾರ್ ಲೆವೆಲ್ಲಿಗೆ ಊಹಿಸಿಕೊಂಡಿದ್ದರು ಅಂತ ಕಾಣಿಸುತ್ತೆ.  ಆದರೂ ಆ ವ್ಯಕ್ತಿ ಅವರ ಭಾಷಣ ಕೇಳಿಯೇ ಹೋಗೋದು ಅಂತ ಕುಳಿತೇಬಿಟ್ಟರು.  ಅಂತ ದೊಡ್ಡ ಸಾಹಿತಿ ಅದ್ಬುತವಾಗಿ ಭಾಷಣ ಮಾಡಬಹುದು ಎಂಬ ನಿರೀಕ್ಷೆ ಅವರದಾಗಿತ್ತು. ಆದರೆ ದೇವನೂರರು ನಾಲ್ಕು ಮಾತನಾಡಿ ಕೊನೆಯಲ್ಲಿ ಬಾಲಕೃಷ್ಣಪ್ಪ- ಚೇತನಾರಿಗೆ ಒಂದು ಡಜನ್ ಮಕ್ಕಳಾಗಲಿ ಎಂದು ಹರಸಿ ಕುಳಿತುಕೊಂಡರು. ಅವರ ಭಾ಼ಷಣ ಕೇಳಲು ಕುಳಿತಿದ್ದ ಆ ವ್ಯಕ್ತಿಗೆ ಏನಾಗಿರಬೇಡ?. ಎಲ್ಲರಿಗೂ ಊಟ ಬಡಿಸಿದ ನಮ್ಮ ಕಣ್ಣಿಗೆ ಅ ವ್ಯಕ್ತಿ  ಬೀಳಲೇ ಇಲ್ಲ.  ಭ್ರಮನಿರಸನಗೊಂಡು ಯಾವಾಗಲೋ ಜಾಗ ಖಾಲಿ ಮಾಡಿದ್ದರು. 


      ಮದುವೆಯ ನಂತರ ನವ ಜೋಡಿ ಮೈಸೂರಿನಲ್ಲಿಯೇ ಸಂಸಾರ ಆರಂಭಿಸಿತು. ಅದಾದ ಒಂದು ವರ್ಷದೊಳಗೆ ಅವರಿಗೆ ರೇಷ್ಮೇ ಇಲಾಖೆಯಲ್ಲಿ ಕೆಲಸ ಸಿಕ್ಕಿ ತುಮಕೂರಿಗೆ ರೇಷ್ಮೇ ವಿಸ್ತರಣಾಧಿಕಾರಿಯಾಗಿ ಬಂದರು. ಆಗ ನಾನು, ನಮ್ಮಿಬ್ಬರು ಆಣ್ಣಂದಿರಾದ ಡಾ.ರಂಗಸ್ವಾಮಿ, ವೆಂಕಟಾಚಲ, ವಕೀಲರಾಗಿದ್ದ ಅಗಳಕುಪ್ಪೆ ಸಿದ್ಧಯ್ಯನವರು ಸೇರಿ ಸದಾಶಿವನಗರದ ಮೆಳೇಕೋಟೆ ರಸ್ತೆಯಲ್ಲಿ ಒಂದು ಮನೆ ಮಾಡಿಕೊಂಡಿದ್ದೆವು. ಹೊಸದಾಗಿ ಕೆಲಸ ಸಿಕ್ಕಿದ್ದರಿಂದ ತುಮಕೂರಿನಲ್ಲಿ ಇನ್ನೂ ಮನೆ ಮಾಡದ ಕಾರಣ ಅವರು ತಮ್ಮ ಮನೆಯವರನ್ನು ಅವರ ತಾಯಿಯ ಮನೆಯಲ್ಲಿಯೇ ಬಿಟ್ಟು ಬಂದು ನಮ್ಮ ಜೊತೆ ಇರಲು ಶುರು ಮಾಡಿದರು. ಇವರು ಬಲು ಮಾತುಗಾರ, ಹೋರಾಟಗಾರ ಅಷ್ಟೇ ಅಲ್ಲ ಅದ್ಬುತ ಪಾಕ ಪ್ರವೀಣ ಎಂಬುದು ನಮಗೆ ಆಗಲೇ ತಿಳಿದಿದ್ದು. ನಾವೊಂದು ಮೂರು ಜನ ಹುಡುಗರು ಪಾತ್ರೆ ತೊಳೆದು ಕಸ ಗುಡಿಸುವ ಕೆಲಸ ಮಾಡುತ್ತಿದ್ದರೆ ದೊಡ್ಡವರಾದ ನಮ್ಮಣ್ಣ, ಸಿದ್ದಯ್ಯ ಮತ್ತು ಬಾಲಕೃಷ್ಣಪ್ಪ ಅಡುಗೆ ಮಾಡುತ್ತಿದ್ದರು. ಪಂಜೆ ಮತ್ತು ಬನಿಯನ್ ಹಾಕಿಕೊಂಡು ನನ್ನ ಡಾಕ್ಟರ್ ಅಣ್ಣನ ಜೊತೆಯಲ್ಲಿ ನಿಂತು ಅಡುಗೆ ಮಾಡುತ್ತಿದ್ದ ಫೋಟೋ ಬಹಳ ಕಾಲ ನನ್ನ ಬಳಿ ಇತ್ತು.



       ಇದೇ ಸಂದರ್ಭದಲ್ಲಿ ಸಮತಾ ವಿದ್ಯಾರ್ಥಿ ಒಕ್ಕೂಟ ವಿದ್ಯಾರ್ಥಿಗಳ ಮಟ್ಟಕ್ಕೆ ಇರಲಿ ವಿದ್ಯಾರ್ಥಿ ಜೀವನ ಮುಗಿಸಿರುವ ನಮಗೊಂದು ವೇದಿಕೆ ಬೇಕೆಂದು “ಸಮತಾ ಸಂಘಟನೆ” ಶುರು ಮಾಡಿದರು. ಆಗ ತಾನೆ ಹೊಸದಾಗಿ ಹಣಕಾಸು ಮಂತ್ರಿಯಾಗಿದ್ದ  ಈಗಿನ ಮುಖ್ಯಮಂತ್ರಿಗಳಾದ ಶ್ರೀ.ಸಿದ್ದರಾಮಯ್ಯನವರನ್ನು ಕರೆಯಿಸಿ ಆ ಸಂಘಟನೆಯನ್ನು ಉದ್ಘಾಟಿಸಲಾಯಿತು. ಆಗ ತಾನೆ ಸರ್ಕಾರಿ ನೌಕರಿಗೆ ಸೇರಿದ್ದರೂ ಬಾಲಕೃಷ್ಣಪ್ಪ ಸಮತಾ ಸಂಘಟನೆಯ ಭಾಗವಾಗಿದ್ದರು. ಆಗ ಅವರು ಹೋರಾಟವನ್ನು ಸ್ವಲ್ಪ ಜಾಸ್ತಿಯೇ ಹಚ್ಚಿಕೊಂಡಂತಿದ್ದ ದಿನಗಳಾಗಿದ್ದು ಹೆಚ್ಚು ಕಮ್ಮಿ ಅದೇ ಸಂದರ್ಭದಲ್ಲಿ “ನನ್ನ ಹೆಂಡತಿಗೆ ಸರ್ಕಾರಿ ಕೆಲಸ ಸಿಕ್ಕಿದರೆ ನಾನು ಕೆಲಸಕ್ಕೆ ರಾಜಿನಾಮೆ ಕೊಟ್ಟು ಸಂಘಟನೆಗೆ ದುಡಿಯುತ್ತೇನೆ” ಎಂದು ಕೆಲವು ಖಾಸಗಿ ಗೆಳೆಯರ ನಡುವೆ ಖಾಸಗಿ ಸಮಯದಲ್ಲಿ ಘೋಷಿಸಿಬಿಟ್ಟರು. ಕೆಲಸ ಸಿಕ್ಕಿದ ಕೆಲವು ತಿಂಗಳಲ್ಲಿ ಅವರಿಗೆ ತುಮಕೂರಿನ ಮರಳೂರಿನಲ್ಲಿ ಕ್ವಾರ್ಟಸ್ ಸಿಕ್ಕಿ ಅಲ್ಲಿಗೆ ಹೋದರು. ಅವರ ಸಂಸಾರ ಬಂದು ಅವರನ್ನು ಕೂಡಿಕೊಂಡಿತು. ಸ್ವಲ್ಪ ವರ್ಷಗಳಲ್ಲಿಯೇ ಅವರ ಹೆಂಡತಿ ಚೇತನಾರವರಿಗೂ ರೇಷ್ಮೇ ಇಲಾಖೆಯಲ್ಲಿಯೇ ಕೆಲಸ ಸಿಕ್ಕಿತು. ಸಂಸಾರದ ಜವಾಬ್ದಾರಿ ಅಷ್ಟೊತ್ತಿಗೆ ಪಾಠ ಕಲಿಸಿತ್ತು ಅಂತ ಕಾಣಿಸುತ್ತೆ ಬಾಲಕೃಷ್ಣಪ್ಪ ಪುಣ್ಯಕ್ಕೆ ಕೆಲಸಕ್ಕೆ ರಾಜಿನಾಮೆ ಕೊಟ್ಟು ಸಂಪೂರ್ಣ ಹೋರಾಟಕ್ಕೆ ಧುಮುಕಲಿಲ್ಲ.


      ಹೋರಾಟದ ಹಿನ್ನಲೆಯಿಂದ ಬಂದ ಬಹಳಷ್ಟು ಮಂದಿ ಸರ್ಕಾರಿ ನೌಕರಿ ದೊರೆತ ಕೂಡಲೇ ಒಂದು ಕಂಫರ್ಟ್ ಲೆವೆಲ್ಲಿಗೆ ತಲುಪಿ ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಮರೆತುಬಿಡುವುದು ಸಾಮಾನ್ಯ. ಆದರೆ ಬಾಲಕೃಷ್ಣಪ್ಪನವರು ಸಂಸಾರದ ಬದುಕಿಗೆ ಮತ್ತು ಸರ್ಕಾರಿ ನೌಕರಿಯ ರೀತಿ ರಿವಾಜುಗಳಿಗೆ ಹೊಂದಿಕೊಂಡು ಹೋಗಲು ಆರಂಭಿಸಿದರಾದರೂ ಆಯಾ ಕಾಲದ ವಿದ್ಯಾಮಾನಗಳಿಗೆ ವಿವಿಧ ರೀತಿಯಲ್ಲಿ ಸ್ಪಂದಿಸುತ್ತಾ, ಪ್ರತಿಕ್ರಿಯಿಸುತ್ತಾ  ಬಂದರೆ ಹೊರತು ತನ್ನ ಸಾಮಾಜಿಕ ಜವಾಬ್ದಾರಿಯಿಂದ ನುಣುಚಿಕೊಂಡ ವ್ಯಕ್ತಿಯೇ ಅಲ್ಲ. 


     1995-96 ರ ಸಮಯದಲ್ಲಿ ಕರ್ನಾಟಕದ ಪ್ರಜ್ಞಾವಂತ ಮನಸ್ಸುಗಳು “ಮಾನವ ಮಂಟಪ” ಎಂಬ ಅಂತರ್ಜಾತಿ ವಿವಾಹಿತರ ವೇದಿಕೆಯನ್ನು ಹುಟ್ಟು ಹಾಕಲು ಆರಂಭಿಸಿದರು ಮತ್ತು ಬೆಂಗಳೂರಿನ ಲಾಲ್‌ಬಾಗ್‌ನ ಸಿಲ್ವರ್ ಜ್ಯುಬಿಲಿಹಾಲ್‌ನಲ್ಲಿ ಡಾ. ಶಿವರಾಮಕಾರಂತರಿಂದ ಉದ್ಘಾಟನೆ ಮಾಡಿಸಲಾಯಿತು. ತುಮಕೂರಿನಲ್ಲಿ ಅಂತರ್ಜಾತಿ ವಿವಾಹಿತರ ಒಂದು ದೊಡ್ಡ ಗುಂಪೇ ಇತ್ತು ಬಾಲಕೃಷ್ಣಪ್ಪ ಕೂಡ ಆ ಗುಂಪಿನ ಭಾಗವೇ ಆಗಿದ್ದರು. ಹಾಗಾಗಿ ಮಾನವ ಮಂಟಪದ ಉದ್ಘಾಟನೆಯ ಕಾರ್ಯಕ್ರಮಕ್ಕೆ ಮುನ್ನ ನಡೆದ ಪೂರ್ವಭಾವಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜಿಲ್ಲೆಯಾದ್ಯಂತ ಅಂತರ್ಜಾತಿ/ಅಂತರ್ ಧರ್ಮೀಯ ವಿವಾಹಿತ ದಂಪತಿಗಳನ್ನು ತನ್ನ ಗೆಳೆಯರೊಂದಿಗೆ ಸೇರಿ ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು ಮತ್ತು ಮುಂದಿನ ದಿನಗಳಲ್ಲೂ ತುಮಕೂರು ಜಿಲ್ಲೆಯಲ್ಲಿ ಮಾನವ ಮಂಟಪದ ಚಟುವಟಿಕೆಗಳು ನಡೆಯಲು ಕಾರಣಕರ್ತರಾದರು ಮತ್ತು ಅಂತರ್ಜಾತಿ ವಿವಾಹಗಳಿಗೆ ಎಂದೆAದಿಗೂ ಬೆಂಬಲವಾಗಿ ಇದ್ದರು. 


       ಕ್ರಿಯಾಶಾಲಿಗಳಾದವರು ಯಾವುದಾದರೊಂದಕ್ಕೆ ಮಾತ್ರ ಅಂಟಿಕೊಂಡು ಸೀಮಿತವಾಗುವುದಿಲ್ಲ. ತಾನು ನಂಬಿದ ಸಿದ್ದಾಂತ, ವಿಚಾರಗಳಿಗೆ ಬದ್ಧವಾಗಿದ್ದರೆ ಅವುಗಳಿಗೆ ಅನುಗುಣವಾಗಿ ನಡೆಯುವ ಅಂತಹ ಪೂರಕ ಕಾರ್ಯಕ್ರಮ, ಸಂಘಟನೆ ಅಥವಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಲ್ಲರು ಎಂಬುದಕ್ಕೆ ಬಾಲಕೃಷ್ಣಪ್ಪ ಉದಾಹರಣೆ. ತುಮಕೂರಿನ ಸಮಾಜವಾದಿ ಹಿನ್ನಲೆಯಿಂದ ಬಂದ ಬಾಲಕೃಷ್ಣಪ್ಪನ ಗೆಳೆಯರು ಸ್ಥಾಪಿಸಿದ ಬೋಧಿಮಂಡಲದಲ್ಲೂ ಇವರು ಇಂದಿಗೂ ಇದ್ದಾರೆ. ಸದಾ ತಣ್ಣಗೆ ಹರಿಯುವ ಝರಿಯಂತೆ ನಮ್ಮ ನಡುವೆ ಕ್ರಿಯಾಶೀಲವಾಗಿದ್ದು  ನಮ್ಮನ್ನು ಹುರಿದುಂಬಿಸುತ್ತಿದ್ದ ಮತ್ತು ಬಹಳ ಬೇಗ ನಮ್ಮನ್ನೆಲ್ಲ ತೊರೆದು ಹೋದ  ಜಿ.ಶ್ರೀನಿವಾಸಕುಮಾರ್ ಪ್ರೇರಣೆಯಂತೆ ಸಂವಿಧಾನದ ಮತ್ತು ಸಮಾನತೆಯ ಆಶಯಗಳನ್ನು ವಿದ್ಯಾರ್ಥಿ ಯುವಜನರಲ್ಲಿ ಬಿತ್ತುವ ಹಾಗೂ ಪ್ರಕಾಶನದ ಚಟುವಟಿಕೆಗಳನ್ನು ಕೇಂದ್ರವಾಗಿಟ್ಟುಕೊAಡು ಸ್ಥಾಪಿಸಿದ ‘ನೆಲಸಿರಿ’ ಎಂಬ ಸಂಸ್ಥೆಯಲ್ಲೂ ಇವರು ಅತ್ಯಂತ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ನೆಲಸಿರಿಯಡಿಯಲ್ಲಿ “ಮಕ್ಕಳಿಗಾಗಿ ಕುವೆಂಪು” ಎಂಬ ಹೆಸರಿನಲ್ಲಿ ತುಮಕೂರಿನ ಶಾಲಾ ಮಕ್ಕಳಿಗೆ ಕುವೆಂಪು ಸಾಹಿತ್ಯ ನೀಡಿ ಪ್ರಬಂಧ ಸ್ಫರ್ಧೆ ನಡೆಸಿ ಅತ್ಯುತ್ತಮವಾಗಿ ಬರೆದ ವಿದ್ಯಾರ್ಥಿಗಳಿಗೆ ಮೂರು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿತ್ತು. ಆ ಮೂಲಕ ಮಕ್ಕಳಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಿತ್ತು. ಈ ಕಾರ್ಯಕ್ರಮದ ಮುಂಚೂಣಿಯಲ್ಲಿ ನಟರಾಜಪ್ಪನವರು ಇದ್ದಾರಾದರೂ ಅವರ ಹೆಗಲಿಗೆ ಹೆಗಲು ಕೊಟ್ಟು ಯಶಸ್ವಿಯಾಗಿ ಹಲವಾರು ವರ್ಷಗಳು ನಡೆಸಿಕೊಂಡು ಬರಲು ಬಾಲಕೃಷ್ಣಪ್ಪನವರು ಸಹ ಕಾರಣಕರ್ತರಾಗಿದ್ದರು. ಈ ನಡುವೆ ಪ್ರೊ.ರವಿವರ್ಮಕುಮಾರ್ ನೇತೃತ್ವದಲ್ಲಿ ಶಿರಾದಲ್ಲಿ ಆರಂಭವಾದ ರಾಮ ಮನೋಹರ ಲೋಹಿಯಾ ಸವiತಾ ವಿದ್ಯಾಲಯದ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡರು. ಅಲ್ಲಿ ಪ್ರತಿ ವರ್ಷ ಹೈಸ್ಕೂಲು ಮಕ್ಕಳಿಗಾಗಿ “ಕಲರವ” ಹೆಸರಿನಲ್ಲಿ ನಡೆಸುತ್ತಿದ್ದ ಬೇಸಿಗೆ ಶಿಬಿರಗಳ ಯಶಸ್ವಿಗೆ ಸಹಕಾರಿಯಾಗಿ  ದುಡಿದರು.  ತನ್ನ ತಂದೆ ತಾಯಿಯರ ನೆನಪಿನಲ್ಲಿ ಪ್ರತಿಭಾ ಪುರಸ್ಕಾರದ ನೆಪದಲ್ಲಿ ಕಡು ಬಡತನದಿಂದ ಬಂದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಸಹಾಯಧನ ಮಾಡುವುದನ್ನು ಇತ್ತೀಚಿನ ದಿನಗಳಲ್ಲಿ ರೂಢಿಸಿಕೊಂಡು ಬಂದಿದ್ದಾರೆ. 


        ರೇಷ್ಮೆ ಕೃಷಿ ವಿಸ್ತರಣಾಧಿಕಾರಿಯಾಗಿ ಸರ್ಕಾರಿ ನೌಕರಿಗೆ ಸೇರಿ ರೇಷ್ಮೆ ಸಹಾಯಕ ನಿರ್ದೇಶಕ ಹುದ್ದೆಗೆ ಬಡ್ತಿ ಪಡೆದು ಕಾರ್ಯ ನಿರ್ವಹಿಸುತ್ತಿರುವಾಗ ಪ್ರವಿತ್ರ ಪ್ರಕರಣದಲ್ಲಿ ಬಡ್ತಿ ಮೀಸಲಾತಿ ಕುರಿತು ಸರ್ವೋಚ್ಚ ನ್ಯಾಯಾಲಯದಿಂದ ತೀರ್ಪು ಹೊರಬಿದ್ದು  ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರಲ್ಲಿ ಕೆಲವರು ಹಿಂಬಡ್ತಿ ಹೊಂದಿ ಇನ್ನು ಕೆಲವರು  ಹಿಂಬಡ್ತಿಯ ಆತಂಕ ಎದುರಿಸುತ್ತಿದ್ದ ಸಂದರ್ಭದಲ್ಲಿ ಅಂತಹ ನೌಕರರನ್ನು ಸಂಘಟಿಸಲು 2016 ರ ಡಿಸೆಂಬರ್‌ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್.ಸಿ/ಎಸ್.ಟಿ. ನೌಕರರ ಸಮನ್ವಯ ಸಮಿತಿಯ ತುಮಕೂರು ಜಿಲ್ಲಾ ಶಾಖೆಯನ್ನು ಉದ್ಘಾಟಿಸಿ ಮುಂದಾಳತ್ವ ವಹಿಸಿಕೊಂಡು ಇನ್ನೊಂದು ರೀತಿಯಲ್ಲಿ ಕಾರ್ಯಪ್ರವೃತ್ತರಾದರು.  ಈ ತರ‍್ಪಿನಿಂದ ಎಸ್.ಸಿ/ಎಸ್.ಟಿ. ನೌಕರರು ಎದುರಿಸುತ್ತಿದ್ದ ಸಮಸ್ಯೆಗಳಿಗೆ ಕಾನೂನಾತ್ಮಕವಾಗಿ ಮತ್ತು ಸಂಘಟಿತವಾಗಿ ಹೋರಾಟವನ್ನು ರೂಪಿಸಿದರು. ಅದಲ್ಲದೆ ಸಾಮಾಜಿಕ ನ್ಯಾಯ, ಮೀಸಲಾತಿ ಮತ್ತು ಸಂವಿಧಾನ ಮುಂತಾದ ವಿಚಾರಗಳ ಕುರಿತು ವಿಚಾರ ಸಂಕಿರಣಗಳನ್ನು ರ‍್ಪಡಿಸಿ ಕಾನೂನು ತಜ್ಞರಿಂದ ಉಪನ್ಯಾಸ ಮಾಡಿಸಿ ಆ ಸಮುದಾಯದ ರ‍್ಕಾರಿ ನೌಕರರಲ್ಲಿ ತಿಳುವಳಿಕೆ ಮೂಡಿಸಿ ಹೋರಾಟವನ್ನು ಯಶಸ್ವಿಯಾಗಿ ರೂಪಿಸಿ ರಾಜ್ಯ ಸಮಿತಿಯ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾದರು ಮತ್ತು ಮುಂದಿನ ದಿನಗಳಲ್ಲಿ ರಾಜ್ಯ ಸಮಿತಿಯಲ್ಲೂ ಪದಾಧಿಕಾರಿಗಳಲ್ಲಿ ಒಬ್ಬರಾಗಿ ದುಡಿದರು. ಇವರ ಕ್ರಿಯಾಶೀಲ ಗುಣದಿಂದ ಮತ್ತು ಹೋರಾಟದ ಮನೋಭಾವದಿಂದ ತುಮಕೂರು ಸಮನ್ವಯ ಸಮಿತಿಯು ಬಹಳ ಬೇಗ ಶಕ್ತಿ ಮತ್ತು ಚೈತನ್ಯ ಪಡೆದುಕೊಂಡಿತು.ಸಮನ್ವಯ ಸಮಿತಿಯ ಹೋರಾಟವನ್ನು ಆ ಸಮುದಾಯದ ನೌಕರರ ಹಿತಾಸಕ್ತಿಗಳನ್ನು ಕಾಪಾಡುವುದಕ್ಕಷ್ಟೇ ಸೀಮಿತಗೊಳಿಸದೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದು ವಿಶೇಷವಾದದ್ದು. ಅವುಗಳಲ್ಲಿ ಬೂಸಾ ಪ್ರಕರಣಕ್ಕೆ 50 ವರ್ಷ ತುಂಬಿದ ನೆನಪಿನ ಕಾರ್ಯಕ್ರಮ, ಬುದ್ಧ, ಬಸವ ಮತ್ತು ಅಂಬೇಡ್ಕರ್ ಜಯಂತಿ ಮತ್ತು ಬಡ ವಿದ್ಯಾರ್ಥಿಗಳಿಗೆ ಉಪನ್ಯಾಸಕ ಗೆಳೆಯರ ನರವಿನೊಂದಿಗೆ ಸಂಜೆ ಶಾಲೆಗಳನ್ನು ನಡೆಸುವುದು ಮುಂತಾದವುಗಳು ಪ್ರಮುಖವಾದವು. 


       ಈ ಮೇಲೆ ಹೇಳಿದ ಘಟನಾವಳಿಗಳನ್ನು ಗಮನಿಸಿದರೆ ಅಧಿಕಾರಿಯಾಗಿದ್ದು ಸಾಮಾಜಿಕ ಹೋರಾಟಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ “ನಿರಂತರತೆ”ಯನ್ನು ನಾವು ಕಾಣಬಹುದಾಗಿದೆ. ಸರ್ಕಾರಿ ನೌಕರಿಯಂತಹ ಏಳು-ಬೀಳುಗಳ ನಡುವೆಯೂ ಇಂತಹ ಒಂದು ನಿರಂತರತೆಯನ್ನು ಕಾಪಾಡಿಕೊಂಡು ಬರಲು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಹೋರಾಟದ ತುಡಿತ ಯಾವ ವ್ಯಕ್ತಿಯಲ್ಲಿ ಇರುತ್ತದೋ ಅಂತಹವರಿAದ ಮಾತ್ರ ಸಾಧ್ಯ. ಬಾಲಕೃಷ್ಣಪ್ಪನವರಲ್ಲಿ ಅಂತಹ ಹೋರಾಟದ ಮನೋಭಾವ ಮತ್ತು ತುಡಿತ ಇದ್ದ ಕಾರಣದಿಂದಲೇ ಇದೆಲ್ಲಾ ಸಾಧ್ಯವಾಗಿದೆ ಎಂದು ಹೇಳಬಹುದು.


         ಸದಾ ಎಗರಾಡುವ ಸ್ವಭಾವದ ಈ ಮನುಷ್ಯ ಹೇಗೆ ತಾನೇ ರ‍್ಕಾರಿ ನೌಕರಿ ನಿಭಾಯಿಸಬಲ್ಲ ಎಂಬ ಅನುಮಾನ ನನ್ನನ್ನು ಒಳಗೊಂಡಂತೆ ಅನೇಕರದ್ದು ಆಗಿತ್ತು. ಹತ್ತಿರತ್ತಿರ 30 ರ‍್ಷಗಳಷ್ಟು ಕಾಲ ರೇಷ್ಮೆ ಇಲಾಖೆಯಲ್ಲಿ ದುಡಿದಿರುವ ಇವರ ಸೇವೆಯ ಅವಧಿಯನ್ನು ಬಹುತೇಕ ತುಮಕೂರು ಜಿಲ್ಲೆಯಲ್ಲಿಯೇ ಕಳೆದಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ರೈತಮಿತ್ರನಾಗಿ ಕೆಲಸ ಮಾಡಿದ ರೇಷ್ಮೆ ಅಧಿಕಾರಿ “ವೈ.ಕೆ.ಬಾಲಕೃಷ್ಣಪ್ಪ” ಎಂಬುದನ್ನು ರೈತರೇ ಹೇಳಿರುವುದನ್ನು ನಾನು ಸ್ವತಃ ಕೇಳಿದ್ದೇನೆ. ರೇಷ್ಮೆ ಕೃಷಿಯನ್ನು ಜಿಲ್ಲೆಯಲ್ಲಿ ಸಾಧ್ಯವಾದಷ್ಟು ವಿಸ್ತರಿಸಿ ರೈತರನ್ನು ರ‍್ಥಿಕವಾಗಿ ಸದೃಢರನ್ನಾಗಿ ಮಾಡಿ ಸ್ವಾವಲಂಬಿಗಳಾಗಿ ರೂಪಿಸಬೇಕೆಂಬ ದೃಢ ನರ‍್ಧಾರದೊಂದಿಗೆ ಸಮಯದ ಪರಿವೇ ಇಲ್ಲದೆ ಹಗಲು ರಾತ್ರಿ ರೈತರೊಂದಿಗೆ ಬೆರೆತು ದುಡಿದ ರೇಷ್ಮೆ ಅಧಿಕಾರಿ “ವೈ. ಕೆ. ಬಾಲಕೃಷ್ಣಪ್ಪ”. ಅವರ ಈ ರೀತಿಯ ಕಾರ್ಯವೈಖರಿಯಿಂದಾಗಿ ತುರುವೇಕೆರೆ ತಾಲ್ಲೂಕಿನಲ್ಲಿ ಬೆಳೆದ ರೇಷ್ಮೆ ಗೂಡು ಅಂತರಾಷ್ಟಿçÃಯ ಮಟ್ಟದಲ್ಲಿ ಅತ್ಯುತ್ತಮವಾದುದು ಎಂಬ ಮನ್ನಣೆಯನ್ನು ಪಡೆದು ದೇಶಕ್ಕೆ ಹೆಸರು ತಂದುಕೊಟ್ಟಿತು. ಕಳೆದ  ಮರ‍್ನಾಲ್ಕು ವರ್ಷಗಳಲ್ಲಿ ಜಿಲ್ಲಾಡಳಿತ ಅವರ ದಕ್ಷತೆ ಗುರುತಿಸಿ ರೇಷ್ಮೆ ಇಲಾಖೆ ಜೊತೆಗೆ ಬೇರೆ ಇಲಾಖೆಗಳಿಗೂ ನೇಮಕ ಮಾಡಿ ಎರವಲು ಸೇವೆ ಪಡೆದಿದೆ. ಅದರಲ್ಲಿ ತುಮಕೂರು ಜಿಲ್ಲೆಯ ಅಂಬೇಡ್ಕರ್ ನಿಗಮವೂ ಒಂದಾಗಿದೆ. ಆ ನಿಗಮದಲ್ಲಿ ಸೇವೆ ಸಲ್ಲಿಸಿದ ಅತ್ಯಲ್ಪ ಅವಧಿಯಲ್ಲಿ ಅವರು ಗಣನೀಯ ಸೇವೆ ಸಲ್ಲಿಸಿದರು ಎಂದರೆ ತಪ್ಪಾಗಲಾರದು. ಅದರಲ್ಲಿ ಮನೆ ಮಠ ಇಲ್ಲದ ಅಲೆಮಾರಿ ಸಮುದಾಯಗಳಿಗೆ ಆಗಿನ ಜಿಲ್ಲಾಧಿಕಾರಿಯವರ ಮನವೊಲಿಸಿ ವಿವಿಧ ತಾಲ್ಲೂಕುಗಳಲ್ಲಿ ನಿವೇಶನ ಹಂಚುವ ಪ್ರಯತ್ನಕ್ಕೆ ಮುಂದಾಗಿದ್ದು ಬಹಳ ಪ್ರಮುಖವಾದುದು. ಸಾಮಾಜಿಕ ಹೋರಾಟದ ಹಿನ್ನಲೆಯಿಂದ ಬಂದ ಒಬ್ಬ ಅಧಿಕಾರಿ ಯಾವ ರೀತಿ ಕೆಲಸ ಮಾಡಬಹುದು ಎಂಬುದನ್ನು ಅವರು ಆ ಮೂಲಕ ತೋರಿಸಿಕೊಟ್ಟಿದ್ದಾರೆ. 


       ತನ್ನ ಸುದರ‍್ಘ ಮೂವತ್ತು  ರ‍್ಷದಷ್ಟು ಸರ್ಕಾರಿ ಸೇವೆಯಲ್ಲಿ ರೈತರ ಮನೆ ಮಾತಾಗಿರುವುದೇ ಅವರ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ. ಅವರ ಕಾರ್ಯದಕ್ಷತೆಯನ್ನು ಮೆಚ್ಚಿಯೇ ನಿವೃತ್ತಿಯ ದಿನ ತುಮಕೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಕರ‍್ಯ ನರ‍್ವಹಣಾಧಿಕಾರಿ ಹಾಗೂ ಇತರ ಜಿಲ್ಲಾಡಳಿತದ ಅಧಿಕಾರಿಗಳ ದಂಡೇ ಅವರನ್ನು ಅಭಿನಂದಿಸಲು ಇವರ ಕಚೇರಿಗೇ ಧಾವಿಸಿತ್ತು. ಅಂತಹ ಛಾಪನ್ನು ಅಧಿಕಾರಿಯಾಗಿ ಅವರು ಮೂಡಿಸಿದ್ದರು. ದಕ್ಷ ಅಧಿಕಾರಿಯೂ ಆಗಿ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡ ಬಾಲಕೃಷ್ಣಪ್ಪರವರ ಬದುಕು ಮತ್ತು ಹೋರಾಟದ ಹಾದಿ ದಮನಿತ ಸಮುದಾಯಗಳಿಂದ ಬಂದ ಇತರೆ ಅಧಿಕಾರಿಗಳಿಗೆ ಮಾದರಿಯಾಗಿರುವಂತಹುದು.

       ಹೊಸದಾಗಿ ನೋಡಿದವರು ಇವರು ವ್ಯಂಗ್ಯಮಿಶ್ರಿತ ಭಾಷೆಯಲ್ಲಿ ದೊಡ್ಡದನಿಯಲ್ಲಿ ಮಾತನಾಡುವುದನ್ನು ಕೇಳಿದರೆ ಅವರನ್ನು ಮಹಾನ್ ಜಗಳಗಂಟ ಎಂದುಕೊಳ್ಳುವ ಸಾಧ್ಯತೆ ಇದೆ. ಅವರಲ್ಲಿ ಸ್ವಲ್ಪಮಟ್ಟಿನ ಜಗಳಗಂಟತನ ಇರುವುದು ನಿಜವಾದರೂ ಅದು ಕೂಡ ಅವರ ಯಶಸ್ಸಿನಲ್ಲಿ ಸಹಕಾರಿಯಾಗಿದೆ ಎಂದು ನನಗನ್ನಿಸುತ್ತದೆ. ಆದರೆ ಅವರಲ್ಲಿ ಅತ್ಯುತ್ತಮ ಹಾಸ್ಯಪ್ರಜ್ಙೆಯಿದೆ. ಎಷ್ಟೋ ವಿಷಯಗಳನ್ನು ವ್ಯಂಗ್ಯಭರಿತ ಹಾಸ್ಯದ ದಾಟಿಯಲ್ಲಿ ಹೇಳಬಲ್ಲರು. ಒಮ್ಮೊಮ್ಮೆ ಅದು ಎದುರಿನವರಿಗೆ ಕಿರಿಕಿರಿ ಆಗುವಂತೆಯೂ ಇರುತ್ತದೆ. ಅದೇ ಕಾರಣದಿಂದ ಅತ್ಯಂತ ಆತ್ಮೀಯ ಸ್ನೇಹಿತರು ಕೂಡ ಇವರಿಗೆ ಒಳಗೊಳಗೆ ಅಂಜಿಕೊಳ್ಳುವುದು ಉಂಟು. ಆದರೆ ಅಷ್ಟೇ ಭಾವುಕಜೀವಿ. ನನ್ನ ಆತ್ಮೀಯ ಸ್ನೇಹಿತನೂ ಆಗಿದ್ದ ಅವರ ತಮ್ಮ ವೈ.ಕೆ.ರಂಗಪ್ಪನನ್ನು ಯಾರೋ ದಾರಿಹೋಕ ಹುಡುಗರು ಚಿಲ್ಲರೆ ಕಾಸಿಗಾಗಿ ಚುಚ್ಚಿ ಕೊಲೆ ಮಾಡಿದಾಗ ಮಗುವಿನಂತೆ ಅತ್ತಿದ್ದರು. ತೀರ ಇತ್ತೀಚೆಗೆ ಅವರ ಅಪ್ಪ ಅಮ್ಮ ಕೈ ಬಿಟ್ಟು ಹೋದಾಗಲೂ ಭಾವುಕತೆಯಿಂದ ಚಡಪಡಿಸಿದ್ದರು.  ಅಷ್ಟೇ ಅಲ್ಲ, ಅವರು ಬೇರೆಯವರ ಕಷ್ಟಕ್ಕೆ ಕರಗುವ ಮನುಷ್ಯ. ತಾನು ಬಲ್ಲವರು, ಆತ್ಮೀಯರು ಯಾರಾದರೂ ತೊಂದರೆಯಲ್ಲಿದ್ದಾರೆ, ಆರೋಗ್ಯ ಸಮಸ್ಯೆಯಲ್ಲಿದ್ದಾರೆ ಎಂದು ಗೊತ್ತಾದರೆ ಅವರಿದ್ದಲ್ಲಿಗೆ ಧಾವಿಸಿ ನಿರರ್ಗಳವಾಗಿ ಸ್ವಲ್ಪ ಹೊತ್ತು ಬೈದು ಸಹಾಯ ಮಾಡಿ ಬರುವ ಗುಣ ಅವರಲ್ಲಿದೆ.  ಅವರನ್ನು ನೋಡಿದ ಯಾರೇ ಆಗಲಿ ಅವರಿಗೆ ಅರವತ್ತು ರ‍್ಷ ತುಂಬಿದೆ ಎಂದು ಹೇಳಲು ಸಾಧ್ಯವಿಲ್ಲ ಅಷ್ಟರಮಟ್ಟಿಗೆ ಆರೋಗ್ಯವನ್ನು ಮತ್ತು ಉತ್ಸಾಹವನ್ನು ಕಾಪಾಡಿಕೊಂಡು ಬಂದಿದ್ದಾರೆ. ಹಾಗಾಗಿ ವೃತ್ತಿಯಿಂದ ನಿವೃತ್ತರಾದರು ಪ್ರವೃತ್ತಿಯಿಂದ ಅವರು ನಿವೃತ್ತರಾಗಲು ಸಾಧ್ಯವಿಲ್ಲ ಎಂಬುದು ನನ್ನ ಭಾವನೆ.


       ಎಪ್ಪತ್ತು ಎಂಬತ್ತರ ದಶಕದಲ್ಲಿ ಉದಯವಾದ ನಾಡಿನ ದಲಿತ ಮತ್ತು ರೈತ ಚಳುವಳಿಗಳ ಹೋರಾಟದ ಕುಲುಮೆಯಲ್ಲಿ ಬೆಳೆದು ಬಂದ “ವೈ.ಕೆ.ಬಾಲಕೃಷ್ಣಪ್ಪ”  ಎಂಬ ವಿಚಿತ್ರ ಸ್ವಭಾವದ ಸ್ನೇಹಪರ ಮನುಷ್ಯ ನಮ್ಮನ್ನು ಪ್ರಭಾವಿಸಿದ ಚಳುವಳಿಗಳು ನೈತಿಕ ಶಕ್ತಿ ಕಳೆದುಕೊಂಡು ದರ‍್ಬಲವಾಗಿರುವ ಹೊತ್ತಿನಲ್ಲಿ ಅಂತಹ ಹೋರಾಟಗಳ ಪುನಶ್ಚೇತನಕ್ಕೆ ತಮ್ಮ ಮುಂದಿನ ನಿವೃತ್ತಿಯ ಬದುಕನ್ನು ಮುಡುಪಾಗಿಡಲಿ ಎಂದು ಆಶಿಸುತ್ತಾ ಅವರ ನಿವೃತ್ತಿಯ ಬದುಕು ನೆಮ್ಮದಿಯಿಂದ ಕೂಡಿರಲಿ ಎಂದು ಅಪೇಕ್ಷಿಸುತ್ತೇನೆ.
       -