ಓದಿನ ಪ್ರೀತಿಗಾಗಿ - ಎಂ.ಎಚ್.ನಾಗರಾಜು -'ವೀರಪಥʼ

ಓದಿನ ಪ್ರೀತಿಗಾಗಿ - ಎಂ.ಎಚ್.ನಾಗರಾಜು -'ವೀರಪಥʼ
ಓದಿನ ಪ್ರೀತಿಗಾಗಿ - ಎಂ.ಎಚ್.ನಾಗರಾಜು -'ವೀರಪಥʼ

ಓದಿನ ಪ್ರೀತಿಗಾಗಿ

ಎಂ.ಎಚ್.ನಾಗರಾಜು


“ಮುಮ್ಮಡಿ ಕೃಷ್ಣರಾಜ ಒಡೆಯರ ರಾಣಿಯರಲ್ಲಿ ಒಬ್ಬರಾದ ದೇವರಾಜಮ್ಮಣ್ಣೀ ಅವರ ತವರು ತುರುವೇಕೆರೆಯಾಗಿತ್ತು. ಅವರು ತುರುವೇಕೆರೆ ನಿವಾಸಿಯಾಗಿದ್ದ ವೀರರಾಜ ಅರಸ್ ಅವರ ಪುತ್ರಿಯಾಗಿದ್ದರು. ಈ ಭಾವನಾತ್ಮಕ ನಂಟಿನ ಕಾರಣದಿಂದಾಗಿ ತುರುವೇಕೆರೆ ಜನ ಸ್ವಾತಂತ್ರö್ಯ ಹೋರಾಟದಲ್ಲಿ ಸಕ್ರಿಯರಾಗಿ ಭಾಗವಹಿಸದೆ ಮಹಾರಾಜರಿಗೆ ಮತ್ತು ಅರಮನೆಗೆ ನಿಷ್ಠರಾಗಿದ್ದರು.”


ಪ್ರೊ. ಕೆ. ಪುಟ್ಟರಂಗಪ್ಪನವರ ‘ವೀರಪಥ’


ಪ್ರೊಫೆಸರ್ ಕೆ. ಪುಟ್ಟರಂಗಪ್ಪ ಅವರು ವಿಶ್ರಾಂತ ಇತಿಹಾಸದ ಪ್ರಾಧ್ಯಾಪಕರು. ತುರುವೇಕೆರೆ ಪಟ್ಟಣದ ನಿವಾಸಿಗಳು. ರಾಜಕೀಯೇತರ ತುರುವೇಕೆರೆಯ ಸಾರ್ವಜನಿಕ ಬದುಕಿನಲ್ಲಿ ಅವರಿಗೊಂದು ಗಣ್ಯ ಸ್ಥಾನ ಇದೆ. ಪೂಜ್ಯ ಭಾವ ಇದೆ. ಅವರ ನಡೆನುಡಿಗೆ ಗೌರವದ ಸ್ಥಾನ ಇದೆ. ಮೂರು ಮುಕ್ಕಾಲು ದಶಕ ಆದಿಚುಂಚನಗಿರಿ ಮತ್ತು ನಾಗಮಂಗಲದ ಪದವಿ ಕಾಲೇಜುಗಳಲ್ಲಿ ಚರಿತ್ರೆಯ ಪಾಠ ಹೇಳಿರುವ, ನಿವೃತ್ತಿಯ ನಂತರವೂ ವಿಶ್ರಾಂತರಾಗದೆ ಅವಿಶ್ರಾಂತರಾಗಿ ತುರುವೇಕೆರೆ ಪಟ್ಟಣದ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಗಳಲ್ಲಿ ಆಡಳಿತಾಧಿಕಾರಿಯಾಗಿ, ಮಠಮಾನ್ಯಗಳಲ್ಲಿ ಪಾರುಪತ್ತೇಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಸ್ಥಳೀಯ ಸಾಹಿತ್ಯ, ಚರಿತ್ರೆ, ಶಿಕ್ಷಣ, ಸಮಾಜಸೇವಾ ಕ್ಷೇತ್ರಗಳಿಗೆ ನೀಡುತ್ತಿರುವ ಕೊಡುಗೆ ಶ್ಲಾö್ಯಘನೀಯ.
ಇತ್ತೀಚೆಗೆ, ಅವರು ಬರೆದಿರುವ, ಭಾರತ ಸ್ವಾತಂತ್ರö್ಯದ ಅಮೃತ ಮಹೋತ್ಸವದ ಸವಿನೆನಪಿನ ಕೃತಿ `ವೀರಪಥ’ ನನ್ನ ಓದಿಗೆ ದಕ್ಕಿದ ಕೃತಿಯಾಗಿದೆ. ಈ ವೀರಪಥ ತುರುವೇಕೆರೆ ತಾಲ್ಲೂಕಿನ ಸ್ವಾತಂತ್ರö್ಯ ಹೋರಾಟಗಾರರ ವೀರಕಥನವೂ ಆಗಿರುವುದು ಕೃತಿಯ ವಿಶೇಷವಾಗಿದೆ.
168 ಪುಟಗಳ, 150 ರೂ ಮುಖಬೆಲೆಯ, ಡೆಮ್ಮಿ ಓನ್ ಏತ್ ಸೈಜಿನಲ್ಲಿರುವ ವೀರಪಥ 2021ರಲ್ಲಿ ಕಾಡಶೆಟ್ಟಿಹಳ್ಳಿ ಶ್ರೀ ದೈತಮಾರಮ್ಮ ದೇವಸ್ಥಾನ ಚಾರಿಟಬಲ್ ಟ್ರಸ್ಟ್, ಕಾಡಶೆಟ್ಟಿಹಳ್ಳಿ, ಅಮೃತೂರು ಹೋಬಳಿ, ಕುಣಿಗಲ್ ತಾಲ್ಲೂಕಿನಿಂದ ಪ್ರಕಟಣೆಗೊಂಡಿದೆ. ಕಲಾವಿದ ಶ್ರೀ ಮೋನಪ್ಪ ಅವರು ಮುಖಪುಟ ವಿನ್ಯಾಸ ಮಾಡಿದ್ದು, ಪುಸ್ತದ ಸೊಗಸಿಗೆ, ಸೌಂದರ್ಯಕ್ಕೆ ಕೊಡುಗೆ ನೀಡಿದ್ದಾರೆ. ಕೃತಿಯ ಲೋಕಾರ್ಪಣೆ ಸಮಾರಂಭವನ್ನೇ ತುರುವೇಕೆರೆಯ ಹಬ್ಬದಂತೆ ಆಚರಿಸಿದ್ದು, ಒಂದು ಸಾವಿರಕ್ಕಿಂತಲೂ ಮಿಗಿಲಾಗಿ ಸಹೃದಯ ಜನ ಸೇರಿದ್ದು ಒಂದು ಅಚ್ಚರಿಯ ಸಂಗತಿ. ಈ ಆತ್ಮೀಯರ ಪುಸ್ತಕ ಬಿಡುಗಡೆಗಾಗಿ ಅದರಲ್ಲಿ ಪಾಲ್ಗೊಂಡಿದ್ದ ನಾನು ಆ ಜನಸಾಗರವನ್ನು ಕಂಡು ನಿಬ್ಬೆರಗಾದೆ.
ನಾಡಿನ ದಾಸ್ಯ ವಿಮೋಚನೆಗಾಗಿ ಹೋರಾಡಿದ ಎಲ್ಲ ಸ್ವಾತಂತ್ರö್ಯ ಹೋರಾಟಗಾರರಿಗೆ ಗೌರವಪೂರ್ವಕವಾಗಿ ಅರ್ಪಣೆಯಾಗಿರುವ ವೀರಪಥ ಕೃತಿಯಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ|| ನಿರ್ಮಲಾನಂದನಾಥ ಸ್ವಾಮೀಜಿ ಅವರ ಶುಭ ಸಂದೇಶವಿದೆ. ನಾಡಿನ ಖ್ಯಾತ ಕವಿ, ವಿಮರ್ಶಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊಫೆಸರ್ ಎಸ್.ಜಿ. ಸಿದ್ಧರಾಮಯ್ಯ ಅವರು ಮುನ್ನುಡಿಯ ಮಾತುಗಳು ಇವೆ. `ಹೋರಾಟದಲ್ಲಿ ಸಂಘಟನೆಯ ಶಕ್ತಿಯಾದವರು’ ಎಂದು ಆ ಮುನ್ನುಡಿಗೆ ಶೀರ್ಷಿಕೆ ನೀಡಿದ್ದಾರೆ. ಅರ್ಥಪೂರ್ಣ, ವಿಚಾರಪೂರ್ಣ ಮುನ್ನುಡಿ. ಆಗಬೇಕಾದ, ಬಾಕಿ ಇತಿಹಾಸದ ಬಗ್ಗೆ ಅವರು ಬೆಳಕು ಚೆಲ್ಲಿದ್ದಾರೆ.
ವೀರಪಥದ ಪರಿವಿಡಿಯನ್ನು ಗಮನಿಸಿದಾಗ ಮುಖ್ಯವಾಗಿ ತುರುವೇಕೆರೆ ತಾಲ್ಲೂಕಿನ ಐತಿಹಾಸಿಕ ಹಿನ್ನೆಲೆ, ತುರುವೇಕೆರೆ ತಾಲ್ಲೂಕಿನ ಸ್ವಾತಂತ್ರö್ಯ ಹೋರಾಟಗಾರರು, ಕೃತಿ ಕುರಿತು ಅಭಿಪ್ರಾಯಗಳು ಮತ್ತು ಗ್ರಂಥ ಋಣ ಎಂದು ನಾಲ್ಕು ಭಾಗಗಳಿವೆ. ಸುದೀರ್ಘವಾದ ಎರಡನೇ ಭಾಗ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಸೇರಿದ ಎಂಬತ್ತೊAಭತ್ತು ಜನ ಸ್ವಾತಂತ್ರö್ಯ ಹೋರಾಟಗಾರರ ಬದುಕಿನ ಕಥನಗಳನ್ನು ಒಳಗೊಂಡಿರುವುದು ಕೃತಿಯ ಮುಖ್ಯ ಹೂರಣವಾಗಿದೆ.
ಮೊದಲ ಭಾಗ ಅಥವಾ ಅಧ್ಯಾಯದಲ್ಲಿ ತುಮಕೂರು ಜಿಲ್ಲೆಯ ಹತ್ತು ತಾಲ್ಲೂಕುಗಳಲ್ಲಿ ಒಂದಾಗಿರುವ ತುರುವೇಕೆರೆ ತಾಲ್ಲೂಕಿನ ಸಧ್ಯದ ಸ್ಥಿತಿಯನ್ನು, ನೆಲ-ಜಲ-ಜನ-ಗಡಿ-ಭಾಷೆ-ಸಂಸ್ಕೃತಿಯನ್ನು, ಪರಂಪರೆಯನ್ನು ಪರಿಚಯಿಸುವ, ದಾಖಲಿಸುವ ಪ್ರಯತ್ನ ಮಾಡಲಾಗಿದೆ. 1881 ರವರೆಗೆ ಕಡಬ ತಾಲ್ಲೂಕಿನ ವ್ಯಾಪ್ತಿಯಲ್ಲಿದ್ದು, 1881ರಲ್ಲಿ ತಿಪಟೂರು ತಾಲ್ಲೂಕಿನ ಉಪತಾಲ್ಲೂಕ್ ಆಗಿ ಸೇರ್ಪಡೆಯಾಗಿದ್ದು, 1938ರಲ್ಲಿ ಸ್ವತಂತ್ರ ತಾಲ್ಲೂಕು ಆಗಿ ಅಸ್ತಿತ್ವಕ್ಕೆ ಬಂದ ಚಾರಿತ್ರಿಕ ಮೈಲಿಗಲ್ಲುಗಳನ್ನು ಮೆಲುಕು ಹಾಕುತ್ತಾರೆ. ಹಾಗೇ ಈ ತಾಲ್ಲೂಕಿನಲ್ಲಿ ಪ್ರಾಗೈತಿಹಾಸಿಕ ಶಿಲಾಯುಗದ ಮಾನವನ ಹೆಜ್ಜೆಗುರುತುಗಳನ್ನು ಗುರುತಿಸುವ ಪ್ರಯತ್ನ ಮಾಡಿದ್ದಾರೆ.
ಪ್ರಾಗೈತಿಹಾಸಿಕದಿಂದ ಪೌರಾಣಿಕ ಕಾಲಕ್ಕೆ ಬಂದು, ಅಲ್ಲಿಂದ ಐತಿಹಾಸಿಕ ಕಾಲಕ್ಕೆ ಜಿಗಿದು, ಸ್ಥಳೀಯ ಚರಿತ್ರೆಯನ್ನು ಸಿಂಹಾವಲೋಕನ ಮಾಡುವ ಪ್ರಯತ್ನ ಮಾಡಿ ಲೇಖಕರು ಯಶಸ್ವಿಯಾಗಿದ್ದಾರೆ. ಅದರಲ್ಲೂ ಹೊಯ್ಸಳ ಅರಸರ ಕಾಲದಲ್ಲಿ ತುರುವೇಕೆರೆ, ನೊಣವಿನಕೆರೆ, ತಂಡಗ, ಮಾಯಸಂದ್ರ, ಸಂಪಿಗೆ, ದಂಡಿನಶಿವರ ಮೊದಲಾದ ಸ್ಥಳಗಳು ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಮುಖ್ಯ ನೆಲೆಗೆ ಹೇಗೆ ಬಂದವು ಎನ್ನುವುದನ್ನು ದಾಖಲಿಸಿದ್ದಾರೆ. ನಂತರದಲ್ಲಿ ವಿಜಯನಗರದರಸರು ಮತ್ತು ಮೈಸೂರು ಒಡೆಯರ ಕಾಲದ ಚಾರಿತ್ರಿಕ ನಂಟನ್ನು ಚಿತ್ರಿಸಿದ್ದಾರೆ.
ಸ್ವಾತಂತ್ರö್ಯ ಹೋರಾಟದ ಸಂದರ್ಭದಲ್ಲಿ ತುರುವೇಕೆರೆ ತಾಲ್ಲೂಕು ಸಂಪೂರ್ಣವಾಗಿ ನಿರ್ಲಿಪ್ತವಾಗಿತ್ತು. ತುರುವೇಕೆರೆ ತಾಲ್ಲೂಕು ಮಾತ್ರವಲ್ಲ, ಇಡೀ ಮೈಸೂರು ಸಂಸ್ಥಾನದಲ್ಲಿ ಸ್ವಾತಂತ್ರö್ಯ ಚಳವಳಿಯ ಕಾವು ಅಷ್ಟಾಗಿ ಇರಲಿಲ್ಲ. ಕಾರಣ ಬ್ರಿಟೀಷ್ ವಸಾಹತುಶಾಹಿಯ ನೇರ ಆಳ್ವಿಕೆಗೆ ಸೇರದ, ಅವರ ಅಧಿಕಾರ ಶಾಹಿ ಆಡಳಿತದ ಕ್ರರ‍್ಯದ ರುಚಿ ನೋಡದ ಮೈಸೂರಿಗರಿಗೆ ನಮ್ಮನ್ನಾಳುತ್ತಿರುವುದು ನಮ್ಮವರೇ ಆದ ಮಹಾರಾಜರು, ಎನ್ನುವಂತಹ ವ್ಯಾಮೋಹ. ಜೊತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಅರಿವು ಇರದ ಅನಕ್ಷರಸ್ಥ ಜನಸಮುದಾಯ `ರಾಜ ಪ್ರತ್ಯಕ್ಷ ದೈವ’ ಎಂಬ ಭಾವನೆ ಹೊಂದಿದ್ದುದು. ಕೃಷ್ಣರಾಜ ಭೂಪ ಮನೆ ಮನೆಯ ದೀಪ ಎಂಬ ಪರಿಭಾವನೆ ಜನಸಾಮಾನ್ಯರಲ್ಲಿ ಇದ್ದಾಗ ಹೋರಾಟ ಹೇಗೆ ಸಾಧ್ಯ?
ಹೈದರಾಲಿ ಮತ್ತು ಟಿಪ್ಪುಸುಲ್ತಾನ್, ಈ ಇಬ್ಬರೇ ಮೈಸೂರಿನ ನೆಲದಲ್ಲಿ ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ನೈಜ ಹೋರಾಟ ಮಾಡಿದವರು. ಆನಂತರದಲ್ಲಿ ಅಲ್ಲೊಂದು, ಇಲ್ಲೊಂದು ಸಣ್ಣಪುಟ್ಟ ದಂಗೆಗಳು. ಕ್ರಿ.ಶ. 1860 ರಿಂದ 1915 ರವರೆಗೆ ಅಹಿಂಸಾತ್ಮಕ ಹೋರಾಟದ ಪ್ರಜ್ಞೆ ಕನ್ನಡಿಗರಲ್ಲಿ ಮೈಸೂರಿಗರಲ್ಲಿ ಇರಲಿಲ್ಲ. 1915ರಲ್ಲಿ ದಕ್ಷಿಣ ಆಫ್ರಿಕಾದಿಂದ ಗಾಂಧಿ ಭಾರತಕ್ಕೆ ಬಂದರು. ಭಾರತದ ಸ್ವಾತಂತ್ರö್ಯ ಹೋರಾಟ ಜನಾಂದೋಲನವಾಗಿ ಪರಿವರ್ತನೆ ಮಾಡಿದರು. ಗಾಂಧಿ ಪ್ರಭಾವ ಮತ್ತು ಪ್ರೇರಣೆಗೆ ಒಳಗಾದ ಮೈಸೂರಿಗರು ಜಾಗೃತರಾದರು. ಕ್ರಿ.ಶ. 1919 ರಿಂದ 1947 ರವರೆಗೆ ನಡೆದ ಅಸಹಕಾರ ಚಳವಳಿ, ಕಾನೂನುಭಂಗ ಚಳವಳಿ, ಧ್ವಜ ಸತ್ಯಾಗ್ರಹ, ಪಾನನಿರೋಧ, ಅರಣ್ಯ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿ ಮತ್ತು ಕಡೆಯದಾಗಿ ಮೈಸೂರು ಚಲೋ ಚಳವಳಿಗಳಲ್ಲಿ ಮೈಚಳಿಬಿಟ್ಟು ಹೋರಾಟಕ್ಕಿಳಿದರು. ಈ ಎಲ್ಲ ಮಾಹಿತಿಯನ್ನು ಲೇಖಕರು ವೀರಪಥದಲ್ಲಿ ಪ್ರಾಸಂಗಿಕವಾಗಿ ದಾಖಲಿಸಿದ್ದಾರೆ.
ಗಮನಿಸತಕ್ಕ ಒಂದು ಸಂಗತಿಯೆAದರೆ ತಡವಾಗಿಯಾದರೂ ಮೈಸೂರು ಸಂಸ್ಥಾನದಲ್ಲಿ ಚಳವಳಿ ಆರಂಭವಾಯಿತು. ಆದರೆ ಚಳವಳಿಯ ಕೇಂದ್ರ ಮೈಸೂರು, ಬೆಂಗಳೂರು, ತುಮಕೂರು, ಮಂಡ್ಯ ಮತ್ತಿತರ ಜಿಲ್ಲಾಕೇಂದ್ರಗಳೇ ಆಗಿದ್ದವೇ ಹೊರತು, ತಾಲ್ಲೂಕು ಇಲ್ಲವೇ ಹೋಬಳಿ ಹಂತಕ್ಕೆ ತಲುಪಿರಲಿಲ್ಲ. ಈ ಕಾರಣದಿಂದಾಗಿ ತುರುವೇಕೆರೆ ತಾಲ್ಲೂಕು ಸಹ ಚಳವಳಿಗೆ ಮೌನಸ್ಪಂದನೆ ನೀಡಿತು.
ಇನ್ನೊಂದು ಮಾತನ್ನು ಲೇಖಕರು ಇಲ್ಲಿ ದಾಖಲಿಸುತ್ತಾರೆ. ಏನೆಂದರೆ ಮುಮ್ಮಡಿ ಕೃಷ್ಣರಾಜ ಒಡೆಯರ ರಾಣಿಯರಲ್ಲಿ ಒಬ್ಬರಾದ ದೇವರಾಜಮ್ಮಣ್ಣೀ ಅವರ ತವರು ತುರುವೇಕೆರೆಯಾಗಿತ್ತು. ಅವರು ತುರುವೇಕೆರೆ ನಿವಾಸಿಯಾಗಿದ್ದ ವೀರರಾಜ ಅರಸ್ ಅವರ ಪುತ್ರಿಯಾಗಿದ್ದರು. ಈ ಭಾವನಾತ್ಮಕ ನಂಟಿನ ಕಾರಣದಿಂದಾಗಿ ತುರುವೇಕೆರೆ ಜನ ಸ್ವಾತಂತ್ರö್ಯ ಹೋರಾಟದಲ್ಲಿ ಸಕ್ರಿಯರಾಗಿ ಭಾಗವಹಿಸದೆ ಮಹಾರಾಜರಿಗೆ ಮತ್ತು ಅರಮನೆಗೆ ನಿಷ್ಠರಾಗಿದ್ದರು.
ಇದರ ಐತಿಹಾಸಿಕ ಸತ್ಯ ಏನೇ ಇರಲಿ, ಬೇರೆ ಬೇರೆ ಕಾರಣಗಳಿಗಾಗಿ ಸಂಸ್ಥಾನದ ಎಲ್ಲಾ ತಾಲ್ಲೂಕುಗಳಂತೆ ತುರುವೇಕೆರೆ ತಾಲ್ಲೂಕಿನಲ್ಲಿಯೂ ಬಹಳ ನಿಧಾನವಾಗಿ ಸ್ವಾತಂತ್ರö್ಯ ಚಳವಳಿ ಆರಂಭವಾಯಿತು. ನೂರಾರು, ಸಾವಿರಾರು ಜನ ಚಳವಳಿಯಲ್ಲಿ ಭಾಗಿಯಾದರು. ಇವರಲ್ಲಿ ಕೆಲವರು ಸಂಸ್ಥಾದಲ್ಲಿ ಮಟ್ಟದಲ್ಲಿ, ಜಿಲ್ಲಾಮಟ್ಟದಲ್ಲಿ ಹೆಸರು ಮಾಡಿದರೆ, ಬಹುಸಂಖ್ಯಾತ ಹೋರಾಟಗಾರರು ಸ್ಥಳಿಯವಾಗಿಯೇ ತಮ್ಮ ಇತಿಮಿತಿಯಲ್ಲಿ ಹೋರಾಟ ಮಾಡಿದರು. ಅಂತಹ 89 ಜನ ಸ್ವಾತಂತ್ರö್ಯ ಹೋರಾಟಗಾರರ ಪಟ್ಟಿಯನ್ನು ಲೇಖಕರು ನೀಡಿದ್ದಾರೆ.
ಬಹುಮುಖ್ಯವಾದ ಎರಡನೇ ಅಧ್ಯಾಯದಲ್ಲಿ ದಾಖಲೆಗೆ ಸಿಕ್ಕಿರುವ ಸ್ವಾತಂತ್ರö್ಯ ಹೋರಾಟಗಾರರು ಹೇಗೆ ಹೇಗೆಲ್ಲಾ ಭಾಗವಹಿಸಿದರು. ಲಾಠಿ ಮತ್ತು ಬೂಟಿನೇಟಿಗೆ ಎದೆಯೊಡ್ಡಿದರು, ಎಲ್ಲೆಲ್ಲಿ ತುರಂಗವಾಸ ಅನುಭವಿಸಿದರು ಎನ್ನುವ ಎಲ್ಲಾ ಸಂಗತಿಗಳನ್ನು ದಾಖಲಿಸಿದ್ದಾರೆ. ಅಂದು ಗಾಂಧಿ ಪ್ರತಿಪಾದಿಸಿದ ಖಾದಿ ಧಾರಣೆಯೇ ಸ್ವಾತಂತ್ರö್ಯ ಹೋರಾಟದ ಸ್ವರೂಪ ಪಡೆದಿತ್ತು. ಗಾಂಧಿ ತತ್ವ, ಅವರ ಹದಿನೆಂಟು ರಚನಾತ್ಮಕ ಕಾರ್ಯಕ್ರಮಗಳ ಪ್ರಚಾರವೇ ಹೋರಾಟದ ಮತ್ತೊಂದು ವಿಧಾನವಾಗಿತ್ತು.
ತುರುವೇಕೆÀರೆ ತಾಲ್ಲೂಕಿನ ಸ್ವಾತಂತ್ರö್ಯ ಹೋರಾಟಗಾರರಲ್ಲಿ ಅಗ್ರಗಣ್ಯರಾದವರು ತಾಳಕೆರೆ ಸುಬ್ರಹ್ಮಣ್ಯ ಅವರು. ಮೈಸೂರು ಸಂಸ್ಥಾನದಲ್ಲಿ ಕ್ರಿ.ಶ. 1920 ರಿಂದ 1947ರವರೆಗೆ ನಡೆದ ಎಲ್ಲಾ ಚಳವಳಿಗಳಲ್ಲಿ ಭಾಗವಹಿಸಿದ್ದು ಒಂಭತ್ತು ಸಾರಿ ಬಂಧಿತರಾಗಿ ಆರು ವರ್ಷಗಳ ಕಾಲ ಸೆರೆವಾಸ ಅನುಭವಿಸಿದ ತಾಳಕೆರೆ ಅವರು ಮೈಸೂರು ಸಂಸ್ಥಾನದ ಸ್ವಾತಂತ್ರö್ಯ ಹೋರಾಟಗಾರರಲ್ಲಿ ಬಹುದೊಡ್ಡ ಹೆಸರು, ದೊಡ್ಡ ಪಾತ್ರ. ಅವರು ಕಾಂಗ್ರೆಸ್ಸಿನ, ಹೋರಾಟದ ಮುಂಚೂಣಿ ನಾಯಕರಾಗಿದ್ದರು. ಈ ಮಹನೀಯರ ಹೋರಾಟದ ಎಲ್ಲ ಹಂತಗಳನ್ನು, ಬದುಕಿನ ಎಲ್ಲ ಸಂಗತಿಗಳನ್ನು ಸವಿವರವಾಗಿ ಲೇಖಕರು ದಾಖಲಿಸಿದ್ದಾರೆ.
ತಾಳಕೆರೆ ಅವರ ಹಾದಿಯಲ್ಲಿಯೇ ಹೋರಾಟದ ದಾರಿಯಲ್ಲಿ ಸಾಗಿದವರು ಅವರ ಪತ್ನಿ ಸುಶೀಲಾ ಸುಬ್ರಹ್ಮಣ್ಯ. ಹಾಗೇ ಶ್ರೀರಾಂಪುರದ ಎಸ್.ಬಿ. ನಂಜೇಗೌಡ, ಕಲ್ಕೆರೆ ಚಿಕ್ಕೇಗೌಡ, ಮಾಯಸಂದ್ರದ ಮಾ.ಕೃ. ನರಸಿಂಹಯ್ಯ, ಮಾ.ನಂ. ಶ್ರೀಕಂಠಯ್ಯ, ಮಾ.ನಾ. ರಾಮಣ್ಣ, ತುರುವೇಕರೆ ಡಿ. ರಾಮಸ್ವಾಮಿ, ದಂಡಿನಶಿವರದ ನಂಜಪ್ಪ, ಮಾಯಸಂದ್ರದ ಎಂ.ಎಚ್. ನರಸಿಂಹಯ್ಯ ಹೀಗೇ ತಾಲ್ಲೂಕಿನ ಹೋರಾಟಗಾರರ ಯಾದಿ ಬೆಳೆಯುತ್ತದೆ.
ತಾಲ್ಲೂಕಿನ ಪ್ರಾತಃಸ್ಮರಣೀಯರಾದ ಟಿ.ಬಿ. ರಾಮರಾವ್, ಎಂ.ಪಿ.ವಜ್ರನಾಭಯ್ಯ, ಎಂ.ಪಿ.ಜ್ವಾಲನಯ್ಯ, ಕೆಂಪೇಗೌಡ, ಬಿ.ಎಂ. ಶೇಷೇಗೌಡ, ಶಂಕರಪ್ಪ, ಹೊಸಮನೆ ತೋಪೇಗೌಡ, ಕೆ.ಹನುಮೇಗೌಡ, ಟಿ.ಶಂಕರೇಗೌಡ ಮೊದಲಾದವರು ಸ್ವಾತಂತ್ರö್ಯ ಹೋರಾಟದ ವಿವಿಧ ಹಂತಗಳಲ್ಲಿ ಭಾಗವಹಿಸಿದರು. ತುರುವೇಕೆರೆ ತಾಲ್ಲೂಕಿನ ಘನತೆಯನ್ನು ಹೆಚ್ಚಿಸಿದರು.
ವಿರ‍್ಯಾಸ ಎಂದರೆ ಎಲ್ಲ ಹೋರಾಟಗಾರ ಜೀವನ-ಹೋರಾಟ-ಸಾಧನೆಯ ದಾಖಲೀಕರಣವಾಗಿಲ್ಲ. ಎಲ್ಲ ಐತಿಹಾಸಿಕ ಸಂಗತಿಗಳು ಕಾಲನ ದಾಳಿಗೆ ತುತ್ತಾಗಿ ಮರೆಯಾಗಿವೆ. ಅದರಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳ ವೈಯಕ್ತಿಕ ವಿವರಗಳೇ ದೊರೆಯುವುದಿಲ್ಲ. ಇದನ್ನು ಗಮನಿಸಿದರೆ ದಾಖಲೀಕರಣದ ಮಹತ್ವ ಏನು? ಎಷ್ಟು? ಎಂಬುದು ಅರಿವಾಗುತ್ತದೆ.
ಪ್ರೊಫೆಸರ್ ಕೆ. ಪುಟ್ಟರಂಗಪ್ಪನವರು ವೀರಪಥ ಕೃತಿಯನ್ನು ರಚಿಸಿ ಮಹದುಪಕಾರ ಮಾಡಿದ್ದಾರೆ. ಸ್ವಾತಂತ್ರö್ಯ ಹೋರಾಟದ ವಿವಿಧ ಹಂತದ ಪರಿಕಲ್ಪನೆ ನಮಗೆ ದೊರೆಯುವಂತೆ ಮಾಡಿದ್ದಾರೆ. ವೀರಪಥದ ಬೈಪ್ರೊಡಕ್ಟ್ ಆಗಿ `ತುಮಕೂರಿನ ವೀರ ವನಿತೆಯರು’ ಕಿರು ಕೃತಿಯೂ ಸಹ ರೂಪುಗೊಂಡಿದೆ. ಇದರಲ್ಲಿ ಜಿ.ಸಿ. ಭಾಗೀರಥಮ್ಮ, ಸುಶೀಲಾ ಸುಬ್ರಹ್ಮಣ್ಯ, ಸುಲೋಚನಾದೇವಿ ಆರಾಧ್ಯ, ಚಿನಕವಜ್ರದ ಲಕ್ಷö್ಮಮ್ಮ, ಬಾಲಹೋರಾಟಗಾರ್ತಿ ಟಿ.ಎಸ್. ನಾಗರತ್ನಮ್ಮ ಅವರುಗಳ ಜೀವನ ಸಾಧನೆ ಹೋರಾಟಗಳ ವಿವರಗಳು ದೊರೆಯುತ್ತವೆ.
ಈ ಎರಡೂ ಕೃತಿಗಳ ಮೂಲಕ ಲೇಖಕ ಪ್ರೊ. ಪುಟ್ಟರಂಗಪ್ಪ ಅವರು ಸ್ಥಳೀಯ ಚರಿತ್ರೆಯ ಅಧ್ಯಯನಕ್ಕೆ ತಮ್ಮನ್ನು ತಾವು ನಿವೇದಿಸಿಕೊಂಡಿದ್ದಾರೆ. ಅವರು ಇದೇ ಹಾದಿಯಲ್ಲಿ ಸಾಗಲಿ, ಕಣ್ಮರೆಯಾಗುತ್ತಿರುವ ಅಥವಾ ಚಹರೆ ಕಳೆದುಕೊಳ್ಳುತ್ತಿರುವ ಇತಿಹಾಸ ಮಹತ್ವದ ಸಂಗತಿಗಳನ್ನು, ಘಟನೆಗಳನ್ನು ಕೃತಿ ರೂಪದಲ್ಲಿ ದಾಖಲೀಕರಣ ಮಾಡಲಿ. ಎಷ್ಟೇ ಕಷ್ಟವಾದರೂ ಇಂಥ ಪ್ರಯತ್ನ ಮುಂದುವರೆಸಲಿ. ಇದು ನಾನು ಅವರಿಗೆ ನೀಡುತ್ತಿರುವ ಹೋಂವರ್ಕ್. ಈ ಹೋಂವರ್ಕ್ ಅನ್ನು ಖಂಡಿತವಾಗಿ ಮಾಡುತ್ತಾರೆ ಅನ್ನುವ ಭರವಸೆ ನನ್ನದಾಗಿದೆ.