ಓದಿನ ಪ್ರೀತಿಗಾಗಿ - ಓಟು-ಮಧುಗಿರಿಯ ನೆಲದೊಡಲಿನ ಕಥೆಗಳ ಸಂಕಲನ

ಓದಿನ ಪ್ರೀತಿಗಾಗಿ - ಓಟು-ಮಧುಗಿರಿಯ ನೆಲದೊಡಲಿನ ಕಥೆಗಳ ಸಂಕಲನ

ಓದಿನ ಪ್ರೀತಿಗಾಗಿ

ಎಂ.ಎಚ್.ನಾಗರಾಜು


ಓಟು-ಮಧುಗಿರಿಯ ನೆಲದೊಡಲಿನ ಕಥೆಗಳ ಸಂಕಲನ


ಹೆಚ್ಚು ಕಡಿಮೆ ಕಳೆದ ಮೂವತ್ತು ವರ್ಷಗಳಿಂದ ನಾನು ನಿಕಟವಾಗಿ ಬಲ್ಲ ಕಥೆಗಾರ್ತಿ ವಿಜಯಾಮೋಹನ್ ಅವರ ಇತ್ತೀಚಿನ ಕಥಾಸಂಕಲನ `ಓಟು’ ನನ್ನ ಕೈಯಲ್ಲಿದೆ. ಅದನ್ನು ಓದುತ್ತಾ ಹೋದಂತೆ ಅವರ ಈ ಮೊದಲೇ ಪ್ರಕಟವಾಗಿ ಓದುಗರ ಗಮನ ಸೆಳೆದು ಕುತೂಹಲ ಹುಟ್ಟಿಸಿರುವ ತಬ್ಬಲಿ ಸಾರು, ಕಣ್ಣಿ, ಜಾತಿ ಕಥಾಸಂಕಲನಗಳು ನನ್ನ ಕಣ್ಣ ಮುಂದೆ ಬಂದವು. ಅವುಗಳೊಳಗಿನ ಕತೆಗಳು, ಕತೆಗಳ ಪಾತ್ರಗಳು, ಪರಿಸ್ಥಿತಿಗಳು, ಸನ್ನಿವೇಶಗಳು, ಪಾತ್ರಗಳ ಮಾತುಗಳು ಸ್ಮೃತಿ ಪಟಲದ ಮೇಲೆ ಹರಿದಾಡಿದವು.
ಮಧುಗಿರಿಯ ನೆಲದೊಡಲಿನ ಕತೆಗಾರ್ತಿ ವಿಜಯಾಮೋಹನ್ ಅವರ ಈ `ಓಟು’ ಕಥಾಸಂಕಲನ ೨೦೧೭ನೇ ಸಾಲಿನಲ್ಲಿ ಬೆಳಕು ಪ್ರಕಾಶನದಿಂದ ಬೆಳಕು ಕಂಡಿದೆ. ಮುಖಪುಟ ವಿನ್ಯಾಸ ಮಾಡಿದ ಕೃಷ್ಣ ರಾಯಚೂರು ಅವರು ಪುಸ್ತಕದ ಸೊಗಸಿಗೆ, ಸೌಂದರ್ಯಕ್ಕೆ ತಮ್ಮ ಸ್ಪರ್ಶ ನೀಡಿದ್ದಾರೆ. ಪ್ರಸಿದ್ಧ ಕಥೆಗಾರರಾದ ಅಮರೇಶ ನುಗಡೋಣಿ ಅವರ ವಿಸ್ತೃತವಾದ ಮುನ್ನುಡಿಯ ಮಾತುಗಳು `ಉರಿವ ಬದುಕುಗಳು’ ಹೆಸರಿನಲ್ಲಿದ್ದು ಕಥೆಗಳ ಒಳಪ್ರವೇಶಿಸಲು ರಹದಾರಿಯಾಗಿವೆ. ಅವರದೇ ಕೆಲವು ಸಾಲುಗಳು ಬೆನ್ನುಡಿಯಲ್ಲೂ ಬಳಕೆಯಾಗಿವೆ.
ಓಟು ಕಥಾಸಂಕಲನದಲ್ಲಿ ಪಾಡು, ಹೆಜ್ಜೆ, ಯಡವಟ್ಟು, ಗ್ಯಾನ, ತಿಂಗಳ ಬೆಳಕು, ಓಟು, ಸುಂದರಿ, ಸೋಲು, ಕಾಳಗ, ಬಹಿಷ್ಕಾರ, ನ್ಯಾಯ, ಕಿಟಕಿ, ಅಕ್ಕಿ, ಇಲ್ಲದವರು ಮತ್ತು ಮುಳ್ಳು ಹೆಸರಿನ ಹದಿನೈದು ಕಥೆಗಳು ಇವೆ. ಈ ಕಥಾಶೀರ್ಷಿಕೆಗಳು ಮೇಲ್ನೋಟಕ್ಕೇ ಗಮನ ಸೆಳೆಯುತ್ತವೆ. ಆ ಚಿಕ್ಕ ಚಿಕ್ಕ ಶೀರ್ಷಿಕೆಗಳನ್ನು ಓದುತ್ತಾ ಹೋದಂತೆ ಎಸ್.ಎಲ್. ಭೈರಪ್ಪನವರು ಮತ್ತು ಅವರ ದಾಟು, ಪರ್ವ, ಅಂಚು, ಯಾಣ ಮುಂತಾಗಿ ಕಾದಂಬರಿಗಳ ಕಿರು ಶೀರ್ಷಿಕೆಗಳು ನೆನಪಾಗುತ್ತವೆ. ಕತೆಗಾರ್ತಿ ವಿಜಯಾ ತಮ್ಮ ಕತೆಗಳಲ್ಲಿ ಒಂದು ಕತೆಯ ಹೆಸರನ್ನು ಕಥಾಸಂಕಲನಕ್ಕೂ ಇಟ್ಟಿದ್ದಾರೆ. ಆ ಶೀರ್ಷಿಕೆ ಬದಲಿಗೆ `ಓಟು ಮತ್ತು ಇತರ ಕಥೆಗಳು’ ಎಂದು ಇಟ್ಟಿದ್ದರೆ ಚೆನ್ನಿತ್ತು ಅಂತ ನನಗನ್ನಿಸಿದ್ದಿದೆ. 
ಇನ್ನೊಂದು ನನಗನ್ನಿಸಿದ್ದು, ಅವರು ಕತೆ ಹೇಳುವ ದಾರಿಯಲ್ಲಿ ಬಳಸಿರುವ ಭಾಷೆ. ಖಂಡಿತವಾಗಿ ಅದು ಮಧುಗಿರಿಯಂತಹ ಗಡಿನಾಡಿನ ನೆಲದ ಭಾಷೆ, ಸಾಮಾನ್ಯರ ಭಾಷೆ, ಸಮೃದ್ಧವಾದ ಭಾಷೆ. ಮಧುಗಿರಿಯ ಹೊರತಾದ ಓದುಗರಿಗ  ಸುಲಭವಾಗಿ ಓದಿಸಿಕೊಳ್ಳಲು ಬಿಡುವುದಿಲ್ಲ. ಸ್ವಲ್ಪಮಟ್ಟಿಗೆ ಹಿಂಸೆ ಕೊಡುತ್ತದೆ. ಬಳ್ಳಾರಿಯ ಗ್ರಾಮೀಣ ಗಡಿಭಾಗದ ಜನಭಾಷೆಯನ್ನು ಕಥೆಗಾರ ಕುಂವೀ ಬಳಸಿದಂತೆ ಇಲ್ಲಿ ಈ ಭಾಗದಲ್ಲಿ  ವಿಜಯಾಮೋಹನ್ ಬಳಸಿದ್ದಾರೆ. ಅಷ್ಟೇ ದೀರ್ಘವಾದ ವಾಕ್ಯಗಳೂ ಇವೆ. ಹೀಗಾಗಿ ಈ ಮಧುಗಿರಿ ಗಡಿಭಾಗದ ಆಡುಭಾಷೆಗೆ ಪಾರಿಭಾಷಿಕ ಪದಗಳ ಅರ್ಥಕೋಶ ಬೇಕಾಗಬಹುದೇನೋ ಎಂದೆನ್ನಿಸುತ್ತದೆ. ಮುಂದಿನ ದಿನಮಾನಗಳಲ್ಲಿ ಕಥೆಗಾರರು ಇದನ್ನು ಗಮನಿಸಬಹುದು ಎಂಬ ಆಶಾಭಾವನೆ ನನ್ನದು.
ಇಷ್ಟೆಲ್ಲಾ ತಕರಾರುಗಳ ಮಧ್ಯೆ ವಿಜಯ ಅವರಿಗೆ ಕಥೆ ಹೇಳುವ ತಾಕತ್ತು ಇದೆ. ಒಳ್ಳೆಯ ಅಭಿವ್ಯಕ್ತಿ ಇದೆ. ತಾನು ಹುಟ್ಟಿದ ನೆಲದಲ್ಲಿ, ಪರಿಸರದಲ್ಲಿ ಹಳ್ಳಿ-ಪಟ್ಟಣಗಳಲ್ಲಿ ತಾವು ಕಂಡ, ನೋಡಿದ, ಅನುಭವಿಸಿದ, ಅನುಭಾವಿಸಿದ, ಒಡನಾಡಿದ ವ್ಯಕ್ತಿಗಳನ್ನು, ಶಕ್ತಿಗಳನ್ನು, ಸಂಗತಿಗಳನ್ನು, ಕುಟುಂಬಗಳನ್ನು, ಅಲ್ಲಿನ ದಾರುಣ ಬದುಕನ್ನು, ಬೆವರಿನ ವಾಸನೆಯನ್ನು, ಪ್ರೀತಿ-ಪ್ರೇಮ, ಸ್ನೇಹ-ಸಹಕಾರ, ದ್ವೇಷ-ಅಸೂಯೆ-ಹೊಡೆದಾಟ ಹೀಗೆ ಎಲ್ಲವನ್ನು ತನ್ನದೇ ಭಾಷೆಯಲ್ಲಿ ಅಕ್ಷರಕ್ಕಿಳಿಸಿ ಸೃಜನಶೀಲ ಕಥೆಗಳನ್ನಾಗಿಸಿದ್ದಾರೆ, ಅದರಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮೀಣ ಶ್ರೀಸಾಮಾನ್ಯನ ಬದುಕು ಬವಣೆಯೇ ಇಲ್ಲಿನ ಕಥೆಗಳ ಒಟ್ಟು ಹಂದರವಾಗಿದೆ.
ಇದನ್ನು ನೇರವಾಗಿಯೇ ಕಥೆಗಾರ್ತಿ ವಿಜಯ ತಮ್ಮ ಲೇಖಕಿಯ ಮಾತುಗಳಲ್ಲಿ ದಾಖಲಿಸಿದ್ದಾರೆ. ಬದುಕಿಗೆ ಹತ್ತಿರವಾದ, ಮತ್ತು ವಾಸ್ತವವಾದ ಘಟನೆಗಳಿಗೆ ಸದಾ ತೆರೆದುಕೊಂಡಿರಬೇಕು. ಇವತ್ತು ನಮ್ಮ ಸುತ್ತಲೂ ಬದುಕುತ್ತಿರುವ ಮತ್ತು ನಮ್ಮ ಮನಸ್ಸಿಗೆ ಖೇದವೆನ್ನಿಸುವ ನೂರಾರು-ಸಾವಿರಾರು ಶೋಷಿತರು, ನೊಂದವರು, ಬೆಂದವರು, ಬಸವಳಿದವರು, ಅವಮಾನ ಆಸಡ್ಡೆಗಳಿಗೆ ಒಳಗಾದವರು, ಹಸಿವು-ಬಡತನ-ಸೋಗಲಾಡಿತನ-ಇವೆಲ್ಲವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು. ಅವು ಇದ್ದಂತೆ ಪರಿಭಾವಿಸಬೇಕು. ಅವರದೇ ಪಾತ್ರಗಳಲ್ಲಿ ಮಾತುಗಳಲ್ಲಿ ಕಟ್ಟಿಕೊಡಬೇಕು. ಆಗ ಮಾತ್ರ ಕಥೆ ಜೀವಂತವಾಗುತ್ತವೆ. ಸೃಜನಶೀಲವಾಗುತ್ತವೆ. ಈ ಹಾದಿಯಲ್ಲಿ ಆಶಯದಲ್ಲಿ ಸಾಗಿರುವ ಅವರು ಕಥೆ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ತನ್ನತನ ತೋರಿದ್ದಾರೆ.
ಇನ್ನು ಇಲ್ಲಿನ ಹದಿನೈದು ಕಥೆಗಳ ಒಳ-ಹೊರಗನ್ನು ಪರಿಭಾವಿಸುವುದಾದರೆ, ಸಂಕಲನದ ಮೊದಲ ಕಥೆ ಪಾಡು. ಹೊರಗಿನ ಲೋಕಕ್ಕೆ ಸುಪ್ತವಾಗಿ, ಸ್ವಚ್ಚವಾಗಿ ಇದ್ದ ನೆಮ್ಮದಿಯ ಹಳ್ಳಿಯ ಪಕ್ಕದಲ್ಲಿ ಒಂದು ಕೋಳಿಫಾರಂ ಆರಂಭವಾಗುತ್ತದೆ. ಆಗ ಅಲ್ಲಿನ ಪರಿಸರ ದಿಕ್ಕು ಕೆಡುತ್ತದೆ. ಅದು ವಿನಾಶದ ಸಂಕೇತವಾಗಿ ಹಳ್ಳಿಗರಿಗ  ಗೋಚರವಾಗುತ್ತದೆ. ಈ ಎಳೆಯನ್ನು ಹಿಡಿದುಕೊಂಡು ಕಥೆಗಾರರು ತುಂಬ ಸತ್ವಶಾಲಿಯಾಗಿ ಕಥೆಯನ್ನು ಬೆಳೆಸಿದ್ದಾರೆ. ಕೋಳಿಫಾರಂ ಕಾರಣದಿಂದಲೇ ಅಲ್ಲಿ ಮೂಡುವ ಪರ ಮತ್ತು ವಿರೋಧ ಹಿನ್ನೆಲೆಯನ್ನು ವಾದ ವಾಗ್ವಾದಗಳನ್ನು ಕತೆಯ ಹೂರಣವಾಗಿಸಿದ್ದಾರೆ.
ಒಂದು ಶಾಲೆ. ಆ ಶಾಲೆಯಲ್ಲಿ ಹಲವು ಜನ ಶಿಕ್ಷಕರು, ಅವರ ದ್ವಂದ್ವಗಳು, ನೋವುಗಳು, ನಲಿವುಗಳು, ತಾಕಲಾಟಗಳು ಇವೆಲ್ಲವನ್ನು ಇಟ್ಟುಕೊಂಡು `ಹೆಜ್ಜೆ’ ಕಥೆಯನ್ನಾಗಿಸಿದ್ದಾರೆ. ಹಾಗೇ ಗ್ರಾಮೀಣ ಮಹಿಳೆ ಮುದ್ದಮ್ಮನನ್ನು ಕೇಂದ್ರವನ್ನಾಗಿಟ್ಟುಕೊAಡು ಆಕೆಯ ಬದುಕು, ಬದುಕಿನ ತಲ್ಲಣಗಳನ್ನು ಯಾತನೆಗಳನ್ನು `ಯಡವಟ್ಟು’ ಕಥೆಯಾಗಿ ಪುನರ್ ಸೃಷ್ಟಿಸಿದ್ದಾರೆ. ಒಂದು ತಲೆಮಾರಿಗೂ ಮತ್ತೊಂದು ತಲೆಮಾರಿಗೂ ಸಹಜವಾಗಿಯೇ ಮೂಡುವ ಅಭಿಪ್ರಾಯ ಬೇಧಗಳು, ಅಭಿರುಚಿ ವ್ಯತ್ಯಯಗಳನ್ನು `ತಿಂಗಳ ಬೆಳಕು’ ಕಥೆಯನ್ನಾಗಿಸಿದ್ದಾರೆ.
ಕಥೆಗಾರ್ತಿ ವಿಜಯಾಮೋಹನ್ ಪ್ರಸ್ತುತ ಚುನಾವಣಾ ರಾಜಕೀಯದಲ್ಲಿ ಓಟಿನ ರಾಜಕಾರಣ ಹೇಗೆ ನಡೆಯುತ್ತೆ ಎಂಬುದನ್ನೇ `ಓಟು’ ಕಥೆಯಾಗಿಸಿದ್ದಾರೆ. ಹೆಣ್ಣಿಗೆ ಸಮಾಜದಲ್ಲಿ ಸ್ವಾತಂತ್ರö್ಯವಿಲ್ಲ ಎಂಬುದನ್ನು ಹೂರಣವಾಗಿಟ್ಟುಕೊಂಡು `ಕಿಟಕಿ’ ಕಥೆಯನ್ನು ಕಡೆದಿದ್ದಾರೆ. `ಅಕ್ಕಿ’ ಅನ್ನುವ ಶೀರ್ಷಿಕೆಯಲ್ಲಿನ ಕಥೆಯಲ್ಲಿ ಸರ್ಕಾರದ ಅನ್ನಭಾಗ್ಯ ಯೋಜನೆ, ಅಲ್ಲಿನ ಅವಾಂತರಗಳು, ಪರವಿರೋಧದ ನಿಲುವುಗಳೂ ಅಭಿವ್ಯಕ್ತವಾಗಿವೆ.
ಒಟ್ಟಾರೆ ಇಲ್ಲಿನ ಹದಿನೈದು ಕಥೆಗಳು ಸಾಮಾಜಿಕ ನ್ಯಾಯದ ಪರವಾಗಿ ಇವೆ. ಜನಮುಖಿಯಾಗಿ ಸಮಾಜಮುಖಿಯಾಗಿವೆ. ವಿಶೇಷವಾಗಿ ಶೋಷಿತರು ಮತ್ತು ಅಸಹಾಯಕರ ಪರವಾಗಿವೆ. ಖಡ್ಗವಾಗಲಿ ಕಾವ್ಯ, ಜನರ ನೋವಿಗೆ ಮಿಡಿವ ಪ್ರಾಣ ಮಿತ್ರ ಎನ್ನುವ ಬಂಡಾಯದ ಘೋಷ ವಾಕ್ಯದ ಅನುಷ್ಠಾನ ಇಲ್ಲಿ ಪ್ರತಿಯೊಂದು ಕಥೆಗಳಲ್ಲೂ ಕಂಡುಬರುತ್ತದೆ. ಸಮಾಜದಲ್ಲಿ ಅಂಚಿನ ಜನರ ನೋವು-ನಲಿವುಗಳೇ, ಜೀವನ ವೈರುಧ್ಯಗಳೇ ಇಲ್ಲಿ ಕಥೆಗಳ ಧ್ವನಿಯಾಗಿದೆ.
ಮೂಡಿಗೆರೆಯಲ್ಲಿ ಕುಳಿತು ಲೋಕವನ್ನು ನೋಡುವ-ಗ್ರಹಿಸುವ ಶಕ್ತಿ ತೇಜಸ್ವಿ ಅವರಿಗೆ ಇರುವಂತೆ ಮಧುಗಿರಿಯಲ್ಲಿ ಕುಳಿತು ಅದೇ ಲೋಕವನ್ನು ನೋಡುವ, ಗ್ರಹಿಸುವ, ಅಭಿವ್ಯಕ್ತಿಸುವ ಶಕ್ತಿ ವಿಜಯಾಮೋಹನ್ ಅವರಿಗೆ ಇದೆ. ಇದನ್ನು ಅವರು ರೂಢಿಸಿಕೊಂಡಿದ್ದು ಅಲ್ಲ, ಜನ್ಮಜಾತವಾಗಿ ಬಂದಿರುವAತಹದ್ದು. ಹೀಗಾಗಿ ಅವರು ನೋಡಿದ್ದನ್ನೆಲ್ಲಾ, ಪರಿಭಾವಿಸಿದ್ದನ್ನೆಲ್ಲಾ ಕಥೆಯಾಗಿಸುವ ಪ್ರತಿಭೆಯನ್ನು ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಅವರು ಹೆಸರನ್ನು ಗಳಿಸಿದ್ದಾರೆ. ಒಳ್ಳೆಯ ಬೆಳೆಯನ್ನು ಬೆಳೆದಿದ್ದಾರೆ.
ಕತೆಗಾರ್ತಿಗೆ ಇರಲೇಬೇಕಾದ ರಾಜಕೀಯ, ಸಾಮಾಜಿಕ ಅರಿವು ಸದಾ ಎಚ್ಚರಿಕೆಯಿಂದ ಇರುವುದು ಇಲ್ಲಿ ವ್ಯಕ್ತವಾಗಿದೆ. ಜಾಗತೀಕರಣದ ಈ ಸಂದರ್ಭದಲ್ಲಿ ಅದರ ಮಾಯಾ ಮೋಹಕ್ಕೆ ಬಲಿಯಾಗುವ ಸಮುದಾಯಗಳೇ ಹೆಚ್ಚಾಗಿವೆ. ಮಾಧ್ಯಮಗಳು, ಜಾಹಿರಾತುಗಳು, ಇಂದು ಜಾಗತೀಕರಣವನ್ನು ಬಲಪಡಿಸುತ್ತಿರುವ ಸಂದರ್ಭದಲ್ಲಿ ಕತೆಗಾರ್ತಿ ವಿಜಯಾಮೋಹನ್ ಸಮಕಾಲೀನ ಸಂದರ್ಭದ ಬೆಳವಣಿಗೆಯನ್ನು ತಮ್ಮಲ್ಲಿರುವ ಕಥನದ ಅರಿವಿನಿಂದ ಪ್ರವಾಹದ ಎದುರು ನಿಲ್ಲಲು ಪ್ರಯತ್ನಿಸುತ್ತಿರುವುದು ಓದುಗರ ಗಮನ ಸೆಳೆಯುತ್ತದೆ ಎಂದು ಅಭಿಪ್ರಾಯಪಡುವ ಅಮರೇಶ ನುಗಡೋಣಿ ಅವರ ಅಭಿಪ್ರಾಯ ಕೃತಿಯ ಎಲ್ಲಾ ಓದುಗರ ಅಭಿಪ್ರಾಯವೂ ಆಗಿರುತ್ತದೆ ಎನ್ನುವುದು ಕಾಕತಾಳೀಯವಲ್ಲ.
ಅಪ್ಪಟ ನೆಲಮೂಲ ಸಂಸ್ಕೃತಿಯ ಗ್ರಾಮೀಣ ಪ್ರತಿಭೆ ವಿಜಯಾಮೋಹನ್ ಓಟು ಸಂಕಲನದ ಮೂಲಕ ಓದುಗರಿಗೆ ಒಳ್ಳೆಯ ಕಥೆಗಳನ್ನೇ ನೀಡಿದ್ದಾರೆ. ಆ ಎಲ್ಲ ಕಥೆಗಳು ಅನುಭವದ ಅಗ್ನಿಕುಂಡದಿAದ ಎದ್ದುಬಂದು ಪ್ರಜ್ವಲಿಸುತ್ತವೆ. ಬದುಕಿಗೆ ಬೆಳಕು ನೀಡುತ್ತವೆ. ಬದಲಾವಣೆ ಬಯಸುವ ಜನರಿಗೆ ಬೆಳಕಿನ ದೊಂದಿ ಹಿಡಿಯುತ್ತವೆ.
ಭಾರವಾದರೂ ಇಲ್ಲಿ ಒಂದು ಮಾತನ್ನು ಹೇಳಲೇಬೇಕು. ತುಮಕೂರು ಜಿಲ್ಲೆಯಲ್ಲಿ ಮಹಿಳಾ ಬರಹಗಾರರಲ್ಲಿ ಸತ್ವಶಾಲಿ ಕಾವ್ಯಕ್ಕೆ ಲಲಿತಾ ಸಿದ್ಧಬಸವಯ್ಯನವರು ಹೇಗೋ ಹಾಗೇ ಸತ್ವಶಾಲಿ ಕಥೆಗೆ ವಿಜಯಾಮೋಹನ್ ಎಂದು ಧೈರ್ಯದಿಂದ ಹೇಳಬಹುದು, ದಾಖಲಿಸಬಹುದು. ಈ ಮಾತಿನಲ್ಲಿ ಉತ್ಪೆçÃಕ್ಷೆ ಹೊಗಳಿಕೆ ಇತ್ಯಾದಿ ಏನೂ ಇಲ್ಲ. ಓದಿದಾಗ ಅನ್ನಿಸಿದ್ದನ್ನು ಅನ್ನಿಸಿದಂತೆಯೇ ಇಲ್ಲಿ ಅಕ್ಷರವಾಗಿಸಿದ್ದೇನೆ.
ಹಳ್ಳಿಯಲ್ಲಿ ಹುಟ್ಟಿ ಬೆಳೆದು, ದೈಹಿಕವಾಗಿ ಕಾಡಿದ ವಿಕಲತೆಯನ್ನು ಮೆಟ್ಟಿ ನಿಂತು, ಓದಿ ವಿದ್ಯಾಭ್ಯಾಸ ಮಾಡಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಆರ್ಥಿಕವಾಗಿ ಸುಸ್ಥಿರಭಾವ ತಲುಪಿದ ವಿಜಯ ಒಂದು ಅರ್ಥದಲ್ಲಿ ಅಮ್ಮ ಅಪ್ಪ, ಸೋದರ ಸೋದರಿಯರಿಗೆ ಊರುಗೋಲಾದರು. ಎಲ್ಲರ ಬದುಕು ನೇರ್ಪಾಗಿ ತಮ್ಮ ದಾರಿ ತಾವು ನೋಡಿಕೊಂಡಾಗ ಇವರಿಗೆ ಏಕಾಂಗಿತನ ಕಾಡಿತು. ಬದುಕು ಅತಂತ್ರವಾಯಿತು. ಆರ್ಥಿಕ ಸುಸ್ಥಿರತೆ ಇದ್ದರೂ ಸಾಮಾಜಿಕ ಅಸ್ಥಿರತೆ ಕಾಡಿತು. ಒಂದು ದಿನ ದಿಟ್ಟನಿರ್ಧಾರಕ್ಕೆ ಬಂದು, ತಾನೇ ಗಂಡು ನೋಡಿ, ತಾನೇ ಮದುವೆಯಾಗಿ, ತಾನೇ ಮನೆಕಟ್ಟಿ-ಸಂಸಾರಿಯಾಗಿ ತಾನೇ ಬದುಕು ರೂಪಿಸಿಕೊಂಡು ಪತಿ ಮತ್ತು ಮಗನ ಜೊತೆ ನೆಮ್ಮದಿಯಿಂದ  ಹೆಜ್ಜೆ ಹಾಕುತ್ತಿರುವ ಅವರ ಬದುಕಿನ ಹೋರಾಟದ ಕಥೆಯೇ ಒಂದು ಬೃಹತ್ ಕಾದಂಬರಿ ಆಗುತ್ತದೆ, ಇಲ್ಲವೇ ಮಹಾಕಾವ್ಯವಾಗುತ್ತದೆ. ಇದು ಅವರ ನಿಜವಾದ ಸಾಧನೆ. ಈ ಸಾಧನೆಗೆ ಒಂದು ಸೆಲ್ಯೂಟ್ ಹೊಡೆಯಲೇಬೇಕು.
ಸಂಸಾರದ ಜೊತೆಗೆ, ಶಿಕ್ಷಕಿ-ಮುಖ್ಯಶಿಕ್ಷಕಿ ವೃತ್ತಿಯ ಜೊತೆ ಜೊತೆಗೆ ಸಮರ್ಥ ಲೇಖಕಿಯಾಗಿ ಅವರು ಹೊರಹೊಮ್ಮಿದ್ದು ಒಂದು ಅಚ್ಚರಿಯ ಸಂಗತಿ. ವಿಜಯಾಮೋಹನ್ ಕಥೆಗಾರ್ತಿ ಮಾತ್ರವಲ್ಲ, ಕವಯಿತ್ರಿ ಕೂಡ. ಅವರು ಬರೆಯಲು ಶುರು ಮಾಡಿದ್ದು ಕವಿತೆಯಿಂದಲೇ. ಹತ್ತಾರು ಕವಿಗೋಷ್ಠಿಗಳಲ್ಲಿ ಅವರು ಕವಿತೆ ವಾಚಿಸಿದ್ದನ್ನು ಕಂಡಿದ್ದೇನೆ. ಆ ಕವಿತೆಗಳೇ ಒಂದು ಸಂಕಲನಕ್ಕಾಗುವಷ್ಟು ಇವೆ. `ನೀರು’ ಎಂಬುದು ಇವರ ಕಿರು ಕಾದಂಬರಿ. ಇವರ ಕಥೆಗಳು ರಾಜ್ಯಮಟ್ಟದಲ್ಲಿ ಹತ್ತಾರು ಪ್ರಶಸ್ತಿ ಗೌರವಗಳಿಗೆ ಪಾತ್ರವಾಗಿವೆ. ೨೦೧೩ರಲ್ಲಿ ಜಾತಿ-ಕಥಾಸಂಕಲನಕ್ಕೆ, ರೂ. ೨೫,೦೦೦/- ನಗದು ಸಹಿತ ಡಾ|| ಬೆಸಗರಹಳ್ಳಿರಾಮಣ್ಣ ಪ್ರಶಸ್ತಿ ಸಂದಾಯವಾಗಿರುವುದು ಒಂದು ಹೆಮ್ಮೆಯ ಸಂಗತಿ.
ಏಕವ್ಯಕ್ತಿಯಾಗಿ ಸಂಸಾರ ರಥ ಎಳೆಯುತ್ತಾ, ಶಿಕ್ಷಕಿ ವೃತ್ತಿಯ ಜೊತೆ ಜೊತೆಯಲ್ಲಿ ಬರಹದ ಬೇಸಾಯ ಮಾಡಿ `ಕಥಾ ಸಾಹಿತ್ಯ’ದಲ್ಲಿ ಉಜ್ವಲ ಬೆಳೆ ಬೆಳೆದಿರುವ ಕಥೆಗಾರ್ತಿ ವಿಜಯಾಮೋಹನ್ ಪ್ರತಿಭಾವಂತೆ ಮಾತ್ರ ಅಲ್ಲ. ದಿಟ್ಟೆ, ಧೀರೆ, ಧೀಮಂತೆಯೂ ಹೌದು. ಅವರ ಲೇಖನಿಯಿಂದ ಮತ್ತಷ್ಟು ಕತೆ, ಕವಿತೆ, ಕಾದಂಬರಿಗಳು ಮೂಡಲಿ, ಓದುಗರ ಕೈ ಸೇರಲಿ, ಅವರ ಮನವನ್ನು ಅರಳಿಸಲಿ-ವಿಸ್ತರಿಸಲಿ ಎನ್ನುವುದು ನನ್ನ ಆಶಯವಾಗಿದೆ.