ವಂದೇ ಭಾರತ್ ರೈಲು: ದರ ಎಲ್ರೀ ಜಾಸ್ತಿ ಇದೆ !?

ಈ ವಂದೇ ಭಾರತ್ ಕನಿಷ್ಟ ಟಿಕೇಟ್ 400-500 ರೂಪಾಯಿಯ ಬದಲಿಗೆ 1000 ಆದರೂ ಆಗಬೇಕು.

ವಂದೇ ಭಾರತ್ ರೈಲು:   ದರ ಎಲ್ರೀ ಜಾಸ್ತಿ ಇದೆ !?


ವಿಡಂಬನೆ

ಆಲ್ಮೇಡಾ ಗ್ಲಾಡ್ಸನ್

ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಮೆಜೆಸ್ಟಿಕ್‌ನಿಂದ ಕೇವಲ ಆರು ಕಿಲೋಮೀಟರ್ ದೂರದಲ್ಲಿರುವ ಯಶವಂತಪುರ ಸ್ಟೇಷನಿಗೆ ಹೋಗಲು ಕೇವಲ 410 ರೂಪಾಯಿ ಅಂತೆ. ಅದೂ ಕಡಿಮೆಯೆನಿಸಿದರೆ ಎಕ್ಸಿಕ್ಯೂಟಿವ್ ಕ್ಲಾಸ್‌ನಲ್ಲಿ 545 ರುಪಾಯಿ ತೆತ್ತು ಪ್ರಯಾಣಿಸಬಹುದು. ಧಾರವಾಡ ಹಾಗೂ ಹುಬ್ಬಳ್ಳಿ ನಡುವೆ ಪ್ರಯಾಣಿಸುವುದಾದರೂ ಈ ಅಗ್ಗದ ಪ್ರಯಾಣ ಲಭ್ಯವಿದೆ. 


ಆದರೆ ನಮ್ಮ ಕೆಲ ಮಿತ್ರರ ಪ್ರಕಾರ ಇದು ತುಂಬಾ ತುಟ್ಟಿಯಂತೆ. ಅವರದ್ದು ನಿತ್ಯದ ಸಮಸ್ಯೆ. ಅವರಿಗೆ ಒಟ್ಟಾರೆಯಾಗಿ ಎಲ್ಲದಕ್ಕೂ ನಮ್ಮ ಮಾನ್ಯ, ಪ್ರೀತಿಯ ಮೋದಿಜಿಯವರನ್ನು ದೂರಬೇಕು. ಅಲ್ಲ ವಂದೇ ಭಾರತ್ ಕಾಂಗ್ರೆಸ್ ಕಾಲದ ವೊಟ್ಟೆ ರೈಲಲ್ಲ. ಅದು ಸೂಪರ್ ಡೂಪರ್ ಎಸಿ ರೈಲು. ಸ್ವಚ್ಚ್ ಭಾರತದಡಿ ಅತ್ಯಂತ ಕ್ಲೀನಾಗಿರುವ ರೈಲು. ಅದರಲ್ಲಿ ಪ್ರಯಾಣಿಸಲು ಐನೂರು ರುಪಾಯಿ ಕೊಟ್ರೆ ಏನು ತೊಂದರೆ? ಮೋದಿಯವರು ದುಡ್ಡು ಮಾಡುತ್ತಾರಂತೆ. ಅಲ್ಲ ಅವರು ದುಡ್ಡು ಮಾಡಿ ಏನ್ಮಾಡ್ತಾರೆ? ಪಾಪ ಅವರಿಗೇನು ಹೆಂಡತಿ ಮಕ್ಕಳಿದ್ದಾರಾ, ಅವರನ್ನು ಸಾಕಲು? ಅವರು ತಮಗೆ ಸಿಗುವ ತಿಂಗಳ ಸಂಬಳವನ್ನೇ ಕಳೆದ ಎಷ್ಟೋ ವರುಷಗಳಿಂದ ಪೂರ್ತಿಯಾಗಿ ಸೈನಿಕರಿಗೆ ಕೊಡುತ್ತಿದ್ದಾರೆ. ಇಂಥ ಮಹಾನ್ ಮೋದಿಜಿಯವರು ಜುಜುಬಿ 400-500 ರೂಪಾಯಿಯನ್ನು ಜನರಿಂದ ಲೂಟಿ ಮಾಡಲು ಸಾಧ್ಯನೇ ಇಲ್ಲ.


ಇನ್ನು 400-500 ರೂಪಾಯಿಯನ್ನು ತೆರಲು ಏನು ತೊಂದರೆ? ಮೋದಿಜಿಯವರು ಬಂದನಂತರ ನಮ್ಮ ಆದಾಯ ದುಪ್ಪಟ್ಟಾಗಿ, ಖರ್ಚು ಕಡಿಮೆಯಾಗಿ, ನಮಗೆ ತಿಂಗಳು-ತಿಂಗಳು ಎಷ್ಟೊಂದು ದುಡ್ಡು ಉಳಿಯುತ್ತದೆ. ರೈತರ ಆದಾಯ ಡಬ್ಬಲ್ ಆಗಿದೆ, ಪ್ರತಿಯೊಬ್ಬ ನಿವೇಶನಾರಹಿತ ಭಾರತೀಯನಿಗೆ ಮೋದಿಜಿಯವರು ಪಕ್ಕಾ ಮನೆ ಕಟ್ಟಿಕೊಟ್ಟಿದ್ದಾರೆ. ಮನೆಯೊಳಗೆ ನಲ್, ನಲ್‌ನೊಳಗೆ ಜಲ್ ಎಲ್ಲಾ ಕೊಟ್ಟ ಮೋದಿಜಿಯಿಂದ ನಮ್ಮ ಉದ್ಧಾರವಾಗಿಲ್ವಾ? ನನ್ನ ಪ್ರಕಾರ ಈ ವಂದೇ ಭಾರತ್ ಕನಿಷ್ಟ ಟಿಕೇಟ್ 400-500 ರೂಪಾಯಿಯ ಬದಲಿಗೆ 1000 ಆದರೂ ಆಗಬೇಕು. ಎಷ್ಟಾದರೂ ಅದು ಮೋದಿಜಿಯೆಂಬ ಮಹಾನ್ ಮುತ್ಸದ್ದಿಯ ಕೈಗೇ ಹೋಗುತ್ತೆ. ಒಂದು ನಯಾಪೈಸೆಯೂ ವೇಸ್ಟಾಗಲ್ಲ. ಅವರು ಬಂದಮೇಲೆ ಹೀಗೆ ದುಡ್ಡುಳಿಸಿ ಎಲ್ಲಾ ಭಾರತೀಯರಿಗೆ ಮನೆ, ಕಕ್ಕಸು ಕಟ್ಟಿ ಕೊಟ್ಟು, ಇಡೀ ಭಾರತಕ್ಕೆ ಶಾಕ್ ಕೊಟ್ಟಿಲ್ವಾ, ಐ ಮೀನ್ ಕರೆಂಟ್ ಕೊಟ್ಟಿಲ್ವಾ? ಹಿಂದೆ ಕಾಂಗ್ರೆಸ್ ಇದ್ದಾಗ ಐದು ರುಪಾಯಿ ತೆರಲೂ ಭಯವಾಗುತಿತ್ತು. ಯಾಕೆಂದರೆ ಆ ಹಣವೆಲ್ಲಾ ಜನರ ಉದ್ದಾರಕ್ಕೆ ಬಳಕೆಯಾಗುವ ಬದಲು ಸ್ವಿಸ್ ಬ್ಯಾಂಕಿಗೆ ಹೋಗುತಿತ್ತು. 


ಈಗ ನಮ್ಮ ರಿಸರ್ವ್ ಬ್ಯಾಂಕ್ ಅಡಿಯಿಂದ ಸ್ವಿಸ್ ಬ್ಯಾಂಕಿಗೆ ನೇರವಾಗಿ ಸುರಂಗ ಮಾರ್ಗ ಕೊರೆಯಲಾಗಿದೆ. ಹಾಗಾಗಿ ಯಾರಾದರೂ ಅಲ್ಲಿ ಅಪ್ಪಿ-ತಪ್ಪಿ ದುಡ್ಡು ಹಾಕಿದರೂ, ಜೀಯವರ ಲ್ಯಾಪ್ ಟಾಪ್‌ನಲ್ಲಿ 'ಪೀಂ ಪೀಂ' ಎಂದು ಸೌಂಡ್ ಬರುತ್ತೆ. ಅವರು ಅದನ್ನು ನೋಡಿ ತಕ್ಷಣ ತಮ್ಮ ಖಾಸಗಿ ನಿಗಾದಲ್ಲಿರುವ ಅಧಿಕಾರಿಗಳನ್ನು ಕಳುಹಿಸಿ ಆ ಕಪ್ಪುಹಣವನ್ನು ತಕ್ಷಣ ಭಾರತಕ್ಕೆ ತರುತ್ತಾರೆ. ಜೀಯವರು ಎಷ್ಟೇ ಬಿಜಿಯಿದ್ದರೂ ದಿನಾ ರಾತ್ರೆ ಅರ್ಧಗಂಟೆ ಇಡೀ ದೇಶದ ಆಸ್ಪತ್ರೆಗಳನ್ನು ನಂತರ ಅರ್ಧಗಂಟೆ ಸ್ವಿಸ್ ಬ್ಯಾಂಕುಗಳನ್ನು ತಮ್ಮ ಲ್ಯಾಪ್ ಟಾಪ್‌ನಲ್ಲಿ ಕನೆಕ್ಟ್ ಮಾಡಿ ನೋಡುತ್ತಾರೆ. ಲವ್ಯೂ ಮೋದಿಜಿ. ನಿಮಗಾಗಿ 400-500 ಬಿಡಿ 1000 ಕೊಟ್ಟು ರೈಲಲ್ಲಿ ಹೋಗ್ತೀವಿ. ಒಂದು ವೇಳೆ ನೀವು ಟಿಕೇಟ್ ದರವನ್ನು 5000 ಮಾಡಿದರೂ ನಾವು ಬೇಕಾದ್ರೆ ರೈಲನ್ನು ಹಳಿಗಳ ಮೇಲೆ ತಳ್ಳಿಕೊಂಡು ಹೋಗ್ತೀವೆ ಆದರೆ ಮೋದಿಜಿಯವರನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ನಮಗೆ ಕಾಂಗ್ರೇಸಿನ ಯಾವ ಬಿಟ್ಟಿ ಭಾಗ್ಯವೂ ಬೇಡ. ದೇಶಕ್ಕಾಗಿ ಮೋದಿಜಿ, ಮೋದಿಜಿಗಾಗಿ ನಾವು.