ಸಾಂದರ‍್ಭಿಕ ಅಕ್ಷತಾ.ಕೆ ‘ ಅಪ್ಪ’ ನೆಂದರೆ ಅಂತರಂಗದ ಶಕ್ತಿ
ಸಾಂದರ‍್ಭಿಕ
ಅಕ್ಷತಾ.ಕೆ
‘ ಅಪ್ಪ’ ನೆಂದರೆ ಅಂತರಂಗದ ಶಕ್ತಿ
‘ತಂದೆ’ ಎಂಬ ಪದ ನೆನಪಾಗುತ್ತಲೇ ಸಮುದ್ರದ ಅಲೆಗಳ ಭೋರ್ಗರೆತ, ಗಾಂಭೀರ್ಯತೆ, ಕಷ್ಟಗಳನ್ನು ಅಡಗಿಸಿಕೊಳ್ಳುವ ಗುಣ ಅರಿವಿಗೆ ಬರುತ್ತದೆ.
ಕೆಲವು ದಿನಗಳ ಹಿಂದೆ ಸಮುದ್ರತೀರಕ್ಕೆ ಒಮ್ಮೆ ಪ್ರವಾಸ ಹೋದ ಸಂದರ್ಭದಲ್ಲಿ ಅಲ್ಲಿ ಬೀಸಿ ಬರುತ್ತಿದ್ದ ತಂಗಾಳಿ, ಭೋರ್ಗರೆವ ಅಲೆ, ಗಂಭೀರತೆ ಕಡಲ ವೈಶಾಲ್ಯತೆಯನ್ನು ಗಮನಿಸುತ್ತಾ, ಇದ್ದಷ್ಟು ದೂರ ಕಣ್ಣಾಡಿಸಿದಾಗ ಕಡಲಲ್ಲಿ ನಾನು ಕಂಡದ್ದು ನನ್ನ ತಂದೆಯ ಪ್ರತಿರೂಪನ್ನು. ತಂದೆ ಹಾಗೆ, ಕಡಲಿನ ಹಾಗೆ. ಬುದಕಿನ ಉದ್ದಕ್ಕೂ ಬರುವ ಕಷ್ಟ ನಷ್ಟಗಳು, ಜವಾಬ್ದಾರಿಗಳೆಲ್ಲವನ್ನೂ ತನ್ನೊಳಗೆ ಸಾಗರದಂತೆ ಅಸಂಖ್ಯ ರಾಶಿಗಳನ್ನೇ ಅಡಗಿಸಿಕೊಳ್ಳುತ್ತಾ ಲೋಕದೆದುರಿಗೆ ಮೌನಮುಖಿಯಾಗಿರುವ ತೋರ್ಪಡಿಕೆಯ ಬದುಕಿಗೆ ಒಗ್ಗದ ಸ್ವಾಭಿಮಾನದ, ಘನತೆಯಿಂದ ಬದುಕುವ ಕಡಲ ಹೃದಯಿ ಅಪ್ಪ. ಕುಟುಂಬದ ಹತ್ತು - ಹಲವು ಜವಾಬ್ದಾರಿಗಳ ಭಾರ ಹೊತ್ತ ತಂದೆ ಅವುಗಳನ್ನು ಸುಲಲಿತವಾಗಿ ನಿಭಾಯಿಸಲು ಕೆಲವೊಮ್ಮೆ ಸಮುದ್ರದ ಅಲೆಗಳು ಭೋರ್ಗರೆವ ಹಾಗೆ ಸದ್ದು ಮಾಡಬೇಕಾಗುವುದು. ಅವರ ಆ ಭೋರ್ಗರೆತವನ್ನು ಕುಟುಂಬದ ಸದಸ್ಯರು ನಕಾರಾತ್ಮಕವಾಗಿ ಭಾವಿಸಿದಾಗ ವಿವೇಚನೆ ಕಳೆದುಕೊಳ್ಳುತ್ತಾರೆ. ಅಪ್ಪನ ಸಿಟ್ಟು-ಸೆಡವುಗಳ ಹಿಂದಿನ ಕಾಳಜಿಯನ್ನು, ಪ್ರೇಮವನ್ನು ನಾವು ಮರೆಯಬಾರದು. ಸಂಸಾರ ಸಾಗರದ ಏರು-ಪೇರುಗಳ ನಡುವೆ ಕಪ್ಪೆ ಚಿಪ್ಪಿನೊಳಗಣ ಮುತ್ತಿನಂತೆ ಮಕ್ಕಳನ್ನು ಜೋಪಾನ ಮಾಡಿ ಯಶಸ್ವೀ ಬದುಕಿನ ಭವ್ಯ ಪಥದೆಡೆಗೆ ನಮ್ಮನ್ನು ಕೊಂಡೊಯ್ಯಲು ಕೀರ್ತಿ ಪತಾಕೆಯ ಉತ್ತುಂಗ ಶಿಖರವನ್ನು ಮುಟ್ಟಿಸಲು ಅಪ್ಪ ಒಂದು ಕನಸಿನ ಸಾಮ್ರಾಜ್ಯವನ್ನೇ ತನ್ನ ಮನದೊಳಗೆ ನಿರ್ಮಿಸಿಕೊಂಡಿರುತ್ತಾರೆ. ಸೌಮ್ಯವಾಗಿ ಜುಳು-ಜುಳು ನಾದದ ಹರಿವಿನಲ್ಲಿ ಪ್ರೀತಿಯನ್ನು ಹೊತ್ತು ತರುವ ತಾಯಿ ನದಿಯಂತೆ ಜೀವಜಲವಾದರೆ ತಂದೆ ಮುತ್ತು ರತ್ನ ಹವಳಗಳನ್ನು ರೂಪುಗೊಳಿಸುವ ಕಡಲು. ಜೀವಕ್ಕೂ ಜೀವನಕ್ಕೂ ಆಧಾರ ಸ್ತಂಭವಾಗಿ ತಂದೆ ಆತ್ಮ ವಿಶ್ವಾಸವನ್ನು ಬದುಕಿನುದ್ದಕ್ಕೂ ತುಂಬುತ್ತಾರೆ. ಕೋಪವೆಂಬ ಕರ್ಪೂರದಲ್ಲಿ ಉರಿದರೂ ಬೆಳಕಿನ ಜ್ಯೋತಿಯನ್ನು ಬದುಕಿನಲ್ಲಿ ಮೂಡಿಸುವನು. ಚಂಡಮಾರುತಳಿಗೂ ಸುನಾಮಿಗೂ ಭೂಕಂಪನಗಳಿಗೂ ಬಗ್ಗದೆ ಸದಾ ತನ್ನ ಕಾಯಕದಲ್ಲಿ ನಿರತರಾಗಿ ಶಿಸ್ತು, ಸಮಯ ಪ್ರಜ್ಞೆ, ಗಾಂಭೀರ್ಯ, ಸ್ವಾಭಿಮಾನವನ್ನು ಮೆರೆಯುತ್ತಾರೆ. ಎಂದಿಗೂ ಯಾರ ಬಳಿಯೂ ಕೈಚಾಚದೆ ತಲೆಬಾಗದೆ ಸ್ವಂತ ಪರಿಶ್ರಮದಿಂದ ತಲೆಯೆತ್ತಿ ನಿಂತು ವೃತ್ತಿಯಲ್ಲಿ ತನ್ನ ಸುತ್ತಲಿನವರಿಗೆ ಮಾಧರಿಯಾಗಿ ಬದುಕುತ್ತಾರೆ. ಅವರ ವೈಜ್ಞಾನಿಕ ಮನೋಭಾವ, ಪ್ರಶ್ನೆ ಮಾಡುವ, ಚಿಂತನೆಗೊಳಗಾಗುವ ವಿಚಾರವಂತಿಕೆ ನಿಷ್ಠೂರವಾದಿತನದಿಂದ ಸಾಗರದ ಅಲೆಗಳಂತೆ ಇತರರಿಗೆ ಕಂಡರೂ ಹೃದಯಾಂತರಾಳದ ಮಮತೆಯ ಮುತ್ತು ಕಪ್ಪೆ ಚಿಪ್ಪಿನೊಳಗೆ ಬಚ್ಚಿಟ್ಟಿದ್ದು ಆಳಕ್ಕಿಳಿದವರಿಗೆ ಮಾತ್ರವೇ ಕಾಣುವುದು.
ತೇಜಸ್ವಿಯವರು ತನ್ನ ತಂದೆ ಕುವೆಂಪುರವರ ಬಗ್ಗೆ “ಅಣ್ಣನ ನೆನಪು” ಕೃತಿಯಲ್ಲಿ ಹೇಳಿರುವಂತೆ ಮಗನ ಮೇಲೆ ವಾರೆಂಟ್ ಬಂದರೂ ತಮ್ಮ ಜನಪ್ರಿಯತೆಯನ್ನು ದುರುಪಯೋಗಪಡಿಸಿಕೊಳ್ಳದೇ ಮಗನಿಗೆ ಬುದ್ಧಿ ಹೇಳುವ ತಂದೆ ವಿಶೇಷವೆನಿಸುತ್ತಾರೆ.
ಹೀಗೆ ಬಹುಪಾಲು ತಂದೆಯರು ಹೃದಯದಲ್ಲಿನ ಪ್ರೀತಿಯ ಒರತೆಯನ್ನು ತೋರ್ಗೊಡದೆ ಗಟ್ಟಿ ಧನಿಯಾಗಿ ಮಕ್ಕಳನ್ನು ತಿದ್ದಿ ಸರಿದಾರಿಗೆ ಕೊಂಡೊಯ್ಯುವ ಬದುಕನ್ನು ಹಸನಾಗಿಸುವ ಗುರಿ ಹೊಂದಿರುತ್ತಾರೆ.
ಹೀಗೆ ಕಡಲಿನಂತೆ ಆಳವಾದ ಆಲೋಚನೆ ವಿವೇಚನೆಗಳನ್ನು ಹೊಂದಿದ್ದ ನನ್ನ ಅಪ್ಪ ನನ್ನ ಅಂತರಂಗದ ಶಕ್ತಿ, ನನ್ನ ಹೃದಯದ ಮಿಡಿತಎಂಬುದು ನನ್ನ ಪ್ರತಿ ನೋಟದಲ್ಲಿ, ಆಲೋಚನೆಯಲ್ಲಿ, ನೆನಪುಗಳಲ್ಲಿ ಅರಿವಾಗುತ್ತಲೇ ಇರುತ್ತದೆ. ಅಪ್ಪನ ದುಡಿಮೆಯ ದಿನಗಳು ಬದುಕಿನ ಪ್ರೀತಿ ಕನಸುಗಳು ಅವರ ನುಡಿ ಮುತ್ತುಗಳು ಅವು ನೆನಪಾಗುವುದಲ್ಲ ನಮ್ಮ ನರನಾಡಿಗಳಲ್ಲಿ ತುಂಬಿರುವುದು. ಇಂದು ನಮ್ಮೊಂದಿಗೆ ಅವರು ಇಲ್ಲವೆನ್ನಲು ಹೇಗೆ ಸಾಧ್ಯ, ನನ್ನೊಳಗೆ ಸದಾ ಜೀವಂತ ನನ್ನಪ್ಪ ಎನಿಸುವುದು. ನನ್ನ ಮನದ ಸ್ಪೂರ್ತಿಗೆ ಅವರ ಬದುಕೇ ಆಧಾರ.
ಅಪ್ಪನ ವ್ಯಕ್ತಿತ್ವ ಹೆಮ್ಮೆಯನ್ನುಂಟುಮಾಡುವಂತದ್ದು ಅದಕ್ಕಾಗೆ ಒಮ್ಮೊಮ್ಮೆ ಅನಿಸುವುದು ತಂದೆ ಮತ್ತೆ ಪವಾಡ ನಡೆದು ಮತ್ತೊಮ್ಮೆ ನೀ ನಮ್ಮ ಬಳಿ ಮರಳುವಂತಾಗಲಿ, ನಿಮ್ಮ ಜೊತೆ ಅಮೂಲ್ಯ ಕ್ಷಣಗಳನ್ನು ನಾವು ಕಳೆಯುವಂತಾಗಲಿ ಎನಿಸುವುದು.
ಕಳೆದುಕೊಂಡಾಗಲೇ ಕಳೆದುಹೋದವರ ನಿಜವಾದ ಮಹತ್ವ ಅರಿವಾಗುವುದು. ಕಣ್ಣಿನ ಬಿಂದುಗಳು ಹರಿಯಲಾಗದೇ ಮಡುಗಟ್ಟಿ ದುಃಖದ ಸಾಗರವಾಗುವುದು. ಸಮಾಧಾನಕ್ಕಾಗಿ ನೀ ಅಂತರAಗದ ಶಕ್ತಿಯಾಗಿರುವೆ ಎಂದುಕೊಳ್ಳುತ್ತಲೇ ಮನದ ನೋವ ನುಂಗುವಂತಾಗಿದೆ.
ಪಪ್ಪಾ.....ನಾ ನಿನ್ನ ಮರಳಿ ಪಡೆಯಬೇಕಿದೆ!!