ವಿಧಾನ ಪರಿಷತ್: ಬಿಜೆಪಿಗೆ 15ಕ್ಕೂ ಹೆಚ್ಚು ಸ್ಥಾನ ಚುನಾವಣಾ ಉಸ್ತುವಾರಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿಶ್ವಾಸ
LC election bjp wins 15 seats jagadish shettar
ವಿಧಾನ ಪರಿಷತ್: ಬಿಜೆಪಿಗೆ 15ಕ್ಕೂ ಹೆಚ್ಚು ಸ್ಥಾನ
ಚುನಾವಣಾ ಉಸ್ತುವಾರಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿಶ್ವಾಸ
ತುಮಕೂರು: ವಿಧಾನ ಪರಿಷತ್‌ಗೆ ಸ್ಥಳೀಯ ಸಂಸ್ಥೆಗಳಿಂದ ಡಿಸೆಂಬರ್ 10ರಂದು ನಡೆಯಲಿರುವ ಚುನಾವಣೆಯಲ್ಲಿ 20 ಜಿಲ್ಲೆಗಳ 25 ಸ್ಥಾನಗಳ ಪೈಕಿ ಬಿಜೆಪಿ 15ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಬಿಜೆಪಿಯ ಚುನಾವಣಾ ಉಸ್ತುವಾರಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ಭಾರತೀಯ ಜನತಾ ಪಾರ್ಟಿಯು ವಿಧಾನ ಪರಿಷತ್ ಚುನಾವಣೆ ಅಂಗವಾಗಿ ನಗರದ ಅಮಾನಿಕೆರೆ ಅಂಗಳದಲ್ಲಿರುವ ಗಾಜಿನ ಮನೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಜನ್‌ಸ್ವರಾಜ್’ ಸಮಾವೇಶದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಪಾರದರ್ಶಕ ಆಡಳಿತ ನೀಡುತ್ತಿದ್ದಾರೆ, ರೈತರಿಗೆ ಮತ್ತು ಇತರ ವರ್ಗದ ಜನರಿಗೆ ಬಿಡುಗಡೆ ಮಾಡಿದ ಅನುದಾನದ ಮೊತ್ತ ದುರುಪಯೋಗವಾಗದಂತೆ ಜನ್ ಧನ್ ಖಾತೆ ಮೂಲಕ ನೇರ ಫಲಾನುಭವಿಗಳಿಗೆ ತಲುಪುವಂತೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವಣ ಒಳಜಗಳವು ಅವರ ಬೆಂಬಲಿಗರ ಮುಖಾಂತರ ಸಾರ್ವಜನಿಕ ಸಭೆಗಳಲ್ಲಿ ಪ್ರಕಟವಾಗುತ್ತಿದ್ದು, ಇವರಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ನಾಮಾವಶೇಷವಾಗಲಿದೆ ಎಂದು ಭವಿಷ್ಯ ನುಡಿದರು.
ಪಂಜಾಬ್‌ನಲ್ಲಿ ಒಬ್ಬ ಸಿಧು ಹಾಗೂ ಕರ್ನಾಟಕದಲ್ಲಿ ಈ ಸಿದ್ಧು( ಸಿದ್ದರಾಮಯ್ಯ) ಇಬ್ಬರೂ ಕಾಂಗ್ರೆಸ್ ನಾಶಕ್ಕೆ ಕಾರಣವಾಗಲಿದ್ದಾರೆ ಎಂದರು.
ಬೆಲೆ ಏರಿಕೆ ಸಹಜ ಪ್ರಕ್ರಿಯೆ ಎಂದ ಶೆಟ್ಟರ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆರಿಗೆಗಳನ್ನು ಇಳಿಸುವ ಮೂಲಕ ಜನರಿಗೆ ನೆರವಾಗಿವೆ ಎಂದರು.
ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಅವರ ಬಳಿ ಆಧಾರಗಳಿದ್ದರೆ ತನಿಖಾ ಸಂಸ್ಥೆಗೆ ನೀಡಲಿ ಎಂದರು ಶೆಟ್ಟರ್.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ. ನಾಗೇಶ್, ಭೈರತಿ ಬಸವರಾಜು, ಗೋಪಾಲಯ್ಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ರಾಜ್ಯ ಉಪಾಧ್ಯಕ್ಷರುಗಳಾದ ರಾಜೇಂದ್ರ , ಎಂ.ಬಿ.ನAದೀಶ್, ರಾಜ್ಯ ಕಾರ್ಯದರ್ಶಿ ಮುನಿರಾಜುಗೌಡ, ಶಾಸಕರುಗಳಾದ ಜ್ಯೋತಿಗಣೇಶ್, ರಾಜೇಶ್ ಗೌಡ, ಮಸಾಲೆ ಜಯರಾಮ್, ವಿಧಾನಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಎಂ. ಚಿದಾನಂದ್ ಗೌಡ, ಮಾಜಿ ಸಚಿವರಾದ ಸೊಗಡು ಶಿವಣ್ಣ, ಮಾಜಿ ವಿಧಾನಪರಿಷತ್ ಸದಸ್ಯರಾದ ಡಾ.ಹುಲಿನಾಯ್ಕರ್, ನಿಗಮ ಮಂಡಳಿ ಅಧ್ಯಕ್ಷರಾದ ಕಿರಣ್ ಕುಮಾರ್, ಮಂಜುನಾಥ್, ಎಸ್.ಆರ್. ಗೌಡ, ಸುದ್ದಿಗೋಷ್ಟಿಯಲ್ಲಿದ್ದರು.