‘ಜಿಲ್ಲೆಯ ಅಂಗನವಾಡಿಗಳಿಗೆ ಹೊಸ ಕಟ್ಟಡ ನಿರ್ಮಿಸಿ’ ವಿಧಾನ ಪರಿಷತ್‌ನಲ್ಲಿ ಎಂಎಲ್‌ಸಿ ಆರ್.ರಾಜೇಂದ್ರ ಕಳಕಳಿ

‘ಜಿಲ್ಲೆಯ ಅಂಗನವಾಡಿಗಳಿಗೆ ಹೊಸ ಕಟ್ಟಡ ನಿರ್ಮಿಸಿ’ ವಿಧಾನ ಪರಿಷತ್‌ನಲ್ಲಿ ಎಂಎಲ್‌ಸಿ ಆರ್.ರಾಜೇಂದ್ರ ಕಳಕಳಿ

 

‘ಜಿಲ್ಲೆಯ ಅಂಗನವಾಡಿಗಳಿಗೆ ಹೊಸ ಕಟ್ಟಡ ನಿರ್ಮಿಸಿ’
ವಿಧಾನ ಪರಿಷತ್‌ನಲ್ಲಿ ಎಂಎಲ್‌ಸಿ ಆರ್.ರಾಜೇಂದ್ರ ಕಳಕಳಿ


ಜಿಲ್ಲೆಯಲ್ಲಿ 74 ಅಂಗನವಾಡಿ ಕಟ್ಟಡಗಳು ದುರಸ್ತಿಯಾಗದೆ ಅಪಾಯದ ಅಂಚಿನಲ್ಲಿವೆ ಎಂಬ ಮಾಹಿತಿ ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಆರ್. ರಾಜೇಂದ್ರ ಅವರು ಕೇಳಿದ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಿಂದ ಲಭ್ಯವಾಗಿದೆ.

ತುಮಕೂರು ಜಿಲ್ಲೆಯ ಸ್ಥಳೀಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಪ್ರತಿನಿಧಿಯಾಗಿ ಚುನಾಯಿತರಾಗಿರುವ ಆರ್.ರಾಜೇಂದ್ರ ಅವರು ಹಾಜರಾಗಿರುವ ಮೊದಲ ಅಧಿವೇಶನದ ಮೊದಲ ದಿನದಲ್ಲೇ ಶಿಥಿಲವಾಗಿರುವ ಅಂಗನವಾಡಿ ಕಟ್ಟಡಗಳನ್ನು ಮರು ನಿರ್ಮಿಸುವಂತೆ ಕೋರುವ ಮೂಲಕ ಜನಪರ ಕಾಳಜಿ ಮೆರೆದರು. ಅವರು ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 15ರಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಆಚಾರ್ ಹಾಲಪ್ಪ ಬಸವಪ್ಪ ಅವರಿಗೆ ಜಿಲ್ಲೆಯಲ್ಲಿ ದುರಸ್ತಿಯಾಗದೆ ಅಪಾಯದ ಅಂಚಿನಲ್ಲಿರುವ ಅಂಗನವಾಡಿ ಕೇಂದ್ರಗಳು ಹಾಗೂ ಅಂಗನವಾಡಿ ಕಟ್ಟಡಗಳನ್ನು ಪುನರ್ ನಿರ್ಮಿಸಲು ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಪ್ರಶ್ನಿಸಿದ್ದರು.

ರಾಜೇಂದ್ರ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು ಜಿಲ್ಲೆಯಲ್ಲಿ ಅಂಗನವಾಡಿ 74 ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು ಚಿ.ನಾ.ಹಳ್ಳಿ 7, ಗುಬ್ಬಿ 18, ಕೊರಟಗೆರೆ 4, ಕುಣಿಗಲ್, ಮಧುಗಿರಿ 12, ಪಾವಗಡ 5, ಶಿರಾ 7, ತಿಪಟೂರು 2, ತುಮಕೂರು (ಗ್ರಾ) 5, ತುಮಕೂರು ನಗರ 1, ತುರುವೇಕೆರೆಯಲ್ಲಿ ಕಟ್ಟಡಗಳಿವೆ. ಇವನ್ನು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಿಥಿಲಗೊಂಡ ಅಂಗನವಾಡಿ ಕಟ್ಟಡಗಳನ್ನು ಸಮೀಪದ ಬಾಡಿಗೆ ಕಟ್ಟಡ, ಸಮುದಾಯ ಭವನ ಮತ್ತು ಶಾಲಾ ಕಟ್ಟಡಗಳಿಗೆ ಸ್ಥಳಾಂತರಿಸಲಾಗಿದೆ. ಅನುದಾನ ಲಭ್ಯತೆಗನುಗುಣವಾಗಿ ಸದರಿ ಅಂಗನವಾಡಿ ಕಟ್ಟಡವನ್ನು ವಿವಿಧ ಯೋಜನೆಯಡಿ ಪುನರ್ ನಿರ್ಮಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಸಚಿವರ ಲಿಖಿತ ಉತ್ತರದ ಮೇಲೆ ವಿಷಯ ಪ್ರಸ್ತಾಪಿಸಿದ ಶಾಸಕ ಆರ್.ರಾಜೇಂದ್ರ ತುಮಕೂರು ಜಿಲ್ಲೆ ಹಿಂದುಳಿದ ಬರಪೀಡಿತ ಬಡವರು ಹೆಚ್ಚಿರುವ ಜಿಲ್ಲೆಯಾಗಿದ್ದು 3,576 ಅಂಗನವಾಡಿ ಕಟ್ಟಡಗಳಲ್ಲಿ 1 ಲಕ್ಷ 54 ಸಾವಿರ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶಿಥಿಲಾವಸ್ಥೆಯ 74 ಅಂಗನವಾಡಿಗಳು ಮಾತ್ರವಲ್ಲ ಇನ್ನೂ ಹೆಚ್ಚಿನ ಅಂಗನವಾಡಿಗಳು ದುರಸ್ತಿಯಾಗಬೇಕಿದೆ. ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿಗಳಿಗೆ ಸ್ವಂತ ನೆಲೆ ಒದಗಿಸಬೇಕಿದೆ ಇದಕ್ಕೆ ಏನು ಕ್ರಮವಹಿಸುವಿರಿ ಎಂದು ಪ್ರಶ್ನಿಸಿದರು.ಸಚಿವರು ಉತ್ತರಿಸಿ ವಿಶೇಷ ಅಭಿವೃದ್ಧಿ ಅನುದಾನ, ನರೇಗಾ ಅನುದಾನ ಸೇರಿ ವಿವಿಧ ಅನುದಾನದಡಿ ಅಂಗನವಾಡಿ ಕಟ್ಟಡ ದುರಸ್ತಿ, ಹೊಸ ಕಟ್ಟಡ ನಿರ್ಮಾಣ ಮಾಡಬಹುದಾಗಿದೆ ಈ ಬಗ್ಗೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.