ಹಳ್ಳಿ ಹೈದ ಗೌರಾಚಾರ್ ಮತ್ತು ಡಾಕ್ಟರ್ ರಾಜ್ ಕುಮಾರ್!
ಅಭಿಮಾನಿಗಳನ್ನು ದೇವರು ಅಂದ ರಾಜ್ ಕೂಡ, ಒಂದರ್ಥದಲ್ಲಿ ದೇವತಾ ಮನುಷ್ಯ ಅನ್ನಿಸುವುದು ಆಗಲೇ..
ನೆನಪು
ಆರ.ಮಣಿಕಾಂತ
25 ವರ್ಷಗಳ ಹಿಂದಿನ ಮಾತು. ಆಗ, ಜಿ. ಕೃಷ್ಣ ಪ್ರಸಾದ್, ನನಗೆ ಸಹಪಾಠಿ. ಮಂಡ್ಯದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಮ್ಮ ಓದು. ನನ್ನದು ಆಟೋಮೊಬೈಲ್ ವಿಭಾಗವಾದರೆ, ಅವನು ಪರಿಸರ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿ. ಆ ದಿನಗಳಲ್ಲೇ ಹೆಮಿಂಗ್ವೇ ಮತ್ತು ಮಾರ್ಕ್ವೆಜ್, ಕಾಫ್ಕಾ ಸೇರಿದಂತೆ, ಎಲ್ಲರ ಸಾಹಿತ್ಯವನ್ನೂ ಓದಿಕೊಂಡಿದ್ದ ಪ್ರಸಾದ್, 'ನಾವೂ ಹೆಮಿಂಗ್ವೇ ಥರಾ ಬದುಕಬೇಕು ನೋಡಪ್ಪ...' ಅನ್ನುತ್ತಿದ್ದ. ಅವತ್ತಿನ ಸಂದರ್ಭದಲ್ಲಿ, ಇಂಗ್ಲಿಷ್ ನ ಯಾವುದೇ ಪುಸ್ತಕವನ್ನೂ ಓದಿರದಿದ್ದ ನಾನು, ಪೆದ್ದುಪೆದ್ದಾಗಿ ಅವನ ಮುಖ ನೋಡುತ್ತಿದ್ದೆ.
ಮುಂದೆ, ಇಂಜಿನಿಯರಿಂಗ್ ನಲ್ಲಿ ಎರಡನೇ RANK ಬಂದ ಕೃಷ್ಣ ಪ್ರಸಾದ್, ಮೊದಲೇ ನಿರ್ಧರಿಸಿದ್ದವನಂತೆ ಹೇಳಿಬಿಟ್ಟ: 'ಮಣಿ, ನನಗೆ ಸರ್ಕಾರಿ ನೌಕರಿಗೆ ಹೋಗಲು ಸ್ವಲ್ಪ ಕೂಡ ಇಷ್ಟವಿಲ್ಲ. ತೇಜಸ್ವಿ ಥರಾ ಹಳ್ಳಿಗೆ ಹೋಗಿ ಕೃಷಿ ಮಾಡಬೇಕು ಅಂತ ಆಸೆ...' ಹೀಗೆ ಹೇಳಿದ್ದು ಮಾತ್ರವಲ್ಲ, ತಮಿಳುನಾಡಿನ ಹೊಸೂರ್ ನಿಂದ 18 ಕಿ.ಮೀ ದೂರವಿದ್ದ, ಪರಿಸರ ಹೋರಾಟಗಾರ್ತಿಯರಾದ ವಂದನಾ ಶಿವ ಮತ್ತು ವನಜಾ ರಾಮ್ ಪ್ರಸಾದ್ ಒಡೆತನದ '' ನವಧಾನ್ಯ'' ಎಂಬ ಎನ್ ಜಿ ಓ ದಲ್ಲಿ ಕೆಲಸಕ್ಕೂ ಸೇರಿಕೊಂಡ.
ಸಾವಯವ ಕೃಷಿ ಕುರಿತ ಸುದ್ದಿಯೇ ಇಲ್ಲದಿದ್ದ ಕಾಲ ಅದು. ಹೆಚ್ಚು ಇಳುವರಿ ಪಡೆವ ಆಸೆಯಿಂದ ಹೈಬ್ರಿಡ್ ತಳಿಗೆ ಮರುಳಾಗಿ, ದೇಸೀ ತಳಿಯನ್ನು ಜನರೇ ಮೂಲೆಗೆ ತಳ್ಳುತ್ತಿದ್ದ ಸಂದರ್ಭ ಅದು. ಅಂಥ ಸಂದರ್ಭದಲ್ಲಿ, ದೇಸಿ ತಳಿಗಳನ್ನು ಸಂರಕ್ಷಿಸಬೇಕು ಎಂಬ ಸದಾಶಯದಿಂದ '' ನವಧಾನ್ಯ'' ಟೀಮ್ ಕೆಲಸ ಮಾಡುತ್ತಿತ್ತು.
ನಾಲ್ಕು ಎಕರೆ ವಿಸ್ತಾರವಿದ್ದ ಆ ಫಾರ್ಮ್ ನಲ್ಲಿ, ತಲೆಮಾರುಗಳಿಂದ ಬಳಕೆಯಲ್ಲಿದ್ದ ಭತ್ತ, ರಾಗಿ, ಹುರುಳಿ, ಕುಂಬಳ, ಬದನೆ, ಮೆಣಸು, ಸೋರೆ ... ಮುಂತಾದ ಧಾನ್ಯ- ತರಕಾರಿಗಳ 10-20 ಬೀಜಗಳನ್ನು ಹಳ್ಳಿಗಳ ರೈತರಿಂದ ಪಡೆದು, ಬಿತ್ತನೆ ಮಾಡಿ, ವರ್ಷದ ಕೊನೆಗೆ 4-5 ಕೆ ಜಿ ಯಷ್ಟು ಪ್ರಮಾಣದ ಫಸಲು ಪಡೆಯುವುದು... ಅಲ್ಲಿನ ಕೆಲಸ ಆಗಿತ್ತು.
ಈ ವೇಳೆಗೆ, ಇಂಜಿನಿಯರಿಂಗ್ ಕ್ಷೇತ್ರಕ್ಕೆ ಗುಡ್ ಬೈ ಹೇಳಿ, ನಾನೂ ಪತ್ರಿಕೋದ್ಯಮಕ್ಕೆ ಬಂದಿದ್ದೆ. '' ಮಣಿ, ಹೇಗಿದ್ರೂ ನಿನಗೆ ಭಾನುವಾರ ವಾರದ ರಜೆ ಇದೆ ತಾನೇ? ಶನಿವಾರ ಕೆಲಸ ಮುಗಿಸಿಕೊಂಡು ಸೀದಾ ನಮ್ಮ ಫಾರ್ಮ್ ಗೆ ಬಂದುಬಿಡು. ಭಾನುವಾರ ಪೂರ್ತಿ ಸಮೀಪದ ಕಾಡು ಮೇಡು ಸುತ್ತಿಕೊಂಡು ಬರೋಣ'' ಅಂದಿದ್ದ ಪ್ರಸಾದ್. ಅದರಂತೆ, ಪ್ರತಿ ಶನಿವಾರ ತಮಿಳುನಾಡಿನ ಥಳಿ ಎಂಬ ಊರಿಗೆ ಹೋಗುವುದು, ನನ್ನ ಅಭ್ಯಾಸ ಆಯಿತು.
ಅಲ್ಲಿ ಪರಿಚಯವಾದವನೇ ಗೌರಾಚಾರ್. ಆತ 27-28 ವರ್ಷದ ಯುವಕ. ಕರ್ನಾಟಕದ ಗಡಿಯಲ್ಲಿರುವ
ತಮಿಳುನಾಡಿನ ಜವಳಗಿರಿ ಅವರ ಊರು. ''ಈತ, ಜೇನು ಸಾಕಣೆಯ ಕುರಿತು ವಿಶೇಷ ತರಬೇತಿ ಪಡೆದಿದ್ದಾನೆ. ಬಲೆ ಒಡ್ಡಿ ಮೊಲ ಹಿಡಿಯೋದರಲ್ಲಿ, ಹಕ್ಕಿಗಳ ಗೂಡು ಪತ್ತೆ ಹಚ್ಚುವುದರಲ್ಲಿ ಈತನದ್ದು ಎತ್ತಿದ ಕೈ. ಒಂಥರಾ ತೇಜಸ್ವಿಯವರ ಕಾದಂಬರಿಯಲ್ಲಿ ಬರುವ ಮಂದಣ್ಣನ ಥರದ ಆಳು. ದೇಸೀ ಕೃಷಿ ಪದ್ಧತಿಯ ಕುರಿತು ಸಾಕಷ್ಟು ತಿಳಿದಿದ್ದಾನೆ. ""ರೋಜಾವೇ ಚಿನ್ನ ರೋಜಾವೇ..." ಎಂಬ ತಮಿಳು ಗೀತೆಯನ್ನು ಮಧುರವಾಗಿ ಹಾಡ್ತಾನೆ .. '' ಎಂದೆಲ್ಲಾ ಕೃಷ್ಣ ಪ್ರಸಾದ್ ಹೇಳಿದ. ಮುಂದುವರಿದು-''ಮನುಷ್ಯ ಬಹಳ ಮೂಡಿ ಮಾರಾಯ. ಮೂಡ್ ಬಂದರೆ ದೆವ್ವದ ಥರಾ ಕೆಲಸ ಮಾಡ್ತಾ ಇರ್ತಾನೆ. ಇಲ್ಲ ಅಂದರೆ ಸುಮ್ಮನೆ ಇದ್ದುಬಿಡ್ತಾನೆ'' ಅಂದ.
ಅವತ್ತೇ ಸಂಜೆ ಕೃಷ್ಣಪ್ರಸಾದ್ ಗೆ ಮತ್ತೊಂದು ಐಡಿಯಾ ಬಂತು. ''ಮಣಿ, ನಮ್ಮ ಗೌರಾಚಾರ್ ಗೆ ಒಂದಷ್ಟು ಸಿನಿಮಾ ಸ್ಟಿಲ್ ಫೋಟೋಗಳು ಸಿಕ್ಕರೆ ತಂದುಕೊಡು. ಹದಿಹರಯದ ಯುವಕ ಅಲ್ಲವಾ? ಮೆಚ್ಚಿನ ತಾರೆಯರನ್ನು ನೋಡುವ ಆಸೆ ಖಂಡಿತ ಇರುತ್ತೆ. ಒಂದಷ್ಟು ಜನ ಸಿನಿಮಾ ಸ್ಟಾರ್ಸ್ ನ ನೋಡಿದರೆ, ಅವನಿಗೂ ಏಕತಾನ ಮಾಯವಾಗಿ ಕೆಲಸದಲ್ಲಿ ಹುಮ್ಮಸ್ಸು ಬರಬಹುದು'' ಅಂದ.
ಆ ದಿನಗಳಲ್ಲಿ, ಸಿನಿಮಾ ಪಿ ಆರ್ ಓ ಗಳು ಪ್ರತಿ ವಾರವೂ 50-60 ಸ್ಟಿಲ್ ಫೋಟೋಗಳನ್ನು ಪತ್ರಿಕಾ ಕಚೇರಿಗಳಿಗೆ ತಂದುಕೊಡುತ್ತಿದ್ದರು. ಬಳಸಿದ ನಂತರ ಅವನ್ನೆಲ್ಲಾ ಎಸೆಯಲಾಗುತ್ತಿತ್ತು. ಹೀಗೆ ವೇಸ್ಟ್ ಆಗುತ್ತಿದ್ದ ಫೋಟೋಗಳನ್ನು ಕೊಡಬಹುದಲ್ಲ ಅನ್ನಿಸಿ, ತಕ್ಷಣವೇ ಒಪ್ಪಿಕೊಂಡೆ. ಅಷ್ಟೇ ಅಲ್ಲ, ಮುಂದಿನ ವಾರವೇ, ಆ ಕಾಲದ ಹೀರೋ- ಹೀರೋಯಿನ್ ಗಳ ಫೋಟೋಗಳನ್ನು ಜೊತೆಗಿಟ್ಟುಕೊಂಡೇ ಹೋದೆ. ಅದರಲ್ಲಿ, ಒಂದಿಬ್ಬರು ನಟಿಯರ ಮಾದಕ ಭಂಗಿಯ ಚಿತ್ರಗಳೂ ಇದ್ದವು. ಗೌರಾಚಾರ್ ಹದಿಹರಯದ ಯುವಕ ಆಗಿರುವುದರಿಂದ, ಈ ಚಿತ್ರಗಳನ್ನು ನೋಡಿ ತುಂಬಾ ಖುಷಿ ಪಡುವನೆಂದು ನನ್ನ ಲೆಕ್ಕಾಚಾರ ಆಗಿತ್ತು.
ಉಹುಂ, ನಾವು ಅಂದುಕೊಂಡಂತೆ ಏನೂ ನಡೆಯಲಿಲ್ಲ. '' ಇವೆಲ್ಲಾ ನಿಮಗೆ, ತಗೊಳ್ಳಿ ಎಂದು ಕೊಟ್ಟರೆ, ಆ ಫೋಟೋಗಳನ್ನು ನೋಡಿ ಯಾವುದೇ ಭಾವನೆಯನ್ನೂ ವ್ಯಕ್ತಪಡಿಸದೆ ಎದ್ದು ಹೋಗಿಬಿಟ್ಟ ಗೌರಾಚಾರ್. ಅವತ್ತೇ ಸಂಜೆ ಕುತೂಹಲದಿಂದ ಕೇಳಿದೆ: ''ನಿಮಗೆ ಆ ಫೋಟೋಗಳು ಇಷ್ಟ ಆಗಲಿಲ್ವ? ನಿಮ್ಮ ಇಷ್ಟದ ನಟ ಯಾರು? ನಿಮಗೆ ತಮಿಳು ನಂತರ ಫೋಟೋ ಮಾತ್ರ ಆಗಬೇಕಾ?"
ಗೌರಾಚಾರ್ ತಕ್ಷಣವೇ- ''ಸಾರ್, ನಂಗೆ ರಾಜ್ ಕುಮಾರ್ ಇಷ್ಟ. ರಾಜ್ ಕುಮಾರ್ ಮಾತ್ರ ಇಷ್ಟ. ಅವರ ಫೋಟೋ ಸಿಕ್ಕಿದ್ರೆ ತಂದುಕೊಡಿ. ಬೇರೆ ಯಾರ ಫೋಟೋನೂ ಬೇಡ ನನಗೆ...'' ಅಂದರು!. ತಮಿಳುನಾಡು ಮೂಲದ ಒಬ್ಬ ಹಳ್ಳಿ ಹೈದ, ಅದೂ ಏನು ಆಗಷ್ಟೇ 27 ತುಂಬಿರುವ ಪಡ್ಡೆ ಯುವಕ, ತನ್ನ ವಯೋಮಾನದ ನಟರನ್ನು ಬಿಟ್ಟು, ಆಗಲೇ70 ದಾಟಿರುವ ರಾಜ್ ಕುಮಾರ್ ಅವರನ್ನು ಆರಾಧಿಸುತ್ತಾನೆ ಅನ್ನುವುದೇ ನನ್ನ ಮಟ್ಟಿಗೆ ಸೋಜಿಗ ಅನಿಸಿತು. ಹಾಗೆಂದೇ ಕೇಳಿದೆ-'' ಇದು ನೋಡಿದರೆ ತಮಿಳುನಾಡು. ನೀವು ರಾಜ್ ಕುಮಾರ್ ಸಿನಿಮಾ ನೋಡಿದ್ದೀರಾ? ಎಲ್ಲಿ ನೋಡಿದಿರಿ?"
ಸಾರ್, ಇದು ಕರ್ನಾಟಕ-ತಮಿಳುನಾಡು ಬಾರ್ಡರ್. ಇಲ್ಲಿಂದ ಕನಕಪುರ- ಆನೇಕಲ್ ಎರಡೂ ಹತ್ರ ಇವೆ. ಅಣ್ಣಾವ್ರ ಪಿಚ್ಚರ್ ಬಂದ್ರೆ ಅಲ್ಲಿಗೇ ಹೋಗಿ ನೋಡ್ತೇನೆ. ಬೆಂಗಳೂರಿಗೆ ಹೋಗಿ ಪಿಕ್ಚರ್ ನೋಡಿರುವುದೂ ಉಂಟು ಅಂದರು ಗೌರಾಚಾರ್. ಆತನ ಮಾತಲ್ಲಿ ನಂಬಿಕೆ ಬರಲಿಲ್ಲ. ಯಾವ ಪಿಕ್ಚರ್ ನೋಡಿದ್ದೀರಾ ಎಂಬ ಪ್ರಶ್ನೆ ಕೇಳಿದೆನಲ್ಲ? ಆಗ ನನ್ನೆದುರು ವಿನೂತನ ಜಗತ್ತೊಂದು ತೆರೆದುಕೊಂಡಿತು. ರಾಜ್ ಕುಮಾರ್ ಅವರ 45ಕ್ಕೂ ಹೆಚ್ಚು ಸಿನೆಮಾದ ಹೆಸರು ಹೇಳಿದರು ಗೌರಾಚಾರ್. ಅಷ್ಟೇ ಅಲ್ಲ, ಎಷ್ಟೋ ಸಿನೆಮಾದ ಡೈಲಾಗ್ ಗಳು, ಹಾಡುಗಳು ಆತನಿಗೆ ಕಂಠಪಾಠ ಆಗಿಬಿಟ್ಟಿದ್ದವು. ರಾಜ್ ಕುಮಾರ್ ಅಂದ ತಕ್ಷಣ ಆತ ಭಾವುಕನಾಗುತ್ತಿದ್ದ. ಅಣ್ಣಾವ್ರು, ಅನ್ನುತ್ತಾ ಭಾವಪರವಶನಾಗುತ್ತಿದ್ದ. ಮುಂದಿನ ಬಾರಿ ಹೋದಾಗ, ಅವನಿಗೆಂದೇ ಒಂದು ರಾಜ್ ಕುಮಾರ್ ಅವರ ಭಾವಚಿತ್ರ ಕೊಂಡೊಯ್ದೆ. ಅದನ್ನು ಕಂಡು ಗೌರಾಚಾರ್ ಮುಖ ಊರಗಲ ಆಯಿತು. ಆ ಚಿತ್ರವನ್ನು ಎದೆಗೆ ಅವಚಿಕೊಂಡು ಆತ ನಿಂತುಬಿಟ್ಟ.
ನಂತರದ ದಿನಗಳಲ್ಲಿ, ಕೆಲಸದ ಒತ್ತಡದ ಕಾರಣಕ್ಕೆ ಆನಂತರದಲ್ಲಿ ಥಳಿಗೆ ಹೋಗುವುದು ಕಡಿಮೆಯಾಯಿತು. ಜೊತೆಗೆ, ನಮ್ಮ ಕೃಷ್ಣ ಪ್ರಸಾದನೇ ಬೆಂಗಳೂರಿಗೆ ಬಂದುಬಿಟ್ಟ. ನಮ್ಮ ಮಾತುಗಳಲ್ಲಿ ತಪ್ಪದೇ ಗೌರಾಚಾರ್ ಅವರ ಪ್ರಸ್ತಾಪ ಆಗುತ್ತಿತ್ತು. '' ರಾಜ್ ಕುಮಾರ್ ದು ಹೊಸಾ ಫೋಟೋ ಇದ್ರೆ ಮರೆಯದೇ ತೆಗೆದು ಇಡು. ಗೌರಾಚಾರ್ ಗೆ ಕೊಡೋಣ'' ಅನ್ನಲು ಪ್ರಸಾದ್ ಮರೆಯುತ್ತಿರಲಿಲ್ಲ.
******
ಗೌರಾಚಾರ್ ಎಂಬ ಹಳ್ಳಿ ಹೈದನಿಗೆ, ಡಾಕ್ಟರ್ ರಾಜ್ ಕುಮಾರ್ ಕುರಿತು ಇದ್ದ ಅಭಿಮಾನ ಎಂಥದೆಂಬುದನ್ನು ತಿಳಿಯುವ ಸಂದರ್ಭವೂ ಬಂದುಬಿಟ್ಟಿತು. ಅವತ್ತು2006 ರ ಏಪ್ರಿಲ್ 12. ವರನಟ ರಾಜ್ ಕುಮಾರ್ ತೀರಿಕೊಂಡಿದ್ದರು. ಅಂಥದೊಂದು ಕೆಟ್ಟ ಸುದ್ದಿಯನ್ನು ಅರಗಿಸಿಕೊಳ್ಳಲು ಕರ್ನಾಟಕದ ಜನ ಸಿದ್ಧರಿರಲಿಲ್ಲ. ಜನರ ಭಾವನೆಯ ಕಟ್ಟೆಯೊಡೆದ ಸಂದರ್ಭ ಅದು. ''ನಮಗೆ ಅಣ್ಣಾವ್ರು ಬೇಕು, ನಾವು ಅಣ್ಣಾವ್ರನ್ನು ನೋಡಬೇಕು'' ಎಂಬ ಒಂದೇ ಆಸೆಯಿಂದ ಜನ ರಸ್ತೆಗಿಳಿದರು. ಕ್ಷಣಮಾತ್ರದಲ್ಲಿ ಗಲಾಟೆ ಶುರುವಾಗಿ, ಬಸ್ ಸಂಚಾರ ಕೂಡ ನಿಂತು ಹೋಯಿತು.
ರಾಜ್ ಕುಮಾರ್ ಇನ್ನಿಲ್ಲ ಎಂಬ ಸುದ್ದಿ ಕಿವಿಗೆ ಬಿದ್ದಾಗ, ಗೌರಾಚಾರ್ ತಮ್ಮೂರು ಜವಳಗಿರಿಯಲ್ಲಿದ್ದರಂತೆ. ತನ್ನ ಆರಾಧ್ಯದೈವ ಇನ್ನಿಲ್ಲ ಎಂದು ತಿಳಿದಾಕ್ಷಣ, ಅವರ ಅಂತಿಮ ದರ್ಶನ ಮಾಡಬೇಕು ಅನ್ನಿಸಿದೆ. ಅಷ್ಟೆ; ದೊಂಬಿ, ನಿಷೇದಾಜ್ಞೆ, ಗಲಾಟೆ, ಬಸ್ ಇಲ್ಲ... ಈ ಯಾವ ಸಂಗತಿಯೂ ಗೌರಾಚಾರ್ ಮನಸ್ಸಿಗೆ ಬಂದಿಲ್ಲ. ಆತ ನಿಂತ ನಿಲುವಿನಲ್ಲೇ ಹೊರಟು, ಕಡೆಗೂ ಬೆಂಗಳೂರು ತಲುಪಿಬಿಟ್ಟಿದ್ದಾರೆ. ಅವರು ಬಸ್ ಲಿ ಬಂದರಾ? ನಡೆದುಕೊಂಡೇ ಹೋದರಾ? ಭಗವಂತ ಬಲ್ಲ. ನಡೆಯುತ್ತಿರುವ ಗಲಭೆಗೂ ತನಗೂ ಸಂಬಂಧವೇ ಇಲ್ಲ ಅನ್ನುವಂತೆ ಬೆಂಗಳೂರು ತಲುಪಿ, ಅದು ಹೇಗೋ ಅಣ್ಣಾವ್ರ ಅಂತಿಮ ದರ್ಶನ ಪಡೆದು, ಭಾರವಾದ ಮನಸಿನೊಂದಿಗೆ ವಾಪಸ್ ಊರು ತಲುಪಿದ್ದಾರೆ...
''ಅಣ್ಣಾವ್ರನ್ನು ಕಡೆಯ ಬಾರಿಗೆ ಒಮ್ಮೆ ನೋಡಲೇಬೇಕು ಅನ್ನಿಸ್ತು ಸಾರ್. ಏನಾಗುತ್ತೋ ಆಗಲಿ ಅಂದುಕೊಂಡು ಹೋಗಿಬಿಟ್ಟೆ...'' ಎಂದು ಮುಂದೊಮ್ಮೆ ಕೃಷ್ಣ ಪ್ರಸಾದನ ಜೊತೆ ಮಾತಾಡುತ್ತಾ ಹೇಳಿದರಂತೆ ಗೌರಾಚಾರ್.
****
ಈಗ, ಜವಳಗಿರಿಯ ಒಂದು ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದಾರೆ ಗೌರಾಚಾರ್. ಪ್ರತಿವರ್ಷ ಏಪ್ರಿಲ್ ನಲ್ಲಿ ನಾವೆಲ್ಲಾ ರಾಜ್ ಸ್ಮರಣೆಗೆ ತೊಡಗಿದಾಗ, ಬಿಟ್ಟೂಬಿಡದೆ ಗೌರಾಚಾರ್ ರ ರಾಜ್ ಅಭಿಮಾನ ನೆನಪಿಗೆ ಬರುತ್ತದೆ.
ಅಭಿಮಾನಿಗಳನ್ನು ದೇವರು ಅಂದ ರಾಜ್ ಕೂಡ, ಒಂದರ್ಥದಲ್ಲಿ ದೇವತಾ ಮನುಷ್ಯ ಅನ್ನಿಸುವುದು ಆಗಲೇ..