ಅಮಾನಿಕೆರೆ ನೀರು ಕುಡಿಯಲು ಯೋಗ್ಯವಲ್ಲವೇ? ರೂ.25 ಕೋಟಿಯ ಪಂಪಿಂಗ್ ಸ್ಟೇಷನ್ ತುಕ್ಕು ಹಿಡಿಯುತ್ತಿದೆಯೇಕೆ?

ಅಮಾನಿಕೆರೆ ನೀರು ಕುಡಿಯಲು ಯೋಗ್ಯವಲ್ಲವೇ? ರೂ.25 ಕೋಟಿಯ ಪಂಪಿಂಗ್ ಸ್ಟೇಷನ್ ತುಕ್ಕು ಹಿಡಿಯುತ್ತಿದೆಯೇಕೆ?

ಅಮಾನಿಕೆರೆ ನೀರು ಕುಡಿಯಲು ಯೋಗ್ಯವಲ್ಲವೇ? ರೂ.25 ಕೋಟಿಯ ಪಂಪಿಂಗ್ ಸ್ಟೇಷನ್ ತುಕ್ಕು ಹಿಡಿಯುತ್ತಿದೆಯೇಕೆ?

ಅಮಾನಿಕೆರೆ ನೀರು ಕುಡಿಯಲು ಯೋಗ್ಯವಲ್ಲವೇ?
ರೂ.25 ಕೋಟಿಯ ಪಂಪಿಂಗ್ ಸ್ಟೇಷನ್ ತುಕ್ಕು ಹಿಡಿಯುತ್ತಿದೆಯೇಕೆ?


ತುಮಕೂರು: ಜಿಲ್ಲೆಗೆ ಹೇಮಾವತಿ ನೀರನ್ನು ತರುವ ಹೋರಾಟ ಐತಿಹಾಸಿಕವಾದುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಅಂದಿನ ಸಚಿವ ಹುಚ್ಚಮಾಸ್ತಿಗೌಡರ ಕಾಲದಲ್ಲಿ ಆರಂಭವಾಯಿತು ಎನ್ನುವ ಹೇಮಾವತಿ ಕಾಲುವೆ ಯೋಜನೆಯನ್ನು ಅನುಷ್ಟಾನಕ್ಕೆ ತರುವಲ್ಲಿ ದಿವಂಗತ ವೈ.ಕೆ.ರಾಮಯ್ಯ ಅವರ ಹೋರಾಟ ಮತ್ತು ತ್ಯಾಗವನ್ನು ಜಿಲ್ಲೆ ಮರೆಯುವಂತಿಲ್ಲ. ಹಾಗೆಯೇ ನಾಲೆ ಬಂದರೂ ಜಿಲ್ಲೆಗೆ ನೀರು ಹರಿಯಲಿಲ್ಲ, ನೀರು ಹರಿಯಲು ಹಾಸನದ ಈ ಅಪ್ಪ ಮಕ್ಕಳೇ ಅಡ್ಡಿ ಎಂಬ ಸಂಗತಿ ಮುಂದಿಟ್ಟುಕೊಂಡು ನಮ್ಮ ಜಿಲ್ಲೆಯ ಅಪ್ಪ-ಮಕ್ಕಳ ಜೋಡಿ ಗೆದ್ದದ್ದೂ ಈಗ ಇತಿಹಾಸ.


ಹೇಮಾವತಿ ನೀರನ್ನು ಆರಂಭದಲ್ಲಿ ಅರೆ ನೀರಾವರಿ ಬೆಳೆಗಾಗಿ ಎಂದು ಯೋಜನೆಯಲ್ಲಿ ಹೇಳಲಾಗಿತ್ತು, ಆದರೆ ವರ್ಷಗಳು ಕಳೆದಂತೆ ಜಿಲ್ಲೆಯ ಪಾಲಿನ ಹೇಮಾವತಿ ನೀರು ನೀರಾವರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಇಡೀ ಜಿಲ್ಲೆಯ ಜನರ ದಾಹವನ್ನು ತಣಿಸುವ ಸಲುವಾಗಿ ಕೆರೆಗಳನ್ನು ಭರ್ತಿ ಮಾಡಲು ಬಳಕೆಯಾಗಿದ್ದೇ ಹೆಚ್ಚು.


ಇದೇ ರೀತಿಯಾಗಿ ತುಮಕೂರಿನ ಅಮಾನಿಕೆರೆಗೂ ಹೇಮಾವತಿ ನೀರನ್ನು ಭರ್ತಿ ಮಾಡಲು ಎರಡೆರಡು ಯೋಜನೆಗಳು ಅನುಷ್ಟಾನಗೊಂಡವು. ಮೊದಲಿಗೆ ಸೊಗಡು ಶಿವಣ್ಣನವರ ಕಾಲದಲ್ಲಿ ಹೇಮಾವತಿ ನೀರನ್ನು ಅಮಾನಿಕೆರೆಗೆ ಈಗ ಶಂಕರ್ ಮಾಲ್ ನಿರ್ಮಾಣಗೊಂಡಿರುವ ದೊಡ್ಡ ಕೋಡಿ ಬಳಿ ಪೈಪ್ ಲೈನ್ ಅಳವಡಿಸಿ, ಹೇಮಾವತಿ ನೀರನ್ನು ಒಂದೋ ಎರಡೋ ಸಲ ಪಂಪ್ ಮಾಡಲಾಯಿತು. ಅಂದಿನ ನಗರಾಭಿವೃದ್ಧಿ ಸಚಿವ ಎಸ್. ಸುರೇಶ್‌ಕುಮಾರ್ ಅವರೇ ಖುದ್ದು ಆಗಮಿಸಿ ಪಂಪ್ ಸ್ವಿಚ್ ಆನ್ ಮಾಡಿದ್ದರು. ಕುತೂಹಲದ ಸಂಗತಿಯೆAದರೆ ಆಗ ಅಮಾನಿಕೆರೆಗೆ ಹೇಮಾವತಿ ಕಾಲುವೆಯಿಂದ ನೇರವಾಗಿ ನೀರು ಹರಿದಿರಲಿಲ್ಲ, ಬದಲಿಗೆ ನಗರದ ನಾಗರಿಕರಿಗೆ ಕುಡಿಯಲು ಸರಬರಾಜು ಮಾಡಲೆಂದು ಶುದ್ದೀಕರಿಸಿದ ನೀರನ್ನು ಪಂಪ್ ಮಾಡಲಾಗಿತ್ತು. ಮತ್ತು ಈ ಯೋಜನೆಗೆ ಆಗಲೇ 45 ಕೋಟಿಗೂ ಹೆಚ್ಚು ಮೊತ್ತವನ್ನು ಸರ್ಕಾರ ಖರ್ಚು ಮಾಡಿತ್ತು. 


ಆದರೆ ಮತ್ತೆ ಸ್ಮಾರ್ಟ್ ಸಿಟಿ ಕಂಪನಿಯ ಕಣ್ಣು ಅಮಾನಿಕೆರೆಯ ಮೇಲೆ ಬಿದ್ದ ನಂತರ ಸೊಗಡು ಶಿವಣ್ಣನವರ ಕಾಲದ ಪೈಪ್ ಲೈನ್ ಯಾರ ಕಣ್ಣಿಗೂ ಬೀಳಲಿಲ್ಲ, ಈಗಲೂ ತುಕ್ಕು ಹಿಡಿದ ದೊಡ್ಡ ಕೊಳವೆಯೊಂದು ಕೆರೆಯತ್ತ ಚಾಚಿಕೊಂಡಿರುವುದನ್ನು ಆ ಕೋಡಿಯ ಬಳಿ ನೋಡಬಹುದು.


ಹೊಸ ಕಾಮಗಾರಿಯ ಪ್ರಕಾರ ಬುಗುಡನಹಳ್ಳಿ ಜಲಸಂಗ್ರಹಾಗಾರದ ಹೇಮಾವತಿ ನೀರು ಪುಟ್ಟಸ್ವಾಮಯ್ಯನ ಪಾಳ್ಯದ ಕಡೆಯಿಂದ ಅಮಾನಿಕೆರೆಗೆ ಬಂದೇ ಬಿಟ್ಟಿತು. ಜೊತೆಗೆ ತುಮಕೂರು ನಗರಕ್ಕೆ ಹೆಚ್ಚುವರಿ ಕುಡಿಯುವ ನೀರನ್ನು ಈ ಕೆರೆಯಿಂದ ಸಮೀಪದ ಪಿಎನ್‌ಆರ್ ಪಾಳ್ಯದ ಶುದ್ದೀಕರಣ ಘಟಕಕ್ಕೆ ಪಂಪ್ ಮಾಡುವುದೆಂದೂ ಯೋಜನೆ ರೂಪಿಸಿ, ಅದಕ್ಕಾಗಿ ರೂ.25 ಕೋಟಿ ವೆಚ್ಚದಲ್ಲಿ ಮೂರು ಮೋಟಾರ್‌ಗಳ ಪಂಪಿAಗ್ ಸ್ಟೇಷನ್ ಅನ್ನು ನಿರ್ಮಿಸಲಾಯಿತು.
ಇದೀಗ ಪಂಪಿAಗ್ ಸ್ಟೇಷನ್ ಸಿದ್ದಗೊಂಡು ಆರು ತಿಂಗಳೇ ಕಳೆದಿದೆ. ನೀರು ಮಾತ್ರ ಇಲ್ಲಿಂದ ಪಂಪ್ ಆಗುತ್ತಿಲ್ಲ. ಕಾರಣ, ತುಮಕೂರು ಅಮಾನಿಕೆರೆಯಲ್ಲಿ ಸಂಗ್ರಹವಾಗಿರುವ ನೀರು ಕುಡಿಯಲು ಯೋಗ್ಯವಲ್ಲ ಎಂಬುದು.


ಪಂಪಿಂಗ್ ಸ್ಟೇಷನ್ ಸಂಪೂರ್ಣವಾಗಿ ರೆಡಿಯಾಗಿದ್ದು, ನಗರ ನೀರು ಸರಬರಾಜು ಮಂಡಳಿಗೆ ಹಸ್ತಾಂತರಿಸಿದ್ದೂ ಆಗಿದೆ, ಅಮಾನಿಕೆರೆಯ ನೀರು ಸದ್ಯಕ್ಕೆ ಕುಡಿಯಲು ಶುದ್ಧೀಕರಿಸುವ ಸಲುವಾಗಿ ಪಂಪ್ ಮಾಡಲು ಯೋಗ್ಯವಲ್ಲ ಎಂದು ಹೇಳಿದ್ದರಿಂದ ಅದು ಕೆಲಸ ನಿಲ್ಲಿಸಿದೆ ಎಂದು ಗುತ್ತಿಗೆದಾರ ರಮೇಶ್ ‘ಬೆವರ ಹನಿ’ಗೆ ಸ್ಪಷ್ಟ ಪಡಿಸಿದರು.


ಕುಡಿಯಲು ಯೋಗ್ಯವಲ್ಲ ಎಂಬ ಕಾರಣಕ್ಕೇ ಅಮಾನಿಕೆರೆಯಿಂದ ನೀರನ್ನು ಪಿಎನ್‌ಆರ್ ಪಾಳ್ಯದ ಜಲ ಶುದ್ದೀಕರಣ ಘಟಕಕ್ಕೆ ಪಂಪ್ ಮಾಡಲೆಂದು25 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿ ಈಗ ಕೆಲಸ ಮಾಡದೇ ಪಂಪಿಂಗ್ ಸ್ಟೇಷನ್ ವ್ಯರ್ಥವಾದಂತೆ ಅಲ್ಲವೇ ಎಂಬ ಪ್ರಶ್ನೆಗೆ ಅದು ಹಾಗಲ್ಲ ಸಾರ್ ಎಂಬ ಕಾಗೆ ಗೂಗೆಯ ನೆಪ ಹೇಳಿ ಫೋನ್ ಕಟ್ ಮಾಡಿಕೊಂಡರು ರಮೇಶ್.


ಈ ಪಂಪಿAಗ್ ಸ್ಟೇಷನ್‌ಗೆ ನೀಡಿದ್ದ ವಿದ್ಯುತ್ ಸಂಪರ್ಕವನ್ನೂ ಟೆಸ್ಟಿಂಗ್ ಪಂಪಿಂಗ್ ಆದ ನಂತರ ಕಡಿತಗೊಳಿಸಲಾಗಿದೆ. ಸುಮ್ಮಸುಮ್ಮನೇ ತಿಂಗಳಿಗೆ ಲಕ್ಷಾಂತರ ಬಿಲ್ ತೆರುವುದು ದಂಡ ಅಂತ ಇಲಾಖೆ ಮೂಲಗಳು ಹೇಳುತ್ತವೆ.


ನಮ್ಮ ನಗರ ಶಾಸಕರ ಜ್ಯೋತಿ ಗಣೇಶ್ ಅವರ ಮಹತ್ವಾಕಾಂಕ್ಷೆಯ ಯೋಜನೆ ಇದು, ಪೈಪ್ ಲೈನ್ ಮತ್ತು ಪಂಪಿಂಗ್ ಸ್ಟೇಷನ್ ಸೇರಿ 65ಕೋಟಿ ರೂ ಖರ್ಚಾಗಿದೆ. ಕೆರೆಯಲ್ಲಿರುವ ಜೊಂಡು, ತೇಲು ಸಸ್ಯ ಹಯಾಸಿಂತ್ ಜೊತೆಗೆ ಹೊಸದಾಗಿ ಹುಟ್ಟಿ ಹರಡುತ್ತಿರುವ ತಾವರೆ (‘ಕಮಲ’) ಕೆರೆಯ ನೀರನ್ನು ಹೀರಿಕೊಳ್ಳುತ್ತಿವೆ. ಹೂಳನ್ನು ತೆಗೆಯುವ ಮೊದಲೇ ಹೇಮಾವತಿ ನೀರನ್ನು ಭರ್ತಿ ಮಾಡಿರುವುದರಿಂದ ಸದ್ಯಕ್ಕೆ ಆ ಕಾಮಗಾರಿಯನ್ನೂ ಕೈಗೊಳ್ಳುವಂತಿಲ್ಲ. 


ಇಡೀ ಅಮಾನಿಕೆರೆಗೆ ನಗರದ ಯಾವ ಚರಂಡಿಯ ನೀರೂ ಬಂದು ಸೇರದಂತೆ ಎಲ್ಲ ಒಳಚರಂಡಿಗಳು ಮತ್ತು ರಾಜಕಾಲುವೆಗಳ ನೀರನ್ನು ಭೀಮಸಂದ್ರ ಕೆರೆಗೆ ಹೊರಳಿಸಿದ್ದೂ ಆಗಿದೆ. ಆದಾಗ್ಯೂ ಅಮಾನಿಕೆರೆ ನೀರು ಕುಡಿಯಲು ಯೋಗ್ಯವಲ್ಲ ಟರ್ಬಿಡಿಟಿ ಜಾಸ್ತಿ ಇದೆ ಎನ್ನಲಾಗುತ್ತಿದೆ. 


ನಾಗರಿಕರಿಗೆ ಕುಡಿಯಲು ಬಳಕೆ ಆಗದ ಈ ನೀರಿನಲ್ಲಿ ಬೆಳೆದಿರುವ ದಪ್ಪ ದಪ್ಪ ಮೀನುಗಳನ್ನು ಕೇಜಿಗೆ ಕೇವಲ ನೂರು ರೂಗಳಂತೆ ಹಿಡಿದು ಮಾರಲಾಗುತ್ತಿದೆ. ಒಟ್ಟಾರೆ ನಮ್ಮ ಅಮಾನಿಕೆರೆ ಅನಾಥ. ಕೋಟಿಗಟ್ಟಲೆ ಹಣ ನೀರು ಪಾಲಾಗಿಬಿಟ್ಟಿತೇ.