ಹೂಂ ಎನ್ನಲೂ, ಊಹೂಂ ಎನ್ನಲೂ ಆಗದೇ, ಸುಮ್ಮನೇ ಇರಲೂ ಆಗದೇ ಇರುವಾಗ ...,
ಒಂದು ಗಳಿಗೆ
ಕುಚ್ಚಂಗಿ ಪ್ರಸನ್ನ
ನಾನು ಈ ತರುಣನನ್ನು ವಂಚಿಸುತ್ತಿದ್ದೇನೆ ಅಥವಾ ನಾನು ಈತನಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಿಲ್ಲ ಅಂತ ತೀವ್ರವಾಗಿ ಅನ್ನಿಸಿಬಿಟ್ಟಿದೆ. ಎಂದೂ ಯಾವತ್ತೂ ನನ್ನ ಖಾಸಗಿ ಸಂಗತಿಗಳಿಗೆ ಕೊರಗದ ನಾನು ಈತನ ಪ್ರಶ್ನೆಗಳಿಗೆ ಮಾರುತ್ತರ ಕೊಡಲಾಗದೇ ಕಳೆದ ವಾರ, ಹದಿನೈದು ದಿನಗಳಿಂದ ಈತನ ದೂರವಾಣಿ ಕರೆ ಬಂದಾಗಲೆಲ್ಲ ಚಡಪಡಿಸತೊಡಗುತ್ತಿದ್ದೇನೆ.
ಈತ ರಾಜಕಾರಣದ ಹಿನ್ನೆಲೆ ಇರುವ , ಆದರೆ ಇವತ್ತಿನ ಲೆಕ್ಕದ ರಾಜಕಾರಣ ಮಾಡಲಾಗದ, ಇಲ್ಲೇ ಹುಟ್ಟಿ ,ಬೆಳೆದು,ಕಲಿತರೂ , ಹತ್ತಾರು ವರ್ಷಗಳಿಂದ ವಿದೇಶದಲ್ಲಿ ನೆಲೆಸಿರುವ 30ರ ಇನ್ನೂ ಮದುವೆಯಾಗದ ತರುಣ. ಈತ ಏನೋ ಕೆಲಸದ ಮೇಲೆ ಕೆಲ ಸಮಯದ ಕಾಲ ತಾಯ್ನಾಡಿಗೆ ಹಿಂದಿರುಗಿರುವಾಗಲೇ ವಿಧಾನ ಸಭೆ ಚುನಾವಣೆ ಬಂದು ಬಿಟ್ಟಿದೆ. ಕಾಲ ಕಳೆಯಲು ಹೆಚ್ಚು ಗೆಳೆಯರೂ ಇಲ್ಲದ ಹೊತ್ತಿನಲ್ಲಿ ಕನ್ನಡದ ನ್ಯೂಸ್ ಚಾನೆಲ್‌ಗಳಲ್ಲಿ ಬರುತ್ತಿರುವ ಪೊಲಿಟಿಕಲ್ ಸ್ಟೋರಿಗಳನ್ನು ನೋಡುತ್ತಾ ನೋಡುತ್ತಾ ಈತನಿಗೆ, ಇಂಥಾ ಸನ್ನಿವೇಶದಲ್ಲಿ ಸುಮ್ಮನಿರುವುದು ಹೇಗೆ, ಏನನ್ನಾದರೂ ಮಾಡಬೇಕು ಅಂತಲೂ ಅನಿಸಿದೆ.
ಮಧ್ಯಮ ವರ್ಗದ,ಮಧ್ಯಮ ಜಾತಿಯ ಎಲ್ಲ ತರುಣರಿಗೂ ಅನ್ನಿಸುವಂತೆ ಸಾಮಾಜಿಕ ಅಸಮಾನತೆಗಿಂತ ಭ್ರಷ್ಟಾಚಾರ ಈ ದೇಶದ ಬೆಳವಣಿಗೆಗೆ ದೊಡ್ಡ ಅಡ್ಡಿ ಅಂತ ಈತನಿಗೂ ಅನಿಸಿದೆ. ಹತ್ತಾರು ವರ್ಷಗಳಿಂದ ವಿದೇಶಿ ನೆಲದ ಸಭ್ಯ ನಡವಳಿಕೆ ಮತ್ತು ಗೊಂದಲಗಳಿಲ್ಲದ ರಾಜಕಾರಣವನ್ನು ಗಮನಿಸುತ್ತ ಬಂದ ಈತನಿಗೆ, ಇವತ್ತು ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದೇ ಅನೈತಿಕ ಮಾರ್ಗದಿಂದ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಹದಿನಾರು ಶಾಸಕರನ್ನು ಖರೀದಿಸಿ, ಬಿಜೆಪಿ ಸರ್ಕಾರ ರಚಿಸಿದೆ ಎಂಬ ಕಹಿ ಸತ್ಯವನ್ನು ಅರಗಿಸಿಕೊಳ್ಳಲಾಗಿಲ್ಲ.
ಆಡಳಿತ ವಿರೋಧಿ ಅಲೆಯ ಕಾರಣಕ್ಕೇ ರಾಜ್ಯದ ಓಟುದಾರರಿಗೆ ನಮ್ಮನ್ನು ಬಿಟ್ಟರೆ ಗತಿಯಿಲ್ಲ ಎಂದು ಬೀಗುವ ಕಾಂಗ್ರೆಸ್, ಜಾತಿಯ ಹೊರತಾಗಿ ಅನ್ಯ ಸತ್ಯವೇ ಇಲ್ಲ, ನಾವು ಕಿಂಗ್ ಮೇಕರ್‌ಗಳಲ್ಲ ನಾವೇ ಕಿಂಗ್‌ಗಳು ಎನ್ನುವ ಜೆಡಿಎಸ್‌ಗಳನ್ನು ಈತ ಕೆಲ ತಿಂಗಳಿAದ ಗಮನಿಸುತ್ತಲೇ ಇದ್ದು, ಕಡೆಗೆ ನಾನು ಈತನ ಒಳತುಡಿತವನ್ನು ಅರ್ಥ ಮಾಡಿಕೊಳ್ಳುವ ಸೂಕ್ತ ಆಸಾಮಿ ಅಂತ ಭಾವಿಸಿ ನನ್ನನ್ನು ಭೇಟಿ ಮಾಡಿದ.
“ ನೋಡಿ, ಕಾಂಗ್ರೆಸ್‌ನಿಂದ ಡಿ.ಕೆ.ಶಿವಕುಮಾರ್ ಸಿಎಂ ಆಸ್ಪಿರೆಂಟ್ ಅಂತ ಸ್ಟ್ರಾಂಗ್ ಆಗಿ ಹೇಳ್ತಾ ಇದ್ದಾರೆ, ನ್ಯೂಸ್ 18 ಎಂಬ ಇಂಗ್ಲಿಷ್ ನ್ಯಾಶನಲ್ ಚಾನೆಲ್‌ನಲ್ಲೂ ಈತನ ಒನ್ ಹವರ್ ಲೆಂಗ್ತ್ ನ ಪೇಡ್ ಸ್ಟೋರಿ ಪ್ಲೇ ಆಗ್ತಿದೆ. ಏನಾದರೂ ಮಾಡಬೇಕು, ಈ ಮನುಷ್ಯ ಬಹಳಾ ಕರಪ್ಟ್ ಅಂತ ಈತನ ಎಲೆಕ್ಟೊರಲ್ ಟ್ರಾಕ್ ರೆಕಾರ್ಡ್ಸ್ ಹೇಳ್ತಾ ಇದೆ, ಇಂತೋರೆಲ್ಲ ನಮ್ಮ ರಾಜ್ಯ ಲೀಡ್ ಮಾಡಬಾರದು” ಅಂತಂದ.
ನನ್ನನ್ನು ಭೇಟಿಯಾದ ಈ ತರುಣ ವಿದೇಶದಲ್ಲಿ ಎಷ್ಟೊಂದು ನಾಗರಿಕ ನಡವಳಿಕೆಗಳನ್ನೆಲ್ಲ ರೂಡಿಸಿಕೊಂಡು ಬಿಟ್ಟಿದ್ದಾನೆ ಅಂದರೆ, ಈತನ ಎದುರು ಕೂತ ನಾನು ತೀರಾ ಕಾಡು ಮನುಷ್ಯನೇನೋ ಅನ್ನಿಸಿಬಿಟ್ಟಿತು. ತುಸು ಕೆಮ್ಮು ಬಂದರೂ ಕೆಮ್ಮುವ ಮುನ್ನ ಅಥವಾ ಕೆಮ್ಮಿದ ತಕ್ಷಣ ಕ್ಷಮೆ ಕೇಳುತ್ತಾನೆ, ಸೀನು ಬಂದರೆ ಕ್ಷಮೆ ಕೇಳಿ ಎದ್ದು ಹೊರಗೇ ಹೋಗಿ ಬಿಡುತ್ತಾನೆ. ಬರುವ ಮುನ್ನ ಪದೇ ಪದೇ ಕರೆ ಮಾಡಿ ಖಚಿತ ಪಡಿಸಿಕೊಳ್ಳುವುದು, ರಸ್ತೆಯ ಎಡ ಬದಿಯಲ್ಲೇ ಬೈಕ್ ಓಡಿಸಿಕೊಂಡು ಬರುವುದು, ಫುಲ್ ಹೆಡ್ ಹೆಲ್ಮೆಟ್ ಧರಿಸುವುದು, ಇಂತ ಯಾವ ನಡವಳಿಕೆಗಳನ್ನು ನಾವು ಪಾಲಿಸುವುದಿಲ್ಲ, ಮತ್ತು ಹಾಗೆ ಪಾಲಿಸುವವರು ನಮ್ಮ ಕಣ್ಣಿಗೆ ಕೆಲಸಕ್ಕೆ ಭಾರದ ವೇಸ್ಟ್ ಬಾಡಿಗಳಂತೆ ಕಾಣುತ್ತಾರೆ.
ಭ್ರಷ್ಟಾಚಾರವೇ ಎಲ್ಲ ಸಮಸ್ಯೆಗಳ ಮೂಲ ಎಂಬ ಈ ತರುಣನ ವಾದವನ್ನು ತುಂಡರಿಸಿ ನನ್ನದೇ ಆದ ಸಿದ್ದಾಂತವನ್ನು ಈತನ ಮುಂದೆ ಮಂಡಿಸತೊಡಗಿದೆ. “ ನೋಡು ಮಾರಾಯ, ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಅಥವಾ ಅವರಿಗೆ ಬೇಕಾದಂತೆ ಬಗ್ಗಿಸಿಕೊಂಡು ಹಣ ಮಾಡುವುದೇ ಇವತ್ತಿನ ಅಧಿಕಾರದಲ್ಲಿರುವ ರಾಜಕಾರಣಿಗಳ ದಂಧೆಯಾಗಿದೆ ಎನ್ನುವುದು ನಿಜ, ಅದರ ಜೊತೆ ಜೊತೆಗೆ ಸಾಮಾಜಿಕ ಹಾಗೂ ನೈಜ ಅರ್ಥದಲ್ಲಿ ಧಾರ್ಮಿಕವಲ್ಲದೇ ಹೋದರೂ ಜನರ ದೈನಂದಿನ ನಂಬಿಕೆ ಮತ್ತು ಆಚರಣೆಗಳನ್ನು ಆಧರಿಸಿದ ನಡವಳಿಕೆಯನ್ನೇ ಧರ್ಮ ಎಂದು ಬಿಂಬಿಸುತ್ತ, ಈ ವಿಚಾರದಲ್ಲಿ ಜನರ ದೌರ್ಬಲ್ಯಗಳನ್ನು ಶೋಷಿಸುತ್ತಲೇ ಅಧಿಕಾರಕ್ಕೆ ಬರುತ್ತಿರುವ ಬಿಜೆಪಿಯಂಥ ಪಕ್ಷವೂ ಅತೀವ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇಲ್ಲಿ ನೀನು ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರವನ್ನು ವಿರೋಧಿಸಹೋದರೆ ಅದರ ಲಾಭ ಮನುಷ್ಯರನ್ನೇ ಪರಸ್ಪರ ಶತ್ರುಗಳನ್ನಾಗಿ ಸೃಷ್ಟಿಸಿ ಹೊಡೆದಾಡುವಂತೆ ಮಾಡಿ, ಅಧಿಕಾರ ಎಂಜಾಯ್ ಮಾಡುತ್ತಿರುವ ಬಿಜೆಪಿಗೆ ನೇರಾ ನೇರ ತಲುಪುವಂತಾಗುತ್ತದೆ, ತುಸು ಯೋಚನೆ ಮಾಡು” ಎಂದೆ.
ಒಂದರೆಡು ನಿಮಿಷದ ಮಟ್ಟಿಗೆ ಕನ್ವೀನ್ಸ್ ಆದಂತೆ ಕಂಡರೂ, ಇನ್ನೇನೋ ಮತ್ತೇನೋ ಮಾತನಾಡುತ್ತ ಕಡೆಗೆ ಡಿ.ಕೆ.ಶಿವಕುಮಾರ್ ಮತ್ತು ಅವರು ಅಕ್ರಮವಾಗಿ ಸಾವಿರಾರು ಕೋಟಿ ಹಣ, ಆಸ್ತಿ ಮಾಡಿರುವ ಪಟ್ಟಿಯನ್ನೇ ತೋರಿಸಿ, ಇಂಥಾ ಕರಪ್ಟ್ ಪಾಲಿಟೀಶೀಯನ್ಸ್ ನಮಗೆ ಬೇಡ “ ಎನ್ನುತ್ತಾನೆ ಈತ.
ಸರಿಯಪ್ಪಾ 2013ರಿಂದ 18ರವರೆಗೆ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿಲ್ಲ ಅಂತೀಯಾ, ಆಗಲೂ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಇದೇ ಡಿಕೆಶಿ ಮಂತ್ರಿಯಾಗಿರಲಿಲ್ಲವೇ, ಈತ ಚುನಾವಣೆಯಿಂದ ಚುನಾವಣೆಗೆ ಸಲ್ಲಿಸುತ್ತಾ ಬಂದಿರುವ ಅಫಿಡವಿಟ್‌ಗಳಲ್ಲಿ ಹಣ ಮತ್ತು ಆಸ್ತಿ ಪ್ರಮಾಣದಲ್ಲಿ ಹೆಚ್ಚಳ ಕಂಡಿಲ್ಲವೇ, ಅದನ್ನೆಲ್ಲ ಯಾಕೆ ಜನ ಪ್ರಶ್ನಿಸುವುದಿಲ್ಲ, ನಾನು, ನೀನು ಮಾತ್ರವೇ ಏಕೆ ಇಂಥ ವಿಚಾರಗಳ ಕುರಿತು ಹೀಗೆ ಎಲ್ಲ ಕೆಲಸ ಬಿಟ್ಟು ಗಂಟೆಗಟ್ಟಲೆ ಚರ್ಚಿಸುತ್ತೇವೆ. ತುಸು ಆಲೋಚಿಸು” ಎಂದೆ.
ಆ ತರುಣ ತಲೆ ಅಲ್ಲಾಡಿಸುತ್ತಾ ಇಲ್ಲ, ಇಲ್ಲ ಎಲ್ಲ ಕಾಲಕ್ಕೂ ಕರಪ್ಷನ್ ಇತ್ತು, ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಇರಲಿಲ್ಲ, ಎನ್ನುತ್ತಲೇ, ಏನಾದರೂ ಮಾಡಿ ಈ ಸಲವಾದರೂ ಇಂಥಾದ್ದು ಆಗದಂತೆ ನೋಡಿಕೊಳ್ಳಬೇಕು ಎಂದು ಪ್ರತಿಪಾದಿಸತೊಡಗಿದ. ನೋಡಿ ಆ ಹಿರೇಮಠ್ ಎಷ್ಟೆಲ್ಲ ಹೋರಾಟ ಮಾಡ್ತಾ ಇದ್ದಾರೆ, ನಮ್ಮ ಯೂತ್ ಎಲ್ಲ ಇಂತಾದ್ದರ ವಿರುದ್ಧ ಹೋರಾಡಬೇಕು, ನಾನೂ ಸಪೋರ್ಟ್ ಮಾಡ್ತೀನಿ, ಇಂಡಿಯಾದಿಂದ ಹೋದ ಮೇಲೂ ಸಪೋರ್ಟ್ ಮಾಡ್ತೀನಿ” ಅಂತಂದ.
ಈ ತರುಣ ಮಂಡಿಸುತ್ತಿದ್ದ ವಿಚಾರಗಳಲ್ಲಿ ಸತ್ಯಾಂಶವಿಲ್ಲ ಅಂತ ನನಗೆ ಅನ್ನಿಸಿಲ್ಲ, ಆದರೆ ಮತ್ತು ಆದರೂ ಆತನ ಮಾತನ್ನು ನಂಬಿ ಕಾಂಗ್ರೆಸ್‌ಗೆ ಓಟು ಹಾಕಬೇಡಿ ಅಂತ ಹೇಳುವ ಪರಿಸ್ಥಿತಿ ಇಲ್ಲ, ಯಾವ ಸರ್ವಾಧಿಕಾರಿ ನಡೆವಳಿಕೆಯ ಕಾರಣಕ್ಕೆ ಕಾಂಗ್ರೆಸ್ಸನ್ನು ವಿರೋಧಿಸಿ 1978ರಲ್ಲಿ ಜನತಾರಂಗ ದೇಶದ ಅಧಿಕಾರ ಚುಕ್ಕಾಣಿ ಹಿಡಿಯಿತೋ ಅದೇ ಜನತಾರಂಗದ ಒಂದು ಭಾಗವಾಗಿದ್ದ ಭಾರತೀಯ ಜನಸಂಘ, ಭಾರತೀಯ ಜನತಾ ಪಾರ್ಟಿ ಎಂಬ ಹೆಸರು ಬದಲಾವಣೆ ಮಾಡಿಕೊಂಡು , ಮೂರು ದಶಕಗಳಿಂದ ಹಂತ ಹಂತವಾಗಿ ಇಂಡಿಯಾದಲ್ಲಿ ಹರಡುತ್ತಾ ಬಂತು, ಕಾಂಗ್ರೆಸ್ ಮಾಡುತ್ತಿದ್ದ ಎಲ್ಲ ಅಕ್ರಮ, ಅವ್ಯವಹಾರಗಳನ್ನು ಇನ್ನೂ ಹೆಚ್ಚು ನಾಜೂಕಾಗಿ, ನಯವಂತಿಕೆಯಿಂದ ಮಾಡುತ್ತ, ಬಹುಪಾಲು ಜನರ ಮನಸ್ಸಿನಲ್ಲಿ ನೆಲೆ ಕಂಡು ಕೊಂಡು ಬಿಟ್ಟಿತು.
ನೀವು ಭ್ರಷ್ಟಾಚಾರ ಮಾಡುತ್ತಿದ್ದೀರಿ ಅಂತ ಯಾರಾದರೂ ಕೇಳಿದರೆ ನೋಡಿ, ಅವರು ಮಾಡಿರಲಿಲ್ಲವೇ, ನಾವೇನೂ ಅವರಿಗಿಂತ ಹೆಚ್ಚು ಮಾಡಿಲ್ಲ” ಎಂದು ಹೋಲಿಸಿಕೊಳ್ಳುವಷ್ಟು , ಅದಕ್ಕಿಂತ ಮುಖ್ಯವಾಗಿ ಮಾಧ್ಯಮಗಳನ್ನೇ ಇಡಿಯಾಗಿ ಖರೀದಿಸಿ, ಕೈಗೊಂಬೆಗಳನ್ನಾಗಿ ಮಾಡಿಕೊಳ್ಳುವಷ್ಟು ನಾಜೂಕು ರಾಜಕೀಯ ನಡೆಸತೊಡಗಿದೆ.
ನಾವು ಪದವಿ ಓದುವಾಗ ಓಟು ಕೇಳುತ್ತಿದ್ದವರು ಓಟುದಾರರಿಗೆ ಹಣ ನೀಡುತ್ತಿರಲಿಲ್ಲ, ತೀರಾ ಎಂದರೆ ಎಲೆ ಅಡಿಕೆ ಕೊಟ್ಟು ನೀವು ನಮ್ಮ ಪಾರ್ಟಿಗೆ ಓಟು ಹಾಕಿರಪ್ಪ ಅಂತ ಕೇಳಲಾಗುತ್ತಿತ್ತು. ಆದರೆ ಓಟಿನ ಹಿಂದಿನ ರಾತ್ರಿ ಖೋಡೇಸ್ ಡಿಸ್ಟಿಲರಿಗಳಿಂದ ಮುಂಗಡದAತೆ ಬಂದಿಳಿದಿರುತ್ತಿದ್ದ ಮದ್ಯದ ಬಾಟಲಿಗಳ ಹಂಚಿಕೆ ನಡೆಯುತ್ತಿತ್ತು. ಆಗ ಜನರಲ್ಲಿ ಮಾತಿನ ಮೇಲೆ ನಿಗಾ ಇತ್ತು.
ಇಂಥಾ ಯುವಕರು ಇಂಡಿಯಾದಲ್ಲಿ ಪದವಿ ಓದುವಾಗಲೂ ಇಲ್ಲಿನ ಸಾಮಾಜಿಕ , ರಾಜಕೀಯ ವಾತಾವರಣದಲ್ಲಿ ಜಾತಿ ಮತ್ತು ಹಣಕ್ಕೆ ಆದ್ಯತೆ ಇದ್ದೇ ಇತ್ತು, ಭ್ರಷ್ಟಾಚಾರವೂ ಇರಲಿಲ್ಲ ಎನ್ನುವಂತಿರಲಿಲ್ಲ, ಆದರೆ ಇವೆಲ್ಲ ಇವತ್ತಿನ ಮಟ್ಟಿಗೆ ಕಣ್ಣಿಗೆ ರಾಚುವಂತೆ ಎದ್ದು ಕಾಣುತ್ತಿವೆ. ಕ್ಷಣಾರ್ಧದಲ್ಲಿ ನಿಮ್ಮ ಅಂಗೈ ಕನ್ನಡಿಯಂಥಾ ಮೊಬೈಲುಗಳಲ್ಲೇ ಸೃಷ್ಟಿಯಾಗಿ ಅಲ್ಲೇ ಅವಸಾನ ಕಾಣುವ ವಾಟ್ಸಪ್ , ಟ್ವಿಟರ್ ,ಫೇಸ್ ಬುಕ್ ಹೊಸ ಹೊಸ ಸೋಶಿಯಲ್ ಮೀಡಿಯಾಗಳಲ್ಲಿ ಹಸೀ ಸುಳ್ಳಿನ ಕಂತೆಗಳನ್ನೇ ನಿಜವೆಂಬಂತೆ ಸಾಬೀತು ಪಡಿಸುತ್ತಿರುವುದೇ ಕಾರಣವೇ ಗೊತ್ತಿಲ್ಲ.
ಇವತ್ತಿನ ಮಟ್ಟಿಗೆ ಒಬ್ಬ ಎಂಎಲ್‌ಎ ಆಗಲು ಕನಿಷ್ಟ 20 ಕೋಟಿ ಇರಬೇಕು ಎಂದು ಮೊಬೈಲ್‌ಗಳಲ್ಲಿ ಗೇಮ್ ಆಡುವ ಹುಡುಗರೂ ಹೇಳುವಷ್ಟು ರಾಜಕೀಯ ಪ್ರಜ್ಞೆ ಬೆಳೆದುಬಿಟ್ಟಿದೆ.(ಚುನಾವಣಾ ಆಯೋಗ ಪ್ರತಿ ಅಭ್ಯರ್ಥಿಗೆ ಕೇವಲ ರೂ.40ಲಕ್ಷ ನಿಗದಿ ಪಡಿಸಿದೆ, ಈ ಮೊತ್ತದ ಲೆಕ್ಕ ಕೊಡಲು ಆಡಿಟರ್‌ಗಳು ಇರುತ್ತಾರೆ.) ಒಂದು ಕ್ಷೇತ್ರದಲ್ಲಿ ಕನಿಷ್ಟ ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಇದ್ದೇ ಇರುತ್ತಾರೆ. ಈ ತಲಾವಾರು ಲೆಕ್ಕ ಹಾಕಿಕೊಂಡರೆ ಸರಾಸರಿ ಒಂದು ವಿಧಾನ ಸಭಾ ಕ್ಷೇತ್ರಕ್ಕೆ ಕಮ್ಮಿ ಎಂದರೂ ರೂ.50 ಕೋಟಿಯಂತೆ ತೀರಾ ಕಮ್ಮಿ ಅಂತ 200 ಕ್ಷೇತ್ರಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ 1000 ಕೋಟಿ ಮತ್ತು ಇದರ ಜೊತೆಗೆ ಸರ್ಕಾರ ಮಾಡುವ ಚುನಾವಣಾ ಖರ್ಚು ಲೆಕ್ಕ ಹಾಕಿ ನೋಡಿ .
ಹೀಗೆ ಐದು ವರ್ಷಕ್ಕೆ ಒಂದು ಸಲ ರಾಜ್ಯದಲ್ಲಿ ಒಂದು ಸಾವಿರ ಕೋಟಿ ಖರ್ಚು ಮಾಡುವವರಲ್ಲಿ ಎಲ್ಲರೂ ಶಾಸಕರಾಗುವುದಿಲ್ಲ ಅಲ್ವಾ, ಇಷ್ಟು ದೊಡ್ಡ ಮೊತ್ತವನ್ನು ಸಾಲ ಮಾಡಿಯಾದರೂ ತರುತ್ತಾರೆ ಎಂದು ಕೊಂಡರೂ ಚುನಾವಣೆ ನಂತರ ಹೇಗೆ ಆ ದೊಡ್ಡ ಮೊತ್ತದ ಸಾಲ ತೀರಿಸುತ್ತಾರೆ. ಗೆದ್ದವರು ಅದು ಹೇಗೋ ಸರ್ಕಾರಿ ಇಲಾಖೆಗಳ ಕಾಮಗಾರಿ ಕಮೀಶನ್ ಮತ್ತು ವರ್ಗಾವಣೆ ದಂಧೆಯಲ್ಲಿ ಗಿಟ್ಟಿಸಿಕೊಳ್ಳುತ್ತಾನೆ ಎಂದರೂ ಸೋತು ಸುಣ್ಣವಾದವರ ಕತೆ ಏನು. ಭ್ರಷ್ಟ ವ್ಯವಸ್ಥೆಯೊಳಗೇ ಹುಟ್ಟಿ ಬೆಳೆಯುವ ಡೆಮಾಕ್ರಸಿ ಎಂಬ ಪಾಪದ ಕೂಸು ಭ್ರಷ್ಟಾಚಾರ ರಹಿತ ಸರ್ಕಾರವನ್ನು ಪೋಷಿಸಬಲ್ಲದೇ, ನೀನೇ ಹೇಳು ಅಂತಂದೆ.
ಆತ ಗಾಬರಿಗೊಳ್ಳದೇ ತಣ್ಣಗೆ ಹೇಳಿದ, “ ಹಾಗಾದರೆ ಇಂಥ ಅಕ್ರಮ,ಅವ್ಯವಹಾರಗಳಿಗೆ ಅಂತ್ಯವೇ ಇಲ್ಲವಾ, ನೀವೆಲ್ಲ ಯಥಾಸ್ಥಿತಿವಾದಿಗಳಾಗಿ ಬಿಟ್ಟರೆ ಮುಂದೇನು” ನೋಡಿ ಅಲ್ಲಿ ಅಮೆರಿಕದಲ್ಲಿ ದೂರು ಬಂದರೆ ಹಿಂದಿನ ಅಧ್ಯಕ್ಷ ಟ್ರಂಪ್ ನನ್ನೂ ಅರೆಸ್ಟ್ ಮಾಡಬಲ್ಲರು ಗೊತ್ತಾ” ಅಂತಂದ.
ಹೀಗೆ ಗಂಟೆಗಟ್ಟಲೆ , ದಿನಗಟ್ಟಲೆ ಮುಗಿಯದ ಸಂವಾದವು ನಮ್ಮೊಳಗೆ ಮತ್ತಷ್ಟು ಆತಂಕಕ್ಕೆ ಕಾರಣವಾಗುತ್ತಾ ಒಳಗೆ ಅಸ್ಥಿರತೆಯನ್ನು ಉಂಟು ಮಾಡತೊಡಗಿತೇ ಹೊರತು, ಈ ಎಲ್ಲದರಿಂದ ಪಾರಾಗುವ ಹಾದಿಯನ್ನು ತೋರಿಸಿಕೊಡಲಿಲ್ಲ.
ನಾನು ಪತ್ರಕರ್ತ ವೃತ್ತಿ ಪ್ರಾರಂಭಿಸಿ 36 ವರ್ಷಗಳಾಗಿವೆ, ಅದಕ್ಕೂ ಮೊದಲು ಕೆಲ ವರ್ಷ ‘ ಹೊಸ ಕರ್ನಾಟಕ ‘ಕಟ್ಟುವ ಕನಸನ್ನು ಬಿತ್ತಿದ ರೈತ ಚಳವಳಿ, ಸಾಮಾಜಿಕ ನ್ಯಾಯ ಹಂಬಲದ ದಲಿತ ಚಳವಳಿಗಳ ಒಡನಾಡುವಾಗ, ಒಂದಷ್ಟು ಹೊಸ ಕನಸುಗಳು ನಮ್ಮೊಳಗೆ ಜೀವಂತವಾಗಿದ್ದವು. ನನ್ನ ಕಾಲೇಜು ದಿನಗಳಲ್ಲಿ ನಾನು ಹೇಗೆ ಎಲ್ಲವನ್ನೂ ಪ್ರಶ್ನಿಸುತ್ತಿದ್ದೆನೋ ನನ್ನ ಎದುರು ಕುಂತಿದ್ದ ತರುಣ ಅದೇ ಎರಕದೊಳಗಿಂದ ಇಳಿದು ಬಂದಂತೆ ಕಂಡು, ಹೂಂ ಎನ್ನಲೂ ಆಗದೇ ಊಹೂಂ ಎನ್ನಲೂ ಆಗದೇ, ಸುಮ್ಮನೇ ಇರಲೂ ಆಗದೇ ಇರುವಾಗ, ಈ ಎಲ್ಲವನ್ನೂ ಲಜ್ಜೆಯಿಂದ ನಿಮ್ಮ ಮುಂದೆ ಮಂಡಿಸುತ್ತಿದ್ದೇನೆ. ಕ್ಷಮೆ ಇರಲಿ.