ಕೆರೆ ಸುತ್ತ ಅರ್ಧಕ್ಕೇ ನಿಂತ ವಾಕಿಂಗ್ ಪಾತ್- ಆರಂಭ ಶೂರ ಸ್ಮಾರ್ಟ್ ಸಿಟಿ!? 99% ಲೋಕಲ್ ಕುಚ್ಚಂಗಿ ಪ್ರಸನ್ನ
ಕೆರೆ ಸುತ್ತ ಅರ್ಧಕ್ಕೇ ನಿಂತ ವಾಕಿಂಗ್ ಪಾತ್- ಆರಂಭ ಶೂರ ಸ್ಮಾರ್ಟ್ ಸಿಟಿ!? 99% ಲೋಕಲ್ ಕುಚ್ಚಂಗಿ ಪ್ರಸನ್ನ
ಕೆರೆ ಸುತ್ತ ಅರ್ಧಕ್ಕೇ ನಿಂತ ವಾಕಿಂಗ್ ಪಾತ್- ಆರಂಭ ಶೂರ ಸ್ಮಾರ್ಟ್ ಸಿಟಿ!?
99% ಲೋಕಲ್
ಕುಚ್ಚಂಗಿ ಪ್ರಸನ್ನ
ತುಮಕೂರು: ಕೋವಿಡ್ ಮೂರನೇ ಅಲೆ- ನೈಟ್ ಕರ್ಫ್ಯೂ- ವೀಕೆಂಡ್ ಕರ್ಫ್ಯೂಗಳ ಗಡಿಬಿಡಿಯಲ್ಲಿ ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿರುವ ಸಂಗತಿ ನಮ್ಮ ಜನಪ್ರತಿನಿಧಿಗಳಿಗೆ ಮರೆತೇ ಹೋಗಿದೆಯೇ?
ಹೌದೋ ಅಲ್ಲವೋ ಅಂತ ವಾದ ವಾಗ್ವಾದ ವಿವಾದದಲ್ಲಿ ಕಾಲ ಕಳೆಯುವುದು ಬೇಡ. ಬನ್ನಿ ಒಂದು ಅಭಿವೃದ್ಧಿಯ ಅಂತಿಮ ಹಂತದಲ್ಲಿರುವ ತುಮಕೂರು ಅಮಾನಿಕೆರೆಯನ್ನು ಒಂದು ರೌಂಡ್ ಹಾಕಿ ಬರೋಣ.
ರಾಜಧಾನಿಯಲ್ಲಿ ಮಿಲ್ಲರ್ ಕೆರೆಯನ್ನು ಒಡೆದು ಹತ್ತಾರು ಸಂಘ ಸಂಸ್ಥೆಗಳಿಗೆ ಹಂಚಿದAತೆ, ತುಮಕೂರು ಅಮಾನಿಕೆರೆಯನ್ನೂ ಎಕರೆ ಲೆಕ್ಕದಲ್ಲಿ ನಿವೇಶನಗಳನ್ನಾಗಿ ಮಾಡಿ ಬೆಕ್ಕು ಕೋತಿಗಳಿಗೆ ಕಜ್ಜಾಯ ಹಂಚಿದಂತೆ ಹಂಚಲು ಮಾಡಿದ್ದ ಹುನ್ನಾರವನ್ನು ಪ್ರಜ್ಞಾವಂತ ನಾಗರಿಕರು ಪ್ರತಿಭಟಿಸಿದ್ದು ನೆನಪಿರಬಹುದು. ಹಾಗೆ ಮಾಡಲಾಗಲಿಲ್ಲ ಎಂಬ ಸಿಟ್ಟಿಗೋ ಏನೋ ಈ ಅಮಾನಿಕೆರೆಯನ್ನು ಅಭಿವೃದ್ಧಿ ಪಡಿಸುವ ನೆಪದಲ್ಲಿ ಒಂದು ಕೋಡಿಯನ್ನು ಮುಚ್ಚಿ ಹಾಕಿದ್ದಾಗಿದ್ದು ಅದೀಗ ದೊಡ್ಡದೊಂದು ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ. ಅದರ ಮಗ್ಗುಲಲ್ಲೇ ತಗಡಿನ ಷೆಡ್‌ಗಳ ಸ್ನಾಕ್ಸ್ ಕಂ ಈವನಿಂಗ್ ಷಾಪಿಂಗ್ ಬೊಲಿವಾರ್ಡ್ ಮಾಡುವ ಸ್ಮಾರ್ಟ್ ಸಿಟಿಯ ಯೋಜನೆ ಅಂತಿಮ ಹಂತ ತಲುಪಿದೆ.ಕಳೆದ ತಿಂಗಳು ಸುರಿದ ಸುನಾಮಿಯಂತ ಮಳೆಗೆ ಈ ಇಡೀ ಅಂಗಳ ಕೆಸರು ಗದ್ದೆಯಂತಾಗಿದ್ದನ್ನು ಯಾರೂ ಮರೆತಿಲ್ಲ ಅಲ್ವಾ.
ಅಮಾನಿಕೆರೆಯ ಏರಿಯುದ್ದಕ್ಕೂ ಅಲ್ಲಲ್ಲಿ ಕಮಾನು ನೆರಳು ದಾಣಗಳ ಜೊತೆಗೆ ಇಂಟರ್ ಲಾಕಿಂಗ್ ನಡಿಗೆ ಹಾದಿಯನ್ನು ಸ್ಮಾರ್ಟ್ ಸಿಟಿ ನಿರ್ಮಿಸುತ್ತಿದೆ. ಏರಿಯುದ್ದದ ಜೊತೆಗೆ ಕೆರೆಯನ್ನು ಅದರ ಎದುರು ಭಾಗದಲ್ಲೂ ಈ ವಾಕಿಂಗ್ ಪಾತ್ ಸುತ್ತುವರಿದು ಬರುತ್ತದೆ. ಶಿರಾಗೇಟ್‌ನಿಂದ ಪುಟ್ಟಸ್ವಾಮಯ್ಯನ ಪಾಳ್ಯದ ಕಡೆ ಸಾಗುವ ರಸ್ತೆಯ ಮಗ್ಗುಲಲ್ಲಿ ಈ ಕೆರೆಯನ್ನು ಅವರಿವರು ಅತಿಕ್ರಮಣ ಮಾಡಿಕೊಂಡಿರುವುದನ್ನು ತೆರವುಗೊಳಿಸಲಾಗದೇ ಇರುವುದರಿಂದ ಆ ಭಾಗದಲ್ಲಿ ಈ ವಾಕಿಂಗ್ ಪಾತನ್ನು ಸೃಷ್ಟಿಸುವ ಸತ್ಕಾರ್ಯಕ್ಕೆ ಸ್ಮಾರ್ಟ್ ಸಿಟಿ ಕೈ ಹಾಕಿಲ್ಲ.
ವಾಕಿಂಗ್ ಪಾತ್ ಸುತ್ತಲೂ ತಂತಿಬೇಲಿಯನ್ನೂ ಹಾಕಲಾಗಿದ್ದು ಸಾರ್ವಜನಿಕರು ಅವರಿಗೆ ಬೇಕೆಂದ ಕಡೆಯಲ್ಲೆಲ್ಲಾ ಒಳನುಗ್ಗುವ ಸಲುವಾಗಿ ಈಗಾಗಲೇ ಅಲ್ಲಲ್ಲಿ ಕಿತ್ತು ಹಾಕಿದ್ದಾರೆ. ಜೊತೆಗೆ ನೀರಿನ ಕಾಲುವೆ ಇರುವ ಕಡೆ ಸಮರ್ಪಕವಾದ ಅಡಿಪಾಯ ಹಾಕದೇ ಬೇಲಿ ಹಾಕಿದ್ದರಿಂದ ಅದು ಇಡಿಯಾಗಿ ಕುಸಿದಿರುವುದನ್ನೂ ಕಾಣಬಹುದು.
ಇಂಟರ್‌ಲಾಕಿಂಗ್ ಬ್ರಿಕ್ಸ್ ಎಂದರೆ ನಮ್ಮ ಸ್ಮಾರ್ಟ್ ಸಿಟಿಗೆ ಅದೇನೋ ಎಲ್ಲೂ ಇಲ್ಲದ ಮೋಹ, ಎಲ್ಲಿ ನೋಡಿದರಲ್ಲಿ ಇವುಗಳದೇ ಕಾಮಗಾರಿ. ಅಮಾನಿ ಕೆರೆ ಸುತ್ತಲೂ ನಿರ್ಮಿಸುತ್ತಿರುವ ವಾಕಿಂಗ್ ಪಾತ್ ಉದ್ಘಾಟನೆಗೊಳ್ಳುವ ಮೊದಲೇ ಹತ್ತಾರು ಕಡೆ ಕುಸಿದು ಹಳ್ಳ ಬಿದ್ದಿರುವುದನ್ನು ನೋಡಬಹುದು.
ಜೊತೆಗೆ ಈ ಇಂಟರ್‌ಲಾಕಿಂಗ್ ಬ್ರಿಕ್‌ಗಳ ವಾಕಿಂಗ್ ಪಾತ್ ಕಾಮಗಾರಿಯೂ ಅರ್ಧಕ್ಕೇ ನಿಂತು ಆರು ತಿಂಗಳಾಗಿದೆ.
ಅಮಾನಿಕೆರೆಗೆ ಮಳೆ ನೀರು ಒಳ ಬರಲೆಂದು ನಿರ್ಮಿಸುತ್ತಿರುವ ದೊಡ್ಡದೊಂದು ಸೇತುವೆ ಕಾಮಗಾರಿ ಅರ್ಧಕ್ಕೇ ಸ್ಥಗಿತಗೊಂಡಿದ್ದು, ಕೆರೆಯ ಮತ್ತೊಂದು ಭಾಗ ತಲುಪಲು ಲಾಂಗ್ ಜಂಪ್ ಮಾಡ ಬೇಕೇ ಎನ್ನುವ ಪ್ರಶ್ನೆಗೆ ಸ್ಮಾರ್ಟ್ ಸಿಟಿ ಇಂಜಿನಿಯರ್‌ಗಳು ಉತ್ತರ ನೀಡುವರೇ?
ಇದು ಕೆರೆಯ ಸುತ್ತ ನಡೆದಿರುವ ಕಾಮಗಾರಿಯ ಅದ್ವಾನ ಮಾತ್ರ, ಕೆರೆಯೊಳಗೆ ತುಂಬಿಕೊAಡ ಹೂಳು, ಹರಡಿಕೊಂಡಿರುವ ತೇಲು ಜೊಂಡು ಹಯಾಸಿಂತ್, ಕುಡಿಯಲು ಯೋಗ್ಯವಲ್ಲ ಎಂಬ ಕಾರಣಕ್ಕೇ ಅಮಾನಿಕೆರೆಯಿಂದ ನೀರನ್ನು ಪಿಎನ್‌ಆರ್ ಪಾಳ್ಯದ ಜಲ ಶುದ್ದೀಕರಣ ಘಟಕಕ್ಕೆ ಪಂಪ್ ಮಾಡಲೆಂದು25 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿ ಈಗ ಕೆಲಸ ಮಾಡದೇ ತುಕ್ಕು ಹಿಡಿಯುತ್ತಿರುವ ಪಂಪಿಂಗ್ ಸ್ಟೇಷನ್ ಕುರಿತ ಸ್ಟೋರಿ ಪ್ರತ್ಯೇಕವಾಗಿ, ಇದೇ ಸಂಚಿಕೆಯಲ್ಲಿ ಪ್ರಕಟವಾಗಿದೆ. ಓದಿ.