ಮುದ್ದಹನುಮೇಗೌಡರಿಗೆ 2019ರಲ್ಲಿ ಆದ ಅನ್ಯಾಯಕ್ಕೆ 2024ರಲ್ಲಿ ನ್ಯಾಯ ಸಿಕ್ಕೀತೇ!?

ಗೆದ್ದ ನಂತರ ಮುದ್ದಹನುಮೇಗೌಡರು ಲೋಕಸಭಾ ಸದಸ್ಯ ಎಂಬ ಸ್ಥಾನಕ್ಕೆ ಘನತೆಯನ್ನು ತಂದುಕೊಟ್ಟದ್ದಂತೂ ನಿಜ ಎಂಬುದನ್ನು ಅವರ ರಾಜಕೀಯ ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ.

ಮುದ್ದಹನುಮೇಗೌಡರಿಗೆ 2019ರಲ್ಲಿ ಆದ ಅನ್ಯಾಯಕ್ಕೆ 2024ರಲ್ಲಿ ನ್ಯಾಯ ಸಿಕ್ಕೀತೇ!?

ತುಮಕೂರು

2024

ಲೋಕಸಭೆ

 

 99% ಲೋಕಲ್‌

ಕುಚ್ಚಂಗಿ ಪ್ರಸನ್ನ

 

      ತುಮಕೂರು ಲೋಕಸಭಾ ಕ್ಷೇತ್ರದ ನಿಕಟಪೂರ್ವ ಸದಸ್ಯ ಎಸ್.ಪಿ.ಮುದ್ದಹನುಮೇಗೌಡರು 16 ತಿಂಗಳ ಬಿಜೆಪಿಯಲ್ಲಿನ ಅಜ್ಞಾತವಾಸ ಮುಗಿಸಿ, ಮತ್ತೆ ಕಾಂಗ್ರೆಸ್‌ಗೆ ಮರಳುವುದು ಖಚಿತವಾಗಿದೆ. ಹೀಗಾಗಿ ಲೋಕಸಭಾ ಚುನಾವಣೆಯ ಅಧಿಸೂಚನೆ ಹೊರಬೀಳಲು ಎರಡು ತಿಂಗಳಿರುವಾಗಲೇ ಕಾಂಗ್ರೆಸ್‌ ತುಮಕೂರು ಲೋಕಸಭಾ ಕ್ಷೇತ್ರದ ತನ್ನ ಅಭ್ಯರ್ಥಿ ಯಾರಾಗಬಹುದು ಎಂಬ ಸೂಚನೆ ನೀಡಿಬಿಟ್ಟಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ವರ್ಷವಿನ್ನೂ ಪೂರೈಸದೇ ಇರುವ ಕಾಂಗ್ರೆಸ್‌ಗೆ ಗರಿಷ್ಟ ಕ್ಷೇತ್ರಗಳಲ್ಲಿ ಗೆಲ್ಲುವುದೇ ಪ್ರಮುಖ ಆದ್ಯತೆ ಆಗಿರುವುದರಿಂದ  ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ವಕ್ತಾರ ಮುರಳೀಧರ ಹಾಲಪ್ಪ ಮತ್ತು ಆ ಪಕ್ಷದ ಮತ್ತೊಬ್ಬ ವಕ್ತಾರ ಹಾಗೂ ಅತ್ಯುತ್ತಮ ವಾಗ್ಮಿ ನಿಕೇತ್‌ ರಾಜ್‌ ಎಂಬ ಇಬ್ಬರು ಪ್ರಬಲ ಆಕಾಂಕ್ಷಿಗಳನ್ನು ಕಣಕ್ಕಿಳಿಸಿ ಪ್ರಯೋಗ ಮಾಡುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಇಲ್ಲ. ಆದ ಕಾರಣ, ಮುದ್ದಹನುಮೇಗೌಡರ ʼಘರ್‌ ವಾಪಸಿʼ ಜಿಲ್ಲೆಯ ಇಬ್ಬರು ಮಂತ್ರಿಗಳೂ ಸೇರಿದಂತೆ ಕಾಂಗ್ರೆಸ್‌ನ ಎಲ್ಲರಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಯಾರು ಎನ್ನುವ ಬಗ್ಗೆ ತುಸು ನಿರಾಳರಾದರು ಎಂಬುದರಲ್ಲಿ ಎರಡು ಮಾತಿಲ್ಲ. ಜೊತೆಗೆ 2014ರಲ್ಲಿ ಕಾಂಗ್ರೆಸ್‌ನಿಂದ ಚುನಾಯಿತರಾಗಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಮುದ್ದಹನುಮೇಗೌಡರಿಗೆ 2019ರಲ್ಲಿ ಆದ ʼಅನ್ಯಾಯʼವನ್ನು 2024ರಲ್ಲಿ ಸರಿಪಡಿಸಲು ಕಾಂಗ್ರೆಸ್‌ಗೆ ಸಿಕ್ಕಿರುವ ಒಂದು ಅವಕಾಶ ಎಂದೂ ಭಾವಿಸಬಹುದಾಗಿದೆ.

ಅತ್ಯಂತ ದಕ್ಷ ಎಂಪಿ ಎಂದು ಜಿಲ್ಲೆಯ ಎಲ್ಲ ವರ್ಗದ ಜನರಿಂದ ಹೊಗಳಿಸಿ ಕೊಂಡಿದ್ದ ಅಂದಿನ ಸಿಟ್ಟಿಂಗ್‌ ಎಂಪಿ ಎಸ್.ಪಿ.ಮುದ್ದಹನುಮೇಗೌಡರು ಯಾವ ತಪ್ಪು ಮಾಡದೇ ಇದ್ದರೂ ಜೆಡಿಎಸ್-ಕಾಂಗ್ರೆಸ್‌ ಮೈತ್ರಿ ನೆಪದಿಂದಾಗಿ 2019ರ ಚುನಾವಣೆಯಲ್ಲಿ ಟಿಕೆಟ್‌ ವಂಚಿತರಾದರು. ಮಾಜಿ ಪ್ರಧಾನ ಮಂತ್ರಿ ಹೆಚ್‌.ಡಿ.ದೇವೇಗೌಡರು ಅದ್ಯಾವ ಜ್ಯೋತಿಷಿಯನ್ನು ಕೇಳಿ ತುಮಕೂರು ಕ್ಷೇತ್ರದಲ್ಲಿ ಸ್ಪರ್ಧಿಸಲು ಬಂದರೋ ಗೊತ್ತಿಲ್ಲ, ತೀರಾ ಕಡಿಮೆ ಅಂತರದಲ್ಲಿ ಸೋತರು.. ಆದರೆ ಅವತ್ತು ದೇವೇಗೌಡರ ಸೋಲಿಗೆ ಮುದ್ದಹನುಮೇಗೌಡರೇ ಕಾರಣ ಎಂದು ನಿನ್ನೆ ಟಿವಿ ಚಾನೆಲ್‌ ಒಂದರಲ್ಲಿ ಮುರಳೀಧರ ಹಾಲಪ್ಪನವರು ನೀಡಿದ ಹೇಳಿಕೆ ಮಾತ್ರ ಅವರು ರಾಜಕೀಯವಾಗಿ ಅವರು ಇನ್ನೂ ಬೆಳೆಯಬೇಕಿದೆ ಎಂಬುದನ್ನು ತೋರಿಸಿದೆ.

ಒಕ್ಕಲಿಗರು ಮತ್ತು ಲಿಂಗಾಯತರೇ ಗೆಲ್ಲುತ್ತ ಬಂದಿರುವ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 1996ರಲ್ಲಿ ಕುರುಬರ ಸಿ.ಎನ್.ಭಾಸ್ಕರಪ್ಪನವರು ಗೆದ್ದು ಹಿಂದುಳಿದ ಜಾತಿಗಳವರೂ ಇಲ್ಲಿ ಗೆಲ್ಲಬಹುದು ಎಂಬುದನ್ನು ಸಾಬೀತು ಮಾಡಿದ್ದಾರೆ. ವಾಸ್ತವದಲ್ಲಿ ತುಮಕೂರು ಹಿಂದುಳಿದ ವರ್ಗಗಳ ಕ್ಷೇತ್ರ, ಆದ್ದರಿಂದ ನನಗೆ ಟಿಕೆಟ್‌ ಕೊಡಿ, ಗೆದ್ದು ತೋರಿಸುತ್ತೇನೆ ಎಂದು ಅದೇ ಸಮುದಾಯಕ್ಕೆ ಸೇರಿದ ನಿಕೇತ್‌ರಾಜ್‌ ಹೇಳುತ್ತಿದ್ದಾರೆ. ಟಿಕೆಟ್‌ ಘೋಷಿಸುವುದು ಹೈಕಮಾಂಡ್‌ ತಾನೇ, ಕಾದು ನೋಡಿ.

ಮುದ್ದಹನುಮೇಗೌಡರು ಅಧಿಕೃತವಾಗಿ ಕಾಂಗ್ರೆಸ್‌ಗೆ ಮರಳುವ ದಿನಾಂಕ ಇನ್ನೂ ನಿಗದಿ ಆಗಿಲ್ಲ, ಧನುರ್ಮಾಸದ ಕಡೇ ದಿನವಿದು, ನಾಳೆ ಸಂಕ್ರಮಣ, ನಂತರದ ದಿನಗಳು ಮುದ್ದಹನುಮೇಗೌಡರ ರಾಜಕೀಯ ಬದುಕಿನ ಸಂಕ್ರಮಣವೂ ಆಗಬಹುದು. ತುಮಕೂರು ಮಾತ್ರವೇ ಅಲ್ಲ ಇಡೀ ದೇಶದಲ್ಲೇ ಕಾಂಗ್ರೆಸ್‌ ಲೋಕಸಭಾ ಅಭ್ಯರ್ಥಿಗಳ ಕೊರತೆಯನ್ನು ಎದುರಿಸುತ್ತಿದೆ. ದಿಲ್ಲಿಯಲ್ಲಿ ಅಧಿಕಾರ ಕಳೆದುಕೊಂಡು ಹತ್ತು ವರ್ಷಗಳಾಗುತ್ತಿರುವ ಯಾವ ಪಕ್ಷವೇ ಆದರೂ ಇಂಥದ್ದೊಂದು ಪರಿಸ್ಥಿತಿಯಲ್ಲಿರುವುದು ಸಹಜ. ಮಾಧ್ಯಮಗಳನ್ನು ಕೈವಶ ಮಾಡಿಕೊಂಡಿರುವ, ಬಹುಮತದ ಹೆಸರಿನಲ್ಲಿ ಇಂದಿರಾ ಗಾಂಧಿ ಯುಗಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸರ್ವಾಧಿಕಾರ ನಡೆಸುತ್ತಿರುವ ಭಾರತೀಯ ಜನತಾಪಾರ್ಟಿ ಮೂರನೇ ಅವಧಿಗೂ ಗದ್ದುಗೆ ಹಿಡಿಯಲು ತನ್ನ ಅಧಿಕಾರ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬುದಕ್ಕೆ ಅದು ಬ್ಯಾಂಕುಗಳ ಜೀವ ಹಿಂಡಿ ನಡೆಸುತ್ತಿರುವ “ವಿಕಸಿತ ಭಾರತ ಯಾತ್ರೆ” ಎಂಬ ಅಭಿಯಾನವೇ ಸಾಕ್ಷಿ.

ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರು ಎಂಬ ಲೆಕ್ಕ ಒಂದು ಕಡೆ ಇಟ್ಟುಕೊಂಡೇ ಹಿಂದಿನ ಎರಡು ಅವಧಿಯ ಚುನಾವಣೆಗಳಲ್ಲಿ ತುಮಕೂರು ಲೋಕಸಬಾ ಕ್ಷೇತ್ರದ ಓಟುದಾರರ ಸೈಕಾಲಜಿಯನ್ನೂ ಗಮನಿಸಬೇಕಾಗಿದೆ.

2019ರ ಚುನಾವಣೆ ಸಮಯದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿತ್ತು, ಅದರೂ ಜೆಡಿಎಸ್‌ನೊಂದಿಗೆ ಏಕಾಏಕಿ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರವನ್ನು ರಚಿಸಿತ್ತು. ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಒಂದಾದ ಕೊರಟಗೆರೆ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಡಾ. ಜಿ.,ಪರಮೇಶ್ವರ ಉಪಮುಖ್ಯಮಂತ್ರಿಯಾಗಿದ್ದರು.ಮೈತ್ರಿ ಸರ್ಕಾರವು ಲೋಕಸಭಾ ಚುನಾವಣೆಗೂ ಮೈತ್ರಿ ಮಾಡಿಕೊಂಡ ಪರಿಣಾಮವಾಗಿ ಖುದ್ದು ಕಾಂಗ್ರೆಸ್‌ ಗೆದ್ದಿದ್ದ ತುಮಕೂರು ಕ್ಷೇತ್ರವನ್ನು ದೇವೇಗೌಡರು ಕೇಳಿದಾಗ ಆಗಲ್ಲ ಎಂದು ಯಾರು ಹೇಳಬೇಕಿತ್ತೋ ಅವರಿಗೆ ಆಗ ಅಷ್ಟು ರಾಜಕೀಯ ಶಕ್ತಿ ಇರಲಿಲ್ಲವೆನ್ನುವುದೇ ವಾಸ್ತವ.ಮುದ್ದಹನುಮೇಗೌಡರು ಪಕ್ಷದ ಟಿಕೆಟ್‌ ಕೈ ತಪ್ಪಿದ ಸಿಟ್ಟಿನಲ್ಲಿ ಪ್ರತ್ಯೇಕವಾಗಿ ನಾಮಿನೇಶನ್‌ ಮಾಡಿದರೂ ಬಂಡಾಯ ಅಭ್ಯರ್ಥಿಯಾಗೇನೂ ಕಣದಲ್ಲಿ ಉಳಿಯಲಿಲ್ಲ, ಜೊತೆಗೆ ಎಷ್ಟೇ ಬೇಸರವಿದ್ದರೂ ಪಕ್ಷದ ಪರವಾಗಿ ಕ್ಯಾನ್ವಾಸ್‌ ಕೂಡಾ ಮಾಡಿದರು.

2014ರ ಲೋಕಸಭಾ ಚುನಾವಣೆ ಕೂಡಾ ಮುದ್ದಹನುಮೇಗೌಡರಿಗೆ ಕಾಂಗ್ರೆಸ್‌ ಅಂದರೆ ಅವತ್ತಿನ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಡಾ. ಜಿ.ಪರಮೇಶ್ವರ ಅವರು ಕೊಟ್ಟ ಬೋನಸ್‌ ಅಂತಲೇ ಭಾವಿಸಬೇಕು.ಮುದ್ದಹನುಮೇಗೌಡರು 2009ರಲ್ಲಿ ಇದೇ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಕೇವಲ 21,445 ಓಟುಗಳ ಅಂತರದಲ್ಲಿ ಸೋತಿದ್ದರು. 1984, 98 ಹಾಗೂ 99ರಲ್ಲಿ ಕಾಂಗ್ರೆಸ್‌ನಿಂದ ಸಂಸದರಾಗಿದ್ದ ಜಿ.ಎಸ್.ಬಸವರಾಜು ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದುಬಿಟ್ಟರು. ಹಿಂದಿನ ಚುನಾವಣೆಯಲ್ಲಿ ಸೋತಿದ್ದ ಅನುಕಂಪ ಹಾಗೂ ಮಧುಗಿರಿ ಮತ್ತು ಕೊರಟಗೆರೆ ಕೊಟ್ಟ ದೊಡ್ಡ ಪ್ರಮಾಣದ ಲೀಡಿಂಗ್‌ ಮತ್ತು ಬಿಜೆಪಿ –ಜೆಡಿಎಸ್‌ ತ್ರಿಕೋನ ಸ್ಪರ್ಧೆಯಿಂದಾಗಿ ಮುದ್ದಹನುಮೇಗೌಡರು 2014ರ ಚುನಾವಣೆಯಲ್ಲಿ 74,041 ಓಟುಗಳಿಂದ ಗೆದ್ದು ಪಾರ್ಲಿಮೆಂಟ್‌ ಮೆಟ್ಟಿಲು ತುಳಿದರು.

ಗೆದ್ದ ನಂತರ ಮುದ್ದಹನುಮೇಗೌಡರು ಲೋಕಸಭಾ ಸದಸ್ಯ ಎಂಬ ಸ್ಥಾನಕ್ಕೆ ಘನತೆಯನ್ನು ತಂದುಕೊಟ್ಟದ್ದಂತೂ ನಿಜ ಎಂಬುದನ್ನು ಅವರ ರಾಜಕೀಯ ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ. ತುಮಕೂರನ್ನು ದೇಶದ ಕೈಗಾರಿಕಾ ನಕ್ಷೆಯನ್ನು ಮಿನುಗುವಂತೆ ಮಾಡಿದ್ದ ಹೆಚ್‌ಎಂಟಿ ಕೈಗಡಿಯಾರ ಕಾರ್ಖಾನೆ -೪ ನಶಿಸಿದ ನಂತರ , ಹೆಚ್‌ಎಂಟಿ ಕೈಗಾರಿಕೆಯ ವಿಶಾಲವಾದ ಚಿನ್ನಕ್ಕಿಂತ ಹೆಚ್ಚಿನ ಬೆಲೆ ಬಾಳುವ ಆವರಣವನ್ನು ಯಾರೋ ರಿಯಲ್‌ ಎಸ್ಟೇಟ್‌ ಖದೀಮರ ಪಾಲಾಗದಂತೆ ರಕ್ಷಿಸಿದ್ದೂ ಅಲ್ಲದೇ ಜಾಗತಿಕ ನಕ್ಷೆಯಲ್ಲಿ ಹೆಜ್ಜೆ ಗುರುತು ಮೂಡಿಸಿರುವ ಇಸ್ರೋ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಕೊಡಿಸಿಕೊಡುವಲ್ಲಿ ಮುದ್ದಹನುಮೇಗೌಡರ ಪಾತ್ರ ಮಹತ್ವದ್ದು .

    ದೇವೇಗೌಡರಿಗೆ ಟಿಕೆಟ್‌ ಕೊಡುವಾಗ, ನಿಮಗೆ ಆಗಿರುವ ಅನ್ಯಾಯವನ್ನು ರಾಜ್ಯಸಭೆಗೆ ಆಯ್ಕೆ ಮಾಡಿಸುವ ಮೂಲಕ ಸರಿಪಡಿಸಿಕೊಡುವುದಾಗಿ ಕಾಂಗ್ರೆಸ್‌ ಹೈಕಮಾಂಡ್‌ ಅವರಿಗೆ ಮಾತುಕೊಟ್ಟಿತ್ತೆಂದೂ, ಆನಂತರ ದೊರಕಿದ ಆರು ಅವಕಾಶಗಳಲ್ಲಿ ಒಂದರಲ್ಲೂ ಪಕ್ಷದ ಉನ್ನತ ನಾಯಕತ್ವ ತಮಗೆ ನ್ಯಾಯ ಒದಗಿಸಿಕೊಡಲಿಲ್ಲ ಹಾಗೂ ರಾಜ್ಯ ನಾಯಕತ್ವವೂ ತಮ್ಮ ಮಹತ್ವವನ್ನು ಅರಿತು ಗೌರವ ಕೊಡಲಿಲ್ಲ ಎಂಬ  ಕಾರಣಕ್ಕೆ, ಜೊತೆಗೆ ಎಂಪಿ ಆಗುವ ಮೊದಲು ಎರಡು ಸಲ ಎಂಎಲ್‌ಎ ಆಗಿದ್ದ ಮುದ್ದಹನುಮೇಗೌಡರು 2023ರ ವಿಧಾನ ಸಭಾ ಚುನಾವಣೆಯಲ್ಲಿ ಕುಣಿಗಲ್‌ನಿಂದ ವಿಧಾನಸೌಧವನ್ನಾದರೂ ಪ್ರವೇಶಿಸಬಹುದೇ ಎಂಬ ಲೆಕ್ಕಾಚಾರದಲ್ಲಿ ʼಕಮಲʼದ ಕೈ ಹಿಡಿದರು.ಆದರೆ ಕಮಲ ಅರಳುವುದೇ ಕೆಸರಿನಲ್ಲಿ, ಜೊತೆಗೆ ಕಮಲದ ಬಳ್ಳಿಯಂಥ ದಂಟುಗಳು ತಮ್ಮ ಕಾಲಿಗೆ ತೊಡರಿ ಮುಂದೆ ಚಲಿಸದಂತೆ ಮಾಡಿಬಿಡುತ್ತವೆ ಎಂಬುದನ್ನರಿಯದೇ ಮುದ್ದಹನುಮೇಗೌಡರು ಹಾಕಿದ ಲೆಕ್ಕಾಚಾರ ಹುಸಿಯಾಯಿತು. “ಎಂದಿನಿಂದಲೂ ಹೊಂದಾಣಿಕೆ ರಾಜಕೀಯವನ್ನು ವಿರೋಧಿಸುತ್ತಲೇ ಬಂದಿರುವೆ” ಎನ್ನುವ ಮುದ್ದಹನುಮೇಗೌಡರಿಗೆ ಜಿಲ್ಲೆಯಲ್ಲಿ ಹೆಚ್ಚು ಚಾಲ್ತಿಯಲ್ಲಿರುವ “ ಹೊಂದಾಣಿಕೆ” ರಾಜಕೀಯವೇ ʼಕೈʼ ಕೊಟ್ಟಿತು ಎನ್ನುವುದು ಈಗ ಅರ್ಥವಾಗಿದೆ.

1989ರಿಂದ 2019ರ ಅವಧಿಯಲ್ಲಿ ಮುದ್ದಹನುಮೇಗೌಡರು ಒಟ್ಟು ನಾಲ್ಕು ಸಲ ಟಿಕೆಟ್‌ ವಂಚಿತರಾಗಿದ್ದಾರೆ ಎನ್ನುವುದನ್ನು ಗಮನಿಸಬೇಕಿದೆ.1989ರಲ್ಲಿ  ಕುಣಿಗಲ್‌ ವಿಧಾನ ಸಭಾ ಕ್ಷೇತ್ರದ ಟಿಕೆಟ್‌ ಹೀಗೇ ಮಾಜಿ ಸಂಸದ ದಿವಂಗತ ಕೆ.ಲಕ್ಕಪ್ಪನವರ ಪಾಲಾಗಿದ್ದೂ ಹೀಗೇ. ರಾಜಕೀಯವೆನ್ನುವುದೇ ಹಾಗೆ, ಮುದ್ದಹನುಮೇಗೌಡರು ಜೆಡಿಎಸ್‌ ಹಾಗೂ ಬಿಜೆಪಿಗೆ ಟ್ರಿಪ್‌ ಹಾಕಿ ಬಂದರೂ ಅವರು ರಾಜಕೀಯವಾಗಿ ಏಳಿಗೆ ಕಂಡಿರುವುದು ಕಾಂಗ್ರೆಸ್‌ನಲ್ಲಿ ಎಂಬುದೇ ಸತ್ಯ ಸಂಗತಿ. ನೋಡಿ ಅವರು ಕುಣಿಗಲ್‌ ಕ್ಷೇತ್ರದಿಂದ 1994 ಹಾಗೂ 199ರಲ್ಲಿ ನಿರಂತರ ಎರಡು ಅವಧಿಗೆ  ಶಾಸಕರಾಗಿ ಚುನಾಯಿತರಾದದ್ದು ಇದೇ ಕಾಂಗ್ರೆಸ್‌ ನಿಂದಲೇ. ಹಾಗೇ 2014ರಲ್ಲಿ ಲೋಕಸಭೆಗೆ ಚುನಾಯಿತರಾದದ್ದೂ ಇದೇ ಕಾಂಗ್ರೆಸ್‌ನಿಂದಲೇ ಅಲ್ವಾ, ಈಗ ಮತ್ತೊಮ್ಮೆ ಅವರಿಗೆ ಅಂಥದೇ ಚಾನ್ಸ್‌ ಸಿಗಬಹುದೇ, ಕಾದು ನೋಡೋಣ.

 

 ತುಮಕೂರು ಲೋಕಸಭಾ ಕ್ಷೇತ್ರದ

ಚುನಾಯಿತ ಸದಸ್ಯರು ಯಾರು ಯಾರು

 

1952    ಸಿ.ಆರ್.ಬಸಪ್ಪ,   ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌

1957     ಎಂ.ವಿ.ಕೃಷ್ಣಪ್ಪ,   ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌

1962    ಎಂ.ವಿ.ಕೃಷ್ಣಪ್ಪ,   ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌

1962    ಅಜಿತ್‌ ಪ್ರಸಾದ್‌ ಜೈನ್‌    ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌

1965    ಮಾಲಿ ಮರಿಯಪ್ಪ          ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌

1967    ಕೆ.ಲಕ್ಕಪ್ಪ          ಪ್ರಜಾ ಸೋಷಲಿಸ್ಟ್‌ ಪಕ್ಷ  

1971     ಕೆ.ಲಕ್ಕಪ್ಪ          ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌

1977     ಕೆ.ಲಕ್ಕಪ್ಪ          ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌

1980    ಕೆ.ಲಕ್ಕಪ್ಪ          ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌

1984    ಜಿ.ಎಸ್.ಬಸವರಾಜು       ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌

1989    ಜಿ.ಎಸ್.ಬಸವರಾಜು       ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌

1991     ಎಸ್.ಮಲ್ಲಿಕಾರ್ಜುನಯ್ಯ   ಭಾರತೀಯ ಜನತಾ ಪಾರ್ಟಿ

1996    ಸಿ.ಎನ್.ಭಾಸ್ಕರಪ್ಪ         ಜನತಾದಳ

1998    ಎಸ್.ಮಲ್ಲಿಕಾರ್ಜುನಯ್ಯ   ಭಾರತೀಯ ಜನತಾ ಪಾರ್ಟಿ

1999    ಜಿ.ಎಸ್.ಬಸವರಾಜು       ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌

2004   ಎಸ್.ಮಲ್ಲಿಕಾರ್ಜುನಯ್ಯ   ಭಾರತೀಯ ಜನತಾ ಪಾರ್ಟಿ

2009    ಜಿ.ಎಸ್.ಬಸವರಾಜು       ಭಾರತೀಯ ಜನತಾ ಪಾರ್ಟಿ

2014    ಎಸ್.ಪಿ.ಮುದ್ದಹನುಮೇಗೌಡ        ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌

2019    ಜಿ.ಎಸ್.ಬಸವರಾಜು       ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌

2024    ...........................        .......................................

                 

ಮುದ್ದಹನುಮೇಗೌಡರ ಪುಟ್ಟ ಪರಿಚಯ

ತುಮಕೂರು ಜಿಲ್ಲೆಯ ಕುಣಿಗಲ್‌ ತಾಲೂಕಿನ ಕೊತ್ತಿಹಳ್ಳಿ ಹೋಬಳಿಯ ಸೊಬಗಾನಹಳ್ಳಿಯಲ್ಲಿ 1954ರಲ್ಲಿ ಒಕ್ಕಲಿಗ ಸಮುದಾಯದ ಕರಿಗೌಡ(ಪಾಪೇಗೌಡ) -ಶಾರದಮ್ಮ ದಂಪತಿಗೆ ಜನಿಸಿದ ಮುದ್ದಹನುಮೇಗೌಡರು ಮೈಸೂರಿನ ಜೆಎಸ್‌ಎಸ್‌ ಕಾಲೇಜಿನಲ್ಲಿ ಬಿಎ ಪದವಿ ಪಡೆದು ನಂತರ ಬೆಂಗಳೂರಿನ ಎಸ್‌ಜೆಆರ್‌ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ವಕೀಲರಾಗಿ, ಕೆಲಕಾಲ ಮುನ್ಸೀಫ್‌ ನ್ಯಾಯಾಧೀಶರಾಗಿದ್ದ ಮುದ್ದಹನುಮೇಗೌಡರು ತಮ್ಮನ್ನು ತಾವು ವಕೀಲ ಹಾಗೂ ರೈತ ಎಂದು ಗುರುತಿಸಿಕೊಳ್ಳುತ್ತಾರೆ. ಬೆಂಗಳೂರಿನ ಸಂಜಯನಗರದಲ್ಲಿ ವಾಸವಿದ್ದರೂ, ಹೆಬ್ಬೂರಿನ ತೋಟದ ಮನೆಯಲ್ಲೇ ಹೆಚ್ಚು ಕಾಲ ಇರುತ್ತಾರೆ. ಗಾನಾ, ರಚನಾ ಮತ್ತು ಗೌರವ್‌ ಎಂಬ ಮೂರು ಮಕ್ಕಳು ಹಾಗೂ ಪತ್ನಿ ಕಲ್ಪನಾ ಅವರ ಪುಟ್ಟ ಕುಟುಂಬ ಗೌಡರದು. ಕಳೆದ ತಿಂಗಳಷ್ಟೇ

ತಾಯಿ ಶಾರದಮ್ಮ ಗೌಡರನ್ನು ಅಗಲಿದ್ದನ್ನು ನೆನಪಿಸಿಕೊಳ್ಳಬಹುದು.

 

      ಜೆ.ಸಿ.ಮಾಧುಸ್ವಾಮಿ,                          ವಿ.ಸೋಮಣ್ಣ

ಬಿಜೆಪಿ ಅಭ್ಯರ್ಥಿ ಯಾರಾಗಬಹುದು

       ತುಮಕೂರು ಲೋಕಸಭಾ ಕ್ಷೇತ್ರ ಹಾಲಿ ಬಿಜೆಪಿ ಕೈಯಲ್ಲಿದೆ. ಮೂರು ಸಲ ಕಾಂಗ್ರೆಸ್‌ ಹಾಗೂ ಎರಡು ಸಲ ಬಿಜೆಪಿಯಿಂದ ಸಂಸದರಾಗಿರುವ ಜಿ.ಎಸ್.ಬಸವರಾಜು ವಯಸ್ಸಿನ ಕಾರಣಕ್ಕೆ 2024ರಲ್ಲಿ ಬಿಜೆಪಿಯಿಂದ ಕಣಕ್ಕಿಳಿಯುವ ಸಾಧ್ಯತೆ ಇಲ್ಲ. ವಂಶಾಡಳಿತವನ್ನು ಟೀಕಿಸುವ ಬಿಜೆಪಿ ಹೈಕಮಾಂಡ್‌ ಜಿಎಸ್‌ಬಿ ಅವರ ಮಗ ತುಮಕೂರು ನಗರ ವಿಧಾನ ಸಭಾ ಕ್ಷೇತ್ರದ ಹಾಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಅವರಿಗೆ ಈ ಸಲ ಟಿಕೆಟ್‌ ಕೊಡುವ ಸಾಧ್ಯತೆಯನ್ನೂ ಇಲ್ಲವೆನ್ನಬಹುದು. ಆದರೆ ಕೇವಲ ವಂಶಾಡಳಿತವೇ ಇರುವ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿರುವ ಇದೇ ಬಿಜೆಪಿ ಹೈಕಮಾಂಡ್‌ ಚಿತ್ತ ಯಾರತ್ತ ಅಂತ ಹೇಳಲೂ ಬರುವುದಿಲ್ಲ ಅಲ್ವಾ.  ಬಿಜೆಪಿಯ ತುಮಕೂರು ಜಿಲ್ಲಾಧ್ಯಕ್ಷ     ಹೆಬ್ಬಾಕ ರವಿಶಂಕರ್‌ , ಸಿದ್ದಗಂಗಾ ಆಸ್ಪತ್ರೆ ಎಂಡಿ ಡಾ. ಎನ್.ಪರಮೇಶ್‌, ಬಿಜೆಪಿ ರಾಜ್ಯ ವಕ್ತಾರ ಹೆಚ್‌ . ಎನ್‌ .ಚಂದ್ರಶೇಖರ್‌ , ರಿಯಲ್‌ ಎಸ್ಟೇಟ್‌ ಕಿಂಗ್‌ ಸ್ಫೂರ್ತಿ ಚಿದಾನಂದ್‌ ಸೇರಿ ಒಟ್ಟು ಹನ್ನೊಂದು ಮಂದಿ ಟಿಕೆಟ್‌ ಬಯಸಿದ್ದಾರೆ. ಆದರೆ ಮಾಜಿ ಸಚಿವ ಚಿಕ್ಕನಾಯಕನಹಳ್ಳಿಯ ಜೆ.ಸಿ.ಮಾಧುಸ್ವಾಮಿ ಅಥವಾ ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ಪಕ್ಷದ ಟಿಕೆಟ್‌ ದಕ್ಕಬಹುದೆಂದು ಪಕ್ಷದ ಉನ್ನತ ಮೂಲಗಳು ಹೇಳುತ್ತವೆ. ಇಲ್ಲವಾದರೆ ಇಷ್ಟು ಹೊತ್ತಿಗೆ ಸೋಮಣ್ಣ ಕಾಂಗ್ರೆಸ್‌ಗೆ ಹಳಬರಾಗಿಬಿಡುತ್ತಿದ್ದರಂತೆ.

      ಒಂದು ವೇಳೆ ಕಳೆದ ಚುನಾವಣೆಯ ಸೋಲಿನ ಸೇಡನ್ನು ತೀರಿಸಿಕೊಳ್ಳಲೇ ಬೇಕೆಂದು ಬಿಜೆಪಿಯ ಮೈತ್ರಿ ಪಕ್ಷವಾಗಿ ಮಾರ್ಪಾಡಿಗಿರುವ ಜೆಡಿಎಸ್‌ ಏನಾದರೂ ಪಟ್ಟು ಹಿಡಿದಲ್ಲಿ ಯಾರು ಅಭ್ಯರ್ಥಿಯಾಗುತ್ತಾರೆ ಎಂದು ಹೇಳಲು ಬರುವುದಿಲ್ಲವಾದರೂ, ಅಂಥ ಸಾಧ್ಯತೆಗಳಿಲ್ಲ, ಜೆಡಿಎಸ್‌ಗೆ ಬಿಜೆಪಿ ಹೈಕಮಾಂಡ್‌ ಹಾಸನ, ಮಂಡ್ಯ, ಮೈಸೂರುಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಲಿದೆ ಎಂದು ಸುದ್ದಿಗೆ ಗುದ್ದು ಕೊಡುವಂತೆ ನಿನ್ನೆ ಮೈಸೂರು ಬಿಜೆಪಿ ಸಂಸದ ಪ್ರತಾಪ ಸಿಂಹ ದಳ ಪತಿ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಕಾಲು ಮುಟ್ಟಿ ನಮಸ್ಕಾರ ಮಾಡಿಕೊಂಡಿರುವ ಫೋಟೋ ವೈರಲ್‌ ಆಗಿರುವುದನ್ನು ಸಾಕ್ಷಿ ಎಂದು ಪರಿಗಣಿಸಬಹುದೇ ನೋಡಿ.