‘ತುಕ್ಡೇ ತುಕ್ಡೇ ಗ್ಯಾಂಗ್’ ಎದುರು ಮಕಾಡೆ ಬಿದ್ದ ಮೋದಿ

‘ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ‘ ಎಂಬುದು ತೀರಾ ಹೆಚ್ಚು ಬಳಕೆಯಾಗಿ ಸವಕಲಾಗಿಬಿಟ್ಟಿರುವ ಗಾದೆ, “ಬಿಜೆಪಿ ಸೋತರೂ ಮೋದಿಯೇ ಪ್ರಧಾನಿ “ ಎನ್ನುವುದು ಹೊಸ ಗಾದೆ ಅಂತ ಅಂದುಕೊಳ್ಳಿ.

‘ತುಕ್ಡೇ ತುಕ್ಡೇ ಗ್ಯಾಂಗ್’ ಎದುರು ಮಕಾಡೆ ಬಿದ್ದ ಮೋದಿ

 

  ‘ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು’ ಅನ್ನೋ ಗಾದೆಗೆ ತಕ್ಕನಾಗಿ ದೇಶಕ್ಕೆ ದೇಶವೇ ನಿಂದಿಸುತ್ತಿರುವಾಗ ನೀನೂ ಹಿಂಗೆ ಬರೆದರೆ ಹೆಂಗೆ ಅಂತ ನೀವು ಕೇಳಬಹುದು. ಯಾರೂ ಏನೂ ಮಾಡಲಾಗಲ್ಲ, ಇದು ಅಧಿಕಾರದಾಹಿ ಶ್ರೀಮಾನ್ ನರೇಂದ್ರ ದಾಮೋದರದಾಸ್ ಮೋದಿ ಅಲಿಯಾಸ್ ನಮೋ ಅವರ ಸ್ವಯಂಕೃತಾಪರಾಧ. ಹತ್ತು ವರ್ಷ ಚಕ್ರವರ್ತಿಯಂತೆ ಆಳಿದರೂ ಮಾಡಿದ ಅಭಿವೃದ್ದಿ ಕಾರ್ಯಗಳನ್ನು ಅರ್ಥ ಮಾಡಿಸಿ, ಓಟು ಕೇಳಲಾಗದೇ ಬರೀ ದ್ವೇಷ ಭಾಷಣ ಮಾಡಿದ ಪರಿಣಾಮ ಬಿಜೆಪಿಗೆ ಸರಳ ಬಹುಮತವನ್ನೂ ತಂದು ಕೊಡಲಾಗದೇ ರಾಜಕೀಯವಾಗಿ ಹಾಗೂ ನೈತಿಕವಾಗಿ ಮತದಾರರಿಂದ ಕಪಾಳಮೋಕ್ಷ ಮಾಡಿಸಿಕೊಂಡಿದ್ದಾರೆ ಮೋದಿ.

    1975-78ರಿಂದಲೂ ತುಮಕೂರು ಅಟಲ ಬಿಹಾರಿ ವಾಜಪೇಯಿ ಹಾಗೂ ಲಾಲ್ ಕೃಷ್ಣ ಅಡ್ವಾಣಿಯವರ ಅಭಿಮಾನಿ. ತುಮಕೂರಿನ ಸೋಮೇಶ್ವರ , ಚಿಕ್ಕಪೇಟೆ, ಹೊರಪೇಟೆ, ಕೆ.ಆರ್.ಬಡಾವಣೆಗಳಲ್ಲಿ ಬಿಜೆಪಿಯ ಕಟ್ಟಾ ಅಭಿಮಾನಿಗಳಿದ್ದಾರೆ. ತುರ್ತು ಪರಿಸ್ಥಿತಿ ವಿರೋಧಿಸಿ ಜೈಲಿಗೆ ಹೋದವರಲ್ಲಿ ಕೆಲ ಮಂದಿ ಕಟ್ಟಾ ಅರ್ ಎಸ್ ಎಸ್ ಸ್ವಯಂ ಸೇವಕರೂ ಇದ್ದರು .  ಇವರೆಲ್ಲ ಬಿಜೆಪಿಗೆ ಮೊದಲು ಇದ್ದ ‘ಜನಸಂಘ’ದವರು. ತುಮಕೂರಿನಿಂದ ದಾಖಲೆಯ ಐದು ಸಲ ವಿಧಾನ ಪರಿಷತ್ ಸದಸ್ಯರಾಗಿ ಚುನಾಯಿತರಾದ ನಂತರ ಮೂರು ಅವಧಿಗೆ ಲೋಕಸಭಾ ಸದಸ್ಯರೂ ಆಗಿದ್ದು ಲೋಕಸಭೆಯ ಡೆಪ್ಯುಟಿ ಸ್ಪೀಕರ್ ನಂಥ ಅತ್ಯುನ್ನತ ಪದವಿ ನಿರ್ವಹಿಸಿದ ದಿವಂಗತ ಎಸ್.ಮಲ್ಲಿಕಾರ್ಜುನಯ್ಯನವರೂ ಇದ್ದರು, ಮಲ್ಲಿಕ್ ಎಂದೇ ಜನಪ್ರಿಯರಾಗಿದ್ದ ಇವರು ಭಾರತೀಯ ಜನಸಂಘದ ರಾಜ್ಯ ಅಧ್ಯಕ್ಷರೂ ಆಗಿದ್ದರು. ಎಮರ್ಜೆನ್ಸಿಯಲ್ಲಿ ತುಮಕೂರಿನಿಂದ ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ಒಂದೂವರೆ ವರ್ಷ ಜೈಲಿನಲ್ಲಿದ್ದರು. ಇವರಲ್ಲಿ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿದ್ದವರು ಜೈಲಿನ ಸಹಖೈದಿಗಳಾಗಿದ್ದ ವಾಜಪೇಯಿ,ಆಡ್ವಾಣಿ , ಮಧು ದಂಡವತೆ ಮೊದಲಾದ ಹಿರಿಯ ನಾಯಕರೊಂದಿಗೆ ದಿನವೂ ಒಡನಾಡುತ್ತ ಅವರ ಮಾತುಗಳನ್ನು ಕೇಳುತ್ತ ರಾಜಕೀಯ ತಿಳುವಳಿಕೆ ಪಡೆದವರೂ ಇದ್ದಾರೆ. ದಿವಂಗತ ಲಕ್ಷ್ಮೀನರಸಿಂಹಯ್ಯನವರೂ ಅಂತವರಲ್ಲಿ ಮುಖ್ಯರು. ಹಾಗಾಗಿಯೇ ಅವರು ತುಮಕೂರು ವಿಧಾನ ಸಭಾ ಕ್ಷೇತ್ರದಿಂದ ಎರಡು ಸಲ ಶಾಸಕರಾಗಿ ಚುನಾಯಿತರಾಗಿ ಕ್ಯಾಬಿನೆಟ್ ದರ್ಜೆ ಮಂತ್ರಿಯೂ ಆಗಲು ಸಾಧ್ಯವಾದದ್ದು.

    ಲಚ್ಚಣ್ಣನವರ ನಂತರ ತುಮಕೂರನ್ನು ನಾಲ್ಕು ಅವಧಿಗೆ ವಿಧಾನ ಸಭೆಯಲ್ಲಿ ಪ್ರತಿನಿಧಿಸಿ ಎರಡು ಸಲ ಮಂತ್ರಿಯೂ ಆಗಿರುವ ಸೊಗಡು ಶಿವಣ್ಣ ನಮ್ಮೊಂದಿಗಿದ್ದು ಇವತ್ತಿಗೂ ಜನಪರ ಹೋರಾಟವನ್ನು ಮುಂದುವರೆಸಿದ್ದಾರೆ. ಇಂಥವರೆಲ್ಲ ಮಾಡಿದ ತ್ಯಾಗ, ಬಲಿದಾನಗಳ ಮೇಲೆ ಎದ್ದು ನಿಂತ ಭಾರತೀಯ ಜನತಾ ಪಾರ್ಟಿಯಲ್ಲಿ ಎಮರ್ಜೆನ್ಸಿಯನ್ನು ಹೇರಿದ ಕಾಂಗ್ರೆಸ್ ಪಕ್ಷದವರದ್ಧೇ ಕಾರುಬಾರು. ಎಂಪಿ, ಎಮ್ಮೆಲ್ಲೆಗಳಲ್ಲ ಅವರೇ ಆಗಿದ್ದಾರೆ ಎನ್ನುವುದು ಸೊಗಡು ಅವರ ಕೊರಗು.

     ಆರ್ ಎಸ್ ಎಸ್ ಅಲಿಯಾಸ್ ಸಂಘ ಪರಿವಾರ ಹಾಗೂ ಆದರ ರಾಜಕೀಯ ಅಂಗ ಘಟಕವಾದ ಬಿಜೆಪಿಯ ಇವತ್ತಿನ ದುಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ತುಸು ಇತಿಹಾಸದತ್ತಲೂ ಹೊರಳಿ ನೋಡಬೇಕಾಗುತ್ತದೆ ಎಂಬ ಕಾರಣಕ್ಕೆ ತುಮಕೂರಿನ ಅರ್ಧ ಶತಮಾನದ ಹಿನ್ನೆಲೆಯನ್ನೂ ಹೇಳಬೇಕಾಗಿ ಬಂದಿತು. ತುರ್ತು ಪರಿಸ್ಥಿತಿ ರದ್ದಾಗಿ ನಂತರ 1977ರಲ್ಲಿ ನಡೆದ ಮಹಾಚುನಾವಣೆಯಲ್ಲಿ ಇಡೀ ದೇಶದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇದ್ದರೂ ತುಮಕೂರಿನಲ್ಲಿ ಕಾಂಗ್ರೆಸ್ಸಿನ ದಿವಂಗತ ಕೆ.ಲಕ್ಕಪ್ಪನವರು ಗೆದ್ದಿದ್ದರು.  ಕೊಂಡಾಪುರ ಲಕ್ಕಪ್ಪನವರು 1967ರಿಂದ 1980ರವರೆಗೆ ನಾಲ್ಕು ಸಲ ಎಂಪಿಯಾಗಿ ಆನಂತರ ಒಂದು ಸಲ ಎಂಎಲ್ಎ ಆಗಿ ಚುನಾಯಿತರಾದವರು. ಅವರ ನಂತರ 1984 ಹಾಗೂ 89ರಲ್ಲಿ ಕಾಂಗ್ರೆಸ್ ನಿಂದ ಅವರ ಅನುಯಾಯಿ ಜಿ.ಎಸ್.ಬಸವರಾಜ್ ಲೋಕಸಭೆಗೆ ಚುನಾಯಿತರಾದರು. ಹೀಗಾಗಿ ಬಿಜೆಪಿಯಿಂದ ಎಸ್.ಮಲ್ಲಿಕ್ 1991ರಲ್ಲಿ ಗೆಲ್ಲಲು ನಾಲ್ಕು ಚುನಾವಣೆಗಳನ್ನು ಕಾಯಬೇಕಾಯಿತು. 1991, 98 ಮತ್ತು 2004ರ ಮಹಾ ಚುನಾವಣೆಯಲ್ಲಿ ಎಸ್.ಮಲ್ಲಿಕ್ ಅವರೇ ಬಿಜೆಪಿಯಿಂದ ಲೋಕಸಭೆಗೆ ಚುನಾಯಿತರಾದರೂ, ಇವರನ್ನು ಪದೇ ಪದೇ ಸೋಲಿಸುತ್ತಿದ್ದ ಕಾಂಗ್ರೆಸ್ಸಿನ ಜಿ.ಎಸ್.ಬಸವರಾಜು 2009 ಹಾಗೂ 2019ರಲ್ಲಿ ಅದೇ ಬಿಜೆಪಿಯ ಎಂಪಿ ಆದದ್ದು ಇತಿಹಾಸದ ವ್ಯಂಗ್ಯ.

    ‘ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ‘ ಎಂಬುದು ತೀರಾ ಹೆಚ್ಚು ಬಳಕೆಯಾಗಿ ಸವಕಲಾಗಿಬಿಟ್ಟಿರುವ ಗಾದೆ, “ಬಿಜೆಪಿ ಸೋತರೂ ಮೋದಿಯೇ ಪ್ರಧಾನಿ “ ಎನ್ನುವುದು ಹೊಸ ಗಾದೆ ಅಂತ ಅಂದುಕೊಳ್ಳಿ. 543 ಸದಸ್ಯ ಬಲದ ಪಾರ್ಲಿಮೆಂಟಿನಲ್ಲಿ ಬಿಜೆಪಿ ಗುರುತಿನ ಮೇಲೆ ನಿಂತು ಗೆದ್ದಿರುವವರು 240 ಮಂದಿ ಮಾತ್ರ. ಸರಳ ಬಹುಮತಕ್ಕೆ 272 ಬೇಕು, ಯಾವ ಪಕ್ಷಕ್ಕೂ ಬಹುಮತವನ್ನು ದೇಶದ ಮತದಾರ ಪ್ರಭು ಕೊಟ್ಟಿಲ್ಲ. ಲೋಕಸಭೆಯ ಚುನಾವಣಾ ಪ್ರಚಾರ ಮಾತ್ರವಲ್ಲ 2014ರಿಂದ 2024ರವರೆಗೆ ಹತ್ತು ವರ್ಷ ಬಿಜೆಪಿ ಹೆಸರಲ್ಲಿ ವಿಜೃಂಭಿಸಿದ್ದು ಪ್ರಧಾನಿ ಮೋದಿ ಎಂಬುದೇ ಸತ್ಯ. ಅಮಿತ್ ಶಾ ಬಿಜೆಪಿ ಅಧ್ಯಕ್ಷರಾಗಿ ಇರುವ ತನಕ ಪಕ್ಷಕ್ಕೆ ಸರ್ಕಾರದ ಮೇಲೆ ತುಸುವಾದರೂ ಹಿಡಿತವಿತ್ತು ಎನ್ನುವವರಿದ್ದಾರೆ, ಆದರೆ ಈ ಜೆ.ಪಿ.ನಡ್ಡಾ ಎಂಬ ಕೈಗೊಂಬೆ ಮನುಷ್ಯನನ್ನು ಅಧ್ಯಕ್ಷರನ್ನಾಗಿ ನೇಮಿಸಿಕೊಂಡ ಮೇಲೆ ಮೋದಿ-ಶಾ ಅವರೇ ಜಗನ್ನಾಟಕ ಸೂತ್ರ ಹಾಗೂ ಪಾತ್ರಧಾರಿಗಳಾಗಿಬಿಟ್ಟರು. ಆರ್ ಎಸ್ ಎಸ್ ಮಂದಿ ಮಾತಿನಲ್ಲಿರಲಿ ಉಸಿರಾಡುವಲ್ಲೂ ಶಿಸ್ತು ಪಾಲಿಸುತ್ತಾರೆ. ಆದರೆ ಈ ಇವರೇ ಸೃಷ್ಟಿಸಿದ ಬಿಜೆಪಿ ಮಾತ್ರ ಅರಾಜಕತೆಯ ಕುಲುಮೆಯಾಗಿಬಿಟ್ಟಿತು. 2014ರಲ್ಲಿ ಮೋದಿ ಪ್ರಧಾನಿಯಾಗಿ ಅಧಿಕಾರ ಹಿಡಿಯುತ್ತಿದ್ದಂತೆ ಆವರೆಗೂ ಅಸ್ತಿತ್ವದಲ್ಲಿದ್ದ ಪಕ್ಷದ “ಸಂಸದೀಯ ಸಮಿತಿ”ಯನ್ನು ರದ್ದು ಮಾಡಿ “ಮಾರ್ಗದರ್ಶಕ ಮಂಡಲ” ಎಂಬ ಕಣ್ಣು, ಕಿವಿ, ಮೂಗು, ಬಾಯಿ, ಹಲ್ಲುಗಳಿಲ್ಲದ ಸಮಿತಿಯೊಂದನ್ನು ರಚಿಸಿ, ಬಿಜೆಪಿ ಸ್ಥಾಪಕರಲ್ಲಿ ಮುಖ್ಯವಾಗಿದ್ದ ವಾಜಪೇಯಿ, ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಶಿ ಅವರನ್ನು ಆ ಸಮಿತಿ ಸದಸ್ಯರನ್ನಾಗಿ ಮಾಡಿಬಿಟ್ಟರು. ಆ “ಮಾರ್ಗದರ್ಶಕ ಮಂಡಲ” ಐದು ವರ್ಷಗಳಲ್ಲಿ ಒಮ್ಮೆಯಾದರೂ ಸಭೆ ಸೇರಲೇ ಇಲ್ಲ, ಬದಲಿಗೆ ಬಿಜೆಪಿಯ ಹಿರಿಯರ ಕಸದ ಬುಟ್ಟಿ ಎನಿಸಿಕೊಂಡು ಬಿಟ್ಟಿತು.

     ವಾಜಪೇಯಿ ಅವರು ಸುದೀರ್ಘ ಅನಾರೋಗ್ಯದ ಬಳಿಕ 2018ರ ಆಗಸ್ಟ್ 16ರಂದು ತೀರಿಕೊಳ್ಳುತ್ತಾರೆ. ಬಿಜೆಪಿಯ ಉಕ್ಕಿನ ಮನುಷ್ಯ ಎಂದೇ ಹೆಸರಾಗಿದ್ದ ಅಡ್ವಾಣಿ ಅವರನ್ನು ಮೋದಿ ಪ್ರಧಾನಿಯಾಗುವ ಅವಕಾಶವನ್ನು ಬದಿಗೆ ಸರಿಸಿ ಪಕ್ಷದ ವ್ಯವಹಾರದೊಳಗೂ ಡಮ್ಮಿ ಮಾಡಿದರೆ, ಮೋದಿಯ ಬಲಗೈ ಭಂಟ ಅಮಿತ್ ಶಾ 2019ರ ಮಹಾ ಚುನಾವಣೆಯಲ್ಲಿ ಅಡ್ವಾಣಿ ಅವರಿಗೆ ಅವರ ಗಾಂಧಿನಗರ ಕ್ಷೇತ್ರದಿಂದ ಟಿಕೆಟ್ ಅನೌನ್ಸ್ ಮಾಡದೇ ಇರುವ ಮೂಲಕ ಪೊಲಿಟಿಕಲಿ ಸ್ಕ್ರಾಪ್ ಮಾಡಿಬಿಡುತ್ತಾರೆ ಮತ್ತು 1989ರಿಂದಲೂ ಅಡ್ವಾಣಿ ಅವರು ನಿರಂತರ ಗೆಲ್ಲುತ್ತ ಬಂದಿದ್ದ ಆ ಕ್ಷೇತ್ರವನ್ನು ತಮ್ಮ ಹೆಸರಿಗೆ ಕಬ್ಜಾ ಮಾಡಿಕೊಂಡು ಬಿಡುತ್ತಾರೆ.

     ಮೊನ್ನೆ ರಿಸಲ್ಟ್ ಬಂದ ಬಳಿಕ, ಬಿಜೆಪಿ ಜನಾದೇಶ ಕಳೆದುಕೊಂಡಿತಲ್ಲ, ಇನ್ನೇನು ಮೋದಿಯನ್ನು ಅವರ ಪಕ್ಷದ ವೃದ್ಧಾಶ್ರಮದಂತಿರುವ ಮಾರ್ಗದರ್ಶಕ ಮಂಡಲಕ್ಕೆ ಸೇರಿಸಿಬಿಡಿ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಆಗ್ರಹಿಸಿದ್ದಾರೆ. ಆದರೆ ಮೋದಿ ಈಗಾಗಲೇ ಮಾರ್ಗದರ್ಶಕ ಮಂಡಲದ ಸದಸ್ಯರಾಗಿದ್ದಾರೆ. ಅಡ್ವಾಣಿ, ಜೋಶಿ ಅವರಲ್ಲದೇ ಮೋದಿ ಜೊತೆಗೆ ರಾಜನಾಥ್ ಸಿಂಗ್ ಕೂಡಾ ಈ ಮಂಡಲದಲ್ಲಿದ್ದಾರೆ. ಅದರರ್ಥ ಮೋದಿ ನಂತರ ಪ್ರಧಾನಿಯಾಗಲು ಅಮಿತ್ ಶಾಗೆ ರಾಜನಾಥ್ ಸಿಂಗ್ ಕೂಡಾ ಅಡ್ಡಿ ಬರುವಂತಿಲ್ಲ. !

    ಕರ್ನಾಟಕದಲ್ಲಿ ಯಡಿಯೂರಪ್ಪನವರೂ ಸೇರಿದಂತೆ ಬಿಜೆಪಿಯಲ್ಲಿ ಸಾಕಷ್ಟು ಇತಿಹಾಸವಿರುವ, ಸ್ವಂತ ವ್ಯಕ್ತಿತ್ವವಿರುವ, ತಿಳುವಳಿಕೆ ಹಾಗೂ ನಿಲುವುಗಳನ್ನು ಹೊಂದಿರುವ ಜೊತೆಗೆ ತಮ್ಮದೇ ಓಟ್ ಬ್ಯಾಂಕ್ ಹೊಂದಿರುವ ಯಾವ ಹಿರಿಯ ನಾಯಕರನ್ನೂ ಅಧಿಕಾರದಲ್ಲಿ ಉಳಿಯಲು ಬಿಡದೇ ಇರುವ ಮೂಲಕ ಸರ್ಕಾರ ಎಂದರೆ ಮೋದಿ ಪಕ್ಷ ಎಂದರೆ ಅಮಿತ್ ಶಾ ಎನ್ನುವಂತೆ ಮಾಡುವಲ್ಲಿ ಈ ಜೋಡಿ ಯಶಸ್ಸು ಕಂಡಿತು. ಭೂಮಿಯ ಮೇಲೆ ಬೆಳಕು ಹರಿದ ಮೇಲೆ ಕತ್ತಲಾಗುವುದು ಗ್ಯಾರಂಟಿ ಎನ್ನುವುದು ಹೇಗೆ ಶಾಶ್ವತ ಸತ್ಯವೋ ರಾಜಕೀಯ ರಂಗದಲ್ಲೂ ಮೇಲೇರಿದಷ್ಟೇ ವೇಗವಾಗಿ ಕೆಳಗಿಯಲೇ ಬೇಕು ಎಂಬ ಸತ್ಯವನ್ನೂ ಈ ಜೋಡಿ ಇಂತ ಅಕ್ರಮಗಳನ್ನು ಮಾಡುವಾಗ ನೆನಪಿನಲ್ಲಿ ಇಟ್ಟುಕೊಳ್ಳಬೇಕಿತ್ತು.

    ಏನು ಹೀಗೆ ಹೇಳ್ತಿದ್ದೀರಿ, ಏನು ಎಲ್ಲ ಮುಗಿದೇ ಹೋಯಿತಾ, ನೋಡಿ ಮೂರನೇ ಸಲವೂ ನಮ್ಮ ಮೋದಿಯೇ ಪ್ರಧಾನಿ ಆಗ್ತಾ ಇಲ್ವಾ ಅಂತ ಕೇಳಬಹುದು ನೀವು. ಇಲ್ಲ ಅಂದೋರು ಯಾರು? ಆಗ್ಲಿ ಬಿಡಿ, ಬಿಜೆಪಿಯ ಹೀನಾಯ ಸೋಲಿಗೆ ತಾವೇ ಕಾರಣವಾಗಿದ್ದರೂ ತೊಗಲುಬೊಂಬೆಯಂತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಬಲಿಕೊಟ್ಟು, ದೇಶದ ಇತಿಹಾಸದಲ್ಲಿ ನೆಹರೂ ಮೂರು ಅವಧಿಗೆ ನಿರಂತರ ಪ್ರಧಾನಿ ಅಗಿದ್ದರು, ಅದೇ ರೀತಿ ನಾನೂ ನಿರಂತರ ಮೂರನೇ ಅವಧಿಗೆ ಪ್ರಧಾನಿ ಯಾಗುತ್ತಿದ್ದೇನೆ ಎಂದು ಸ್ವಯಂಹೇಳಿಕೆ ನೀಡು ಬೀಗುತ್ತಿರುವ ಮೋದಿ, ನೆಹರೂ ಮೂರು ಅವಧಿಗಳಿಗೂ ಪಕ್ಷಕ್ಕೆ ಭಾರೀ ಬಹುಮತ ತಂದುಕೊಟ್ಟು ನಂತರ ಇಡೀ ಸಂಸದೀಯ ಪಕ್ಷದ ಅನುಮೋದನೆ ಪಡೆದು ಪ್ರಧಾನಿಯಾಗಿದ್ದರು , ನನ್ನಂತೆ ಸರಳ ಬಹುಮತ ಬರದೇ ಇದ್ದಾಗಲೂ ಮಿತ್ರಪಕ್ಷಗಳಿಗೆ ದುಂಬಾಲು ಬಿದ್ದು ಕಾಡಿಬೇಡಿ ಪ್ರಧಾನಿ ಅಗಿರಲಿಲ್ಲ ಎನ್ನುವುದನ್ನು ಮಾತ್ರ ಹೇಳುವುದಿಲ್ಲ.

     240 ಸೀಟುಗಳನ್ನು ಗೆದ್ದರೂ ಹತ್ತಾರು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಾ ಇದ್ದರೂ ಕೇವಲ 12 ಸೀಟು ಗೆದ್ದಿರುವ ಬಿಹಾರದ ಜೆಡಿಯುನ ನಿತೀಶ್ ಕುಮಾರ್ ಯಾದವ್ ಹಾಗೂ 16 ಸೀಟು ಗೆದ್ದಿರುವ ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಅವರ ನೆರಳನ್ನೂ  ತುಳಿಯದಂತೆ ಎಚ್ಚರಿಕೆಯಿಂದ ಆಡಳಿತ ನಡೆಸಬೇಕಾದ ದುರವಸ್ಥೆ ಮೋದಿ ಸೃಷ್ಟಿಸಿಕೊಂಡಿದ್ದಾರೆ. ಈ ಇಬ್ಬರೂ ವಯಸ್ಸಿನಲ್ಲಾಗಲೀ ರಾಜಕೀಯ ಅನುಭವದಲ್ಲಾಗಲೀ ತಂತ್ರ -ಕುತಂತ್ರಗಳಲ್ಲಾಗಲೀ ಯಾರಿಗೇನೂ ಕಡಿಮೆ ಅಲ್ಲ ಅಂತ ಎಲ್ಲರಿಗೂ ಗೊತ್ತು. ಇಂತಾ ಘಟನಾಘಟಿಗಳನ್ನೂ ಮೋದಿ ಗೇಲಿ ಮಾಡದೇ ಬಿಟ್ಟಿಲ್ಲ. ಚುನಾವಣಾ ಪ್ರಚಾರ ಭಾಷಣಕ್ಕೆಂದು ವೇದಿಕೆ ಹತ್ತಿಬಿಟ್ಟರೆ ಸಾಕು ಮೈಮೇಲೆ ಬಂದವರಂತಾಡುವ ಮೋದಿ ಎದುರಾಳಿಗಳನ್ನು ಯಾವ ಯಾವ ತೀರಾ ಸಣ್ಣತನದ್ದು ಅಂತನಿಸುವ ಮಾತುಗಳಲ್ಲೂ ಟೀಕಿಸುತ್ತಾರೆ, ವ್ಯಂಗ್ಯವಾಡುತ್ತಾರೆ, ಕಟಕಿಯಾಡುತ್ತಾರೆ, ಯಾವ ಮಿಮಿಕ್ರಿ ಕಲಾವಿದನಿಗಿಂತಲೂ ಮಿಗಿಲಾಗಿ ಗೇಲಿ ಮಾಡುತ್ತಾರೆ ಎಂಬುದಕ್ಕೆ ಯೂ ಟ್ಯೂಬ್ ಗಳಲ್ಲಿ ಸಾಕ್ಷಿ ವಿಡಿಯೋಗಳು ನಿಮಗೆ ದೊರಕುತ್ತವೆ, ಬಿಡುವಾಗಿದ್ದರೆ ಹುಡುಕಿ ನೋಡಿಕೊಳ್ಳಿ.

    ಚಂದ್ರ ಬಾಬು ನಾಯ್ಡು ಲೆಕ್ಕವನ್ನೇ ತೆಗೆದುಕೊಳ್ಳಿ, ನಾಯ್ಡು ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ದ್ವೇಷಸಾಧನೆಯಿಂದಾಗಿ ಕೆಲ ತಿಂಗಳು ಜೈಲು ಪಾಲಾಗಿದ್ದರಿಂದ ಹಿಡಿದು ಅವರ ಮಾವ ಅಂದಿನ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ಅವರಿಂದ ವಾಮ ಮಾರ್ಗದಲ್ಲಿ ಅಧಿಕಾರ ಕಿತ್ತುಕೊಂಡದನ್ನೂ ಮರೆಯದೇ ಅತ್ಯಂತ ನಾಟಕೀಯ ಮಾತುಗಳಲ್ಲಿ ನೆನಪಿಸುತ್ತಾರೆ ಅದೂ ಆಂಧ್ರಪ್ರದೇಶದಲ್ಲಿ ಸಾವಿರಾರು ಜನರ ಎದುರು. ವಾಜಪೇಯಿ ಕಾಲದಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಸಂಚಾಲಕರಾಗಿದ್ದ ನಾಯ್ಡು ಕೂಡಾ ಮೋದಿಯನ್ನು ಟೀಕಿಸುವುದರಲ್ಲಿ ಮೋದಿಗಿಂತ ಏನೂ ಕಮ್ಮಿ ಇಲ್ಲ. ಮೋದಿ ಟೆರರಿಸ್ಟ್ ಅಂತ ನೇರವಾಗಿ ವೇದಿಕೆ ಮೇಲೆ ಘೋಷಿಸಿದ್ದೇ ಈ ನಾಯ್ಡು. ಇಡಿ, ಐಟಿ, ಸಿಬಿಐಗಳ ಕಾಟದಿಂದ ತಪ್ಪಿಸಿಕೊಳ್ಳುವ ಸಲುವಾಗಿಯೇ ಬಿಜೆಪಿಗೆ ಬೆಂಬಲ ಕೊಟ್ಟಿರುವುದಾಗಿ ನಾಯ್ಡು ಇತ್ತೀಚೆಗೆ ಸ್ಪಷ್ಟವಾಗಿ ಹೇಳಿಕೆ ನೀಡಿದ್ದಾರೆ. ಜೊತೆಗೆ ಈ ಮೈತ್ರಿ ಏನೂ ಶಾಶ್ವತವೂ ಅಲ್ಲ ಎನ್ನುವ ಮೂಲಕ ವಿರೋಧ ಪಕ್ಷಗಳ ಮೈತ್ರಿ ಕೂಟ ಇಂಡಿಯಾ” ಸದಸ್ಯ ಪಕ್ಷಗಳಲ್ಲಿ ಆಶಾಭಾವದ ಥ್ರಿಲ್ ಹುಟ್ಟಿಸಿದ್ದಾರೆ!

    ನಿತೀಶ್ ಕುಮಾರ್ ನಾಯ್ಡುಗಿಂತ ಹೆಚ್ಚು ವಾಸ್ತವವಾದಿ, ಆಂಧ್ರ ಪ್ರದೇಶದ ಅಸೆಂಬ್ಲಿಯಲ್ಲಿ ವಿರೋಧ ಪಕ್ಷಗಳ ಸದಸ್ಯರು ನಾಯ್ಡು ಅವರ ಕುಟುಂಬದ ಹಿನ್ನೆಲೆ ಕುರಿತು ಟೀಕೆ ಮಾಡಿದಾಗ, ಸಿಟ್ಟಿನಿಂದ ಮುಖ್ಯಮಂತ್ರಿಯಾಗದ ಹೊರತು ಈ ಸದನಕ್ಕೆ ಕಾಲಿಡಲ್ಲ ಅಂತ ಘೋಷಿಸಿ  ಹೊರನಡೆದ್ದಿದ್ದರು, ಆದರೆ ನಿತೀಶ್ ಕುಮಾರ್ ಅವರಿಗೆ ಇಂತ ಸಿಟ್ಟುಗಳೆಲ್ಲ ಬರುವುದಿಲ್ಲ , ಕೃಷ್ಣನ ವಂಶಸ್ಥರಲ್ವಾ. ಕೋಪ ಬಂದರೂ ಬಹಿರಂಗವಾಗಿ ತೋರಿಸಿಕೊಳ್ಳುವುದಿಲ್ಲ. ಆದರೆ ನಿರಂತರವಾಗಿ ಅಧಿಕಾರದಲ್ಲಿ ಇರುವ ಜಾಣ ಮಾತ್ರ.

    ಇವತ್ತು ದೇಶದಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿಲ್ಲ. 240 ಸೀಟು ಹೊಂದಿರುವ ಹಾಗೂ ಕೇರ್ ಟೇಕರ್ ಪ್ರಧಾನ ಮಂತ್ರಿಯೂ ಆಗಿರುವ ಮೋದಿಯೇ ಬಿಜೆಪಿಯ ಸಂಸದೀಯ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ ಮೋದಿ ಭಂಟ ಅಮಿತ್ ಶಾ ಅವರೇ ಎನ್ ಡಿ ಎ ಅಧ್ಯಕ್ಷ ಕೂಡಾ. ಎನ್ ಡಿ ಎ ಮಿತ್ರಪಕ್ಷಗಳಲ್ಲಿ ಟಿಡಿಪಿ ಮತ್ತು ಜೆಡಿಯು ಜೊತೆಗೆ ಶಿವಸೇನಾ ಮಾತ್ರವೇ ಸರಕಾರದ ಲಗಾಮು ಹಿಡಿಯಬಲ್ಲ ಮುಖ್ಯ ಪಕ್ಷಗಳು. 1998ರ ಮೇ ತಿಂಗಳಲ್ಲಿ ದೇಶದಲ್ಲಿ ಕಾಂಗ್ರೆಸ್ ಹೊರತುಪಡಿಸಿದ ಸಮ್ಮಿಶ್ರ ಸರ್ಕಾರವೊಂದನ್ನು ಅಸ್ತಿತ್ವಕ್ಕೆ ತರುವ ಸಲುವಾಗಿ ಅಟಲ್ ಬಿಹಾರಿ ವಾಜಪೇಯಿ ಅವರು ರಚಿಸಿದ ರಾಷ್ಟ್ರೀಯವಾದಿ, ಕನ್ಸರ್ವೇಟೀವ್ ಬಲ ಬಂಥೀಯ ವೇದಿಕೆಯೇ ನ್ಯಾಶನಲ್ ಡೆಮೊಕ್ರಾಟಿಕ್ ಅಲೈಯನ್ಸ್ (ಎನ್ ಡಿಎ). 2004ರವರೆಗೆ ವಾಯಪೇಯಿ ಅವರೇ ಎನ್ ಡಿಎ ಅಧ್ಯಕ್ಷರು, ನಂತರದ 10 ವರ್ಷ ಅಡ್ವಾಣಿ ಅಧ್ಯಕ್ಷರು, 2014ರಿಂದ ಈ ವರೆಗೆ ಅಮಿತ್ ಶಾ ಕೈಯಲ್ಲಿದೆ ಈ ಎನ್ ಡಿಎ. 2014 ಹಾಗೂ 2019ರಲ್ಲಿ ಬಿಜೆಪಿಗೆ ಬಹುಮತ ದಕ್ಕಿದ್ದರಿಂದ ಎನ್ ಡಿಎ ಯಾರ ಲೆಕ್ಕದಲ್ಲೂ ಇರಲಿಲ್ಲ. ಈಗ ದೆಸೆ ತಿರುಗಿದೆ. ದಶಕದ ನಂತರ ಇಂಡಿಯಾದಲ್ಲಿ ಮತ್ತೆ ಸಮ್ಮಿಶ್ರ ಸರ್ಕಾರದ ಅನಿವಾರ್ಯತೆ ಒದಗಿ ಬಂದಿದೆ.

    ಎನ್ ಡಿ ಎ ಗೆ ಅಧ್ಯಕ್ಷರ ಜೊತೆಗೆ ಸಂಚಾಲಕರ ಹುದ್ದೆಯೂ ಇದೆ. ದಿವಂಗತ ಜಾರ್ಜ್ ಫರ್ನಾಂಡಿಸ್, ನಂತರ ಶರದ್ ಯಾದವ್ ಹಾಗೂ ಚಂದ್ರಬಾಬು ನಾಯ್ಡು ಎನ್ ಡಿ ಎ ಕನ್ವೀನರ್ ಹುದ್ದೆ ನಿಭಾಯಿಸಿದ್ದರು. ಎನ್ ಡಿ ಎ ಗೆ ಅಂತಲೇ ಪ್ರತ್ಯೇಕ ಕಚೇರಿ ಅಥವಾ ವ್ಯವಸ್ಥೆ ಇಲ್ಲ. ಕೆಲವು ರಾಜ್ಯ ಸರ್ಕಾರಗಳೂ ಎನ್ ಡಿಎ ಅಡಿ ಅಸ್ತಿತ್ವದಲ್ಲಿವೆ.  ಸಂಕಟಂ ವಸ್ತೇ ವೆಂಕಟರಮಣ ಅಂತಾರಲ್ಲ ಹಂಗೆ.

    ಇವಿಎಂ ಕೌಂಟಿಂಗ್ ದಿನಕ್ಕೆ ಮೂರು ದಿನ ಮೊದಲು ಎಕ್ಸಿಟ್ ಪೋಲ್ ಹೆಸರಲ್ಲಿ ಮೋದಿಯನ್ನು ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರತಿಷ್ಟಾಪಿಸಲು ತಮಗೆ ಬೇಕೆನೆಸಿದಷ್ಟು ಸೀಟುಗಳನ್ನು ಪ್ರಕಟಿಸಿದ ಅಂಬಾನಿ, ಅದಾನಿ ಹಾಗೂ ಇನ್ನಿತರ ಮೋದಿ ಎಂಬ ಪೂತನಿಯ ಫೀಡಿಂಗ್ ಬಾಟಲಿಗಳ ನಿಪ್ಪಲ್ ಚೀಪುವ ಟಿವಿಗಳ ಆಂಕರ್ ಗಳ ಸ್ವಪ್ನ ಸ್ಖಲನ, ಸ್ಥಳ ಸ್ಖಲನಗಳೆಲ್ಲ ಹಸೀ ಸುಳ್ಳು, ಅದನ್ನೂ ಕೇವಲ ಶೇರು ಮಾರುಕಟ್ಟೆಯನ್ನು ಉದ್ದೀಪಿಸಲು ಮಾಡಿದ ಹಗರಣ ಎಂದು ರಾಹುಲ್ ಗಾಂಧಿ ಗುರುವಾರ ಪ್ರೆಸ್ ಮೀಟ್ ಮಾಡಿ ಹೇಳಿದ್ದಾಗಿದೆ.

     ಅಮಿತ್ ಶಾ ಹೇಳಿ ಕೇಳಿ ಕ್ರಿಮಿನಲ್ ಹಿನ್ನೆಲೆಯ ಮನುಷ್ಯ, ಸುಪಾರಿ ಕಿಲ್ಲಿಂಗ್ ಗಳಿಂದಾಗೇ ಜೈಲು ಸೇರಿದ್ದರು, ಈತನನ್ನು ಅಹಮದಾಬಾದ್ ಹೈಕೋರ್ಟ್ ಗುಜರಾತ್ ರಾಜ್ಯದಿಂದಲೇ ಗಡೀಪಾರು ಮಾಡಿತ್ತು. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೂ ಮೋದಿ ಪ್ರಧಾನಿ ಆಗದೇ ಹೋಗಿದ್ದರೆ ಈತನ ಮೇಲಿನ ಆಪಾದನೆಗಳೆಲ್ಲ ಸಾಬೀತಾಗಿಬಿಟ್ಟಿದ್ದರೆ ಹತ್ತಾರು ವರ್ಷ ಜೈಲಿನಲ್ಲಿ ಕೊಳೆಯಬೇಕಾಗಿತ್ತು. ಈಗ ಎನ್ ಡಿ ಎ ಸರ್ಕಾರ ಅಸ್ತಿತ್ವಕ್ಕೆ ಬರುವ ಹಂತದಲ್ಲೇ ಕೆಲವು ಮುಖ್ಯ ಹರ್ಡಲ್ ಗಳನ್ನು ನಾಯ್ಡು ಮತ್ತು ನಿತೀಶ್ ಹಾಕಿದ್ದಾರೆ. (ಒನ್ಸ್ ಎಗೇನ್ ಈ ಮಾಹಿತಿಗಳನ್ನೆಲ್ಲ ಬಾಯಿಯಲ್ಲಿ ನಿಪ್ಪಲ್ ತುರುಕಿಕೊಂಡಿರುವ ಕಾರಣಕ್ಕೆ ಮಡಿಲ ಟಿವಿ ಆಂಕರ್ ಗಳು ಹೇಳುತ್ತಿಲ್ಲ.)

     ಇವುಗಳಲ್ಲಿ ಬಹು ಮುಖ್ಯವಾದವೆಂದರೆ, 1) ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬಾರದು, 2) ಮೋದಿ ಭಂಟ ಅಮಿತ್ ಶಾ ಸಂಪುಟ ಸೇರಬಾರದು. 3) ಬಿಜೆಪಿ ಜಾರಿಗೆ ತಂದಿದ್ದ ಅಗ್ನಿವೀರ್ ಯೋಜನೆ ರದ್ದಾಗಬೇಕು.

    ಇವಿಷ್ಟೂ ಜಾರಿಯಾಗಬೇಕೆಂದರೆ, ಮೋದಿ -ಅಮಿತ್ ಶಾ ಬದಲಿಗೆ ಆರ್ ಎಸ್ ಎಸ್  ನ ಮೋಹನ್ ಭಾಗವತ್ ಫೀಲ್ಡಿಗಿಳಿಬೇಕು. ಮೋದಿ ಬಿಟ್ಟರೆ ಮತ್ಯಾರು ಅಂದರೆ ಇಲ್ವಾ ಗಡ್ಕರಿ ಎನ್ನುತ್ತಿದೆ ನಾಗಪುರ.

      ಬಿಜೆಪಿ ಈಗ ಸಾಕಷ್ಟು ಬೆಳೆದುಬಿಟ್ಟಿದೆ, ನಮಗೆ ಈಗ ಆರ್ ಎಸ್ ಎಸ್ ನೆರವು ಬೇಕಿಲ್ಲ ಎಂದು ಚುನಾವಣೆ ಅಂತಿಮ ಹಂತದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿಕೆ ಕೊಟ್ಟರು, ನಡ್ಡಾ ಬಾಯಿಂದ ಮೋದಿ ಅಮಿತ್ ಶಾ ಹೇಳಿಸಿದ ಮಾತುಗಳಿವು ಅಂತ ಅರ್ಥವಾಗದಷ್ಟು ದಡ್ಡರೇನಲ್ಲ ಭಾಗವತ್. ಈಗ ನಡ್ಡಾ ತಲೆದಂಡವಾಗಿ ಅವರ ಸ್ಥಾನಕ್ಕೆ 1972ರಲ್ಲಿ 1ನೇ ವಯಸ್ಸಿಗೇ ಆರ್ ಎಸ್ ಎಸ್ ಸೇರಿ, ಬೆಳೆದು, ಮಧ್ಯಪ್ರದೇಶದಲ್ಲಿ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಯಾಗಿ  ಸುದೀರ್ಘ ಅವಧಿಗೆ ಆಳ್ವಿಕೆ ನಡೆಸಿ, ಜನಾನುರಾಗಿಯಾಗಿರುವ ಕಾರಣಕ್ಕೇ ಮೋದಿ -ಅಮಿತ್ ಶಾ ಅವಕೃಪೆಯಿಂದಾಗಿ ಮಾಜಿಯಾಗಿರುವ ಶಿವರಾಜ್ ಸಿಂಗ್ ಚೌಹಾಣ್  ಬಿಜೆಪಿಯ ಮುಂದಿನ ಅಧ್ಯಕ್ಷರಾಗಲಿದ್ದಾರೆ ಎಂಬ ಸ್ಕೂಪ್ ಸುದ್ದಿ ನಿಜವಾದಲ್ಲಿ, ರಾಜಕೀಯ ಚದುರಂಗದಾಟದ ಮುಂದಿನ ನಡೆಗಳು ನಿಚ್ಚಳವಾಗಲಿವೆ. ಜಸ್ಟ್ ವೇಯ್ಟ್ ಅಂಡ ಸೀ.

 

ನ್ಯಾಶನಲ್ ಡೆಮೊಕ್ರಾಟಿಕ್ ಅಲೈಯನ್ಸ್ (ಎನ್ ಡಿಎ)

ಭಾರತೀಯ ಜನತಾ ಪಾರ್ಟಿ     240

ನ್ಯಾಶನಲ್ ಪೀಪಲ್ಸ್ ಪಾರ್ಟಿ     000

ತೆಲುಗು ದೇಶಂ ಪಾರ್ಟಿ           016

ಜನತಾ ದಳ (ಸಂಯುಕ್ತ)          012

ಶಿವಸೇನಾ                         007

ಲೋಕಜನಶಕ್ತಿ ಪಾರ್ಟಿ (ಪಾಸ್ವಾನ್)   005

ರಾಷ್ಟ್ರೀಯ ಲೋಕದಳ            002

ಜನತಾದಳ(ಸೆಕ್ಯುಲರ್)           002

ಜನಸೇನಾ ಪಾರ್ಟಿ                        002  

ಅಸ್ಸೋಮ್ ಗಣ ಪರಿಷತ್                001

ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್    001

ಆಲ್ ಜಾರ್ಖಂಡ್ಸ್ ಸ್ಟೂಡೆಂಟ್ಸ್ ಯೂನಿಯನ್ 001

ಅಪ್ನಾ ದಳ (ಸೋನೆಲಾಲ್)       001

ಹಿಂದೂಸ್ತಾನಿ ಅವಾಮ್ ಮೋರ್ಚಾ 001

ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ   001

ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ   001

ಒಟ್ಟು                               293

( ಮೇಲಿನ ಪಕ್ಷಗಳಲ್ಲದೇ ಈ ಚುನಾವಣೆಯಲ್ಲಿ ಒಂದು ಸೀಟನ್ನೂ ಗೆಲ್ಲದೇ ಇರುವ 18 ಪಕ್ಷಗಳು ಈ ಎನ್ ಡಿ ಎ ಸದಸ್ಯ ಪಕ್ಷಗಳಾಗಿವೆ)