"ನಿಮ್ಮಲ್ಲಿ ಯಾರು ಈವರೆಗೆ ಯಾವ ಪಾಪವನ್ನೂ ಎಸಗಿಲ್ಲವೋ ಅಂಥವರು ಈಕೆಯ ಮೇಲೆ ಕಲ್ಲನ್ನು ಎಸೆಯಿರಿ." ಜಾನ್‌, 8:6-7

who-is-done-no-wrong-throw-stone-to-her, "ನಿಮ್ಮಲ್ಲಿ ಯಾರು ಈವರೆಗೆ ಯಾವ ಪಾಪವನ್ನೂ ಎಸಗಿಲ್ಲವೋ ಅಂಥವರು ಈಕೆಯ ಮೇಲೆ ಕಲ್ಲನ್ನು ಎಸೆಯಿರಿ." ಜಾನ್‌, 8:6-7

"ನಿಮ್ಮಲ್ಲಿ ಯಾರು ಈವರೆಗೆ ಯಾವ ಪಾಪವನ್ನೂ ಎಸಗಿಲ್ಲವೋ  ಅಂಥವರು ಈಕೆಯ ಮೇಲೆ ಕಲ್ಲನ್ನು ಎಸೆಯಿರಿ."  ಜಾನ್‌, 8:6-7

"ನಿಮ್ಮಲ್ಲಿ ಯಾರು ಈವರೆಗೆ ಯಾವ ಪಾಪವನ್ನೂ ಎಸಗಿಲ್ಲವೋ

ಅಂಥವರು ಈಕೆಯ ಮೇಲೆ ಕಲ್ಲನ್ನು ಎಸೆಯಿರಿ."

ಜಾನ್‌, 8:6-7

 

"ಮೊದಲ ಕಲ್ಲಿನ ಎಸೆತ"

ವ್ಯಕ್ತಿ- ಸಮಾಜ ಎದುರಿಸಬೇಕಾದ ನೈತಿಕ ಮತ್ತು ವಿವೇಕದ ಪ್ರಶ್ನೆ

ರೇನೆ ಗಿರಾರ್ಡ್‌

ಈ ಪ್ರಬಂಧವು ಸಾಮೂಹಿಕ ಕಲ್ಲೆಸೆತ ಎನ್ನುವ ಅತ್ಯಂತ ಅಹಿತಕರವಾದ ವಿಷಯದ ಸುತ್ತ ಸುತ್ತುವ ಎರಡು ಪಠ್ಯಗಳನ್ನು ಚರ್ಚಿಸಲಿದೆ. ಹಾದರದಲ್ಲಿ ತೊಡಗಿದ್ದ ಮಹಿಳೆಯ ಮೇಲೆ ನಡೆಯಲಿದ್ದ ಸಾಮೂಹಿಕ ಕಲ್ಲೆಸೆತವನ್ನು ತಪ್ಪಿಸುವ ಏಸುಕ್ರಿಸ್ತನ ನಡತೆಯನ್ನು ವಿವರಿಸುವ ಮೊದಲ ಪಠ್ಯವನ್ನು ಸಂತ ಜಾನ್‌ನ ಸತ್ಯಸಂದೇಶದಿಂದ ತೆಗೆದುಕೊಳ್ಳಲಾಗಿದೆ.

ಹಾದರದಲ್ಲಿ ನಿರತ ಮಹಿಳೆಯೊಬ್ಬಳನ್ನು ಎಳೆದೊಯ್ಯುತ್ತಿದ್ದ ಪಂಡಿತರು, ಪ್ರಾಜ್ಞ ಪುರಜನರು ಆಕೆಯನ್ನು ಎಲ್ಲರೆದುರು ನಿಲ್ಲಿಸಿದರು. ಜೀಸಸ್‌ನನ್ನು ಉದ್ದೇಶಿಸಿ ಹೇಳಿದರು: "ಈ ಹೆಂಗಸು ಹಾದರದಲ್ಲಿ ತೊಡಗಿರುವಾಗಲೇ ಸಿಕ್ಕಿ ಬಿದ್ದಿದ್ದಾಳೆ. ‘ನೀತಿ ಸಂಹಿತೆ’ಯಲ್ಲಿ ಮೋಸೆಸ್ ಆಜ್ಞಾಪಿಸಿರುವಂತೆ ಈಕೆಗೆ ಕಲ್ಲು ಹೊಡೆಯಬೇಕು. ಈ ಬಗ್ಗೆ ನೀವೇನು ಹೇಳುತ್ತೀರಿ?, ಎಂದು ಕೇಳಿದರು.

ಈ ಪ್ರಶ್ನೆಯನ್ನು ಕೇಳುವ ಮೂಲಕ ಆತನನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿ, ದೂರುವುದು ಅವರ ಉದ್ದೇಶವಾಗಿತ್ತು. ಜೀಸಸ್‌ ನಿಧಾನಕ್ಕೆ ನೆಲಕ್ಕೆ ಬಾಗಿದವನೆ ಮಣ್ಣಿನಲ್ಲಿ ಬೆರಳುಗಳಿಂದ ಚಿತ್ರ ಬಿಡಿಸತೊಡಗಿದ. ಪ್ರಶ್ನೆಗೆ ಉತ್ತರ ಹೇಳುವಂತೆ ಜನರು ಒತ್ತಾಯಿಸತೊಡಗಿದಾಗ ಮುಖವನ್ನು ಎತ್ತಿದವನೆ ಹೇಳಿದ:

"ನಿಮ್ಮಲ್ಲಿ ಯಾರು ಈವರೆಗೂ ಯಾವ ಪಾಪವನ್ನೂ ಎಸಗಿಲ್ಲವೋ ಅಂಥವರು ಈಕೆಯ ಮೇಲೆ ಮೊದಲ ಕಲ್ಲನ್ನು ಎಸೆಯಿರಿ". ಆತ ಮತ್ತೆ ಮಣ್ಣಿನಲ್ಲಿ ಚಿತ್ರ ಬರೆಯುವ ಕಾಯಕವನ್ನು ಮುಂದುವರೆಸಿದ. ನೆರೆದವರಲ್ಲಿ ಒಬ್ಬೊಬ್ಬರೆ ಜಾಗ ಖಾಲಿ ಮಾಡತೊಡಗಿದರು. ಕೊನೆಗೆ ಆ ಹೆಣ್ಣು ಮತ್ತು ಜೀಸಸ್‌ ಮಾತ್ರ ಉಳಿದರು. ಮುಖವನ್ನು ಎತ್ತಿದ ಏಸು ಆಕೆಗೆ ಕೇಳಿದ:

"ಹೆಣ್ಣೆ, ಎಲ್ಲಿ ಹೋದರು ಬಂದವರೆಲ್ಲ? ಯಾರೂ ನಿನ್ನತ್ತ ಕಲ್ಲು ಬೀಸಲಿಲ್ಲವೆ?"

"ಇಲ್ಲ, ಮಹಾನುಭಾವರೆ", ಮಹಿಳೆ ಹೇಳಿದಳು.

"ನಾನು ಕೂಡ ನಿನ್ನತ್ತ ಕಲ್ಲು ಬೀಸಲಾರೆ. ನೀನಿನ್ನು ಹೋಗಬಹುದು. ಆದರೆ, ಇನ್ನು ಮುಂದೆ ಪಾಪ ಮಾಡುವುದನ್ನು ನಿಲ್ಲಿಸು. (ಜಾನ್ 8.3.11)

ಹಾದರ ಮಾಡಿದರೆ ಕಠಿಣ ಶಿಕ್ಷೆ ಎಂಬ ನಿಯಮ ಕೇವಲ ಹೆಣ್ಣಿಗೆ ಮಾತ್ರ ಅನ್ವಯಿಸಲಾಗುತ್ತದೆ. ಏಸುವಿನ ಕಾಲದಲ್ಲಿ ಈ ವಿಷಯ ವಿವಾದಾಸ್ಪದವಾಗಿತ್ತು. ಇಂದಿಗೂ ಹಾಗೆಯೇ ಇದೆ. ಆದ್ದರಿಂದಲೇ ಏಸು ಅತ್ಯಂತ ಸಂದಿಗ್ಧತೆಗೆ ಸಿಲುಕಿದ್ದ. ತನ್ನ ತತ್ತ್ವಗಳನ್ನು ಬಲಿಕೊಡದೆ ಆತ ಕಲ್ಲು ಬೀಸುವ ಶಿಕ್ಷೆಯನ್ನು ಕ್ಷಮಿಸಲಾರ. ಆದರೆ, ಅದನ್ನಾತ ವಿರೋಧಿಸಿದರೆ ಕಾನೂನು ಉಲ್ಲಂಘಿಸಿದ ಆರೋಪಕ್ಕೆ ಒಳಗಾಗುತ್ತಾನೆ. ಆತನನ್ನು ಪ್ರಶ್ನಿಸುವವರು ಒತ್ತಡ ಹೇರಿದ ಮೇಲೆ ಆತ ಹೇಳುವ ಮಾತುಗಳು-ಮ್ಯಾಥು, ಲೂಕ, ಮಾರ್ಕ್‌ ಮತ್ತು ಜಾನ್‌ ಹೀಗೆ ನಾಲ್ಕೂ ಸತ್ಯಸಂದೇಶಗಳಲ್ಲಿಯೂ ಪ್ರಸಿದ್ಧವಾದುದಾಗಿದೆ:

"ನಿಮ್ಮಲ್ಲಿ ಯಾರು ಈವರೆಗೆ ಯಾವ ಪಾಪವನ್ನೂ ಎಸಗಿಲ್ಲವೋ

ಅಂಥವರು ಈಕೆಯ ಮೇಲೆ ಕಲ್ಲನ್ನು ಎಸೆಯಿರಿ."

ವಿಶ್ವದ ಎಲ್ಲ ಭಾಷೆಗಳಲ್ಲಿಯೂ ಕ್ರಿಸ್ತ ನಂಬಿಕೆಯ ಹಳೆಯ ಜನರಲ್ಲಿ ಮೊದಲ ಕಲ್ಲು, ಮೊದಲ ಕಲ್ಲು ಹಾಕು ಎಂಬ ನುಡಿಗಟ್ಟು ಜನಜನಿತ. ಕಲ್ಲು ಹೊಡೆಯುವ ಸಂಪ್ರದಾಯ ಕಣ್ಮರೆಯಾಗಿರುವ ಸಮಾಜಗಳಲ್ಲಿ ಈ ನುಡಿಗಟ್ಟು ಯಾವ ಬಗೆಯ ಅರ್ಥವನ್ನು ಹೊಮ್ಮಿಸುತ್ತಿದೆ? ಮೊದಲ ಕಲ್ಲಿನ ಪರಿಕಲ್ಪನೆ ನಿಜಕ್ಕೂ ಅಷ್ಟೊಂದು ಮಹತ್ವದ್ದೇ ಇದನ್ನು ಪರಿಣಾಮಕಾರಿಯಾಗಿ ಹೇಗೆ ತೋರಿಸಬಹುದು? ಅದಕ್ಕೆ ಸತ್ಯಸಂದೇಶದ ಪಠ್ಯ ಮಾತ್ರ ಸಾಲದು.

ಕಾರಣ ಸರಳವಾಗಿದೆ. ಈ ಪ್ರಕರಣದಲ್ಲಿ ಯಾರೂ ಮೊದಲ ಕಲ್ಲನ್ನು ಬಳಸಲೇ ಇಲ್ಲ. ಕಲ್ಲು ಬೀಸುವ ಪ್ರಕ್ರಿಯೆ ನಡೆಯಲೇ ಇಲ್ಲ.

ಸಾಂಕ್ರಾಮಿಕ ನಿವಾರಣೆಗೆ ಮೊದಲ ಕಲ್ಲು:

ಮಾರಣಾಂತಿಕ ಕಾಯಿಲೆಯ ಮುಖವಾಡದಲ್ಲಿರುವ ಮುದುಕ!

ಎಫಿಸಸ್ ನಗರದ ಮುದುಕ ಭಿಕ್ಷುಕನೊಬ್ಬನಿಗೆ ಕಲ್ಲು ಬೀಸುವ ಕಥೆಯನ್ನು ಹೇಳುವ ಈ ಪಠ್ಯವು ನಾಸ್ತಿಕ (ಪೇಗನ್) ಕಥನವಾಗಿದೆ. ಎರಡನೆಯ ಶತಮಾನದಲ್ಲಿ ಜರುಗಿದ ಈ ಭಯಾನಕ ಕೃತ್ಯದ ರೂವಾರಿ ತ್ಯಾನಾದ ಪ್ರಸಿದ್ಧ ಆಧ್ಯಾತ್ಮಿಕ ಗುರು ಅಪೊಲೊನಿಯಸ್ ಆಗಿದ್ದಾನೆ. ಕ್ರಿಸ್ತನ ಪವಾಡಗಳಿಗಿಂತ ಈತನ ಪವಾಡಗಳ ಮಹಿಮೆ ಹೆಚ್ಚು ಎಂದು ಪೇಗನ್ ಬಳಗದ ನಂಬಿಕೆಯಾಗಿತ್ತು. ಇವುಗಳಲ್ಲಿ ಅತ್ಯಂತ ವಿಶಿಷ್ಟವಾದುದೆಂದರೆ ಎಫಿಸಸ್ ಘಟನೆಯೇ ಆಗಿದೆ. ಕ್ರಿಸ್ತ ಒಮ್ಮೆ ಒಬ್ಬರನ್ನು ಮಾತ್ರ ಶಮನಗೊಳಿಸುತ್ತಿದ್ದರೆ ಈ ಗುರು ಬಡ ಭಿಕ್ಷುಕನಿಗೆ ಕಲ್ಲೆಸೆತದ ಶಿಕ್ಷೆ ನೀಡುವ ಮೂಲಕ ಇಡೀ ನಗರವನ್ನೇ ಸಾಂಕ್ರಾಮಿಕದಿಂದ ಶಮನಗೊಳಿಸಿದ.

ಮೂರನೆಯ ಶತಮಾನದ ಗ್ರೀಕ್ ಲೇಖಕ ಫಿಲೋಸ್ಟ್ರಟಸ್ ಬರೆದ ಅಪೊಲೊನಿಯಸ್‌ನ ಜೀವನಗಾಥೆಯಲ್ಲಿ ಈ ಸಾಮೂಹಿಕ ಹತ್ಯಾಕೃತ್ಯದ ಕುರಿತು ಒಂದು ಅಧ್ಯಾಯವೇ ಇದೆ.

ಎಫಿಸಸ್ ನಗರದಲ್ಲಿ ಪ್ಲೇಗ್ ಸಾಂಕ್ರಾಮಿಕ ಹರಡಿದಾಗ ಜನರನ್ನು ಈ ರೋಗದಿಂದ ಕಾಪಾಡುವಂತೆ ಅಪೊಲೊನಿಯಸ್‌ನನ್ನು ಕೇಳಿಕೊಳ್ಳಲಾಯಿತು. ಒಪ್ಪಿದ ಆತ ಇಡೀ ಊರಿನ ಜನರು ನಾಟಕ ಸಭಾಂಗಣಕ್ಕೆ ಬರುವಂತೆ ಸೂಚಿಸಿದ. ಅಲ್ಲಿ ರಕ್ಷಕ ದೇವತೆಯನ್ನು ಪ್ರತಿಷ್ಠಾಪಿಸಲಾಗಿತ್ತು. ಅಪೊಲೊನಿಯಸ್, ಆ ಸಂದಣಿಯಲ್ಲಿ ಹಣ್ಣುಹಣ್ಣಾದ ಮುದುಕನನ್ನು ಕಂಡ. ಹರಕಲು ಬಟ್ಟೆ, ಕೈಯಲ್ಲಿನ ಒಡಕಲು ಡಬ್ಬದಲ್ಲಿ ರೊಟ್ಟಿಯ ತುಣುಕು ಹಿಡಿದು ನಿಂತಿದ್ದ ಮುದುಕ ಕುರುಡನೇನೋ ಎಂಬಂತೆ ಕಣ್ಣು ಮಿಟುಕಿಸುತ್ತಿದ್ದ. ಮುದುಕನ ಬಳಿ ಸುಳಿದ ಅಪೊಲೊನಿಯಸ್ ನೆರೆದ ಜನರು ಮುದುಕನನ್ನು ವೃತ್ತದಂತೆ ಸುತ್ತುವರೆದು, ಕಲ್ಲುಗಳನ್ನು ತೆಗೆದುಕೊಂಡು ಹೊಡೆಯುವಂತೆ ಅಣತಿ ನೀಡಿದ. ಬೆರಗಾದ ಜನ, ಮುದುಕನನ್ನು ಕ್ಷಮಿಸಿ ಬಿಟ್ಟುಬಿಡುವಂತೆ ಬೇಡಿಕೊಂಡರು. ಅವರ ಬೇಡಿಕೆಗೆ ಕರಗದ ಗುರು, ದೇವರ ವೈರಿಯಾದ ಈತನನ್ನು ಹೊಡೆದು ಸಾಯಿಸಿ ಎಂದು ಆದೇಶಿಸಿದ. ಕೆಲವರು ಕಲ್ಲು ಹೊಡೆಯಲು ಆರಂಭಿಸಿದ್ದೇ ಆವರೆಗೆ ಕುರುಡನಂತೆ ಕಾಣುತ್ತಿದ್ದ ಮುದುಕ ಕಣ್ಣು ಬಿಟ್ಟಾಗ ಆತನ ಕಣ್ಣುಗಳಲ್ಲಿ ಬೆಂಕಿ ತುಂಬಿಕೊಂಡಿರುವುದು ಕಾಣಿಸಿತು. ಆತನೊಬ್ಬ ರಕ್ಕಸನೆಂದು ಪುರಜನರಿಗೆ ಗೊತ್ತಾಯಿತು. ನಂತರ ಜನ ಕಲ್ಲು ಎಸೆಯಲು ಪ್ರಾರಂಭಿಸಿದರು. ಕಲ್ಲುಗಳು ಗುಡ್ಡದಂತೆ ಮುದುಕನ ಸುತ್ತ ಬಿದ್ದವು. ತುಸು ಹೊತ್ತಾದ ಮೇಲೆ ಕಲ್ಲು ಬೀಸುವುದನ್ನು ನಿಲ್ಲಿಸುವಂತೆ ಹೇಳಿದ ಅಪೊಲೊನಿಯಸ್, ಕಲ್ಲಿನ ಗುಡ್ಡೆಯನ್ನು ಸರಿಸಲು ಹೇಳಿದ. ಅಲ್ಲಿ ತಮ್ಮ ಕಲ್ಲೆಸೆತದಿಂದ ಸತ್ತು ಬಿದ್ದ ಭಾರಿ ಪ್ರಾಣಿಯನ್ನು ಜನ ಕಂಡರು. ಮುದುಕ ಕಣ್ಮರೆಯಾಗಿ ಆತನ ಸ್ಥಾನದಲ್ಲಿ ಸಿಂಹದಂತೆ ಕಾಣುವ ಬೇಟೆ ನಾಯಿ ಗೋಚರಿಸುತ್ತಿತ್ತು. ಬಳಿಕ ರಕ್ಕಸನ ವಧೆಯಾದ ಸ್ಥಳದಲ್ಲಿ ರಕ್ಷಕ ದೇವತೆ ಹರ್ಕ್ಯೂಲಿಸ್‌ನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ಇದಕ್ಕಿಂತ ಪವಾಡವನ್ನು ನಿರೀಕ್ಷಿಸುವುದು ಸಾಧ್ಯವೇ ಇಲ್ಲ. ಈ ಕೃತಿಯ ಲೇಖಕ ಕ್ರಿಶ್ಚಿಯನ್ ಆಗಿದ್ದರೆ ಇಡೀ ಪ್ರಸಂಗವೇ ಕಲ್ಪಿತಕಪೋಲವೆಂದು ತಳ್ಳಿಹಾಕಿಬಿಡುತ್ತಿದ್ದರು. ಫಿಲೋಸ್ಟ್ರಟಸ್ ಕೂಡ ಕ್ರಿಶ್ಚಿಯಾನಿಟಿ ವಿರುದ್ಧದ ಪ್ರಚಾರಕನೇ. ಹೊಸ ಧರ್ಮವಾಗಿ ಬೆಳೆಯುತ್ತಿದ್ದ ಕ್ರಿಶ್ಚಿಯಾನಿಟಿಯಷ್ಟೇ ಹಳೆಯ ಪೇಗನ್ ಧಾರ್ಮಿಕ ನಂಬಿಕೆ ಕೂಡ ಸರ್ವಶಕ್ತವಾದುದು ಎಂದು ಆತ ನಿರೂಪಿಸಬೇಕಿತ್ತು. ಇದೀಗ ತಾನೇ ಓದಿದ ಪ್ರಸಂಗದಲ್ಲಿನ ಮೊದಲ ಕಲ್ಲು, ಘಟಿಸುವ ಪವಾಡವನ್ನು ಅರಿತುಕೊಳ್ಳಲು ಸಹಕಾರಿಯಾಗಿದೆ. ಹಣ್ಣು ಮುದುಕನಿಗೆ ಕಲ್ಲು ಎಸೆಯಲು ಅಣತಿ ನೀಡಿದಾಗ ಜನ ಗುರುವಿನ ಮಾತಿನ ವಿರುದ್ಧವೇ ತಿರುಗಿ ಬೀಳುವುದು ಕೂಡ ಮಹತ್ವದ ಅಂಶವಾಗಿದೆ. ಮುದುಕ ನೋಡಲು ಅಸಹ್ಯವಾಗಿದ್ದರೂ ಕೂಡ ಆತ ತಮ್ಮ ಸಹಜೀವಿ ಎಂದು ಪುರಜನರು ಭಾವಿಸಿದ್ದಾರೆ. ಅಪೊಲೊನಿಯಸ್‌ನ ಸೂಕ್ಷ್ಮರಹಿತತೆಗಿಂತ ಜನರ ಸಕಾರಣ ಆಧುನಿಕ ಓದುಗರನ್ನು ಸೆಳೆಯುತ್ತದೆ.

ಮುದುಕನನ್ನು ಕಲ್ಲು ಬೀಸಿ ಸಾಯಿಸಿದ ಎಫಿಸಸ್‌ನ ನಾಗರಿಕರು ಇದ್ದಕ್ಕಿದ್ದಂತೆ ತಮ್ಮಲ್ಲಾದ ರೂಪಾಂತರದಿಂದ ಖೇದಗೊಂಡಿದ್ದಾರೆ. ಒಂದುಕ್ಷಣದ ಹಿಂದೆ ಸಜ್ಜನರಾಗಿದ್ದ ಜನ ಅಮಾನುಷವಾಗಿ ಬದಲಾಗುವುದನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಈ ಪಠ್ಯವೇ ಅದಕ್ಕೆ ಉತ್ತರವನ್ನು ನೀಡುತ್ತದೆ. ಮೊದಲ ಕಲ್ಲಿನ ಮುಂಚೆ ಎಲ್ಲವೂ ಸಂದೇಹಾಸ್ಪದವಾಗಿತ್ತು. ಎಫಿಸಸ್ ನಾಗರಿಕರ ಕಳವಳ ಹೆಚ್ಚಾಗಿದ್ದರೆ ಅಪೊಲೊನಿಯಸ್‌ನ ವಿಚಾರಕ್ಕೆ ಸೋಲಾಗುತ್ತಿತ್ತು. ಒಂದೊಮ್ಮೆ ಮೊದಲ ಕಲ್ಲು ಬೀಸಲು ಅಗತ್ಯವಾಗುವ ಕಸುವನ್ನು ಆತ ತುಂಬಿದ್ದೆ ಸನ್ನಿವೇಶವೇ ಬದಲಾಯಿತು.

ಮೊದಲ ಕಲ್ಲು ಬೀಸುವುದು ಏಕೆ ಕಷ್ಟವಾಗುತ್ತದೆ? ಉತ್ತರ ಸರಳವಾಗಿದೆ. ಅನುಕರಿಸಲು ಮಾದರಿಗಳು ಇಲ್ಲದಿರುವುದು. ಮಾದರಿಗಳು ಇದ್ದಷ್ಟು ಕೆಲಸ ನಿಸೂರಾಗುತ್ತದೆ. ಮೊದಲ ಕಲ್ಲು ಬಿದ್ದಿದ್ದೆ ಎಲ್ಲ ಕಾರಣ ಮತ್ತು ಕರುಣೆಗಳು ಹಿಂದೆ ಸರಿದು ಹಿಂಸೆ ತಾಂಡವವಾಡುತ್ತದೆ. ಅಪೊಲೊನಿಯಸ್‌ನ ಚಿಂತೆ ದೂರವಾಗುತ್ತದೆ.

ಸಮಷ್ಟಿ ಕಲ್ಲೆಸೆತದ ಕ್ರಿಯೆಯ ಕಾರ್‍ಯವಿಧಾನ ಅಥವ ಅನುಕರಣಶೀಲತೆಯನ್ನು ವಿಶ್ಲೇಷಿಸಲು ಜೀಸಸ್ ಅನುಕರಣೆ ಇತ್ಯಾದಿ ಅಮೂರ್ತ ಪದಗಳ ಬೆನ್ನು ಹತ್ತಲಿಲ್ಲ. ಆತ ಹೇಳುವುದೆಲ್ಲ ಮೊದಲ ಕಲ್ಲಿನ ಬಗ್ಗೆ ಮಾತ್ರ. ಕಲ್ಲೆಸೆತದ ಆಚರಣೆ ಕಣ್ಮರೆಯಾಗಿದ್ದರೂ ಪರಿಕಲ್ಪನೆ ಉಳಿಯಲು ಕಾರಣ ಅದು ಅಲಂಕಾರಿಕ ಉಪಮೆಯಾಗಿರುವುದಲ್ಲ. ಹಿಂಸೆಯ ಅನುಕರಣೆಯ ಹಿಂದಿರುವ ವಿಚಿತ್ರ ಶಕ್ತಿ ಎನ್ನುವುದಾಗಿದೆ. ಹಿಂಸೆಯ ಸ್ವರೂಪವು ದೈಹಿಕವಾಗಿಲ್ಲದೆ, ಮಾನಸಿಕ ನೆಲೆಯಲ್ಲಿರುವ ಸಮಾಜದಲ್ಲಿ ಈ ವಿಚಿತ್ರಶಕ್ತಿಯು ಪುರಾತನ ಸಮಾಜದಲ್ಲಿದ್ದಷ್ಟೇ ಪ್ರಬಲವಾಗಿರುತ್ತದೆ.

ಇಲ್ಲಿನ ಎರಡು ಪಠ್ಯಗಳಲ್ಲಿ ಸನ್ನಿವೇಶಗಳು ಬೇರೆಯಾಗಿವೆ, ಗುರಿಗಳೂ ಬೇರೆಯೇ ಆಗಿವೆ. ಕ್ರಿಯೆಗೆ ಸನ್ನದ್ಧರಾಗಿಲ್ಲದ ಸಮೂಹಕ್ಕೆ ಅಪೊಲೊನಿಯಸ್ ಕಲ್ಲೆಸೆವ ಕ್ರಿಯೆ ಕೈಗೊಳ್ಳಲು ಸೂಚಿಸುತ್ತಿದ್ದಾನೆ. ಅದೇ ಕ್ರಿಸ್ತ ಕಲ್ಲೆಸೆತಕ್ಕೆ ಸಿದ್ಧವಾಗಿರುವ ಜನರನ್ನು ತಡೆಯಲು ಹೊರಟಿದ್ದಾನೆ. ಕ್ರಿಸ್ತನ ಕಥೆಯಲ್ಲಿ ಕಲ್ಲೆಸೆತಕ್ಕೆ ಹೆಣ್ಣಿನ ಹಾದರ ಕಾರಣವಾಗಿದ್ದರೆ, ಎರಡನೆಯ ಕಥೆಯಲ್ಲಿ ರಕ್ಕಸನಾದ ಹಣ್ಣು ಮುದುಕ ಸಂಹಿತೆಯಂತೆಯೇ ಕಲ್ಲೆಸೆತಕ್ಕೆ ಅರ್ಹನಾಗಿದ್ದಾನೆ.

ನಮ್ಮ ಬಹುಪಾಲು ಕ್ರಿಯೆಗಳು ಅನುಕರಣೆಯಾಗಿದ್ದು ಯಾಂತ್ರಿಕವಾಗಿರುತ್ತವೆ. ಅವನ್ನು ಮಾಡುವುದು ಅಪ್ರಜ್ಞಾಪೂರ್ವಕವಾಗಿ, ಎಲ್ಲರೂ ಮಾಡಲು ಸಿದ್ಧವಿರುವುದನ್ನೇ ಮಾಡಲು.

ಅನುಕರಣಶೀಲತೆಯ ಪ್ರಕ್ರಿಯೆಯ ಹಿಂದಿರುವ ಭ್ರಮೆಯನ್ನು ಆಧುನಿಕ ಅರ್ಥವು ಒಡೆಯುತ್ತದೆ. ಮೊದಲ ಕಲ್ಲನ್ನು ಎಸೆಯುವ ಮೊದಲು ಎಫ್‌ಸಿಸ್‌ನ ನಾಗರಿಕರು ಧಿಕ್ಕರಿಸಿದ್ದು ಈ ಭ್ರಮೆಯನ್ನೇ. ಭಿಕ್ಷುಕ ಪ್ಲೇಗ್‌ನ ಹೆಮ್ಮಾರಿಯಾಗಿದ್ದಾನೆ ಎಂದು ನಂಬಲು ಅವರು ಸಿದ್ಧರಿರಲಿಲ್ಲ. ಕಲ್ಲೆಸೆತ ಆರಂಭವಾದದ್ದೇ ಅಪೊಲೊನಿಯಸ್ ಹೇಳಿದ್ದು ಸತ್ಯವೆಂದು ನಂಬಲು ಆರಂಭಿಸಿದರು. ಉನ್ಮಾದಗೊಂಡ ಸಮಾಜವೊಂದರಲ್ಲಿ ಬಲಿಪಶುವನ್ನಾಗಿಸುವ ಕ್ರಿಯೆ ಎಷ್ಟು ಪ್ರಖರವಾಗಿದೆಯೆಂದರೆ ಪ್ರತಿ ವ್ಯಕ್ತಿಯು ತಾನೇ ವೈಯಕ್ತಿಕವಾಗಿ ತನ್ನ ವೈರಿಯನ್ನು ಮುಗಿಸುತ್ತಿದ್ದೇವೆ ಎಂದುಕೊಳ್ಳುತ್ತಾನೆ. ಹಿಂಸೆಯ ಬಳಿಕ ಇಡೀ ಸಮುದಾಯದ ಮೇಲೆ ಶಾಂತಿ ನೆಲೆಸುತ್ತದೆ. ಕಲ್ಪಿತ ಕಥನ ಮತ್ತು ಆಚರಣೆಗಳ ಸೂಕ್ಷ್ಮ ಅಧ್ಯಯನದಿಂದ ಇಂತಹ ಒಳನೋಟಗಳು ಲಭಿಸಬಲ್ಲವು. ಭಯಾನಕವಾದ ಹಿಂಸೆಯ ಬಳಿಕ ಶಾಂತಿ-ಶಮನಗಳನ್ನು ಪಡೆದ ಫಲಾನುಭವಿಗಳು, ಬಲಿಪಶುವೆಂದು ಗುರುತಿಸಿದ, ಶಾಂತಿಯನ್ನು ತಂದವನಿಗೆ ಋಣಿಗಳಾಗಿರುತ್ತಾರೆ.

ಕಲ್ಲೆಸೆತದ ಶಿಕ್ಷೆಗೆ ವಿರೋಧಿಯಾಗಿರುವ ಜೀಸಸ್‌ನ ಬೋಧನೆಯು ಬರುತ್ತಿರುವುದು ಸಂಹಿತೆಯೊಳಗಿನ ಚೈತನ್ಯದಿಂದಲೇ. ಜೀಸಸ್ ಹಾದರದ ಹೆಣ್ಣಿನ ಪರ ವಹಿಸಿದ್ದರಿಂದ, ಆತ ಕೂಡ ಅಪೊಲೊನಿಯಸ್‌ನಂತೆಯೇ ಜನರನ್ನು ಚತುರತೆಯಿಂದ ಪಳಗಿಸುವವನು ಎಂದು ತಿಳಿಯಬಾರದು. ನಿಜ ಹೇಳಬೇಕೆಂದರೆ ನಿಯಮವೋ ಎನ್ನುವಂತೆ ಸಮೂಹದ ಎದುರು ಜೀಸಸ್ ಎಂದೂ ಯಶಸ್ವಿಯಾದವನಲ್ಲ. ಆತನ ಈ ವೈಫಲ್ಯವೇ ಸ್ವತಃ ತಾನೇ ಕಲ್ಲೆಸೆತಕ್ಕೆ, ಮುಂದೆ ಶಿಲುಬೆಗೇರುವ ಕ್ರಿಯೆಗೆ ಗುರಿಯಾಗುವಂತೆ ಮಾಡಿತು. ಪೇಗನ್ ಪಠ್ಯದಲ್ಲಿ ಆತನ ಸಾಮ್ಯರೂಪಿಯೆಂದರೆ ಹತ್ಯೆಗೀಡಾದ ಭಿಕ್ಷುಕನೇ ಆಗಿದ್ದಾನೆ.

(ವರ್ಣಚಿತ್ರ: ಮೊದಲ ಕಲ್ಲಿನ ನಿಯಮ ಬರೆಯುತ್ತಿರುವ ಜೀಸಸ್‌. ಕಲಾವಿದ: ಪೀಟರ್‌ ವ್ಯಾನ್‌ ಲಿಂಟ್‌: 1609-1690)