ಒಕ್ಕಲಿಗರ ಸೀಮೆಯಲ್ಲಿ "ಧರ್ಮ"ಸಂಕಟ..!

ಒಕ್ಕಲಿಗರ ಸೀಮೆಯಲ್ಲಿ "ಧರ್ಮ"ಸಂಕಟ..!

ಸಿ.ರುದ್ರಪ್ಪ 

ಎಚ್ ಡಿಕೆ, ಈಗ ಹಿಂದೂ ಬಲವರ್ಧಿತ ನಾಯಕ :



      ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕ ಎಚ್ .ಡಿ.ಕುಮಾರಸ್ವಾಮಿ ಯವರು ರಾಜ್ಯದಲ್ಲಿ ಆರಂಭವಾಗುವ ಮತ್ತೊಂದು ಸುತ್ತಿನ ರಾಜಕೀಯ ಸಮರಕ್ಕೆ ಬಲವಾದ ರಣ ನೀತಿಯೊಂದನ್ನು ಅಂತಿಮಗೊಳಿಸಲು ಕ್ಷಿಪ್ರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.ಒಂದು ಹಂತದಲ್ಲಿ ಆರ್ಎಸ್ಎಸ್ ನ ಉಗ್ರ ಟೀಕಾಕಾರರಾಗಿದ್ದ ಮತ್ತು ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರಗಳ ಯುಗ ಪ್ರವರ್ತಕರಾಗಿರುವ ಎಚ್.ಡಿ.ಕುಮಾರಸ್ವಾಮಿಯವರು ಇತ್ತೀಚಿಗೆ "ಹಿಂದುತ್ವದ ಪ್ರಯೋಗ ಶಾಲೆಯ"ಪ್ರವರ್ತಕ ಕಲ್ಲಡ್ಕ ಪ್ರಭಾಕರ ಭಟ್ಟರೊಂದಿಗೆ ಅತ್ಯಂತ ಸಂಭ್ರಮದಿಂದ ಫೋಟೋ ತೆಗೆಸಿಕೊಂಡು ಅವರ ಸಮಾಜ ಸೇವೆಯನ್ನು ಮುಕ್ತ ಕಂಠದಿಂದ ಹೊಗಳಿ ,"ಜೈ ಶ್ರೀರಾಮ್ "ಘೋಷಣೆಯನ್ನು ಕೂಗಿರುವ ದೃಶ್ಯ ಎಲ್ಲರ ಗಮನವನ್ನು ಸೆಳೆದಿತ್ತು ಇದುವರೆಗೆ ,ರಾಷ್ಟ್ರ ಮಟ್ಟದಲ್ಲಿ ಕೋಮು ವಿರೋಧಿ ರಾಜಕಾರಣದ ಭೀಷ್ಮ ಪಿತಾಮಹರಂತಿದ್ದ ಮಾಜಿ ಪ್ರಧಾನಿ ಎಚ್ .ಡಿ .ದೇವೇಗೌಡರ ನೇತೃತ್ವದಲ್ಲಿ ಗೌಡರ ರಾಜ ಪರಿವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಗ್ರೂಪ್ ಫೋಟೋ ತೆಗೆಸಿಕೊಂಡಿರುವುದೂ ಕೂಡ ರಾಜ್ಯದ ಜನರ ಅದರಲ್ಲೂ ವಿಶೇಷವಾಗಿ ಒಕ್ಕಲಿಗರ ಸೀಮೆಯ ಕುತೂಹಲವನ್ನು ಕೆರಳಿಸಿದೆ.


      ಕುಮಾರಸ್ವಾಮಿಯವರು "ಯು.ಆರ್.ಅನಂತಮೂರ್ತಿ ಯಾರು?ಸೆಕ್ಯುಲರಿಸಂ ಅಂದರೆ ಏನು?"ಎಂದು 2006 ರಲ್ಲಿ ಬಿಜೆಪಿ ಜತೆಗೆ 20:20 ಸರ್ಕಾರದ ಮುಖ್ಯಮಂತ್ರಿಯಾದಾಗ ಪ್ರಶ್ನಿಸಿದ್ದರಲ್ಲಾ?ಅದೇ ಸ್ಥಿತಿಗೆ ಅವರು ಈಗಾಗಲೇ ಮರಳಿಬಿಟ್ಟಿದ್ದಾರೆ..!ವಿಧಾನ ಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಪ್ರಚಂಡ ಗೆಲವು ಸಾಧಿಸುವ ಮೂಲಕ ಅವರ ಎದುರಾಳಿಗಳನ್ನು ಪ್ರಪಾತದ ಅಂಚಿಗೆ ತಳ್ಳಿದ್ದರು.ಜೆಡಿಎಸ್ ಪಕ್ಷದಿಂದ ಸಿದ್ದರಾಮಯ್ಯನವರನ್ನು ಸುಮಾರು 18 ವರ್ಷಗಳ ಹಿಂದೆ ಉಚ್ಚಾಟಿಸುವಾಗ ಅವರೇ ಮುಂದೊAದು ದಿನ ತಮ್ಮ ರಾಜಕೀಯ ಅಸ್ತಿತ್ವಕ್ಕೆ ಒಂದು ದೊಡ್ಡ ಸವಾಲಾಗಬಹುದು ಎಂದು ಎಚ್.ಡಿ .ದೇವೇಗೌಡರು ಖಂಡಿತಾ ನಿರೀಕ್ಷೆ ಮಾಡಿರಲಿಲ್ಲ.ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕರ ಸಂಖ್ಯಾ ಬಲ ಕುಸಿತ;ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿರುವ ರಾಮನಗರ ಕ್ಷೇತ್ರದಲ್ಲಿ ಪುತ್ರನ ಸೋಲಿನ ಆಘಾತ ಮತ್ತು ರಾಜ್ಯ ರಾಜಕಾರಣದಲ್ಲಿ ಬೃಹದಾಕಾರವಾಗಿ ಅವರಿಸಿಕೊಳ್ಳುತ್ತಿರುವ ಸಿದ್ದರಾಮಯ್ಯನವರು -ಹೀಗೆ ಅತ್ಯಂತ ಪ್ರತಿಕೂಲವಾದ ರಾಜಕೀಯ ವಾತಾವರಣದಲ್ಲಿ ಕುಮಾರಸ್ವಾಮಿಯವರಿಗೆ ಹೆಚ್ಚಿನ ಆಯ್ಕೆಗಳು ಇರಲಿಲ್ಲ.ತತ್ವ-ಸಿದ್ಧಾಂತಗಳು;ಸರಿ-ತಪ್ಪುಗಳ ಜಿಜ್ಞಾಸೆಯಲ್ಲಿ ಕಾಲಹರಣ ಮಾಡುವಂತಿರಲಿಲ್ಲ.ಪ್ರಧಾನಿ ಸ್ಥಾನವನ್ನು ಕಳೆದುಕೊಳ್ಳುವಾಗ ದೇವೇಗೌಡರು ದೂಳಿನಿಂದ ಮತ್ತೆ ಮೇಲೇಳುವ ಶಪಥ ಮಾಡಿರಲಿಲ್ಲವೇ?.ಕುಮಾರಸ್ವಾಮಿಯವರದ್ದೂ ಬಹುತೇಕ ಅದೇ ಸ್ಥಿತಿಯಾಗಿತ್ತು.ಅವರು ಮತ್ತೆ ಪುಟಿದೆದ್ದು ರಾಜಕೀಯ ಅಖಾಡದಲ್ಲಿ ಆಯಕಟ್ಟಿನ ಜಾಗವೊಂದನ್ನು ತಕ್ಷಣ ಗುರ್ತಿಸಿಕೊಂಡು ಸನ್ನದ್ಧರಾಗಿ ನಿಲ್ಲಲೇಬೇಕಿತ್ತು.ನಾವು ಕೆಲವು ಆರಾಮ ಖುರ್ಚಿಯ ವಿಶ್ಲೇಷಕರು ಕುಮಾರಸ್ವಾಮಿಯವರ ನಿಲುವುಗಳನ್ನೂ ಮತ್ತು ನಡೆಯನ್ನೂ ಒಪ್ಪದೇ ಇರಬಹುದು.ಆದರೆ ರಾಜಕಾರಣದ ಕಟು ವಾಸ್ತವಗಳು ಮತ್ತು ರಾಜನೀತಿಯ ಮಾರ್ಗೋಪಾಯಗಳೇ ಬೇರೆ..ಯುದ್ಧದಲ್ಲಿ,ಪ್ರೀತಿಯಲ್ಲಿ ..ಅದೇ ರೀತಿ ರಾಜಕಾರಣದಲ್ಲಿ ಕೂಡ ಎಲ್ಲವೂ ಸರಿ..!ಒಂದು ಕಾಲದಲ್ಲಿ ಬಿಜೆಪಿಯ ಪೂರ್ವಾಶ್ರಮವಾದ ಜನಸಂಘದ ಉಗ್ರ ಟೀಕಾಕಾರರಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರೇ ಎನ್.ಡಿ.ಎ ತೆಕ್ಕೆಗೆ ಜಾರಿ ವಾಜಪೇಯಿಯವರ ಸಂಪುಟದಲ್ಲಿ  ಮಂತ್ರಿಯಾಗಿರಲಿಲ್ಲವೇ ?


ಮೊದಲಿನ ಕುಮಾರಸ್ವಾಮಿಯಲ್ಲ:


ಅವರು ಈಗ ಮೊದಲಿನ ಕುಮಾರಸ್ವಾಮಿಯವರಲ್ಲ.ಅವರು ಜನರ ಮುಂದೆ ಈಗ ಬಂದರೆ ಅವರ ಹಾವ-ಭಾವ ಮತ್ತು ವಿಚಾರಧಾರೆಗಳು ಸಂಪೂರ್ಣವಾಗಿ ವಿಭಿನ್ನವಾಗಿರುವ ಸಾಧ್ಯತೆಗಳೇ ಹೆಚ್ಚು.ಅವರೀಗ ಭಾರತೀಯ ಸಂಸ್ಕೃತಿ,ಸನಾತನ ಧರ್ಮ,ದೇಶ ಭಕ್ತಿಯನ್ನು ಪ್ರತಿಪಾದಿಸುವ ಮತ್ತು ಬಲಿಷ್ಠ ಭಾರತದ ಕನಸುಗಳನ್ನು ಬಿತ್ತುವ ಹಿಂದೂ ಬಲ ವರ್ಧಿತ ನಾಯಕ."


ಅವರು ಹಿಂದೂ ಬಲವರ್ಧಿತ ನಾಯಕ"ಎಂದು ಹೇಗೆ ಹೇಳುತ್ತೀರಿ.ಅವರು ಈ ಹಿಂದೆ ಕೂಡ ಬಿಜೆಪಿ ಜೊತೆ ಸಮ್ಮಿಶ್ರ ಸರ್ಕಾರವನ್ನು ರಚಿಸಿದ್ದರಲ್ಲಾ ..?ಆಗ ಅವರು ಬಿಜೆಪಿ ವಿಚಾರಧಾರೆಗಳಿಂದ ಅಂತರವನ್ನು ಕಾಯ್ದುಕೊಂಡಿದ್ದರಲ್ಲಾ ..?ಎಂದು ಯಾರಾದರೂ ಕೇಳಬಹುದು?ಆಗ ಹಿಂದುತ್ವ ತನ್ನ ಸಂಪರ್ಕಕ್ಕೆ ಬರುವವರ ಮೈ ಮನಸ್ಸುಗಳನ್ನು ಕ್ಷಣಾರ್ಧದಲ್ಲಿ ಮೆತ್ತಿಕೊಳ್ಳುವ ಜಿಡ್ಡಿನ ಗುಣವನ್ನು ಇನ್ನೂ ಬೆಳೆಸಿಕೊಂಡಿರಲಿಲ್ಲ. ಹಿಂದುತ್ವ,ರಾಷ್ಟ್ರೀಯತೆ ,ದೇಶ ಪ್ರೇಮ -ಇಂತಹ ವಿಚಾರಗಳು ಉಗ್ರ ಅಥವಾ ತೀವ್ರ ಸ್ವರೂಪವನ್ನು ಪಡೆದಿರುವುದು ಮತ್ತು ಧ್ರುವೀಕರಣದ ಶಕ್ತಿಗಳಾಗಿರುವುದು 2014 ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಗಳಾದ ನಂತರವೇ..!


ಉದಯೋನ್ಮುಖ ನಾಯಕ :ಕುಮಾರಸ್ವಾಮಿಯವರಲ್ಲಿ ಆಗುತ್ತಿರುವ ಈ ಬೆಳವಣಿಗೆ ರಾಜ್ಯದ ಜನರನ್ನು ಅದರಲ್ಲೂ ವಿಶೇಷವಾಗಿ ಒಕ್ಕಲಿಗ ಸೀಮೆಯ ಜನರನ್ನು ಧರ್ಮ ಸಂಕಟಕ್ಕೆ ದೂಡಿದೆ.ಒಕ್ಕಲಿಗ ಬಂಧುಗಳು ಕಳೆದ ಚುನಾವಣೆಯಲ್ಲಿ ಮತ್ತೊಬ್ಬ ಉದಯೋನ್ಮುಖ ನಾಯಕ ಡಿ .ಕೆ .ಶಿವಕುಮಾರ್ ಅವರನ್ನು ಸ್ವಲ್ಪ ಮಟ್ಟಿಗೆ ಬೆಂಬಲಿಸಿದ್ದರು.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗುತ್ತಿದ್ದಂತೆ ಒಕ್ಕಲಿಗರ ಸಮಾವೇಶದಲ್ಲಿ "ಎಸ್ .ಎಂ.ಕೃಷ್ಣ ನಂತರ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಯಾಗುವ ಮತ್ತೊಂದು ಅವಕಾಶ ನಮ್ಮ ಸಮುದಾಯಕ್ಕೆ ಬಂದಿದೆ.ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ"ಎಂದು ಮನವಿ ಮಾಡಿದ್ದರು.ಅವರು ಒಕ್ಕಲಿಗರ ಪ್ರಾಬಲ್ಯವಿರುವ ಹಳೇ ಮೈಸೂರು ಪ್ರಾಂತ್ಯದಲ್ಲಿ ಭಾವನಾತ್ಮಕವಾದ ದಾಳಗಳನ್ನು ಉರುಳಿಸಿದ್ದರು.ಹಿರಿಯೂರಿನಲ್ಲಿ ಕೆಂಪೇಗೌಡರ ಜಯಂತಿ ಉತ್ಸವದಲ್ಲಿ "ಬೆಳಕು, ಕಿಟಕಿಗಳ ಮೂಲಕ ಪ್ರವೇಶಿಸುತ್ತಿದೆ.ಬಾಗಿಲನ್ನು ತೆರೆದು (ಅಧಿಕಾರ) ಲಕ್ಷ್ಮಿಯನ್ನು ಸ್ವಾಗತಿಸಿ"ಎಂದು ಆದಿಚುಂಚನಗಿರಿ ಮತ್ತು ನಂಜಾವಧೂತ ಶ್ರೀಗಳನ್ನು ಪ್ರಾರ್ಥಿಸಿದ್ದರು.ಚಿಕ್ಕಮಗಳೂರಿನ ಪ್ರಜಾಧ್ವನಿ ಸಮಾವೇಶದಲ್ಲಿ"ನಾನು ಈ ಸೀಮೆಯ ಸಂಬಂಧವನ್ನು ಬೆಳೆಸಿದ್ದೇನೆ.ದಯವಿಟ್ಟು ನನ್ನ ಕೈ ಹಿಡಿಯಿರಿ"ಎಂದು ಮನವಿ ಮಾಡಿದ್ದರು.ರಾಮನಗರದಲ್ಲಿ ಚಾಮುಂಡೇಶ್ವರಿ ಉತ್ಸವದಲ್ಲಿ "ದೇವೇಗೌಡರು ಮತ್ತು ಕುಮಾರಸ್ವಾಮಿಯವರಿಗೆ ಈ ಹಿಂದೆ ಅವಕಾಶವನ್ನು ಕಲ್ಪಿಸಿದ್ದೀರಿ.ಅದೇ ರೀತಿ ರಾಜ್ಯದ ಸೇವೆಯನ್ನು ಮಾಡುವ ಅವಕಾಶವನ್ನು ನಿಮ್ಮ ಜಿಲ್ಲೆಯ ಈ ಮಗನಿಗೂ ಕೊಡಿ”ಎಂದು ಶಿವಕುಮಾರ್ ಮನವಿ ಮಾಡಿದ್ದರು.ಮಂಡ್ಯದ ಪ್ರಜಾಧ್ವನಿ ಸಮಾವೇಶದಲ್ಲಿ "ನಿಮ್ಮ ಸೇವೆಯನ್ನು ಮಾಡಲು ಅವಕಾಶವನ್ನು ಕೊಡಿ ಎಂದು ನಿಮ್ಮ ಮಗನಾಗಿ,ಮಣ್ಣಿನ ಮಗನಾಗಿ,ದೊಡ್ಡಾಲದಹಳ್ಳಿ ಕೆಂಪೇಗೌಡನ ಮಗನಾಗಿ ನಿಮ್ಮ ಪಾದಕ್ಕೆ ಕೈ ಮುಗಿದು ಕೇಳಿಕೊಳ್ಳುತ್ತೇನೆ"ಎಂದು ಪರೋಕ್ಷವಾಗಿ ಮುಖ್ಯಮಂತ್ರಿಯಾಗುವ ಅಭಿಲಾಷೆಯನ್ನು ಸಿದ್ದರಾಮಯ್ಯನವರ ಸಮ್ಮುಖದಲ್ಲಿಯೇ ಶಿವಕುಮಾರ್ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.ಇದರ ಜೊತೆಗೆ ಅವರ ಅಭಿಮಾನಿಗಳು"ಕರ್ನಾಟಕದಲ್ಲಿ ಗೂಳಿಯಂತೆ ನುಗ್ಗಿ ನೀವು ಮುಖ್ಯಮಂತ್ರಿಯಾಗಬೇಕು ಎಂದು ಒಂದು ನಿಜವಾದ ಗೂಳಿಯನ್ನೇ ಹರ್ಷೋದ್ಘಾರಗಳ ನಡುವೆ ಕೊಡುಗೆಯಾಗಿ ನೀಡಿದ್ದು ಕೂಡಾ ವಿಶೇಷವಾಗಿತ್ತು.ಹಳೆಯ ಮೈಸೂರು ಪ್ರಾಂತ್ಯದಲ್ಲಿ ಕೊನೆಯ ಸುತ್ತಿನ ಪ್ರಚಾರ ಸಭೆಗಳಲ್ಲಿ ಶಿವಕುಮಾರ್ ಆಕರ್ಷಣೆಯ ಕೇಂದ್ರವಾಗಿ ಬಿಟ್ಟಿದ್ದರು.ಅವರ ಭಾವನಾತ್ಮಕ ನಡೆ ಅವರಿಗೆ ಫಲ ನೀಡಿತ್ತು.ಜೆಡಿಎಸ್ ಭದ್ರ ಕೋಟೆ ಮೊದಲ ಬಾರಿಗೆ ಶಿಥಿಲಗೊಂಡಿತ್ತು.ಶೇ.ಐದರಷ್ಟು ಜೆಡಿಎಸ್ ಮತಗಳು ಚದುರಿ ಹೋಗಿದ್ದವು.


    ಕುಮಾರಸ್ವಾಮಿಯವರ ಅಭಿಮಾನಿಗಳ ಪ್ರಕಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬಹುದು ಎನ್ನುವ ನಿರೀಕ್ಷೆಯಿಂದ ಕೆಲವು ಮತಗಳು ಚದುರಿ ಹೋಗಿರಬಹುದು.ಅದೇನಿದ್ದರೂ ಒಂದು ತಾತ್ಕಾಲಿಕ ವಿದ್ಯಮಾನ.ಯಾವತ್ತೂ ದೇವೇಗೌಡರೇ ಒಕ್ಕಲಿಗರ ನಿಜವಾದ ನಾಯಕರು.ಒಕ್ಕಲಿಗರಿಗೆ ಸಂಕಷ್ಟ ಎದುರಾದಾಗಲೆಲ್ಲಾ ಬೀದಿಗೆ ಇಳಿದು ಹೋರಾಟ ಮಾಡಿದವರು ದೇವೇಗೌಡರು.ಒಕ್ಕಲಿಗರ ಹಿತಾಸಕ್ತಿಗೆ ವಿರುದ್ಧವಾದ ವೆಂಕಟಸ್ವಾಮಿ ಆಯೋಗದ ವರದಿಯನ್ನು ಜಾರಿಗೊಳಿಸಲು ರಾಮಕೃಷ್ಣ ಹೆಗಡೆ ಸಂಪುಟ ನಿರ್ಣಯವನ್ನು ಕೈಗೊಂಡಿತ್ತು.ಸAಪುಟ ಸಭೆಯ ಬಳಿಕ ಸಂಜೆ ಟೌನ್ ಹಾಲ್ ನಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಚಿವ ದೇವೇಗೌಡರು "ಈ ವರದಿಯನ್ನು ಅದು ಹೇಗೆ ಜಾರಿಗೆ ತರುತ್ತಾರೆ..ನಾವೂ ನೋಡುತ್ತೇವೆ..ನಾವೇನು ಬಳೆ ತೊಟ್ಟುಕೊಂಡಿಲ್ಲ..!"ಎಂದು ಆರ್ಭಟಿಸಿದ್ದರು.ಮಾರನೆಯ ದಿನ ಮಂಡ್ಯದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಒಕ್ಕಲಿಗರು ಬೀದಿಗಿಳಿದು ಮೈಸೂರು ಬೆಂಗಳೂರು ಹೆದ್ದಾರಿಯನ್ನು ಬಂದ್ ಮಾಡಿಬಿಟ್ಟಿದ್ದರು.


     ನಂತರ ಚಿನ್ನಪ್ಪ ರೆಡ್ಡಿ ಆಯೋಗದ ವರದಿಗೆ ಸಂಬಂಧಿಸಿದಂತೆ ವೀರಪ್ಪ ಮೊಯ್ಲಿ ಸರ್ಕಾರದ ವಿರುದ್ಧ ನ್ಯಾಷನಲ್ ಕಾಲೇಜು ಮೈದಾನದಿಂದ ವಿಧಾನಸೌಧದವರೆಗೆ ಆದಿಚುಂಚನಗಿರಿ ಮಠಾಧೀಶರಾದ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಸಾನಿಧ್ಯದಲ್ಲಿ ಸಾಗಿ ಬಂದ ಬೃಹತ್ ಪ್ರತಿಭಟನಾ ಮೆರವಣಿಗೆಯ ನೇತೃತ್ವವನ್ನು ಎಚ್.ಡಿ. ದೇವೇ ಗೌಡರೇ ವಹಿಸಿದ್ದರು.ವಿಧಾನಸೌಧದ ಮುಂಭಾಗದ ಕಬ್ಬನ್ ಪಾರ್ಕ್ ನಲ್ಲಿ ದಿನವಿಡೀ ಉಗ್ರ ಭಾಷಣಗಳು;ಕಲಾವಿದರ ರಸ ಮಂಜರಿ ಕಾರ್ಯಕ್ರಮಗಳು..ನಾಡ ಪ್ರಭು ಕೆಂಪೇಗೌಡರ ಹಿರಿಮೆಯನ್ನು ಕೊಂಡಾಡುವ ದೃಶ್ಯಾವಳಿಗಳು.."ಪ್ರಚಂಡ ರಾವಣ"ವಜ್ರಮುನಿಯವರ ಡೈಲಾಗುಗಳು ..ಹೀಗೆ ಒಂದು ಒಕ್ಕಲಿಗರ ಸಾಮ್ರಾಜ್ಯವೇ ನೆರೆದಿತ್ತು.ಈ ಸಮಾವೇಶ ಒಕ್ಕಲಿಗರ ರಾಜಕೀಯ ಪುನರುತ್ಥಾನಕ್ಕೆ ನಾಂದಿಯಾಯಿತು.1994 ರಲ್ಲಿ ದೇವೇಗೌಡರು ರಾಜ್ಯ ಏಕೀಕರಣದ ನಂತರದ ಮೊದಲ ಒಕ್ಕಲಿಗ ಮುಖ್ಯಮಂತ್ರಿಯಾದರು. ನಂತರ ಒಂದೂವರೆ ವರ್ಷಗಳಲ್ಲಿ ದೇಶದ ಪ್ರಧಾನಿಯಾಗಿ ಕನ್ನಡಿಗರ ಹಿರಿಮೆಯನ್ನೂ ಒಕ್ಕಲಿಗರ ಅಸ್ಮಿತೆಯನ್ನೂ ರಾಷ್ಟ್ರ ಮಟ್ಟದಲ್ಲಿ ಎತ್ತಿ ಹಿಡಿದರು.ಜೊತೆಗೆ ಒಕ್ಕಲಿಗ ಮಹಾ ಪುರುಷರ (ಐಕಾನ್ ಗಳ )ಸಾಲಿಗೆ ಸೇರಿದರು.


     ಒಕ್ಕಲಿಗರ ಅಖಂಡ ಬೆಂಬಲವನ್ನು ಕುಮಾರಸ್ವಾಮಿಯವರು ನಿರೀಕ್ಷಿಸಲು ಇನ್ನೂ ಒಂದು ಕಾರಣವಿದೆ.2002 ರ ಕನಕಪುರ ಲೋಕಸಭೆ ಉಪ ಚುನಾವಣೆಯಲ್ಲಿಯೂ ಇಂತಹದೇ ಒಂದು ಜಿಜ್ಞಾಸೆ ಅಥವಾ ಧರ್ಮ ಸಂಕಟ ಎದುರಾಗಿತ್ತು.ಆಗ ದೇವೇಗೌಡರು ಸ್ಪರ್ಧಿಸಿದ್ದರು.ಅವರಿಗೆ ಕಾಂಗ್ರೆಸ್ ಪಕ್ಷದಿಂದ ಡಿ.ಕೆ.ಶಿವಕುಮಾರ್ ಎದುರಾಳಿಯಾಗಿದ್ದರು.ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ,ಶಿವಕುಮಾರ್ ಪರವಾಗಿ ಬಿರುಸಿನ ಪ್ರಚಾರವನ್ನು ಮಾಡಿದ್ದರು.ಅವರು ಒಕ್ಕಲಿಗ ಮುಖ್ಯಮಂತ್ರಿಯಾಗಿದ್ದರೂ ಅವರ ಮನವಿಗೆ ಒಕ್ಕಲಿಗ ಬಂಧುಗಳು ಮನ್ನಣೆ ನೀಡಲಿಲ್ಲ. ಅವರು ತಂತ್ರೋಪಾಯದ ಮತದಾನವನ್ನು ಮಾಡಿದ್ದರು. ಇಲ್ಲಿ ರಾಜ್ಯದಲ್ಲಿ ಹೇಗಿದ್ದರೂ ನಮ್ಮವರೇ ಅಧಿಕಾರದಲ್ಲಿದ್ದಾರೆ.ನಮ್ಮವರೊಬ್ಬರು ದೆಹಲಿಯಲ್ಲಿಯೂ ಇರಲಿ ಎಂದು ದೇವೇಗೌಡರನ್ನು ಗೆಲ್ಲಿಸಿ ಕಳುಹಿಸಿದ್ದರು.ಒಟ್ಟಿನಲ್ಲಿ ಒಕ್ಕಲಿಗರ ಸೀಮೆಯಲ್ಲಿ ರಾಜಕಾರಣ ಕಾವೇರುತ್ತಿದೆ.