ತೊಂಭತ್ತನೇ ವಯಸ್ಸಲ್ಲಿ ತೇಜಸ್ವಿಯವರ ಫ್ರೆಂಡ್ ರಂಗಪ್ಪ ಹೆಗಡೆ ಮಾತುಗಳು
ತೇಜಸ್ವಿಯವರ ಬಗ್ಗೆ ಸ್ನೇಹಿತ ಹೆಗಡೆಯವರ ಮಾತುಗಳು
ವ್ಯಕ್ತಿ -ವ್ಯಕ್ತಿತ್ವ
ನೆಂಪೆ ದೇವರಾಜ್
ತೊಂಭತ್ತನೇ ವಯಸ್ಸಲ್ಲಿ ತೇಜಸ್ವಿಯವರ
ಫ್ರೆಂಡ್ ರಂಗಪ್ಪ ಹೆಗಡೆ ಮಾತುಗಳು
ಪೂರ್ಣ ಚಂದ್ರ ತೇಜಸ್ವಿ ಮತ್ತು ಕಡಿದಾಳು ಶಾಮಣ್ಣನವರೊಂದಿಗಿನ ಆ ಕಾಲದ ಹತ್ತು ಹಲವು ಸಾಹಸ, ಹಾಸ್ಯ,ಲಾಸ್ಯಗಳ ಕಥಾ ವಸ್ತುವಾಗಿದ್ದ ರಂಗಪ್ಪ ಹೆಗಡೆಯವರಿಗೀಗ ತೊಂಭತ್ತು ವರುಷ.ಶಿವಮೊಗ್ಗದಲ್ಲಿ ಇಂಟರ್ ಮೀಡಿಯೇಟ್ ಓದುತ್ತಿದ್ದಾಗ ಇವರುಗಳೆಲ್ಲ ರೂಮ್ ಮೇಟ್ ಗಳು.ಪೂರ್ಣ ಚಂದ್ರ ತೇಜಸ್ವಿಯವರ ಕೆಲವು ಕೃತಿಗಳ ಹಿಂದಿರುವ ಅನುಭವಗಳೊಂದಿಗೆ ರಂಗಪ್ಪ ಹೆಗಡೆಯವರ ಜೊತೆಗಿನ ಒಡನಾಟ ಅಪೂರ್ವಾಗಿ ದಾಖಲಾಗಿದೆ.ಅಣ್ಣನ ನೆನಪು ಕೃತಿಯಲ್ಲಂತೂ ಹತ್ತಾರು ಕಡೆ ರಂಗಪ್ಪ ಮಾವನವರಾಗಿ ತೇಜಸ್ವಿಯವರಿಂದ ಉಲ್ಲೇಖಗೊಂಡಿದ್ದಾರೆ.
ತಮ್ಮ ಹದಿನೇಳನೇ ವಯಸ್ಸಿನಲ್ಲಿ ಸಿಗರೇಟಿನ ಮೋಹಕ್ಕೊಳಗಾಗಿ ಎಡಬಿಡದೆ ಸಿಗರೇಟುಗಳನ್ನು ಧ್ವಂಸ ಮಾಡುತ್ತಿದ್ದ ರಂಗಪ್ಪ ಹೆಗಡೆಯವರು ಎಂಭತ್ತನೆ ವಯಸ್ಸಲ್ಲಿ ಸಿಂಗಾಪುರಕ್ಕೆ ಹೋಗಿ ಅದನ್ನು ಪೂರ್ಣ ವರ್ಜಿಸುತ್ತಾರೆ.ಸಿಂಗಾಪುರದಲ್ಲಿದ್ದ ತಮ್ಮ ಮಗನ ಮನೆಗೆ ಹೋದಾಗ ಇಂಡಿಯಾದ ನಾಲ್ಕು ಪಟ್ಟು ದರವನ್ನು ಸಿಗರೇಟಿಗೆ ಕೊಟ್ಟಾಗ್ಯೂ' ಅಲ್ಲಿ ಸೇದ ಬೇಡ.ಇಲ್ಲಿ ಸೇದಬೇಡ 'ಎಂಬ ರಿಸ್ಟ್ರಿಕ್ಷನ್ನುಗಳು ಇವರನ್ನು ತಲೆ ಬಿಸಿಗೆ ಕೆಡವುತ್ತವೆ.ಡಾಲರಿನಲ್ಲಿ ಕೊಂಡು ಕೊಂಡ ಸಿಗರೇಟನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂಡಿ ಹಾಕಿ ಹೊಗೆ ಬಿಡುವಂತೆ ಮಾಡಿಸುವ ನಿಯಮಗಳು ಬಹುದೊಡ್ಡ ಶಿಕ್ಷೆಯಾಗಿ ಕಾಡುತ್ತದೆ.ತತ್ತರಿಕೆ! ಇಂತಹ ಸಿಗರೇಟು ಸೇದರೆಷ್ಟು ಬಿಟ್ಟರೆಷ್ಟು ಎಂದು ಸಿಗರೇಟು ಸೇವನೆಗೆ ಸಿಂಗಾಪುರದಲ್ಲೇ ಕೊನೆಯ ಮೊಳೆ ಹೊಡೆಯುತ್ತಾರೆ.
ವಾರಾಹಿ ಜಲ ವಿದ್ಯುತ್ ಯೋಜನೆಯಿಂದ ಮೇಗರವಳ್ಳಿಯ ಮೂಡುವಳ್ಳಿಯಲ್ಲಿ ಮುಳುಗಡೆಯಾಗಿ ಉಂಟೂರು ಕಟ್ಟೆ ಕೈಮರದ ಶಂಕರ ಮನೆಯಲ್ಲಿ ನೆಲೆಗೊಂಡಿರುವ ರಂಗಪ್ಪ ಹೆಗಡೆಯವರು ಒಂಟಿಯಾಗಿ ಕಾಲ ಕಳೆಯುತ್ತಿದ್ದಾರೆ.ಮಕ್ಜಳೆಲ್ಲ ಉದ್ಯೋಗ ನಿಮಿತ್ತ ಬೆಂಗಳೂರಲ್ಲಿದ್ದಾರೆ.ಇವರ ತೊಂಭತ್ತನೇ ವಯಸ್ಸಲ್ಲೂ ಉತ್ಸಾಹ ಕಳೆದು ಕೊಳ್ಳದೆ ಹುಡುಗರ ತರಹ ಚಡ್ಡಿ, ಟಿ- ಷರ್ಟ್ ಹಾಕಿಕೊಂಡು ಕೆಲಸಗಾರರ ಜೊತೆ ಸೇರಿಕೊಂಡು ಅಡಿಕೆ ಒಟ್ಟು ಮಾಡುತ್ತಾರೆ.ಮೂಟೆ ಮಾಡಿಸುತ್ತಾರೆ.ಕೊತ ಕೊತನೆ ಕುದಿವ ಅಡಿಕೆ ಹಂಡೆ ಹತ್ತಿರ ನಿಂತು ಚಳಿ ಕಾಯಿಸುತ್ತಲೆ ಅಡಿಕೆ ಬೆಂದಿದೆಯೋ ಇಲ್ಲವೋ ಎಂದು ತಿಳಿಯಲು ದಬ್ಬೆಯನ್ನು ತಿರುವಿ ಚೊಗರು ನೂಲಾಗಿ ಕೆಳಗಿಳಿಯುವುದನ್ನು ಖಚಿತ ಪಡಿಸಿಕೊಂಡು ಬೆಂಕಿ ಹಿರಿಯಲು ಹೇಳುತ್ತಾರೆ.
ನಿನ್ನೆ ನಮ್ಮೊಂದಿಗೆ ಮಾತಾಡುತ್ತಾ ಅಗಾಧ ಅಧ್ಯಯನ ಶಿಲ ವ್ಯಕ್ತಿಯಾಗಿದ್ದ ಕಮ್ಯೂನಿಸ್ಟ್ ನಾಯಕರಾಗಿದ್ದ ದಿವಂಗತ ಅಪ್ಪಣ್ಣ ಹೆಗಡೆಯವರ ಜೊತೆಗಿನ ತಮ್ಮ ಬಾಂದ್ಯವ್ಯವನ್ನು ನೆನಪು ಮಾಡಿಕೊಂಡು ಭಾವುಕರಾಗುತ್ತಾರೆ.ಪ್ರತಿ ಕೇಸಿನ ಬಗ್ಗೆ ಅಪ್ಪಣ್ಣ ಹೆಗಡೆಯವರು ಓದಲು ತೆಗೆದುಕೊಳ್ಳುತ್ತಿದ್ದ ಪುಸ್ತಕಗಳ ರಾಶಿಯನ್ನು ನೆನಪಿಸಿಕೊಳ್ಳುತ್ತಾರೆ.
ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಹಿರಿಯ ಸಮಾಜವಾದಿ ದಿವಂಗತ ಮೇಗರವಳ್ಳಿಯ ಬಿ.ವಿ ಮೂರ್ತಿ ಮತ್ತು ನಾಗಡಗೇರಿಯ ಎನ್ ಕಿಟ್ಟಪ್ಪ ಗೌಡರೊಡಗೂಡಿ ನಡೆಸಿದ ಹೋರಾಟಗಳನ್ನು ನೆನಪಿಸಿಕೊಳ್ಳುತ್ತಾರೆ.ಗಂಧದ ಮರ ಮತ್ತು ಬಗುನೆ ಮರಗಳನ್ನು ಕಡಿದು ರಸ್ತೆಗೆ ಅಡ್ಡ ಹಾಕಿ ಗಿಡ ಮೊಟ್ಟುಗಳಲ್ಲಿ ಅಡಗಿ ಪೋಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ ಘಟನೆಗಳನ್ನು ಮೆಲುಕು ಹಾಕುತ್ತಾರೆ.
ಹೊನ್ನಾನಿ ದೇವರಾಜ್,ಕೆಳಕೆರೆ ಪೂರ್ಣೇಶ್,ದಬ್ಬಣಗದ್ದೆ ನಂದ ಮತ್ತು ನಾನು ರಂಗಪ್ಪ ಹೆಗಡೆಯವರ ಮನೆಗೆ ಹೋದಾಗ ದಿಗಂತದಲ್ಲಿ ಸೂರ್ಯ ಒಂಚೂರೇ ಚೂರು ಕಾಣುತ್ತಿದ್ದ.ವಾರಾಹಿ ಯೋಜನೆಯಿಂದ ಬಯಲಾಗಿದ್ದ ಅಗಾಧ ವಿಸ್ತೀರ್ಣದ ಜಾಗದಲ್ಲಿ ವೈವಿದ್ಯಮಯ ಕಗ್ಗಸುರಿನ ಗಿಡ ಗಂಟಿಗಳು ಮೇಲೆದ್ದು ಮರೆಯಾಗುತ್ತಿದ್ದ ಸೂರ್ಯನಿಗೆ ಬೀಳ್ಕೊಡುತ್ತಿದ್ದವು.ಅಡಿಕೆ ರಕೂಲಿ ಮಾಡುತ್ತಿದ್ದ ತಮ್ಮ ಆಳುಗಳಿಗೆ ಏಕೋಪಾದ್ಯಾಯ ಶಾಲೆಯ ಶಿಕ್ಷಕನಂತೆ ರಂಗಪ್ಪ ಹೆಗಡೆಯವರು ಸೂಚನೆಗಳನ್ನು ಕೊಡುತ್ತಿದ್ದರು. ನಮ್ಮ ಗುಂಪನ್ನು ನೋಡಿ ಹರೆಯದ ಹುಡುಗನಂತೆ ಚಂಗನೆ ನೆಗೆದು ತಬ್ಬಿಕೊಂಡು ಒಳಗೆ ಕರೆದುಕೊಂಡು ಹೋದರು.
'ನೋಡು ದೇವ್ರಾಜ ವಾರಾಹಿ ಯೋಜನೆಯಿಂದ ನಮಗಾಗಿರುವಷ್ಟು ಅನ್ಯಾಯ ಬೆರಾವ ಮುಳುಗಡೆ ಸಂತ್ರಸ್ಥರಿಗೂ ಆಗಿಲ್ಲ ಎಂದು ಹೇಳುತ್ತಲೇ ಮುಳುಗಡೆಗೆ ಸಂಬಂಧಿಸಿದ ಒಂದೊಂದೇ ಎಸಳುಗಳನ್ನು ನಮ್ಮ ಮುಂದಿಡತೊಡಗಿದರು.ಇಂದಿನವರೆಗೂ ಮುಳುಗಡೆಯಾಗದಿದ್ದರೂ ಸಾವಿರಾರು ಎಕರೆ ಭೂಮಿ ಮುಳುಗುತ್ತದೆ ಎಂಬ ಭ್ರಮೆಯನ್ನು ಹುಟ್ಟಿಸಿ ಭೂಮಿಯನ್ನು ವಶ ಒಡಿಸಿಕೊಂಡ ಸರ್ಕಾರದ ಕ್ರಮದ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು.ಮರ -ಮೊಟ್ಟು- ಕಟ್ಟಿಗೆ- ನಾಟಾವನ್ನು ಸಾಗಿಸಲು ಅನುಕೂಲವಾಗುವಂತೆ ಅಧಿಕಾರಿಗಳು ಸರ್ಕಾರದ ದಿಕ್ಕು ತಪ್ಪಿಸಿರುವ ರೀತಿಯನ್ನು ಉದಾಃಹರಣೆಗಳ ಸಹಿತ ವಿವರಿಸ ಹೋದರು.
ಶಿರ್ನಾಳಿ,ಹನಸ,ಹೊಳೆಗದ್ದೆ,ಯಡೂರು,ಐದೂರು,ಬಿಳುಮನೆ ಉಳುಕೊಪ್ಪ ಮುಂತಾದ ಮುಳುಗಡೆಯಾದ ಜಮೀನು,ಮನೆ,ಕಾಡು,ಒಳಕಡೆ,ಕೊಟ್ಟಿಗೆ,ಕಣ,ಹೊಳೆ,ಹಳ್ಳ,ಒಡು ವಟ್ಟೆ,ಮಳೆ ,ಅಬ್ಬರಿ,ಧರೆ ಕುಸಿತ,ನೆರೆ,ಬರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊರಗೆಡುವುವ ಹಿರಿಯ ಜೀವವೊಂದು ನಮ್ಮೆದುರು ಲವಲವಿಕೆಯಿಂದ ಇರುವುದೊಂದು ಹೆಮ್ಮೆಯ ಸಂಗತಿಯಾಗಿ ನಿನ್ನೆಯ ಚಳಿಯ ರಾತ್ರಿ ಕಾಡುತ್ತಿತ್ತು.
ವಾರಾಹಿ ಜಲ ವಿದ್ಯುತ್ ಯೋಜನೆಯಿಂದಾದ ಜಮೀನು ಮುಳುಗಡೆ ನಮ್ಮ ಜನರನ್ನು ಬೀದಿಗೆ ತಂತು.ಈ ಮೂವತ್ತೈದು ವರುಷಗಳಲ್ಲಿ ಒಮ್ಮೆಯೂ ನೀರು ನುಗ್ಗದ ನಮ್ಮ ಜಮೀನು ಕೆಪಿಸಿ ಕೈಯಲ್ಲಿದೆ.ಅಂದು ಎಕರೆಗೆ ಕೇವಲ ಎಂಟು ಸಾವಿರ ಪರಿಹಾರ ಕೊಟ್ಟಿದ್ದಾರೆ.ಇದೀಗ ಎಕರೆಯೊಂದಕ್ಕೆ ಮುವತ್ತು ಲಕ್ಷ ರೂಪಾಯಿ ಬೆಲೆ ಬಾಳುವ ಅಡಿಕೆ ತೋಟಗಳನ್ನು ಕಿತ್ತುಕೊಂಡಿದ್ದಾರೆ. ಕೋರ್ಟಿಗೆ ಹೋದವರಿಗೆ ಮಾತ್ರ ಅಡಿಕೆ ತೋಟಕ್ಕೆ ನಲವತ್ತು ಸಾವಿರ ಪರಿಹಾರ ಕೊಟ್ಟಿದ್ದಾರೆ..ಮುಳುಗಲು ಸಾಧ್ಯವೇ ಇಲ್ಲದಂತಹ ಸಾವಿರಾರು ಹೆಕ್ಟೇರ್ ಜಮೀನನ್ನು ವಿನಾ ಕಾರಣ ಕೆಪಿಸಿ ಇಟ್ಟುಕೊಂಡಿರುವುದೇಕೆ?.ಈ ಜಮೀನನ್ನು ಇದೀಗ ನೈಜ ವಾರಸುದಾರರಿಗೆ ಏಕೆ ಕೊಡಬಾರದು?ಎಂದು ಪ್ರಶ್ನಿಸುತ್ತಾರೆ.
ಇಷ್ಟಕ್ಕೂ ಬಿಡದ ಹೆಗಡೆಯವರು ಕತ್ತಲ ದಾರಿಯಲ್ಲೇ ನಮ್ಮನ್ನೆಲ್ಲ ಇವರ ತೋಟಕ್ಕೆ ಕರೆದೊಯ್ಯುತ್ತಾರೆ.ಮುಕ್ಕಾಲು ಕಿಲೋಮೀಟರು ದೂರದಲ್ಲಿ ಹಿನ್ನೀರಿತ್ತು.ಆದರೆ ನೀರು ತುಂಬದೆ ಬೀಳು ಬಿದ್ದ ಜಮೀನು ಹಾಗೆ ಮಲಗಿತ್ತು. ತಮ್ಮ ಮುಳುಗಡೆಯಾಗದಿರುವ ಹಾಗೂ ಮುಳುಗಡೆಯಾಗಿದೆ ಎಂದು ದಾಖಲಿಸಿರುವ ಮೂಲ ಜಮೀನನ್ನು ನಮಗೆಲ್ಲ ತೋರಿಸದೆ ಬಿಡಲಿಲ್ಲ.ವಾರಾಹಿ ,ಚಕ್ರಾ,ಸಾವೆಹಕ್ಕಲಿನ ಸಾವಿರಾರು ಹೆಕ್ಟೇರ್ ಜಮೀನು ಹೀಗೆ ಕೆಪಿಸಿ ವಶಪಡಿಸಿಕೊಂಡಿರುವುದನ್ನು ಸಹಾ ನೆನಪಿಸುತ್ತಾರೆ.
ತಾವು ಹೈಪವರ್ ಕಮಿಟಿಯ ಮೆಂಬರ್ ಆಗಿದ್ದ ಸಂದರ್ಭದಲ್ಲಿ ಇದನ್ನೆಲ್ಲ ಪ್ರಸ್ತಾಪಿಸಿರುವೆ.ಆಗಿರುವ ತಪ್ಪನ್ನು ಅಧಿಕಾರಿಗಳು ಒಪ್ಪಿಕೊಂಡು ಸುಮ್ಮನಾಗುತ್ತಾರೆ.ಆದರೆ ಅನ್ಯಾಯಕ್ಕೊಳಗಾದ ಮುಳುಗಡೆ ಸಂತ್ರಸ್ಥರಿಗೆ ನ್ಯಾಯ ಮಾತ್ರ ದೊರೆತಿಲ್ಲ ಎಂದು ಹೇಳುವಾಗ ಅವರ ತೊಂಭತ್ತು ವರುಷಗಳ ವಯಸ್ಸು ಐವತ್ತಕ್ಕೆ ಇಳಿಯುತ್ತದೆ.ಆಕ್ರೋಷ ಮಡುಗಟ್ಟುತ್ತದೆ.
ಪೂರ್ಣ ಚಂದ್ರ ತೇಜಸ್ವಿ ಮತ್ತು ಕಡಿದಾಳು ಶಾಮಣ್ಣನವರ ಜೊತೆಗಿನ ಸಂಬಂಧ ದಿಂದ ಆರಂಭವಾದ ಇವರ ಜೊತೆಗಿನ ಮಾತುಕತೆ ಸೋಷಲಿಸ್ಟ್,ಕಮ್ಯೂನಿಸ್ಟ್ ಚಳುವಳಿಯವರೆಗೆ ವಿಸ್ತರಿಸಿತು.ಮುಳುಗಡೆ ಸಂತ್ರಸ್ಥರ ಜೊತೆಗೆ ಸೇರಿಕೊಂಡ ರಾಜಕಾರಣ ಹೊರ ಬಂದವು.ಕಾಮ್ರೇಡ್ .ಕೆ.ಎಂ ಶ್ರೀನಿವಾಸ್ ರವರು ಮುಳುಗಡೆ ಸಂತ್ರಸ್ಥರ ಪರವಾಗಿ ನಡೆಸಿದ ಹೋರಾಟಗಳನ್ನು ನೆನಪಿಸಿಕೊಂಡರು.ಊಟಕ್ಕೆ ನಿಲ್ಲಲು ಹೇಳಿದರು.ನಿಲ್ಲದೆ ನಮ್ಮ ತಂಡ ಹೊರಟಿತು.
.