ಹಳ್ಳಿ ಹೈದನ ನೂರೆಂಟು ನೆನಪು-6 ಸಿ.ಚಿಕ್ಕಣ್ಣ, ಐಎಎಸ್(ವಿ)

ಹಳ್ಳಿ ಹೈದನ ನೂರೆಂಟು ನೆನಪು-6 ಸಿ.ಚಿಕ್ಕಣ್ಣ, ಐಎಎಸ್(ವಿ)

ಹಳ್ಳಿ ಹೈದನ ನೂರೆಂಟು ನೆನಪು-6   ಸಿ.ಚಿಕ್ಕಣ್ಣ, ಐಎಎಸ್(ವಿ)

ಹಳ್ಳಿ ಹೈದನ ನೂರೆಂಟು ನೆನಪು-6


ಸಿ.ಚಿಕ್ಕಣ್ಣ, ಐಎಎಸ್(ವಿ)


ಜಮೀನುಗಳು ಭಾಗವಾಗುವ ಜೊತೆಗೆ ಮನಸ್ಸುಗಳೂ ಒಡೆದು ಹೋಗಿದ್ದವು. ದೊಡ್ಡವರು ಮುಖಗಂಟಿಕ್ಕಿಕೊಂಡು ಓಡಾಡುತ್ತಿದ್ದರೂ, ನಾವು ಮಕ್ಕಳು ಮಾತ್ರ ಚೆನ್ನಾಗಿಯೇ ಇದ್ದು, ಶಾಲೆಗೆ ಜತೆಯಲ್ಲಿ ಹೋಗಿ ಬಂದ ಮೇಲೆ ಒಟ್ಟಿಗೆ ಆಟ ಆಡುತ್ತಿದ್ದೆವು. ನಮ್ಮ 36 ಅಂಕಣದ ಮನೆ ಇಬ್ಬಾಗವಾಗಿ ನಮ್ಮ ತಂದೆಯವರಿಗೂ, ದೊಡ್ಡಪ್ಪ, ಚಿಕ್ಕಪ್ಪನವರಿಗೂ ಹಂಚಿದರು. ಮತ್ತೊಂದು ದೊಡ್ಡ ಮನೆಯ ಮಧ್ಯೆ ಗೋಡೆ ಹಾಕಿ ಅಪ್ಪಯ್ಯ ಕಾಕ ಮತ್ತು ಎಳೆ ಚಿಕ್ಕಣ್ಣನವರಿಗೂ ಹಂಚಿದರು. ಶಂಕರಪ್ಪನವರ ಪಾಲಿನ ಜಮೀನನ್ನು ದೊಡ್ಡಚಿಕ್ಕಪ್ಪನವರ ಸುಪರ್ದಿಗೆ ಕೊಟ್ಟರು. ಐತಿಹಾಸಿಕ ದಾಖಲೆಯಾಗಿ ಪಾಲು ಪಾರಿಕತ್ತಿನ ಮೂಲಪ್ರತಿ ನನ್ನ ಹತ್ತಿರ ಈಗಲೂ ಭದ್ರವಾಗಿದೆ.


“ ಭಾಗವಾದದ್ದು ದೊಡ್ದವರ ಆಸ್ತಿ, ಮನೆ ಮಾತ್ರ - ಮಕ್ಕಳ ಮನಸ್ಸುಗಳಲ್ಲ “ 
(ಹಿಂದಿನ ‘ಕಿನ್ನರಿ’ಯಿಂದ)

     ನಾನು ಎರಡನೇ ತರಗತಿ ಮುಗಿಸಿ ಮೂರನೇ ತರಗತಿಗೆ ಬರುವ ಅವಧಿಯಲ್ಲಿ ಒಟ್ಟು ಕುಟುಂಬದ ಅಣ್ಣತಮ್ಮಂದಿರಲ್ಲಿ, ಅವರ ಪತ್ನಿಯರಲ್ಲಿ ಹೊಂದಾಣಿಕೆ ಕೊರತೆ ಉಂಟಾಗಿ ಸಣ್ಣ-ಮಟ್ಟ ಜಗಳಗಳು ನಿತ್ಯ ನಡೆಯುತ್ತಿದ್ದವು, ಅದನ್ನು ಮೂಕರಾಗಿ ನಾವೆಲ್ಲಾ ಹುಡುಗರು ಗಮನಿಸುತ್ತಿದ್ದೆವು. ನಾವೆಲ್ಲಾ ಜಮೀನಿನಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದರೆ, ಇವನು ಅಮಲ್ದಾರ್ ತರ ಧಿರಸು ಹಾಕಿಕೊಂಡು, ದಿನಾ ಮದ್ಗಿರಿ, ತುಮಕೂರು ಅಂತ ಓಡಾಡ್ತಾ ಮಜಾ ಮಾಡ್ತಾನೆ' ಎಂದು ಚಿಕ್ಕಪ್ಪಗಳು ತಂದೆಯ ಮೇಲೆ ಆರೋಪ ಮಾಡುತ್ತಿದ್ದರು. 'ನಮಗೆ ಗೊತ್ತು, ಬೇರೆ ಊರುಗಳಲ್ಲಿ ತೋಟಗಳನ್ನು ಖರೀದಿಸಿ ಬೇರೆಯವರ ಹೆಸರಿಗೆ ಬೇನಾಮಿಯಾಗಿ ರಿಜಿಸ್ಟರ್ ಮಾಡಿಕೊಂಡು, ನಮಗೆಲ್ಲಾ ಮೋಸ ಮಾಡುತ್ತಿದ್ದಾರೆ ಎಂದು ಚಿಕ್ಕಮ್ಮಗಳು ದೂರುತ್ತಿದ್ದರು. ಮಹಾಭಾರತ ನಡೆದ ಈ ದೇಶದಲ್ಲಿ ಇದು ಸರ್ವೇಸಾಮಾನ್ಯ ರೋಗವಾಗಿ ಅಣ್ಣತಮ್ಮಂದಿರಲ್ಲಿರಬೇಕಾದ ಭ್ರಾತೃತ್ವ ಶೂನ್ಯವಾಗತೊಡಗಿತು. 


    ಇದರ ಪರಿಣಾಮ 1ನೇ ಜೂನ್ 1949ರಂದು ಪಂಚಾಯಿತಿದಾರರ ಮುಂದೆ ಐವರು ಅಣ್ಣತಮ್ಮಂದಿರು ಆಸ್ತಿಯನ್ನು ಭಾಗಮಾಡಲು ಸಭೆ ಸೇರಿದರು. ಏರುದನಿಯಲ್ಲಿಯೇ ಚರ್ಚೆಗಳು, ಆರೋಪಗಳು, ಪ್ರತ್ಯಾರೋಪಗಳು ನಡೆದವು. ಕೆರೆ ಅಚ್ಚುಕಟ್ಟು ಜಮೀನುಗಳು, ಅಡಿಕೆ, ವೀಳೆದೆಲೆ ತೋಟಗಳು ನಮಗೆ ಬೇಕೆಂದು ಕೆಲವರು ಹಠ ಹಿಡಿದರು. ಹೆಂಗಸರು ಒಡವೆ, ಪಾತ್ರೆ ಪಡಗಕ್ಕೆ ಕಿತ್ತಾಡಿದರು. ಅಂತಿಮವಾಗಿ ಪಂಚಾಯಿತಿದಾರರಾದ ನಾಗೇನಹಳ್ಳಿ ಕೆಂಪೇಗೌಡರು, ಜಕ್ಕೇನಹಳ್ಳಿ ಚಿಕ್ಕೇಗೌಡರು, ಸಿದ್ದಾಪುರದ ರಂಗಜ್ಜ, ಶೆಟ್ಟಿಹಳ್ಳಿ ರಂಗಶಾಮಯ್ಯ ಇವರ ಸಾಕ್ಷಿ ಮತ್ತು ನಾಗೇನಹಳ್ಳಿ ಚಿಕ್ಕರಂಗಪ್ಪ ಅವರ ಬಿಕ್ಕಲು ಇರುವ ಪಾಲು ಪಾರಿಕತ್ತಿನ ಮೂಲಕ ವಿಧಿ ಇಲ್ಲದ ತೋಟ ತುಡಿಕೆ, ಗದ್ದೆ ಹೊಲಗಳನ್ನು 5 ಭಾಗಗಳಾಗಿ ವಿಂಗಡಿಸಿ ತೀರ್ಪಿತ್ತರು. ಅಂದರೆ 1 ಎಕರೆ ತೋಟ ಇದ್ದರೆ 5 ಭಾಗವಾಗಿ ಮಾಡಿ ಮಧ್ಯದಲ್ಲಿ ಬದು ಹಾಕಿ ವಿಂಗಡಿಸಬೇಕೆAಬ ತೀರ್ಮಾನ.

    ಇದರಿಂದ ಯಾರಿಗೂ ತೃಪ್ತಿಯಾಗದಿದ್ದರೂ ಪಂಚಾಯಿತಿದಾರರ ತೀರ್ಪಿಗೆ ಕಟ್ಟು ಬಿದ್ದು ಲಿಖಿತ ಪಾಲು ಪಾಲಕತ್ತನ್ನು ಬಿಕ್ಕಲಂ ಮಾಡಿ ತಯಾರಿಸಿ, ಎಲ್ಲರ ಸಹಿ ಅಥವಾ ಎಡಗೈ ಹೆಬ್ಬೆಟ್ಟಿನ ರುಜು ಪಡೆದು ನಿರ್ಗಮಿಸಿದರು. ಒಂದು ದೊಡ್ಡ ಮನೆ ಒಡೆದು, ಐದು, ಒಂಟಿ ಮನೆಗಳಾದವು. ಜಮೀನುಗಳು ಭಾಗವಾಗುವ ಜೊತೆಗೆ ಮನಸ್ಸುಗಳೂ ಒಡೆದು ಹೋಗಿದ್ದವು. ದೊಡ್ಡವರು ಮುಖಗಂಟಿಕ್ಕಿಕೊAಡು ಓಡಾಡುತ್ತಿದ್ದರೂ, ನಾವು ಮಕ್ಕಳು ಮಾತ್ರ ಚೆನ್ನಾಗಿಯೇ ಇದ್ದು, ಶಾಲೆಗೆ ಜತೆಯಲ್ಲಿ ಹೋಗಿ ಬಂದ ಮೇಲೆ ಒಟ್ಟಿಗೆ ಆಟ ಆಡುತ್ತಿದ್ದೆವು. ನಮ್ಮ 36 ಅಂಕಣದ ಮನೆ ಇಬ್ಬಾಗವಾಗಿ ನಮ್ಮ ತಂದೆಯವರಿಗೂ, ದೊಡ್ಡಪ್ಪ, ಚಿಕ್ಕಪ್ಪನವರಿಗೂ ಹಂಚಿದರು. ಮತ್ತೊಂದು ದೊಡ್ಡ ಮನೆಯ ಮಧ್ಯೆ ಗೋಡೆ ಹಾಕಿ ಅಪ್ಪಯ್ಯ ಕಾಕ ಮತ್ತು ಎಳೆ ಚಿಕ್ಕಣ್ಣನವರಿಗೂ ಹಂಚಿದರು. ಶಂಕರಪ್ಪನವರ ಪಾಲಿನ ಜಮೀನನ್ನು ದೊಡ್ಡಚಿಕ್ಕಪ್ಪನವರ ಸುಪರ್ದಿಗೆ ಕೊಟ್ಟರು. ಐತಿಹಾಸಿಕ ದಾಖಲೆಯಾಗಿ ಪಾಲು ಪಾರಿಕತ್ತಿನ ಮೂಲಪ್ರತಿ ನನ್ನ ಹತ್ತಿರ ಈಗಲೂ ಭದ್ರವಾಗಿದೆ. 


ಮಿಡಲ್ ಸ್ಕೂಲ್‌ಗೆ ಬಡವನಹಳ್ಳಿಗೆ 


5ನೇ ಕ್ಲಾಸಿಗೆ ಬಡವನಹಳ್ಳಿಯಲ್ಲಿದ್ದ ಎನ್‌ಟಿಎಂ ಸ್ಕೂಲಿಗೆ ನನ್ನನ್ನು ದಾಖಲಿಸಿದರೆ ತಮ್ಮ ಜಯಣ್ಣನನ್ನು ತಿಪ್ಪನಹಳ್ಳಿಯ ಪ್ರೈಮರಿ ಶಾಲೆಗೆ ಸೇರಿಸಿದ್ದರು. ಕೊನೆಯ ತಮ್ಮ ಇನ್ನೂ ಎದೆ ಹಾಲು ಕುಡಿಯುತ್ತಿದ್ದ.


ತಿಪ್ಪನಹಳ್ಳಿಯಿಂದ ಬಡವನಹಳ್ಳಿಗೆ ಕಾಲುದಾರಿಯಲ್ಲಿ, ನಮ್ಮ ಬಂಡೆ ಹೊಲ, ಕೊಟ್ಟೆಗದ್ದೆ, ಬಸೆಟ್ಟಿಯವರ ಅಡಿಕೆ ತೋಟ ಹಾದು ಬಡವನಹಳ್ಳಿಗೆ ಸೇರಿದ ಜಮೀನುಗಳ ಮೂಲಕ ಹೋದರೆ 2 ಕಿಮೀ ದೂರ, ಬಸ್ ರೂಟಲ್ಲಿ ಗೊಲ್ಲರಹಟ್ಟಿ ಮೇಲೆ ಹೋದರೆ 3 ಕಿಮೀ, ನಾವು ದಿನಾಲೂ ಶಾಲೆಗೆ ನಡೆದುಕೊಂಡೇ ಹೋಗುತ್ತಿದ್ದವು, ಅದೂ ಬರಿಗಾಲಿನಲ್ಲಿ, ನಮ್ಮೂರಿಂದ 6 ಜನ ಶಾಲೆಗೆ ಹೋಗುತ್ತಿದ್ದು ಅವರೆಲ್ಲರ ಹೆಸರುಗಳು ನೆನಪಿನಲ್ಲಿಲ್ಲ. ಫಕೃದ್ದೀನ್ ಮತ್ತು ಮೇಷ್ಟ್ರು ನಾಗೇಶರಾಯರ ಕೊನೆಯ ತಮ್ಮ ಉಪೇಂದ್ರರಾವ್, ನಾವು ಮೂವರೂ ಯಾವಾಗಲೂ ಜತೆಗೆ ಹೋಗಿ ಬರುತ್ತಿದ್ದೆವು. ನಾನು ಇಂಗ್ಲಿಷ್ ಮತ್ತು ಕನ್ನಡ ವಿಷಯದಲ್ಲಿ ಮುಂದಿದ್ದರೆ, ಉಪೇಂದ್ರ ಗಣಿತ, ವಿಜ್ಞಾನದಲ್ಲಿ ಮುಂದಿದ್ದ ಫಕೃದ್ದೀನ್ ಚರಿತ್ರೆ, ಭೂಗೋಳ, ಸೋಶಿಯಲ್‌ನಲ್ಲಿ ಮುಂದು. ಆದರೂ ಶಾಲೆಗೆ ಹೋಗಿ-ಬರುವಾಗ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದೆವು.


ಶಾಲೆಯಲ್ಲಿ ಉತ್ತಮವಾಗಿ ಪಾಠ ಹೇಳಿಕೊಡುತ್ತಿದ್ದ ಕುರುಬರಹಳ್ಳಿಯ ಕೆ.ಜಿ. ರಂಗಯ್ಯನವರು, ರಂಗೇಗೌಡರು (ಪದ್ಮಶ್ರೀ ಡಾ. ದೊಡ್ಡರಂಗೇಗೌಡರ ತಂದೆ) ಕನ್ನಡ ತೆಗೆದುಕೊಂಡರೆ, ಮಿಡಿಗೇಶಿ ಹೋಬಳಿ ಕತ್ತಿರಾಜನಹಳ್ಳಿಯ ರಂಗಶಾಮಯ್ಯನವರು ಇಂಗ್ಲಿಷ್ ತೆಗೆದುಕೊಳ್ಳುತ್ತಿದ್ದರು.


ಶಾಲೆಗೆ ಹೋಗಿ ಬರುತ್ತಿದ್ದ ಎಲ್ಲಾ ಹುಡುಗರಿಗೂ ನಾಟಕದ ಗೀಳು ಸ್ವಲ್ಪ ಜಾಸ್ತಿ ಇತ್ತು. ಇದಕ್ಕೆ ಕಾರಣ ನಮ್ಮೂರಲ್ಲಿ ಪ್ರತಿವರ್ಷ ಯಾವುದಾದರೂ ಒಂದು ನಾಟಕವನ್ನು ವರ್ಷ ಪೂರ್ತಿ ಬೆನಕಪ್ಪನ ಗುಡಿಯಲ್ಲಿ ಪ್ರಾಕ್ಟಿಸ್ ಮಾಡಿ, ತೋವಿನಕೆರೆ ಕೆಸ್ತೂರಿನಿಂದ ಸೀನರಿಗಳನ್ನು, ಭುಜಕೀರ್ತಿ, ಡ್ರೆಸ್‌ಗಳನ್ನು ತರಿಸಿ, ಅಡಿಕೆ ಮರಗಳಿಂದ ಸೇಜು ತಯಾರಿಸಿ, 'ದೇವೀ ಮಹಾತ್ಮ' ಎಂಬ ಬಯಲಾಟವನ್ನು ಆಡುತ್ತಿದ್ದರು. ನಾನು 7ನೇ ತರಗತಿಯಲ್ಲಿರುವಾಗ ದೇವೀ ಮಹಾತ್ಮ ನಾಟಕ ಆಡಿದರು. ಅದರಲ್ಲಿ ನಮ್ಮ ತಂದೆಯವರು ವಿಷ್ಣುವಿನ ಪಾತ್ರ ಮಾಡಿದರು. ನಮ್ಮ ಚಿಕ್ಕಪ್ಪ ಅಪ್ಪಯ್ಯ ದೇವೇಂದ್ರನ ಪಾತ, ನಮಗೆ ಖುಷಿನೋ ಖುಷಿ, ಸಂಜೆ ಶಾಲೆಯಿಂದ ಬಂದು ಮನೆಯ ಮುಂದಿನ ಕಸವನ್ನೆಲ್ಲಾ ಗುಡಿಸಿ ಒಪ್ಪ ಮಾಡಿ, ತೋಟಕ್ಕೆ ಹೋಗಿ ಹೋರಿಗಳಿಗೆ ಜೋಳದ ಸಪ್ಪೆ. ತಂದು ಹಾಕಿ, ಉಂಡು ಕೈ ತೊಳೆದುಕೊಂಡು, ಕೈ ಒರೆಸಿಕೊಳ್ಳುತ್ತಲೇ ಬೆನಕಪ್ಪನ ಗುಡಿಗೆ ಓಟ ಕೀಳುತ್ತಿದ್ದೆವು. ನಾಟಕದ ಮೇಷ್ಟ್ರು ವೀರಕ್ಯಾತಯ್ಯನವರು, ಕೊರಟಗೆರೆ ಪಕ್ಕದ ವಡ್ಡಗೆರೆಯವರು. ನಾಟಕದ ಗೀಳನ್ನು ನಮ್ಮ ಊರಿನವರಿಗೆ ತುಂಬಿದ್ದೇ ನಾಟಕದ ನೆಪದಲ್ಲಿ ನಮ್ಮೂರಿನ ಹುಡುಗಿಯನ್ನು ಮದುವೆ ಮಾಡಿಕೊಂಡು ಊರ ಆಳಿಯನೇ ಅಗಿಬಿಟ್ಟಿದ್ದರು. 


ನಾಟಕದ ಮೇಷ್ಟಿಗೆ ನನ್ನ ಕನ್ನಡದ ಮೋಹ, ಭಾಷೆಯ ಮೇಲೆ ಇದ್ದ ಹಿಡಿತದಿಂದಾಗಿ ಅವರ ಅಚ್ಚುಮೆಚ್ಚಿನ ಶಿಷ್ಯನಾದೆ. ನಾಟಕದಲ್ಲಿ ಪಾರ್ಟು ಮಾಡುವವರು ಬಹುತೇಕರು ನಿರಕ್ಷರಕುಕ್ಷಿಗಳು ನಮ್ಮ ತಂದೆಯವರನ್ನು, ಊರಿನ ಗೌಡ ಬುಡೇಗೌಡರನ್ನು ಹೊರತು ಪಡಿಸಿ, ಉಳಿದ ಪಾರ್ಟುದಾರರಿಗೆ ಡೈಲಾಗ್ ಹೇಳಿ ಕೊಡುವುದು, ಮೇಷ್ಟ್ರು ಬೀಡಿ ಸೇದಲು ಹೊರಹೋದಾಗ ಹಾರೋನಿಯಂ ಬಾರಿಸುವುದು ಮಾಡುತ್ತಿದ್ದೆ. ಕೆಲವೊಮ್ಮೆ ತಬಲ, ತಾಳ ಬಾರಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದೆ.


ದೇವಿ ಮಹಾತ್ಮ: ನಾಟಕ ಪ್ರಸಂಗ


    ಹೀಗಿರುವಾಗ ಶಾಲೆಗೆ ಬೇಸಿಗೆ ರಜದ ಸಮಯದಲ್ಲಿ, ದೇವಿಮಹಾತ್ಮ ನಾಟಕ ಆಡಿಸುವ ಭರ್ಜರಿ ತಯಾರಿ ಆರಂಭವಾಯಿತು. ಅಟ್ಟಣಿಗೆ, ಡ್ರೆಸ್ಸು, ಸೀನರಿಗಳು, ಭುಜಕೀರ್ತಿಗಳು ಮುಂತಾದವುಗಳನ್ನು ಹೊಂದಿಸುವ ಕಾರ್ಯದಲ್ಲಿ ನಾವೆಲ್ಲ ಮಗ್ನರಾಗಿದ್ದೆವು. ಊರಿನ ಮಧ್ಯದಲ್ಲಿರುವ ಚೌಡೇಶ್ವರಿ ದೇವಸ್ಥಾನದ ಮುಂದೆ, ಶಾನುಭೋಗ ಶಾಮಣ್ಣನವರ ಮನೆ ಪಕ್ಕದಲ್ಲಿ ಒಂದು ದೊಡ್ಡ ರಂಗಮAದಿರ, ಅಡಿಕೆ ಸೋಗೆ, ತೆಂಗಿನ ಗರಿಗಳಿಂದ ತಯಾರಿಸಲಾಗಿತ್ತು. ಮಧುಗಿರಿಯಿಂದ ಡೈನಾಮೋ ವ್ಯವಸ್ಥೆ ಮಾಡಲಾಯಿತು. ಇದೆಲ್ಲದರ ಜವಾಬ್ದಾರಿಯನ್ನು ಶಾಲೆಗೆ ಹೋಗುತ್ತಿದ್ದ ಹುಡುಗರೇ ಹೊತ್ತುಕೊಂಡಿದ್ದು ಮೇಷ್ಟಿಗೆ ಆನಂದವಾಗಿತ್ತು.


    ದೇವಿ ಮಹಾತ್ಮೆ ನಾಟಕದಲ್ಲಿ ನಮ್ಮೂರಿನ ಬುಡೇಗೌಡರದು ರಕ್ತಬೀಜಾಸುರ ಪಾತ್ರ, ಆಜಾನುಬಾಹು ಭುಜಕೀರ್ತಿ, ಕಿರೀಟ ಇಟ್ಟು ಕೆಂಪು ಬಣ್ಣದ ಸೀರೆಯನ್ನು ಕಚ್ಚೆ ಪಂಚೆಯಾಗಿ ಉಡಿಸಿ ಮುಖಕ್ಕೆ ಕಪ್ಪು-ಕೆಂಪು ಬಿಳಿ ಬಣ್ಣ ಬಳಿದು ನಿಜವಾದ ರಾಕ್ಷಸನಂತೆ ಅಲಂಕಾರ ಮಾಡಿದ್ದರು. ಇನ್ನು ನಾಟಕದ ಕೇಂದ್ರ ಬಿಂದು ಚಾಮುಂಡೇಶ್ವರಿ ಪಾತ್ರದಲ್ಲಿ ಊರಿನ ದೊಡ್ಡಣ್ಣನವರು. ಕೆಂಪುಸೀರೆ, ಕಿರೀಟ, ಭುಜಕೀರ್ತಿ, ಬೆನ್ನಿನ ಹಿಂದೆ ಹತ್ತು ಕೈಗಳನ್ನು ದಾರದಿಂದ ಬಿಗಿಯಾಗಿ ಬಿಗಿದು ಅಲ್ಲಾಡದಂತೆ ಕಟ್ಟಿದ್ದರು. ಇನ್ನು ಮುಖ್ಯವಾದ ಪಾತ್ರ ವಿಷ್ಣುವಾಗಿ ನಮ್ಮ ತಂದೆ ಚೌಡಪ್ಪನವರದು. ಇವರ ಪಾತ್ರ ನಾಟಕದಲ್ಲಿ ಬರುವುದು ಒಂದೆರಡು ಅಂಕಣದಲ್ಲಿ ಮಾತ್ರ, ಆದರೆ ರಾತ್ರಿ 8 ಗಂಟೆಗೆ ಮೈತುಂಬ ನೀಲಿಬಣ್ಣ ಬಳಿದುಕೊಂಡು ತಲೆಯ ಮೇಲೆ ಕಿರೀಟ, ಭುಜಕೀರ್ತಿ ಮುಂತಾದುವುಗಳಿAದ ಅಲಂಕೃತಗೊಳಿಸಿ ನೀಲಿ ಸೀರೆಯನ್ನು ಪಂಚೆಯಾಗಿ ಉಟ್ಟು ವಿಷ್ಣು ಚಕ್ರವನ್ನು ಕೈಯಲ್ಲಿ ಹಿಡಿದು ಸ್ಟೇಜಿನ ಹಿಂದೆ ಒಂದು ಬೆಂಚಿನ ಮೇಲೆ ಕುಳ್ಳರಿಸಿದ್ದೆವು. ಅವರಿಗೆ ಅರ್ಧಗಂಟೆಗೊAದು ಕಾಫಿ, ಬರ್ಕಲಿ (ಬಡಕಲಿ) ಸಿಗರೇಟ್ ವ್ಯವಸ್ಥೆ ಮಾಡಲು ನನ್ನ ತಮ್ಮ ಜಯಣ್ಣನಿಗೆ ಜವಾಬ್ದಾರಿ ನೀಡಲಾಗಿತ್ತು. ನಮ್ಮ ಇಬ್ಬರು ಚಿಕ್ಕಪ್ಪಗಳಾದ ಅಪ್ಪಯ್ಯನವರು ದೇವೇಂದ್ರನಾದರೆ, ತಿಪ್ಪೆಚೌಡಪ್ಪನವರು ಈಶ್ವರನ ಪಾತ್ರಧಾರಿಗಳಾಗಿ ಶ್ರೀ ವಿಷ್ಣುವಿನ ಓಡೋಲಗದಲ್ಲಿ ಆಸೀನರಾಗಿದ್ದರು.


   ಪಾತ್ರಧಾರಿಗಳ ಡೈಲಾಗ್ ಪ್ರಾಂಪ್ಟ್ ಮಾಡುವ ಕೆಲಸ ನನಗೆ ವಹಿಸಿ, ಡೈಲಾಗ್ ಪುಸ್ತಕವನ್ನು ನನ್ನ ಕೈಗೆ ಕೊಟ್ಟಿದ್ದರು ಮೇಷ್ಟ್ರು, ಇನ್ನು ಪರದೆ ಮೇಲೆ ಕೆಳಗೆ ಎಳೆದು ಇಳಿಸುವ ಕೆಲಸವನ್ನು ಗಟ್ಟಿ ಮುಟ್ಟಾಗಿದ್ದ ಫಕೃದ್ದೀನ್‌ಗೆ. ಹೀಗೆ ನಮ್ಮ ಶಾಲಾ ಗ್ಯಾಂಗಿನ ಎಲ್ಲರಿಗೂ ಒಂದೊಂದು ಕೆಲಸ ಹಂಚಿದ್ದೆವು.


   ಸ್ಟೇಜಿನ ಮುಂದೆ ಜನ ಭರ್ತಿ ತುಂಬಿದ್ದರು. ಸಂಜೆ 7 ಗಂಟೆಗೆ ಈಚಲು ಚಾಪೆ, ಕರಿಕಂಬಳಿ, ಜಮಖಾನ ಮುಂತಾದ ವಸ್ತುಗಳನ್ನು ತಂದು ಹರಡಿ ಮುಂದಿನ ಸೀಟು ಹಿಡಿಯಲು ಪ್ರಯತ್ನಿಸುತ್ತಿದ್ದರು. ನಮ್ಮೂರಿನ ದೇವಿ ಮಹಾತ್ಮ ಸುತ್ತಲ ಹತ್ತು ಹಳ್ಳಿಗಳಲ್ಲಿ ಹೆಸರುವಾಸಿಯಾಗಿದ್ದು, ತಂಡೋಪತಂಡವಾಗಿ ಜನ ಬರತೊಡಗಿದರು. ಶಾನುಭೋಗರ ಮನೆಯಿಂದ ಹಿಡಿದು ಗಣಪತಿ ದೇವಸ್ಥಾನದವರೆಗೂ ಜಮಾಯಿಸಿದ್ದರು. 8 ಗಂಟೆಗೆ ಸರಿಯಾಗಿ ನಾಟಕ, ಸಾಮೂಹಿಕವಾಗಿ ಗಣೇಶನ ಪ್ರಾರ್ಥನೆಯೊಂದಿಗೆ ಆರಂಭವಾಯಿತು, ರಕ್ತಬೀಜಾಸುರನ ಪಾತ್ರಧಾರಿಯ ಹೊರತುಪಡಿಸಿ, ಇತರ ಪಾತ್ರಧಾರಿಗಳು ಎಲ್ಲರೂ ಸಾಲಾಗಿ ನಿಂತು ಪ್ರಾರ್ಥನೆ ಮಾಡಿದರು. ನಂತರ ಪರದೆ ಕೆಳಗಿಳಿಸಿ ಫಕ್ರುವನ್ನು ಮೇಷ್ಟ್ರು 'ರಕ್ತಬೀಜಾಸುರ ಎಲ್ಲಿ' ಎಂದು ಪ್ರಶ್ನಿಸಿದರು. ಅದಕ್ಕೆ ಅವನು 'ಚೌಡಮ್ಮನ ದೇವಸ್ಥಾನದ ಮುಂದೆ ಕುಂತವೆ, ಅವರ ಟೇಂಗೆ ಸರಿಯಾಗಿ ತಮಟೆ ಬಾರಿಸಿಕೊಂಡು ಒಂದು ರೌಂಡು ಹಾಕಿ ಸ್ಟೇಜಿಗೆ ಬರ್ತಾರಂತೆ” ಎಂದ. "ಸರಿ ಬಿಡು' ಎಂದರು ಮೇಷ್ಟ್ರು.


( ಮುಂದಿನ ‘ಕಿನ್ನರಿ’ ಯಲ್ಲಿ ನಾಟಕ ದೇವಿ ಮಹಾತ್ಮೆಯ ರಸವತ್ತಾದ ದೃಶ್ಯಗಳನ್ನು ನೋಡಿ)