SORRY- ನಾರಿಯರೇ ಈ ಸಮಾಜವನ್ನು   ಕ್ಷಮಿಸಿಬಿಡಿ

  SORRY- ನಾರಿಯರೇ ಈ ಸಮಾಜವನ್ನು   ಕ್ಷಮಿಸಿಬಿಡಿ

   SORRY- ನಾರಿಯರೇ ಈ ಸಮಾಜವನ್ನು    ಕ್ಷಮಿಸಿಬಿಡಿ

 

ವರ್ತಮಾನ

 ---ನಾ ದಿವಾಕರ

 

 

ಬಿಲ್ಕಿಸ್‌ ಬಾನು ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಿದ ನಂತರ ಅವರನ್ನು ಸನ್ಮಾನ ಮಾಡಿ ಸ್ವಾಗತಿಸುವ ಒಂದು ಸಮಾಜ ನಮ್ಮ ನಡುವೆ ಉಸಿರಾಡುತ್ತಿರುವುದನ್ನು ಗಮನಿಸಿದಾಗ, ಮಹಿಳೆಯರ ಘನತೆ, ಗೌರವ, ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕಾಪಾಡುವುದು ಕೇವಲ ಕಾನೂನು, ಶಾಸನಗಳಿಂದ ಸಾಧ್ಯವಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಪುರುಷ ಸಮಾಜದ ದೃಷ್ಟಿಯಲ್ಲಿ ಅತ್ಯಾಚಾರ, ದೌರ್ಜನ್ಯಕ್ಕೊಳಗಾದ ಮಹಿಳೆ ದುರ್ಬಲ ಮಹಿಳೆಯಾಗಿ ಮಾತ್ರವೇ ಕಾಣುತ್ತಾಳೆ

 

SORRY- ನಾರಿಯರೇ ಈ ಸಮಾಜವನ್ನು

  ಕ್ಷಮಿಸಿಬಿಡಿ

 

ಮನುಜ ಸಂಬಂಧಗಳನ್ನು ಬೆಸೆಯುವ ಪ್ರಕ್ರಿಯೆಯಲ್ಲಿ ಪ್ರಧಾನ ಪಾತ್ರ ವಹಿಸುವ ಸಾಂಸ್ಕೃತಿಕ ಆಲೋಚನೆಗಳು ಮತ್ತು ಪಾರಂಪರಿಕ ಚಿಂತನೆಗಳು ವರ್ತಮಾನದ ವಾಸ್ತವಗಳನ್ನು ಸಮರ್ಪಕವಾಗಿ ಗ್ರಹಿಸದೆ ಹೋದರೆ ಅಂತಹ ಸಮಾಜಗಳಲ್ಲಿ ಸಂವೇದನೆ ಮತ್ತು ಸೃಜನಶೀಲತೆ ಕ್ರಮೇಣ ನಶಿಸುತ್ತಲೇ ಹೋಗುತ್ತದೆ. ಸಬಲೀಕರಣ ಮತ್ತು ಸಶಕ್ತೀಕರಣದ ಚಿಂತನೆಗಳ ಹಿಂದೆ ಬಲಹೀನತೆಯ ಒಂದು ಗ್ರಹಿಕೆ ಇರುವುದರಿಂದ, ಈ ಚಿಂತನೆಗಳನ್ನು ವೈಭವೀಕರಿಸುವ ಒಂದು ಸಮಾಜ ಔದಾರ್ಯ, ಉದಾತ್ತತೆ ಮತ್ತು ಪ್ರಾಬಲ್ಯದ ಚೌಕಟ್ಟಿನಲ್ಲೇ ಅಬಲರನ್ನು ಸಬಲರನ್ನಾಗಿ ಮಾಡುವ ಆಲೋಚನೆಯನ್ನು ಮಾಡುತ್ತದೆ. ಈ ಆಲೋಚನೆಗಳಿಗೆ ಪೂರಕವಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ವಾತಾವರಣವನ್ನು ರೂಪಿಸುವ ಗುರುತರ ಜವಾಬ್ದಾರಿ ಇಡೀ ಸಮಾಜದ ಮೇಲಿರುತ್ತದೆ. ಈ ದೃಷ್ಟಿಯಿಂದಾದರೂ ಆಧುನಿಕ ಸಮಾಜ ತನ್ನೊಳಗಿನ ತಾರತಮ್ಯಗಳನ್ನು ಹೋಗಲಾಡಿಸಿ ಸಂವೇದನಾಶೀಲತೆ ಮತ್ತು ಸೃಜನಶೀಲತೆಯನ್ನು ಸಶಕ್ತೀಕರಣಗೊಳಿಸಲು ಪ್ರಯತ್ನಿಸುವುದು ಅನಿವಾರ್ಯ. 

 

ಭಾರತದಂತಹ ಬಹುಸಾಂಸ್ಕೃತಿಕ ದೇಶಗಳಲ್ಲಿ ಈ ಪ್ರಯತ್ನಗಳೇ ಒಂದು ಸಮ ಸಮಾಜವನ್ನು ರೂಪಿಸಲು ಸಾಧ್ಯ ಎನ್ನುವುದನ್ನು ಮನಗಂಡೇ ಡಾ ಬಿ ಆರ್‌ ಅಂಬೇಡ್ಕರ್‌ ಮತ್ತವರ ಒಡನಾಡಿಗಳು ಈ ದೇಶದ ಸಂವಿಧಾನದಲ್ಲಿ ತುಳಿತಕ್ಕೊಳಗಾದವರ, ನಿರ್ಲಕ್ಷ್ಯಕ್ಕೊಳಗಾದವರ, ಅವಕಾಶವಂಚಿತರ ಸಬಲೀಕರಣದ ಹಲವು ಸೇತುವೆಗಳನ್ನು ನಿರ್ಮಿಸಿದ್ದಾರೆ. ಆಳುವ ವರ್ಗಗಳು ರೂಪಿಸುವ ಕಾಯ್ದೆ ಕಾನೂನುಗಳು ಈ ದುರ್ಬಲ ಎನ್ನಲಾಗುವ ವರ್ಗಗಳನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಮೇಲೆತ್ತುವ ನಿಟ್ಟಿನಲ್ಲಿ ಕಾರ್ಯಗತವಾಗಬೇಕಾಗುತ್ತದೆ. ವರ್ತಮಾನದ ಭಾರತದಲ್ಲಿ ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಈ ವರ್ಗಗಳನ್ನು ಪ್ರಧಾನವಾಗಿ ಪ್ರತಿನಿಧಿಸುವುದು ಅಲ್ಲಗಳೆಯಲಾಗದ ಸತ್ಯ. ಮೊದಲ ಮೂರು ವರ್ಗಗಳು ಸಾಮುದಾಯಿಕ ನೆಲೆಯಲ್ಲಿ ಎದುರಿಸುವ ಸಮಸ್ಯೆಗಳನ್ನು, ಸವಾಲುಗಳನ್ನು, ಮಹಿಳಾ ಸಮುದಾಯ ಲಿಂಗತ್ವದ ನೆಲೆಯಲ್ಲೂ ಎದುರಿಸುವುದರಿಂದ, ಈ ವರ್ಗಗಳನ್ನೂ ಒಳಗೊಂಡಂತೆ ಸಮಸ್ತ ಸಮಾಜವೇ ಲಿಂಗಸೂಕ್ಷ್ಮತೆ ಮತ್ತು ಸ್ತ್ರೀ ಸಂವೇದನೆಯನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಮಹಿಳೆಯರು ಎದುರಿಸುವ ನಿತ್ಯ ಜೀವನದ ಎಲ್ಲ ಸವಾಲುಗಳೂ “ಸಬಲೀಕರಣ-ಸಶಕ್ತೀಕರಣ”ದ ಪ್ರಮೇಯಗಳಲ್ಲೇ ಅಂತಿಮ ಪರಿಹಾರ ಕಂಡುಕೊಳ್ಳುವಂತಾಗುತ್ತದೆ.

 

ತಮ್ಮ 75ನೆಯ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಂದರ್ಭಿಕವಾಗಿ ಮಹಿಳಾ ಸಶಕ್ತೀಕರಣದ ಬಗ್ಗೆ ಪ್ರಸ್ತಾಪಿಸುತ್ತಾ,  “ ಭಾರತದ ಅಭಿವೃದ್ಧಿಯ ಪಥದಲ್ಲಿ ಮಹಿಳೆಯರನ್ನು ಗೌರವಿಸುವುದು ಒಂದು ಪ್ರಮುಖ ಅಂಶವಾಗಿರುತ್ತದೆ, ಇಡೀ ದೇಶವೇ ನಾರಿ ಶಕ್ತಿಯನ್ನು ಪ್ರೋತ್ಸಾಹಿಸಬೇಕಿದೆ. ನಮ್ಮ ವರ್ತನೆಯಲ್ಲಿ ಒಂದು ರೀತಿಯ ವಿಕೃತಿ ಮನೆಮಾಡಿದ್ದು ಮಹಿಳೆಯರನ್ನು ಅಪಮಾನಿಸುವುದು ಹೆಚ್ಚಾಗಿದೆ. ನಮ್ಮ ಮನಸ್ಥಿತಿ ಮತ್ತು ಮೌಲ್ಯಗಳಿಂದ ಈ ವಿಕೃತಿಗಳನ್ನು ತೊಡೆದುಹಾಕಲು ಪಣತೊಡೋಣವೇ ?” ಎಂದು ಕೇಳುತ್ತಲೇ “ ಮಹಿಳೆಯರ ಘನತೆಯನ್ನು ಕುಗ್ಗಿಸುವ” ಯಾವುದೇ ಕೆಲಸವನ್ನು ಮಾಡದಂತೆ ಕರೆ ನೀಡಿದ್ದಾರೆ. ಇತಿಹಾಸ ಪುಟಗಳಲ್ಲಿನ ವೀರ ವನಿತೆಯರನ್ನು ಸ್ಮರಿಸುತ್ತಲೇ ಆಡಿದ ಈ ಮಾತುಗಳು ಸಾರ್ವಕಾಲಿಕ ಪ್ರಸ್ತುತತೆ ಪಡೆದುಕೊಳ್ಳುತ್ತದೆ. ಆದರೆ ಭಾರತ ತನ್ನ 75ನೆಯ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲೇ “ಮಹಿಳೆಯ ಘನತೆಯನ್ನು ಲೆಕ್ಕಿಸದ” ಬೆಳವಣಿಗೆಗಳು ನಡೆದಿರುವುದು ಚರಿತ್ರೆಯ ವಿಡಂಬನೆ ಎಂದೇ ಹೇಳಬಹುದು. ಸಬಲೀಕರಣ(!)ಗೊಂಡ ವರ್ತಮಾನದ ಮಹಿಳೆ ತನ್ನ ಅಸ್ತಿತ್ವ, ಅಸ್ಮಿತೆ ಮತ್ತು ಘನತೆಯನ್ನು ಉಳಿಸಿಕೊಳ್ಳಲು ಪಿತೃಪ್ರಧಾನ ವ್ಯವಸ್ಥೆಯನ್ನೇ ಆಶ್ರಯಿಸಬೇಕಾದ ಒಂದು ವಿಕೃತ ಸನ್ನಿವೇಶಕ್ಕೆ ಭಾರತ ತನ್ನ 75ನೆಯ ಹುಟ್ಟುಹಬ್ಬದಂದು ಸಾಕ್ಷಿಯಾಗಿದೆ.

2002ರ ಗುಜರಾತ್‌ ದಂಗೆಗಳ ಸಂದರ್ಭದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಓರ್ವ ಮಹಿಳೆ ಹತ್ತು ವರ್ಷಗಳ ನಂತರ ನ್ಯಾಯ ಪಡೆದರೂ ಇಪ್ಪತ್ತು ವರ್ಷಗಳ ನಂತರ, ನ್ಯಾಯ ವ್ಯವಸ್ಥೆಯನ್ನೂ ಅಣಕಿಸುವ ರೀತಿಯಲ್ಲಿ ಆಕೆಯ ಸಂತ್ರಸ್ತ ಪದವಿಯನ್ನು ಶಾಶ್ವತವಾಗಿರಿಸಲಾಗಿದೆ. ಗುಜರಾತ್‌ ದಂಗೆಗಳ ನಡುವೆಯೇ ಪಾತಕಿಗಳಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಬಿಲ್ಕಿಸ್‌ ಬಾನು, ಬದುಕುಳಿದರೂ ತನ್ನ ಕುಟುಂಬದ ಏಳು ಸದಸ್ಯರನ್ನು ಕಳೆದುಕೊಂಡಿದ್ದರು. 2002ರಲ್ಲಿ ನಡೆದ ಈ ಪಾಶವೀ ಘಟನೆಯಲ್ಲಿ ಆಕೆಯ ಮೂರು ವರ್ಷದ ಮಗುವನ್ನೂ, ಕುಟುಂಬ ಸದಸ್ಯರನ್ನೂ ಹತ್ಯೆ ಮಾಡಲಾಗಿತ್ತು. ತನ್ನ ಕಣ್ಣೆದುರಿನಲ್ಲೇ ಕರುಳ ಕುಡಿಯ ಹತ್ಯೆಯಾಗುವುದನ್ನು ವೀಕ್ಷಿಸಿದ ಬಿಲ್ಕಿಸ್‌ ಬಾನು ಪುರುಷಾಧಿಪತ್ಯದ ವಿಕೃತ ದೌರ್ಜನ್ಯಕ್ಕೆ ಬಲಿಯಾಗಬೇಕಾಯಿತು. ಅತ್ಯಾಚಾರ ಎನ್ನುವುದೇ ಪುರುಷ ಸಮಾಜ ಮಹಿಳೆಯರ ಮೇಲೆ ತಮ್ಮ ಆಧಿಪತ್ಯ ಮತ್ತು ಪ್ರಾಬಲ್ಯವನ್ನು ಸಾಕ್ಷೀಕರಿಸುವ ಒಂದು ಪಾಶವೀ ಪ್ರಕ್ರಿಯೆ. ಹಾಗಾಗಿಯೇ ಸಬಲೀಕರಣಗೊಂಡ ಮಹಿಳೆಯರೂ ಸಹ ಅನೇಕ ಸಂದರ್ಭದಲ್ಲಿ ಪುರುಷರ ಕಾಮದಾಹಕ್ಕೆ, ಅಹಮಿಕೆಗೆ ಬಲಿಯಾಗಬೇಕಾಗುತ್ತದೆ.

 

ಜಾತಿ ವೈಷಮ್ಯದ ಸಂಘರ್ಷಗಳಲ್ಲಿ, ಕೋಮು ದ್ವೇಷದ ಗಲಭೆಗಳಲ್ಲಿ ಜಾತೀಯ/ಧಾರ್ಮಿಕ ಅಸ್ಮಿತೆಗಳು ಮೇಲುಗೈ ಸಾಧಿಸಿ ʼ ಅನ್ಯರ ʼ ಮೇಲೆ ದಬ್ಬಾಳಿಕೆ ನಡೆಸುವ ಪುರುಷಾಧಿಪತ್ಯದ ಪ್ರಕ್ರಿಯೆಯ ನಡುವೆಯೇ ಮಹಿಳಾ ಸಮೂಹ ಈ ʼ ಅನ್ಯರ ನಡುವಿನ ಭಿನ್ನಲಿಂಗ ಜೀವಿಗಳಾಗಿʼ ದಾಳಿಕೋರರ, ಹಂತಕರ, ಅತ್ಯಾಚಾರಿಗಳ ಪಾಶವೀ ದೃಷ್ಟಿಗೆ ಬಲಿಯಾಗುತ್ತದೆ. ಜಾತಿ ಶ್ರೇಷ್ಠತೆ, ಅಸ್ಪೃಶ್ಯತೆ ಮತ್ತು ಮತೀಯ ಗೋಡೆಗಳೆಲ್ಲವನ್ನೂ ಭಂಜಿಸಿಯೇ ಪುರುಷ ಸಮಾಜ ತನ್ನ ಪರಮಾಧಿಪತ್ಯವನ್ನು ಸಾಕ್ಷೀಕರಿಸಲು ಮಹಿಳೆಯ ಮೇಲೆ ದೌರ್ಜನ್ಯ ಎಸಗಲು ಮುಂದಾಗುತ್ತದೆ. ನಿತ್ಯ ಜೀವನದ ಸಾಂಪ್ರದಾಯಿಕ ಮಡಿವಂತಿಕೆ ಮತ್ತು ಸ್ಪೃಶ್ಯಾಸ್ಪೃಶ್ಯತೆಯ ಹಂಗು ತೊರೆದು ಮಹಿಳೆಯ ದೇಹದ ಮೇಲೆ ತನ್ನ ನಿಯಂತ್ರಣ ಸಾಧಿಸುವ ಪುರುಷ ಸಮಾಜ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದಂತಹ ಪಾಶವೀ ಮನಸ್ಥಿತಿಯನ್ನು ಸಾಂಸ್ಕೃತಿಕ ನೆಲೆಯಲ್ಲೂ ಸಮರ್ಥಿಸಿಕೊಳ್ಳುತ್ತದೆ. ಪ್ರಧಾನಿ ಮೋದಿಯವರ ಮಾತುಗಳನ್ನು ಈ ಹಿನ್ನೆಲೆಯಲ್ಲೇ ಅರ್ಥೈಸಿಕೊಂಡಾಗ, ನಮ್ಮ ಕಣ್ಣೆದುರು ಸ್ವತಂತ್ರ ಭಾರತದಲ್ಲಿ ಪುರುಷಾಧಿಪತ್ಯಕ್ಕೆ ಬಲಿಯಾದ ಸಂತ್ರಸ್ತ ಮಹಿಳೆಯರು ಸಾಲುಗಟ್ಟಿ ನಿಲ್ಲುತ್ತಾರೆ. 20 ವರ್ಷಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಬಿಲ್ಕಿಸ್‌ ಬಾನು, 30 ವರ್ಷಗಳ ಹಿಂದೆ ಇದೇ ಮಾನಸಿಕ/ಭೌತಿಕ ಕ್ಷೋಭೆಯನ್ನೆದುರಿಸಿದ ಭಾವರಿ ದೇವಿ , ಶಾಶ್ವತ ಸಂತ್ರಸ್ತೆಯರಾಗಿ ನಮ್ಮ ಮುಂದೆ ನಿಲ್ಲುತ್ತಾರೆ.

 

ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ತಾವು ಮಾಡಿದ, ಮಾಡದೆ ಇರುವ ತಪ್ಪಿಗಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಕ್ಷಾಂತರ ಕೈದಿಗಳ ಪೈಕಿ ಕೆಲವರನ್ನು ಸನ್ನಡತೆಯ ಆಧಾರದ ಮೇಲೆ, ಶಿಕ್ಷೆಯ ಅವಧಿ ಕಡಿತಗೊಳಿಸಿ, ಬಿಡುಗಡೆ ಮಾಡುವ ಒಂದು ಪರಂಪರೆಯನ್ನು ಭಾರತ ಅನುಸರಿಸಿಕೊಂಡುಬಂದಿದೆ. ಯಾವುದೋ ಒಂದು ವಿಷಮ ಸನ್ನಿವೇಶದಲ್ಲಿ, ಪ್ರಕ್ಷುಬ್ಧ ವಾತಾವರಣದಲ್ಲಿ ಪಾತಕೀ ಕೃತ್ಯಗಳಲ್ಲಿ, ಸಣ್ಣ ಪುಟ್ಟ ಅಪರಾಧಗಳಲ್ಲಿ ಭಾಗಿಯಾಗುವ ಮೂಲಕ ಹಾದಿ ತಪ್ಪುವ ಕೆಲವರಿಗಾದರೂ, ತಮ್ಮ ಜೀವನವನ್ನು ಸುಧಾರಿಸಿಕೊಳ್ಳುವ ಅವಕಾಶ ಕಲ್ಪಿಸಲು 1952ರಲ್ಲಿ ರೂಪಿಸಿದ ಈ ಕಾಯ್ದೆಯನ್ನು 2014ರಲ್ಲಿ ತಿದ್ದುಪಡಿ ಮಾಡಲಾಗಿದೆ. ಈ ಕಾಯ್ದೆಯ ನಿಯಮಗಳಡಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ಕೈದಿಗಳಿಗೆ ಸನ್ನಡತೆಯ ಶಿಕ್ಷೆ ಕಡಿತ-ಸನ್ನಡತೆಯ ಕ್ಷಮೆ ಅನ್ವಯಿಸುವುದಿಲ್ಲ. ಆದರೂ ಗುಜರಾತ್‌ ಸರ್ಕಾರ ಈ ಸಾಂವಿಧಾನಿಕ ನಿಯಮವನ್ನು ಉಲ್ಲಂಘಿಸಿ ಬಿಲ್ಕಿಸ್‌ ಬಾನು ಮೇಲೆ ಅತ್ಯಾಚಾರವೆಸಗಿದ ಮತ್ತು ಏಳು ಜನರ ಹತ್ಯೆ ಮಾಡಿದ ಅಪರಾಧಿಗಳನ್ನು ಸ್ವಾತಂತ್ರ್ಯದಿನದಂದೇ ಬಿಡುಗಡೆ ಮಾಡಿದೆ. ಇಲ್ಲಿ ಪ್ರಶ್ನೆ ಇರುವುದು ಶಿಕ್ಷೆ ಮತ್ತು ಅಪರಾಧಗಳು ಮಾತ್ರವೇ ಅಲ್ಲ. ನಮ್ಮ ಸಮಾಜದಲ್ಲಿ ಇಂದಿಗೂ ಗುರುತಿಸಲಾಗದ ಲಿಂಗ ಸೂಕ್ಷ್ಮತೆ ಮತ್ತು  ಸ್ತ್ರೀ ಸಂವೇದನೆಯ ಪ್ರಶ್ನೆಗಳು ಮುನ್ನೆಲೆಗೆ ಬರುತ್ತವೆ. ಅಜ್ಮೇರ್‌, ಮುಂಬೈ, ಖೈರ್ಲಾಂಜಿ, ಉನ್ನಾವೋ, ಹಥ್ರಾಸ್‌, ಕಥುವಾ ಹೀಗೆ ಅತ್ಯಾಚಾರದ ಇತಿಹಾಸವೇ ಕಣ್ಣೆದುರು ನಿಲ್ಲುತ್ತವೆ. ಈ ಸಂತ್ರಸ್ತೆಯರಿಗೆ ಏಕೆ ಅಂತಿಮ ನ್ಯಾಯ ದೊರೆಯುತ್ತಿಲ್ಲ ಎಂಬ ಪ್ರಶ್ನೆಗೆ ಇಡೀ ನಾಗರಿಕ ಸಮಾಜವೇ ನಿರುತ್ತರವಾಗುತ್ತದೆ.

 

1992ರಲ್ಲಿ ರಾಜಸ್ಥಾನ ಸರ್ಕಾರದ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯಲ್ಲಿ ಸಾಥಿನ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಭಾವರಿ ದೇವಿ ಎಂಬ ಸಾಮಾಜಿಕ ಕಾರ್ಯಕರ್ತೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು. ಆಕೆಯ ಅಪರಾಧ, ಒಂಬತ್ತು ತಿಂಗಳ ಹೆಣ್ಣು ಮಗುವಿನ ವಿವಾಹವನ್ನು ವಿರೋಧಿಸಿದ್ದು. ರಾಜಸ್ಥಾನದಲ್ಲಿ ಇಂದಿಗೂ ಕಾಣಬಹುದಾದ ಬಾಲ್ಯ ವಿವಾಹದ ಪಿಡುಗಿನ ವಿರುದ್ಧ ಆಕೆ ನಡೆಸಿದ ಹೋರಾಟಕ್ಕೆ ತೆತ್ತ ಬೆಲೆ ಸಾಮಾಜಿಕ/ಆರ್ಥಿಕ ಬಹಿಷ್ಕಾರ ಮತ್ತು ಸಾಮೂಹಿಕ ಅತ್ಯಾಚಾರ, ಜೊತೆಗೆ ಆಕೆಯ ಬದುಕು ಮತ್ತು ಜೀವನೋಪಾಯದ ಮಾರ್ಗ. ಈ ಪ್ರಕರಣದ ವಿಚಾರಣಾ ನ್ಯಾಯಾಲಯದಲ್ಲಿ ಐವರು ಆರೋಪಿಗಳನ್ನೂ ಬಿಡುಗಡೆ ಮಾಡುವ ಸಂದರ್ಭದಲ್ಲಿ, ಆರೋಪಿಗಳು ವಿಭಿನ್ನ ಜಾತಿಗೆ ಸೇರಿದವರಾಗಿರುವುದರಿಂದ, ಇಬ್ಬರು 60 ವರ್ಷಕ್ಕೂ ಮೇಲ್ಪಟ್ಟವರಾಗಿರುವುದರಿಂದ ಅತ್ಯಾಚಾರ ಸಂಭವನೀಯವಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ಈ ಪ್ರಕರಣದಲ್ಲಿ ಭಾವರಿದೇವಿಗೆ ನ್ಯಾಯ ದೊರೆಯದೆ ಹೋದರೂ, ಸುಪ್ರೀಂಕೋರ್ಟ್‌ ಕೃಪೆಯಿಂದ ಕಾರ್ಯಕ್ಷೇತ್ರಗಳಲ್ಲಿ ಲೈಂಗಿಕ ಕಿರುಕುಳದ ವಿರುದ್ಧ ಒಂದು ಪ್ರಬಲ ಕಾನೂನು ರಚಿಸಲಾಯಿತು. ವಿಶಾಖಾ ತೀರ್ಪು ಎಂದೇ ಹೆಸರಾದ ಈ ಪ್ರಕರಣ ಮಹಿಳಾ ಸಮುದಾಯಕ್ಕೆ ಸಾಂತ್ವನ ಮತ್ತು ಕಾನೂನಾತ್ಮಕ ರಕ್ಷಣೆ ನೀಡಿರುವುದಂತೂ ಸತ್ಯ. 2012ರ ನಿರ್ಭಯಾ ಪ್ರಕರಣದ ನಂತರ ವರ್ಮಾ ಆಯೋಗದ ಶಿಫಾರಸಿ ಮೇರೆಗೆ ಕೇಂದ್ರ ಸರ್ಕಾರ ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸುವ ಕಠಿಣ ಕಾನೂನನ್ನು ಸಹ ರೂಪಿಸಿದೆ. 12 ವರ್ಷಕ್ಕೂ ಮೇಲ್ಪಟ್ಟ ಅತ್ಯಾಚಾರದ ಆರೋಪಿಗಳಿಗೆ ಮಾತ್ರ ಅನ್ವಯಿಸುವ ಈ ಕಾಯ್ದೆ ಜಾರಿಯಾದ ನಂತರವೂ ಭಾರತದಲ್ಲಿ ಅತ್ಯಾಚಾರದ ಪ್ರಕರಣಗಳು ಕಡಿಮೆಯಾಗಿಲ್ಲ ಎನ್ನುವುದು ವಾಸ್ತವ.

 

ಬಿಲ್ಕಿಸ್‌ ಬಾನು ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಿದ ನಂತರ ಅವರನ್ನು ಸನ್ಮಾನ ಮಾಡಿ ಸ್ವಾಗತಿಸುವ ಒಂದು ಸಮಾಜ ನಮ್ಮ ನಡುವೆ ಉಸಿರಾಡುತ್ತಿರುವುದನ್ನು ಗಮನಿಸಿದಾಗ, ಮಹಿಳೆಯರ ಘನತೆ, ಗೌರವ, ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕಾಪಾಡುವುದು ಕೇವಲ ಕಾನೂನು, ಶಾಸನಗಳಿಂದ ಸಾಧ್ಯವಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಪುರುಷ ಸಮಾಜದ ದೃಷ್ಟಿಯಲ್ಲಿ ಅತ್ಯಾಚಾರ, ದೌರ್ಜನ್ಯಕ್ಕೊಳಗಾದ ಮಹಿಳೆ ದುರ್ಬಲ ಮಹಿಳೆಯಾಗಿ ಮಾತ್ರವೇ ಕಾಣುತ್ತಾಳೆ ಮತ್ತೊಂದೆಡೆ ಮತಧಾರ್ಮಿಕ-ಜಾತೀಯ ಅಸ್ಮಿತೆಗಳ ದೃಷ್ಟಿಯಲ್ಲಿ ಸಂತ್ರಸ್ತ ಮಹಿಳೆಗೆ ನಿಕೃಷ್ಟತೆಯ ವಿಶೇಷಣವನ್ನೂ ಜೋಡಿಸಲಾಗುತ್ತದೆ. ಕಥುವಾದಲ್ಲಿ ಅತ್ಯಾಚಾರಕ್ಕೊಳಗಾದ ಹಸುಳೆ , ಹಥ್ರಾಸ್‌ನಲ್ಲಿ ದಹನವಾದ ಮಹಿಳೆ, ಅತ್ಯಾಚಾರಕ್ಕೊಳಗಾಗಿ ಇನ್ನೂ ಬದುಕುಳಿದಿರುವ ಬಿಲ್ಕಿಸ್‌ ಬಾನು ಮತ್ತು ಭಾವರಿದೇವಿ ಇವರೆಲ್ಲರನ್ನೂ ಒಂದುಗೂಡಿಸುವ ಸಮಾನ ಎಳೆ ಎಂದರೆ ʼ ಮಹಿಳೆ ʼ ಎಂಬ ಅಸ್ಮಿತೆ ಮಾತ್ರ. 

 

ಈ ಅಸ್ಮಿತೆಯ ಘನತೆ ಮತ್ತು ಗೌರವವನ್ನು ಸಂರಕ್ಷಿಸಬೇಕಾದ ವಿದ್ಯಮಾನ ಎಂದು ಭಾವಿಸಿರುವುದೇ ನಮ್ಮ ಸಮಾಜದೊಳಗಿನ ಪಿತೃಪ್ರಧಾನ ಧೋರಣೆಯ ದ್ಯೋತಕವಾಗಿ ಕಾಣುತ್ತದೆ. ಶಾಸನಗಳು, ಕಾನೂನುಗಳು ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಮೂಲಕ ದೌರ್ಜನ್ಯಕ್ಕೊಳಗಾದ ಮಹಿಳೆಗೆ ನ್ಯಾಯ ಒದಗಿಸುತ್ತವೆ, ಮಹಿಳಾ ಸಮೂಹಕ್ಕೆ ಸಾಂತ್ವನ ನೀಡುತ್ತವೆ. ಆದರೆ ಈ ಕಠಿಣ ಕಾನೂನುಗಳ ಹೊರತಾಗಿಯೂ 2019ರಲ್ಲಿ ದೇಶದಲ್ಲಿ ಅಧಿಕೃತ ದಾಖಲೆಗಳ ಪ್ರಕಾರ 32033 ಅತ್ಯಾಚಾರಗಳು ನಡೆದಿವೆ. ಇವುಗಳ ಪೈಕಿ 4940 ಅಪ್ರಾಪ್ತ ಬಾಲಕಿಯರೂ ಇದ್ದಾರೆ. ಪ್ರತಿ ಹದಿನಾರು ನಿಮಿಷಕ್ಕೆ ಒಂದು ಅತ್ಯಾಚಾರ ನಡೆಯುತ್ತದೆ. ಇದು ಏನನ್ನು ಸೂಚಿಸುತ್ತದೆ ? ಬಿಲ್ಕಿಸ್‌ ಬಾನು ಪ್ರಕರಣದ ಕೈದಿಗಳನ್ನು ಬಿಡುಗಡೆ ಮಾಡುವ ಮೂಲಕ ಗುಜರಾತ್‌ ಸರ್ಕಾರ ಯಾವ ಸಂದೇಶವನ್ನು ರವಾನಿಸುತ್ತದೆ ? ಪಾತಕೀಕರಣವನ್ನು ಸಂರಕ್ಷಿಸಲೂ ಈ ದೇಶದಲ್ಲಿ ಒಂದು ಸುವ್ಯವಸ್ಥಿತ ವ್ಯವಸ್ಥೆ ಇದೆ ಎಂದಲ್ಲವೇ ?

 

ಅತ್ಯಾಚಾರಕ್ಕೊಳಗಾಗುವ ಮಹಿಳೆಯನ್ನು ಜಾತಿ, ಮತಧರ್ಮಗಳ ಮಸೂರದ ಮೂಲಕವೇ ನೋಡಿ, ಪಾಶವೀ ಕೃತ್ಯಗಳನ್ನು ಸಂಭ್ರಮಿಸುವ ಮನಸ್ಥಿತಿ ಇರುವಂತೆಯೇ, ಈ ಪಾಶವೀ ಕೃತ್ಯಗಳನ್ನು ಎಸಗುವ ಪಾತಕಿಗಳನ್ನು ಸಮರ್ಥಿಸುವ ಮನಸ್ಥಿತಿಯೂ ನಮ್ಮ ನಡುವೆ ಜೀವಂತವಾಗಿದೆ. ಬಹುಶಃ ಪ್ರಧಾನಿ ನರೇಂದ್ರ ಮೋದಿ ಮನಸ್ಥಿತಿಯನ್ನು ಬದಲಿಸಿಕೊಳ್ಳುವ ಬಗ್ಗೆ ಪ್ರಸ್ತಾಪಿಸಿದಾಗ ಇದೇ ಅರ್ಥದಲ್ಲಿ ಹೇಳಿರಬಹುದು. ಆದರೆ “ ಹೆಣ್ಣು ಮಕ್ಕಳನ್ನು ರಕ್ಷಿಸಿ-ಹೆಣ್ಣು ಮಕ್ಕಳನ್ನು ಓದಿಸಿ” (ಬೇಟಿ ಬಚಾವೋ ಬೇಟಿ ಪಡಾವೋ) ಅಭಿಯಾನವನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ, ಭಾರತದ ʼಬೇಟಿ ʼ ಗಳನ್ನು ಯಾರಿಂದ ರಕ್ಷಿಸಬೇಕು ಎನ್ನುವ ಪ್ರಶ್ನೆಯೂ ಮುನ್ನೆಲೆಗೆ ಬರುತ್ತದೆ. ಲಿಂಗ ಸೂಕ್ಷ್ಮತೆ ಮತ್ತು ಸ್ತ್ರೀ ಸಂವೇದನೆಯನ್ನು ಬೆಳೆಸುವ ನಿಟ್ಟಿನಲ್ಲಿ ಶಿಕ್ಷಣ ನೀಡಬೇಕಿರುವುದು ಈ ದೇಶದ ಪುರುಷಪ್ರಧಾನ ಸಮಾಜಕ್ಕೆ ಮತ್ತು ರಕ್ಷಣೆ ಬೇಕಿರುವುದು ಇದೇ ಪುರುಷಪ್ರಧಾನ ವ್ಯವಸ್ಥೆಯಿಂದ.

 

ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಪ್ರಾಬಲ್ಯದೊಂದಿಗೇ ಸಾಂಸ್ಕೃತಿಕ ರಕ್ಷಾ ಕವಚ ಇರುವುದರಿಂದಲೇ ಭಾರತದ ಮಹಿಳಾ ಸಮೂಹ ಅತ್ಯಾಚಾರ, ದೌರ್ಜನ್ಯಗಳ ನಡುವೆ ಬದುಕಬೇಕಿದೆ. ರಾಜಕಾರಣವನ್ನು ಪಾತಕೀಕರಣದಿಂದ ಮುಕ್ತಗೊಳಿಸುವ ಆಲೋಚನೆಯನ್ನೂ ಮಾಡದ ಒಂದು ರಾಜಕೀಯ ವ್ಯವಸ್ಥೆಗೆ, ಸಾಂಸ್ಕೃತಿಕ ರಾಜಕಾರಣದ ಪುರುಷಾಧಿಪತ್ಯವೂ ಪೂರಕವಾಗಿರುವ ಈ ಸಂದರ್ಭದಲ್ಲಿ, ಮಹಿಳಾ ಸಮೂಹ ತನ್ನ ರಕ್ಷಣೆಗೆ ತಾನೇ ಎದ್ದು ನಿಲ್ಲಬೇಕಿದೆ. ಲಿಂಗ ಸೂಕ್ಷ್ಮತೆ ಮತ್ತು ಸ್ತ್ರೀ ಸಂವೇದನೆಯ ಪರಿವೆಯೇ ಇಲ್ಲದ ಒಂದು ಸಮಾಜ ಈ ಸಂದರ್ಭದಲ್ಲಿ ನಾಚಿ ತಲೆತಗ್ಗಿಸುವಂತಾಗಿದೆ. ಈ ಸಂವೇದನೆಯನ್ನು ರೂಪಿಸಲು ನೆರವಾಗುವಂತಹ ಶೈಕ್ಷಣಿಕ ವ್ಯವಸ್ಥೆಯಲ್ಲೂ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಧರ್ಮಕ್ಕೆ ತಿಲಾಂಜಲಿ ನೀಡಲಾಗುತ್ತಿರುವ ಈ ಸಂದರ್ಭದಲ್ಲಿ, ಪುರುಷ ಸಮಾಜ ತನ್ನ ಸಾಂಸ್ಕೃತಿಕ ಬೇರುಗಳನ್ನು ಅವಲೋಕಿಸಿ, ಸಂವೇದನಾಶೀಲ ಜ್ಞಾನವಾಹಿನಿಗಳನ್ನು ಆವಾಹಿಸಿಕೊಳ್ಳುವುದು ಅನಿವಾರ್ಯವೂ ಆಗಿದೆ. ಸಬಲೀಕರಣಗೊಂಡ, ಸಶಕ್ತೀಕರಣಗೊಂಡ ಮಹಿಳೆಯೂ ಭಾರತದಲ್ಲಿ ಸುರಕ್ಷಿತವಾಗಿಲ್ಲ ಎನ್ನುವ ಸುಡುವಾಸ್ತವವನ್ನು ನಾವು ಅರ್ಥಮಾಡಿಕೊಂಡರೆ, ಈ ಜ್ಞಾನ ವಿಸ್ತರಣೆ ಸಾಧ್ಯವಾಗಬಹುದು.

-೦-೦-೦-