ಮನ್ವಂತರ ಕಾಲದಲ್ಲಿ ಅಂಬೇಡ್ಕರ್‌ ಪ್ರಸ್ತುತತೆ

  ಜೈ ಭೀಮ್‌ –ಲಾಲ್‌ ಸಲಾಂ ಘೋಷಣೆಯಲ್ಲಿ ಅಂತರ್ಗತವಾಗಬೇಕಾದ ಆಶಯವೂ ಇದೇ.

ಮನ್ವಂತರ ಕಾಲದಲ್ಲಿ ಅಂಬೇಡ್ಕರ್‌ ಪ್ರಸ್ತುತತೆ

 ನಾ_ದಿವಾಕರ

      ಗಣತಂತ್ರ ಭಾರತ ತನ್ನ 75ನೆಯ ವರ್ಷದಲ್ಲಿ ದೇಶದ ಭವಿಷ್ಯವನ್ನೇ ಪಲ್ಲಟಗೊಳಿಸುವಂತಹ ನಿರ್ಣಾಯಕ ಸಾಂವಿಧಾನಿಕ ಸವಾಲುಗಳನ್ನು ಎದುರಿಸುತ್ತಿದೆ. 2024ರ ಚುನಾವಣೆಗಳು  75ನೆಯ ಗಣತಂತ್ರ ದಿನದ ವೇಳೆಗೆ ಯಾವ ರೀತಿಯ ಆಳ್ವಿಕೆ ಇರಲಿದೆ ಎನ್ನುವುದನ್ನು ನಿರ್ಧರಿಸಲಿವೆ. ಪಕ್ಷ ರಾಜಕಾರಣದ ನೆಲೆಯಲ್ಲಿ ಮುಖ್ಯವಾಹಿನಿಯ ಎಲ್ಲ ಪಕ್ಷಗಳಿಗೂ ಪ್ರಜಾಪ್ರಭುತ್ವ-ಗಣತಂತ್ರ ಮತ್ತು ಸಂವಿಧಾನ ಎನ್ನುವುದು ಕೇವಲ ಅಧಿಕಾರದ ದಡ ಸೇರಿ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳುವ ಸಾಧನಗಳಾಗಿ ಮಾತ್ರ ಕಾಣುತ್ತವೆ. ಆದರೆ ಈ ಮೂರೂ ವಿದ್ಯಮಾನಗಳಿಂದ  ಪ್ರಭಾವಿತವಾಗುವ ಅಸಂಖ್ಯಾತ ಜನತೆಗೆ, ವಿಶೇಷವಾಗಿ ಫಲಾನುಭವಿ ಹಿತವಲಯಗಳಿಂದಾಚೆಗಿನ ಶೋಷಿತ ಜನತೆಗೆ ಈ ಮೂರೂ ಸಹ ಭವಿಷ್ಯ ಭಾರತದ ನಿರ್ಣಾಯಕ ಭೂಮಿಕೆಗಳಾಗಿ ಕಾಣುತ್ತವೆ. ಹಾಗಾಗಿಯೇ ಸಂವಿಧಾನ ಬದಲಾವಣೆ, ತಿದ್ದುಪಡಿ ಮುಂತಾದ ವಿಚಾರಗಳು ತಳಸಮುದಾಯಗಳ ಆತಂಕವನ್ನು ಹೆಚ್ಚಿಸುತ್ತವೆ.

 

     ಹಿಂದೂ ರಾಷ್ಟ್ರ ಸ್ಥಾಪನೆಯ ಪಣತೊಟ್ಟಿರುವ ಆರೆಸ್ಸೆಸ್-ಬಿಜೆಪಿ 2024ರಲ್ಲಿ ಅಧಿಕಾರಕ್ಕೆ ಬಂದರೆ ಭಾರತವನ್ನು ಮನುವಾದವೇ ಆಳುತ್ತದೆ ಎಂಬ ತೀವ್ರ ಆತಂಕ ತಳಸಮಾಜದ ಒಂದು ಬೌದ್ಧಿಕ ವಲಯವನ್ನೂ ಕಾಡುತ್ತಿದೆ. ಸಂವಿಧಾನ ಮತ್ತು ಮನುವಾದವನ್ನು ತುಲನಾತ್ಮಕವಾಗಿ ನೋಡುತ್ತಲೇ, ಭಾರತದ ಬಹುಸಂಖ್ಯಾತರಿಗೆ ʼ ಮನುಸ್ಮೃತಿ ʼ ಅಥವಾ ʼ ಮನುವಾದ ʼ ಹೇಗೆ ಮಾರಕವಾಗಲಿದೆ ಎಂಬ ಚರ್ಚೆ ಈಗಾಗಲೇ ವ್ಯಾಪಕವಾಗಿದೆ. ಆದರೆ ರಾಜಕೀಯ ಸಂಕಥನದ ಒಂದು ಭಾಗವಾಗಿರುವ                                     ʼಮನುವಾದʼ ಬರುಬರುತ್ತಾ ಕ್ಲೀಷೆಯಾಗಿ ಪರಿಣಮಿಸುತ್ತಿದ್ದು, ನಿರ್ದಿಷ್ಟ ವ್ಯಾಖ್ಯಾನಕ್ಕೊಳಪಡದೆ ಕೇವಲ ಹಿಂದುತ್ವದ ಪರ-ವಿರೋಧವನ್ನು ನಿಷ್ಕರ್ಷೆಮಾಡುವ ಬೌದ್ಧಿಕ ಕ್ರಿಯೆ ಅಥವಾ ಪ್ರಕ್ರಿಯೆಯಾಗಿ ಶುಷ್ಕ ಚರ್ಚೆಗಳಿಗೆ ಎಡೆಮಾಡಿಕೊಡುತ್ತಿದೆ. ಭಾರತದ ಸಂವಿಧಾನ ಮತ್ತು ಮನುವಾದವನ್ನು ಮುಖಾಮುಖಿಯಾಗಿಸುವಾಗ, ಗ್ರಾಂಥಿಕ ನೆಲೆಯನ್ನು ದಾಟಿ ಸಮಾಜದ ವಾಸ್ತವಿಕ ನೆಲೆಗಳಲ್ಲಿಟ್ಟು ಪರಾಮರ್ಶಿಸುವುದು ಇಂದಿನ ತುರ್ತು.

 

ಸಂವಿಧಾನದ ಅಂತಃಸತ್ವ ಮತ್ತು ಮನು

 

      ಭಾರತದ ಸಂವಿಧಾನದ ಮೂಲ ಸ್ಥಾಯಿ ಇರುವುದು ಒಳಗೊಳ್ಳುವಿಕೆಯಲ್ಲಿ(Inclusivenessಁ). ಸ್ವಾತಂತ್ರ್ಯ-ಸಮಾನತೆ-ಸೋದರತ್ವದ ತಾತ್ವಿಕ ನೆಲೆಗಳನ್ನು ಕೇವಲ ಆಡಳಿತಾತ್ಮಕವಾಗಿ ಅನುಕರಿಸದೆ, ಭೌತಿಕವಾಗಿ ಸಮಾಜದ ಕಟ್ಟಕಡೆಯ ಮನುಷ್ಯನನ್ನೂ ತಲುಪುವಂತೆ ಬೌದ್ಧಿಕವಾಗಿ-ಸಾಂಸ್ಕೃತಿಕವಾಗಿ ಅನುಸರಿಸುವುದು ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ಮೂಲ ಆಶಯವಾಗಿತ್ತು. ಅಂಬೇಡ್ಕರರ 134ನೆಯ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸುತ್ತಿರುವ ಹೊತ್ತಿನಲ್ಲಿ ಈ ಆಶಯಗಳಿಗೆ ಧಕ್ಕೆ ಉಂಟಾಗುವ ಆತಂಕವೂ ಕಾಡುತ್ತಿದೆ. ಮನುವಾದ ಎಂಬ ತಾತ್ವಿಕ ನೆಲೆ ಅಂಬೇಡ್ಕರರ ಸೈದ್ಧಾಂತಿಕ ನೆಲೆಗಳನ್ನು ಪಲ್ಲಟಗೊಳಿಸಬಹುದೇ ಎಂಬ ಪ್ರಶ್ನೆ , ಪ್ರಜಾಪ್ರಭುತ್ವ-ಸಂವಿಧಾನವನ್ನು ಪ್ರೀತಿಸುವ ಎಲ್ಲರಲ್ಲೂ ಕಾಡುತ್ತಿದೆ. ಅಂಬೇಡ್ಕರರ ಜಾತಿ ವಿನಾಶದ ಕರೆ ಕ್ರಿಯಾಶೀಲವಾಗಿ ಒಂದು ಜನಾಂದೋಲನದ ಸ್ವರೂಪ ಪಡೆದುಕೊಳ್ಳದೆ ಹೋದರೂ, ಸಮಾಜದಲ್ಲಿ ಬೇರೂರಿರುವ ಜಾತಿ ಪ್ರಜ್ಞೆಯನ್ನು ಹೋಗಲಾಡಿಸಿ, ಸಮ ಸಮಾಜವನ್ನು ಕಟ್ಟುವ ಹಾದಿಯಲ್ಲಿ ಇನ್ನೂ ಮೊಳಗುತ್ತಲೇ ಇದೆ. ಸಮಾಜದ ನಡುವೆ ಜಾತಿ ಪ್ರಜ್ಞೆ ಜೀವಂತವಾಗಿರುವವರೆಗೂ ಮನುಸ್ಮೃತಿಯೂ ಜೀವಂತವಾಗಿರುತ್ತದೆ ಎಂಬ ವಾಸ್ತವವನ್ನು ಇನ್ನಾದರೂ ಅರ್ಥಮಾಡಿಕೊಳ್ಳಬೇಕಿದೆ.

 

     ಭಾರತೀಯ ಸಂವಿಧಾನದ ಒಳಗೊಳ್ಳುವಿಕೆಗೆ ತದ್ವಿರುದ್ಧವಾಗಿ ಮನುಸ್ಮೃತಿ ಅಥವಾ ಮನುವಾದ ಹೊರಗುಳಿಸುವಿಕೆಯಲ್ಲಿ (Exclusionary) ತನ್ನ ತಾತ್ವಿಕ ನೆಲೆಗಳನ್ನು ವಿಸ್ತರಿಸುತ್ತದೆ. ಜಾತಿ ಶ್ರೇಣೀಕರಣ, ಶ್ರೇಷ್ಠತೆ, ಮೇಲರಿಮೆ ಇವೆಲ್ಲವನ್ನೂ ದಾಟಿ ನೋಡಿದಾಗ ಮನುಸ್ಮೃತಿಯಲ್ಲಿ ಕಾಣುವುದು ವಿಶಾಲ ಸಮಾಜವನ್ನು ವಿಭಜಿಸುವ ಮತ್ತು ನಿರಂತರ ವಿಘಟನೆಗೊಳಪಡಿಸುವ ಚಿಂತನಾವಾಹಿನಿ. ಈ ಚಿಂತನೆಯ ಮೂಲಕವೇ ಮನುಷ್ಯರ ನಡುವೆ ಮೇಲು ಕೀಳುಗಳ ಭಾವನೆಗಳನ್ನು ಉದ್ದೀಪನಗೊಳಿಸುತ್ತಾ ಇಡೀ ಸಮಾಜವನ್ನು ನಿಯಂತ್ರಿಸುವ, ನಿರ್ದೇಶಿಸುವ ಅಧಿಕಾರವನ್ನು ಮೇಲ್ವರ್ಗ-ಮೇಲ್ಜಾತಿ-ಮೇಲ್ಪದರದ ಸಮುದಾಯಗಳಿಗೆ ನೀಡುತ್ತದೆ. ಈ ಆಧಿಪತ್ಯವನ್ನು ತಮ್ಮದಾಗಿಸಿಕೊಳ್ಳಲು ತವಕಿಸುವ ಎಲ್ಲ ಜಾತಿ ಸಮುದಾಯಗಳಿಗೂ ಮನುಸ್ಮೃತಿಯ ಮೂಲ ತಾತ್ವಿಕ ನೆಲೆಗಳು ನೆರವಾಗುತ್ತಲೇ ಇರುತ್ತವೆ. ಹಾಗಾಗಿಯೇ ಭಾರತದ ಶ್ರೇಣೀಕೃತ-ಅರೆ ಊಳಿಗಮಾನ್ಯ-ಪಿತೃಪ್ರಧಾನ ಸಮಾಜದಲ್ಲಿ ಮನುಸ್ಮೃತಿಯ ಚಿಂತನೆಗಳು ಮನಸ್ಸಿನಾಳದಲ್ಲಿ ನೆಲೆ ಕಂಡುಕೊಂಡಿವೆ. ಭಾರತದ ಸಂವಿಧಾನದ ಆಶಯಗಳು  ಗ್ರಾಂಥಿಕವಾಗಿ ಉಳಿದಿವೆ.

    ಮನುಸ್ಮೃತಿ ಮಾನವ ಸಮಾಜವನ್ನು ಹೊರನಿಂತು ನೋಡುತ್ತದೆ. ಸಮಾಜದ ಭಿನ್ನ ಸ್ತರಗಳನ್ನು ವಿಂಗಡಿಸಿ ಹೊರಗಿಡುವ ಪ್ರಕ್ರಿಯೆಯ ಮೂಲಕ ಇಡೀ ಸಮುದಾಯಗಳನ್ನೇ ಅಪ್ತಸ್ತುತಗೊಳಿಸುತ್ತದೆ. ಭೌತಿಕ ಹೊರಗಿಡುವಿಕೆ, ಬೌದ್ಧಿಕ ಬಹಿಷ್ಕಾರ, ತಾತ್ವಿಕ ಪ್ರತ್ಯೇಕತೆ ಹಾಗೂ ಆಚರಣಾತ್ಮಕ ಭೇದಭಾವಗಳನ್ನು ತಳಮಟ್ಟದವರೆಗೂ ವಿಸ್ತರಿಸುವ ಮೂಲಕ, ಮನುಷ್ಯ ಸಮಾಜದಲ್ಲಿ ಸೃಷ್ಟಿಯಾಗಬಹುದಾದ ʼ ಅನ್ಯ ʼರನ್ನು ದೂರ/ಹೊರಗೆ ಇರಿಸುವ ಒಂದು ಸಾಮಾಜಿಕ ಪ್ರಕ್ರಿಯೆಗೆ ಚಾಲನೆ ನೀಡುತ್ತದೆ. ಭಾರತದ ಸಂವಿಧಾನ ಬೋಧಿಸುವ ʼಸೋದರತ್ವʼ ಇದಕ್ಕೆ ತದ್ವಿರುದ್ಧವಾಗಿ ʼಅನ್ಯʼ ಭಾವನೆಯೇ ಇಲ್ಲದ ಒಳಗೊಳ್ಳುವಿಕೆಯನ್ನು ಪ್ರಚೋದಿಸುತ್ತದೆ. ಸಂವಿಧಾನವನ್ನು ಪ್ರೀತಿಸುವ ಅಥವಾ ಆರಾಧಿಸುವ ಎಷ್ಟು ಸಮಾಜಗಳು ಈ ಒಳಗೊಳ್ಳುವಿಕೆಯ ತತ್ವವನ್ನು ಅಕ್ಷರಶಃ ಪಾಲಿಸುತ್ತಿವೆ ? ಈ ಪ್ರಶ್ನೆ ಶೋಷಿತ-ತಳಸಮುದಾಯಗಳನ್ನೂ ಕಾಡಬೇಕಿದೆ.

 

ನಾಗರಿಕ ಪ್ರಜ್ಞೆಯ ನೆಲೆಯಲ್ಲಿ

 

    ಸಾರ್ವಜನಿಕ ಪ್ರಜ್ಞೆ ಮತ್ತು ಮನಸ್ಥಿತಿಯ ಒಂದು ಭಾಗವಾಗಿರುವ ಮನುಸ್ಮೃತಿಯು ಮೂರು ನೆಲೆಗಳಲ್ಲಿ ಸಮಾಜವನ್ನು ನಿರ್ದೇಶಿಸುತ್ತದೆ. ಮೊದಲನೆಯದಾಗಿ ಜಾತಿ ಶ್ರೇಣಿಯ ನೆಲೆಯಲ್ಲಿ ಸಮಾಜವನ್ನು ಮೇಲು ಕೀಳೆಂಬ ಸ್ತರಗಳಲ್ಲಿ ವಿಂಗಡಿಸಿ, ಸಾಂಪ್ರದಾಯಿಕ ನಂಬಿಕೆ ಮತ್ತು ಆಚರಣೆಗಳ ಆಧಾರದಲ್ಲಿ ಶ್ರೇಷ್ಠ-ಕನಿಷ್ಠ ಎಂಬ ಭೇದವನ್ನು ಸೃಷ್ಟಿಸುತ್ತದೆ. ದ್ವಿಜ ಸಂಪ್ರದಾಯಸ್ಥರಷ್ಟೇ ತಳಸಮುದಾಯಗಳ ನಡುವೆಯೂ ಈ ವಿಭಜನೆ ಢಾಳಾಗಿ ಗೋಚರಿಸುತ್ತದೆ. ಇದು ಜಾತಿ ವ್ಯವಸ್ಥೆಯ ಮೂಲ ಸ್ಥಾಯಿ. ಎರಡನೆಯದಾಗಿ ಪ್ರತಿಯೊಂದು ಸಮಾಜದ ಒಳಗೂ ಯಜಮಾನಿಕೆಯ ಮನಸ್ಥಿತಿಯನ್ನು ರೂಢಿಗತಗೊಳಿಸುತ್ತದೆ. ಸಾಮುದಾಯಿಕ ನೆಲೆಗಳಲ್ಲೂ ಬೇರೂರುವ ಈ ಯಜಮಾನಿಕೆ ಸಮಾಜದೊಳಗಿನ ಮಹಿಳೆಯರನ್ನೂ, ದುರ್ಬಲರನ್ನೂ, ತಳಮಟ್ಟದ ಶ್ರಮಜೀವಿಗಳನ್ನೂ ಪ್ರತ್ಯೇಕಿಸುವ ಮೂಲಕ ಸಾಮಾಜಿಕ ಅಂತರಗಳನ್ನು ಕಾಪಾಡುತ್ತದೆ. ಇದು ಊಳಿಗಮಾನ್ಯ ವ್ಯವಸ್ಥೆಯ ಒಂದು ಲಕ್ಷಣ. ಮೂರನೆಯದಾಗಿ ಭಾರತದಲ್ಲಿ ಪ್ರಚಲಿತವಾಗಿರುವ ಎಲ್ಲ ಜಾತಿ ಸಮಾಜಗಳಲ್ಲೂ ಸಮಾನವಾಗಿ ಕಾಣಬಹುದಾದ ಒಂದು ಅಂಶವೆಂದರೆ, ಮನುಸ್ಮೃತಿ ಬೋಧಿಸುವ ಲಿಂಗ ಪ್ರಾಧಾನ್ಯತೆಯ ಅಂಶಗಳು. ಮಹಿಳೆಯರನ್ನು ಅಧೀನತೆಗೊಳಪಡಿಸುವ ಅಥವಾ ಸಾಂಪ್ರದಾಯಿಕ ಆಚರಣೆಗಳಲ್ಲಿ ಬಹಿಷ್ಕೃತರಾಗಿ ಹೊರಗಿಟ್ಟು ನೋಡುವ ಮನಸ್ಥಿತಿಯನ್ನು ಕೆಳಸ್ತರದ ಸಮಾಜಗಳಲ್ಲೂ ಕಾಣಬಹುದು. ಇದು ಪಿತೃಪ್ರಧಾನತೆಯ ಮೂಲ ಲಕ್ಷಣ.

 

    ಈ ಮೂಲ ಸ್ಥಾಯಿ ಲಕ್ಷಣಗಳನ್ನು ಗಮನದಲ್ಲಿಟ್ಟು ನೋಡಿದಾಗ ಈಗ ಸಾರ್ವಜನಿಕ ಚರ್ಚೆಯಲ್ಲಿರುವ ʼಮನುವಾದʼ ಯಾವ ನೆಲೆಯಲ್ಲಿ ಬಳಕೆಯಾಗುತ್ತಿದೆ ಎನ್ನುವ ಪ್ರಶ್ನೆಯೂ ಎದುರಾಗುತ್ತದೆ. ಸಂಘಪರಿವಾರ ಮತ್ತು ಅದನ್ನು ಅನುಕರಿಸುವ ಸಾಂಪ್ರದಾಯಿಕ ಶಕ್ತಿಗಳೆಲ್ಲವೂ ಈ ಮೂರೂ ಲಕ್ಷಣಗಳನ್ನು ತಾತ್ವಿಕವಾಗಿ ಅನುಮೋದಿಸಿ, ಅನುಕರಿಸಿ, ಅನುಸರಿಸುತ್ತವೆ. ಆದರೆ ಸಂಘಪರಿವಾರ ನಿರ್ದೇಶಿಸುವ ರಾಜಕಾರಣದಲ್ಲಿ, ಅಂದರೆ ಬಿಜೆಪಿ ಮತ್ತಿತರ ಬಲಪಂಥೀಯ ಪಕ್ಷಗಳಲ್ಲಿ, ಈ ಲಕ್ಷಣಗಳು ಆಂತರಿಕವಾಗಿ ನೆಲೆಗೊಂಡಿದ್ದರೂ, ಬಾಹ್ಯ ಸಮಾಜದಲ್ಲಿ ಭಿನ್ನ ನಿಲುವುಗಳನ್ನು ತಳೆಯುತ್ತವೆ. ಈ ಎರಡೂ ಬಣಗಳನ್ನು   ʼಮನುವಾದಿʼ ಎಂದು ನಿರ್ವಚಿಸುವ ನಡುಪಂಥೀಯ ರಾಜಕೀಯ ಪಕ್ಷಗಳು ಹಾಗೂ ಸಾಂವಿಧಾನವಾದಿ-ಅಂಬೇಡ್ಕರ್‌ವಾದಿಗಳಾಗಿ ಬಿಂಬಿಸಿಕೊಳ್ಳುವ ಸಮಾಜಗಳು, ಈ ಮೂಲ ಲಕ್ಷಣಗಳಿಂದ ಹೊರತಾಗಿವೆಯೇ ಎಂಬ ಪ್ರಶ್ನೆ ಬಹಳ ಮುಖ್ಯವಾದದ್ದು. ಏಕೆಂದರೆ ಮನು ಈ ಎಲ್ಲ ಸಮಾಜಗಳಲ್ಲೂ ಆಂತರಿಕವಾಗಿ ನೆಲೆಸಿರುತ್ತಾನೆ. ಸಂವಿಧಾನ ಅಥವಾ ಸಾಂವಿಧಾನಿಕ ಆಶಯಗಳು ಮೇಲು ಹೊದಿಕೆಯಾಗಿರುತ್ತದೆ.

 

      ʼ ಸಂವಿಧಾನ Vs ಮನುವಾದ ʼ ಎಂಬ ಸರಳೀಕೃತ ಸಂಕಥನದಲ್ಲಿ ಈ ಅಂಶಗಳನ್ನು ಒರೆಗೆ ಹಚ್ಚಿ ಚರ್ಚೆಗೊಳಪಡಿಸಬೇಕಿದೆ. ಡಾ. ಬಿ.ಆರ್.‌ ಅಂಬೇಡ್ಕರ್‌ ಸಂವಿಧಾನದಲ್ಲಿ ಅಳವಡಿಸಿದ ಸಮಾನತೆ ಮತ್ತು ಸೋದರತ್ವದ ಉದಾತ್ತ ಚಿಂತನೆಗಳನ್ನು ಕೇವಲ ಸಾಮಾಜಿಕ ನಿರ್ವಹಣೆಯ ಮಟ್ಟದಲ್ಲೇ ಯೋಚಿಸುತ್ತಾ, ಸಮಾನತೆಯ ಗುರಿಯತ್ತ ಸಾಗುತ್ತಿರುವ ಸಮಾಜಗಳಿಗೆ, ಸಮುದಾಯಗಳಿಗೆ, ತಮ್ಮೊಳಗಿನ ಈ ಆಂತರಿಕ ಸಂದಿಗ್ಧತೆಯನ್ನು ಎದುರಿಸುವುದು ವರ್ತಮಾನ ಭಾರತದ ಅನಿವಾರ್ಯತೆ. ಸೋದರತ್ವ ಎನ್ನುವುದೇ ಒಳಗೊಳ್ಳುವಿಕೆಯ ಮೂಲ ಸ್ಥಾಯಿ. ಆದರೆ ಬಾಹ್ಯ ಸಮಾಜವನ್ನು ಒಳಹೊಕ್ಕು ನೋಡಿದಾಗ, ಎಲ್ಲ ಜಾತಿಗಳಲ್ಲೂ ಯಾವುದೋ ಒಂದು ಸಮಾಜ-ಸಮುದಾಯ ಅಥವಾ ಗುಂಪನ್ನು ಹೊರಗಿಟ್ಟು ನೋಡುವ ಪ್ರವೃತ್ತಿ ಢಾಳಾಗಿ ಕಾಣುತ್ತದೆ.

 

ತಾತ್ವಿಕ ನೆಲೆಯಲ್ಲಿ ಅಂಬೇಡ್ಕರ್‌-ಮನು

 

     ದಲಿತ ಸಮುದಾಯದೊಳಗಿನ ಎಡ-ಬಲ ಪ್ರತ್ಯೇಕತೆ, ಆದಿವಾಸಿಗಳನ್ನು ಹೊರಗಿನವರೆಂದೇ ಭಾವಿಸುವ ಆಧುನಿಕ-ನಾಗರಿಕ-ನಗರಕೇಂದ್ರಿತ ಸಮಾಜದ ಧೋರಣೆ, ಆದಿವಾಸಿಗಳಲ್ಲೂ ಅಸ್ಪೃಶ್ಯರನ್ನು ಹೊರಗಿಡುವ ಪರಿಕಲ್ಪನೆ, ಅಲ್ಪಸಂಖ್ಯಾತರನ್ನು ʼ ಅನ್ಯ ʼ ಎಂದು ಭಾವಿಸುವ ಶೋಷಿತ ಸಮುದಾಯಗಳು, ಮಹಿಳೆಯನ್ನು ಜೈವಿಕ-ಲೈಂಗಿಕ-ಸಾಂಪ್ರದಾಯಿಕ-ಧಾರ್ಮಿಕ-ಆಚರಣಾತ್ಮಕ ಕಾರಣಗಳಿಗಾಗಿ ʼಹೊರಗಿಡುವʼ ಅಥವಾ ʼ ಬಹಿಷ್ಠೆ ʼಯಾಗಿ ಕಾಣುವ ಎಲ್ಲ ಜಾತಿಗಳು, ತಮ್ಮ  ಶ್ರೇಣಿ ಶ್ರೇಷ್ಠತೆ ಮತ್ತು ಆರ್ಥಿಕ ಯಜಮಾನಿಕೆಯನ್ನು ಕಾಪಾಡಿಕೊಳ್ಳಲು ಇಂದಿಗೂ ʼ ಸಾಮಾಜಿಕ ಬಹಿಷ್ಕಾರ ʼದಂತಹ ಹೀನ ಆಚರಣೆಯಲ್ಲಿ ತೊಡಗುವ ಶೂದ್ರ ಸಮುದಾಯಗಳು, ಅಸ್ಪೃಶ್ಯ ಸಮುದಾಯಗಳೊಡನೆ ಒಂದಾಗಲು ಬಯಸದ ಧಾರ್ಮಿಕ ಅಲ್ಪಸಂಖ್ಯಾತರು ಈ ಎಲ್ಲ ಸಾಮಾಜಿಕ ನೆಲೆಗಳನ್ನೂ ಆವರಿಸಿರುವುದು ಮನುಸ್ಮೃತಿ ಬೋಧಿಸುವ ಮೂರು ಶ್ರೇಷ್ಠತೆಯ ಚಿಂತನಾಕ್ರಮ. ವಿಪರ್ಯಾಸವೆಂದರೆ ಈ ಎಲ್ಲ ಸಮಾಜಗಳಲ್ಲೂ  ʼಮನುವಾದಕ್ಕೆ ʼ ವಿರೋಧ ಕಂಡುಬರುತ್ತದೆ. ಸಂವಿಧಾನ ಬದ್ಧತೆ ಕಾಣುತ್ತದೆ. ಅಂಬೇಡ್ಕರರ ಆರಾಧನೆಯೂ ಕಾಣಸಿಗುತ್ತದೆ. ಈ ತಾತ್ವಿಕ ವೈಪರೀತ್ಯ ಮತ್ತು ಸೈದ್ಧಾಂತಿಕ ವೈರುಧ್ಯಗಳ ನಡುವೆಯೇ ಅಂಬೇಡ್ಕರರನ್ನು ʼಪೂಜಿಸುವʼ ಅತಿರೇಕದ ಮನಸ್ಥಿತಿಯೂ ಹೆಚ್ಚಾಗುತ್ತಿದೆ.

 

     ಆರಾಧನಾ ಸಂಸ್ಕೃತಿಯನ್ನು, ವ್ಯಕ್ತಿಪೂಜೆಯನ್ನು ವಿರೋಧಿಸುತ್ತಲೇ ಎಲ್ಲರಲ್ಲೂ ಒಂದಾಗುವ ಬೌದ್ಧ ಚಿಂತನೆಗಳನ್ನು ಸ್ವೀಕರಿಸಿದ ಅಂಬೇಡ್ಕರ್‌ ತಳಸಮುದಾಯಗಳ ಘನತೆ, ಗೌರವ, ಜೀವಿಸುವ ಹಕ್ಕು ಹಾಗೂ ಸಾಮಾಜಿಕ-ಸಾಂಸ್ಕೃತಿಕ ಅಸ್ಮಿತೆಗಳ ದೃಷ್ಟಿಯಿಂದ ಆರಾಧಿಸಲ್ಪಡುವುದು ವರ್ತಮಾನ ಭಾರತದ ಸಾಮಾಜಿಕ ಅನಿವಾರ್ಯತೆ ಎನಿಸಬಹುದು. ಆದರೆ ತಾತ್ವಿಕವಾಗಿ ಇದು ಶೋಷಿತ ಸಮುದಾಯಗಳನ್ನು ಮತ್ತೊಮ್ಮೆ ʼಮನುಸ್ಮೃತಿʼ ಬೋಧಿಸುವ ಹೊರಗಿಡುವಿಕೆಯ ಸಂಸ್ಕೃತಿಯತ್ತಲೇ ಕರೆದೊಯ್ಯುತ್ತದೆ. ಭಾರತದ ಸಾರ್ವಜನಿಕ ಪ್ರಜ್ಞೆಯಲ್ಲಿ ಬೌದ್ಧಿಕವಾಗಿ ಗಟ್ಟಿಯಾಗಿರುವ ಮನುಸ್ಮೃತಿಯನ್ನು ಧಿಕ್ಕರಿಸದೆ ಹೋದರೆ ಡಾ. ಅಂಬೇಡ್ಕರ್‌ ಆಶಿಸಿದ ಸಮಾನತೆ-ಸೋದರತ್ವದ ಭಾವನೆಗಳನ್ನು ಬೆಳೆಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಭಾರತದ ಜಾತಿ ವ್ಯವಸ್ಥೆಯನ್ನು ಪ್ರಧಾನವಾಗಿ ನಿರ್ದೇಶಿಸುವ ಊಳಿಗಮಾನ್ಯತೆ, ಪಿತೃಪ್ರಧಾನತೆ ಮತ್ತು ಜಾತಿ ಶ್ರೇಷ್ಠತೆಯನ್ನು ತೊಡೆದುಹಾಕದೆ, ʼಮನುವಾದʼವನ್ನು ನಿರ್ವಚಿಸಲೂ ಸಾಧ್ಯವಾಗುವುದಿಲ್ಲ. ಹಾಗೊಮ್ಮೆ ಸಾಧ್ಯವಾದರೂ ಅದು ಕ್ಲೀಷೆಯಾಗಿ ಉಳಿದುಬಿಡುತ್ತದೆ.

 

     ಏಪ್ರಿಲ್‌ 14ರಂದು ಅಂಬೇಡ್ಕರರ ಜನ್ಮ ದಿನೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ನಮ್ಮನ್ನು ಕಾಡಬೇಕಿರುವುದು ಈ ಜಟಿಲ ಪ್ರಶ್ನೆ. ಅಂಬೇಡ್ಕರರ ಸಮಾನತೆಯ ತತ್ವಗಳನ್ನು ಅನುಸರಿಸುವ ಸಾಮಾಜಿಕ ಪ್ರಜ್ಞೆ, ಅನುಕರಿಸುವ ತಾತ್ವಿಕ ಮನೋಭಾವ ಮತ್ತು ಪಸರಿಸುವ ಸೈದ್ಧಾಂತಿಕ ಬದ್ಧತೆ ಇವೆಲ್ಲವನ್ನೂ ಒಳಗೊಳ್ಳಬೇಕಾದರೆ, ನಮ್ಮ ಸಮಾಜದ ಕಟ್ಟಕಡೆಯ ವ್ಯಕ್ತಿಯಲ್ಲೂ ಆಳವಾಗಿ ಕೂತಿರುವ ಮನುಸ್ಮೃತಿಯ ಸ್ಥಾಯಿಭಾವವನ್ನು ಹೋಗಲಾಡಿಸುವುದು ನಮ್ಮ ಪ್ರಥಮ ಆದ್ಯತೆಯಾಗಬೇಕು. ಆದರೆ ಸಾಮಾಜಿಕವಾಗಿ ಮೇಲ್ದರ್ಜೆಗೆ ಏರಿದ, ಆರ್ಥಿಕವಾಗಿ ಮೇಲ್‌ಸ್ತರವನ್ನು ಗಳಿಸಿರುವ, ಸಾಂಸ್ಕೃತಿಕವಾಗಿ ಮೇಲರಿಮೆಯನ್ನು ರೂಢಿಸಿಕೊಂಡಿಸಿರುವ ತಳಸಮುದಾಯಗಳನ್ನೂ ಈ ಜಟಿಲ ಪ್ರಶ್ನೆ ಕಾಡಿದಂತೆ ಕಾಣುತ್ತಿಲ್ಲ. ಡಾ. ಬಿ.ಆರ್.‌ ಅಂಬೇಡ್ಕರ್‌ ಅವರನ್ನು ಸಂವಿಧಾನ-ಪೀಠಿಕೆ-ಮೀಸಲಾತಿ ಮುಂತಾದ ಆಳ್ವಿಕೆಯ ನೆಲೆಗಳಿಂದಾಚೆಗೂ ನೋಡುವ ವ್ಯವಧಾನವನ್ನು ಬೆಳೆಸಿಕೊಂಡಾಗ ಮಾತ್ರವೇ, ಅವರ ತಾತ್ವಿಕ ನೆಲೆಗಳೂ, ಬೌದ್ಧಿಕ ಚಿಂತನಾ ಕ್ರಮಗಳೂ ನಮ್ಮೊಳಗೆ ಇಳಿಯಲು ಸಾಧ್ಯ.

 

      ನಾವು ಅಂಬೇಡ್ಕರರನ್ನು ಆರಾಧಿಸುತ್ತೇವೆ, ಅನುಸರಿಸುತ್ತೇವೆ ಆದರೆ ಅವರ ಚಿಂತನಾಕ್ರಮದ ಮೂಲ ಸ್ಥಾಯಿಯಾದ ʼಸೋದರತ್ವ ʼವನ್ನು ಬೆಳೆಸುವುದರಲ್ಲಿ ವಿಫಲರಾಗುತ್ತಿದ್ದೇವೆ. ಈ ವೈಫಲ್ಯಕ್ಕೆ ಕಾರಣ ಎದೆಯಾಳಕ್ಕೆ ಇಳಿದಿರುವ ಮನುಸ್ಮೃತಿಯ ಚಿಂತನಾಕ್ರಮ. ಗ್ರಾಂಥಿಕವಾಗಿ ಸಂವಿಧಾನವನ್ನು ವೈಭವೀಕರಿಸುತ್ತಾ ನಡೆದಿರುವ ಸಮಾಜವು ಬೌದ್ಧಿಕವಾಗಿ ಮನುಸ್ಮೃತಿಯನ್ನು ಒಳಗಿಳಿಸಿಕೊಳ್ಳುತ್ತಾ, ನವ ಉದಾರವಾದ ಮತ್ತು ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆಯ ಶೋಷಣೆಯ ನೆಲೆಗಳನ್ನು ಒಪ್ಪಿಕೊಳ್ಳುತ್ತಿದೆ. ಹಾಗಾಗಿಯೇ ಕಣ್ಣಿಗೆ ಕಾಣುವ ದೌರ್ಜನ್ಯ, ತಾರತಮ್ಯ, ಅಸಮಾನತೆಗಳೂ ಸಹ ನಮ್ಮ ಅಂತರ್‌ ಪ್ರಜ್ಞೆಯನ್ನು ಕದಡುತ್ತಿಲ್ಲ. ʼಎಲ್ಲರನೊಳಗೊಳ್ಳುವʼ ಮನಸ್ಥಿತಿಯನ್ನು ರೂಢಿಸಿಕೊಳ್ಳದೆ ಹೋದರೆ ʼ ಸೋದರತ್ವ ʼ ಎನ್ನುವುದು ಕೇವಲ ಘೋಷಣೆಯಾಗಿಬಿಡುತ್ತದೆ. ಶೂದ್ರ ಸಮುದಾಯಗಳೂ, ಕೆಳಸ್ತರದ ಜಾತಿ ಸಮಾಜಗಳೂ ಗಂಭೀರವಾಗಿ ಯೋಚಿಸಬೇಕಾದ ವಿಚಾರ ಇದು.

 

      ಡಾ. ಬಿ.ಆರ್.‌ ಅಂಬೇಡ್ಕರ್‌ ಬಯಸಿದ –ಸೋದರತ್ವ – ಭೌತಿಕವಲ್ಲ ಅದೊಂದು ಚಿಂತನಾಕ್ರಮ. ನಮ್ಮ ಜೀವನವನ್ನು ನಿರ್ದೇಶಿಸಬೇಕಾದ ಬುದ್ಧತತ್ವ. ನಮ್ಮ ಸಾಮಾಜಿಕ ಸೌಹಾರ್ದತೆಯನ್ನು ಕಾಪಾಡಲು ಬೇಕಾಗುವ ಬುದ್ಧ ಪ್ರಜ್ಞೆ. ಸಾಂಸ್ಕೃತಿಕ ಸಮನ್ವಯವನ್ನು ಸಾಧಿಸಲು ಅಗತ್ಯವಾದ ಬುದ್ಧ ಚಿಂತನೆ. ಈ ಪ್ರಜ್ಞೆಯನ್ನು ವಿಸ್ತರಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೂ ತಲುಪಿಸಬೇಕಾದರೆ ನಮ್ಮೊಳಗಿರುವ ಮನುಸ್ಮೃತಿಯ ಚಿಂತನಾಕ್ರಮಗಳನ್ನು ತೊಡೆದುಹಾಕಬೇಕಾಗುತ್ತದೆ. ಆಗ ಮಾತ್ರ ನಾವು ʼ ಮನುವಾದ ಅಥವಾ ಮನುವಾದಿ ʼ ಎಂಬ ಪದಬಳಕೆಯನ್ನು ಸ್ಪಷ್ಟವಾಗಿ ನಿರ್ವಚಿಸಲು ಸಾಧ್ಯ. ವರ್ತಮಾನ ಭಾರತದ ಸಾಮಾಜಿಕ-ಸಾಂಸ್ಕೃತಿಕ ನೆಲೆಗಳಲ್ಲಿ ನಿಂತು ಯೋಚಿಸುವಾಗ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರನ್ನು ಕೇವಲ ಜಾತಿ ವಿನಾಶದ ನೆಲೆಯಲ್ಲಿ ನೋಡುವ ಬದಲು, ಸ್ತ್ರೀ ವಿಮೋಚನೆಯ ನೆಲೆಯಲ್ಲಿ, ಒಳಗೊಳ್ಳುವಿಕೆಯ ನೆಲೆಯಲ್ಲಿ ಮತ್ತು ಸಮಾನತೆಯ ನೆಲೆಯಲ್ಲಿ ನೋಡುವುದು ಈ ಕಾಲದ ಅನಿವಾರ್ಯತೆ.

 

     ಜೈ ಭೀಮ್‌ –ಲಾಲ್‌ ಸಲಾಂ ಘೋಷಣೆಯಲ್ಲಿ ಅಂತರ್ಗತವಾಗಬೇಕಾದ ಆಶಯವೂ ಇದೇ.