ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷರ ಕೊಲೆ ಯತ್ನ ಕೇಸ್ : ಕರ್ತವ್ಯಕ್ಕೆ ಹಾಜರಾದ ಆರೋಪಿ ಎಇ ಶಂಭು
ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷರ ಕೊಲೆ ಯತ್ನ ಕೇಸ್ : ಕರ್ತವ್ಯಕ್ಕೆ ಹಾಜರಾದ ಆರೋಪಿ ಎಇ ಶಂಭು , shambhu-omkar-bjp-sc-morcha
ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷರ ಕೊಲೆ ಯತ್ನ
ಕೇಸ್ : ಕರ್ತವ್ಯಕ್ಕೆ ಹಾಜರಾದ ಆರೋಪಿ ಎಇ ಶಂಭು
ತುಮಕೂರು: ಜಿಲ್ಲಾ ಬಿಜೆಪಿ ಎಸ್. ಸಿ. ಮೋರ್ಚಾ ಅಧ್ಯಕ್ಷರ ಓಂಕಾರ್ ಅವರ ಪತ್ನಿಯೊಂದಿಗೆ ಒಪ್ಪಿತ ಅಕ್ರಮ ಲೈಂಗಿಕ ಸಂಬಂಧ ಆರೋಪದ ವಿವಾದದಲ್ಲಿ ಓಂಕಾರ್ ಕೊಲೆ ಯತ್ನ ಹಾಗೂ ಜಾತಿ ನಿಂದನೆ ಕ್ರಿಮಿನಲ್ ಕೇಸ್‌ನ ಮುಖ್ಯ ಆಪಾದಿತ ತುಮಕೂರು ಲೋಕೋಪಯೋಗಿ ಇಲಾಖಾ ಉಪವಿಭಾಗದ ಪ್ರಬಾರಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಂಭುಕುಮಾರ್ ನ್ಯಾಯಾಲಯದಿಂದ ಜಾಮೀನು ಪಡೆದು, ಹಾಗೂ ಅಮಾನತು ಆದೇಶಕ್ಕೆ ಕೆಎಟಿಯಿಂದ ತಡೆಯಾಜ್ಞೆ ತಂದು ಕರ್ತವ್ಯಕ್ಕೆ ಹಾಜರಾಗಿದ್ದು ಈ ಮೂಲಕ ಪ್ರಕರಣ ಮತ್ತೊಂದು ಹಂತ ತಲುಪಿದೆ.
ಜಿಲ್ಲಾ ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ ಓಂಕಾರೇಶ್ವರ (ಓಂಕಾರ್) ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 12ರಂದು ನೀಡಿದ ದೂರಿನ ಆಧಾರದ ಮೇಲೆ ಸಹಾಯಕ ಇಂಜಿನಿಯರ್ ಶಂಭುಕುಮಾರ್ , ಖುದ್ದು ಓಂಕಾರ್ ಅವರ ಪತ್ನಿ ಹಾಗೂ ಬೆಂಗಳೂರಿನ ಪ್ರಾಮ್ಸಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಅಗಿರುವ ಅಶ್ವಿನಿ ಹಾಗೂ ಆಕೆಯ ತಾಯಿ ಲಕ್ಷ್ಮಮ್ಮ ಇವರ ವಿರುದ್ಧ ಅಪರಾಧ ಮೊಕದ್ದಮೆ ದಾಖಲಾಗಿದ್ದು, ಎರಡು ಮತ್ತು ಮೂರನೇ ಆಪಾದಿತರಾಗಿರುವ ಅಶ್ವಿನಿ ಹಾಗೂ ಲಕ್ಷ್ಮಮ್ಮರವರನ್ನು ಏಪ್ರಿಲ್ 20ರಂದು ಪೊಲೀಸರು ಬಂಧಿಸಿ, ನ್ಯಾಯಾಯಲಕ್ಕೆ ಹಾಜರು ಪಡಿಸಿದ್ದು ಈ ಇಬ್ಬರನ್ನೂ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಕಳಿಸಿತ್ತು.
ಪ್ರಕರಣದ ಮೊದಲ ಆರೋಪಿ ಸಹಾಯಕ ಇಂಜಿನಿಯರ್ ಶಂಭುಕುಮಾರ್ ಮಾತ್ರ ಯಾರಿಗೂ ಸಿಗದೆ ತಲೆ ತಪ್ಪಿಸಿಕೊಂಡಿದ್ದು ಈತನ ಪತ್ತೆಗೆ ಪೊಲೀಸರು ಪ್ರಯತ್ನ ನಡೆಸಿದ್ದರು. ಬಿಜೆಪಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಓಂಕಾರ್ ಮೇಲೆ ಕೊಲೆ ಯತ್ನ ಹಾಗೂ ಜಾತಿ ನಿಂದನೆಯಾಗಿದ್ದು ಸರ್ಕಾರಿ ನೌಕರರಾಗಿರುವ ಶಂಭುಕುಮಾರ್ ಹಾಗೂ ಅಶ್ವಿನಿ ಅವರ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ಮಾಜಿ ಸಚಿವ ಸೊಗಡು ಶಿವಣ್ಣನವರು ಏಪ್ರಿಲ್ 29ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು.
ಪೊಲೀಸ್ ವರದಿಗಳು, ಪತ್ರಿಕಾ ವರದಿಗಳು ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣನವರ ಪತ್ರಗಳನ್ನು ಉಲ್ಲೇಖಿಸಿದ ಸರ್ಕಾರವು ದಿನಾಂಕ 31.05.2022ರ ಆದೇಶ ಸಂಖ್ಯೆ ಲೋಇ 21 ಸೇವಿಇ 2022ರಲ್ಲಿ ಆದೇಶ ಹೊರಡಿಸಿ, ಈ ಇಬ್ಬರು ನೌಕರರ ಮೇಲೆ ಇಲಾಖಾ ವಿಚಾರಣೆ ಬಾಕಿ ಇರಿಸಿ ಅಶ್ವಿನಿ ಅವರನ್ನು ಪೊಲೀಸರು ಬಂಧಿಸಿದ ಏಪ್ರಿಲ್ 20ರಿಂದ ಹಾಗೂ ಶಂಭುಕುಮಾರ್ ಅವರನ್ನು ಮೇ. 31ರಿಂದ ಜಾರಿಗೆ ಬರುವಂತೆ ಲೋಕೋಪಯೋಗಿ ಇಲಾಖೆಯ ಸೇವೆಗಳು ಬಿ ಶಾಖೆಯ ಅಧೀನ ಕರ‍್ಯದರ್ಶಿ ಅಮಾನತಿನಲ್ಲಿ ಇರಿಸಿ ಆದೇಶ ಹೊರಡಿಸಿದ್ದರು.
ಪ್ರಸ್ತುತ ಸಹಾಯಕ ಇಂಜಿನಿಯರ್ ಶಂಭುಕುಮಾರ್ ಅವರ ಮೇಲೆ ಬೆಂಗಳೂರಿನ ಮಹಾಲಕ್ಷ್ಮಿ ಪುರಂ ಪೊಲೀಸ್ ಠಾಣೆಯಲ್ಲಿ ಕ್ರೈಂ ಸಂ. 89/2022ರಲ್ಲಿ ದಾಖಲಾಗಿರುವ ಅಪರಾಧ ಪ್ರಕರಣದಲ್ಲಿ ಜಾಮೀನು ಪಡೆದು ಹಾಗೂ ಸರ್ಕಾರದ ಆಮಾನತು ಆದೇಶಕ್ಕೆ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ತಡೆಯಾಜ್ಞೆ ಪಡೆದು ಕರ್ತವ್ಯಕ್ಕೆ ಹಾಜರಾಗಿರುವುದಾಗಿ ಸ್ವತಃ ಅವರೇ ‘ಬೆವರ ಹನಿ’ ದಿನಪತ್ರಿಕೆಗೆ ಖಚಿತ ಪಡಿಸಿದ್ದಾರೆ.
ಹೊಸದಾಗಿ ಸೃಜಿಸಲಾದ ತುಮಕೂರು ಲೋಕೋಪಯೋಗಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ಮೂಲತಃ ಸಹಾಯಕ ಇಂಜಿನಿಯರ್ ಆಗಿರುವ ಶಂಭುಕುಮಾರ್ ಎರಡು ವರ್ಷದಿಂದ ಕರ‍್ಯನಿರ್ವಹಿಸುತ್ತಿದ್ದರು. ಆದರೆ ಅಮಾನತಿಗೊಳಗಾಗಿ ಹಿಂದಿರುಗಿರುವ ಇವರನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯ ಬದಲಿಗೆ ಅವರ ಸ್ವಾಭಾವಿಕವಾದ ಸಹಾಯಕ ಇಂಜಿನಿಯರ್ ಹುದ್ದೆಯಲ್ಲಿ ಮುಂದುವರೆಸಲಾಗಿದೆ ಎಂದು ತಿಳಿದು ಬಂದಿದೆ.
ಶಂಭುಕುಮಾರ್ ಹಾಗೂ ಅಶ್ವಿನಿ ಅವರಿಬ್ಬರೂ ತುಮಕೂರು ಲೋಕೋಪಯೋಗಿ ಇಲಾಖೆಯಲ್ಲಿ ಸಹೋದ್ಯೋಗಿಗಳಾಗಿದ್ದು ಇಬ್ಬರ ನಡುವೆ ಸಂಬಂಧ ಬೆಳೆದಿದ್ದು, ಈ ವಿಚಾರ ಅಶ್ವಿನಿ ಪತಿ ಓಂಕಾರ್‌ಗೆ ತಿಳಿದು ಆಗಾಗ ಸಣ್ಣಪುಟ್ಟ ಗಲಾಟೆಗಳು ನಡೆದು, ಇದೇ ಶಂಭುಕುಮಾರ್ ಮೇಲೆ ಇದೇ ಓಂಕಾರ್ ಒಂದು ವರ್ಷಕ್ಕೆ ಮೊದಲು ತುಮಕೂರು ಜಯನಗರ ಪೊಲೀಸ್ ಠಾಣೆಯಲ್ಲೂ ಇಂಥದ್ದೇ ದೂರು ನೀಡಿದ್ದು, ಅಪರಾಧ ಪ್ರಕರಣ ದಾಖಲಾಗಿತ್ತಾದರೂ ಆ ಕೇಸನ್ನು ಹಾಗೇ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿತ್ತು ಎಂದು ಓಂಕಾರ್ ಹೇಳುತ್ತಾರೆ. ಆರೇಳು ವರ್ಷದ ಮಗಳ ಮುಖ ನೋಡಿ ಸುಮ್ಮನಾಗಿದ್ದೆ, ಅವರು ಮತ್ತೆ ತಮ್ಮ ಚಾಳಿಯನ್ನು ಮುಂದುವರೆಸಿದ್ದಾರೆ ಎನ್ನುತ್ತಾರೆ ಇವರು.
ಓಂಕಾರ್ ಪತ್ನಿ ಇದೇ ಹಿನ್ನೆಲೆಯಲ್ಲಿ ತುಮಕೂರಿನಿಂದ ಬೆಂಗಳೂರಿಗೆ ವರ್ಗ ಮಾಡಿಸಿಕೊಂಡು ಹೋಗಿದ್ದು ಮಹಾಲಕ್ಷ್ಮಿಪುರಂನಲ್ಲಿ ಅವರನ್ನು ಬೇಟಿ ಮಾಡಲೆಂದು ಓಂಕಾರ್ ಏಪ್ರಿಲ್ 12ರಂದು ಹೋದಾಗ ಅವರ ಮನೆಯಲ್ಲಿದ್ದ ಶಂಭು ತನ್ನ ಮೇಲೆ ಕಾರು ಹರಿಸಿ ಕೊಲ್ಲಲು ಯತ್ನಿಸಿದ್ದಲ್ಲದೇ, ನನ್ನ ಜಾತಿ ಹಿಡಿದು ನಿಂದಿಸಿದ್ದಾರೆAದು ದೂರು ನೀಡಿರುವುದಾಗಿ ಓಂಕಾರ್ ವಿವರಿಸಿದರು.
ಎಇಇ ಹುದ್ದೆಗೆ ಎಇ ಬೇಕಿತ್ತಾ ?
ಲೋಕೋಪಯೋಗಿ ಇಲಾಖೆಯಲ್ಲಿ ನೂರಕ್ಕೂ ಹೆಚ್ಚು ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳು ಸ್ಥಳ ನಿಯುಕ್ತಿ ಇಲ್ಲದೇ ಮನೆಯಲ್ಲಿ ಕುಳಿತಿದ್ದರೂ ಹೊಸದಾಗಿ ಸೃಜಿಸಿದ ತುಮಕೂರು ಲೋಕೋಪಯೋಗಿ ಉಪ ವಿಭಾಗಕ್ಕೆ ಅವರಲ್ಲಿ ಯಾರನ್ನಾದರೂ ನೇಮಿಸಿಕೊಳ್ಳದೆ, ಸಹಾಯಕ ಇಂಜಿನಿಯರ್ ಆಗಿರುವ ಶಂಭುಕುಮಾರ್ ಅವರನ್ನು ನೇಮಿಸಿಕೊಳ್ಳಲು ಕಾರಣವೇನು ಎಂಬ ಪ್ರಶ್ನೆ ಉದ್ಭವಿಸಿದೆ. ಸಮರ್ಥ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳ್ಯಾರೂ ಸಂಬAಧಿಸಿದವರಿಗೆ ಲಭ್ಯವಾಗಿಲ್ಲವೇ ಎಂದೂ ಹೆಸರು ಬಹಿರಂಗ ಪಡಿಸಲು ಇಚ್ಚಿಸದ ಇಲಾಖೆಯ ಅಧಿಕಾರಿಗಳು ಪ್ರಶ್ನಿಸುತ್ತಾರೆ. ಇಂಥ ಅಪರಾಧ ಪ್ರಕರಣಗಳ ಆರೋಪಿಯನ್ನು ಅದೇ ಉಪವಿಭಾಗದಲ್ಲಿ ಮುಂದುವರೆಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುತ್ತಾರೆ ಅವರು.