ದೇವರ ಅಂಗಡಿಯ ಚಪ್ಪಲಿ....!

ದೇವರ ಅಂಗಡಿಯ ಚಪ್ಪಲಿ....!

ಕತಾ ಸರಿತ್ಸಾಗರ

ಬಶೀರ್ ಬಿ.ಎಂ

 

ಅಂದು ಶುಕ್ರವಾರ. ನಮಾಝಿಗೆಂದು ಒಬ್ಬೊಬ್ಬರಾಗಿ ಮಸೀದಿಯ ವರಾಂಡಕ್ಕೆ ಕಾಲಿಡುತ್ತಿದ್ದರು. ಚಪ್ಪಲಿಗಳನ್ನು ಕಳಚಿಟ್ಟು ಅಲ್ಲಿಯೇ ಇರುವ ಸಣ್ಣ ನೀರಿನ ಟ್ಯಾಂಕೊಂದರಲ್ಲಿ ಕಾಲು ತೊಳೆದು, ಮುಖ, ಕೈ ತೊಳೆಯಲು ದೊಡ್ಡ ಟ್ಯಾಂಕಿನ ಬಳಿ ಒಬ್ಬೊಬ್ಬರಾಗಿ ಸಾಗುತ್ತಿದ್ದರು. 


‘ಯಾವುದನ್ನು ಬೇಕಾದರೂ ಆರಿಸಿಕೋ’ ಎಂಬಂತೆ ಪಂಟುವಿನ ಮುಂದೆ ಚಪ್ಪಲಿಗಳು, ಶೂಗಳು ಒಂದೊಂದಾಗಿ ಹರಡಿಕೊಳ್ಳುತ್ತಿದ್ದವು. ಕಾಂಪೌಂಡ್ ಕಟ್ಟೆಯ ಮೇಲೆ ನಿಂತು ಅವನು ಆ ಚಪ್ಪಲಿಗಳನ್ನೇ ನೋಡುತ್ತಿದ್ದ. ತುಸು ದೂರದಲ್ಲಿ ಪಂಟು ಬೋರ್ಡೊಂದನ್ನು ನೋಡಿದ.


‘‘ನಿಮ್ಮ ನಿಮ್ಮ ಚಪ್ಪಲಿಗೆ ನೀವೇ ಜವಾಬ್ದಾರರು’’ ಪಂಟುವಿಗೆ ಅರ್ಥವಾಗಲಿಲ್ಲ. ದೇವರಿಗೆ ನಮಸ್ಕರಿಸುವುದಕ್ಕಾಗಿ ತಾನೇ ಮಸೀದಿಯ ಒಳಗೆ ಹೋಗುತ್ತಿದ್ದಾರೆ. ಚಪ್ಪಲಿ ಹಾಕ್ಕೊಂಡು ಹೋಗಬಾರದು ಎಂದು ಹೇಳಿರುವುದೂ ದೇವರೇ ತಾನೇ? ಹಾಗಿರುವಾಗ ಚಪ್ಪಲಿಯ ಜವಾಬ್ದಾರಿ ದೇವರದ್ದಲ್ಲವೇ undefined ? ಜಗ್ಗು ಇದ್ದಿದ್ದರೆ ಉತ್ತರ ಹೇಳುತ್ತಿದ್ದ ಅನ್ನಿಸಿತು.


ತುಸು ದೂರದಲ್ಲಿ ಇನ್ನೊಂದು ಬೋರ್ಡ್ ಲಗತ್ತಿಸಲಾಗಿತ್ತು ‘‘ಚಪ್ಪಲಿ ಕಳ್ಳರಿದ್ದಾರೆ, ಎಚ್ಚರಿಕೆ!’’
ಅರೆ! 


‘‘ದೇವರಿದ್ದಾನೆ...ಚಪ್ಪಲಿ ಕಳ್ಳರೇ ಎಚ್ಚರಿಕೆ!’’ ಎಂದು ಬೋರ್ಡ್ ಹಾಕಬೇಕಾಗಿತ್ತಲ್ಲ. ಕಳ್ಳರಿಗೆ ಎಚ್ಚರಿಕೆ ಕೊಡದೇ ಭಕ್ತರಿಗೇ ಎಚ್ಚರಿಕೆ ಕೊಡುತ್ತಿದ್ದಾರೆ? ಪಂಟುವಿಗೆ ಅರ್ಥವಾಗಲಿಲ್ಲ. ಹಾಗಾದರೆ ನಾನು ಇಲ್ಲಿ ಹೆದರುವ ಅಗತ್ಯವೇ ಇಲ್ಲ ಅಂದಾಯಿತು. ಎಚ್ಚರಿಕೆಯಿಂದಿರಬೇಕಾದವರು ಕಳ್ಳರಲ್ಲ, ಚಪ್ಪಲಿ ಹೊಂದಿರುವವರು. ದೇವರು ನಮ್ಮ ಜೊತೆಗಿದ್ದಾನೆ ಎನ್ನುವುದು ಬೋರ್ಡ್ ಹಾಕಿದವನಿಗೆ ಚೆನ್ನಾಗಿ ಗೊತ್ತಿರುವಂತಿದೆ. ಚಪ್ಪಲಿಗಳ ಕಡೆಗೆ ಕಣ್ಣಾಯಿಸಿದ. ಬಣ್ಣ ಬಣ್ಣದ ಥರಾವರಿ ಚಪ್ಪಲಿಗಳು. ಜಗ್ಗು ಹೇಳಿದ ಹಾಗೆ ಎಲ್ಲವೂ ಕ್ವಾಸ್ಟ್ಲಿ ಚಪ್ಪಲಿಗಳು.


‘‘ಅವರಲ್ಲೆಲ್ಲ ದುಬಾಯಿಯ ಹಣ ಇರುತ್ತವೆ. ಆದುದರಿಂದಲೇ ಅವರೆಲ್ಲ ದುಬಾರಿ ಚಪ್ಪಲಿಗಳು, ಶೂಗಳನ್ನು ಧರಿಸುತ್ತಾರೆ. ನಿನಗೆ ಬೇಕಾದುದನ್ನು ನೀನು ತೆಗೆದುಕೊಂಡು ಬಾ. ಅವರು ಕಳೆದು ಹೋದುದರ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳದೆ ಹೊಸತನ್ನು ತೆಗೆದುಕೊಂಡು ಬರುತ್ತಾರೆ...’’ ಎಂದಿದ್ದ ಜಗ್ಗು.


ತಾನೇ ಕೈ ಹಾಕಿ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳಲೇ ಅಥವಾ ಜಗ್ಗು ಹೇಳಿದಂತೆ ದೇವರೇ ಬಂದು ನನಗೆ ಬೇಕಾದ ಚಪ್ಪಲಿಯನ್ನು ಕೊಡಬಹುದೇ undefined? ಎಂಬ ಪ್ರಶ್ನೆಯೂ ಅವನನ್ನು ಕಾಡತೊಡಗಿತು. ಅವನು ನೋಡು ನೋಡುತ್ತಿದ್ದಂತೆಯೇ ಒಂದು ಬಿಳಿ ಕಾರು ಕಾಂಪೌಂಡು ಹೊರಗೆ ಬಂದು ನಿಂತಿತು. ಬಿಳಿ ಪ್ಯಾಂಟು, ಬಿಳಿ ಬಟ್ಟೆ ಧರಿಸಿದ ಒಬ್ಬ ಗಡ್ಡಧಾರಿ ಅದರಿಂದ ಇಳಿದ. ಒಳಬಂದವನೇ ತನ್ನ ಚಪ್ಪಲಿಯ ಬೆಲ್ಟ್ನ್ನು ಕಳಚ ತೊಡಗಿದ. ಪಂಟು ಕಣ್ಣು ಬೆಳಗಿತು. ತೆಗೆದುಕೊಳ್ಳುವುದ್ತಿದ್ದರೆ ಮಿರ ಮಿರ ಮಿಂಚುತ್ತಿರುವ ಈ ಚಪ್ಪಲಿಯನ್ನೇ ಎಂದು ನಿರ್ಧರಿಸಿ ಬಿಟ್ಟ. ಕಳಚಿಟ್ಟು ಆತ ಮಸೀದಿಯೊಳಗೆ ಹೋದದ್ದೇ ಕಾಲಿಗೆ ಧರಿಸಿಕೊಂಡು ಹೊರಟು ಬಿಡಬೇಕು. ಆದರೆ ಒಂದು ವಿಚಿತ್ರ ನಡೆಯಿತು.


ಚಪ್ಪಲಿಯನ್ನು ಕಳಚಿದ ಆ ಗಡ್ಡಧಾರಿ ಕಟ್ಟೆಯ ಮೇಲೆ ಕುಳಿತಿದ್ದ ಪಂಟುವಿನ ಕಡೆಗೇ ಬಂದ. ಅರೆ! ಇದೇನಿದು ನನ್ನೆಡೆಗೇ ದಾವಿಸಿ ಬರುತ್ತಿದ್ದಾನೆ. ನಾನು ಚಪ್ಪಲಿ ಕದಿಯಲು ಬಂದಿದ್ದೇನೆ ಎನ್ನುವುದು ಆತನಿಗೆ ತಿಳಿದು ಬಿಟ್ಟಿರಬಹುದೇ? ಓಡಿದರೆ ಹೇಗೆ? ಅಥವಾ ಜಗ್ಗು ಹೇಳುವಂತೆ ದೇವರೇ ನನಗೆ ಬೇಕಾದ ಚಪ್ಪಲಿಯನ್ನು ಆರಿಸಿ ನನ್ನ ಕೈಗೆ ಇಡುತ್ತಿದ್ದಾನೆಯೇ? ಈತ ಸಾಬರ ದೇವರಾಗಿರಬಹುದೇ?


ಎಂದೆಲ್ಲ ಯೋಚಿಸುವಷ್ಟರಲ್ಲಿ ಗಡ್ಡಧಾರಿ ಹಸನ್ಮುಖನಾಗಿ ಆತನೆಡೆಗೆ ಬಾಗಿದ. ಎರಡೂ ಚಪ್ಪಲಿಗಳನ್ನು ಪಂಟುವಿನ ಪಕ್ಕದಲ್ಲಿ ಇಟ್ಟು ಹೇಳಿದ ‘‘ಜಾಗೃತೆಯಾಗಿ ನೋಡಿಕೊಳ್ಳಿ...ಐದು ಸಾವಿರ ರೂಪಾಯಿ ಬೆಲೆಬಾಳುವ ಚಪ್ಪಲಿ ಇದು...ನಿಮ್ಮ ಧೈರ್ಯದಲ್ಲಿ ಬಿಟ್ಟು ಹೋಗುತ್ತಿದ್ದೇನೆ’’ ಎಂದು ಅವನ ತೋಳನ್ನು ಅಮುಕಿ ಕಿಸೆಯಿಂದ ನೂರು ರೂಪಾಯಿ ನೋಟನ್ನು ತೆಗೆದು ಅವನ ಕೈಗಿಟ್ಟ. ಬಳಿಕ ಆತ ಮಸೀದಿಯೊಳಗೆ ಸರಿದು ಹೋದ. 


ಪಂಟು ದಿಗ್ಭ್ರಾಂತನಾಗಿದ್ದ. ಯಾವ ಚಪ್ಪಲಿಯನ್ನು ತಾನು ಹೊತ್ತೊಯ್ಯಬೇಕೆಂದು ಭಾವಿಸಿದ್ದೆನೋ ಅದೇ ಚಪ್ಪಲಿಯ ರಕ್ಷಣೆಯನ್ನು ಈತ ನನ್ನ ಕೈಗೆ ವಹಿಸಿ ಹೋಗಿದ್ದಾನೆ. ಅವನು ರೋಮಾಂಚನಗೊಂಡ. ಜೋಡಿ ಚಪ್ಪಲಿಯ ಜೊತೆಗೆ ನೂರು ರೂಪಾಯಿಯೂ ಸಿಕ್ಕಿದೆ. ದೇವರು ಯಾವ ರೂಪದಲ್ಲಿ ಬರುತ್ತಾನೆ ಎಂದು ಯಾರಿಗೆ ಗೊತ್ತು? ಅವನು ದೇವರೇ ಆಗಿರಬಹುದು. ಗಡ್ಡ ಬೇರೆ ಇಟ್ಟಿರುವುದರಿಂದ ಸಾಬರ ದೇವರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ‘ಜಾಗೃತೆಯಾಗಿ ನೋಡಿಕೊಳ್ಳಿ...’ ಎಂದ. ನನ್ನ ಮೇಲೆ ಭರವಸೆ ಇಟ್ಟು ಕೊಟ್ಟು ಹೋದ. ಅದೂ ಐದು ಸಾವಿರ ರೂಪಾಯಿಯ ಚಪ್ಪಲಿಯನ್ನು. 


ಅಷ್ಟರಲ್ಲಿ ಇನ್ನಾವನೋ ಒಬ್ಬ ಬಂದು ತನ್ನ ಚಪ್ಪಲಿಯನ್ನೂ ಇವನ ಮುಂದೆ ಕಳಚಿಟ್ಟ. ಮತ್ತು 20 ರೂಪಾಯಿಯ ನೋಟನ್ನು ಕೈಯಲ್ಲಿಟ್ಟು ‘ಭದ್ರವಾಗಿ ನೋಡಿಕೊಳ್ಳಿ, ಹೊಸ ಚಪ್ಪಲಿ’ ಎಂದ.


ಯಾರು? ಎತ್ತ ಎಂದು ಅವನು ನೋಡುವಷ್ಟರಲ್ಲಿ ಹಣ ಕೈಯಲ್ಲಿಟ್ಟವನು ಮಸೀದಿ ಸೇರಿಯಾಗಿತ್ತು. ಇದೀಗ ಒಬ್ಬೊಬ್ಬರೇ ಅವನ ಸುತ್ತ ತಮ್ಮ ಚಪ್ಪಲಿ ಕಳಚಿಟ್ಟು ಹೋಗುತ್ತಿದ್ದರು. ಅವನ ಕೈಗೆ 5 ರೂ., 10 ರೂ. 20 ರೂ., ಹೀಗೆ ಸೇರ್ಪಡೆಯಾಗುತ್ತಲೇ ಇದ್ದವು. ಅವನ ಸುತ್ತ ಈಗ ನೋಡಿದರೆ ನೂರಾರು ಚಪ್ಪಲಿಗಳು ‘ಆರಿಸಿಕೋ...ಬೇಕಾದುದನ್ನು ಆರಿಸಿಕೋ’ ಎನ್ನುತ್ತಿದ್ದವು. ಕಿಸೆ ತುಂಬಾ ಹಣವೂ. ತುಸು ಹೊತ್ತಲ್ಲಿ ಮಸೀದಿಯೊಳಗೆ ಎಲ್ಲರೂ ಜೊತೆಯಾಗಿ ನಮಾಝ್ ಮಾಡ ತೊಡಗಿದ್ದರು. ಈ ಚಪ್ಪಲಿಯನ್ನೆಲ್ಲ ಎತ್ತಿಕೊಂಡು ಹೋದರೆ ಕೇಳುವವರೇ ಇಲ್ಲ. ಪಂಟು ವಿಸ್ಮಿತನಾಗಿದ್ದ. ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಅವನಿಗೆ ಅವನ ಮೇಲೆಯೇ ಅಭಿಮಾನವೊಂದು ಬಂದು ಬಿಟ್ಟಿತು. ನಿಜಕ್ಕೂ ಅಷ್ಟೂ ಚಪ್ಪಲಿಗಳನ್ನು ತಾನು ಕಾಯುತ್ತಿದ್ದೇನೆಯೇ ಅಥವಾ ಅಷ್ಟೂ ಚಪ್ಪಲಿಗಳು ನನ್ನನ್ನು ಕಾಯುತ್ತಿವೆಯೇ? ತನಗೆ ತಾನೇ ಗೊಣಗಿಕೊಂಡ.


ಐದು ಸಾವಿರ ರೂಪಾಯಿಯ ಚಪ್ಪಲಿಯನ್ನು ನನ್ನ ಬಳಿ ಬಿಟ್ಟು ಹೋದವನು ನನ್ನ ಮೇಲೆ ಭರವಸೆಯಿಟ್ಟು ಅದೆಷ್ಟು ನಿರಾಳವಾಗಿ ಹೋದ. ಅವರೆಲ್ಲರೂ ನನ್ನ ಬಗ್ಗೆ ಭರವಸೆಯಿಟ್ಟಿದ್ದರು. ಎದುರಲ್ಲಿದ್ದ ‘ನಿಮ್ಮ ಚಪ್ಪಲಿಗೆ ನೀವೇ ಜವಾಬ್ದಾರರು’ ‘ಚಪ್ಪಲಿ ಕಳ್ಳರಿದ್ದಾರೆ ಎಚ್ಚರಿಕೆ!’ ಎಂಬ ಬೋರ್ಡ್ಗಳನ್ನೇ ಅಣಕಿಸುವಂತೆ. ದೇವರನ್ನು ನಂಬುವಷ್ಟೇ ತನ್ಮಯವಾಗಿ ಅಪರಿಚಿತನಾಗಿರುವ ನನ್ನನ್ನು ನಂಬಿದರು.


ಹೀಗೆ ಥರಥರವಾಗಿ ಯೋಚಿಸುತ್ತಾ ಕುಳಿತನೇ ಹೊರತು, ಚಪ್ಪಲಿಯನ್ನು ಹೊತ್ತೊಯ್ಯುವ ಧೈರ್ಯ ಅವನಿಗೆ ಬರುತ್ತಿರಲಿಲ್ಲ. ತುಸು ಹೊತ್ತಲ್ಲೇ ಎಲ್ಲರೂ ಮಸೀದಿಯಿಂದ ಹೊರ ಬರತೊಡಗಿದರು. ಒಬ್ಬೊಬ್ಬರಾಗಿ ಅವರವರ ಚಪ್ಪಲಿಗಳನ್ನು ಕಾಲಲ್ಲಿ ಧರಿಸಿ ಹೊರಟು ಹೋಗ ತೊಡಗಿದರು. ಆ ನೀಳ ಗಡ್ಡಧಾರಿ ಚಪ್ಪಲಿಯನ್ನು ಧರಿಸುತ್ತಿದ್ದಾಗ ತನ್ನ ಕಡೆ ನೋಡಿ ತುಂಟ ನಗು ನಕ್ಕ? ಅರೆ! ಅವನು ನಕ್ಕದ್ದು ಯಾಕೆ? ನಾನು ಕಳ್ಳನೆನ್ನುವುದು ಅವನಿಗೆ ಗೊತ್ತಿತ್ತೇ? ಅಥವಾ ಅವನು ನಿಜಕ್ಕೂ ಸಾಬರ ದೇವರೇ ಆಗಿರಬಹುದೇ? ನನ್ನನ್ನು ಪರೀಕ್ಷಿಸಲೆಂದು ಹೀಗೆ ಗಡ್ಡಧಾರಿಯಾಗಿ ಬಂದಿರಬಹುದೆ? ಅವನಿಗೆ ಅರ್ಥವಾಗಲಿಲ್ಲ. ಎಲ್ಲರೂ ಅವರವರ ಚಪ್ಪಲಿಗಳ ಜೊತೆಗೆ ಹೊರಟು ಹೋದ ಬಳಿಕವೂ ಅವನು ಕಡೆದಿಟ್ಟ ಕಲ್ಲಿನಂತೆ ಕುಳಿತೇ ಇದ್ದ. ಅಲ್ಲೇ ಇದ್ದ ಯಾರೋ ‘‘ಭಾಯಿ ತಗೋ’’ ಎಂದು ಒಂದು ಕಟ್ಟನ್ನು ಅವನ ಮುಂದಿಟ್ಟರು. ಕಟ್ಟು ಬಿಚ್ಚಿದರೆ ಅದರಲ್ಲಿ ಬಿರಿಯಾನಿ ಗಮಗಮಿಸುತ್ತಿತ್ತು.


ಆತ ಬಿರಿಯಾನಿ ತಿಂದು, ಪಕ್ಕದಲ್ಲೇ ಇದ್ದ ನೀರಿನ ಟ್ಯಾಪ್‌ನಲ್ಲಿ ಕೈ ತೊಳೆದ. ನೀರು ಕುಡಿದ. ಬಳಿಕ ಕಿಸೆಯಲ್ಲಿದ್ದ ಹಣವನ್ನು ಎಣಿಸಿದ. 350 ರೂಪಾಯಿಯಿತ್ತು. ಹಾಗೆ ಯಾರೋ ಕೀಲಿ ತಿರುಗಿಸಿ ಬಿಟ್ಟ ಗೊಂಬೆಯಂತೆ ಪಂಟು ನಡೆಯ ತೊಡಗಿದ. ದೂರದಲ್ಲೊಂದು ಪುಟ್ಟ ಚಪ್ಪಲಿ ಅಂಗಡಿ ಕಂಡಿತು. ನೇರವಾಗಿ ಅದರ ಒಳ ಹೊಕ್ಕ. ‘‘350 ರೂಪಾಯಿಗೆ ಆಗುವ ಹಾಗೆ ಒಂದು ಚಪ್ಪಲಿ ಕೊಡಿ ಸಾಮಿ...’’ ಎಂದ.


ಅಂಗಡಿಯಾತ ಅವನೆಡೆಗೆ ಬಂದ. ಅವನ ಕೈಯಲ್ಲಿ ವಿವಿಧ ಸೈಜಿನ ಚಪ್ಪಲಿಗಳಿದ್ದವು. ಬಾಗಿದವನು ಪಂಟುವಿನ ಪಾದವನ್ನು ತನ್ನ ತೊಡೆಯ ಮೇಲಿಟ್ಟು ಚಪ್ಪಲಿಯನ್ನು ಜೋಡಿಸಿದ. ಪಂಟುವಿನ ಬದುಕಿನಲ್ಲೇ ಅದೊಂದು ವಿಚಿತ್ರ ಅನುಭವ. ತನ್ನ ಪಾದವನ್ನು ಯಾವ ಸಂಕೋಚವೂ ಇಲ್ಲದೆ ತನ್ನ ತೊಡೆಯ ಮೇಲೆ ಇಟ್ಟು ಕೊಂಡು ಚಪ್ಪಲಿಯನ್ನು ಜೋಡಿಸಿದ ಈತ ದೇವರೇ ಯಾಕಾಗಿರಬಾರದು? ಎಂಬ ಆಲೋಚನೆ ತಲೆಯಲ್ಲಿ ಬಂತು. ತನ್ನ ಪಾದಕ್ಕೆ ಹೇಳಿ ಮಾಡಿಸಿದ ಚಪ್ಪಲಿ ಆಗಿತ್ತು. ಧರಿಸಿದ. ಅವನಿಗೆ ಅಳುಬಂದಿತ್ತು. ‘ಇಷ್ಟು ಬೆಲೆ ಬಾಳುವ ಚಪ್ಪಲಿಯನ್ನು ತಾನು ಧರಿಸಿರಲೇ ಇಲ್ಲ’ ಎನ್ನುತ್ತಾ ಆ ಜೋಡಿ ಚಪ್ಪಲನ್ನು ತನ್ನ ಎದೆಗೊತ್ತಿ ಹಿಡಿದ. 


ಅಂದು ಸಂಜೆ ಜಗ್ಗುವಿನ ಮುಂದೆ ಆ ಚಪ್ಪಲಿಯನ್ನಿಟ್ಟು ಹೇಳಿದ ‘‘ದೇವ್ರೇ ಕೈಯಾರೆ ನನಗೆ ಕೊಟ್ಟ ಚಪ್ಪಲಿ ಇದು...ಇದನ್ನು ಕಾಲಲ್ಲಿ ಧರಿಸೋಕೆ ಮನಸ್ಸೇ ಬರುತ್ತಿಲ್ಲ’’


‘‘ಹೇ...ಅಂಗಾರೆ ತಲೆ ಮೇಲೆ ಹೊತ್ಕೊಂಡು ನಡಿ...’’ ಎನ್ನುತ್ತಾ ಜಗ್ಗು ನಕ್ಕ.


ಪಂಟು ಮೊದಲ ಬಾರಿಗೆ ಚಪ್ಪಲಿಯನ್ನು ತಲೆಯ ಮೇಲೆ ಇಟ್ಟುಕೊಳ್ಳಬೇಕೋ, ಕಾಲಿಗೆ ಧರಿಸಬೇಕೋ ಎಂಬ ಗೊಂದಲದಲ್ಲಿದ್ದ. 
***


ಅಂದು ಸಂಜೆ ಪಂಟು ತನ್ನ ಹುಡುಗಿಯನ್ನು ಭೇಟಿಯಾಗಬೇಕಾಗಿತ್ತು ಬೆಳಗ್ಗೆ ಬೇಗನೇ ಎದ್ದು ಹತ್ತಿರದ ಕೆರೆಯಲ್ಲಿ ಮಿಂದು, ಇದ್ದುದರಲ್ಲೇ ಬಿಳಿಯಾದ ಬಟ್ಟೆ ಬರೆ ಧರಿಸಿ ಕಾಲಿಗೆ ಹೊಸ ಚಪ್ಪಲಿ ಸಿಕ್ಕಿಸಿಕೊಂಡ. ಅವನ ಬದುಕಿನಲ್ಲೇ ಅದೇ ಮೊದಲ ಬಾರಿ ಅವನ ಮನಸ್ಸು ಒಂದು ವಿಚಿತ್ರ ಅನುಭೂತಿಗೆ ಸಿಕ್ಕಿತ್ತು. ಈವರೆಗಿನ ತನ್ನ ಬದುಕನ್ನೆಲ್ಲ ತಿರಸ್ಕರಿಸುವ, ಹೊಸ ಬದುಕೊಂದಕ್ಕೆ ತನ್ನನ್ನು ತಳ್ಳುವ ಶಕ್ತಿ ಆ ಅನುಭೂತಿಗಿರುವುದು ಅವನ ಗಮನಕ್ಕೆ ತೆಳುವಾಗಿ ಬರುತ್ತಿತ್ತು. ವಿಚಿತ್ರವೆಂದರೆ ಬೆಳಗ್ಗಿನಿಂದಲೇ ಅವನ ಮನಸ್ಸು ಒಂದು ಹಂಬಲದಲ್ಲಿತ್ತು. ಈ ಚಪ್ಪಲಿ ಧರಿಸಿಕೊಂಡು ಆ ಮಸೀದಿಯ ಕಡೆಗೆ ಮತ್ತೊಮ್ಮೆ ನಡೆಯಬೇಕು. ಅವನಿಗೆ ಇನ್ನಷ್ಟು ಚಪ್ಪಲಿಯ ಆಸೆ ಇರಲಿಲ್ಲ. ತನ್ನ ಕಡೆಗೆ ನೋಡಿ ತುಂಟ ನಗೆ ಬೀರಿದ ಆ ಗಡ್ಡಧಾರಿ ಅಲ್ಲೆಲ್ಲಾದರೂ ಸಿಗುತ್ತಾನೆಯೋ ಎಂಬ ಆಸೆ ಅವನದು. ಬೆಳಗ್ಗಿನಿಂದ ಅದನ್ನೇ ಯೋಚಿಸುತ್ತಾ ಇದ್ದವನು ಇದ್ದಕ್ಕಿದ್ದಂತೆಯೇ ಎದ್ದು ಹೊರಟೇ ಬಿಟ್ಟ. 


ಮಸೀದಿಯ ಮುಂದೆ ವಿಶೇಷ ಜನರೇನೂ ಕಾಣಲಿಲ್ಲ. ಆಗಾಗ ಬೆರಳೆಣಿಕೆಯ ಜನರು ಒಳಗೆ ಹೊರಗೆ ಬಂದು ಹೋಗುವುದನ್ನು ಮಾಡುತ್ತಿದ್ದರು. ಇವನು ಮಸೀದಿಯ ಆವರಣದೊಳಗೆ ಕಾಲಿಟ್ಟನಾದರೂ ಯಾರೂ ಇವನನ್ನು ಗಮನಿಸಲಿಲ್ಲ. ಆ ಮಸೀದಿಯ ಒಳಗಿನಿಂದ ಯಾರೋ ತನ್ನನ್ನು ಸೆಳೆಯುತ್ತಿದ್ದಾರೆ ಅನ್ನಿಸುವ ಭಾವ. ಹೋಗಿ ಆ ಸಾಬರ ದೇವರಿಗೆ ಒಮ್ಮೆ ಕೈ ಮುಗಿದು ಬಂದರೆ ಹೇಗೆ ಎನ್ನುವ ಅನಿಸಿಕೆ! ಮುಂದಕ್ಕೆ ಹೆಜ್ಜೆಯಿಟ್ಟ. ಅಷ್ಟರಲ್ಲಿ ಒಬ್ಬ ಬಂದು ಪಕ್ಕದ ಕಿರು ಟ್ಯಾಂಕ್‌ನಲ್ಲಿದ್ದ ನೀರನ್ನು ಕಾಲಿಗೆ ಸುರಿದು ಮಸೀದಿಯ ಒಳಗೆ ಹೋಗುವುದನ್ನು ನೋಡಿದ. ಇವನೂ ಅವನನ್ನೇ ಅನುಸರಿಸಿದ. ಅಳುಕುತ್ತಾ ಅವನು ಮಸೀದಿಯ ಒಳಗೆ ಹೆಜ್ಜೆಯಿಟ್ಟ. ಅಮೃತ ಶಿಲೆಗಳನ್ನು ಹಾಸಿದ ವಿಶಾಲವಾದ ಭವನ ಅದು. ದೊಡ್ಡ ದೊಡ್ಡ ಕಿಟಕಿಗಳು. ದೊಡ್ಡ ದೊಡ್ಡ ಕಂಬಗಳು ಆ ಮಸೀದಿಯನ್ನು ಎತ್ತಿ ನಿಲ್ಲಿಸಿದ್ದವು. ಅಪಾರ ಬೆಳಕು. ನೆಲ ಹಾಲಿನಂತೆ ಹೊಳೆಯುತ್ತಿತ್ತು. ನೆತ್ತಿಯ ಮೇಲೆ ದೊಡ್ಡ ಫ್ಯಾನುಗಳು ತಿರುಗುತ್ತಿದ್ದವು. ಪಂಟು ಮುಂದಕ್ಕೆ ಕಣ್ಣಾಯಿಸಿದ. ಒಂದೆರಡು ಜನ ಬಗ್ಗಿ, ಏಳುವ ಕೆಲಸವನ್ನು ಮಾಡುತ್ತಿದ್ದರು. ಪಂಟು ಆ ವಿಶಾಲ ಆವರಣದೊಳಗೆ ಸಾಬರ ದೇವರನ್ನು ಹುಡುಕುತ್ತಿದ್ದ. ಬರೇ ಖಾಲಿ ....ಗೋಡೆಯಲ್ಲಿ ಒಂದು ಫೋಟೋ ಕೂಡ ಇಲ್ಲ. ಹಾಂ...ಗೋಡೆಯಲ್ಲಿ ಒಂದೆರಡು ದೊಡ್ಡ ದೊಡ್ಡ ಗಡಿಯಾರಗಳು ಟಿಕ್ ಟಿಕ್ ಎನ್ನುವ ಸದ್ದು ಮಾಡುತ್ತಿದ್ದವು. ಹಾಗಾದರೆ ದೇವರೆಲ್ಲಿದ್ದಾನೆ? ಅವನಿಗೆ ಆರತಿ ಎತ್ತಿ ಪ್ರಸಾದ ಕೊಡುವವರು ಯಾರು? ಒಂದೂ ಅರ್ಥವಾಗಲಿಲ್ಲ. ನೋಡಿದರೆ ದೂರದ ಮೂಲೆಯೊಂದರಲ್ಲಿ ಕಿಟಕಿಯ ಪಕ್ಕ ಒಬ್ಬ ಗಡ್ಡಧಾರಿ ಮುದುಕ ಕುಳಿತು ಜಪಮಣಿ ಎಣಿಸುತ್ತಿರುವುದನ್ನು ನೋಡಿ ಅವನ ಕಣ್ಣು ಬೆಳಗಿತು. ಅದ್ಯಾರು? ಅವನೇ ಈ ಸಾಬರ ದೇವರು ಇರಬಹುದೇ? ನೇರವಾಗಿ ಅವನ ಬಳಿಗೆ ನಡೆದ. 


ತನ್ನ ಬಳಿ ನಿಂತ ಆಗಂತುಕನನ್ನು ಜಪಮಣಿ ಎಣಿಸುತ್ತಿದ್ದ ಮುದುಕ ತಲೆಯೆತ್ತಿ ನೋಡಿದ. ಪಂಟುವಿಗೆ ಅವನ ಬಳಿ ಏನು ಕೇಳಬೇಕು ಎಂದೇ ಗೊತ್ತಾಗದೆ ‘‘ಇಲ್ಲಿ ದೇವರು ಎಲ್ಲಿದ್ದಾನೆ?’’ ಎಂದು ಕೇಳಿ ಬಿಟ್ಟ. 


ಮುದುಕ ದಿಗ್ಭ್ರಾಂತನಾಗಿ ಆಗಂತುಕನನ್ನು ನೋಡಿದ. ಇಂತಹದೊಂದು ಅಧ್ಯಾತ್ಮ ಪ್ರಶ್ನೆಯನ್ನು ಈವರೆಗೆ ಯಾರೂ ಅವನಲ್ಲಿ ಕೇಳಿರಲಿಲ್ಲ. ಆಘಾತದಿಂದ ಆತ ಆಗಂತುಕನ ಮುಖವನ್ನು ನೋಡುತ್ತಲೇ ಇದ್ದ.


‘‘ದೇವರಿಗೆ ಕೈ ಮುಗಿದು ಅಡ್ಡ ಬೀಳಬೇಕಾಗಿದೆ. ಇಲ್ಲಿ ನಿಮ್ಮ ದೇವರೆಲ್ಲಿದ್ದಾನೆ ಹೇಳಿ?’’ ಪಂಟು ವಿನೀತನಾಗಿ ಮತ್ತೆ ಕೇಳಿದ.


ಮುದುಕ ಮುಗುಳ್ನಕ್ಕ. ‘‘ಸುತ್ತ ಮುತ್ತ ಎಲ್ಲ ದೇವರಿದ್ದಾನೆ. ಈ ಗಾಳಿಯಲ್ಲಿ, ಬೆಳಕಲ್ಲಿ, ಪರಿಮಳದಲ್ಲಿ....ಎಲ್ಲ. ಇಲ್ಲಷ್ಟೇ ಅಲ್ಲ, ಹೊರಗೂ ಇದ್ದಾನೆ....ನಮ್ಮ ಒಳಗೂ ಇದ್ದಾನೆ....ಎಲ್ಲೆಡೆ ದೇವರಿದ್ದಾನೆ....’’


‘‘ಹಾಗಾದರೆ ನಾನು ಇಲ್ಲಿ ಯಾರಿಗೆ ಅಡ್ಡ ಬೀಳಲಿ...ಹೇಗೆ ಕೈ ಮುಗಿಯಲಿ...’’


‘‘ನಿನಗೇಕೆ ಕೈಮುಗಿಯಬೇಕು ಅನ್ನಿಸಿದೆ?’’ ಮುದುಕ ಕೇಳಿದ.


‘‘ನನಗವನು ಚಪ್ಪಲಿ ಕೊಟ್ಟ’’ ಪಂಟು ಉತ್ತರಿಸಿದ.


ಮುದುಕ ಮುಗುಳ್ನಕ್ಕ. ‘‘ನಿನಗವನು ಕೊಟ್ಟದ್ದು ಬರೀ ಚಪ್ಪಲಿ ಮಾತ್ರವೇ?’’ ಮುದುಕ ಕೇಳಿದ.


‘‘ಹೌದು. ಅವನೇ ಕೈಯಾರೆ ತಂದು ಕೊಟ್ಟ. ನಾನು ಅವನನ್ನು ನೋಡಿದೆ. ಅವನು ನನ್ನನ್ನು ನೋಡಿ ತುಂಟ ನಗೆ ನಕ್ಕ...’’


‘‘ನೀನು ಹೇಳಿದ್ದನ್ನು ನಾನು ನಂಬುತ್ತೇನೆ. ಅವನ ಕೈಯಿಂದ ನೀನು ಚಪ್ಪಲಿ ತೆಗೆದುಕೊಂಡದ್ದು ನಿಜವೇ ಆಗಿದ್ದರೆ ಅವನು ಅದಕ್ಕಾಗಿ ನಗಲೇ ಬೇಕಾಗುತ್ತದೆ....’’ ಎಂದವನು ಒಂದು ಕ್ಷಣ ವೌನವಾದ. 


‘‘ಆದರೆ ಅವನಿಂದ ನೀನು ಪಡೆದದ್ದು ಚಪ್ಪಲಿ ಮಾತ್ರವೇ ಅಲ್ಲ... ಅದರ ಜೊತೆಗೆ ಅವನು ಇನ್ನೇನೋ ಕೊಟ್ಟಿರಬೇಕು....ಸರಿಯಾಗಿ ನೋಡಿಕೋ....’’ ಎಂದ ಮುದುಕ ಪಕ್ಕದಲ್ಲೇ ಇದ್ದ ಅದೇನೋ ಮರದ ಪುಟ್ಟ ಹಲಗೆಯಂತಹ ವಸ್ತುವನ್ನು ಎಳೆದುಕೊಂಡ. ಆ ಹಲಗೆಗೆ ನಾಲ್ಕು ಚಕ್ರಗಳಿದ್ದವು. ಮತ್ತು ಎರಡೂ ಕೈಗಳನ್ನು ನೆಲಕ್ಕೆ ಒತ್ತಿ ಮುದುಕ ಆ ಹಲಗೆ ಏರಿದ. ಪಂಟು ಬೆಚ್ಚಿದ. ಮುದುಕನಿಗೆ ಎರಡು ಕಾಲುಗಳೇ ಇರಲಿಲ್ಲ. ತನ್ನ ಹಲಗೆಯ ಗಾಡಿಯಲ್ಲಿ ದರದರನೆ ಸಾಗಿ ಮಸೀದಿಯ ಹೊರಬಾಗಿಲು ದಾಟಿದ ಮುದುಕ ಕಾಣೆಯಾಗಿ ಬಿಟ್ಟ. ಪಂಟು ನಿಂತಲ್ಲೇ ಕಲ್ಲಾಗಿ ಬಿಟ್ಟ. ಅವನು ಸಣ್ಣಗೆ ಕಂಪಿಸುತ್ತಿದ್ದ. ಸುಸ್ತಾದವನಂತೆ ಗೋಡೆಯನ್ನು ಆಧರಿಸಿಕೊಂಡ. ಹಾಗೆಯೇ ಕಾಲಿಲ್ಲದವನಂತೆ ಕುಸಿದು ತುಂಬಾ ಹೊತ್ತು ಅಲ್ಲೇ ಕುಳಿತು ಬಿಟ್ಟ. ಒಂದರ್ಧ ಗಂಟೆಯ ಬಳಿಕ ಅವನು ಎದ್ದು ಹೊರಟ. ಮಸೀದಿಯ ಹೆಬ್ಬಾಗಿಲು ದಾಟಿದವನೇ ಅಂಗಳಕ್ಕೆ ಬಂದ. ಹೊರಾಂಗಣದ ಮೂಲೆಯಲ್ಲಿ ಇಟ್ಟಿರುವ ತನ್ನ ಚಪ್ಪಲಿಯ ಕಡೆಗೆ ನಡೆದ. ನೋಡಿದರೆ ಅವನ ಚಪ್ಪಲಿ ಅಲ್ಲಿ ಕಾಣಲಿಲ್ಲ.
ಅದನ್ನು ಹುಡುಕುವ ಪ್ರಯತ್ನವನ್ನೇ ಮಾಡದ ಪಂಟು ಮಸೀದಿಯ ಕಾಂಪೌಂಡ್ ಕಟ್ಟೆಯನ್ನೇರಿ ಕುಳಿತು ಆಕಾಶವನ್ನು ಚುಚ್ಚುವ ಪ್ರಯತ್ನದಲ್ಲಿದ್ದ ಮಿನಾರವನ್ನೊಮ್ಮೆ ನೋಡಿದ. 


ಅವನೊಳಗೀಗ ಅದೇನೋ ಕಳೆದು ಕೊಂಡು ಹಗುರಾದ ಭಾವ, ಜೊತೆಗೆ ಅದೇನೋ ಪಡೆದುಕೊಂಡು ಸುಸ್ತಾದವನ ಸ್ಥಿತಿ. ಇದರಲ್ಲಿ ಯಾವುದು ನಿಜ ಎನ್ನೋದು ಸ್ಪಷ್ಟವಾಗದೆ ತನ್ನ ಮುಂದೆ ಹರಡಿಕೊಳ್ಳುತ್ತಿರುವ ಚಪ್ಪಲಿಗಳನ್ನು ಗಮನಿಸ ತೊಡಗಿದ.