ಜೀನಿಯಸ್ ಮಕ್ಕಳ ಹೃದ್ರೋಗ ತಜ್ಞ ಡಾ.ಎಂ.ಜಯರಂಗನಾಥ್ ಗೆ ರಾಜ್ಯೋತ್ಸವ ಪ್ರಶಸ್ತಿಯ ಗೌರವ

ತುಮಕೂರಿನಲ್ಲಿ ಓದಿ ಬೆಳೆದ ಡಾ.ಎಂ.ಜಯರಂಗನಾಥ್ ಓದಿನಲ್ಲಿ ಸದಾ ಮುಂದು, ತುಮಕೂರಿನ ಸಿದ್ದಗಂಗಾ ಹೈಸ್ಕೂಲಿನಲ್ಲಿ 1980ರಲ್ಲಿ ನಾನು ಪ್ರಿಪರೇಟರಿ ಪರೀಕ್ಷೆ ಬಿಟ್ಟು ತಂಡ ಕಟ್ಟಿ ಸ್ಕೂಲ್ ಡೇ ಗೆ ನಾಟಕ ಪ್ರಾಕ್ಟೀಸ್ ಮಾಡಿಸುತ್ತಿದ್ದಾಗ ಯಾರ ತಂಟೆಗೂ ಹೋಗದೇ ತನ್ನ ಪಾಡಿಗೆ ತಾನು ಓದಿನಲ್ಲಿ ಮಗ್ನರಾಗಿದ್ದ ನನ್ನ ಸಹಪಾಟಿ ಎಂ.ಜಯರಂಗನಾಥ್ ಇವತ್ತು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಸದ್ದಿಲ್ಲದ ಸೇವೆಯಲ್ಲಿ ತೊಡಗಿದ್ದಾರೆ, ಇವರ. ಕಾರ್ಯ ದಕ್ಷತೆ ಗಮನಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ, ಡಾ.ಜಯರಂಗನಾಥ್ ಕುರಿತ ಒಂದು ಪರಿಚಯ

ಜೀನಿಯಸ್ ಮಕ್ಕಳ ಹೃದ್ರೋಗ ತಜ್ಞ ಡಾ.ಎಂ.ಜಯರಂಗನಾಥ್ ಗೆ ರಾಜ್ಯೋತ್ಸವ ಪ್ರಶಸ್ತಿಯ ಗೌರವ

     ಡಾ. ಜಯರಂಗನಾಥ್ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮಕ್ಕಳ ಹೃದ್ರೋಗ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಜಯರಂಗನಾಥ್ ರವರು ಫೆಬ್ರವರಿ 17, 1966ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ವಡಗೆರೆ ಗ್ರಾಮದಲ್ಲಿ ಜನಿಸಿದರು. ಹುಟ್ಟೂರಿನಲ್ಲೇ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಮುಗಿಸಿದರು. ನಂತರ ತುಮಕೂರಿನಲ್ಲಿ ಶ್ರೀ ಸಿದ್ದಗಂಗಾ ಮಠದ ಸಿದ್ದಗಂಗಾ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಉತ್ತಮ ಶ್ರೇಣಿ (ಡಿಸ್ಟಿಂಗ್ಷನ್) ಪಡೆದು ಈಡೀ ಶಾಲೆಗೆ ಮಾದರಿಯಾದರು. ಇದಾದ ಬಳಿಕ ತುಮಕೂರಿನ ಸರ್ವೋದಯ ಕಾಲೇಜಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವ್ಯಾಸಂಗ ಮುಗಿಸಿ, 1982ರಲ್ಲಿ ಐಚ್ಛಿಕ ವಿಷಯಗಳಲ್ಲಿ ಶೇ 98% ಕ್ಕಿಂತ ಹೆಚ್ಚಿನ ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆದರು.

 

     ಪದವಿಪೂರ್ವ ಶಿಕ್ಷಣ ಮುಗಿದ ಬಳಿಕ, ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಗೆ ಸೇರಿ, 1989ರಲ್ಲಿ ಎಲ್ಲಾ ವಿಷಯದಲ್ಲೂ ಡಿಸ್ಟಿಂಗ್ಷನ್ ಶ್ರೇಣಿಯಲ್ಲಿ ತೇರ್ಗಡೆಯಾದರು. 1989ರಲ್ಲಿ ಅಖಿಲ ಭಾರತ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಗುಜರಾತ್ನ ಎನ್ಎಚ್ಎಲ್ ಮೆಡಿಕಲ್ ಕಾಲೇಜಿನಲ್ಲಿ ಎಂಡಿ (ಜನರಲ್ ಮೆಡಿಸಿನ್) ಅಧ್ಯಯನ ಮಾಡಿದರು. ಇಲ್ಲಿ ಮೂರು ವರ್ಷಗಳ ಕಾಲ ಉತ್ತಮ ತರಬೇತಿ ಪಡೆದು ಅಂತಿಮ ಪರೀಕ್ಷೆಯಲ್ಲಿ 3ನೇ ರ್ಯಾಂಕ್ ಗಳಿಸಿದರು. ಇವರು ಹೃದ್ರೋಗ ವಿಭಾಗದಲ್ಲಿ ಸೂಪರ್ ಸ್ಪೆಷಾಲಿಟಿಯನ್ನು ಅಭ್ಯಾಸ ಮಾಡಲು ಆಸಕ್ತಿ ವಹಿಸಿ ಅಖಿಲ ಭಾರತ ಸೂಪರ್ ಸ್ಪೆಷಾಲಿಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಇಲ್ಲಿ 10ನೇ ರ್ಯಾಂಕ್ ಪಡೆದು, ಸೀಟುಗಳ ಆಯ್ಕೆಯೊಂದಿಗೆ ಮುಂಬೈನ  ಗ್ರಾಂಟ್ ಮೆಡಿಕಲ್ ಕಾಲೇಜು ಮತ್ತು ಜೆ ಜೆ ಆಸ್ಪತ್ರೆಯಲ್ಲಿ ಪ್ರವೇಶಾತಿ ಪಡೆದು ಹೃದ್ರೋಗ ವಿಭಾಗದಲ್ಲಿ ತರಬೇತಿ ಪೂರ್ಣಗೊಳಿಸಿದರು. 1995ರಲ್ಲಿ ಬಾಂಬೆ ವಿಶ್ವವಿದ್ಯಾಲಯವು ನಡೆಸಿದ ಅಂತಿಮ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದರು. 

 

     ಇದಾದ ಬಳಿಕ ಬೆಂಗಳೂರಿಗೆ ಬಂದು ಎಂ ಎಸ್ ರಾಮಯ್ಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹೃದ್ರೋಗ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಎರಡು ವರ್ಷಗಳ ಕಾಲ ಕಾರ್ಯ ನಿವರ್ಹಿಸಿದರು. ನಂತರ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ತೆರಳಿ ಅಭ್ಯಾಸ ಮುಂದುವರೆಸಿ, ಮಕ್ಕಳ ಹೃದ್ರೋಗ ವಿಭಾಗ (ಪಿಡಿಯಾರ್ಟಿಕ್ ಕಾರ್ಡಿಯಾಲಜಿ) ದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡರು. 

 

     2000 ದಲ್ಲಿ ಪ್ರೊ. ಜೇಮ್ಸ್ ವಿಲ್ಕಿನ್ಸನ್ ಅವರ ಮಾಗರ್ದರ್ಶನದಲ್ಲಿ ಆಸ್ಟ್ರೇಲಿಯಾದ      ಮೆಲ್ಬೋರ್ನ್ನ ರಾಯಲ್ ಚಿಲ್ಡ್ರನ್ ಆಸ್ಪತ್ರೆಯಲ್ಲಿ ಕಾರ್ಡಿಯಾಲಜಿಯಲ್ಲಿ ಫೆಲೋಶಿಪ್ಗೆ ಆಯ್ಕೆ ಆದರು. ರಾಯಲ್ ಚಿಲ್ಡ್ರನ್ ಆಸ್ಪತ್ರೆ (ಆರ್ಸಿಎಚ್) ಮೆಲ್ಬೋರ್ನ್ ಮಕ್ಕಳಿಗಾಗಿ ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟಿರುವ ಹೃದಯ ಕೇಂದ್ರವಾಗಿದೆ. ತರಬೇತಿ ನಂತರ ಇವರಿಗೆ ಆರ್ಸಿಎಚ್ನಲ್ಲೇ ಅಧ್ಯಾಪಕ ಹುದ್ದೆಗೆ ಬೇಡಿಕೆ ಇಟ್ಟರೂ ಸಹ ಅದನ್ನು ನಿರಾಕರಿಸಿ ಮರಳಿ ಭಾರತಕ್ಕೆ ಹಿಂತಿರುಗಿ, ತಾನು ಹುಟ್ಟಿ ಬೆಳೆದ ತಾಯ್ನಾಡಿನಲ್ಲೇ ಸೇವೆ ಸಲ್ಲಿಸಬೇಕು, ಮಕ್ಕಳ ಹೃದ್ರೋಗ ವಿಭಾಗವನ್ನು ವಿಸ್ತರಿಸಿ ಹೃದಯ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಸೂಕ್ತವಾದ ಗುಣಮಟ್ಟದ ಚಿಕಿತ್ಸೆ ಸಿಗುವಂತೆ ಮಾಡಬೇಕು ಎಂದು ಭಾವಿಸಿ ಬೆಂಗಳೂರಿನಲ್ಲೇ ಪಿಡಿಯಾರ್ಟಿಕ್ ಕಾರ್ಡಿಯಾಲಜಿ ಕಾರ್ಯ ಮುಂದುವರೆಸಿದರು.

 

      ಅದರಂತೆ, ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ 2008ರಲ್ಲಿ ಹೃದ್ರೋಗ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಸೇರಿಕೊಂಡರು. ಪ್ರತಿದಿನ ಜಯದೇವ ಆಸ್ಪತ್ರೆಗೆ 100 ರಿಂದ 150 ಜನ ಮಕ್ಕಳು ಬರುತ್ತಿದ್ದು, ಎಲ್ಲಾ ಮಕ್ಕಳಿಗೂ ಸೂಕ್ತವಾಗಿ ಚಿಕಿತ್ಸೆ ದೊರೆಯುತ್ತಿದೆ. ಪ್ರಸ್ತುತ ನೂತನ ನಿರ್ದೇಶಕರಾದ ಡಾ. ಬಿ ದಿನೇಶ್ ರವರು ಮಕ್ಕಳ ಹೃದ್ರೋಗ ವಿಭಾಗವನ್ನು ಮತ್ತಷ್ಟು ಮೇಲ್ದರ್ಜೆಗೇರಿಸುವ ಆಸಕ್ತಿ ಹೊಂದಿದ್ದಾರೆ. 

 

      ಕಳೆದ 17 ವರ್ಷಗಳಿಂದ ಜಯದೇವ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ. ಜಯರಂಗನಾಥ್ ರವರು ಅನೇಕ ಸಂಶೋಧನೆಗಳು, ಕ್ಲಿನಿಕಲ್ ಮತ್ತು ಶೈಕ್ಷಣಿಕ ವಿಷಯದಲ್ಲಿ ಅಭೂತಪೂರ್ವ ಸಾಧನೆ ಮಾಡಿ ಮಕ್ಕಳ ಹೃದ್ರೋಗ ವಿಭಾಗವನ್ನು ಅಭಿವೃದ್ದಿ ಪಥದತ್ತ ಕೊಂಡ್ಯೋದಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಸ್ಪಷ್ಟವಾದ ಅಂಕಿ ಅಂಶ ಸಂಗ್ರಹಿಸಿ ನವಜಾತ ಶಿಶುಗಳು, ಸಣ್ಣ ಮಕ್ಕಳು ಹಾಗೂ ವಯಸ್ಕ ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಅದರ ನಿರ್ವಹಣೆಯ ಕುರಿತು ಹಲವಾರು ಲೇಖನಗಳನ್ನು ಜರ್ನಲ್ ಹಾಗೂ ಪತ್ರಿಕೆಗಳಲ್ಲಿ  ಪ್ರಕಟಿಸಲಾಗಿದೆ. ಅಂತರಾಷ್ಟ್ರೀಯ ಜರ್ನಲ್ನಲ್ಲಿ ಇತ್ತೀಚಿಗೆ ಪ್ರಕಟವಾದ ಲೇಖನವು, ಸುಲಭವಾಗಿ ಚಿಕಿತ್ಸೆ ನೀಡಬಹುದಾದ ಆದರೆ ಅಪರೂಪದ ಮತ್ತು ರೋಗನಿರ್ಣಯ ಮಾಡದ ಹೃದಯದ ಸ್ಥಿತಿಯನ್ನು ಮುಂಚೂಣಿಗೆ ತಂದಿದೆ. ಜೊತೆಗೆ, ಪೌಷ್ಟಿಕಾಂಶದ ಕೊರತೆಯಿಂದಾಗಿ ನವಜಾತ ಶಿಶುಗಳಲ್ಲಿ ಹೃದಯದ ಒತ್ತಡ ಮತ್ತು ಮರಣ ಪ್ರಮಾಣ ಹೆಚ್ಚಾಗುತ್ತಿದ್ದು, ಇದು ಸಾರ್ವಜನಿಕ ಸಮಸ್ಯೆಯಾಗಿತ್ತು. ಇವರು ಮಂಡಿಸಿದ ಸಂಶೋಧನಾ ಪ್ರಬಂಧದಿಂದಾಗಿ ಈ ಸಮಸ್ಯೆಗೆ ಸೂಕ್ತ ಚಿಕಿತ್ಸೆ ಸಿಗುವಂತಾಗಿದೆ. 

 

    ಜೊತೆಗೆ, ಹೃದಯದಲ್ಲಿನ ಕೆಲವು ಜನ್ಮದೋಷಗಳನ್ನು ಸುರಕ್ಷಿತವಾಗಿ ಮುಚ್ಚುವಲ್ಲಿ ಹೊಸ ತಂತ್ರಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಡಾ. ಜಯರಂಗನಾಥ್ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರು ಸಂಧಿವಾತ ಹೃದಯ ಕಾಯಿಲೆ (Rheumatic heart diseases), ಮಕ್ಕಳ ಮಹಾಪಧಮನಿಯ ಅಪಧಮನಿಯ ಉರಿಯೂತ ( Pediatric aorto arteritis), ಹೃದಯ ವೈಫಲ್ಯ (heart Failure) ಕ್ಷೇತ್ರದಲ್ಲಿ ಅಗ್ರಗಣ್ಯ ಸಾಧನೆ ಮಾಡಿದ್ದಾರೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಹೃದ್ರೋಗಶಾಸ್ತ್ರದ ಸಮ್ಮೇಳನಗಳಲ್ಲಿ ಭಾಷಾಣಕಾರರಾಗಿ ಭಾಗವಹಿಸುತ್ತಾರೆ.

 

   ಮತ್ತೊಂದು ವಿಶೇಷ ಅಂದರೆ, ಕಳೆದ 25 ವರ್ಷಗಳಿಂದ ರಾಜ್ಯಾದ್ಯಂತ ಮಕ್ಕಳ ಹೃದಯ ಚಿಕಿತ್ಸಾ ಶಿಬಿರವನ್ನು ನಿರಂತರವಾಗಿ ಆಯೋಜನೆ ಮಾಡುತ್ತಿದ್ದಾರೆ. ನೀಡಿ ಹಾರ್ಟ್ ಫೌಂಡೇಶನ್, ಚಿಲ್ಡ್ರೆನ್ಸ್ ಹಾರ್ಟ್ ಲಿಂಕ್ ಸೇರಿದಂತೆ ವಿವಿಧ ಸಾಮಾಜಿಕ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 10,000ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ  ಹೃದಯ ತಪಾಸಣೆ ನಡೆಸಿ, ಅಗತ್ಯವಿರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಇವರು ಕರ್ನಾಟಕದಾದ್ಯಂತ ಅನೇಕ ಶಾಲೆಗಳಲ್ಲಿ ಶಿಬಿರಗಳು ಮತ್ತು ಸಮುದಾಯ ಶಿಬಿರಗಳನ್ನು ನಡೆಸಿದ್ದಾರೆ ಮತ್ತು ನಿರಂತರವಾಗಿ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.

 

   ಜಯದೇವ ಆಸ್ಪತ್ರೆಯಲ್ಲಿರುವ ಮಕ್ಕಳ ಹೃದ್ರೋಗ ವಿಭಾಗವು ಅತಿಹೆಚ್ಚು ಮಕ್ಕಳಿಗೆ ಚಿಕಿತ್ಸೆಯನ್ನು ನೀಡುತ್ತಿರುವ ಕರ್ನಾಟಕದ ಸರ್ಕಾರದ ಏಕೈಕ ಸ್ವಾಯತ್ತ ಸಂಸ್ಥೆ ಆಗಿದೆ. ಕರ್ನಾಟಕ ಸೇರಿದಂತೆ ನೆರೆಯ ರಾಜ್ಯದ ಹಾಗೂ ಬೇರೆ ದೇಶದ ಹೃದ್ರೋಗಿಗಳಿಗೂ ಸೂಕ್ತ ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. 

 

    ಕೇಂದ್ರ ಸರ್ಕಾರದ ಆಸ್ಪತ್ರೆಗಳನ್ನು ಹೊರತುಪಡಿಸಿ, ಜಯದೇವ ಆಸ್ಪತ್ರೆಯಲ್ಲಿ ಮಾತ್ರ ಡಿಎಂ (ಪಿಡಿಯಾರ್ಟಿಕ್ ಕಾರ್ಡಿಯಾಲಜಿ) ತರಬೇತಿ ನೀಡಲಾಗುತ್ತಿದೆ. ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯ ಪೈಕಿ ಇಡೀ ಭಾರತ ದೇಶದಲ್ಲಿ ಪ್ರಪ್ರಥಮವಾಗಿ ಜಯದೇವ ಆಸ್ಪತ್ರೆಯಲ್ಲಿ ಡಿಎಂ ಪಿಡಿಯಾರ್ಟಿಕ್ ಕಾರ್ಡಿಯಾಲಜಿ ಆರಂಭಿಸಿದ ಕೀರ್ತಿ ಡಾ. ಜಯರಂಗನಾಥ್ ರವರಿಗೆ ಸಲ್ಲುತ್ತದೆ. ಡಿಎಮ್ ಪಿಡಿಯಾರ್ಟಿಕ್ ಕಾರ್ಡಿಯಾಲಜಿ ದೇಶದಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ತರಬೇತಿ ಕಾರ್ಯಕ್ರಮಗಳಲ್ಲಿ ಒಂದಾಗಿರುವು ಶ್ಲಾಘನೀಯ.

 

   ಡಾ. ಜಯರಂಗನಾಥ್, ಈ ಹಿಂದೆ 2021-2023ರವರೆಗೆ ಪಿಡಿಯಾರ್ಟಿಕ್ ಕಾರ್ಡಿಯಾಕ್ ಸೊಸೈಟಿ ಆಫ್ ಇಂಡಿಯಾ (ಪಿಸಿಎಸ್ಐ) ದ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಪಿಸಿಎಸ್ಐನ ಉಪಾಧ್ಯಕ್ಷರಾಗಿದ್ದು, 2027ಕ್ಕೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿರುವುದು ಸಂಸ್ಥೆಗೆ ಹರ್ಷ ತಂದಿದೆ.