ಸಚ್ಚಿದಾನಂದ ಮೂರ್ತಿ ಕುರಿತು  ದಿನೇಶ್ ಅಮಿನ್ ಮಟ್ಟು ಬರಹ

ಸಾಹಿತಿಗಳು, ಬರಹಗಾರರು, ಪತ್ರಕರ್ತರ ಪಾರ್ಥಿವ ಶರೀರವನ್ನು ನೋಡಲು ಹೋದಾಗೆಲ್ಲ ನಾನು ಮತ್ತೆ ಮತ್ತೆ ನೋಡುವುದು ಅವರ ತಲೆಗಳನ್ನು. ಇನ್ನು ಕೆಲವೇ ಹೊತ್ತಿನಲ್ಲಿ ಸುಟ್ಟು ಬೂದಿಯಾಗುವ ಈ ತಲೆಗಳಲ್ಲಿ ಇನ್ನೂ ಬರೆಯದ,ಹೇಳದ ಎಷ್ಟೊಂದು ಸರಕುಗಳಿತ್ತೋ? ಬರೆಯಬೇಕೆಂದಿರುವ ಎಷ್ಟೊಂದು ಅನುಭವಗಳಿತ್ತೋ? ಅವೆಲ್ಲವನ್ನು ಕ್ಷಣಾರ್ಧದಲ್ಲಿ ಈ ನಿರ್ದಯಿ ಬೆಂಕಿ ಸುಟ್ಟು ಬೂದಿ ಮಾಡುತ್ತದೆಯಲ್ಲಾ ಎಂದು ವೇದನೆಯಾಗುತ್ತದೆ.

ಸಚ್ಚಿದಾನಂದ ಮೂರ್ತಿ ಕುರಿತು    ದಿನೇಶ್ ಅಮಿನ್ ಮಟ್ಟು ಬರಹ

    ಉಸಿರನ್ನು ಬಿಟ್ಟುಕೊಟ್ಟು ಜಯನಗರದ ಮನೆಯಂಗಳದಲ್ಲಿ ನಿನ್ನೆ ಸಂಜೆ (13.10.2023 ಶುಕ್ರವಾರ ) ತಣ್ಣನೆ ಮಲಗಿದ್ದ ಕೆ.ಎಸ್.ಸಚ್ಚಿದಾನಂದ ಮೂರ್ತಿಯವರನ್ನು ನೋಡಿದಾಗಲೂ ಇಂತಹದೇ ಯೋಚನೆ ಬಂದಿತ್ತು. ಇವರ ಬಗ್ಗೆ ಹಾಗೆ ಅನಿಸಲು ವಿಶೇಷವಾದ ಕಾರಣವೂ ಇದೆ.

  ಬರೆದುದೆಲ್ಲವನ್ನೂ ಕಸ-ರಸ ಎಂಬ ವಿಂಗಡಣೆಯನ್ನೂ ಮಾಡದೆ ರಾಶಿರಾಶಿ ಪುಸ್ತಕಗಳನ್ನು ಪ್ರಕಟಿಸಿ ಪುಸ್ತಕಗಳ ಸಂಖ್ಯೆಗಳ ಎಣಿಕೆಯಲ್ಲಿಯೇ ಧನ್ಯರಾಗುವ ಪತ್ರಕರ್ತರ ನಡುವೆ ಸಚ್ಚಿಯವರದ್ದು ಸ್ವಲ್ಪ ಭಿನ್ನ ವ್ಯಕ್ತಿತ್ವ. (ನಾನು ಬರೆದ ಅಂಕಣಗಳನ್ನು ಪ್ರಕಟಿಸಲು ಯಾರಾದರೂ ಹೇಳಿದಾಗ ನಾನು ಸಚ್ಚಿ ಅವರ ಉದಾಹರಣೆ ಕೊಡುತ್ತಿದ್ದುದುಂಟು) .


    ಹೆಚ್ಚು ಕಡಿಮೆ 40 ವರ್ಷವನ್ನು ಪತ್ರಿಕೋದ್ಯಮದಲ್ಲಿ ಕಳೆದ ಸಚ್ಚಿಯವರು ತಮ್ಮ ಲೇಖನ-ಅಂಕಣ ಇಲ್ಲವೇ ಸ್ವತಂತ್ರ ಬರವಣಿಗೆಯ ಒಂದೂ ಪುಸ್ತಕವನ್ನೂ ಪ್ರಕಟಿಸಿಲ್ಲ. ಮಲಯಾಳಿ ಮನೋರಮಾ ಪತ್ರಿಕೆಯಲ್ಲಿ ಸುಮಾರು ಮೂರು ದಶಕಗಳ ಕಾಲ ಅವರು ರಾಜಕೀಯ ಅಂಕಣ ಬರೆದಿದ್ದರು. ದಿ ವೀಕ್ ಪತ್ರಿಕೆಯಲ್ಲಿ ಬರೆದ ವರದಿ,ಲೇಖನ ಮತ್ತು ಅಂಕಣಗಳ ಸಂಖ್ಯೆ ಸಾವಿರ ಮೀರಿರಬಹುದು. 


   ಪ್ರಧಾನಮಂತ್ರಿ, ಬಹುತೇಕ ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿಗಳು ಮಾತ್ರವಲ್ಲ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳ ಜೊತೆ ಆತ್ಮೀಯವಾದ ಒಡನಾಟ ಹೊಂದಿದ್ದ ಸಚ್ಚಿಯವರ ಸಾರ್ವಜನಿಕ ಸಂಪರ್ಕದ ಜಾಲ ಬಹಳ ವಿಸ್ತಾರವಾದದ್ದು. ಒಂದು ರೀತಿಯಲ್ಲಿ ಅವರು ರಾಷ್ಟ್ರ ಮತ್ತು ರಾಜ್ಯ ರಾಜಕಾರಣದ ವಿಶ್ವಕೋಶದಂತಿದ್ದರು.


    “ನಿಮ್ಮ ಬರವಣಿಗೆಗಳನ್ನೆಲ್ಲ ಪ್ರಕಟಿಸಬಹುದಲ್ಲಾ’’ ಎಂದು ಬಹಳ ವರ್ಷಗಳ ಹಿಂದೆ ಅವರನ್ನೊಮ್ಮೆ ಕೇಳಿದ್ದೆ. ಅದಕ್ಕೆ ಅವರು ‘’ನಾನು ದೆಹಲಿಗೆ ಬಂದ ನಂತರ ರಾಜೀವ್ ಗಾಂಧಿ, ವಿ.ಪಿ.ಸಿಂಗ್,ಪಿ.ವಿ.ನರಸಿಂಹರಾವ್ ಹೆಚ್.ಡಿ.ದೇವೇಗೌಡ, ಐ.ಕೆ.ಗುಜ್ರಾಲ್ ಅಟಲ ಬಿಹಾರಿ ವಾಜಪೇಯಿ ಹೀಗೆ ಆರು ಪ್ರಧಾನಮಂತ್ರಿಗಳನ್ನು ಸಮೀಪದಿಂದ ಕಂಡಿದ್ದೇನೆ. ಇವರ ಜೊತೆಗಿನ ಅನುಭವವನ್ನು ಬರೆಯುತ್ತೇನೆ’’ ಎಂದು ಹೇಳಿದ್ದರು. ಇತ್ತೀಚೆಗೆ ನೀರ್ ಜಾ ಚೌದರಿ ಅವರ ‘’’How Prime Ministers decide’’ ಪುಸ್ತಕ ಓದುತ್ತಿದ್ದಾಗಲೂ ಸಚ್ಚಿ ನೆನಪಾಗಿದ್ದರು.


ನನಗೂ ಕುತೂಹಲ ಇತ್ತು. ಬಹುಶ: ನಿವೃತ್ತಿಯ ನಂತರ ತಮ್ಮ ಪುಸ್ತಕ ಶುರುಮಾಡುತ್ತಿದ್ದರೇನೋ? ವಯಸ್ಸಿನ ಲೆಕ್ಕದಲ್ಲಿ ನಿವೃತ್ತಿಯಾಗಲು ಅವರ ಪತ್ರಿಕೆಗಳ ಮಾಲೀಕರು ಬಿಡಲಿಲ್ಲ. 60ರ ನಂತರವೂ ಏಳು ವರ್ಷಗಳ ಕಾಲ ಅವರನ್ನು ತಮ್ಮ ಜೊತೆ ಇಟ್ಟುಕೊಂಡಿದ್ದ ಮಲಯಾಳ ಮನೋರಮಾ-ದಿ ವೀಕ್ ಪತ್ರಿಕೆಯ ಮಾಲೀಕರು ಕಳೆದ ವರ್ಷವಷ್ಟೇ ಅವರನ್ನು ಬಿಡುಗಡೆಗೊಳಿಸಿದ್ದರು. ಅನಾರೋಗ್ಯ ಅಲ್ಲದೆ ಇದ್ದರೆ ಇನ್ನೂ ಒಂದಷ್ಟು ವರ್ಷ ಸೇವೆಯಲ್ಲಿ ಮುಂದುವರಿಯುತ್ತಿದ್ದರೇನೋ? ನಿವೃತ್ತಿಯ ನಂತರ ಅವರು ಸ್ವತಂತ್ರವಾಗಿ ಬರವಣಿಗೆಯಲ್ಲಿ ತೊಡಗಿಕೊಳ್ಳುತ್ತಿದ್ದರೇನೋ? ಆದರೆ ಸಾವು ಅವರಿಗೆ ನಿವೃತ್ತಿ ಜೀವನವನ್ನು ಕಳೆಯುವ ಅವಕಾಶ ನೀಡಲಿಲ್ಲ. ಸಚ್ಚಿಯವರೊಂದಿಗೆ ಅವರ ತಲೆಯಲ್ಲಿದ್ದ ರಾಜ್ಯ ಮತ್ತು ರಾಷ್ಟ್ರ ರಾಜಕೀಯದ ಅನೇಕ ಸಂಗತಿಗಳು ಮಣ್ಣು ಸೇರಿದ್ದಂತೂ ನಿಜ.


2000ನೇ ವರ್ಷದಲ್ಲಿ ನಾನು ಪ್ರಜಾವಾಣಿ ವರದಿಗಾರನಾಗಿ ದೆಹಲಿಗೆ ಹೋಗಿದ್ದಾಗ ಅವರನ್ನು ಮೊದಲ ಬಾರಿ ಕಂಡಿದ್ದೆ. ಪ್ರಜಾವಾಣಿ ಕಚೇರಿ ಇದ್ದ ( ಐಎನ್‌ಎಸ್) ಕಟ್ಟಡದಲ್ಲಿಯೇ ವೀಕ್ ಮತ್ತು ಮನೋರಮಾ ಪತ್ರಿಕೆಗಳ ಕಚೇರಿಯೂ ಇದ್ದ ಕಾರಣ ಮುಖಾಮಖಿಯಾಗುವುದೂ ಇದ್ದೇ ಇತ್ತು. ಹೊಸಬರು-ಹಳಬರು, ಹಿರಿಯರು-ಕಿರಿಯರು ಎನ್ನುವ ಭೇದ ಇಲ್ಲದೆ ಎಲ್ಲರ ಜೊತೆಯಲ್ಲಿಯೂ ಗೆಳೆಯರಂತೆ ಬೆರೆಯುವ ಅವರ ಗುಣ ಎಲ್ಲರೂ ಅವರತ್ತ ಆಕರ್ಷಿತರಾಗುವಂತೆ ಮಾಡುತ್ತಿತ್ತು. ರಾತ್ರಿ ಗುಂಡು ಪಾರ್ಟಿಗಳಲ್ಲಿ ಅವರ ಹಾಜರಿ ಎಂದರೆ ಅದೊಂದು ಸುದ್ದಿಗಳ ಹಬ್ಬ. ಅನಂತಕುಮಾರ್, ರಮೇಶ್ ಜಿಗಜಿಣಗಿ, ಹರಿಪ್ರಸಾದ್, ಜೈಪಾಲ್ ರೆಡ್ಡಿ ಮೊದಲಾದವರ ಮನೆಗಳಲ್ಲಿ ಸಾಮಾನ್ಯವಾಗಿ ಕನ್ನಡಿಗ ಪತ್ರಕರ್ತರು ರಾತ್ರಿ ಊಟಕ್ಕೆ ಸೇರುತ್ತಿದ್ದರು.


ಆರ್ ಎಲ್.ಜಾಲಪ್ಪನವರಿಗೆ ಸಚ್ಚಿ ಆತ್ಮೀಯರಾಗಿದ್ದರು. ಜಾಲಪ್ಪನವರ ಮನೆಯಲ್ಲಿ ಗುಂಡು ಪಾರ್ಟಿ ನಡೆದಾಗ ಯಾರಾದರೂ ವಿಸ್ಕಿ ಗ್ಲಾಸ್ ಗೆ ಸೋಡಾ ಹೆಚ್ಚು ಸುರಿದರೆ ‘’ನೋಡಪ್ಪ ಸೋಡಾ ವೇಸ್ಟ್ ಮಾಡ್ಬೇಡ ಅದಕ್ಕೆ ದುಡ್ಡು ಕೊಟ್ಟಿದ್ದೀನಿ, ವಿಸ್ಕಿ ಬೇಕಾದಷ್ಟು ಸುರಿದುಕೋ ಅದು ಪುಕ್ಕಟೆದ್ದು’’ ಎಂದು ಹೇಳುತ್ತಿದ್ದರಂತೆ. ಇಂತಹ ಅನೇಕ ಹಾಸ್ಯಪ್ರಸಂಗಗಳನ್ನು ಹೇಳುತ್ತಾ ಸಚ್ಚಿಯವರು ದೆಹಲಿಯ ರಾತ್ರಿಗಳಿಗೆ ರಂಗೇರಿಸುತ್ತಿದ್ದರು.


ಕಾಲೇಜು ದಿನಗಳಿಂದಲೇ ದಿ ವೀಕ್ ಪತ್ರಿಕೆಯ ಓದುಗನಾದ ನನಗೆ ಸಚ್ಚಿದಾನಂದ ಮೂರ್ತಿ ಎಂಬ ಬೈಲೈನ್ ಬಗ್ಗೆ ಕುತೂಹಲ ಇತ್ತು. 1986-87ರ ಆಜುಬಾಜಿನಲ್ಲಿ ಮಂಗಳೂರು ವಿ.ವಿ. ಆಂಧ್ರಪ್ರದೇಶದ ಉದ್ಯಮಿಯೊಬ್ಬರಿಗೆ ಗೌರವ ಡಾಕ್ಟರೇಟ್ ಕೊಟ್ಟಾಗ ನಮ್ಮ ನರೇಂದ್ರ ನಾಯಕ್ ಮಂಗಳೂರು ಪುರಭವನದ ಮುಂದೆ ಒಂದು ಕತ್ತೆಯನ್ನು ತಂದು ಅದರ ಕುತ್ತಿಗೆಗೆ ಗೌರವ ಡಾಕ್ಟರೇಟ್ ಫಲಕಹಾಕಿ ಪ್ರತಿಭಟಿಸಿದ್ದರು. ಅದರ ಬಗ್ಗೆ ಬರೆದು ಅದನ್ನು ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದವರು ಸಚ್ಚಿಯವರು. ಅದೇ ರೀತಿ ಕುಂದಾಪುರದ ಶ್ಯಾಮಲಾ ಭಂಡಾರಿ ಅವರು ವರದಕ್ಷಿಣೆ ವಿರುದ್ದದ ಹೋರಾಟಕ್ಕೂ ರಾಷ್ಟ್ರವ್ಯಾಪ್ತಿ ಪ್ರಚಾರವಾಗಿದ್ದು ಸಚ್ಚಿಯವರ ಲೇಖನದಿಂದಲೇ.
ಬಾಬರಿ ಮಸೀದಿ ಧ್ವಂಸವಾದಾಗ ಸಚ್ಚಿಯವರು ದಿ ವೀಕ್ ಪತ್ರಿಕೆಗೆ ಕವರ್ ಸ್ಟೋರಿ ಬರೆದಿದ್ದರು. ಇನ್ನೇನು ಬಾಬರಿ ಮಸೀದಿ ಧ್ವಂಸಕ್ಕೆ ರಂಗ ಸಜ್ಜಾಗತೊಡಗಿದ್ದ ಕಾಲದಲ್ಲಿ ತಮ್ಮನ್ನು ಭೇಟಿಯಾಗಿದ್ದ ಜನತಾದಳ ಮತ್ತು ಸಿಪಿಎಂ ನಾಯಕರುನ್ನು ಉದ್ದೇಶಿಸಿ ಪ್ರಧಾನಿ ನರಸಿಂಹರಾವ್ ಒಂದು ಸಂಸ್ಕೃತ ಶ್ಲೋಕವನ್ನು ಹೇಳಿದ್ದರಂತೆ.


 “ಯಾವುದೇ ವಿಷಯದ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಮನುಷ್ಯರು ಮೊದಲೆರಡು ನಿರ್ಧಾರ ಕೈಗೊಳ್ಳುತ್ತಾರೆ. ಅವುಗಳು ವಿಫಲವಾದಾಗ ಮೂರನೇ ನಿರ್ಧಾರವನ್ನು ದೇವರಿಗೆ ಬಿಡಬೇಕಂತೆ, ಅವನೇ ನಿರ್ಧಾರ ಕೈಗೊಳ್ಳುತ್ತಾನೆ” ಎನ್ನುವ ಆ ಶ್ಲೋಕದ ಅರ್ಥವನ್ನೂ ಅವರೇ ವಿವರಿಸಿದ್ದರಂತೆ. ಬಾಬರಿ ಮಸೀದಿ ಧ್ವಂಸ ಎನ್ನುವುದು ದೇವರ ನಿರ್ಧಾರ, ನನ್ನದಲ್ಲ ಎನ್ನುವುದನ್ನು ಅವರು ಪರೋಕ್ಷವಾಗಿ ಹೇಳಿದ್ದರು. ಈ ಪ್ರಸಂಗವನ್ನು ಲೇಖನದ ಪ್ರಾರಂಭದಲ್ಲಿಯೇ ಉಲ್ಲೇಖಿಸಿದ್ದ ಸಚ್ಚಿಯವರು ಬಾಬರಿ ಮಸೀದಿ ಧ್ವಂಸವನ್ನು ತಡೆಯಲು ಪಿವಿಎನ್ ಅವರಿಗೆ ಸಾಧ್ಯವಿತ್ತು ಎಂದು ಅರ್ಥಬರುವಂತೆ ಬರೆದಿದ್ದರು. ಏನನ್ನೂ ಹೇಳದೆ ಎಲ್ಲವನ್ನು ಹೇಳುವ ಕಲೆ ಎಲ್ಲ ಪತ್ರಕರ್ತರಿಗೆ ಸಿದ್ದಿಸುವುದಿಲ್ಲ. ಈ ಕಾರಣಕ್ಕಾಗಿಯೇ ಅವರು ಕೊನೆವರೆಗೆ ಅಜಾತಶತ್ರುವಾಗಿ ಉಳಿದಿರಬಹುದೇನೋ?


ದೆಹಲಿಯ ರಾಜಕೀಯ, ಸಾಂಸ್ಕೃತಿಕ, ಮಾಧ್ಯಮ ಹೀಗೆ ಯಾವುದೇ ಕ್ಷೇತ್ರಗಳನ್ನು ಆಯ್ದುಕೊಂಡರೂ ಬಂಗಾಳಿ, ಮಲಯಾಳಿ, ತಮಿಳರು ಮತ್ತು ತೆಲುಗರಷ್ಟು ಕನ್ನಡಿಗರ ಪ್ರಾತಿನಿಧ್ಯ ಇಲ್ಲ. ಸಚ್ಚಿದಾನಂದ ಮೂರ್ತಿಯವರು ಮಲೆಯಾಳಿ ಮೂಲದ ಮಾಧ್ಯಮ ಸಂಸ್ಥೆಗೆ ಕೆಲಸಮಾಡುತ್ತಿದ್ದರೂ ಕನ್ನಡಿಗರ ಪ್ರತಿನಿಧಿಯಾಗಿದ್ದರು. ಇದು ನಮ್ಮಂತಹ ಕನ್ನಡಿಗ ಪತ್ರಕರ್ತರ ಕೀಳರಿಮೆಯನ್ನು ತುಸು ಕಡಿಮೆಮಾಡಿತ್ತು.
ಕರ್ನಾಟಕದಿಂದ ದೆಹಲಿಗೆ ಬರುವ ರಾಜಕೀಯ ಕ್ಷೇತ್ರದ ದೊಡ್ಡ-ಸಣ್ಣನಾಯಕರೆಲ್ಲರೂ ಸಚ್ಚಿ ಅವರಿಗೊಂದು ಸಲಾಂ ಹೊಡೆದೇ ಹೋಗುತ್ತಿದ್ದರು. ಬಹಳ ಪ್ರಮುಖವಾಗಿ ಕಾಂಗ್ರೆಸ್ ನಾಯಕರು 10 ಜನಪಥ್ ಗೆ ಹಾಜರಿ ಹಾಕುವ ರೀತಿಯಲ್ಲಿಯೇ ಸಚ್ಚಿಯವರ ಮುಂದೆಯೂ ಒಂದು ಹಾಜರಿ ಹಾಕುತ್ತಿದ್ದರು. ಇದಕ್ಕೆ ಮುಖ್ಯ ಕಾರಣ ಕಾಂಗ್ರೆಸ್ ಕಡೆಯಿಂದ ಕರ್ನಾಟಕಕ್ಕೆ ಉಸ್ತುವಾರಿಯಾಗಿ ಬಂದವರಲ್ಲಿ ಹೆಚ್ಚಿನವರು ಕೇರಳ ಕಾಂಗ್ರೆಸ್ ನವರೇ ಆಗಿದ್ದರು. ರಮೇಶ್ ಚೆನ್ನಿತಲ, ವಯಲಾರ್ ರವಿ, ಎ.ಕೆ.ಆಂಟನಿ, ವೇಣುಗೋಪಾಲ್ ಎಲ್ಲರೂ ಸಚ್ಚಿಯವರಿಗೂ ಆತ್ಮೀಯರಾಗಿರುವ ಕಾರಣದಿಂದ ಸಚ್ಚಿಯವರಿಂದ ಒಂದು ಮಾತು ಹೇಳಿಸುವ ಮತ್ತು ಅವರಿಂದ ‘’ಒಳಗಿನ ಸುದ್ದಿ’’ ಕೇಳುವ ಆಸೆ ಎಲ್ಲರದ್ದೂ.


ಊರಲ್ಲಿ ಕೆಲವು ಹಿರಿಯರಿಗೆ ಕಿಸೆಯಲ್ಲಿ ಚಾಕಲೇಟ್ ಇಟ್ಟುಕೊಳ್ಳುವ ಅಭ್ಯಾಸ ಇರುತ್ತದೆ. ಮಕ್ಕಳು ಸಿಕ್ಕಾಗೆಲ್ಲ ಹಂಚಿಬಿಡುತ್ತಿದ್ದರು. ನನಗೆ ಸಚ್ಚಿಯವರು ಅದೇ ರೀತಿ ಕಾಣುತ್ತಿದ್ದರು. ಸುದ್ದಿ ಹಸಿವಿನ ಪತ್ರಕರ್ತರು ಸಚ್ಚಿಯವರು ಸಿಕ್ಕಾಗೆಲ್ಲ ಏನ್ ಸಾರ್ ಸುದ್ದಿ ಎಂದಾಕ್ಷಣ ಒಂದೆರಡು ‘’ಚಾಕಲೇಟ್’’ ಕೊಟ್ಟೇ ಕೊಡುತ್ತಿದ್ದರು. ಒಮ್ಮೊಮ್ಮೆ ರಾಜಕೀಯ ಗಾಸಿಪ್‌ಗಳನ್ನು ಹೇಳಿ ಮಜಾ ತಗೊಳ್ಳುವುದೂ ಇತ್ತು. ದೆಹಲಿಯಲ್ಲಿ ವರದಿಗಾರರು ಇಲ್ಲದ ಪತ್ರಿಕೆ ಮತ್ತು ಚಾನೆಲ್‌ಗಳಿಗೆ ಸಚ್ಚಿಯವರು ಬಹಳ ಮುಖ್ಯವಾದ ಸುದ್ದಿ ಮೂಲವಾಗಿದ್ದರು.


ಸಚ್ಚಿದಾನಂದ ಮೂರ್ತಿ ಮತ್ತು ಸೂರ್ಯ ಪ್ರಕಾಶ್ ದೆಹಲಿ ಮಾಧ್ಯಮ ವಲಯದಲ್ಲಿ ಬಹುಪರಿಚಿತ ಹಿರಿಯ ಪತ್ರಕರ್ತರು. ರಾಜಕಾರಣಿಗಳ ಜೊತೆಗಿನ ಇವರಿಬ್ಬರ ಸ್ನೇಹ-ಸಂಬAಧಗಳನ್ನು ನೋಡುತ್ತಿದ ನನಗೆ ಸಚ್ಚಿಯವರು ಇಂದಲ್ಲ ನಾಳೆ ಯಾವುದಾದರೂ ಪಕ್ಷದ ಜೊತೆ ಗುರುತಿಸಿಕೊಳ್ಳಬಹುದು, ಸೂರ್ಯಪ್ರಕಾಶ್ ಆ ಗೋಜಿಗೆ ಹೋಗಲಾರರು ಎಂದು ಪ್ರಾರಂಭದಲ್ಲಿ ಅನಿಸಿತ್ತು. ಆದರೆ ಸಚ್ಚಿ ಕೊನೆವರೆಗೆ ಪತ್ರಕರ್ತರಾಗಿಯೇ ಉಳಿದರು, ಸೂರ್ಯಪ್ರಕಾಶ್ ಬಿಜೆಪಿ-ಆರ್ ಎಸ್ ಎಸ್ ನ ಪ್ರಬಲ ಪ್ರತಿಪಾದಕರಾಗಿ ಬದಲಾದರು.


ನನ್ನ ಪ್ರಕಾರ ಸಚ್ಚಿಯವರು ತಮ್ಮ ಪ್ರತಿಭೆ ಮತ್ತು ಅನುಭವಕ್ಕೆ ತಕ್ಕಷ್ಟು ಬರೆದಿಲ್ಲ. ಅವರಿಗೆ ಗೊತ್ತಿದ್ದಷ್ಟನ್ನೂ ಬರೆದಿಲ್ಲ. ಇದಕ್ಕೆ ಹಲವಾರು ಕಾರಣಗಳಿರಬಹುದು. ಅವರ ಜೊತೆ ಮಾತನಾಡಿದಾಗೆಲ್ಲ ಅವರBest yet to come ಎಂದೇ ಅನಿಸುತ್ತಿತ್ತು. ಆದರೆ ಸಾವು ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ.