ಚರಿತ್ರೆಯ ಸಾಂಕೇತಿಕ ಪ್ರತಿರೋಧಗಳನ್ನು ವರ್ತಮಾನದ ವಾಸ್ತವಗಳ ನಡುವೆ ನೋಡಬೇಕು
ಸಾಂಕೇತಿಕ ಪ್ರತಿರೋಧ ಮತ್ತು ಆಚರಣೆಗಳನ್ನು ದಾಟಿ ವರ್ತಮಾನದ ವಾಸ್ತವಗಳತ್ತ ಗಮನಹರಿಸಿ, ಸಾಮಾಜಿಕ ವ್ಯಾಧಿಗಳನ್ನು, ಸಾಂಸ್ಕೃತಿಕ ವ್ಯಸನಗಳನ್ನು ಮತ್ತು ಅಮಾನುಷ ಧಾರ್ಮಿಕ ಪದ್ಧತಿಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನಾವು ಸಾಗಬೇಕಿದೆ. ಡಿಸೆಂಬರ್ 25ರ ಆಚರಣೆಗಳ ನಡುವೆ ಈ ಆತ್ಮವಿಮರ್ಶಾತ್ಮಕ ಆಲೋಚನೆಗೆ ಸ್ವಲ್ಪವಾದರೂ ಜಾಗ ದೊರೆತರೆ, ಭವಿಷ್ಯದ ಬೆಳಕಿನ ಕಿಂಡಿಯನ್ನೂ ಕಾಣಲು ಸಾಧ್ಯ.
ನಾ ದಿವಾಕರ
ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ಅದರ ಅಂತರ್ ಗರ್ಭದಲ್ಲಿ ಅಡಗಿದ್ದ ತಾರತಮ್ಯ, ದೌರ್ಜನ್ಯ, ಅಸಮಾನತೆ ಮತ್ತು ಕ್ರೌರ್ಯವನ್ನು ಅಧ್ಯಯನ ಸಂಶೋಧನೆಗಳ ಮೂಲಕ ಮಾತ್ರವಲ್ಲದೆ ಸ್ವತಃ ತಮ್ಮ ಬದುಕಿನಲ್ಲೇ ಪ್ರತ್ಯಕ್ಷವಾಗಿ ಅನುಭವಿಸಿ ಅರಿತಿದ್ದ ಡಾ. ಬಿ.ಆರ್. ಅಂಬೇಡ್ಕರ್, ಈ ಮಾನವ ವಿರೋಧಿ ವ್ಯವಸ್ಥೆಯ ಮೂಲವನ್ನು ಗುರುತಿಸಿದ್ದು ಮಧ್ಯಕಾಲೀನ ಭಾರತದ ಮನುಸ್ಮೃತಿಯಲ್ಲಿ. ಒಂದು ಧರ್ಮ ಸಂಹಿತೆಯಾಗಿ ಇಡೀ ನಾಗರಿಕತೆಯನ್ನು ಮತ್ತು ಸಮಾಜಗಳನ್ನು ನಿರ್ದೆಶಿಸಿದ್ದ ಮನುಸ್ಮೃತಿಯ ಹಲವಾರು ಬೋಧನೆಗಳು ಜಾತಿ ವ್ಯವಸ್ಥೆ, ಊಳಿಗಮಾನ್ಯತೆ, ಪಿತೃಪ್ರಧಾನತೆ, ಮಹಿಳಾ ಸಂಕುಲದ ಅಧೀನತೆ ಮತ್ತು ಕೆಳಸ್ತರದ ಶೋಷಿತ ಸಮಾಜಗಳ ಶೋಷಣೆಗಳನ್ನು ಎತ್ತಿಹಿಡಿಯುವುದೇ ಅಲ್ಲದೆ, ಧಾರ್ಮಿಕತೆಯ ಚೌಕಟ್ಟಿನಲ್ಲಿ ಸಮರ್ಥಿಸುತ್ತದೆ.
ಈ ಕಾರಣಕ್ಕಾಗಿಯೇ, ಅಂಬೇಡ್ಕರ್ ತಮ್ಮ ಜಾತಿ ವಿರೋಧಿ ಸಮರದಲ್ಲಿ ಮನುಸ್ಮೃತಿಯ ಅಪಾಯಗಳನ್ನು ಜನರಿಗೆ ಮನದಟ್ಟು ಮಾಡುವ ಅಭಿಯಾನವನ್ನೂ ಕೈಗೊಂಡಿದ್ದರು. ಈ ದಾರಿಯಲ್ಲೇ ಅವರು ಕಂಡುಕೊಂಡ ಹಲವು ಸಾಂಕೇತಿಕ ಪ್ರತಿಭಟನೆಗಳ ಪೈಕಿ ಮಹಾಡ್ ಸತ್ಯಾಗ್ರಹ, ಕಾಲಾರಾಂ ದೇವಾಲಯ ಪ್ರವೇಶ ಮತ್ತು ಮನುಸ್ಮೃತಿ ದಹನ ಮುಖ್ಯವಾಗಿ ಕಾಣುತ್ತದೆ. 1927ರ ಡಿಸೆಂಬರ್ 25ರಂದು ಸಾರ್ವಜನಿಕರ ಸಮ್ಮುಖದಲ್ಲಿ ಮನುಸ್ಮೃತಿಯ ಕೆಲವು ಪುಟಗಳನ್ನು ಸಾಂಕೇತಿಕವಾಗಿ ಸುಡುವ ಮೂಲಕ ಅಂಬೇಡ್ಕರ್, ಆ ಧರ್ಮಶಾಸ್ತ್ರದ ಗ್ರಂಥದಲ್ಲಿ ಅಡಗಿದ್ದ ಮನುಷ್ಯ ವಿರೋಧಿ ಸಂಹಿತೆಗಳು ಭವಿಷ್ಯ ಭಾರತಕ್ಕೆ ಅಗತ್ಯವಿಲ್ಲ ಎಂಬ ಸಂದೇಶದೊಂದಿಗೇ, ಶೋಷಿತ ತಳಸಮುದಾಯಗಳು ಈ ಸಂಹಿತೆಗಳನ್ನು ತಮ್ಮ ಬದುಕಿನ ಹಾದಿಯಿಂದ ಕಿತ್ತೊಗೆಯಬೇಕು ಎಂಬ ದೂರಗಾಮಿ ಆಲೋಚನೆಯನ್ನೂ ದಾಖಲಿಸಿದ್ದರು.
ಸಾಂಕೇತಿಕ ಪ್ರತಿರೋಧದ ನೆನಪಿನಲ್ಲಿ
ಚಾರಿತ್ರಿಕವಾಗಿ “ ಮನುಸ್ಮೃತಿ ದಹನ್ ದಿವಸ್ ” ಎಂದೇ ಗುರುತಿಸಲಾಗುವ ಈ ದಿನವನ್ನು ಒಂದು ಆಚರಣೆಯ ಮಾದರಿಯಲ್ಲಿ (Ritualistic manner) ಅನುಸರಿಸಲಾಗುತ್ತಿದೆ. ಚರಿತ್ರೆಯ ಕೆಲವು ಘಟನೆಗಳನ್ನು ಹೀಗೆ ಆಚರಣೆಯ ಮೂಲಕ ಸ್ಮರಿಸುವುದು ,ತನ್ಮೂಲಕ ವರ್ತಮಾನದ ಸಮಾಜಕ್ಕೆ “ ಈ ರೀತಿಯ ಪ್ರತಿರೋಧ ಶತಮಾನದ ಹಿಂದೆಯೇ ಕಂಡುಬಂದಿತ್ತು ” ಎಂಬ ಸಂದೇಶವನ್ನು ನೀಡುವುದು ಅವಶ್ಯವೇ. ಇತಿಹಾಸದ ಅರಿವು ಕಡಿಮೆ ಇರುವ ಅಥವಾ ಇಲ್ಲದಿರುವ ಯುವ ತಲೆಮಾರಿಗೆ ಈ ಪ್ರತಿರೋಧದ ಇತಿಹಾಸವನ್ನು ಮನದಟ್ಟು ಮಾಡುವ ಮೂಲಕ ಅವರಲ್ಲಿ ಚಾರಿತ್ರಿಕ ಪ್ರಜ್ಞೆ, ವರ್ತಮಾನದ ಜಾಗೃತಿ ಮತ್ತು ಭವಿಷ್ಯದ ಕನಸುಗಳನ್ನು ಮೂಡಿಸುವ ಅವಶ್ಯಕತೆ ಭಾರತದಲ್ಲಂತೂ ಇದೆ. ಈ ದೃಷ್ಟಿಯಿಂದ ಈ ದಿನವನ್ನು ಸ್ಮರಿಸುವುದು ಸ್ವಾಗತಾರ್ಹ.
ಆದರೆ ಈ ಪ್ರತಿರೋಧದ ಘಟನೆಯನ್ನು ಸ್ಮರಿಸುತ್ತಲೇ ಈ ಹೊತ್ತಿನಲ್ಲಿ ನಮ್ಮ ಸಮಾಜದಲ್ಲಿ ಸಂಭವಿಸುತ್ತಿರುವ ಅಮಾನವೀಯ ಘಟನೆಗಳತ್ತ ಗಮನಹರಿಸುವುದು ವರ್ತಮಾನದ ತುರ್ತು. ಕಾಕತಾಳೀಯವಾಗಿ ಈ ದಿನಾಚರಣೆಯ ಸಂದರ್ಭದಲ್ಲೇ ಹುಬ್ಬಳ್ಳಿಯಲ್ಲಿ ನಡೆದಿರುವ ಮರ್ಯಾದೆಗೇಡು ಹತ್ಯೆಯ ಪ್ರಕರಣ ಭಾರತದ ಸಾಂಪ್ರದಾಯಿಕ ಸಮಾಜದಲ್ಲಿ ಮನುಸ್ಮೃತಿಯ ಚಿಂತನಾ ಧಾರೆ ಎಷ್ಟು ಆಳವಾಗಿ ಬೇರೂರಿದೆ ಎನ್ನುವುದನ್ನು ನಿರೂಪಿಸುತ್ತದೆ. ದಲಿತ ಹುಡುಗನನ್ನು ವಿವಾಹವಾದ ಒಂದೇ ಕಾರಣಕ್ಕೆ ಗರ್ಭಿಣಿಯಾಗಿದ್ದ ತಮ್ಮ ಸ್ವಂತ ಮಗಳನ್ನೇ ಕ್ರೂರವಾಗಿ ಹತ್ಯೆ ಮಾಡಿದ ಪೋಷಕರನ್ನು ಜೀವವೈವಿಧ್ಯದ ಯಾವ ಪ್ರವರ್ಗಕ್ಕೆ ಸೇರಿಸಬಹುದು ? ಬೋಡಗುರ್ಕಿ, ಕ್ಯಾತನಹಳ್ಳಿ, ಲಿಂಗಸುಗೂರು ಈಗ ಹುಬ್ಬಳ್ಳಿ, ಹೀಗೆ ತಾವು ಹೆತ್ತ ಹೆಣ್ಣು ಮಕ್ಕಳನ್ನೇ , ಕುಟುಂಬದ ಗೌರವ ಕಾಪಾಡುವ ನೆಪದಲ್ಲಿ, ಬರ್ಬರವಾಗಿ ಹತ್ಯೆ ಮಾಡುವ ಘಟನೆಗಳು ಸತತವಾಗಿ ವರದಿಯಾಗುತ್ತಲೇ ಇವೆ.
ಈ ʼ ಕುಟುಂಬ ಗೌರವ ʼ ಎಂಬ ಸುಂದರ ಪದದ ಹಿಂದೆ ಅವಿತಿರುವುದು ಪಿತೃಪ್ರಧಾನ ಮೌಲ್ಯಗಳು, ಯಜಮಾನಿಕೆಯ ಸಂಸ್ಕೃತಿ, ಪುರುಷಾಧಿಪತ್ಯದ ಭಾವನೆ ಮತ್ತು ಜಾತಿ ವ್ಯವಸ್ಥೆ ನಿರ್ವಚಿಸುವ ಮೇಲು-ಕೀಳು, ಶ್ರೇಷ್ಠ-ಕನಿಷ್ಠ ಪ್ರಜ್ಞೆ. ಹೆಣ್ಣು ಭ್ರೂಣ ಹತ್ಯೆಗೂ, ಭ್ರೂಣ ಹೊತ್ತ ಹೆಣ್ಣು ಮಗಳ ಹತ್ಯೆಗೂ ವ್ಯತ್ಯಾಸವೇನಾದರೂ ಇದ್ದರೆ, ಅದು ಸಮಯದ ಅಂತರವಷ್ಟೇ ಅಲ್ಲವೇ ? ಅಲ್ಲಿ ಹೆಣ್ಣು ಜನ್ಮವನ್ನೇ ತಿರಸ್ಕರಿಸುವ ಪಿತೃಪ್ರಧಾನ ಮೌಲ್ಯ ಕಂಡರೆ, ಇಲ್ಲಿ ಬೆಳೆದ ಹೆಣ್ಣು ಮಗಳ ಆಯ್ಕೆ-ಆದ್ಯತೆಯ ಸ್ವಾತಂತ್ರ್ಯವನ್ನು ನಿರಾಕರಿಸುವ ಪುರುಷಾಧಿಪತ್ಯದ ಮನೋಭಾವ ಕಾಣುತ್ತದೆ. ಎರಡೂ ಪ್ರಸಂಗಗಳಲ್ಲಿ ಕಾರ್ಯಗತವಾಗುವುದು ಮನುಸ್ಮೃತಿಯಲ್ಲಿ ಬೋಧಿಸಲಾಗುವ, ಮಹಿಳೆಯನ್ನು ಅಧೀನಳನ್ನಾಗಿ ನೋಡುವ ಮತ್ತು ಪುರುಷರ ಅಥವಾ ಪುರುಷ ಕೇಂದ್ರಿತ ಕೌಟುಂಬಿಕ ವ್ಯವಸ್ಥೆಯ ಪರಮಾಧಿಕಾರದ ಮೌಲ್ಯಗಳು.
ಆಧುನಿಕ ಸಮಾಜ-ಪ್ರಾಚೀನ ಮೌಲ್ಯಗಳು
ಈ ಸಾಮಾಜಿಕ ಮೌಲ್ಯಗಳು ಸಾಂಪ್ರದಾಯಿಕ ಸಮಾಜದಲ್ಲಿ ಧಾರ್ಮಿಕ ಅನುಮೋದನೆ ಪಡೆದುಕೊಂಡಾಗ, ಅದು ಸಮಾಜದ ಸಾಂಸ್ಕೃತಿಕ ಬೇರುಗಳನ್ನೇ ಕಲುಷಿತಗೊಳಿಸುತ್ತದೆ. ಅಷ್ಟೇ ಅಲ್ಲದೆ ಸ್ಥಾಪಿತ ನೆಲಮೂಲ ಸಂಸ್ಕೃತಿಯನ್ನೂ ಸಹ ಮಲಿನಗೊಳಿಸುತ್ತದೆ. ಹಾಗಾಗಿಯೇ ಮರ್ಯಾದೆಗೇಡು ಹತ್ಯೆಗಳು ಸಮಾಜದ ಎಲ್ಲ ಜಾತಿ ಸಮುದಾಯಗಳಲ್ಲೂ, ಎಲ್ಲ ವರ್ಗಗಳಲ್ಲೂ, ಅನ್ಯ ಧರ್ಮಗಳ ಸಮಾಜಗಳಲ್ಲೂ ಭಿನ್ನ ಮಾದರಿಗಳಲ್ಲಿ ನಡೆಯುತ್ತಿರುತ್ತದೆ. ಮನುಸ್ಮೃತಿ ದಹನ ದಿನವನ್ನು ಆಚರಿಸುವ ಹೊತ್ತಿನಲ್ಲಿ, ಆ ಚಾರಿತ್ರಿಕ ಗಳಿಗೆಯ ವೈಭವೀಕರಣಕ್ಕಿಂತಲೂ ಮುಖ್ಯವಾಗುವುದು, ನಮ್ಮ ಕಣ್ಣೆದುರಿನಲ್ಲೇ ನೆನ್ನೆ ನಡೆದಿರುವ , ಇಂದು ನಡೆಯುವ, ನಾಳೆ ನಡೆಯಬಹುದಾದ ಘಟನೆಗಳ ತಾತ್ವಿಕ ನೆಲೆಗಟ್ಟು ಮತ್ತು ಸಾಂಸ್ಕೃತಿಕ ಅಡಿಪಾಯ.
ಈ ಅಡಿಪಾಯದ ಒಳಹೊಕ್ಕು ನೋಡಿದಾಗ ನಮಗೆ ಕಾಣುವುದೇನು ? 98 ವರ್ಷಗಳಿಂದ ಮನುಸ್ಮೃತಿ ದಹನ ದಿವಸ್ ಆಚರಿಸುತ್ತಿದ್ದರೂ, ನಮ್ಮ ಸಮಾಜದಲ್ಲಿ ಮನುಸ್ಮೃತಿಯ ಅನುಸರಣೆ, ಅನುಕರಣೆ ಮತ್ತು ಆಚರಣೆಗಳು ವ್ಯವಸ್ಥಿತವಾಗಿ ಮುಂದುವರೆಯುತ್ತಲೇ ಇವೆ ಎನ್ನುವ ಕಟು ಸತ್ಯ. ಇತ್ತೀಚಿನ ಸಾರ್ವಜನಿಕ ಸಂಕಥನಗಳಲ್ಲಿ ʼ ಮನುವಾದ –ಮನುವಾದಿ ʼ ಎಂಬ ಪದಗಳು ಹೆಚ್ಚು ಹೆಚ್ಚು ಬಳಕೆಯಾಗುತ್ತಿದ್ದು, ಬಹುಮಟ್ಟಿಗೆ ಕ್ಲೀಷೆಗಳಾಗಿವೆ. ನಿರ್ದಿಷ್ಟವಾಗಿ ನಿರ್ವಚಿಸಲಾಗದ ಈ ಪದಗಳನ್ನು ದಲಿತ ವಿರೋಧಿಗಳಿಗೆ, ಅಸ್ಪೃಶ್ಯತೆಯ ಸಮರ್ಥಕರಿಗೆ, ಹಿಂದುತ್‌ವಾದಿಗಳಿಗೆ ಆರೋಪಿಸುವ ವೇಳೆ, ಈ ಪದಗಳಿಂದಾಚೆಗೆ ಸುತ್ತಲಿನ ಸಮಾಜದ ವಿದ್ಯಮಾನಗಳನ್ನು ಗಮನಿಸುತ್ತಾ ಹೋದರೆ, ಇದು ಕೇವಲ ʼ ವಾದ-ವಾದಿ ʼ ಎಂಬ ಗುಣಲಕ್ಷಣಕ್ಕೆ ಸೀಮಿತವಾದುದಲ್ಲ ಎಂಬ ವಾಸ್ತವದ ಅರಿವು ಮೂಡುತ್ತದೆ.
ಏಕೆಂದರೆ ಅಂಬೇಡ್ಕರ್ 98 ವರ್ಷಗಳ ಹಿಂದೆ ಸುಟ್ಟ, ನಾವು ಪ್ರತಿವರ್ಷವೂ ಸುಡುತ್ತಿರುವ ಮನುಸ್ಮೃತಿ ಭಾರತದ ಸಾಂಪ್ರದಾಯಿಕ ಸಮಾಜದಲ್ಲಿ, ಧಾರ್ಮಿಕ ಚೌಕಟ್ಟುಗಳಲ್ಲಿ ಹಾಗೂ ಸಾಂಸ್ಕೃತಿಕ ಆಚರಣೆಗಳಲ್ಲಿ ಗ್ರಾಂಥಿಕವಾಗಿ ಉಳಿದಿಲ್ಲ. ಮನುಸ್ಮೃತಿಯ ಬೋಧನೆ, ಭಗವದ್ಗೀತೆಯ ಹಾಗೆ, ವ್ಯವಸ್ಥಿತವಾಗಿ ಬೋಧಿಸಲ್ಪಡುತ್ತಿಲ್ಲ. ಅಥವಾ ಶಾಲಾ ಮಕ್ಕಳಿಗೆ ಅದರ ಶ್ಲೋಕಗಳನ್ನು ಕಂಠಪಾಠ ಮಾಡುವ ಸ್ಪರ್ಧೆಗಳು ಎಲ್ಲೂ ನಡೆಯುತ್ತಿಲ್ಲ. ಆದಾಗ್ಯೂ ಮನುಸ್ಮೃತಿಯ ಅಂತಃಸತ್ವ, ಡಿಜಿಟಲ್ ತಂತ್ರಜ್ಞಾನದ ಯುಗದಲ್ಲೂ ಸಹ, ಸಮಾಜದಲ್ಲಿ ಜನಜೀವನದಲ್ಲಿ ಮತ್ತು ಜೀವನಾಚರಣೆಯಲ್ಲಿ ಅಂತರ್‌ವಾಹಿನಿಯಾಗಿ ಹರಿಯುತ್ತಿದೆ. ಹುಟ್ಟಿನಿಂದ ಪಡೆಯುವ ಶ್ರೇಷ್ಠತೆ, ಲಿಂಗತ್ವದ ನೆಲೆಯಲ್ಲಿ ಪಡೆಯುವ ಆಧಿಪತ್ಯ, ಸಾಮಾಜಿಕ ಅಂತಸ್ತಿನ ಮೂಲಕ ಪಡೆಯುವ ಪಾರಮ್ಯ-ಯಜಮಾನಿಕೆ ಹಾಗೂ ಬೌದ್ಧಿಕವಾಗಿ ಒದಗಿಬರುವ ಮೇಲರಿಮೆ ಇವೆಲ್ಲವೂ ಮನುಸ್ಮೃತಿಯ ಆಕರ ಚಿಂತನೆಗಳಾಗಿ, ಈ ಅಂತರ್‌ವಾಹಿನಿಯಲ್ಲಿ ಅಡಕಗೊಂಡಿವೆ.
ಮನ್ವಂತರದ ಹಾದಿಯ ವೈಫಲ್ಯ
ದಲಿತ, ಅಲ್ಪಸಂಖ್ಯಾತ, ಬುಡಕಟ್ಟು ಸಮುದಾಯಗಳನ್ನೂ ಸೇರಿದಂತೆ ಯಾವ ಸಮಾಜದಲ್ಲಿ ಈ ಅಂತಸ್ತಿನ ಅಂತರವನ್ನು ತೊಡೆದುಹಾಕಲು, ಮೇಲರಿಮೆಯ ಅಹಮಿಕೆಯನ್ನು ಅಳಿಸಿಹಾಕಲು, ಆಧಿಪತ್ಯದ ಧೋರಣೆಯನ್ನು ತ್ಯಜಿಸಲು ಬೌದ್ಧಿಕ ಪ್ರಯತ್ನಗಳು ನಡೆಯುತ್ತಿವೆ ? ಆರ್ಥಿಕ ಕಾರಣಗಳಿಗಾಗಿ, ಅಸ್ತಿತ್ವವಾದಿ ನೆಲೆಯಲ್ಲಿ ಭಾರತೀಯ ಸಮಾಜದ ಜಾತಿ ಬೇರುಗಳು ಮತ್ತು ಜಾತಿ ಪ್ರಜ್ಞೆ ಗಟ್ಟಿಯಾಗುತ್ತಿರುವ ಸಂದರ್ಭದಲ್ಲಿ, ಸಂವಿಧಾನ ಮತ್ತು ಸಾಂವಿಧಾನಿಕ ಮೌಲ್ಯಗಳು , ತೆರೆಯ ಹಿಂದೆ, ತೆರೆಯ ಮುಂದೆ ಸಮಾನತೆ-ಬಹುತ್ವದ ಕಲ್ಪನೆಗಳನ್ನು ಸಮಾಜದ ನಡುವೆ ಕ್ರಿಯಾಶೀಲವಾಗಿ ಪ್ರವಹಿಸುತ್ತಿವೆ. ಆದರೆ ಈ ತೆರೆಮರೆಯ ಆಟದ ಹಿಂದಿರುವ ಕರಾಳ ಸತ್ಯಗಳು ಕಾಶ್ಮೀರದ ಕಥುವಾದಿಂದ ಕೋಲಾರದ ಬೋಡಗುರ್ಕಿಯವರೆಗೂ ಅನಾವರಣಗೊಳ್ಳುತ್ತಿವೆ. ಈ ವೈರುಧ್ಯವನ್ನು ಪರಿಹರಿಸುವುದಕ್ಕೂ ಮುನ್ನ, ಗಂಭೀರವಾಗಿ ಪರಾಮರ್ಶೆಗೊಳಪಡಿಸಬೇಕಿದೆ.
ಸಂವಿಧಾನ ಬದ್ಧತೆಯನ್ನು ಬಹಿರಂಗವಾಗಿ ಪೀಠಿಕೆಯ ಪಠಣದ ಮೂಲಕ, ಪ್ರಮಾಣೀಕರಣದ ಮೂಲಕ ವ್ಯಕ್ತಪಡಿಸುತ್ತಲೇ ಬಂದಿರುವ ಆಧುನಿಕ ಸಮಾಜ, ಈ ಸಾಂವಿಧಾನಿಕತೆಯನ್ನು ನಾಶಪಡಿಸಬಹುದಾದ ಮನುಸ್ಮೃತಿಯ ಚಿಂತನಾಧಾರೆಗಳು ಪ್ರತಿ ವ್ಯಕ್ತಿ, ಕುಟುಂಬ, ಸಮುದಾಯ, ಸಮಾಜ ಮತ್ತು ಗುಂಪುಗಳಲ್ಲೂ ಜೀವಂತವಾಗಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಸಂವಿಧಾನವನ್ನು ಆರಾಧಿಸುವ ಮತ್ತು ಪ್ರತಿಯೊಂದು ಸಂದರ್ಭದಲ್ಲೂ ಪ್ರಮಾಣೀಕರಿಸುವ, ಹಿಂದುಳಿದ ವರ್ಗಗಳ/ಅತಿ ಹಿಂದುಳಿದ ವರ್ಗಗಳ, ಬುಡಕಟ್ಟು ಸಮುದಾಯಗಳ ಹಾಗೂ ಮೇಲ್ವರ್ಗದ-ಮೇಲ್ಜಾತಿಯ ಸಮಾಜಗಳ ಜನಜೀವನವನ್ನು ಒಳಹೊಕ್ಕು ನೋಡಿದಾಗ ನಮಗೆ ಕಾಣುವುದೇನು ? ಅದೇ ಅಸ್ಪೃಶ್ಯತೆ, ಜಾತೀಯತೆ, ಶ್ರೇಷ್ಠತೆಯ ಮನಸ್ಥಿತಿ ಮತ್ತು ಪಿತೃಪ್ರಧಾನ ಮೌಲ್ಯಗಳು.
ಹಿಂದುಳಿದ ವರ್ಗಗಳ, ಪರಿಶಿಷ್ಟ ಪಂಗಡಗಳ (ಎಸ್‌ಟಿ) ಜನಜೀವನದಲ್ಲಿ ಅಸ್ಪೃಶ್ಯತೆ/ಪ್ರತ್ಯೇಕತೆಯ ಆಚರಣೆ ಎಷ್ಟು ಆಳವಾಗಿ ಬೇರೂರಿದೆ ಎನ್ನುವುದು ಮರ್ಯಾದೆಗೇಡು ಹತ್ಯೆಗಳಲ್ಲಿ, ಸಾಮಾಜಿಕ ಬಹಿಷ್ಕಾರಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಕ್ರೂರ ನಡವಳಿಕೆಗೆ ಪೂರಕವಾಗುವುದು ಮನುಸ್ಮೃತಿಯೇ ಬೋಧಿಸುವ ಪಿತೃಪ್ರಧಾನತೆ ಮತ್ತು ಮಹಿಳಾಧೀನತೆಯ ಸಂಹಿತೆಗಳು. ಆಧುನಿಕತೆಗೆ ತೆರೆದುಕೊಂಡಂತೆಲ್ಲಾ ಈ ಪ್ರಾಚೀನ ಮೌಲ್ಯಗಳು ಕ್ಷೀಣಿಸುತ್ತಾ ಹೋಗುವುದು ಸಾಮಾಜಿಕ ಅಭ್ಯುದಯದ ಲಕ್ಷಣವಾಗಬೇಕು. ಆದರೆ 21ನೆ ಶತಮಾನದ ಡಿಜಿಟಲ್ ಯುಗದಲ್ಲೂ ಅಸ್ಪೃಶ್ಯರಿಗೆ ಹೆಣ ಹೂಳಲು ಜಾಗ ದೊರೆಯದಂತಹ ಪರಿಸ್ಥಿತಿಗೆ ನಾವು ನಿತ್ಯ ಸಾಕ್ಷಿಯಾಗುತ್ತಿದ್ದೇವೆ. ಜೀವಂತ ಮನುಷ್ಯನಿಗೆ ಅಂಟಿಕೊಳ್ಳುವ ಎಲ್ಲ ಜಾತಿಸೂಚಕ ಚಿಹ್ನೆ-ಲಾಂಛನಗಳೂ ಸತ್ತ ವ್ಯಕ್ತಿಗೂ ಅಂಟಿಕೊಂಡೇ, ಅಂತ್ಯಕ್ರಿಯೆಗೊಳಗಾಗುವ ಒಂದು ದುರಂತ ಸನ್ನಿವೇಶವನ್ನು ಈಗಲೂ ಕಾಣುತ್ತಿದ್ದೇವೆ.
ದೂರಗಾಮಿ ಆಲೋಚನೆಗಳ ಕಡೆಗೆ
ಇದು ಏನನ್ನು ಸೂಚಿಸುತ್ತದೆ ? ಗ್ರಾಂಥಿಕವಾಗಿ ಆಚರಣಾತ್ಮಕ ದಹನಕ್ಕೊಳಗಾಗುತ್ತಿರುವ ಒಂದು ಧರ್ಮ ಸಂಹಿತೆಯ ಗ್ರಂಥ ಭೌತಿಕವಾಗಿ ಅಪ್ರಸ್ತುತವಾಗುವಷ್ಟು ಮಟ್ಟಿಗೆ, ಅದರೊಳಗಿನ ಆಲೋಚನಾ ಕ್ರಮಗಳು, ಜೀವನಾದರ್ಶಗಳು ಬೌದ್ಧಿಕವಾಗಿ ಜನಸಾಮಾನ್ಯರ ಪ್ರಜ್ಞೆಯನ್ನು ಆವರಿಸಿವೆ ಎಂದು ಸೂಚಿಸುವುದಿಲ್ಲವೇ ? ಈ ಪ್ರಜ್ಞೆ ನಮ್ಮ ಸಾಮಾಜಿಕ ಜೀವನವನ್ನೇ ಅವನತಿಯತ್ತ ಕೊಂಡೊಯ್ಯುತ್ತಿರುವುದನ್ನು ಸಾಮಾಜಿಕ ಬಹಿಷ್ಕಾರಗಳಲ್ಲಿ, ಮರ್ಯಾದೆಗೇಡು ಹತ್ಯೆಗಳಲ್ಲಿ, ಅಸ್ಪೃಶ್ಯತೆಯ ಪ್ರಕರಣಗಳಲ್ಲಿ , ಸಾಮಾಜಿಕ ಅಂತರಗಳಲ್ಲಿ ಗುರುತಿಸಬಹುದು. ಈ ಬೆಳವಣಿಗೆಗಳಿಗೆ ಮನುಸ್ಮೃತಿಯೊಂದೇ ಕಾರಣವಲ್ಲ. ನವ ಉದಾರವಾದ ಬೆಳೆಸುತ್ತಿರುವ ಗ್ರಾಹಕ ಸಂಸ್ಕೃತಿ, ಬಂಡವಾಳಶಾಹಿ ಸೃಷ್ಟಿಸುತ್ತಿರುವ ಅಂತಸ್ತಿನ ಮೇಲರಿಮೆ, ಪ್ರಜಾಪ್ರಭುತ್ವೀಯ ಆಳ್ವಿಕೆಯ ಕೇಂದ್ರಗಳಲ್ಲೂ ಜಾರಿಯಲ್ಲಿರುವ ಯಜಮಾನಿಕೆಯ ಪರಂಪರೆ ಈ ಎಲ್ಲ ಆಧುನಿಕ ಲಕ್ಷಣಗಳೂ ಕಾರಣವಾಗುತ್ತವೆ.
ಭಾರತದ ಹಳ್ಳಿಗಳಲ್ಲಿ ಇಂದಿಗೂ ತಳವೂರಿರುವ ಪರ್ಯಾಯ ಆಳ್ವಿಕೆ, ನ್ಯಾಯ ವ್ಯವಸ್ಥೆ ಮತ್ತು ಅಧಿಕಾರ ಕೇಂದ್ರಗಳನ್ನು ಜಾತಿ ಪಂಚಾಯತಿಗಳಲ್ಲಿ, ಯಜಮಾನ್, ನಾಡಗೌಡ ಮುಂತಾದ ಹೆಸರಿನಲ್ಲಿ ಚಾಲ್ತಿಯಲ್ಲಿರುವ ಊಳಿಗಮಾನ್ಯ ವ್ಯವಸ್ಥೆಯಲ್ಲಿ ಕಾಣಬಹುದಲ್ಲವೇ ? ಈ ಪರ್ಯಾಯ ವ್ಯವಸ್ಥೆಗಳು ಸಂವಿಧಾನ ಬಾಹಿರ ಅಲ್ಲವೇ ? ಆದರೆ ಈ ಕೆಳಸ್ತರೀಯ ಆಳುವ ವರ್ಗಗಳ ವಿರುದ್ಧ ನಾವೇಕೆ ದನಿ ಎತ್ತುತ್ತಿಲ್ಲ ? ಸಂವಿಧಾನವನ್ನೇ ಜಪಿಸುವ ಮನಸ್ಸುಗಳು ಏಕೆ ಈ ಆಲೋಚನೆ ಮಾಡುತ್ತಿಲ್ಲ ? ಎಡಪಕ್ಷಗಳು, ದಲಿತ ಸಂಘಟನೆಗಳು ಏಕೆ ಇವುಗಳ ವಿರುದ್ಧ ಜನಾಭಿಪ್ರಾಯವನ್ನು ಸಂಗ್ರಹಿಸಿ ಪ್ರತಿರೋಧದ ನೆಲೆಗಳನ್ನು ಸೃಷ್ಟಿಸಲಾಗುತ್ತಿಲ್ಲ ? ಇಂತಹ ಕೇಂದ್ರಗಳಲ್ಲೂ ಸಂವಿಧಾನ ಪೀಠಿಕೆಯ ಪಠಣ ಕ್ರಿಯೆ ನಡೆದರೂ ಅಚ್ಚರಿಯೇನಿಲ್ಲ. ಆದರೆ ಅಂತಿಮವಾಗಿ ಬಲಿಯಾಗುವುದಾದರೂ ಏನು ? ಮಾನವೀಯ ಮೌಲ್ಯಗಳಲ್ಲವೇ ?
ಇಲ್ಲಿ ಸಮಾಜದ ಅಂತಃಶಕ್ತಿಯಾಗಿ ಆಳಕ್ಕಿಳಿದಿರುವ ಮನುಸ್ಮೃತಿಯ ಮೂಲ ಬೋಧನೆಗಳನ್ನು, ತಾರತಮ್ಯಗಳ ಸಂಹಿತೆಗಳನ್ನು ಹೋಗಲಾಡಿಸುವುದು ವರ್ತಮಾನದ ಆದ್ಯತೆಯಾಗಬೇಕಿದೆ. ಗ್ರಾಂಥಿಕ ಪಠ್ಯ ದಹನ ಶತಮಾನದ ಹಿಂದೆ ಇದ್ದಂತೆಯೇ ಈಗಲೂ ಸಾಂಕೇತಿಕವಾಗಿಯೇ ಇರಲು ಸಾಧ್ಯ. ಆದರೆ ಈ ನೂರು ವರ್ಷಗಳಲ್ಲಿ ಅಂಬೇಡ್ಕರ್ ಅವರ ತಾತ್ವಿಕತೆ ಮತ್ತು ಸೈದ್ಧಾಂತಿಕ ನಿಲುವುಗಳನ್ನು ಸ್ವೀಕರಿಸಿ, ಅನುಸರಿಸಿ, ಆರಾಧಿಸುತ್ತಿರುವ ಸಮಾಜ, ಸಾಂಕೇತಿಕತೆಯನ್ನು ದಾಟಿ ಹೋಗಲು ಏಕೆ ಸಾಧ್ಯವಾಗುತ್ತಿಲ್ಲ ? ಇದನ್ನು ಸಾಂಘಿಕ ವೈಫಲ್ಯ ಎನ್ನುವುದಕ್ಕಿಂತಲೂ ವಿಶಾಲ ಹಂದರದಲ್ಲಿ (Wider Canvas) ನೋಡಿದಾಗ, ಸಾಂಸ್ಥಿಕ ಪಾರಮ್ಯದ ಫಲ ಎಂದು ಹೇಳಬಹುದು. ಇದರರ್ಥ ಅಂಬೇಡ್ಕರ್ ಅವರ ದೂರಗಾಮಿ ಚಿಂತನೆಗಳನ್ನು , ತಾತ್ವಿಕ ವಿಚಾರಧಾರೆಯನ್ನು ಒಳಗಿಳಿಸಿಕೊಳ್ಳುವುದರಲ್ಲಿ ನಾವು ವಿಫಲರಾಗಿದ್ದೇವೆ.
ಸಾಂಕೇತಿಕ ಪ್ರತಿರೋಧ ಮತ್ತು ಆಚರಣೆಗಳನ್ನು ದಾಟಿ ವರ್ತಮಾನದ ವಾಸ್ತವಗಳತ್ತ ಗಮನಹರಿಸಿ, ಸಾಮಾಜಿಕ ವ್ಯಾಧಿಗಳನ್ನು, ಸಾಂಸ್ಕೃತಿಕ ವ್ಯಸನಗಳನ್ನು ಮತ್ತು ಅಮಾನುಷ ಧಾರ್ಮಿಕ ಪದ್ಧತಿಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನಾವು ಸಾಗಬೇಕಿದೆ. ಡಿಸೆಂಬರ್ 25ರ ಆಚರಣೆಗಳ ನಡುವೆ ಈ ಆತ್ಮವಿಮರ್ಶಾತ್ಮಕ ಆಲೋಚನೆಗೆ ಸ್ವಲ್ಪವಾದರೂ ಜಾಗ ದೊರೆತರೆ, ಭವಿಷ್ಯದ ಬೆಳಕಿನ ಕಿಂಡಿಯನ್ನೂ ಕಾಣಲು ಸಾಧ್ಯ.

-೦-೦-೦-೦-
bevarahani1