ವರ್ತಮಾನ - ಆರ್.ಹೆಚ್.ನಟರಾಜ್ - ವಿಧಾನ ಮಂಡಲ ಕಲಾಪ – ಮುಗ್ಗರಿಸಿದ್ದೆಲ್ಲಿ ?
ವರ್ತಮಾನ ಆರ್.ಹೆಚ್.ನಟರಾಜ್ ವಿಧಾನ ಮಂಡಲ ಕಲಾಪ – ಮುಗ್ಗರಿಸಿದ್ದೆಲ್ಲಿ ?
ವಿಧಾನಮಂಡಲದ ಅಧಿವೇಶನವನ್ನು ಕರೆಯುವುದು ರಾಜ್ಯದ ಜನರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಪರಿಣಾಮಕಾರಿಯಾದ ಚರ್ಚೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳುವುದಕ್ಕಾಗಿಯೇ ಅಲ್ಲವೇ, ಆದರೆ ಈ ಅಧಿವೇಶನದಲ್ಲಿ ಇಂತಹ ಯಾವುದೂ ನಡೆಯಲೇ ಇಲ್ಲ.
ವರ್ತಮಾನ
ಆರ್.ಹೆಚ್.ನಟರಾಜ್
ವಿಧಾನ ಮಂಡಲ ಕಲಾಪ – ಮುಗ್ಗರಿಸಿದ್ದೆಲ್ಲಿ ?
ರಾಜ್ಯ ವಿಧಾನ ಮಂಡಲದ ಮತ್ತೊಂದು ಅಧಿವೇಶನ ಮುಕ್ತಾಯಗೊಂಡಿದೆ. ಹತ್ತು ದಿನಗಳ ಕಾಲ ನಡೆಸಲು ಉದ್ದೇಶಿಸಿದ್ದ ಕಲಾಪದ ಬಗ್ಗೆ ರಾಜ್ಯದ ಜನ ಸಾಮಾನ್ಯರಲ್ಲಿ ಬೆಟ್ಟದಷ್ಟು ನಿರೀಕ್ಷೆಯಿದ್ದರೆ ರಾಜಕೀಯ ಆಸಕ್ತರಲ್ಲಿ ಭಾರಿ ಕುತೂಹಲವಿತ್ತು.
ಪ್ರತಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಮೊದಲ ಅಧಿವೇಶನ ಆಸಕ್ತಿ ಮೂಡಿಸಿರುತ್ತದೆ ಕಾರಣ, ಆ ಸರ್ಕಾರದ ಆಡಳಿತದ ದಿಕ್ಕು ದಿಸೆಗಳನ್ನು ಈ ಅಧಿವೇಶನ ಸೂಚಿಸುತ್ತದೆ. ಹಾಗೆಯೇ ಸರ್ಕಾರದ ಕೊನೆಯ ಅಧಿವೇಶನ ಕೂಡಾ ಕುತೂಹಲ ಮೂಡಿಸುತ್ತದೆ, ಕಾರಣ ಈ ಸರ್ಕಾರ ತನ್ನ ಆಡಳಿತದ ಅವಧಿಯಲ್ಲಿ ಮಾಡಿದ ಸಾಧನೆಗಳು, ಮತ್ತೆ ಪಕ್ಷದ ನೇತೃತ್ವದ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ರೂಪಿಸಿರುವ ಯೋಜನೆಗಳನ್ನು ತಿಳಿಸಲಿದೆ.
ಅಷ್ಟೇ ಅಲ್ಲ ಇಂಥ ಅಧಿವೇಶನಗಳಲ್ಲಿ ಪ್ರತಿಪಕ್ಷಗಳ ನಡೆ ಕೂಡಾ ಕುತೂಹಲ ಮೂಡಿಸಿರುತ್ತದೆ. ಸರ್ಕಾರದ ಯಾವ ಹಗರಣವನ್ನು ವಿರೋಧ ಪಕ್ಷಗಳು ಪ್ರಸ್ತಾಪಿಸಬಹುದು, ಯಾವ ದಾಖಲೆಯನ್ನು ಬಹಿರಂಗ ಪಡಿಸಬಹುದು, ಯಾವ ರೀತಿಯಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು ಎಂಬ ಕುತೂಹಲ ಒಂದೆಡೆಯಾದರೆ ಯಾವ ಶಾಸಕರು ಪಕ್ಷಾಂತರ ಮಾಡಲಿದ್ದಾರೆ ಎಂಬ ಸೂಚನೆ ಕೂಡಾ ಈ ಅಧಿವೇಶನದಲ್ಲಿ ಕಾಣಸಿಗುತ್ತವೆ.
ಚುನಾವಣೆ ಅವಧಿಗೆ ಮುನ್ನ ಘೋಷಣೆಯಾಗಿಬಿಟ್ಟರೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಬಹುತೇಕ ಕೊನೆಯ ಅಧಿವೇಶನ ಇದಾಗಬಹುದು, ಇಲ್ಲವಾದಲ್ಲಿ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದರೆ ಎಲ್ಲ ಲೆಕ್ಕದಲ್ಲೂ ಒಳ್ಳೆಯದು. ಮೇಲೆ ಹೇಳಿದ ವಿಷಯಕ್ಕಷ್ಟೇ ಅಲ್ಲದೆ ಇತ್ತೀಚೆಗೆ ಸುರಿದ ಬಾರಿ ಮಳೆ ಸೃಷ್ಟಿಸಿದ ಅವಾಂತರಕ್ಕೆ ಸರ್ಕಾರದ ಪರಿಹಾರ, ಬೆಂಗಳೂರಿನ ರಾಜಾ ಕಾಲುವೆ ಒತ್ತುವರಿ, ಗ್ರಾಮೀಣ ಪ್ರದೇಶದ ರೈತರ ಅಕ್ರಮ-ಸಕ್ರಮ, ಕಂದಾಯ ನಿವೇಶನದ ಅಕ್ರಮ ಸಕ್ರಮದ ಜೊತೆಗೆ ರಾಜ್ಯ ಎದುರಿಸುತ್ತಿರುವ ಹಲವಾರು ಬಿಕ್ಕಟ್ಟುಗಳು, ಕುಡಿಯುವ ನೀರಿನ ಸಮಸ್ಯೆ, ನಿರುದ್ಯೋಗ, ರೈತರ ಸಮಸ್ಯೆ, ಕೋವಿಡ್‌ನಿಂದ ಉಂಟಾದ ಆರ್ಥಿಕ ದುಃಸ್ಥಿತಿ ಮುಂತಾದ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು.
ವಿಧಾನಮಂಡಲದ ಅಧಿವೇಶನವನ್ನು ಕರೆಯುವುದು ರಾಜ್ಯದ ಜನರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಪರಿಣಾಮಕಾರಿಯಾದ ಚರ್ಚೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳುವುದಕ್ಕಾಗಿಯೇ ಅಲ್ಲವೇ, ಆದರೆ ಈ ಅಧಿವೇಶನದಲ್ಲಿ ಇಂತಹ ಯಾವುದೂ ನಡೆಯಲೇ ಇಲ್ಲ.
ಶಾಸಕ, ಸಚಿವರ ಹಾಜರಾತಿಯಂತೂ ದೊಡ್ಡ ನಿರಾಸೆ ಹುಟ್ಟಿಸಿತು. ಜನಪ್ರತಿನಿಧಿಗಳಿಗೆ ತಮ್ಮನ್ನು ಆಯ್ಕೆ ಮಾಡಿದ ಜನರಿಗೆ ತಾನೇನು ಮಾಡಿದ್ದೇನೆ, ಅಥವಾ ಮಾಡಲಿದ್ದೇನೆ, ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ಹೇಗೆ ಶ್ರಮಿಸುತ್ತೇನೆ ಎಂದು ಜನರಿಗೆ ಗೊತ್ತು ಪಡಿಸುವುದಷ್ಟೇ ಅಲ್ಲ ಅದನ್ನು ದಾಖಲೆಯಾಗಿಸಲು ಇರುವ ಏಕೈಕ ವೇದಿಕೆ ವಿಧಾನಸಭೆ.
ಆದರೆ ಕೇವಲ ಬೆರಳೆಣಿಕೆಯಷ್ಟು ಶಾಸಕರನ್ನು ಬಿಟ್ಟರೆ ಬೇರೆ ಯಾರೂ ಈ ಅವಕಾಶ ಬಳಸಿಕೊಳ್ಳಲೇ ಇಲ್ಲ. ಐದು ವರ್ಷ ಶಾಸಕತ್ವದ ಅವಧಿ ಮುಗಿಯುತ್ತಾ ಬಂದರೂ ಸದನದಲ್ಲಿ ಬಾಯಿ ಬಿಡದ ಮೌನ ಗುರುಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಇAತಹ ಬೇಸರದ ನಡುವೆಯೂ ವಿಶ್ವವಿದ್ಯಾಲಯ ತಿದ್ದುಪಡಿ ಕಾಯಿದೆ ಚರ್ಚೆಗೆ ಬಂದಾಗ ಕೆಲವು ಶಾಸಕರು ಮಂಡಿಸಿದ ವಾದ, ಕಳಕಳಿ, ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ, ಲೋಪದೋಷಗಳನ್ನು ತೆರೆದಿಟ್ಟು ಇದಕ್ಕೆ ಮುಲಾಮು ಹಚ್ಚಿ ಎಂದು ಹೇಳಿದ್ದು ಶಾಸನ ಸಭೆಯ ಘನತೆಯನ್ನು ಎತ್ತಿ ಹಿಡಿಯಿತು.ಇಂತಹ ಉತ್ಕೃಷ್ಟ ಚರ್ಚೆ ಇತ್ತೀಚಿನ ದಿನ ಮಾನದಲ್ಲಿ ಸಾಧ್ಯವಾಗುತ್ತಿಲ್ಲ ಎನ್ನುವುದು ಬೇಸರದ ಸಂಗತಿಯೇ.
ಜನ ಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುತ್ತಲೇ ಅವರ ಜೀವನ ಹಸನು ಮಾಡುವ ಶಾಸನಗಳನ್ನು ರಚಿಸುವುದು ಶಾಸನಸಭೆಯ ಆದ್ಯ ಕರ್ತವ್ಯ. ಇದಕ್ಕಾಗಿಯೇ ವರ್ಷಕ್ಕೆ ಕನಿಷ್ಠ 100 ದಿನಗಳಾದರೂ ವಿಧಾನಮಂಡಲ ಅಧಿವೇಶನ ನಡೆದರೆ ಪ್ರಜಾತಂತ್ರದ ಸೌಂದರ್ಯ ಇನ್ನಷ್ಟು ಹೊಳಪು ಪಡೆಯಬಹುದು ಎಂದು ನಿಯಮಗಳನ್ನು ರೂಪಿಸಲಾಗಿತ್ತು. ಆದರೆ ನೂರು ದಿನದ ಕಲಾಪ ಸಾಧ್ಯವಿಲ್ಲ ಎಂದಾದಾಗ ಇದನ್ನು ಕನಿಷ್ಠ 60 ದಿನಗಳಾದರೂ ನಡೆಸಬೇಕು ಎಂದು ಕಾನೂನು ಮಾಡಲಾಯಿತು.
ಆದರೆ ಈಗ ಅಧಿವೇಶನವು 50 ದಿನ ಕೂಡ ನಡೆಯುವುದಿಲ್ಲ. ನಡೆದಷ್ಟು ದಿನವೂ ಯಾವುದೋ ವೈಯಕ್ತಿಕ ಹಿತಾಸಕ್ತಿ ಇಲ್ಲವೇ ರಾಜಕೀಯ ಹಿತಾಸಕ್ತಿಯ ಒಂದು ವಿಷಯವನ್ನು ಇಟ್ಟುಕೊಂಡು ಗದ್ದಲ ಎಬ್ಬಿಸುವುದು ಮಾಮೂಲು ಎನ್ನುವಂತಾಗಿದೆ.
ಯಾವುದೇ ವಿಷಯದ ಬಗ್ಗೆ ಗಂಭೀರವಾದ ಚರ್ಚೆ ನಡೆದರೆ ಅಧಿವೇಶನಕ್ಕೆ ಒಂದು ಘನತೆ ಬರುತ್ತದೆ. ಅದು ಬಿಟ್ಟು ಕಾಲಹರಣ ಮಾಡುವ ಮೂಲಕ ಈಗ ಮಾಡಿದಂತೆ ನಿಯಮ ಪ್ರಕಾರ ಕಲಾಪ ಮಾಡಿ ಮುಗಿಸಿದರೆ ಅದು ಮತದಾರರಿಗೆ ಮಾಡುವ ದ್ರೋಹ. ಇನ್ನೂ ಕೆಲವರು ಸದನದಲ್ಲಿ ಎಲ್ಲಾ ವಿಷಯಕ್ಕೂ ಮೂಗು ತೂರಿಸಿದರೆ ಮತ್ತೆ ಕೆಲವರು ಯಾರದೋ ಗಮನ ಸೆಳೆಯಬೇಕು ಮತ್ತಾರಿಗೋ ಉತ್ತರ ಕೊಡಬೇಕು ಎಂದು ಏರಿದ ಧ್ವನಿಯಲ್ಲಿ ಮಾತನಾಡುತ್ತಾರೆ.ಇದನ್ನು ಕೂಗು ಮಾರಿತನ ಎನ್ನಬಹುದು.ಈ ಕೂಗುಮಾರಿತನ ಉತ್ತಮ ಸಂಸದೀಯ ಪಟುಗಳ ಲಕ್ಷಣವಲ್ಲ. ಯಾವುದೇ ವಿಷಯದ ಬಗ್ಗೆ ಸೂಕ್ತ ಅಧ್ಯಯನ ಮಾಡಿಕೊಂಡು ಬಂದು ಮಾತನಾಡಿದರೆ ಸದನಕ್ಕೂ ಸದಸ್ಯರಿಗೂ ಗೌರವ. ಮತ ಹಾಕಿ ಗೆಲ್ಲಿಸಿದ ಮತದಾರರ ಸದ್ಭಾವನೆಗೆ ಕೊಡುವ ಮಾನ್ಯತೆ. ಜನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂಬ ಎಚ್ಚರಿಕೆ ಜನಪ್ರತಿನಿಧಿಗಳಿಗೆ ಬೇಕು.
ವಿಧಾನಮಂಡಲವು ಜನ ಹಿತ ಕಾಯುವ ಶಾಸನಗಳನ್ನು ರೂಪಿಸುವ, ಆರೋಗ್ಯಪೂರ್ಣ ಚರ್ಚೆಯ ಮನೆಯಾಗುವ ಮೂಲಕ ಅರಿವಿನ ಆಲಯವಾಗಬೇಕೆ ವಿನಃ ಮತ್ತೇನೋ ಆಗಬಾರದು.
ಸದನ ನಿಜ ಅರ್ಥದಲ್ಲಿ ಅನುಭವ ಮಂಟಪ, ಈ ದಾರಿಯಲ್ಲೇ ಇದು ಸಾಗಬೇಕು ಕಲಾಪದಲ್ಲಿ ಅಹಿತಕರ ಮಾತು–ವರ್ತನೆಗಳಿಂದ ಸದನ ಹಾದಿ ತಪ್ಪುವ ಲಕ್ಷಣಗಳು ಕಂಡುಬAದಾಗ, ಸದನವನ್ನು ಸರಿದಾರಿಗೆ ತರುವುದು ಸ್ಪೀಕರ್ ಹೊಣೆ. ಸದನ ನಿಭಾಯಿಸುವಲ್ಲಿ ಸಭಾಧ್ಯಕ್ಷರ ಪೀಠದಲ್ಲಿದ್ದವರು ಎಡವಿದ್ದು ಮಾಮೂಲಿಯಾಯಿತು. ಇದರಿಂದ ಅನೇಕ ಸಲ ಕಲಾಪ ಯಾರ ಹಿಡಿತಕ್ಕೂ ಸಿಗದಂತಾಗಿತ್ತು. ಕೆಲವರು ತಾವು ವಿಧಾನಮಂಡಲದ ಸದಸ್ಯರು ಎನ್ನುವುದನ್ನೇ ಮರೆತಂತೆ ವರ್ತಿಸಿದರು.ಇವರಾಡಿದ ಮಾತುಗಳು ಬೀದಿ ರಂಪಾಟದಲ್ಲಿ ಬಳಸುವ ಮಾತುಗಳನ್ನು ನೆನಪಿಸಿದವು. ವಿಧಾನಮಂಡಲದ ಘನತೆಗೆ ಚ್ಯುತಿ ತರುವ ಇಂತಹ ನಡವಳಿಕೆ ಅಕ್ಷಮ್ಯ.ಇನ್ನೂ ಮುಂದಾದರೂ ಇದು ಮರು ಕಳಿಸಬಾರದು.
ವಿಧಾನ ಮಂಡಲದ ಎರಡೂ ಸದನಗಳಲ್ಲಿ ಗುಣಮಟ್ಟದ ಅಧಿವೇಶನ ನಡೆಯಬೇಕೆಂಬ ಆಶಯ ಅನುಷ್ಟಾನಗೊಳ್ಳುವಲ್ಲಿ ಜನ ಪ್ರತಿನಿಧಿಗಳಿಗಿಂತ ಅವರನ್ನು ಆರಿಸುವ ಮತದಾರರ ಪಾತ್ರ ಮಹತ್ವದ್ದಾಗಿದೆ. ಯಾಕೆಂದರೆ ತಾವು ತಮ್ಮ ಪ್ರತಿನಿಧಿಯಾಗಿ ಯಾರನ್ನು ಆರಿಸುತ್ತಿದ್ದೇವೆಂಬ ಅರಿವು ಅವರಿಗಿರಬೇಕು. ಜಾತಿ, ಧರ್ಮ, ಹಣ, ತೋಳ್ಬಲದ ಕಾರಣಕ್ಕೆ ಮತದಾನವಾದರೆ.ಇಂತಹುದೇ ಕಾರಣಕ್ಕೆ ಆಯ್ಕೆಯಾಗಿ ಶಾಸನಸಭೆ ಪ್ರವೇಶಿಸುವ ವ್ಯಕ್ತಿಯಿಂದ ಸಂವಿಧಾನದ ಆಶಯ, ಪ್ರಜಾತಂತ್ರದ ವೈಭವವನ್ನು ಹೇಗೆ ನೋಡಲು ಸಾಧ್ಯ. ಹೀಗಾಗಿ ಈಗ ಬದಲಾಗಬೇಕಿರುವುದು ಮತದಾರ ಈತ ಬದಲಾಗದ ಹೊರತು ಯಾವ ಬದಲಾವಣೆಯೂ ಸಾಧ್ಯವಿಲ್ಲ ಇದಕ್ಕಿದು ಸಕಾಲ.
(ಚಿತ್ರ ಕೃಪೆ: ಡೆಕ್ಕನ್ ಹೆರಾಲ್ಡ್)